ಇಂದಿನ ಇತಿಹಾಸ History Today ಸೆಪ್ಟೆಂಬರ್ 11
2022: ನವದೆಹಲಿ: ಸೆಮಿ ಹೈಸ್ಪೀಡ್ ರೈಲು ‘ವಂದೆ ಭಾರತ’ ಎಕ್ಸ್‌ಪ್ರೆಸ್ 52 ಸೆಕೆಂಡ್‌ಗಳಲ್ಲಿ ಗಂಟೆಗೆ 100 ಕಿ.ಮೀ.ನಷ್ಟು ವೇಗ ಸಾಧಿಸುವ ಮೂಲಕ ಬುಲೆಟ್ ಟ್ರೇನ್‌ನ ದಾಖಲೆಯನ್ನು ಮುರಿದಿದೆ. ಅಹಮದಾಬಾದ್–ಮುಂಬೈ ನಡುವೆ 2022 ಸೆಪ್ಟೆಂಬರ್ 09ರ ಶುಕ್ರವಾರ ಈ ರೈಲಿನ ಪರೀಕ್ಷಾರ್ಥ ಸಂಚಾರ ನಡೆಯಿತು. ಗಂಟೆಗೆ 130 ಕಿ.ಮೀ ವೇಗದೊಂದಿಗೆ ತಡೆರಹಿತವಾಗಿ ಚಲಿಸಿದ ರೈಲು, ಈ ನಗರಗಳ ನಡುವಿನ 491 ಕಿ.ಮೀ. ದೂರವನ್ನು 5 ಗಂಟೆ 14 ನಿಮಿಷಗಳಲ್ಲಿ ಕ್ರಮಿಸಿತು ಎಂದು ರೈಲ್ವೆ ಅಧಿಕಾರಿಯೊಬ್ಬರು ಈದಿನ ತಿಳಿಸಿದರು. ನಿಗದಿತ ವೇಳಾಪಟ್ಟಿ ಹಾಗೂ ನಿಲುಗಡೆಗಳೊಂದಿಗೆ ಸಂಚರಿಸಿದ ಸಂದರ್ಭದಲ್ಲಿ ಇಷ್ಟೇ ದೂರವನ್ನು ಈ ರೈಲು 6 ಗಂಟೆಗಿಂತ ಕಡಿಮೆ ಅವಧಿಯಲ್ಲಿ ಕ್ರಮಿಸಲಿದೆ ಎಂದೂ ಅವರು ತಿಳಿಸಿದರು.2022: ನವದೆಹಲಿ: ಗುಜರಾತಿನ ದ್ವಾರಕಾ ಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು 2022 ಸೆಪ್ಟೆಂಬರ್ 11ರ ಭಾನುವಾರ ಮಧ್ಯಪ್ರದೇಶದ ನರಸಿಂಗ್‌ಪುರ ಜಿಲ್ಲೆಯಲ್ಲಿ ತಮ್ಮ 99 ನೇ ವಯಸ್ಸಿನಲ್ಲಿ ದೈವಾಧೀನರಾದರು. ಹಿಂದೂ ಧಾರ್ಮಿಕ ಮುಖಂಡ ಶ್ರೀಧಾಮ ಜೋತೇಶ್ವರ ಆಶ್ರಮದಲ್ಲಿ ಮಧ್ಯಾಹ್ನ 3:30 ರ ಸುಮಾರಿಗೆ ಅವರು ಕೊನೆಯುಸಿರೆಳೆದರು ಎಂದು ದ್ವಾರಕಾ ಪೀಠದ ಎರಡನೇ ಸ್ಥಾನದಲ್ಲಿ ಇರುವ (ದಂಡಿ ಸ್ವಾಮಿ ಎಂದು ಕರೆಯಲಾಗುತ್ತವ) ಸ್ವಾಮಿ ಸದಾನಂದ ಮಹಾರಾಜ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು. (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿ)
2022: ನ್ಯೂಯಾರ್ಕ್: ಪೋಲಂಡಿನ ಇಗಾ ಸ್ವಟೆಕ್ ಅವರು ಅಮೆರಿಕ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಚೊಚ್ಚಲ ಕಿರೀಟ ಮುಡಿಗೇರಿಸಿಕೊಂಡರು. ಅಲ್ಲದೆ ಪ್ರಸಕ್ತ ಸಾಲಿನಲ್ಲಿ ಎರಡನೇ ಮತ್ತು ಒಟ್ಟಾರೆಯಾಗಿ ಮೂರನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದರು. ಇಗಾ ಸ್ವಟೆಕ್ 2020 ಹಾಗೂ 2022ನೇ ಸಾಲಿನಲ್ಲಿ ಫ್ರೆಂಚ್ ಓಪನ್ ಗೆದ್ದ ಸಾಧನೆ ಮಾಡಿದ್ದಾರೆ.
2019: ಜಿನೇವಾ: ಕಾಶ್ಚೀರ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವಂತೆ ಪಾಕಿಸ್ತಾನ ಮಾಡಿರುವ ಮನವಿಯನ್ನು ವಿಶ್ವಸಂಸ್ಥೆ ಸಾರಾಸಗಟು ತಿರಸ್ಕರಿಸಿ, ಭಾರತ ಮತ್ತು ಪಾಕಿಸ್ತಾನ ಮಾತುಕತೆಯ ಮೂಲಕವೇ ವಿವಾದ ಇತ್ಯರ್ಥ ಪಡಿಸಿಕೊಳ್ಳಬೇಕು ಎಂದು 2019 ಸೆಪ್ಟೆಂಬರ್ 11ರ ಬುಧವಾರ ಸೂಚಿಸಿತು. ಜಮ್ಮು-ಕಾಶ್ಮೀರದ ವಿಚಾರದಲ್ಲಿ ಉಭಯ ದೇಶಗಳು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ (ಯುಎನ್‌ಎಚ್ ಆರ್‌ಸಿ) ಪರಸ್ಪರ ಘರ್ಷಿಸಿದ ಒಂದು ದಿನದ ಬಳಿಕ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗ್ಯುಟೆರಸ್ ಅವರು ’ಕಾಶ್ಮೀರ ವಿಚಾರದಲ್ಲಿ ಯಾವುದೇ ರಾಜಕೀಯ ಬಿಕ್ಕಟ್ಟಿಗೆ ಅವಕಾಶ ನೀಡಬಾರದು’ ಎಂದು ಕಳಕಳಿ ವ್ಯಕ್ತಪಡಿಸಿ, ಕಾಶ್ಮೀರದ ವಿಚಾರವನ್ನು ಭಾರತ ಮತ್ತು ಪಾಕಿಸ್ತಾನ ಮಾತುಕತೆಯ ಮೂಲಕವೇ ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಸ್ವಿಜರ್ಲೆಂಡಿನ ರಾಜಧಾನಿ ಜಿನೇವಾದಲ್ಲಿ ನಡೆದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ೪೨ನೇ ಸಮ್ಮೇಳನದಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗ್ಯುಟೆರಸ್ ಅವರು ಈ ಹೇಳಿಕೆ ನೀಡಿದ್ದಾರೆ ಎಂದು ವರದಿಯೊಂದು ತಿಳಿಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2019: ಮಥುರಾ (ಉತ್ತರಪ್ರದೇಶ): ’ಗೋವು’ ಮತ್ತು ’ಓಂ’ ಪದ ಕೇಳಿದರೆ, ಕೆಲವು ಜನರಿಗೆ ’ಆಘಾತವಾಗುತ್ತದೆ’ ಇದು ದುರದೃಷ್ಟಕರ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2019 ಸೆಪ್ಟೆಂಬರ್ 11ರ ಬುಧವಾರ ಇಲ್ಲಿ ಹೇಳಿದರು. ಉತ್ತರ ಪ್ರದೇಶದ ಮಥುರಾದಲ್ಲಿ ರಾಷ್ಟ್ರೀಯ ಜಾನುವಾರುಗಳ ರೋಗ ನಿಯಂತ್ರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಧಾನಿ ಮಾತನಾಡಿದರು. ‘ಕೆಲವು ವ್ಯಕ್ತಿಗಳ ಕೂದಲುಗಳು ’ಗೋವು’ ಮತ್ತು ’ಓಂ’ ಪದ ಕೇಳುತ್ತಿದ್ದಂತೆಯೇ ವಿದ್ಯುತ್ ಆಘಾತಕ್ಕೆ ಒಳಗಾದಂತೆ ನಿಮಿರುತ್ತವೆ. ರಾಷ್ಟ್ರವು ೧೬ ನೇ ಶತಮಾನದಷ್ಟು ಹಿಂದಕ್ಕೆ ಹೋಗಿದೆ ಎಂದು ಅವರು ಭಾವಿಸುತ್ತಾರೆ, ಇದು ದುರದೃಷ್ಟಕರ. ಪ್ರಾಣಿಗಳು ಇಲ್ಲದ ಗ್ರಾಮೀಣ ಆರ್ಥಿಕ ವ್ಯವಸ್ಥೆ ಬಗ್ಗೆ ಯಾರಾದರೂ ಮಾತನಾಡಲು ಸಾಧ್ಯವಿದೆಯೇ? ಎಂದು ಪ್ರದಾನಿ ಮೋದಿ ಪ್ರಶ್ನಿಸಿದರು. ರೈತರಿಗಾಗಿ ಇತರ ಹಲವು ಯೋಜನೆಗಳ ಜೊತೆಗೆ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮವನ್ನು (ಎನ್‌ಎಡಿಸಿಪಿ) ಅವರು ಉದ್ಘಾಟಿಸಿದರು. ‘ಭಾರತದ ಆರ್ಥಿಕತೆಗೆ ಸಂಬಂಧಿಸಿದಂತೆ ಪರಿಸರ ಮತ್ತು ಪ್ರಾಣಿಗಳು ಯಾವಾಗಲೂ ಮಹತ್ವ ಪಡೆದಿವೆ. ಪ್ರಕೃತಿ ಮತ್ತು ಆರ್ಥಿಕ ಪ್ರಗತಿಯ ಮಧ್ಯೆ ಸಮತೋಲನ ಕಾಪಾಡುತ್ತಾ ನಾವು ಹೊಸ ಸಶಕ್ತ ಭಾರತದತ್ತ ಸಾಗಲು ಸಾಧ್ಯವಿದೆ’ ಎಂದು ಪ್ರಧಾನಿ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2019: ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರ ನೂತನ ಮುಖ್ಯ ಕಾರ್ಯದರ್ಶಿ (ಪ್ರಿನ್ಸಿಪಲ್ ಸೆಕ್ರೆಟರಿ) ಆಗಿ ಪ್ರಮೋದ್ ಕುಮಾರ್ ಮಿಶ್ರ ಅವರನ್ನು ನೇಮಕ ಮಾಡಲಾಗಿದೆ ಎಂದು ಪ್ರಧಾನಮಂತ್ರಿ ಸಚಿವಾಲಯದ ಪ್ರಕಟಣೆ 2019 ಸೆಪ್ಟೆಂಬರ್ 11 ಬುಧವಾರ ತಿಳಿಸಿತು. ಕೇಂದ್ರ ಸರ್ಕಾರದಲ್ಲಿ ಕಳೆದ ಐದು ವರ್ಷಗಳ ಕಾಲ ಪ್ರಧಾನಿ ಮೋದಿ ಅವರ ಪ್ರಿನ್ಸಿಪಲ್ ಸೆಕ್ರೆಟರಿಯಾಗಿ ಕಾರ್ಯನಿರ್ವಹಿಸಿದ್ದ ನೃಪೇಂದ್ರ ಮಿಶ್ರ ಅವರು ಕಳೆದ ತಿಂಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.ಮಿಶ್ರ ಅವರು ಗುಜರಾತ್ ಕೇಡರ್ ನ 1972ರ ತಂಡದ ಐಎಎಸ್ ಅಧಿಕಾರಿ. ಇವರು ಮೊದಲು ಪ್ರಧಾನ ಮಂತ್ರಿಯ ಅಡಿಷನಲ್ ಪ್ರಿನ್ಸಿಪಲ್ ಸೆಕ್ರೆಟರಿಯಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೇ ಆ್ಯಗ್ರಿಕಲ್ಚರ್ ಅಂಡ್ ಕಾರ್ಪೋರೇಶನ್ ಸೆಕ್ರೆಟರಿ, ರಾಜ್ಯ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಮಿಶ್ರ ಅವರು ಮೇ ತಿಂಗಳಿನಲ್ಲಿ ಎಕಾನಾಮಿಕ್ಸ್ ಅಂಡ್ ಡೆವಲಪ್ ಮೆಂಟ್ ಸ್ಟಡೀಸ್ ನಲ್ಲಿ ಇಂಗ್ಲೆಂಡ್ ನ ಸುಸ್ಸೆಕ್ಸ್ ಯೂನಿರ್ವಸಿಟಿಯಿಂದ ಪಿಎಚ್ ಡಿ ಪದವಿ ಪಡೆದಿದ್ದರು. ಅಲ್ಲದೇ ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಪ್ರತಿಷ್ಠಿತ ವಿಶ್ವಸಂಸ್ಥೆಯ ಪ್ರಶಸ್ತಿಗೆ ಭಾಜನರಾಗಿದ್ದರು. ಏತನ್ಮಧ್ಯೆ ಪ್ರಧಾನ ಮಂತ್ರಿ ಕಚೇರಿಯ ವಿಶೇಷ ಕರ್ತವ್ಯ ನಿರ್ವಹಣೆ ಅಧಿಕಾರಿಯಾದ ಪಿಕೆ ಸಿನ್ನಾ ಅವರನ್ನು ಪ್ರಧಾನಮಂತ್ರಿಯ ಪ್ರಧಾನ ಸಲಹೆಗಾರ (ಪ್ರಿನ್ಸಿಪಲ್ ಅಡ್ವೈಸರ್) ಆಗಿ ನೇಮಕ ಮಾಡಲಾಗಿದೆ ಎಂದು ವರದಿ ತಿಳಿಸಿತು.
2019: ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ದಂಡ ಇಳಿಸಲು ನಿರ್ಧಾರ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 2019 ಸೆಪ್ಟೆಂಬರ್ 11ರ ಬುಧವಾರ ಹೇಳಿದರು. ಸಂಚಾರ ನಿಯಮ ಉಲ್ಲಂಘನೆ ದಂಡ ದುಪ್ಪಟ್ಟುಗೊಳಿಸಿದ್ದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ದಂಡ ಕಡಿತಗೊಳಿಸಲು ನಿರ್ಧಾರ ಮಾಡಲಾಗಿದೆ ಎಂದು ಯಡಿಯೂರಪ್ಪ ಹೇಳಿದರು. ದಂಡ ಕಡಿತಗೊಳಿಸಲು ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಅವರು ಮಾಹಿತಿ ನೀಡಿದರು. ಈಗಾಗಲೇ ಗುಜರಾತ್ ರಾಜ್ಯದಲ್ಲೂ ಇಳಿಕೆ ಮಾಡಲಾಗಿದೆ. ಗುಜರಾತ್ ಮಾದರಿಯ ದಂಡ ಇಳಿಕೆಯ ಮಾಹಿತಿ ಪಡೆದು ರಾಜ್ಯದಲ್ಲೂ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.ಈ ಮಧ್ಯೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ದಂಡ ದುಪ್ಪಟ್ಟುಗೊಳಿಸಿರುವುದು ಹಣ ಮಾಡುವ ಉದ್ದೇಶಕ್ಕಾಗಿ ಅಲ್ಲ, ಅಪಘಾತಗಳಲ್ಲಿ ಜನರ ಪ್ರಾಣ ರಕ್ಷಣೆಗಾಗಿ ಎಂದು ಸ್ಪಷ್ಟ ಪಡಿಸಿದರು.
ಇಂದಿನ ಇತಿಹಾಸ History Today ಸೆಪ್ಟೆಂಬರ್ 11 (2018+ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ.
No comments:
Post a Comment