Showing posts with label ಕನ್ನಡ ಸಿನಿಮಾ. Show all posts
Showing posts with label ಕನ್ನಡ ಸಿನಿಮಾ. Show all posts

Sunday, July 13, 2025

PARYAYA: ಭಾರತೀಯ ಚಿತ್ರರಂಗದ ದಂತಕತೆ ಬಿ. ಸರೋಜಾದೇವಿ ಇನ್ನಿಲ್ಲ

 ಭಾರತೀಯ ಚಿತ್ರರಂಗದ ದಂತಕತೆ ಬಿ. ಸರೋಜಾದೇವಿ ಇನ್ನಿಲ್ಲ

ಬೆಂಗಳೂರು: ಭಾರತೀಯ ಚಿತ್ರರಂಗಕ್ಕೆ ಅಪಾರಕೊಡುಗೆ ನೀಡಿದ, ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಹಿಳಾ ಸೂಪರ್‌ಸ್ಟಾರ್‌ ಆಗಿ ಹೊರಹೊಮ್ಮಿದ ಮೊದಲ ನಟಿಯರಲ್ಲಿ ಒಬ್ಬರಾದ ಭಾರತೀಯ ಚಿತ್ರರಂಗದ ದಂತಕತೆ ಹಿರಿಯ ನಟಿ ಬಿ. ಸರೋಜಾ ದೇವಿ ಅವರು ವಯೋಸಹಜ ಅನಾರೋಗ್ಯದಿಂದ 2025 ರ ಜುಲೈ 14ರ ಸೋಮವಾರ ನಿಧನರಾದರು.

ಸರೋಜಾ ದೇವಿ ಅವರ ಕುರಿತ ಒಂದಷ್ಟು ಪ್ರಮುಖ ಮಾಹಿತಿ ಇಲ್ಲಿದೆ.

ಜನನ ಮತ್ತು ಆರಂಭಿಕ ಜೀವನ:

  • ಬಿ. ಸರೋಜಾ ದೇವಿ ಅವರು 1938ರ ಜನವರಿ 7ರಂದು ಬೆಂಗಳೂರಿನಲ್ಲಿ ವೊಕ್ಕಲಿಗ ಕುಟುಂಬದಲ್ಲಿ ಜನಿಸಿದರು.
  • ಅವರ ತಂದೆ ಭೈರಪ್ಪ ಪೊಲೀಸ್ ಅಧಿಕಾರಿಯಾಗಿದ್ದರು ಮತ್ತು ತಾಯಿ ರುದ್ರಮ್ಮ ಗೃಹಿಣಿಯಾಗಿದ್ದರು.
  • ಬಾಲ್ಯದಿಂದಲೇ ಅವರಿಗೆ ಲಲಿತಕಲೆಗಳ ಬಗ್ಗೆ ಆಸಕ್ತಿ ಇತ್ತು.

ಚಿತ್ರರಂಗ ಪ್ರವೇಶ ಮತ್ತು ವೃತ್ತಿಜೀವನ:

  • 17ನೇ ವಯಸ್ಸಿನಲ್ಲಿ, 1955ರಲ್ಲಿ ಬಿ. ಸರೋಜಾ ದೇವಿ ಅವರು ಹೊನ್ನಪ್ಪ ಭಾಗವತರ್ ಅವರ "ಮಹಾಕವಿ ಕಾಳಿದಾಸ" ಕನ್ನಡ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇದು ಅವರಿಗೆ ದೊಡ್ಡ ಯಶಸ್ಸು ತಂದುಕೊಟ್ಟಿತು.
  • ಅವರು ಕನ್ನಡತಮಿಳುತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಸುಮಾರು 200ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
  • ಅವರನ್ನು ಕನ್ನಡದಲ್ಲಿ "ಅಭಿನಯ ಸರಸ್ವತಿ" ಮತ್ತು ತಮಿಳಿನಲ್ಲಿ "ಕನ್ನಡತು ಪೈಂಗಿಲಿ" (ಕನ್ನಡದ ಗಿಳಿ) ಎಂದು ಪ್ರೀತಿಯಿಂದ ಕರೆಯಲಾಗುತ್ತದೆ.
  • 1955 ರಿಂದ 1984ರವರೆಗೆ ಸತತವಾಗಿ 161 ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದು ಅವರ ವಿಶೇಷ ದಾಖಲೆಗಳಲ್ಲಿ ಒಂದಾಗಿದೆ.
  • ಅವರು ಡಾ. ರಾಜ್‌ಕುಮಾರ್ಎಂ.ಜಿ.ಆರ್ಶಿವಾಜಿ ಗಣೇಶನ್ಎನ್.ಟಿ. ರಾಮರಾವ್ದಿಲೀಪ್ ಕುಮಾರ್ಶಮ್ಮಿ ಕಪೂರ್ಸುನಿಲ್ ದತ್ ಅವರಂತಹ ಹಲವು ದಿಗ್ಗಜ ನಟರೊಂದಿಗೆ ಕೆಲಸ ಮಾಡಿದ್ದಾರೆ.

ಪ್ರಮುಖ ಚಲನಚಿತ್ರಗಳು (ಕನ್ನಡದಲ್ಲಿ):

  • ಮಹಾಕವಿ ಕಾಳಿದಾಸ (ಚೊಚ್ಚಲ ಚಿತ್ರ)
  • ಬಬ್ರುವಾಹನ
  • ಭಾಗ್ಯವಂತರು
  • ಅಣ್ಣತಂಗಿ
  • ಕಿತ್ತೂರು ಚೆನ್ನಮ್ಮ
  • ಕೋಕಿಲವಾಣಿ
  • ಶ್ರೀರಾಮಪೂಜಾ
  • ರತ್ನಗಿರಿ ರಹಸ್ಯ
  • ಸ್ಕೂಲ್ ಮಾಸ್ಟರ್
  • ಭೂಕೈಲಾಸ
  • ಜಗಜ್ಯೋತಿ ಬಸವೇಶ್ವರ
  • ದೇವಸುಂದರಿ

ಪ್ರಶಸ್ತಿಗಳು ಮತ್ತು ಗೌರವಗಳು:

  • 1969 ರಲ್ಲಿ ಪದ್ಮಶ್ರೀ ಪ್ರಶಸ್ತಿ.
  • 1992 ರಲ್ಲಿ ಪದ್ಮಭೂಷಣ ಪ್ರಶಸ್ತಿ.
  • ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್.
  • ತಮಿಳುನಾಡಿನ ಕಲೈಮಾಮಣಿ ಪ್ರಶಸ್ತಿ.
  • 1989ರಲ್ಲಿ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ.
  • 2009ರಲ್ಲಿ ಕರ್ನಾಟಕ ಸರ್ಕಾರದಿಂದ ಡಾ.ರಾಜ್‌ಕುಮಾರ್ ರಾಷ್ಟ್ರೀಯ ಪ್ರಶಸ್ತಿ.
  • 2009ರಲ್ಲಿ ಆಂಧ್ರಪ್ರದೇಶ ಸರ್ಕಾರದಿಂದ ಎನ್‌ಟಿಆರ್ ರಾಷ್ಟ್ರೀಯ ಪ್ರಶಸ್ತಿ.

2010ರಲ್ಲಿ ಭಾರತೀಯ ವಿದ್ಯಾ ಭವನವು 'ಪದ್ಮಭೂಷಣ ಬಿ. ಸರೋಜಾದೇವಿ ರಾಷ್ಟ್ರೀಯ ಪ್ರಶಸ್ತಿ'ಯನ್ನು ಸ್ಥಾಪಿಸಿತು. 1992 ರಲ್ಲಿ ಪದ್ಮಭೂಷಣ ಪ್ರಶಸ್ತಿ ಪಡೆದ ಬಿ. ಸರೋಜಾದೇವಿ ಅವರ ಹೆಸರಿನಲ್ಲಿ ಅವರ ಗೌರವಾರ್ಥ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಈ ಪ್ರಶಸ್ತಿಯು ಪ್ರತಿ ವರ್ಷ ಪ್ರದರ್ಶನ ಕಲೆಗಳಲ್ಲಿ ಸಾಧನೆ ಮಾಡಿದ ಕಲಾವಿದರನ್ನು ಗುರುತಿಸಿಗೌರವಿಸುತ್ತದೆ. 2010 ರಲ್ಲಿ ಈ ಪ್ರಶಸ್ತಿಯನ್ನು ಮೊದಲು ನೀಡಲಾಯಿತು. ಕೆ. ಜೆ. ಯೇಸುದಾಸ್ವೈಜಯಂತಿಮಾಲಾಅಂಜಲಿ ದೇವಿಅಂಬರೀಶ್ಮತ್ತು ಜಯಂತಿ ಈ ಪ್ರಶಸ್ತಿಯನ್ನು ಪಡೆದವರಲ್ಲಿ ಕೆಲವರು. 

ವೈಯಕ್ತಿಕ ಜೀವನ:

  • 1967ರ ಮಾರ್ಚ್ ರಂದು ಎಂಜಿನಿಯರ್ ಶ್ರೀ ಹರ್ಷ ಅವರನ್ನು ವಿವಾಹವಾದರು.

ಅವರು ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರು ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಬಿ. ಸರೋಜಾ ದೇವಿ ನಿಧನಕ್ಕೆ ಶೋಕ ವ್ಯಕ್ತ ಪಡಿಸಿದ್ದಾರೆ.

PARYAYA: ಭಾರತೀಯ ಚಿತ್ರರಂಗದ ದಂತಕತೆ ಬಿ. ಸರೋಜಾದೇವಿ ಇನ್ನಿಲ್ಲ:   ಭಾರತೀಯ ಚಿತ್ರರಂಗದ ದಂತಕತೆ ಬಿ. ಸರೋಜಾದೇವಿ ಇನ್ನಿಲ್ಲ ಬೆಂ ಗಳೂರು: ಭಾರತೀಯ ಚಿತ್ರರಂಗಕ್ಕೆ ಅಪಾರಕೊಡುಗೆ ನೀಡಿದ, ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಹಿಳಾ ಸೂಪರ್‌ಸ್ಟ...

Monday, October 30, 2023

PARYAYA: ಅಭಿನಂದನೆಗಳು ಮತ್ತೊಮ್ಮೆ ಬಾನಾಸು, ಕಿರಣ್‌ ರಾಜ್‌....

 ಅಭಿನಂದನೆಗಳು ಮತ್ತೊಮ್ಮೆ ಬಾನಾಸು, ಕಿರಣ್‌ ರಾಜ್‌..

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ʼಬಾನಾಸುʼ ಎಂಬ ಕಾವ್ಯನಾಮದೊಂದಿಗೆ ಸುಮಾರು ೪೩ಕ್ಕೂ ಹೆಚ್ಚು ವರ್ಷಗಳಿಂದ ನಿರಂತರವಾಗಿ ಕನ್ನಡ ಸಿನಿಮಾ ರಂಗದ ಅಂತರಂಗವನ್ನು ತೆರೆದು ಓದುಗರ ಮುಂದೆ ಇಟ್ಟ ಹಿರಿಯ ಚಲನಚಿತ್ರ ಪತ್ರಕರ್ತ ಬಾಡೂರು ನಾರಾಯಣ ಆಚಾರ್ಯ ಸುಬ್ರಹ್ಮಣ್ಯ (ಬಾನಾಸು) ಅವರು ಕನ್ನಡ ಚಲನಚಿತ್ರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ʼಶ್ರೇಷ್ಠ ಚಲನಚಿತ್ರ ವಿಮರ್ಶಕʼ ರಾಷ್ಟ್ರೀಯ ಪ್ರಶಸ್ತಿಯನ್ನು ೨೦೨೩ರ ಅಕ್ಟೋಬರ್‌ ೧೭ರಂದು ನವದೆಹಲಿಯಲ್ಲಿ ಸ್ವೀಕರಿಸಿದರು.

೬೯ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ದೆಹಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ನಡೆದಿದ್ದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ೨೦೨೩ನೇ ಸಾಲಿನ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ಕನ್ನಡ ಪತ್ರಿಕೋದ್ಯಮ ರಂಗದಲ್ಲಿ ಸುಬ್ಬಣ್ಣ ಎಂದೇ ಆತ್ಮೀಯವಾಗಿ ಪರಿಚಿತರಾಗಿರುವ ಬಾನಾಸು ಮಹತ್ವದ ಸಿನಿಮಾ ಪತ್ರಕರ್ತ. ಕಾಸರಗೋಡು ಜಿಲ್ಲೆಯ ಬಾಡೂರು ಎಂಬ ಗ್ರಾಮದಲ್ಲಿರುವ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಕರ್ಲ ಸತ್ಯನಾರಾಯಣ ಹೈಸ್ಕೂಲಿನಲ್ಲಿ ಪ್ರೌಢ ಶಿಕ್ಷಣವನ್ನು ಮುಗಿಸಿದವರು.

ನಂತರ ಕಾಸರಗೋಡಿನಲ್ಲಿ ಸರಕಾರಿ ಮಹಾ ವಿದ್ಯಾಲಯದಲ್ಲಿ ಕಾಲೇಜು ಶಿಕ್ಷಣ ಪಡೆದು ಕಲ್ಲಿಕೋಟೆ ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಕನ್ನಡ ಸ್ನಾತಕೋತ್ತರ (ಎಂಎ) ಪದವಿಯನ್ನು 1976ರಲ್ಲಿ ಮುಗಿಸಿದರು.
ಸಿನಿಮಾ ರಂಗದತ್ತ ಆಕರ್ಷಿತರಾದ ಸುಬ್ರಹ್ಮಣ್ಯ, ಸ್ಯಾಂಡಲ್ ವುಡ್ ವಿವರಗಳನ್ನು ಅನೇಕ ಸಿನಿಮಾ ಪತ್ರಿಕೆಗಳಿಗೆ ವರದಿ ಮಾಡುವ ಮೂಲಕ  ಪ್ರಾಮಾಣಿಕವಾಗಿ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ.

ಅತ್ಯುತ್ತಮ ಚಲನಚಿತ್ರ ವಿಮರ್ಶಕ ರಾಷ್ಟ್ರೀಯ ಪ್ರಶಸ್ತಿಯು ಅವರ ಅಪ್ರತಿಮ ಕೊಡುಗೆಗಾಗಿ ಸಂದಿರುವ ರಾಷ್ಟ್ರೀಯ ಮಟ್ಟದ ಪುರಸ್ಕಾರವಾಗಿದೆ. ಅಭಿನಂದನೆಗಳು ಸುಬ್ಬಣ್ಣ.

ಸುಬ್ಬಣ್ಣ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ ಸಂದರ್ಭದ ಚಿತ್ರ ಹಾಗೂ ವಿಡಿಯೋ ಇಲ್ಲಿದೆ:


ಬಾನಾಸು ಜೊತೆಗೇ ಅತ್ಯುತ್ತಮ ಕನ್ನಡ ಚಿತ್ರಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದ ಇನ್ನೊಬ್ಬ ಕನ್ನಡಿಗ ಕಿರಣ್‌ ರಾಜ್.‌ ʼ೭೭೭ ಚಾರ್ಲಿʼ ಚಿತ್ರಕ್ಕಾಗಿ ಈ ಪ್ರಶಸ್ತಿಯನ್ನು ಪಡೆದ ಕಿರಣ್‌ ರಾಜ್‌ ಅವರು ಕೂಡಾ ಕಾಸರಗೋಡಿನವರೇ.

ಕಿರಣ್ ರಾಜ್ ಅವರು ಸಮೀಪದ ಮಲ್ಲಮೂಲೆಯ ದಿ.ಅಚ್ಚುತ ಮಣಿಯಾಣಿ ಯವರ ಸುಪುತ್ರನಾಗಿದ್ದು ಮಲ್ಲಮೂಲೆ ಹಾಗೂ ಅಗಲ್ಪಾಡಿ ಅನ್ನಪೂರ್ಣೇಶ್ವರಿ ಹೈಸ್ಕೂಲ್ ನಲ್ಲಿ ಶಿಕ್ಷಣ ಪಡೆದವರು. ನಂತರ ರಂಗಭೂಮಿಗೆ ಆಕರ್ಷಿತರಾಗಿ ಕಾಸರಗೋಡಿನ ರಂಗಭೂಮಿಯಲ್ಲಿ ಖ್ಯಾತ ರಂಗನಿರ್ದೇಶಕ ಕಾಸರಗೋಡು ಉಮೇಶ ಸಾಲಿಯಾನ ಅವರ ಜೊತೆ ರತ್ನಾಕರ ಮಲ್ಲಮೂಲೆ ಅವರು ಬರೆದ “ಮಳೆ ನಿಂತ ಮೇಲೆ” ನಾಟಕದಲ್ಲಿ ಅಭಿನಯಿಸಿ ರಂಗಭೂಮಿ ಪ್ರವೇಶಿಸಿದರು.

ಆನಂತರ ಬೆಂಗಳೂರಿನ ಆದರ್ಶ ಫಿಲಂ ಸಂಸ್ಥೆಯನ್ನು ಸೇರಿದರು.  ಇವರು “ಕಾವಳ” ಎಂಬ ಟೆಲಿ ಫಿಲಂ ಮಾಡಿ ಜನಪ್ರಿಯರಾದರು. ಆನಂತರ ರಿಷಭ್ ಶೆಟ್ಟಿ ಅವರ “ಕಿರಿಕ್ ಪಾರ್ಟಿ” ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿ ಅನುಭವ ಗಳಿಸಿಕೊಂಡರು. ಬಳಿಕ ‘777 ಚಾರ್ಲಿ’ ಸಿನಿಮಾ ಕಥೆ ಹಾಗೂ ನಿರ್ದೇಶಕನಾಗಿ ಮತ್ತು ಅದರಲ್ಲೇ ಮಿಂಚಿ ಇದೀಗ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪಡೆದರು.

ರಂಗಭೂಮಿಯಿಂದ ಚಿತ್ರರಂಗತ್ತ ಹೊರಟು ಚಲನ ಚಿತ್ರ ತಯಾರಿಸಲು ಅವಕಾಶ ಸಿಕ್ಕಾಗ ಅವರು ಸ್ವತಃ ಬರೆದು ನಿರ್ದೇಶಿಸಿದ ಮೊತ್ತ ಮೊದಲ ಕಥೆಯೇ  ʼ೭೭೭ ಚಾರ್ಲಿʼ ಆಗಿತ್ತು ಎಂಬುದು ಇನ್ನೊಂದು ವಿಶೇಷ.

ರಕ್ಷಿತ್‌ ಶೆಟ್ಟಿ ಅವರು ಅಭಿನಯಿಸಿರುವ ಈ ಚಿತ್ರ ಇದಕ್ಕೂ ಮುನ್ನ ಇದೇ ವರ್ಷ ದೆಹಲಿಯಲ್ಲಿ ನಡೆದ ದಾದಾಸಾಹೇಬ್‌ ಫಾಲ್ಕೆ ಚಲನಚಿತ್ರೋತ್ಸಕ್ಕೆ ಆಯ್ಕೆಯಾಗಿತ್ತು..

PARYAYA: ಅಭಿನಂದನೆಗಳು ಮತ್ತೊಮ್ಮೆ ಬಾನಾಸು, ಕಿರಣ್‌ ರಾಜ್‌....:   ಅಭಿನಂದನೆಗಳು ಮತ್ತೊಮ್ಮೆ ಬಾನಾಸು, ಕಿರಣ್‌ ರಾಜ್‌.. ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ʼ ಬಾನಾಸು ʼ ಎಂಬ ಕಾವ್ಯನಾಮದೊಂದಿಗೆ ಸುಮಾರು ೪೩ ಕ್ಕೂ ಹೆಚ್ಚು ವರ್ಷಗಳಿಂದ...