ಬನ್ನಿ ನಾನು ಹಬಲ್.. ಬಾನಂಗಳದಲ್ಲಿ ವಿಹರಿಸೋಣ..!
ನಾನು ಹಬಲ್. ಕಳೆದ 35 ವರ್ಷಗಳಿಂದ ಬಾಹ್ಯಾಕಾಶದಲ್ಲಿ ಇದ್ದುಕೊಂಡೇ ದೂರದರ್ಶಕವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.
35 ವರ್ಷಗಳ ಹಿಂದೆ 1990ರ ಏಪ್ರಿಲ್ 24ರಂದು ಅಮೆರಿಕದ ನಾಸಾ ಬಾಹ್ಯಾಕಾಶ ಕೇಂದ್ರವು ಡಿಸ್ಕವರಿ ಬಾಹ್ಯಾಕಾಶ ನೌಕೆಯ ಮೂಲಕ ನನ್ನನ್ನು ಬಾಹ್ಯಾಕಾಶಕ್ಕೆ ಏರಿಸಿತು ಮತ್ತು ಬಾಹ್ಯಾಕಾಶದ ವಿವಿಧ ಮಜಲುಗಳ ಚಿತ್ರ ತೆಗೆಯುವ ಕಾರ್ಯಕ್ಕೆ ನನ್ನನ್ನು ನಿಯೋಜಿಸಿತು.
ಈ 35 ವರ್ಷಗಳಲ್ಲಿ ನಾನು ಬಾಹ್ಯಾಕಾಶದ ಲಕ್ಷಾಂತರ ಚಿತ್ರಗಳನ್ನು ತೆಗೆದು ಭೂಮಿಗೆ ಕಳುಹಿಸಿದ್ದೇನೆ. ನಾನು ಬಾಹ್ಯಾಕಾಶಕ್ಕೆ ಏರಿದ ಈದಿನದ ಆಚರಣೆಗೆ ಈ ಚಿತ್ರಗಳು ಅಪೂರ್ವವಾಗಿದ್ದು ಬ್ರಹ್ಮಾಂಡಕ್ಕೆ ಹೊಸ ಉಡುಗೊರೆಯಾಗಿವೆ ಎಂದು ನನ್ನನ್ನು ಇಲ್ಲಿಗೆ ಕಳುಹಿಸಿದ ವಿಜ್ಞಾನಿಗಳು ಹೇಳುತ್ತಿದ್ದಾರೆ.
ಬ್ರಹ್ಮಾಂಡದ ರಹಸ್ಯಗಳನ್ನು ಅರಿಯಲು ನಾನು ಕಳುಹಿಸಿದ ಚಿತ್ರಗಳು ಅನುಕೂಲಕರವಾಗಿವೆಯಂತೆ. ಬಾಹ್ಯಾಕಾಶ ಪಯಣದ ಇತಿಹಾಸದಲ್ಲಿ ನಾನು ಅತ್ಯಂತ ಪ್ರತಿಮಾರೂಪದ ವೈಜ್ಞಾನಿಕ ಸಾಧನಗಳಲ್ಲಿ ಒಂದಾಗಿದ್ದೇನೆ ಎಂದು ಅವರು ಹೇಳುತ್ತಿದ್ದಾರೆ.
ʼಬ್ರಹ್ಮಾಂಡದ ಅಸ್ಪಷ್ಟ ರಹಸ್ಯವನ್ನು ಸ್ಪಷ್ಟ ಕಣ್ಣಿನ ಅನ್ವೇಷಣೆಯಾಗಿ ಪರಿವರ್ತಿಸಿದ ಯಂತ್ರ ನಾನುʼ ಎಂದೂ ವಿಜ್ಞಾನಿಯೊಬ್ಬರು ಬಣ್ಣಿಸಿದ್ದಾರೆ.
"35 ವರ್ಷಗಳ ಹಿಂದೆ ಉಡಾವಣೆಯಾದಾಗ ಹಬಲ್ ವಿಶ್ವಕ್ಕೆ ಹೊಸ ಕಿಟಕಿಯನ್ನು ತೆರೆಯಿತು" ಎಂದು ನಾಸಾ ಪ್ರಧಾನ ಕಚೇರಿಯಲ್ಲಿರುವ ಖಗೋಳ ಭೌತಶಾಸ್ತ್ರ ವಿಭಾಗದ ಕಾರ್ಯಕಾರಿ ನಿರ್ದೇಶಕ ಶಾನ್ ಡೊಮಗಲ್-ಗೋಲ್ಡ್‌ಮನ್ ಹೇಳಿದರಂತೆ.
"ಅದರ ಬೆರಗುಗೊಳಿಸುವ ಚಿತ್ರಣವು ಪ್ರಪಂಚದಾದ್ಯಂತ ಜನರಿಗೆ ಸ್ಫೂರ್ತಿ ನೀಡಿತು ಮತ್ತು ಆ ಚಿತ್ರಗಳ ಹಿಂದಿನ ದತ್ತಾಂಶವು ಆರಂಭಿಕ ಗ್ಯಾಲಕ್ಸಿಗಳಿಂದ ಹಿಡಿದು ನಮ್ಮದೇ ಸೌರವ್ಯೂಹದ ಗ್ರಹಗಳವರೆಗೆ ಎಲ್ಲದರ ಬಗ್ಗೆ ಹಲವಾರು ಅಚ್ಚರಿಗಳನ್ನು ಬಹಿರಂಗ ಪಡಿಸಿತು” ಎಂದು ಹೇಳಿದ್ದು ಗೋಲ್ಡಮನ್ ಮಾರಾಯರೇ - ನಾನಲ್ಲ.”
ಏನೋ, ನನಗೆ ಗೊತ್ತಿಲ್ಲ. ಈ ವರ್ಷ ನನ್ನ ಬಾನಿಗೇರಿದ ವರ್ಷಾಚರಣೆಗಾಗಿ ಒಂದಷ್ಟು ಚಿತ್ರಗಳನ್ನು ವಿಶ್ವಕ್ಕೆ ಕಳುಹಿಸಿಬಿಡಬೇಕು ಎಂದು ತೀರ್ಮಾನಿಸಿ, ನಾಸಾ ಒಂದಷ್ಟು ಚಿತ್ರಗಳನ್ನು ಬಿಡುಗಡೆ ಮಾಡಿದೆ. ಅವುಗಳಲ್ಲಿ ನನಗೆ ಪ್ರಮುಖ ಅನ್ನಿಸಿದ ಚಿತ್ರಗಳಲ್ಲಿ ಕೆಲವು ಇಲ್ಲಿವೆ ನೋಡಿ.
ಮೇಲಿನಿಂದ ಎಡಕ್ಕೆ: ಡಿಸೆಂಬರ್ 2024 ರ ಕೊನೆಯಲ್ಲಿ ಭೂಮಿಯಿಂದ ಸರಿಸುಮಾರು 61 ಮಿಲಿಯನ್ ಮೈಲುಗಳಷ್ಟು ದೂರದಲ್ಲಿದ್ದಾಗ ಕಂಡು ಬಂದ ಮಂಗಳ ಗ್ರಹ ಇದು. ನನ್ನ ವಿಶಿಷ್ಟ ನೇರಳಾತೀತ ಸಾಮರ್ಥ್ಯದಿಂದ ಬಹಿರಂಗಗೊಂಡ ತೆಳುವಾದ ನೀರು-ಮಂಜುಗಡ್ಡೆಯ ಮೋಡಗಳು ಕೆಂಪು ಗ್ರಹಕ್ಕೆ ಹಿಮಭರಿತ ನೋಟವನ್ನು ನೀಡಿವೆ.
ಮೇಲಿನಿಂದ ಬಲಕ್ಕೆ: ಇದು ಗ್ರಹ ನೀಹಾರಿಕೆ NGC 2899. ನೋಡಲು ಪತಂಗದಂತೆ ಕಾಣುವ ನೀಹಾರಿಕೆಯು ಮಧ್ಯದಲ್ಲಿ ಸುಮಾರು 40,000-ಡಿಗ್ರಿ-ಫ್ಯಾರನ್‌ಹೀಟ್ ಉಷ್ಣಾಂಶದೊಂದಿಗೆ ಸಾಯುತ್ತಿರುವ ನಕ್ಷತ್ರ ಅಂದರೆ ʼಬಿಳಿ ಕುಬ್ಜʼದಿಂದ ಬರುತ್ತಿರುವ ವಿಕಿರಣ ಮತ್ತು ನಾಕ್ಷತ್ರಿಕ ಗಾಳಿಗಳ ಹೊರಹರಿವಿನಿಂದಾಗಿ ಹೀಗೆ ಪತಂಗವನ್ನು ಕೆತ್ತಿ ಇಟ್ಟಿರುವಂತೆ ಕಾಣುತ್ತಿದೆ.
ಕೆಳಗಿನಿಂದ ಎಡಕ್ಕೆ: ರಕ್ಕಸನಂತೆ ಕಾಣುತ್ತಿದೆಯಲ್ಲ? ಇದು ರೋಸೆಟ್ ನೀಹಾರಿಕೆ. ಇದು ಬೃಹತ್ ನಕ್ಷತ್ರವೊಂದು ರೂಪುಗೊಳ್ಳುತ್ತಿರುವ ಪ್ರದೇಶದ ಸಣ್ಣ ಭಾಗ. ಧೂಳಿನಿಂದ ಕೂಡಿದ ಹೈಡ್ರೋಜನ್ ಅನಿಲದ ಕರಿಯ ಮೋಡಗಳು ಇಂತಹ ರೂಪವನ್ನು ಇದಕ್ಕೆ ನೀಡಿವೆ.
ಕೆಳಗಿನಿಂದ ಬಲಭಾಗಕ್ಕೆ: ಇದು NGC 5335 ನಕ್ಷತ್ರಪುಂಜ, ಇದು ಒಂದು ಚಪ್ಪಟೆಯಾದ ಸುರುಳಿಯಾಕಾರದ ನಕ್ಷತ್ರಪುಂಜ. ಇದರ ಡಿಸ್ಕ್‌ನಾದ್ಯಂತ ನಕ್ಷತ್ರ ರಚನೆಯ ತೇಪೆಯ ಸ್ಟ್ರೀಮರ್‌ಗಳಿವೆ. ನಕ್ಷತ್ರಪುಂಜದ ಮಧ್ಯಭಾಗವನ್ನು ಗಮನಾರ್ಹವಾದ ಲಟ್ಟಣಿಗೆಯಂತಹ ರಚನೆಯು ವಿಭಜಿಸುತ್ತದೆ.
ಈ ಚಿತ್ರಗಳಿಗೆ ಸಂಬಂಧಿಸಿದಂತೆ ನಾಸಾದ ವಿಜ್ಞಾನಿಯೊಬ್ಬರು ನೀಡಿದ ವಿವರಣೆಯ ವಿಡಿಯೋ 👇👇👇 ಒಂದನ್ನು ಕೂಡಾ ನಾಸಾ ಬಿಡುಗಡೆ ಮಾಡಿದೆ.
ಹೆಚ್ಚಿಲ್ಲ, ಒಂದೈದು ನಿಮಿಷ ಬಿಡುವು ಮಾಡಿಕೊಂಡು ಈ ವಿಡಿಯೋ ಒಳಹೊಕ್ಕು ನೋಡಿ. ನಿಮ್ಮ ಭೂಮಿಯಾಚೆ ಇರುವ ಈ ನಭೋ ಮಂಡಲದಲ್ಲಿ ಎಂತೆಂತಹ ವಿಸ್ಮಯಗಳಿವೆ ಎಂಬುದು ನಿಮಗೆ ಗೊತ್ತಾಗುತ್ತದೆ. ಈ ಬಾಹ್ಯಾಕಾಶ ಯಾನ ಅದೆಷ್ಟು ಸುಂದರ ಎಂದು ನಂತರ ನೀವೇ ಮೂಗಿನ ಮೇಲೆ ಬೆರಳು ಇಡುತ್ತೀರಿ. ಖಂಡಿತ.
ಇವುಗಳನ್ನೂ ಓದಿ:
ಇಸ್ರೋದಿಂದ ಕೋವಿಡ್ ಲಾಕ್‌ಡೌನ್ ನಂತರ ಮೊದಲ ಭೂ ವೀಕ್ಷಣೆ ಉಪಗ್ರಹ ಉಡಾವಣೆ
ಮೂರ್ಜೆ ಸುನಿತಾ ಪ್ರಭುವಿಗೆ ಪ್ರಧಾನ ಮಂತ್ರಿ ಬಾಲ ಪುರಸ್ಕಾರ
Indian-American Scientist to Get Rare Honour
Prestigious INSA Teachers Award to Prof. R Vasudeva
Ancient India had Planes: Claim at Indian Science Congress