ವಿಮಾ ರಕ್ಷಣೆ ಪಡೆದ ವಾಹನ ಚಾಲಕನಿಂದಾಗಿ ಅಪಘಾತ ಸಂಭವಿಸುವ ಬದಲು ವಿರುದ್ಧ ದಿಕ್ಕಿನಿಂದ ಬಂದ ವಾಹನದಿಂದ ಅಪಘಾತ ಸಂಭವಿಸಿದರೆ, ಅಂತಹ ಸಂದರ್ಭದಲ್ಲಿ ಅಪಘಾತ ಸವಲತ್ತು ನಿರಾಕರಿಸಲು ವಿಮಾ ಸಂಸ್ಥೆಗೆ ಯಾವುದೇ ಸಮರ್ಥನೆಯೂ ಇಲ್ಲ ಎಂದು ಸುಪ್ರೀಂಕೋರ್ಟ್ ಕೂಡಾ ತೀರ್ಪು ನೀಡಿದೆ.
ಇಂತಹ ಪ್ರಸಂಗ
ಯಾರಿಗೂ ಎದುರಾಗಬಹುದು. ಯಾರೋ
ಒಬ್ಬ ವ್ಯಕ್ತಿ
ತನ್ನ ವಾಹನದಲ್ಲಿ ಹೋಗುತ್ತಿದ್ದಾನೆ.
ಇನ್ನೊಂದು ವಾಹನ
ಬಂದು ಈ
ವಾಹನಕ್ಕೆ ಗುದ್ದುತ್ತದೆ. ಈ ವಾಹನ ಸವಾರ
ಸಾವಿಗೀಡಾಗುತ್ತಾನೆ, ಇಲ್ಲವೇ
ಗಂಭೀರವಾಗಿ ಗಾಯಗೊಳ್ಳುತ್ತಾನೆ. ಇಂತಹ
ಸಂದರ್ಭದಲ್ಲಿ ಅಪಘಾತಕ್ಕೆ ಈಡಾದ
ಈ ವಾಹನದ
ಸವಾರನ ಬಳಿ
ಲೈಸೆನ್ಸ್ ಇರಲಿಲ್ಲ
ಎಂಬ ಕಾರಣ
ನೀಡಿ ವಿಮಾ
ಸಂಸ್ಥೆಯು ನೀಡಬೇಕಾದ ಅಪಘಾತ
ಪರಿಹಾರ ನಿರಾಕರಿಸಬಹುದೇ? ತನ್ನ
ಮುಂದೆ ಬಂದ
ಇಂತಹ ಪ್ರಕರಣವೊಂದರ ಎರಡು
ಮೇಲ್ಮನವಿಗಳ ವಿಚಾರಣೆ
ನಡೆಸಿದ ಕರ್ನಾಟಕ
ರಾಜ್ಯ ಗ್ರಾಹಕ
ನ್ಯಾಯಾಲಯವು ಅಪಘಾತಕ್ಕೆ ಈಡಾದ
ಅರ್ಜಿದಾರರ ಕುಟುಂಬಕ್ಕೆ ನ್ಯಾಯ
ಒದಗಿಸಿದೆ.
ಈ ಪ್ರಕರಣದಲ್ಲಿ ಅರ್ಜಿದಾರರು:
ಶಿವಮೊಗ್ಗ ಶಿವಪ್ಪನಾಯಕ ನಗರದ
ನಿವಾಸಿ ದಿವಂಗತ
ಐವನ್ ಫರ್ನಾಂಡಿಸ್ ಅವರ ಪತ್ನಿ ಶ್ರೀಮತಿ
ಪದ್ಮಾ. ಪ್ರತಿವಾದಿಗಳು: ಭಾರತೀಯ
ಜೀವ ವಿಮಾ
ನಿಗಮ, ಮ್ಯಾನೇಜರ್, ಸಾಗರಶಾಖೆ
,ಸಾಗರ ಮತ್ತು
ಜೀವ ವಿಮಾ
ನಿಗಮದ ವಿಭಾಗೀಯ
ಮ್ಯಾನೇಜರ್, ವಿಭಾಗೀಯ
ಕಚೇರಿ ಉಡುಪಿ.
ಪ್ರಕರಣದ ಅರ್ಜಿದಾರರ ಪತಿ ಐವನ್ ಫರ್ನಾಂಡಿಸ್
ಅವರು ಭಾರತೀಯ
ಜೀವ ವಿಮಾ
ನಿಗಮದಿಂದ ಎಂಟು
ವಿಮಾ ಪಾಲಿಸಿಗಳನ್ನು ಖರೀದಿಸಿದ್ದರು.
ಈ ವಿಮಾ
ಪಾಲಿಸಿಗಳು ಅವರಿಗೆ
ಅಪಘಾತ ವಿಮಾ
ಸವಲತ್ತುಗಳನ್ನು ಪಡೆಯಲು
ಅರ್ಹತೆ ಕಲ್ಪಿಸಿದ್ದವು. 2001ರ
ಮಾರ್ಚ್ 3ರಂದು
ಅಪಘಾತವೊಂದರಲ್ಲಿ ಐವನ್
ಫರ್ನಾಂಡಿಸ್ ಅವರು
ಮೃತರಾದರು.
ಮೃತರ ಪತ್ನಿ
ಹಾಗೂ ವಾರಸುದಾರರಾದ ಶ್ರೀಮತಿ
ಪದ್ಮಾ ಅವರು
ಭಾರತೀಯ ವಿಮಾ
ನಿಗಮಕ್ಕೆ ಅರ್ಜಿ
ಸಲ್ಲಿಸಿ ತಮ್ಮ
ಪತಿ ಖರೀದಿಸಿದ್ದ ವಿಮಾ
ಪಾಲಿಸಿಗಳ ಪ್ರಕಾರ
ಸೂಕ್ತ ಪರಿಹಾರ
ಒದಗಿಸುವಂತೆ ಕೋರಿದರು.
ವಿಮಾ ಸಂಸ್ಥೆಯು ಎಂಟು
ವಿಮಾ ಪಾಲಿಸಿಗಳ ಪೈಕಿ
ಐದು ಪಾಲಿಸಿಗಳಿಗೆ ಸಂಬಂಧಿಸಿದಂತೆ
ಪಾಲಿಸಿಗಳ ನಮೂದಿತ
ಮೊತ್ತವನ್ನು ಪಾವತಿ
ಮಾಡಿತು. ಆದರೆ
ಅಪಘಾತ ಪರಿಹಾರ
ನೀಡಲು ನಿರಾಕರಿಸಿತು. ಉಳಿದ
ಮೂರು ಪಾಲಿಸಿಗಳು ಅವಧಿಗೆ
ಮೊದಲೇ ರದ್ದಾಗಿವೆ ಎಂಬ ಕಾರಣ ನೀಡಿ
ವಿಮಾ ಹಣವನ್ನಾಗಲೀ ಅಪಘಾತ
ಪರಿಹಾರವನ್ನಾಗಲೀ ನೀಡಲು
ನಿರಾಕರಿಸಿತು.
ತನ್ನ ಪತಿ
ಅಪಘಾತದಲ್ಲಿ ಮೃತನಾಗಿದ್ದರೂ ಅಪಘಾತ
ಪರಿಹಾರ ಸೌಲಭ್ಯ
ಒದಗಿಸಲು ವಿಮಾ
ಸಂಸ್ಥೆ ನಿರಾಕರಿಸಿದ್ದು ಸೇವಾಲೋಪ
ಎಂಬ ನೆಲೆಯಲ್ಲಿ ಪದ್ಮಾ
ಅವರು ಜಿಲ್ಲಾ
ಗ್ರಾಹಕ ನ್ಯಾಯಾಲಯದ ಮೆಟ್ಟಲೇರಿದರು.
ಪ್ರಕರಣದ ವಿಚಾರಣೆ
ನಡೆಸಿದ ಜಿಲ್ಲಾ
ಗ್ರಾಹಕ ನ್ಯಾಯಾಲಯವು ಅರ್ಜಿದಾರರ
ದೂರನ್ನು ಭಾಗಶಃ
ಮನ್ನಿಸಿ, 3,81,780 ರೂಪಾಯಿಗಳನ್ನು ಬಡ್ಡಿ
ಸಹಿತವಾಗಿ ಪಾವತಿ
ಮಾಡಬೇಕು ಎಂದು
2008ರ ಜನವರಿ
11ರಂದು ಪ್ರತಿವಾದಿ ಭಾರತೀಯ
ಜೀವ ವಿಮಾ
ನಿಗಮಕ್ಕೆ ಆದೇಶಿಸಿತು.
ಈ ಆದೇಶವನ್ನು ಪ್ರಶ್ನಿಸಿ
ಉಭಯ ಕಕ್ಷಿದಾರರೂ ರಾಜ್ಯ
ಗ್ರಾಹಕ ನ್ಯಾಯಾಲಯಕ್ಕೆ ಮೇಲ್ಮನವಿಗಳನ್ನು
ಸಲ್ಲಿಸಿದರು.
ಅಧ್ಯಕ್ಷ ನ್ಯಾಯಮೂರ್ತಿ ಚಂದ್ರಶೇಖರಯ್ಯ,
ಸದಸ್ಯರಾದ ರಮಾ
ಅನಂತ್ ಹಾಗೂ
ಟಿ. ಹರಿಯಪ್ಪ
ಗೌಡ ಅವರನ್ನು
ಒಳಗೊಂಡ ರಾಜ್ಯ
ಗ್ರಾಹಕ ನ್ಯಾಯಾಲಯದ ಪೀಠವು
ಅರ್ಜಿದಾರರ ಪರ
ವಕೀಲರಾದ ಮೆ.
ಚಂದ್ರು ಮತ್ತು
ಎಸ್. ಶೇಖರ್,
ಪ್ರತಿವಾದಿಗಳ ಪರ
ವಕೀಲರಾದ ನಾರಾಯಣ
ವಿ. ಯಾಜಿ
ಅವರ ಅಹವಾಲುಗಳನ್ನು ಆಲಿಸಿ,
ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿತು.
ಮೋಟಾರು ವಾಹನ
ಅಪಘಾತದಲ್ಲಿ ಮೃತರಾದ
ವಿಮಾ ರಕ್ಷಿತನ
ವಾಹನ ಚಾಲನಾ
ಪರವಾನಗಿಯನ್ನು ಅರ್ಜಿದಾರರು ಹಾಜರು
ಪಡಿಸಿಲ್ಲ. ಹಾಗಾಗಿ
ವಿಮಾ ಸಂಸ್ಥೆಯು ಅಪಘಾತ
ಪರಿಹಾರ ಸವಲತ್ತುಗಳನ್ನು ನಿರಾಕರಿಸಿದೆ
ಎಂಬ ವಾದವನ್ನು ವಿಮಾ
ನಿಗಮದ ಪರ
ವಕೀಲರು ಜಿಲ್ಲಾ
ಗ್ರಾಹಕ ನ್ಯಾಯಾಲಯದಲ್ಲೇ ಮಂಡಿಸಿದ್ದರು.
ಆದರೆ ಈ
ವಾದ ಅಸಮರ್ಥನೀಯ ಎಂಬ ಅಭಿಪ್ರಾಯ ತಳೆದ
ಜಿಲ್ಲಾ ಗ್ರಾಹಕ
ನ್ಯಾಯಾಲಯವು ಅಪಘಾತ
ಪರಿಹಾರ ಸವಲತ್ತುಗಳನ್ನು ನೀಡುವಂತೆ
ಪ್ರತಿವಾದಿ ವಿಮಾ
ಸಂಸ್ಥೆಗೆ ನಿರ್ದೇಶಿಸಿದ್ದನ್ನು ರಾಜ್ಯ
ಗ್ರಾಹಕ ನ್ಯಾಯಾಲಯ ತನ್ನ
ಗಮನಕ್ಕೆ ತೆಗೆದುಕೊಂಡಿತು.
ವಾಸ್ತವಾಂಶಗಳ ಪ್ರಕಾರ
ವಿಮಾ ರಕ್ಷಿತ
ವ್ಯಕ್ತಿ ತನ್ನ
ವೈಯಕ್ತಿಕ ಕೆಲಸಕ್ಕಾಗಿ ಮೋಟಾರು
ಸೈಕಲ್ಲಿನಲ್ಲಿ ಸಾಗರದ
ಕಡೆಗೆ ಹೊರಟಿದ್ದರು. ಎಲ್.ಬಿ. ಕಾಲೇಜಿನ
ಸಮೀಪ ಸಾಗರ
ಕಡೆಯಿಂದ ಬಂದ
ಟೆಂಪೋ ಒಂದು
ವಿಮಾ ರಕ್ಷಿತನ
ಮೋಟಾರು ಸೈಕಲಿಗೆ
ಡಿಕ್ಕಿ ಹೊಡೆಯಿತು. ಪರಿಣಾಮವಾಗಿ
ವಿಮಾ ರಕ್ಷಿತ
ಸವಾರ ಮತ್ತು
ಹಿಂಬದಿ ಸವಾರ
ರಸ್ತೆಯ ಮಧ್ಯಕ್ಕೆ ಬಿದ್ದರು.
ಅದೇ ಸಮಯಕ್ಕೆ
ಜೋಗದ ಕಡೆಯಿಂದ
ಅತಿ ವೇಗವಾಗಿ
ಬಂದ ಬಸ್ಸೊಂದು ವಿಮಾ
ರಕ್ಷಿತನ ಮೇಲೆ
ಚಲಿಸಿತು. ಪರಿಣಾಮವಾಗಿ ವಿಮಾ
ರಕ್ಷಿತ ವ್ಯಕ್ತಿ
ಸ್ಥಳದಲ್ಲೇ ಮೃತನಾದ.
ಇದರಿಂದ ಸ್ಪಷ್ಟವಾಗುವ ಅಂಶ ಏನು ಎಂದರೆ
ಟೆಂಪೋ ಮೋಟಾರು
ಸೈಕಲ್ಲಿಗೆ ಡಿಕ್ಕಿ
ಹೊಡೆದರೂ, ವಿಮಾ
ರಕ್ಷಿತನ ಸಾವಿಗೆ
ಕಾರಣವಾದದ್ದು ಈ
ಟೆಂಪೋ ಅಲ್ಲ,
ಬದಲಾಗಿ ಹಿಂದಿನಿಂದ ವೇಗವಾಗಿ
ಬಂದು ರಸ್ತೆ
ಮಧ್ಯೆ ಬಿದ್ದಿದ್ದ ವ್ಯಕ್ತಿಯ
ಮೇಲೆ ಹಾದು
ಹೋದ ಬಸ್ಸು
ಎಂಬುದನ್ನು ನ್ಯಾಯಾಲಯ ದಾಖಲಿಸಿಕೊಂಡಿತು.
ಅಂದರೆ ಸಾವು
ಸಂಭವಿಸಿದ ವೇಳೆಯಲ್ಲಿ ವಿಮಾ
ರಕ್ಷಿತ ವ್ಯಕ್ತಿ
ಮೋಟಾರು ಸೈಕಲ್
ಚಲಾಯಿಸುತ್ತಿರಲಿಲ್ಲ, ಬದಲಾಗಿ
ರಸ್ತೆಯ ಮಧ್ಯೆ
ಬಿದ್ದಿದ್ದ. ಇಂತಹ
ಪರಿಸ್ಥಿತಿಯಲ್ಲಿ ಮೃತನಾದ
ವ್ಯಕ್ತಿಯ ಚಾಲನಾ
ಪರವಾನಗಿ ಹಾಜರು
ಪಡಿಸುವಂತೆ ವಾರಸುದಾರರನ್ನು ವಿಮಾ
ಸಂಸ್ಥೆಯು ಒತ್ತಾಯಿಸುವುದು ಸಮರ್ಥನೀಯವಲ್ಲ
ಎಂದು ನ್ಯಾಯಾಲಯ ಭಾವಿಸಿತು.
ಜಿತೇಂದ್ರ ಕುಮಾರ
ವರ್ಸಸ್ ಓರಿಯೆಂಟಲ್ ಇನ್ ಶ್ಯೂರೆನ್ಸ್ ಕಂಪೆನಿ
ಲಿಮಿಟೆಡ್ ಪ್ರರಕಣದಲ್ಲಿ ವಿಮಾ
ರಕ್ಷಣೆ ಪಡೆದ
ವಾಹನ ಚಾಲಕನಿಂದಾಗಿ ಅಪಘಾತ
ಸಂಭವಿಸುವ ಬದಲು
ವಿರುದ್ಧ ದಿಕ್ಕಿನಿಂದ ಬಂದ ವಾಹನದಿಂದ ಅಪಘಾತ
ಸಂಭವಿಸಿದರೆ, ಅಂತಹ
ಸಂದರ್ಭದಲ್ಲಿ ಅಪಘಾತ
ಸವಲತ್ತು ನಿರಾಕರಿಸಲು ವಿಮಾ
ಸಂಸ್ಥೆಗೆ ಯಾವುದೇ
ಸಮರ್ಥನೆಯೂ ಇಲ್ಲ
ಎಂದು ಸುಪ್ರೀಂಕೋರ್ಟ್ ತೀರ್ಪು
ನೀಡಿದ್ದನ್ನೂ ರಾಜ್ಯ
ಗ್ರಾಹಕ ನ್ಯಾಯಾಲಯ ತನ್ನ
ಪರಿಗಣನೆಗೆ ತೆಗೆದುಕೊಂಡಿತು.
ಜಿಲ್ಲಾ ಗ್ರಾಹಕ
ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ
ಮೇಲ್ಮನವಿ ಸಲ್ಲಿಸಿದ ಅರ್ಜಿದಾರರು
ಬಡ್ಡಿ ಮೊತ್ತವನ್ನು ಅಪಘಾತ
ಸಂಭವಿಸಿದ ದಿನದಿಂದಲೇ ನೀಡುವಂತೆ
ಪ್ರತಿವಾದಿಗೆ ಆಜ್ಞಾಪಿಸಬೇಕು ಎಂಬ ಕೋರಿಕೆ ಸಲ್ಲಿಸಿದ್ದರು.
ಆದರೆ ಅರ್ಜಿದಾರರು ಜಿಲ್ಲಾ
ಗ್ರಾಹಕ ನ್ಯಾಯಾಲಯದಲ್ಲಿ ದೂರು
ದಾಖಲಿಸುವಾಗಲೇ ವಿಳಂಬ
ಮಾಡಿದ್ದರು. ಈ
ಹಿನ್ನೆಲೆಯಲ್ಲಿ ಅರ್ಜಿ
ಸಲ್ಲಿಕೆಯಾದ ದಿನದಿಂದ
ಶೇಕಡಾ 6ರಷ್ಟು
ಬಡ್ಡಿ ಪಾವತಿ
ಮಾಡುವಂತೆ ಜಿಲ್ಲಾ
ಗ್ರಾಹಕ ನ್ಯಾಯಾಲಯ ಆಜ್ಞಾಪಿಸಿದ್ದು
ಸಮರ್ಥನೀಯ ಎಂದು
ರಾಜ್ಯ ಗ್ರಾಹಕ
ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಜಿಲ್ಲಾ ಗ್ರಾಹಕ
ನ್ಯಾಯಾಲಯವು 3,81,780 ರೂಪಾಯಿಗಳನ್ನು ಶೇಕಡಾ
6 ಬಡ್ಡಿ ಸೇರಿಸಿ
ಪಾವತಿ ಮಾಡುವಂತೆ ಆಜ್ಞಾಪಿಸಿತ್ತು.
ಆದರೆ ಐದು
ಪಾಲಿಸಿಗಳ ವಿಮಾ
ರಕ್ಷಣೆ ಭರವಸೆಯ
ಮೊತ್ತ 2,96,000 ರೂಪಾಯಿ ಮಾತ್ರ.
ಆದ್ದರಿಂದ ವಿಮಾ
ಸಂಸ್ಥೆ ಅಪಘಾತ
ಪರಿಹಾರ ಒದಗಿಸಬೇಕಾದದ್ದು 2,96,000 ರೂಪಾಯಿಗಳಷ್ಟು ಮಾತ್ರ.
ಮೊತ್ತ ನಮೂದಿಸುವಲ್ಲಿ ತಪ್ಪಾಗಿದೆ.
ಆದ್ದರಿಂದ ಜಿಲ್ಲಾ
ಗ್ರಾಹಕ ನ್ಯಾಯಾಲಯದ ತೀರ್ಪಿನ
ಪರಿಷ್ಕರಣೆ ಆಗಬೇಕು
ಎಂದು ಪೀಠವು
ಹೇಳಿತು.
ಈ ಹಿನ್ನೆಲೆಯಲ್ಲಿ ಜಿಲ್ಲಾ
ಗ್ರಾಹಕ ನ್ಯಾಯಾಲಯದ ತೀರ್ಪನ್ನು
ಪರಿಷ್ಕರಿಸಿದ ರಾಜ್ಯ
ಗ್ರಾಹಕ ನ್ಯಾಯಾಲಯವು ಪ್ರತಿವಾದಿ
ವಿಮಾ ಸಂಸ್ಥೆಯು 2,96,000 ರೂಪಾಯಿಗಳನ್ನು , ಜಿಲ್ಲಾ
ನ್ಯಾಯಾಲಯದಲ್ಲಿ ದೂರು
ದಾಖಲಾದ ದಿನದಿಂದ
ಶೇಕಡಾ 6ರಷ್ಟು
ವಾರ್ಷಿಕ ಬಡ್ಡಿ
ಸೇರಿಸಿ ಪಾವತಿ
ಮಾಡಬೇಕು, ಜಿಲ್ಲಾ
ಗ್ರಾಹಕ ನ್ಯಾಯಾಲಯವು ವಿಧಿಸಿದ
ಖಟ್ಲೆ ವೆಚ್ಚದಲ್ಲಿ ಯಾವುದೇ
ಬದಲಾವಣೆ ಇಲ್ಲ
ಎಂದು ತೀರ್ಪು
ನೀಡಿತು.
ವಿಮಾ ಸಂಸ್ಥೆಯು ರಾಜ್ಯ
ನ್ಯಾಯಾಲಯದಲ್ಲಿ ಠೇವಣಿ
ಇಟ್ಟ 25,000 ರೂಪಾಯಿಗಳನ್ನು ಜಿಲ್ಲಾ
ಗ್ರಾಹಕ ನ್ಯಾಯಾಲಯಕ್ಕೆ ವರ್ಗಾಯಿಸಿ
ಅರ್ಜಿದಾರರಿಗೆ ಪಾವತಿ
ಮಾಡುವಂತೆಯೂ ಅದು
ನಿರ್ದೇಶನ ನೀಡಿತು.