ನಾನು ಮೆಚ್ಚಿದ ವಾಟ್ಸಪ್

Sunday, March 17, 2019

ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಇನ್ನಿಲ್ಲ

ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಇನ್ನಿಲ್ಲ
ನವದೆಹಲಿ/ ಪಣಜಿ: ಗೋವಾ ಮುಖ್ಯಮಂತ್ರಿ, ಕೇಂದ್ರದ ಮಾಜಿ ರಕ್ಷಣಾ ಸಚಿವ ಮನೋಹರ  ಗೋಪಾಲಕೃಷ್ಣ  ಪ್ರಭು ಪರಿಕ್ಕರ್ ಅವರು 2019 ಮಾರ್ಚ್ 17ರ ಭಾನುವಾರ ಸಂಜೆ ದೋನಾ ಪೌಲಾದ ತಮ್ಮ ನಿವಾಸದಲ್ಲಿ ನಿಧನರಾದರು. ಅವರಿಗೆ 63 ವರ್ಷ ವಯಸ್ಸಾಗಿತ್ತು.

ವರ್ಷದ ಹಿಂದೆ ಕ್ಯಾನ್ಸರ್ ಬಾಧಿಸಿದ್ದು ಪತ್ತೆಯಾದ ಬಳಿಕ ಪರಿಕ್ಕರ್ ಅವರು  ಅಮೆರಿಕ, ಮುಂಬೈ, ದೆಹಲಿ ಮತ್ತು ಗೋವಾದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು.

ಇದಕ್ಕೆ ಮುನ್ನ ಭಾನುವಾರ ಬೆಳಗ್ಗೆ ರಕ್ತದ ಒತ್ತಡ ಕುಸಿದ ಬಳಿಕ ಪರಿಕ್ಕರ್ ಅವರ ಆರೋಗ್ಯ ದಿಢೀರನೆ ವಿಷಮಿಸಿತ್ತು ಎಂದು ವರದಿಗಳು ತಿಳಿಸಿದ್ದವು.

ನಾಲ್ಕು ಬಾರಿ ಗೋವಾ ಮುಖ್ಯಮಂತ್ರಿಯಾಗಿದ್ದ ಪರಿಕ್ಕರ್  ರಾಜ್ಯ, ರಾಷ್ಟ್ರ ರಾಜಕಾರಣದಲ್ಲಿ ಮಿಂಚಿದ ವಿಶಿಷ್ಠ ವ್ಯಕ್ತಿಯಾಗಿದ್ದರು. 


ಸರಳ ಸಜ್ಜನ ರಾಜಕಾರಣಿ ಎನಿಸಿಕೊಂಡಿದ್ದ ಪರಿಕ್ಕರ್ 1994 ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. 2000 ನೇ ಇಸವಿಯಲ್ಲಿ ಗೋವಾ ಮುಖ್ಯಮಂತ್ರಿಯಾಗಿದ್ದರು. 2005 ವರೆಗೆ ಸೇವೆ ಸಲ್ಲಿಸಿದ್ದರು. 2012 ರಿಂದ 2014 ವರೆಗೆ ಮತ್ತೆ ಮುಖ್ಯಮಂತ್ರಿಯಾಗಿದ್ದರು.  2014 ರಿಂದ 2017 ವರೆಗೆ ರಕ್ಷಣಾ ಸಚಿವರಾಗಿ ಕೆಲಸ ನಿರ್ವಹಿಸಿದ್ದರು.

ಮಾಪುಸಾದಲ್ಲಿ ಜನಿಸಿದ್ದ  ಪರಿಕ್ಕರ್ ಅವರು ಸಣ್ಣ ವಯಸ್ಸಿನಲ್ಲೇ ಆರ್ಎಸ್ಎಸ್ನೊಂದಿಗೆ ನಂಟು ಹೊಂದಿ ಬಳಿಕ ರಾಜಕಾರಣ ಆರಂಭಿಸಿದ್ದರು.

1978ರಲ್ಲಿ  ಐಐಟಿ ಬಾಂಬೆಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದ  ಪ್ರತಿಭಾವಂತ ಪರಿಕ್ಕರ್ ಅವರು ರಾಜಕಾರಣಕ್ಕಿಳಿದು ಮೊದಲ ಐಐಟಿ ಶಾಸಕ ಎನ್ನುವ ಹಿರಿಮೆಗೆ ಪಾತ್ರರಾಗಿದ್ದರು.


ಪರಿಕ್ಕರ್ ಅವರ ಪತ್ನಿ ಮೇಧಾ 2001 ರಲ್ಲಿ ನಿಧನ ಹೊಂದಿದ್ದರು. ಪುತ್ರರಾದ ಉತ್ಪಲ್ ಮತ್ತು ಅಭಿಜಾತ್‌ ಅವರನ್ನು  ಅಗಲಿದ್ದಾರೆ.


ಮುಖ್ಯಮಂತ್ರಿ, ರಕ್ಷಣಾ ಸಚಿವರಾದರೂ ತಮ್ಮ ಸರಳತೆಯನ್ನು ಮರೆಯದ ಪರಿಕ್ಕರ್ ಅವರು ಸಾಮಾನ್ಯನಂತೆ ಜಿವಿಸಿ ವಿವಿಐಪಿ ಸಂಸ್ಕೃತಿಯಿಂದ ಹೊರತಾಗಿದ್ದರು. ಸಾಮಾನ್ಯ ದರ್ಜೆಯ ವಿಮಾನ ಪ್ರಯಾಣ, ಜನರೊಂದಿಗೆ ಸರತಿಯ ಸಾಲಿನಲ್ಲಿ ನಿಲ್ಲುವ ಮೂಲಕ ತಮ್ಮ ಜೀವನದುದ್ದಕ್ಕೂ ಸರಳತೆಯ ಬದುಕನ್ನು ಕಳೆದಿದ್ದರು.

ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಾವಿರಾರು ಗಣ್ಯರು ಪರಿಕ್ಕರ್ ಅವರ ನಿಧನಕ್ಕೆ ತೀವ್ರ ಕಂಬನಿ ಮಿಡಿದಿದ್ದಾರೆ. 

ಹೆಚ್ಚಿನ ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ಕಿಸಿ:


No comments:

Post a Comment