Sunday, March 3, 2019

ಬೆನ್ನ ಹುರಿಯಲ್ಲಿ ಕ್ಯಾನ್ಸರ್ ಉರಿ, ಎದೆಯಲ್ಲಿ ಭಾರತ ವಿರೋಧಿ ಉರಿ!

ಬೆನ್ನ ಹುರಿಯಲ್ಲಿ ಕ್ಯಾನ್ಸರ್ ಉರಿ, ಎದೆಯಲ್ಲಿ ಭಾರತ ವಿರೋಧಿ ಉರಿ!
ನವದೆಹಲಿ:  ಬೆನ್ನ ಹುರಿಯಲ್ಲಿ ಮಾರಣಾಂತಿಕ ಕ್ಯಾನ್ಸರ್ ಉರಿ, ಆದರೂ ಈತನ ಎದೆಯಲ್ಲಿ ಭಾರತದ ವಿರುದ್ಧ ಉರಿ. ಈತನೊಬ್ಬನೇ ಅಲ್ಲ, ಈತನ ಇಡೀ ಕುಟುಂಬವೇ ಪಾಕಿಸ್ತಾನದ ನೆಲದಲ್ಲಿ ಇದ್ದುಕೊಂಡೇ ಭಾರತದ ವಿರುದ್ಧ  ಕಾರ್ಯಾಚರಿಸುತ್ತಿದೆ. ಆಸ್ಪತ್ರೆಯ ಮಂಚದಲ್ಲಿ ಹೊರಳಾಡುತ್ತಿದ್ದರೂ, ಈಗಲೂ ಈತನ ಮಾತೇ ಅಂತಿಮ.

ಈತ ಬೇರೆ ಯಾರೂ ಅಲ್ಲ, ದಕ್ಷಿಣ ಕಾಶ್ಮೀರದ ಪುಲ್ವಾಮದಲ್ಲಿ ಫೆಬ್ರುವರಿ 14ರಂದು ಕೇಂದ್ರೀಯ ಮೀಸಲು ಪೊಲೀಸ್ ಪಡೆ ಯೋಧರ ಬೆಂಗಾವಲು ವಾಹನದ ಮೇಲೆ ಪೈಶಾಚಿಕ ಆತ್ಮಹತ್ಯಾ ದಾಳಿ ನಡೆಸಿ, 40 ಯೋಧರನ್ನು ಬಲಿಪಡೆದ ಪಾಕಿಸ್ತಾನ ಮೂಲಕ ಜೈಶ್--ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್.

ಮಸೂದ್ ಅಜರ್ ಪಾಕಿಸ್ತಾನದ ನೆಲದಲ್ಲೇ ಇದ್ದಾನೆ ಎಂದು ಅಲ್ಲಿನ ವಿದೇಶಾಂಗ ಸಚಿವ ಮಕ್ದೂಮ್ ಶಾ ಮೆಹಮೂದ್ ಖುರೇಶಿ ಒಪ್ಪಿಕೊಂಡಿದ್ದಾರೆ. ಆದರೆ, ಆತನಷ್ಟೇ ಅಲ್ಲ, ಆತನ ಇಡೀ ಕುಟುಂಬವೇ ಭಾರತ ವಿರೋಧಿ ಉಗ್ರ ಚಟುವಟಿಕೆಯಲ್ಲಿ ತೊಡಗಿಕೊಂಡಿದೆ ಎಂಬ ಸತ್ಯವನ್ನು ಅತ್ಯಂತ ಜಾಣ್ಮೆಯಿಂದ  ಅವರು ಮರೆ ಮಾಚಿದ್ದಾರೆ.

ಜೈಶ್-ಮೊಹಮ್ಮದ್ ಉಗ್ರಗಾಮಿ ಸಂಘಟನೆಯು ತನ್ನ 2ನೇ ಕೇಂದ್ರಕಚೇರಿಯನ್ನು ಪಂಜಾಬ್ ಪ್ರಾಂತ್ಯದ ಭವಾಲ್ ಪುರದಲ್ಲಿ 2017ರಲ್ಲಿ ಸ್ಥಾಪಿಸಿಕೊಂಡಿದ್ದು ಇಡೀ ಕುಟುಂಬ ಕೇಂದ್ರದ ಮೂಲಕ ಜೈಶ್- ಮೊಹಮ್ಮದ್ ಭಯೋತ್ಪಾದಕ ಚಟುವಟಿಕೆಗಳನ್ನು ನಿಯಂತ್ರಿಸುತ್ತಿದೆ ಎಂದು ವರದಿಗಳು ಹೇಳಿವೆ.
ವರದಿಗಳ ಪ್ರಕಾರ ಮಸೂದ್ ಅಜರನ ಇಬ್ಬರು ಮಕ್ಕಳಾದ ಅಬ್ದುಲ್ಲ ಮತ್ತು ವಲಿ,  ಮಸೂದ್ ಅಜರನ ಹಿರಿಯ ಸಹೋದರ  ಇಬ್ರಾಹಿಂ ಅಜರ್, ಇನ್ನೊಬ್ಬ ಸಹೋದರ ಮುಫ್ತಿ ಅಬ್ದುಲ್ ರೌಫ್ ಅಸ್ಗರ್. ಇನ್ನಿಬ್ಬರು ಕಿರಿಯ ಸಹೋದರರಾದ  ಮೌಲಾನಾ ಅಮ್ಮರ್, ಮತ್ತು ತಲ್ಹಾ ಸೈಫ್, ಇಬ್ರಾಹಿಂನ ಕಿರಿಯ ಪುತ್ರ ಉಮೈರ್ ಈಗಲೂ ಜೈಶ್ ಶಿಬಿರಗಳಲ್ಲಿ ಭಯೋತ್ಪಾದನೆ ತರಬೇತಿ ನೀಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇಬ್ರಾಹಿಂ ಹಿರಿಯ ಪುತ್ರ ಉಸ್ಮಾನ್ ಹೈದರ್, ಅಜರನ ಭಾವ ಯೂಸುಫ್ ಅಜರ್, ಸಹೋದರ ಅಬ್ದುಲ್ ರಶೀದ್ ಕಮ್ರಾನನ ಪುತ್ರ ತಲ್ಹಾ ರಶೀದ್ ಭಾರತದ ಕಾರ್ಯಾಚರಣೆಗಳಲ್ಲಿ ಅಸು ನೀಗಿದ್ದಾರೆ.

ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ಕಿಸಿ.

Thursday, February 28, 2019

ವಿಂಗ್ ಕಮಾಂಡರ್ ಅಭಿನಂದನ್ ಭಾರತೀಯ ಹೈಕಮೀಷನ್ ವಶಕ್ಕೆ

ವಿಂಗ್ ಕಮಾಂಡರ್  ಅಭಿನಂದನ್
 
ಭಾರತೀಯ  ಹೈಕಮೀಷನ್  ವಶಕ್ಕೆ
ಇಸ್ಲಾಮಾಬಾದ್: ಭಾರತೀಯ ವಾಯುಪಡೆ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರನ್ನು ಪಾಕಿಸ್ತಾನವು  2019 ಮಾರ್ಚ್ 1 ಶುಕ್ರವಾರ ಪಾಕಿಸ್ತಾನದಲ್ಲಿನ ಭಾರತೀಯ ಹೈಕಮೀಷನ್ ವಶಕ್ಕೆ ಒಪ್ಪಿಸಿದೆ.

ಅಭಿನಂದನ್ ಅವರು ಮಧ್ಯಾಹ್ನ 3ರಿಂದ 4 ಗಂಟೆ ನಡುವಣ ಅವಧಿಯಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಬರುವ ನಿರೀಕ್ಷೆಯಿದೆ.

ಶಾಂತಿ ಪ್ರಕ್ರಿಯೆ ದ್ಯೋತಕವಾಗಿ ಪಾಕಿಸ್ತಾನವು ಅಭಿನಂದನ್ ಅವರನ್ನು ಬಿಡುಗಡೆ ಮಾಡಿದೆ. ವಾಘಾ-ಅಟ್ಟಾರಿ ಜಂಟಿ ಚೆಕ್ ಪೋಸ್ಟ್ ಮೂಲಕ ಅವರು ಭಾರತ ಪ್ರವೇಶಿಸಲಿದ್ದಾರೆ.

ಪಾಕಿಸ್ತಾನ ವಶಕ್ಕೆ ಸಿಲುಕಿದ್ದ ಅಭಿನಂದನ್ ಅವರನ್ನು ಎರಡು ದಿನಗಳ ಬಳಿಕ, ಕೂದಲೂ ಕೊಂಕದಂತೆ ಸುರಕ್ಷಿತವಾಗಿ ಭೇಷರತ್ ಬಿಡುಗಡೆ ಮಾಡಬೇಕು ಎಂಬುದಾಗಿ ಭಾರತವು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ಬಳಿಕ ಬಿಡುಗಡೆ ಮಾಡಲಾಗಿದೆ.

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಭಾರತದ ವಾಯುಪಡೆ ಅಧಿಕಾರಿಯನ್ನು ಶುಕ್ರವಾರ ‘ಶಾಂತಿ ಪ್ರಕ್ರಿಯೆ’ಯ ದ್ಯೋತಕವಾಗಿ ಬಿಡುಗಡೆ ಮಾಡಲಾಗುವುದು ಎಂದು ಪಾಕ್ ಸಂಸತ್ತಿನಲ್ಲಿ ಪ್ರಕಟಿಸಿದ್ದರು.

Wednesday, February 27, 2019

ಪಾಕಿಸ್ತಾನದಿಂದ ಸಂಜೌತಾ ಎಕ್ಸ್ ಪ್ರೆಸ್ ಅಮಾನತು

ಪಾಕಿಸ್ತಾನದಿಂದ ಸಂಜೌತಾ ಎಕ್ಸ್ ಪ್ರೆಸ್ ಅಮಾನತು

ಲಾಹೋರಿನಲ್ಲಿ ಸಿಕ್ಕಿಹಾಕಿಕೊಂಡ ಪ್ರಯಾಣಿಕರು

ಲಾಹೋರ್: ಪಾಕಿಸ್ತಾನ ಮತ್ತು ಭಾರತದ ಮಧ್ಯೆ ಸಂಚರಿಸುವ ಸಂಜೌತಾ ಎಕ್ಸ್ ಪ್ರೆಸ್ ರೈಲಿನ ಸಂಚಾರವನ್ನು ಪಾಕಿಸ್ತಾನಿ ಅಧಿಕಾರಿಗಳು 2019 ಫೆಬ್ರುವರಿ 28 ಗುರುವಾರ ಅಮಾನತುಗೊಳಿಸಿದ್ದಾರೆ. ಪರಿಣಾಮವಾಗಿ ಅಟ್ಟಾರಿ ಕಡೆಗೆ ಪಯಣ ಹೊರಟಿದ್ದ ಪ್ರಯಾಣಿಕರು ಲಾಹೋರಿನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.

ನೆರೆ ರಾಷ್ಟ್ರಗಳ ಮಧ್ಯೆ  ಹೆಚ್ಚುತ್ತಿರುವ ಪ್ರಕ್ಷುಬ್ಧತೆ ಹಿನ್ನೆಲೆಯಲ್ಲಿ ಪಾಕಿಸ್ತಾನವು  ವಾರಕ್ಕೆ ಎರಡು ಬಾರಿ ಸಂಚರಿಸುವ ರೈಲು ಸೇವೆಯನ್ನು ಮುಂದಿನ ಸೂಚನೆ ನೀಡುವವರೆಗೆ ರದ್ದು ಪಡಿಸಿದೆ  ಎಂದು  ಡಾನ್ ನ್ಯೂಸ್ ಟಿವಿ ರೈಲ್ವೇ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.

2019 ಫೆಬ್ರುವರಿ 27 ಬುಧವಾರ ರಾತ್ರಿ ಸಂಜೌತಾ ಎಕ್ಸ್ ಪ್ರೆಸ್ ಮಾಮೂಲಿಯಾಗಿ ನವದೆಹಲಿಯಿಂದ ಪಯಣ ಹೊರಟಿತ್ತು. ಆದರೆ, ಪಾಕಿಸ್ತಾನವು ರೈಲು ಪಯಣವನ್ನು ರದ್ದು ಪಡಿಸಿದ ಕಾರಣ ರೈಲುಗಾಡಿಯು ಅಟ್ಟಾರಿಯಲ್ಲಿ ಸ್ಥಗಿತಗೊಂಡಿದೆ.

ಪರಿಸ್ಥಿತಿಯನ್ನು ನಿಕಟವಾಗಿ ಅವಲೋಕಿಸಲಾಗುತ್ತಿದ್ದು, ಪ್ರಯಾಣಿಕರನ್ನು ಬಸ್ಸುಗಳಲ್ಲಿ ಅಥವಾ ಬೇರೆ ರೀತಿಯಲ್ಲಿ ವಾಘಾಕ್ಕೆ ಕರೆತರುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು  ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನವು ಸಂಜೌತಾ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ತನ್ನ ಕಡೆಯಲ್ಲಿ ಅಮಾನತುಗೊಳಿಸಿದ ಕಾರಣ ಈಗ ಭಾರತದ ಕಡೆಯಿಂದ ತೆರಳುವ ರೈಲು ಭಾರತದ ಕೊನೆಯ ನಿಲ್ದಾಣವಾಗಿರುವ ಅಟ್ಟಾರಿಯವರೆಗೆ ಮಾತ್ರವೇ ತೆರಳಲು ಸಾಧ್ಯವಾಗುತ್ತದೆ.

ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ಕಿಸಿ:


Tuesday, February 26, 2019

ಪುಲ್ವಾಮ ದಾಳಿಗೆ ಭಾರತದ ಪ್ರತೀಕಾರ, ಜೈಶೆ ನೆಲೆಗಳು ಧ್ವಂಸ

ಪುಲ್ವಾಮ ದಾಳಿಗೆ ಭಾರತದ ಪ್ರತೀಕಾರ, ಜೈಶೆ ನೆಲೆಗಳು ಧ್ವಂಸ
ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಫೆಬ್ರುವರಿ 14ರಂದು 40 ಮಂದಿ ಸಿಆರ್ ಪಿಎಫ್ ಯೋಧರನ್ನು ಬಲಿಪಡೆದ ಜೈಶ್-ಇ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಆತ್ಮಹತ್ಯಾ ದಾಳಿಗೆ ಪ್ರತೀಕಾರವಾಗಿ 2019 ಫೆಬ್ರುವರಿ 26ರ ಮಂಗಳವಾರ ಪಾಕಿಸ್ತಾನಕ್ಕೆ ನುಗ್ಗಿ ‘ಸರ್ಜಿಕಲ್ ದಾಳಿ’ ನಡೆಸಿದ ಭಾರತ ಪಾಕ್ ನೆಲದಲ್ಲಿನ ಮೂರು ಭಯೋತ್ಪಾದಕ ನೆಲೆಗಳನ್ನು ಪುಡಿಗಟ್ಟಿದೆ. ಭಾರತೀಯ ವಾಯುಪಡೆ ನಡೆಸಿದ ವಾಯುದಾಳಿಯಲ್ಲಿ 200-300 ಮಂದಿ ಹತರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. 

ಮಂಗಳವಾರ ನಸುಕಿನ 3.30ರ ವೇಳೆಯಲ್ಲಿ  ಗಡಿ ನಿಯಂತ್ರಣ ರೇಖೆ ದಾಟಿ ಪಾಕಿಸ್ತಾನದ ಒಳಕ್ಕೆ ನುಗ್ಗಿದ ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳು  ಬರೋಬ್ಬರಿ 1000 ಕಿ.ಗ್ರಾಂ ತೂಕದ ಬಾಂಬುಗಳನ್ನು  ಉದುರಿಸಿ ದಾಳಿ ನಡೆಸಿದೆ. ಪ್ರಾಥಮಿಕ ಮಾಹಿತಿ ಪ್ರಕಾರ 200-300 ಭಯೋತ್ಪಾದಕರು ದಾಳಿಗೆ ಬಲಿಯಾಗಿದ್ದಾರೆ ಎಂದು ಹೇಳಲಾಗಿದೆ.


ಪಾಕಿಸ್ತಾನದ ಒಳಕ್ಕೆ ಸುಮಾರು 24 ಕಿಲೋ ಮೀಟರ್ ಸಾಗಿದ ಭಾರತದ  12 ಮಿರಾಜ್ 2000 ಯುದ್ಧ ವಿಮಾನಗಳು ಬಾಲಾಕೋಟ್, ಚಾಕೋಥಿ ಮತ್ತು ಮುಜಾಫ್ಫರಾಬಾದ್ ರಂಗಗಳಲ್ಲಿ ಭಯೋತ್ಪಾದಕ ನೆಲೆಗಳನ್ನು ಧ್ವಂಸಗೊಳಿಸಿದವು. 21 ನಿಮಿಷಗಳ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರೈಸಿದ ವಿಮಾನಗಳು ಯಾವುದೇ ಅಡೆತಡೆಯಿಲ್ಲದೆ ಭಾರತಕ್ಕೆ ವಾಪಸಾದವು.


ಭಾರತೀಯ ಯೋಧರನ್ನು ಬಲಿಪಡೆದ ಪಾಕ್ ಪ್ರೇರಿತ ಭಯೋತ್ಪಾದಕರನ್ನು ಅವರ ನೆಲೆಯಲ್ಲೇ ಹೆಡೆಮುರಿ ಕಟ್ಟಿ ಹುಟ್ಟಗಿಸುವ ಮೂಲಕ ಭಾರತ ಕೇವಲ 12 ದಿನಗಳಲ್ಲಿ ಪ್ರತೀಕಾರ ತೀರಿಸಿ ಹುತಾತ್ಮ ಯೋಧರಿಗೆ ಸೂಕ್ತ ಶ್ರದ್ಧಾಂಜಲಿ ಸಲ್ಲಿಸಿ ಆತ್ಮಗಳಿಗೆ  ಶಾಂತಿಯನ್ನು ತಂದು ಕೊಟ್ಟಿದೆ.


ಭಾರತೀಯ ವಾಯುಪಡೆ ನಡೆಸಿದ ವಾಯುದಾಳಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಉನ್ನತ ಸಂಪುಟ ಸಮಿತಿಯ ತುರ್ತು ಸಭೆ ನಡೆಯಿತು. ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಗೃಹ ಸಚಿವ ರಾಜನಾಥ್ ಸಿಂಗ್, ವಿತ್ತ ಸಚಿವ ಅರುಣ್ ಜೇಟ್ಲಿ, ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮತ್ತಿತರರು ಪಾಲ್ಗೊಂಡಿದ್ದರು.

ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ:



Monday, February 25, 2019

ರಾಷ್ಟ್ರೀಯ ಸಮರ ಸ್ಮಾರಕ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ

ರಾಷ್ಟ್ರೀಯ ಸಮರ ಸ್ಮಾರಕ ಲೋಕಾರ್ಪಣೆ
ಮಾಡಿದ ಪ್ರಧಾನಿ ಮೋದಿ
ನವದೆಹಲಿ: ರಾಜಧಾನಿಯ ಹೃದಯಭಾಗದಲ್ಲಿರುವ ಐಕಾನಿಕ್ ಇಂಡಿಯಾ ಗೇಟ್ ಸಮುಚ್ಚಯದ ಸಮೀಪ ನಿರ್ಮಿಸಲಾಗಿರುವರಾಷ್ಟ್ರೀಯ ಸಮರ ಸ್ಮಾರಕವನ್ನು ಪ್ರಧಾನಿ ನರೇಂದ್ರ ಮೋದಿ ಅವರು 2019 ಫೆಬ್ರುವರಿ 25ರ ಸೋಮವಾರ ಲೋಕಾರ್ಪಣೆ ಮಾಡಿದರು. ಇದರೊಂದಿಗೆ ಸ್ವಾತಂತ್ರ್ಯಾ ನಂತರ ಹುತಾತ್ಮರಾದ ಯೋಧರ ಗೌರವಾರ್ಥ ಇಂತಹದ್ದೊಂದು ಸ್ಮಾರಕ ನಿರ್ಮಿಸಬೇಕೆಂಬ ಕನಸು ಸುಮಾರು ೬೦ ವರ್ಷಗಳ ಬಳಿಕ ಸಾಕಾರಗೊಂಡಿತು.

ಸುಮಾರು ೪೦ ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಸ್ಮಾರಕವುಅಮರ ಚಕ್ರ, ’ವೀರತಾ ಚಕ್ರ, ’ತ್ಯಾಗ ಚಕ್ರ ಮತ್ತುರಕ್ಷಕ ಚಕ್ರ ಎಂಬ ನಾಲ್ಕು ಕೇಂದ್ರೀಕೃತ ವಲಯಗಳನ್ನು ಹೊಂದಿದೆ. ಇವುಗಳಲ್ಲಿ ೨೫,೯೪೨ ಯೋಧರ ಹೆಸರುಗಳನ್ನು ಸುವರ್ಣಾಕ್ಷರಗಳಲ್ಲಿ ಕೆತ್ತಿ ಇರಿಸಲಾಗಿದೆ.

ಸ್ಮಾರಕವು ನಿರಂತರ ಉರಿಯುವ ಜ್ವಾಲೆ ಹಾಗೂ ಆರು ಕಂಚಿನ ಉಬ್ಬು ಕಲಾಕೃತಿಗಳನ್ನು  (ಮುರಾಲ್ಸ್) ಒಳಗೊಂಡಿದೆ. ಕಲಾಕೃತಿಗಳು ಭಾರತೀಯ ಸೇನೆ, ವಾಯುಪಡೆ ಮತ್ತು ನೌಕಾಪಡೆ ನಡೆಸಿ ಪ್ರಖ್ಯಾತ ಸಮರಗಳನ್ನು ಚಿತ್ರಿಸಿದೆ.

೧೭೬ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ರಾಷ್ಟ್ರೀಯ ಸಮರ ಸ್ಮಾರಕದಲ್ಲಿ ನಿರಂತರ ಜ್ವಾಲೆಯನ್ನು ಪ್ರಜ್ವಲಿಸುವ ಮೂಲಕ ಪ್ರಧಾನಿಯವರು ಸ್ಮಾರಕವನ್ನು ಲೋಕಾರ್ಪಣೆ ಮಾಡಿದರು.
ಪ್ರಧಾನಿಯವರು
ಸ್ಮಾರಕವನ್ನು ಉದ್ಘಾಟಿಸುತ್ತಿದ್ದಂತೆಯೇ ಭಾರತೀಯ ವಾಯಪಡೆಯ ಹೆಲಿಕಾಪ್ಟರುಗಳು ಗುಲಾಬಿ ಹೂದಳಗಳ ಮಳೆಗರೆದವು. ಇದಕ್ಕಾಗಿ ಹೆಲಿಕಾಪ್ಟರುಗಳುಕಣ್ಮರೆಯಾದ ಮಾನವ (ಮಿಸ್ಸಿಂಗ್ ಮ್ಯಾನ್) ರಚನೆಯನ್ನು ಬಾನಿನಲ್ಲಿ ರಚಿಸಿದ್ದವು.

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸ್ಮಾರಕವು ಭಾರತೀಯರ ಪಾಲಿಗೆ ಇನ್ನೊಂದು ಯಾತ್ರಾಸ್ಥಳವಾಗಲಿದ್ದು, ಜನರಿಗೆ ಕೆಚ್ಚೆದೆಯ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ತಾಣವಾಗಲಿದೆ ಎಂದು ಹೇಳಿದರು.