Sunday, November 7, 2021

PARYAYA: ವಿಶ್ವ ಸಂಸ್ಥೆಯಲ್ಲಿ ಡೈನೋಸಾರ್..!

ವಿಶ್ವ ಸಂಸ್ಥೆಯಲ್ಲಿ ಡೈನೋಸಾರ್..!

ವಿಶ್ವಸಂಸ್ಥೆಯಲ್ಲಿ ಇತ್ತೀಚೆಗೆ ಜಾಗತಿಕ ಹವಾಮಾನ ಸ್ಥಿತಿಗತಿ ಬಗ್ಗೆ ಚರ್ಚೆ ನಡೆಯಿತು. ವಿಶ್ವವನ್ನು ದುರಂತದೆಡೆಗೆ ತಳ್ಳುತ್ತಿರುವ ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ತಗ್ಗಿಸಬೇಕಾದ ಅಗತ್ಯದ ಬಗ್ಗೆ ವಿವಿಧ ಅಭಿಪ್ರಾಯಗಳು ವ್ಯಕ್ತವಾದವು.

ಪ್ರಧಾನಿ ನರೇಂದ್ರ ಮೋದಿ ಅವರು ಭೂಮಿಯ ಮಂದಿ ಮತ್ತೆ ಸೂರ್ಯನತ್ತ ಹೋಗಬೇಕಾದ ಅಗತ್ಯವನ್ನು ಬಲವಾಗಿ ಪ್ರತಿಪಾದಿಸಿದರು. ‘ಒಬ್ಬ ಸೂರ್ಯ, ಒಂದು ಜಗತ್ತು, ಒಂದು ಜಾಲ’ ಇಂದಿನ ಅಗತ್ಯ ಎಂದು ಅವರು ಒತ್ತಿ ಹೇಳಿದರು.

ಇದೇ ಸಂದರ್ಭದಲ್ಲಿ ವಿಶ್ವಸಂಸ್ಥೆಯು ಒಂದು ವಿಡಿಯೋವನ್ನು ಪ್ರಸಾರ ಮಾಡಿತು. ಆ ವಿಡಿಯೋ ಸಂದೇಶ ಏನು ಎಂಬದನ್ನು ಕನ್ನಡದಲ್ಲಿ ನೋಡಿ.

ವಿಡಿಯೋ ನೋಡಲು ಮೇಲಿನ ಚಿತ್ರ/ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ

PARYAYA: ವಿಶ್ವ ಸಂಸ್ಥೆಯಲ್ಲಿ ಡೈನೋಸಾರ್..!:   ವಿಶ್ವ ಸಂಸ್ಥೆಯಲ್ಲಿ ಡೈನೋಸಾರ್ ..! ವಿಶ್ವಸಂಸ್ಥೆಯಲ್ಲಿ ಇತ್ತೀಚೆಗೆ ಜಾಗತಿಕ ಹವಾಮಾನ ಸ್ಥಿತಿಗತಿ ಬಗ್ಗೆ ಚರ್ಚೆ ನಡೆಯಿತು . ವಿಶ್ವವನ್ನು ದುರಂತದೆಡೆಗೆ ...

Friday, October 15, 2021

PARYAYA: ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಆಯುಧ ಪೂಜಾ

ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಆಯುಧ ಪೂಜಾ


ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ 15-10-2021ರ ಶುಕ್ರವಾರ ನವರಾತ್ರಿ ಪೂಜಾ ಅಂಗವಾಗಿ ಬಾಲಾಜಿ ಕೃಪಾ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಆಯುಧ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು.

ಬಡಾವಣೆಯ ಕೊಳವೆ ಬಾವಿಗಳಿಗೂ ಈ ಸಂದರ್ಭದಲ್ಲಿ ಪೂಜೆ ಸಲ್ಲಿಸಲಾಯಿತು.

ವಿಡಿಯೋ ನೋಡಲು ಮೇಲಿನ / ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ


PARYAYA: ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಆಯುಧ ಪೂಜಾ:   ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಆಯುಧ ಪೂಜಾ ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ 15-10-2021ರ ಶುಕ್ರವಾರ ನವರಾತ್ರಿ ಪೂಜಾ ಅಂಗ...

Sunday, September 12, 2021

PARYAYA: ಪಶ್ಚಿಮ ಘಟ್ಟ: ಹೀಗೊಂದು ದೃಶ್ಯ ಕಾವ್ಯ…

ಪಶ್ಚಿಮ ಘಟ್ಟ: ಹೀಗೊಂದು  ದೃಶ್ಯ ಕಾವ್ಯ…


ಪಶ್ಚಿಮ ಘಟ್ಟ- ದಕ್ಷಿಣ ಭಾರತದ ಕಾಶ್ಮೀರವೆಂದರೆ ತಪ್ಪಲ್ಲ. ಪಶ್ಚಿಮ ಘಟ್ಟದ ಕಾನನಗಳ ಮಧ್ಯೆ ಚಾರಣ, ಪಯಣ ಒಂದು ಅಪೂರ್ವ ಅನುಭವ.

ಬೆಟ್ಟ, ಗುಡ್ಡ, ಕಣಿವೆ, ನೀರಿನ ಝರಿಗಳು,ಕಣಿವೆ- ಪ್ರಪಾತಗಳು, ಸೇತುವೆಗಳು, ಸುರಂಗಗಳು, ಅಪರೂಪದ ಸಸ್ಯರಾಶಿ, ಹಾವು ಪವಡಿಸಿದಂತೆ  ಕಾಣುವ ಮಾರ್ಗ, ಇವೆಲ್ಲಕ್ಕೆ ಕಿರೀಟವಿಟ್ಟಂತೆ ತೇಲುವ ಮೋಡ, ಹಿಮ, ತೀಡುವ ತಂಗಾಳಿ…

ಪಶ್ಚಿಮ ಘಟ್ಟದ ಆಹ್ಲಾದಕರ ಅನುಭವವನ್ನು  ಅಲ್ಲಿ ಪಯಣಿಸಿದವರೇ ಬಲ್ಲರು. ದಶಕಗಳಿಂದಲೇ ಇಲ್ಲಿ ಓಡುತ್ತಿರುವ ರೈಲುಗಳಲ್ಲಿ ಪಶ್ಚಿಮ ಘಟ್ಟದ ಈ ಸೊಬಗು ವೀಕ್ಷಿಸಲೆಂದೇ ಹಗಲು ರೈಲಿನಲ್ಲಿ ಪಯಣಿಸುವವರ ಸಂಖ್ಯೆ ಕಡಿಮೆಯೇನೂ ಇಲ್ಲ. ಮೊಬೈಲ್ ಯುಗ ಆರಂಭವಾದ ಬಳಿಕವಂತೂ ಸಕಲೇಶಪುರ ಕಳೆಯಿತು ಎಂದರೆ ಸುಬ್ರಹ್ಮಣ್ಯ ರಸ್ತೆಯವರೆಗೂ ಮೊಬೈಲ್ ಕ್ಲಿಕ್ಕಿಸಿಕೊಂಡು ಫೊಟೋಗ್ರಾಫರ್ ಆಗಿದ್ದೇವೆಂದು ಹೆಮ್ಮೆಯಿಂದ ಬೀಗುವವರಿಗೆ ಲೆಕ್ಕವಿಲ್ಲ.

ಪಶ್ಚಿಮ ಘಟ್ಟದ ಸೊಬಗನ್ನು ಜನರಿಗೆ ಪರಿಚಯಿಸಲೆಂದೇ ರೈಲ್ವೇ ಇಲಾಖೆಯು ಈ ಮಾರ್ಗದಲ್ಲಿ ಈಗ ವಿಸ್ಟಾಡೋಮ್ ರೈಲು ಪಯಣವನ್ನೂ ಹಗಲಿನಲ್ಲಿ ಆರಂಭಿಸಿದೆ. ಸಂಪೂರ್ಣ ಗಾಜುಮಯವಾದ ಈ ರೈಲಿನಲ್ಲಿ ನಿಮಗೆ ಪಶ್ಚಿಮಘಟ್ಟದಲ್ಲಿ ಕುಳಿತುಕೊಂಡೇ ಹಾರುತ್ತಿರುವ ಅನುಭವ ಆಗಬಲ್ಲುದು.

ಛಾಯಾಚಿತ್ರಕಾರರಿಗಂತೂ ಪಶ್ಚಿಮ ಘಟ್ಟದ ರೈಲು ಪಯಣ ಒಂದು ಹಬ್ಬ. ತಮ್ಮ ಕ್ಯಾಮರಾ ಹೆಗಲಿಗೇರಿಸಿಕೊಂಡು ಭೂಮಾತೆಯ ಸೌಂದರ್ಯವನ್ನು ಸೆರೆ ಹಿಡಿಯಲು ಅವರಿಗೆ ಅಮಿತೋತ್ಸಾಹ.

ಪಕ್ಷಿ, ಪ್ರಾಣಿ, ಪ್ರಕೃತಿ, ಕೋಟೆ – ಹೀಗೆ ವೈವಿಧ್ಯಮಯ ಛಾಯಾಚಿತ್ರಗಳನ್ನು ತೆಗೆಯುವುದರಲ್ಲಿ ಸಿದ್ಧ ಹಸ್ತರಾದ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣರಿಗೂ ಪಶ್ಚಿಮ ಘಟ್ಟದ ಸೊಬಗು ಸೆರೆ ಹಿಡಿಯುವುದೆಂದರೆ ಅಪಾರ ಆಸಕ್ತಿ. ವಿಸ್ಟಾಡೋಮ್ ಪಯಣ ಆರಂಭಕ್ಕೆ ಸ್ವಲ್ಪ ಮುನ್ನವೇ ಅವರು ಸೆರೆ ಹಿಡಿದ ಪಶ್ಚಿಮ ಘಟ್ಟದ ಛಾಯಾಚಿತ್ರಗಳು ಅಪ್ಯಾಯಮಾನವಾಗಿವೆ.

ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಇಡೀ ದೇಶದ ಜನರನ್ನು ಬಡಿದೆಬ್ಬಿಸಿದ್ದ ವಂದೇ ಮಾತರಂ ಗೀತೆಯಲ್ಲಿ ಬಂಕಿಮ್ ಚಂದ್ರ ಚಟರ್ಜಿಯವರು ವರ್ಣಿಸಿದ್ದ ಭೂಮಾತೆಯ ಸೊಬಗು ಈ ಪಶ್ಚಿಮ ಘಟ್ಟದಲ್ಲಿ ಪಯಣಿಸುವಾಗ ಕಣ್ಣಿಗೆ ರಾಚುತ್ತದೆ.

ಈ ವಂದೇ ಮಾತರಂ ಗೀತೆಯನ್ನು ಭಾಗವತರಾದ ಪಟ್ಲಸತೀಶ ಶೆಟ್ಟಿ, ಸತ್ಯನಾರಾಯಣ ಪುಣ್ಚಿತ್ತಾಯ ಮತ್ತು ಕಾವ್ಯಶ್ರೀ  ಅಜೇರು ಅವರು ಯಕ್ಷಗಾನದ ಶೈಲಿಯಲ್ಲಿ ಹಾಡಿದ್ದು ಇತ್ತೀಚೆಗೆ ವಾಟ್ಸಪ್ ಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು.

ವಿಶ್ವನಾಥ ಸುವರ್ಣರ ಪಶ್ಚಿಮ ಘಟ್ಟದ ಛಾಯಾಚಿತ್ರಗಳನ್ನು ನೋಡುತ್ತಿದ್ದಂತೆಯೇ  ಮನಸ್ಸಿನಲ್ಲಿ ಭಾರತ ಮಾತೆಯ ಸೊಬಗನ್ನು ಬಣ್ಣಿಸುವ ‘ವಂದೇ ಮಾತರಂ’ ಮನದೊಳಗೆ ಮೂಡಿಬಂದದ್ದರ ಪರಿಣಾಮವೇ  ಈ ‘ವಂದೇ ಮಾತರಂ ದೃಶ್ಯ ಕಾವ್ಯದ ಚಿತ್ರಣ ನೀಡುವ ವಿಡಿಯೋ ಸೃಷ್ಟಿಗೆ  ಪ್ರೇರಣೆಯಾಯಿತು.

ಈ ದೃಶ್ಯ ಕಾವ್ಯದ  ಎರಡು ಆವೃತ್ತಿಗಳು ಇಲ್ಲಿವೆ: ಕೇಳಿ ಆನಂದಿಸಿ. ಈ ವಿಡಿಯೋಗಳು ‘ಪರ್ಯಾಯ-5’ ಯು ಟ್ಯೂಬ್ ಚಾನೆಲ್ ನಲ್ಲಿಯೂ ಲಭ್ಯವಿವೆ.

ವಿಡಿಯೋಗಳನ್ನು ವೀಕ್ಷಿಸಲು ಕೆಳಗಿನ ಚಿತ್ರಗಳನ್ನು ಕ್ಲಿಕ್ ಮಾಡಿ.




-ನೆತ್ರಕೆರೆ ಉದಯಶಂಕರ.


PARYAYA: ಪಶ್ಚಿಮ ಘಟ್ಟ: ಹೀಗೊಂದು ದೃಶ್ಯ ಕಾವ್ಯ…:   ಪಶ್ಚಿಮ ಘಟ್ಟ: ಹೀಗೊಂದು   ದೃಶ್ಯ ಕಾವ್ಯ… ಪಶ್ಚಿಮ ಘಟ್ಟ- ದಕ್ಷಿಣ ಭಾರತದ ಕಾಶ್ಮೀರವೆಂದರೆ ತಪ್ಪಲ್ಲ. ಪಶ್ಚಿಮ ಘಟ್ಟದ ಕಾನನಗಳ ಮಧ್ಯೆ ಚಾರಣ, ಪಯಣ ಒಂದು ಅಪೂರ್ವ ಅನುಭವ...

Sunday, September 5, 2021

PARYAYA: ನ್ಯಾಯಾಲಯಕ್ಕೆ ಸಾಧ್ಯವಾಗದ್ದು, ಪಂಚಾಯತಿಗೆ ಸಾಧ್ಯವಾಯಿತು..!

ನ್ಯಾಯಾಲಯಕ್ಕೆ ಸಾಧ್ಯವಾಗದ್ದು, ಪಂಚಾಯತಿಗೆ ಸಾಧ್ಯವಾಯಿತು..!

 ಈ ಗ್ರಾಮ ಪಂಚಾಯತಿಯಲ್ಲಿ ‘ಸರ್’  ‘ಮ್ಯಾಡಮ್’ ಪದ ಬಳಸುವಂತಿಲ್ಲ..

ನ್ಯಾಯಾಲಯಕ್ಕೆ ಸಾಧ್ಯವಾಗದ್ದು, ಪಂಚಾಯತಿಗೆ ಸಾಧ್ಯವಾಯಿತು..!

ಆರು ತಿಂಗಳ ಹಿಂದೆ ಸುಪ್ರೀಂಕೋರ್ಟಿನಲ್ಲಿ  ಭಾರತದ ಮುಖ್ಯ ನ್ಯಾಯಮೂರ್ತಿ  ಎಸ್ ಎ ಬೋಬಡೆ ಅವರು ಯುವ ವಕೀಲರೊಬ್ಬರು ತಮ್ಮನ್ನು ‘ಯುವರ್ ಆನರ್’ ಎಂಬುದಾಗಿ ಸಂಬೋಧಿಸಿದಾಗ ಸಿಟ್ಟಿಗೆದ್ದಿದ್ದರು.

‘ನಿಮ್ಮ ಮನಸ್ಸಿನಲ್ಲಿ ಏನಿದೆ? ನೀವು ಅಮೆರಿಕದ ಸುಪ್ರೀಂಕೋರ್ಟಿನಲ್ಲಿ ಇದ್ದೇನೆ ಅಂದುಕೊಂಡಿದ್ದೀರೋ ಅಥವಾ ಅಲ್ಲಿನ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ಇದ್ದೇನೆ ಅಂದುಕೊಂಡಿದ್ದೀರೋ?’

ತತ್ ಕ್ಷಣವೇ ಕಾನೂನು ವಿದ್ಯಾರ್ಥಿಯಾಗಿದ್ದ ಯುವ ವಕೀಲರು  ನಾಲಿಗೆ ಕಚ್ಚಿಕೊಂಡರು. ‘ತಪ್ಪಾಯಿತು, ಕ್ಷಮಿಸಿ’ ಎಂದು ಕೇಳಿಕೊಂಡು ಯುವ ವಕೀಲರು ‘ಇನ್ನು ಮುಂದೆ  ‘ಮೈ ಲಾರ್ಡ್ಸ್ ಪದ ಬಳಸುತ್ತೇನೆ’ ಎಂದು ಉತ್ತರಿಸಿದರು.

‘ಏನಾದರೂ ಸರಿ. ನೀವು ಯಾವ ಪದ ಬಳಸುತ್ತೀರಿ ಎಂದೇ ನಾವು ಗಮನಿಸುತ್ತಿರುವುದಿಲ್ಲ, ಆದರೆ ತಪ್ಪು ಪದಗಳನ್ನು ಬಳಸಬೇಡಿ’ ಎಂದರು ಸಿಜೆಐ.

ಹಿಂದೆ, 2020ರ ಆಗಸ್ಟ್ ತಿಂಗಳಲ್ಲಿ ಕೂಡಾ ಇದೇ ರೀತಿ ನ್ಯಾಯಮೂರ್ತಿಗಳನ್ನು ಉದ್ದೇಶಿಸಿ ‘ಯುವರ್ ಆನರ್’ ಪದ ಬಳಸಿದಾಗ  ಸಿಜೆಐ ಬೋಬ್ಡೆ ಸಿಡಿಮಿಡಿಗೊಂಡಿದ್ದರು. ಆಗ ಕೂಡಾ  ‘ನೀವೇನು ಅಮೆರಿಕದ ಸುಪ್ರೀಂಕೋರ್ಟಿನ ಮುಂದೆ ಇದ್ದೀರೋ?’ ಎಂಬುದಾಗಿ ಅವರು ವಕೀಲರನ್ನು ಗದರಿದ್ದರು.

ಉನ್ನತ  ನ್ಯಾಯಾಲಯಗಳಲ್ಲಿ ಸಾಮಾನ್ಯವಾಗಿ ಬಳಸುವ  ‘ಮೈ ಲಾರ್ಡ್’, ‘ಯುವರ್ ಲಾರ್ಡ್ ಶಿಪ್’ ಮುಂತಾದ ಶಿಷ್ಟಾಚಾರದ ಪದಗಳು ನಮ್ಮ ದೇಶಕ್ಕೆ ಬ್ರಿಟಿಷ್ ಆಡಳಿತದ ಬಳುವಳಿಗಳು. ಈ ಪದಗಳ ಬಳಕೆಯನ್ನು ನಿಲ್ಲಿಸಬೇಕು ಎಂದು ಹಲವಾರು ವರ್ಷಗಳಿಂದಲೇ ಪ್ರಯತ್ನಗಳು ನಡೆಯುತ್ತಲೇ ಬಂದಿವೆ.

ಭಾರತದ ವಕೀಲರ ಸಂಘವಾದ ಬಾರ್ ಕೌನ್ಸಿಲ್ ಆಫ್ ಇಂಡಿಯಾಕ್ಕೆ  ಇಂತಹ ಪದಗಳ ಬಳಕೆ ಬಗ್ಗೆ ನಿಯಮಗಳನ್ನು ರೂಪಿಸಲು 1961ರ ವಕೀಲರ ಕಾಯ್ದೆಯ ಸೆಕ್ಷನ್ 49 (1)(ಸಿ) ಅಧಿಕಾರ ನೀಡಿದೆ.  2006ರಲ್ಲೇ  ಬಾರ್ ಕೌನ್ಸಿಲ್ ಆಫ್ ಇಂಡಿಯಾ , ‘ಮೈಲಾರ್ಡ್’ ‘ಯುವರ್ ಲಾರ್ಡ್ ಶಿಪ್’ ನಂತಹ ಪದಗಳನ್ನು  ಬಳಸಲು ಉತ್ತೇಜನ ನೀಡಬಾರದು ಎಂದು ನಿರ್ಣಯ ಕೈಗೊಂಡಿತ್ತು.

2014ರಲ್ಲಿ ಶಿವಸಾಗರ್ ತಿವಾರಿ ಎಂಬ ವಕೀಲರೊಬ್ಬರು, ಇಂತಹ ಪದಗಳು ದೇಶದ ಘನತೆಗೆ ಧಕ್ಕೆ ತರುತ್ತವೆ ಮತ್ತು ಇವು ಗುಲಾಮಿತನದ ಸಂಕೇತವಾದ್ದರಿಂದ ಅವುಗಳ ಬಳಕೆಯನ್ನು  ನಿಷೇಧಿಸಬೇಕು’ ಎಂದು ಸುಪ್ರೀಂಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಆದರೆ ಆದರೆ ನ್ಯಾಯಮೂರ್ತಿಗಳಾದ ಎಚ್.ಎಲ್. ದತ್ತು ಮತ್ತು ಬೋಬ್ಡೆ ಅವರ ಪೀಠವು ‘ಈ ಪದಗಳ ಬಳಕೆ ಎಂದಿಗೂ ಕಡ್ಡಾಯವಾಗಿಲ್ಲ’ ಎಂಬುದಾಗಿ ಹೇಳಿ ಅರ್ಜಿಯನ್ನು ತಿರಸ್ಕರಿಸಿತ್ತು.

‘ನ್ಯಾಯಾಲಯವನ್ನು ಗೌರವಯುತವಾಗಿ ಸಂಬೋಧಿಸಿ ಅಷ್ಟೆ. ನೀವು ‘ಸರ್’ ಎಂದರೂ ಒಪ್ಪುತ್ತೇವೆ, ‘ಯುವರ್ ಆನರ್’ ಎಂದರೂ  ಒಪ್ಪುತ್ತೇವೆ, ‘ಲಾರ್ಡ್ ಶಿಪ್’ ಎಂದು ಕರೆದರೂ ಒಪ್ಪುತ್ತೇವೆ.’ ಎಂದು ಪೀಠ ಹೇಳಿತ್ತು.

ಆದರೆ, 2019ರಲ್ಲಿ ರಾಜಸ್ಥಾನ ಹೈಕೋರ್ಟ್ ‘ಮೈಲಾರ್ಡ್’  ‘ಯುವರ್ ಲಾರ್ಡ್ ಶಿಪ್’ ಪದಗಳ ಬಳಕೆಯನ್ನು ನಿಷೇಧಿಸಿತ್ತು. ಸಂವಿಧಾನವು ಸಮಾನತೆಯನ್ನು ಪ್ರತಿಪಾದಿಸಿರುವಾಗ  ಇಂತಹ ಪದಗಳ ಬಳಕೆ ಸರಿಯಲ್ಲ ಎಂದು ರಾಜಸ್ಥಾನ ಹೈಕೋರ್ಟ್ ಸಾರಿತ್ತು.

ಆದರೂ ನ್ಯಾಯಾಲಯಗಳಲ್ಲಿ ಇಂತಹ ಪದಗಳ ಬಳಕೆ ನಿರಂತರವಾಗಿ ನಡೆಯುತ್ತಲೇ ಇದೆ.

ಬ್ರಿಟಿಷ್ ವಸಾಹತಿನ ಬಳುವಳಿ ಪದಗಳನ್ನು ನಿಷೇಧಿಸುವ ಬಗ್ಗೆ ನ್ಯಾಯಾಲಯಗಳೇ ಹೀಗೆ ದ್ವಂದ್ವದಲ್ಲಿ ಇರುವ ಹೊತ್ತಿನಲ್ಲಿ  ಕೇರಳದ ಪುಟ್ಟ ಗ್ರಾಮ ಪಂಚಾಯತಿಯೊಂದು ‘ಸರ್ ಮತ್ತು  ಮ್ಯಾಡಮ್’ ನಂತಹ ಬ್ರಿಟಿಷ್ ವಸಾಹತುಶಾಹಿಯ ಪದಗಳ ಬಳಕೆಯನ್ನು ನಿಷೇಧಿಸುವ ಮೂಲಕ  ಇಂತಹ ಪದಗಳ ಬಳಕೆಯನ್ನು ನಿಷೇಧಿಸಿದ ದೇಶದ ಮೊತ್ತ ಮೊದಲ ಗ್ರಾಮ ಪಂಚಾಯತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕೇರಳದ ಪಾಲಕ್ಕಾಡ್ ಜಿಲ್ಲೆಯ ಮಾಥುರ್ ಗ್ರಾಮ ಪಂಚಾಯತಿಯು 2021ರ ಆಗಸ್ಟ್ 31ರ ಮಂಗಳವಾರ  ‘ಸರ್ ಮತ್ತು ಮ್ಯಾಡಮ್’  ಪದಗಳ ಬಳಕೆಯನ್ನು ನಿಷೇಧಿಸುವ  ಚಾರಿತ್ರಿಕ ನಿರ್ಣಯವನ್ನು ಕೈಗೊಂಡು ಇತಿಹಾಸ  ಬರೆದಿದೆ.

16 ಸದಸ್ಯರ ಕಾಂಗ್ರೆಸ್ ಆಡಳಿತದ ಗ್ರಾಮ ಪಂಚಾಯಿತಿಯು ಈ ವಾರದ ಆರಂಭದಲ್ಲಿ ಅಂಗೀಕರಿಸಿದ ಸರ್ವಾನುಮತದ ನಿರ್ಣಯಕ್ಕೆ ಏಳು ಸಿಪಿಐ (ಎಂ) ನಾಮನಿರ್ದೇಶಿತರು ಮತ್ತು ಒಬ್ಬ ಬಿಜೆಪಿ ಸದಸ್ಯರ ಬೆಂಬಲ ಲಭಿಸಿದೆ. ಈ ವಿಚಾರದಲ್ಲಿ ಪಕ್ಷಗಳು ಯಾವುದೇ ರಾಜಕೀಯವನ್ನೂ ಎಳೆದುತರಲಿಲ್ಲ ಎಂಬುದೇ ವಿಶೇಷ.

ಸಾಮಾನ್ಯ ಜನರು, ಜನಪ್ರತಿನಿಧಿಗಳು ಮತ್ತು ನಾಗರಿಕ ಸಂಸ್ಥೆಯ ಅಧಿಕಾರಿಗಳ ನಡುವಣ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ  ಇಂತಹ ಕ್ರಮ ಕೈಗೊಂಡಿರುವ ಮಾಥುರ್ ಗ್ರಾಮ ಪಂಚಾಯತಿ ಇದನ್ನು ಪಂಚಾಯತಿಯ ಪ್ರಕಟಣಾ ಫಲಕದಲ್ಲಿ ಅಂಟಿಸುವ ಮೂಲಕ ಜಾರಿಗೂ ತಂದಿದೆ.

ಜನರು, ಪಂಚಾಯತಿನ ಯಾವುದೇ ಅಧಿಕಾರಿಯನ್ನು ಉದ್ದೇಶಿಸಿ ‘ಸರ್’ ಅಥವಾ ‘ಮ್ಯಾಡಮ್’ ಎಂಬುದಾಗಿ ಸಂಬೋಧಿಸಬೇಕಾಗಿಲ್ಲ.  ಅಧಿಕಾರಿಯ ಹುದ್ದೆ ಅಥವಾ ಹೆಸರಿನಿಂದಲೇ ಸಂಬೋಧಿಸಬಹುದು. ಅಧಿಕಾರಿಗಳು ವಯಸ್ಸಾದವರೋ  ಹಿರಿಯರೋ ಆಗಿದ್ದರೆ ಮಲಯಾಳಂನಲ್ಲಿ ‘ಚೇತಾ’/ ‘ಚೇತನ್’ (ಅಣ್ಣ) ಅಥವಾ ‘ಚೇಚಿ’ (ಅಕ್ಕ) ಇಂತಹ ಸ್ನೇಹಪರ ಪದಗಳನ್ನು ಬಳಸಬಹುದು.

‘ಸರ್’ ಅಥವಾ ‘ಮ್ಯಾಡಮ್’ ಪದ ಬಳಸದ್ದಕ್ಕಾಗಿ ಸೇವೆ ನೀಡಲು ಯಾರಾದರೂ ನಿರಾಕರಿಸಿದರೆ ಜನರು ಪಂಚಾಯತ್ ಅಧ್ಯಕ್ಷರು ಅಥವಾ ಕಾರ್ಯದರ್ಶಿಗೆ ದೂರು ನೀಡಬಹುದು.

ಪಂಚಾಯತಿ ನಿರ್ಣಯದ ಪರಿಣಾಮವಾಗಿ ಈಗ ಅಲ್ಲಿನ  ಅಧಿಕಾರಿಗಳು ತಮ್ಮ ಮೇಜಿನ ಮೇಲೆ ತಮ್ಮ ಹೆಸರು, ಹುದ್ದೆಗಳ ಫಲಕಗಳನ್ನೂ ಇಡುತ್ತಿದ್ದಾರೆ.

'ಸರ್' ಮತ್ತು 'ಮೇಡಂ' ಗೆ ಪರ್ಯಾಯ ಪದಗಳನ್ನು ನೀಡುವಂತೆ ಪಂಚಾಯತಿಯು ಅಧಿಕೃತ ಭಾಷಾ ಇಲಾಖೆಯನ್ನು  ಕೂಡಾ  ಕೋರಿದೆ.

ಪ್ರಜಾಪ್ರಭುತ್ವದಲ್ಲಿ ನಾಗರಿಕರೇ ಪ್ರಭುಗಳು. ನಾವೆಲ್ಲರೂ ಅವರಿಗೆ ಸೇವೆ ಒದಗಿಸುವ ಸೇವಕರು. ನಮ್ಮ ಸೇವೆ ಪಡೆಯಲು ಜನರು ನಮ್ಮನ್ನು ಅಂಗಲಾಚುವಂತೆ ಆಗಬಾರದು. ಇದಕ್ಕಾಗಿ, ಪಂಚಾಯತ್ ಪ್ರಸ್ತುತ 'ಅಪೇಕ್ಷಾ ನಮೂನೆ' (ಅರ್ಜಿ ನಮೂನೆ) ಯನ್ನು 'ಅವಕಾಶ ಪತ್ರಿಕೆ' (ಹಕ್ಕು ಪ್ರಮಾಣಪತ್ರ) ಆಗಿ ಬದಲಾಯಿಸಲೂ ಪಂಚಾಯತಿಯು ತೀರ್ಮಾನಿಸಿದೆ ಎಂದೂ ಪಂಚಾಯತಿಯ ಉಪಾಧ್ಯಕ್ಷರು ತಿಳಿಸಿದ್ದಾರೆ.

ಎಂತಹ ಅನುಕರಣೀಯ ಗ್ರಾಮ ಪಂಚಾಯತಿ ಇದು ಅಲ್ಲವೇ?

ವಿಡಿಯೋ ನೋಡಲು ಕೆಳಗೆ ಕ್ಲಿಕ್ ಮಾಡಿರಿ:


 -ನೆತ್ರಕೆರೆ ಉದಯಶಂಕರ



PARYAYA: ನ್ಯಾಯಾಲಯಕ್ಕೆ ಸಾಧ್ಯವಾಗದ್ದು, ಪಂಚಾಯತಿಗೆ ಸಾಧ್ಯವಾಯಿತು..!:   ಈ ಗ್ರಾಮ ಪಂಚಾಯತಿಯಲ್ಲಿ ‘ಸರ್’   ‘ಮ್ಯಾಡಮ್’ ಪದ ಬಳಸುವಂತಿಲ್ಲ.. ನ್ಯಾಯಾಲಯಕ್ಕೆ ಸಾಧ್ಯವಾಗದ್ದು, ಪಂಚಾಯತಿಗೆ ಸಾಧ್ಯವಾಯಿತು..! ಆರು ತಿಂಗಳ ಹಿಂದೆ ಸುಪ್ರೀಂಕೋರ್ಟ...

Sunday, August 22, 2021

PARYAYA: ವಾರೇ ವಾಹ್ ಕೇರಳದ ಓಣಂ ಮತ್ತು ತುಳುವರ ದೀಪಾವಳಿ..!

 ವಾರೇ ವಾಹ್  ಕೇರಳದ ಓಣಂ ಮತ್ತು ತುಳುವರ ದೀಪಾವಳಿ..!

ಭಾರತದ ಈ ಸಂಸ್ಕೃತಿಗೆ ವಾರೇ ವಾಹ್ ಎನ್ನಲೇಬೇಕು. ಎಂತಹ ಸಾಮ್ಯತೆ ನೋಡಿ. ಕೇರಳದಲ್ಲಿ ಈಗ (ಇದು ಬರೆಯುವಾಗ ದಿನ: 22 ಆಗಸ್ಟ್ 2021) ಓಣಂ ಸಂಭ್ರಮ.  ಇದೇ ಸಂಭ್ರಮ  ತುಳುನಾಡು ಅಂದರೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಅಥವಾ ಈಗಿನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಹಾಗೂ ಕರ್ನಾಟಕ-ಕೇರಳದ ಗಡಿನಾಡು ಕಾಸರಗೋಡಿನಲ್ಲಿ ದೀಪಾವಳಿಯ ವೇಳೆಯಲ್ಲಿ ಕಂಡು ಬರುತ್ತದೆ.

ಈ ಎರಡೂ ಸಂದರ್ಭಗಳಲ್ಲಿ  ಕಂಡು ಬರುವ ಸಾಮ್ಯತೆ ಬಲಿಯೇಂದ್ರ ಇಲ್ಲವೇ ಬಲಿ ಚಕ್ರವರ್ತಿ ಅಥವಾ ರಾಜಾಮಹಾಬಲಿಗೆ ನೀಡುವ ಸಂಭ್ರಮದ ಸ್ವಾಗತ.

ಈಗ ಕೇರಳದಲ್ಲಿ ಮಾತ್ರವೇ ಅಲ್ಲ ತಾವಿರುವ ಎಲ್ಲ ಕಡೆಗಳಲ್ಲೂ ಕೇರಳಿಗರು ಸಂಭ್ರಮದಿಂದ ಆಚರಿಸುತ್ತಿರುವ ಓಣಂ ಕಡೆಗೆ ಗಮನ ಹರಿಸಿ.

ಓಣಂ ಹಬ್ಬವು ಕೇರಳಿಗರು ನಂಬುವ ಪ್ರಕಾರ ರಾಜ ಮಹಾಬಲಿಯ ತಾಯ್ನಾಡಿನಲ್ಲಿ ಅಂದರೆ ಕೇರಳದಲ್ಲಿ ಆಚರಿಸಲ್ಪಡುತ್ತದೆ.  ಇದು 10 ದಿನಗಳ ಕಾಲ ನಡೆಯುತ್ತದೆ.  ಮುಖ್ಯ ಹಬ್ಬವನ್ನು ಆಗಸ್ಟ್ 21-23 ರಿಂದ ಮೂರು ದಿನಗಳವರೆಗೆ ಆಚರಿಸಲಾಗುತ್ತದೆ.

ಮಹಾಬಲಿ, ರಾಕ್ಷಸ ರಾಜ. ಆದರೆ  ಉದಾರ ಮತ್ತು ದಯಾಮಯ ಎಂದು ಪ್ರತೀತಿ. ಆತನ ಆಡಳಿತವನ್ನು  ಸುವರ್ಣ ಯುಗಕ್ಕೆ ಹೋಲಿಕೆ ಮಾಡಲಾಗುತ್ತದೆ,  ಈ ಕಾರಣದಿಂದಾಗಿ, ಪ್ರತಿವರ್ಷ ಮಹಾಬಲಿ ತನ್ನ ತಾಯ್ನಾಡಿಗೆ ಭೇಟಿ ನೀಡಿ ಮರಳುವ ಸಂದರ್ಭವನ್ನು  ವ್ಯಾಪಕವಾಗಿ ಆಚರಿಸಲಾಗುತ್ತದೆ. ಹಬ್ಬವನ್ನು ಮಲಯಾಳಂ ಕ್ಯಾಲೆಂಡರ್ ತಿಂಗಳಾದ ಚಿಂಗಂನಲ್ಲಿ ಆಚರಿಸಲಾಗುತ್ತದೆ. ಈ ಓಣಂ  ಸುಗ್ಗಿಯ ಹಬ್ಬ ಕೂಡಾ.

ಪುರಾಣ ಕಥೆಗಳ ಪ್ರಕಾರ ಅಸುರ ನಾಯಕಾಗಿದ್ದ ರಾಜಾ ಮಹಾಬಲಿಯು ದೇವತೆಗಳನ್ನು  ಸೋಲಿಸಿ ಮೂರು ಲೋಕಗಳನ್ನು ವಶಪಡಿಸಿಕೊಂಡನು.. ಇದು ದೇವತೆಗಳನ್ನು ವ್ಯಗ್ರಗೊಳಿಸಿತು.  ಅವರು ರಾಕ್ಷಸ ರಾಜನ ವಿರುದ್ಧ ಹೋರಾಡಲು ಅವರಿಗೆ ಸಹಾಯ ಮಾಡಲು ಭಗವಾನ್ ವಿಷ್ಣುವನ್ನು ಪ್ರಾರ್ಥಿಸಿದರು.

ರಾಜಾ ಮಹಾಬಲಿ ಭಗವಾನ್ ವಿಷ್ಣುವಿನ ಭಕ್ತ.  ಭಗವಾನ್ ವಿಷ್ಣುವಿಗೆ ಉಭಯ ಸಂಕಟ. ವಿಷ್ಣೂ ಭಗವಾನ್ ವಿಷ್ಣು ವಾಮನ  ಅಂದರೆ ಕುಬ್ಜ ಗಾತ್ರದ ಬ್ರಾಹ್ಮಣ ವಟು  ರೂಪದಲ್ಲಿ  ಮಹಾಬಲಿಯನ್ನು ಭೇಟಿ ಮಾಡಿದ  ಮತ್ತು ಮೂರು ಹೆಜ್ಜೆ ಜಾಗವನ್ನು ತನಗೆ ದಾನವಾಗಿ ನೀಡುವಂತೆ ಮಹಾಬಲಿ ಬಳಿ ಪ್ರಾರ್ಥಿಸಿದ. ದಾನಶೂರನಾದ ಮಹಾಬಲಿ  ಅದಕ್ಕೆ ಒಪ್ಪಿದ.

ಬಳಿಕ ವಾಮನ  ಗಾತ್ರದ ವಟುವಿನ ಗಾತ್ರ ಹಿಗ್ಗಿತು.  ಆತ ಕೇಳಿದ  ಎರಡು ಹೆಜ್ಜೆಗಳನ್ನು ಇಡುವಷ್ಟರಲ್ಲಿ ರಾಜಾ ಮಹಾಬಲಿಯ ಆಳ್ವಿಕೆಗೆ ಒಳಪಟ್ಟ ಸಮಸ್ತ ಭೂಮಂಡಲ ಮುಗಿದು ಹೋಯಿತು. ಮೂರನೇ ಹೆಜ್ಜೆ ಇಡಲು ಯಾವುದೇ ಸ್ಥಳ ಇಲ್ಲದೇ ಹೋದಾಗ ಮಹಾಬಲಿ ತನ್ನ ತಲೆಯ ಮೇಲೆಯೇ ಮೂರನೇ ಹೆಜ್ಜೆ ಇಡಲು ಮನವಿ ಮಾಡಿದ.

ಮಹಾಬಲಿಯ ನಡತೆಗೆ ಮೆಚ್ಚಿದ ಭಗವಾನ್ ವಿಷ್ಣು ಆತನಿಗೆ ಪ್ರತಿ  ವರ್ಷದಲ್ಲಿ ಒಂದು ಬಾರಿ ಭೂಮಿಯಲ್ಲಿನ ಆತನ ಸಾಮ್ಯಾಜ್ಯಕ್ಕೆ ಬರಲು ಅವಕಾಶ ನೀಡಿದ. 

ಹೀಗೆ ಪ್ರತಿ ವರ್ಷ ಮಹಾಬಲಿ ಭೂಮಿಯಲ್ಲಿನ ಆತನ ಸಾಮ್ರಾಜ್ಯಕ್ಕೆ ಬರುವ ಕಾಲವನ್ನೇ ಕೇರಳದಲ್ಲಿ ‘ಓಣಂ’ ಎಂಬುದಾಗಿ ಆಚರಿಸಲಾಗುತ್ತದೆ.

ಕೇರಳದಲ್ಲಿ ಅತ್ಯಂತ ಸಂಭ್ರಮದೊಂದಿಗೆ ಆಚರಿಸಲಾಗುವ  ಹಬ್ಬದಲ್ಲಿ ಗಮನ ಸೆಳೆಯುವುದು ರಂಗೋಲಿ ಅಲಂಕಾರ ಮತ್ತು ಬಾಳೆ ಎಲೆಯಲ್ಲಿ ಬಡಿಸಲಾಗುವ ಬಗೆ ಬಗೆಯ ಭಕ್ಷ್ಯ ಭೋಜ್ಯಗಳ ಭೋಜನ.

ಇಲ್ಲಿರುವ ಪುಟ್ಟ ವಿಡಿಯೋ ಈ ‘ಭೋಜನ ಸಂಭ್ರಮವನ್ನು’ ತೋರಿಸುತ್ತದೆ.


ಈ ಜನರು ‘ವಲ್ಲಂ ಕಾಳಿ’ ಎಂದು ಕರೆಯಲಾಗುವ  ದೋಣಿ ಓಟಗಳಲ್ಲಿ ಭಾಗವಹಿಸಿ ಸಂಭ್ರಮ ಆಚರಿಸುತ್ತಾರೆ.

ತುಳುನಾಡಿನಲ್ಲಿ:

ಇದು ಕೇರಳದ ಕಥೆಯಾದರೆ, ಕರ್ನಾಟಕದ ತುಳುನಾಡು ಅಂದರೆ ಪಶ್ಚಿಮ ಕರಾವಳಿಯಲ್ಲಿ ಇದೇ ರಾಜಾ ಮಹಾಬಲಿಯನ್ನು  ಬಲಿಯೇಂದ್ರ ಹೆಸರಿನಲ್ಲಿ ಪ್ರತಿವರ್ಷವೂ ಸಡಗರದೊಂದಿಗೆ ಬರಮಾಡಿಕೊಳ್ಳುತ್ತಾರೆ. ಆದರೆ ಕೇರಳಿಗರ  ಓಣಂ ಸಂದರ್ಭದಲ್ಲಿ ಅಲ್ಲ- ಭಾರತದಾದ್ಯಂತ ಸಂಭ್ರಮದಿಂದ ಆಚರಿಸಲಾಗುವ ದೀಪಾವಳಿಯ ಸಂದರ್ಭದಲ್ಲಿ.

ಕತ್ತಲೆಯಿಂದ ಬೆಳಕಿನ ಕಡೆಗೆ,  ಅಜ್ಞಾನದಿಂದ ಜ್ಞಾನದ ಕಡೆಗೆ ಮತ್ತು ಬಡತನದಿಂದ ಸಮೃದ್ಧಿಯತ್ತ ಸಾಗುವ ನಮ್ಮ ಸಹಜ ಆಕಾಂಕ್ಷೆಯ ಸಂಕೇತವಾಗಿ  ದೀಪಾವಳಿಯನ್ನು ಆಚರಿಸಲಾಗುತ್ತದೆ. ಇದು  ಪ್ರಕೃತಿಮಾತೆಗೆ ಕೃತಜ್ಞತೆ ಸಲ್ಲಿಸುವ ಹಬ್ಬ ಕೂಡಾ ಹೌದು.  ದೀಪಾವಳಿ ಎಂದರೆ ದೀಪಗಳ ಸಮೂಹ.

ಈ ಆಧುನಿಕ, ಸಕಾರಾತ್ಮಕ ಚಿಂತನೆಯ ಶೈಲಿಯ ವಿವರಣೆಗಳ ಹೊರತಾಗಿಯೂ, ಉತ್ಸವವನ್ನು ಮೂಲತಃ  ಬಲಿಯೇಂದ್ರನ ಸಾಮ್ರಾಜ್ಯದ  ವ್ಯಾಪ್ತಿಗೆ ಒಳಪಟ್ಟ ತುಳುನಾಡಿನ ಪ್ರಜೆಗಳು  ತಮ್ಮ ರಾಜನನ್ನು ಸ್ವಾಗತಿಸಿ ಆದರಿಸುವ ಹಬ್ಬವಾಗಿ ಆಚರಿಸುತ್ತಾರೆ.

ಬಲಿಯೇಂದ್ರ ಅಥವಾ ಬಲಿ ಚಕ್ರವರ್ತಿಯನ್ನು ಮನೆ ಮನೆಗಳಲ್ಲೂ ದೀಪ ಬೆಳಗಿ ಊಟ ಇಟ್ಟು  ಬಲಿಯೇಂದ್ರ ಪಠಣದ ಮೂಲಕ ಸ್ವಾಗತಿಸಿ ಸಂಭ್ರಮಿಸುವ ಆಚರಣೆ ತುಳುನಾಡಿನಲ್ಲಿದೆ. ಬಲಿಗೆ ಸಂಬಂಧಿಸಿದಂತೆ ತುಳುನಾಡಿನಲ್ಲಿ ಕೂಡಾ ಪ್ರಚಲಿತವಾಗಿರುವುದು ಕೇರಳದಲ್ಲಿ ಪ್ರಚಲಿತವಾಗಿರುವ ಈ ವಾಮನಾವತಾರದ ಕಥೆಯೇ.

ಈ ಅಸುರ ರಾಜ ಬಲಿಯೇಂದ್ರ ಮಾಡಿದ  ಮಹಾಪಾಪ ಏನು?

ಮಹಾಬಲಿ ಅಸುರನಾಗಿದ್ದರೂ  ಹೃದಯವಂತ.  ಲೋಕೋಪಕಾರಿ.  ಅಗತ್ಯವಿದ್ದವರಿಗೆ ಉಚಿತ ಉಡುಗೊರೆಗಳನ್ನು ಮನಃಪೂರ್ವಕವಾಗಿ ನೀಡುತ್ತಿದ್ದ.

ದಂತಕಥೆಯ ಪ್ರಕಾರ  ರಾಜಾ ಬಲಿಯೇಂದ್ರ ತನ್ನಿಂದ ದಾನ ಪಡೆಯುವವರು ಏನನ್ನೇ ಕೇಳಿದರೂ ಅದನ್ನು ಕೊಟ್ಟು ಬಿಡುತ್ತಿದ್ದ.  ದೇವತೆಗಳ ಮೊರೆಗೆ ಓಗೊಟ್ಟ ಭಗವಾನ್ ವಿಷ್ಣು  ರಾಜಾ ಬಲಿಯೇಂದ್ರನ  ಈ  ಗುಣವನ್ನೇ ಬಳಸಿಕೊಂಡ. ಮತ್ತು  ಕುಬ್ಜ ವಟುವಿನ ಗಾತ್ರದಲ್ಲಿ ಬಂದು ಮೂರು  ಅಡಿ ಇಡುವಷ್ಟು ಗಾತ್ರದ ಭೂಮಿಯನ್ನು ನೀಡುವಂತೆ ಕೋರಿದ. ರಾಜಾ ಬಲಿಯೇಂದ್ರ  ಮಾತುಕೊಟ್ಟ ಬಳಿಕ ಬೃಹದಾಕಾರವಾಗಿ ಬೆಳೆದ ವಾಮನ ಎರಡು ಅಡಿಗಳನ್ನು ಸಂಪೂರ್ಣ ಭೂಮಂಡಲವನ್ನೇ ಪಡೆದುಕೊಂಡ. ಮೂರನೇ ಅಡಿ ಇಡಲು ಜಾಗವೇ ಇರಲಿಲ್ಲ. ಬಲಿಯೇಂದ್ರ ಮೂರನೇ ಹೆಜ್ಜೆ ಇಡಲು ತನ್ನ ತಲೆಯನ್ನೇ ಒಡ್ಡಿದ.

ಬಲಿಯೇಂದ್ರನ ತಲೆಯ ಮೇಲೆ ತನ್ನ ಪಾದವನ್ನು ಊರಿದ ವಿಷ್ಣು ಭಗವಾನ್ ಆತನನ್ನು ಪಾತಾಳಕ್ಕೆ ತಳ್ಳಿದ.  ಆದರೆ ಬಲಿಯೇಂದ್ರನ ತ್ಯಾಗಕ್ಕೆ ಮೆಚ್ಚಿದ ಭಗವಾನ್ ವಿಷ್ಣು, ಪ್ರತಿವರ್ಷ ಮೂರು ದಿನ ತನ್ನ ಸಾಮ್ರಾಜ್ಯಕ್ಕೆ ಹಿಂತಿರುಗಿ ಪ್ರಜೆಗಳಿಂದ ಆದರಾತಿಥ್ಯ ಪಡೆಯಲು ಅವಕಾಶ ನೀಡಿದ. ತುಳುನಾಡಿನಲ್ಲಿ ಇದನ್ನೇ ದೀಪಾವಳಿ ಹಬ್ಬವಾಗಿ ಆಚರಿಸಲಾಗುತ್ತಿದೆ.

ದೀಪಾವಳಿ ರಾತ್ರಿಯ ಸಮಯದಲ್ಲಿ ತುಳುನಾಡು ಗ್ರಾಮೀಣ ಭಾಗದಲ್ಲಿ 'ಪೊಲಿ ಪೊಲಿ ಬಲಿಯೇಂದ್ರ' ಪಠಣವು ಬಲಿಯೇಂದ್ರನನ್ನು  ಸ್ವಾಗತಿಸುವ ಪ್ರಾಚೀನ ಸಂಪ್ರದಾಯವನ್ನು ಪ್ರತಿಧ್ವನಿಸುತ್ತದೆ.

ಇಲ್ಲಿರುವ ಪುಟ್ಟ ವಿಡಿಯೋ ತುಳುವರು ಬಲಿಯೇಂದ್ರನನ್ನು ‘ಪೊಲಿ ಪೊಲಿ ಬಲಿಯೇಂದ್ರ’ ಎಂಬುದಾಗಿ ಪಠಿಸುತ್ತಾ ದೀಪ ಹಚ್ಚಿ ಸ್ವಾಗತಿಸುವುದನ್ನು ತೋರಿಸುತ್ತದೆ. 

ಒಂದೇ ಕಥೆ, ಒಂದೇ ಸಂಭ್ರಮ -  ಎರಡು ರಾಜ್ಯಗಳಲ್ಲಿನ ಸಾಮ್ಯತೆಯನ್ನು ಕಣ್ತುಂಬಿಕೊಳ್ಳಿ.

-ನೆತ್ರಕೆರೆ ಉದಯಶಂಕರ


PARYAYA: ವಾರೇ ವಾಹ್ ಕೇರಳದ ಓಣಂ ಮತ್ತು ತುಳುವರ ದೀಪಾವಳಿ..!:   ವಾರೇ ವಾಹ್   ಕೇರಳದ ಓಣಂ ಮತ್ತು ತುಳುವರ ದೀಪಾವಳಿ..! ಭಾರತದ ಈ ಸಂಸ್ಕೃತಿಗೆ ವಾರೇ ವಾಹ್ ಎನ್ನಲೇಬೇಕು. ಎಂತಹ ಸಾಮ್ಯತೆ ನೋಡಿ. ಕೇರಳದಲ್ಲಿ ಈಗ (ಇದು ಬರೆಯುವಾಗ ದಿನ...