ಅಯೋಧ್ಯಾ: ‘ಸಂಧಾನ’ ತಂಡ ರಚಿಸಿದ ಸುಪ್ರೀಂಕೋರ್ಟ್
ನವದೆಹಲಿ: ಆರು ದಶಕಗಳಿಂದ ನೆನೆಗುದಿಯಲ್ಲಿರುವ ಅಯೋಧ್ಯೆಯ ರಾಮಜನ್ಮಭೂಮಿ- ಬಾಬರಿ ಮಸೀದಿ ಭೂ ವಿವಾದ ಇತ್ಯರ್ಥಕ್ಕಾಗಿ ‘ಸಂಧಾನ’ ಮಾರ್ಗದಲ್ಲಿ ಸಾಗಲು ಸುಪ್ರೀಂಕೋರ್ಟ್ 2019 ಮಾರ್ಚ್ 8ರ ಶುಕ್ರವಾರ ಸುಪ್ರೀಂಕೋರ್ಟ್ ಆದೇಶ ನೀಡಿತು.
ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೋಯಿ ನೇತೃತ್ವದ ಪಂಚ ಸದಸ್ಯ ಪೀಠವು ಈ ನಿಟ್ಟಿನಲ್ಲಿ ತನ್ನ ಆದೇಶವನ್ನು ನೀಡಿ ಸಂಧಾನಕ್ಕಾಗಿ ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎಫ್.ಎಂ. ಖಲೀಫುಲ್ಲಾ ಅಧ್ಯಕ್ಷತೆಯಲ್ಲಿ ತ್ರಿಸದಸ್ಯ ‘ಸಂಧಾನ ತಂಡ’ವನ್ನು ರಚಿಸಿತು.
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಮುಖ್ಯಸ್ಥ ಶ್ರೀ ಶ್ರೀ ರವಿಶಂಕರ್ ಮತ್ತು ಹಿರಿಯ ವಕೀಲ ಹಾಗೂ ತರಬೇತಿ ಪಡೆದ ಸಂಧಾನಕಾರ ಪಂಚು ಅವರನ್ನು ಸಂಧಾನ ತಂಡದ ಇತರ ಸದಸ್ಯರಾಗಿ ಪೀಠವು ನೇಮಕ ಮಾಡಿತು.
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಮುಖ್ಯಸ್ಥ ಶ್ರೀ ಶ್ರೀ ರವಿಶಂಕರ್ ಮತ್ತು ಹಿರಿಯ ವಕೀಲ ಹಾಗೂ ತರಬೇತಿ ಪಡೆದ ಸಂಧಾನಕಾರ ಪಂಚು ಅವರನ್ನು ಸಂಧಾನ ತಂಡದ ಇತರ ಸದಸ್ಯರಾಗಿ ಪೀಠವು ನೇಮಕ ಮಾಡಿತು.
ಫೈಜಾಬಾದಿನಲ್ಲಿ ಒಂದು ವಾರದ ಒಳಗಾಗಿ ಸಂಧಾನ ಆರಂಭವಾಗಬೇಕು ಮತ್ತು ಉತ್ತರ ಪ್ರದೇಶ ರಾಜ್ಯವು ಸಂಧಾನಕ್ಕೆ ಬೇಕಾದ ಅಗತ್ಯಗಳನ್ನು ಒದಗಿಸಬೇಕು. ಸಂಧಾನ ತಂಡವು 8 ವಾರಗಳಲ್ಲಿ ತನ್ನ ವರದಿಯನ್ನು ಕೊಡಬೇಕು ಎಂದು ಪೀಠವು ಆಜ್ಞಾಪಿಸಿತು.
ಸಂಧಾನ ಪ್ರಕ್ರಿಯೆ ವಿಚಾರದಲ್ಲಿ ಸಂಪೂರ್ಣ ಗೌಪ್ಯತೆ ಕಾಪಾಡುವಂತೆ ಪೀಠವು ಉಭಯ ಪಕ್ಷಗಳಿಗೂ ತಾಕೀತು ಮಾಡಿತು. ಸಂಧಾನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕ್ಯಾಮರಾದಲ್ಲಿ ಚಿತ್ರೀಕರಿಸಲಾಗುವುದು. ಸಂಧಾನ ಪ್ರಕ್ರಿಯೆಯ ಯಾವುದೇ ಅಂಶವೂ ಮುದ್ರಣ ಮಾಧ್ಯಮದಲ್ಲಾಗಲೀ, ವಿದ್ಯುನ್ಮಾನ (ಎಲೆಕ್ಟ್ರಾನಿಕ್) ಮಾಧ್ಯಮದಲ್ಲಾಗಲೀ ವರದಿಯಾಗಬಾರದು ಎಂದೂ ಪೀಠ ನಿರ್ದೇಶಿಸಿತು.
ತ್ರಿಸದಸ್ಯ ಸಂಧಾನ ತಂಡಕ್ಕೆ ಇನ್ನಷ್ಟು ಸಂಧಾನಕಾರರನ್ನು ಸೇರ್ಪಡೆ ಮಾಡಿಕೊಳ್ಳುವ ಮತ್ತು ಶಾಸಕಾಂಗ ನೆರವು ಕೋರುವ ಸ್ವಾತಂತ್ರ್ಯ ಇದೆ ಎಂದು ಸುಪ್ರೀಂಕೋರ್ಟ್ ಆದೇಶ ತಿಳಿಸಿತು.
ಸಂಧಾನ ಪ್ರಕ್ರಿಯೆಯಲ್ಲಿ ಏನಾದರೂ ಅಡೆತಡೆಗಳು ಎದುರಾದರೆ, ತಂಡವು ಸುಪ್ರೀಂಕೋರ್ಟ್ ರಿಜಿಸ್ಟ್ರಿಯನ್ನು ಸಂಪರ್ಕಿಸಬಹುದು ಎಂದೂ ಪಂಚ ಸದಸ್ಯ ಪೀಠ ತಿಳಿಸಿತು.
ನ್ಯಾಯಮೂರ್ತಿಗಳಾದ ಎಸ್.ಎ. ಬೊಬ್ಡೆ, ಡಿ.ವೈ. ಚಂದ್ರಚೂಡ್, ಅಶೋಕ ಭೂಷಣ್ ಮತ್ತು ಎಸ್.ಎ. ನಜೀರ್ ಅವರು ಪಂಚ ಸದಸ್ಯ ಪೀಠದ ಇತರ ಸದಸ್ಯರಾಗಿದ್ದರು.
ಸಂಧಾನ ಪ್ರಕ್ರಿಯೆಗೆ ಅವಕಾಶ ನೀಡುವ ಬಗ್ಗೆ ಸುಪ್ರೀಂಕೋರ್ಟ್ ಪೀಠವು ಮಾರ್ಚ್ 6ರ ಬುಧವಾರ ತನ್ನ ತೀರ್ಪನ್ನು ಕಾಯ್ದಿರಿಸಿತ್ತು.
ಹೆಚ್ಚಿನ ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ:
No comments:
Post a Comment