ನಾನು ಮೆಚ್ಚಿದ ವಾಟ್ಸಪ್

Monday, October 30, 2023

PARYAYA: ಅಭಿನಂದನೆಗಳು ಮತ್ತೊಮ್ಮೆ ಬಾನಾಸು, ಕಿರಣ್‌ ರಾಜ್‌....

 ಅಭಿನಂದನೆಗಳು ಮತ್ತೊಮ್ಮೆ ಬಾನಾಸು, ಕಿರಣ್‌ ರಾಜ್‌..

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ʼಬಾನಾಸುʼ ಎಂಬ ಕಾವ್ಯನಾಮದೊಂದಿಗೆ ಸುಮಾರು ೪೩ಕ್ಕೂ ಹೆಚ್ಚು ವರ್ಷಗಳಿಂದ ನಿರಂತರವಾಗಿ ಕನ್ನಡ ಸಿನಿಮಾ ರಂಗದ ಅಂತರಂಗವನ್ನು ತೆರೆದು ಓದುಗರ ಮುಂದೆ ಇಟ್ಟ ಹಿರಿಯ ಚಲನಚಿತ್ರ ಪತ್ರಕರ್ತ ಬಾಡೂರು ನಾರಾಯಣ ಆಚಾರ್ಯ ಸುಬ್ರಹ್ಮಣ್ಯ (ಬಾನಾಸು) ಅವರು ಕನ್ನಡ ಚಲನಚಿತ್ರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ʼಶ್ರೇಷ್ಠ ಚಲನಚಿತ್ರ ವಿಮರ್ಶಕʼ ರಾಷ್ಟ್ರೀಯ ಪ್ರಶಸ್ತಿಯನ್ನು ೨೦೨೩ರ ಅಕ್ಟೋಬರ್‌ ೧೭ರಂದು ನವದೆಹಲಿಯಲ್ಲಿ ಸ್ವೀಕರಿಸಿದರು.

೬೯ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ದೆಹಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ನಡೆದಿದ್ದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ೨೦೨೩ನೇ ಸಾಲಿನ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ಕನ್ನಡ ಪತ್ರಿಕೋದ್ಯಮ ರಂಗದಲ್ಲಿ ಸುಬ್ಬಣ್ಣ ಎಂದೇ ಆತ್ಮೀಯವಾಗಿ ಪರಿಚಿತರಾಗಿರುವ ಬಾನಾಸು ಮಹತ್ವದ ಸಿನಿಮಾ ಪತ್ರಕರ್ತ. ಕಾಸರಗೋಡು ಜಿಲ್ಲೆಯ ಬಾಡೂರು ಎಂಬ ಗ್ರಾಮದಲ್ಲಿರುವ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಕರ್ಲ ಸತ್ಯನಾರಾಯಣ ಹೈಸ್ಕೂಲಿನಲ್ಲಿ ಪ್ರೌಢ ಶಿಕ್ಷಣವನ್ನು ಮುಗಿಸಿದವರು.

ನಂತರ ಕಾಸರಗೋಡಿನಲ್ಲಿ ಸರಕಾರಿ ಮಹಾ ವಿದ್ಯಾಲಯದಲ್ಲಿ ಕಾಲೇಜು ಶಿಕ್ಷಣ ಪಡೆದು ಕಲ್ಲಿಕೋಟೆ ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಕನ್ನಡ ಸ್ನಾತಕೋತ್ತರ (ಎಂಎ) ಪದವಿಯನ್ನು 1976ರಲ್ಲಿ ಮುಗಿಸಿದರು.
ಸಿನಿಮಾ ರಂಗದತ್ತ ಆಕರ್ಷಿತರಾದ ಸುಬ್ರಹ್ಮಣ್ಯ, ಸ್ಯಾಂಡಲ್ ವುಡ್ ವಿವರಗಳನ್ನು ಅನೇಕ ಸಿನಿಮಾ ಪತ್ರಿಕೆಗಳಿಗೆ ವರದಿ ಮಾಡುವ ಮೂಲಕ  ಪ್ರಾಮಾಣಿಕವಾಗಿ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ.

ಅತ್ಯುತ್ತಮ ಚಲನಚಿತ್ರ ವಿಮರ್ಶಕ ರಾಷ್ಟ್ರೀಯ ಪ್ರಶಸ್ತಿಯು ಅವರ ಅಪ್ರತಿಮ ಕೊಡುಗೆಗಾಗಿ ಸಂದಿರುವ ರಾಷ್ಟ್ರೀಯ ಮಟ್ಟದ ಪುರಸ್ಕಾರವಾಗಿದೆ. ಅಭಿನಂದನೆಗಳು ಸುಬ್ಬಣ್ಣ.

ಸುಬ್ಬಣ್ಣ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ ಸಂದರ್ಭದ ಚಿತ್ರ ಹಾಗೂ ವಿಡಿಯೋ ಇಲ್ಲಿದೆ:


ಬಾನಾಸು ಜೊತೆಗೇ ಅತ್ಯುತ್ತಮ ಕನ್ನಡ ಚಿತ್ರಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದ ಇನ್ನೊಬ್ಬ ಕನ್ನಡಿಗ ಕಿರಣ್‌ ರಾಜ್.‌ ʼ೭೭೭ ಚಾರ್ಲಿʼ ಚಿತ್ರಕ್ಕಾಗಿ ಈ ಪ್ರಶಸ್ತಿಯನ್ನು ಪಡೆದ ಕಿರಣ್‌ ರಾಜ್‌ ಅವರು ಕೂಡಾ ಕಾಸರಗೋಡಿನವರೇ.

ಕಿರಣ್ ರಾಜ್ ಅವರು ಸಮೀಪದ ಮಲ್ಲಮೂಲೆಯ ದಿ.ಅಚ್ಚುತ ಮಣಿಯಾಣಿ ಯವರ ಸುಪುತ್ರನಾಗಿದ್ದು ಮಲ್ಲಮೂಲೆ ಹಾಗೂ ಅಗಲ್ಪಾಡಿ ಅನ್ನಪೂರ್ಣೇಶ್ವರಿ ಹೈಸ್ಕೂಲ್ ನಲ್ಲಿ ಶಿಕ್ಷಣ ಪಡೆದವರು. ನಂತರ ರಂಗಭೂಮಿಗೆ ಆಕರ್ಷಿತರಾಗಿ ಕಾಸರಗೋಡಿನ ರಂಗಭೂಮಿಯಲ್ಲಿ ಖ್ಯಾತ ರಂಗನಿರ್ದೇಶಕ ಕಾಸರಗೋಡು ಉಮೇಶ ಸಾಲಿಯಾನ ಅವರ ಜೊತೆ ರತ್ನಾಕರ ಮಲ್ಲಮೂಲೆ ಅವರು ಬರೆದ “ಮಳೆ ನಿಂತ ಮೇಲೆ” ನಾಟಕದಲ್ಲಿ ಅಭಿನಯಿಸಿ ರಂಗಭೂಮಿ ಪ್ರವೇಶಿಸಿದರು.

ಆನಂತರ ಬೆಂಗಳೂರಿನ ಆದರ್ಶ ಫಿಲಂ ಸಂಸ್ಥೆಯನ್ನು ಸೇರಿದರು.  ಇವರು “ಕಾವಳ” ಎಂಬ ಟೆಲಿ ಫಿಲಂ ಮಾಡಿ ಜನಪ್ರಿಯರಾದರು. ಆನಂತರ ರಿಷಭ್ ಶೆಟ್ಟಿ ಅವರ “ಕಿರಿಕ್ ಪಾರ್ಟಿ” ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿ ಅನುಭವ ಗಳಿಸಿಕೊಂಡರು. ಬಳಿಕ ‘777 ಚಾರ್ಲಿ’ ಸಿನಿಮಾ ಕಥೆ ಹಾಗೂ ನಿರ್ದೇಶಕನಾಗಿ ಮತ್ತು ಅದರಲ್ಲೇ ಮಿಂಚಿ ಇದೀಗ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪಡೆದರು.

ರಂಗಭೂಮಿಯಿಂದ ಚಿತ್ರರಂಗತ್ತ ಹೊರಟು ಚಲನ ಚಿತ್ರ ತಯಾರಿಸಲು ಅವಕಾಶ ಸಿಕ್ಕಾಗ ಅವರು ಸ್ವತಃ ಬರೆದು ನಿರ್ದೇಶಿಸಿದ ಮೊತ್ತ ಮೊದಲ ಕಥೆಯೇ  ʼ೭೭೭ ಚಾರ್ಲಿʼ ಆಗಿತ್ತು ಎಂಬುದು ಇನ್ನೊಂದು ವಿಶೇಷ.

ರಕ್ಷಿತ್‌ ಶೆಟ್ಟಿ ಅವರು ಅಭಿನಯಿಸಿರುವ ಈ ಚಿತ್ರ ಇದಕ್ಕೂ ಮುನ್ನ ಇದೇ ವರ್ಷ ದೆಹಲಿಯಲ್ಲಿ ನಡೆದ ದಾದಾಸಾಹೇಬ್‌ ಫಾಲ್ಕೆ ಚಲನಚಿತ್ರೋತ್ಸಕ್ಕೆ ಆಯ್ಕೆಯಾಗಿತ್ತು..

PARYAYA: ಅಭಿನಂದನೆಗಳು ಮತ್ತೊಮ್ಮೆ ಬಾನಾಸು, ಕಿರಣ್‌ ರಾಜ್‌....:   ಅಭಿನಂದನೆಗಳು ಮತ್ತೊಮ್ಮೆ ಬಾನಾಸು, ಕಿರಣ್‌ ರಾಜ್‌.. ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ʼ ಬಾನಾಸು ʼ ಎಂಬ ಕಾವ್ಯನಾಮದೊಂದಿಗೆ ಸುಮಾರು ೪೩ ಕ್ಕೂ ಹೆಚ್ಚು ವರ್ಷಗಳಿಂದ...

No comments:

Post a Comment