Showing posts with label ಅಯೋಧ್ಯೆ. Show all posts
Showing posts with label ಅಯೋಧ್ಯೆ. Show all posts

Tuesday, November 25, 2025

PARYAYA: ಧರ್ಮ ಧ್ವಜಾರೋಹಣ: ಅಯೋಧ್ಯೆ ಈಗ ಸಂಪೂರ್ಣ!

ಧರ್ಮ ಧ್ವಜಾರೋಹಣ: ಅಯೋಧ್ಯೆ ಈಗ ಸಂಪೂರ್ಣ!

ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ಮಂದಿರದಲ್ಲಿ 2025 ನವೆಂಬರ್‌ 25ರ ಸೋಮವಾರ ಧರ್ಮ ಧ್ವಜವನ್ನು ಹಾರಿಸಿದರು.

ಇದರೊಂದಿಗೆ ದೇವಾಲಯ ನಿರ್ಮಾಣದ ಆಚರಣೆಯ ಪ್ರತಿವಿಧಿಯೂ ಶುದ್ಧತೆ ಮತ್ತು ಶ್ರದ್ಧೆಯೊಂದಿಗೆ ಸಂಪೂರ್ಣಗೊಂಡಿತು.

ಈ ಕ್ಷಣವು ಕೋಟ್ಯಂತರ ಜನರ ಭಕ್ತಿ ಮತ್ತು ತಲೆತಲಾಂತರದ ಪ್ರಾರ್ಥನೆಗಳಿಂದ ಸಂಪನ್ನಗೊಂಡಿದೆ.

ಯಾವುದೇ ದೇವಾಲಯದ ಆಚರಣೆಗಳು ಅಂತಿಮ ಹಂತಕ್ಕೆ ತಲುಪಿದಾಗ, ಪ್ರತಿ ವಿಧಿಯು ಶುದ್ಧತೆ ಮತ್ತು ಶ್ರದ್ಧೆಯಿಂದ ಸಂಪೂರ್ಣಗೊಂಡಿದೆ ಎಂಬುದನ್ನು ಸೂಚಿಸಲು ಈ ಪವಿತ್ರ ಧ್ವಜವನ್ನು ಏರಿಸಲಾಗುತ್ತದೆ.

ಶ್ರೀರಾಮ ಮತ್ತು ಸೀತಾಮಾತೆಯ ಕಲ್ಯಾಣ ಸಂಪನ್ನಗೊಂಡ ದಿನ ಎಂಬುದಾಗಿ ನಂಬಲಾಗಿರುವ ಈದಿನ ನಡೆದ ಈ ಸಮಾರಂಭದೊಂದಿಗೆ, ಶ್ರೀ ರಾಮ ಜನ್ಮಭೂಮಿ ಮಂದಿರವು ಈಗ ವಿಧ್ಯುಕ್ತವಾಗಿ ಪೂರ್ಣಗೊಂಡಿತು. ಇದು ಪ್ರತಿಯೊಬ್ಬ ಭಕ್ತನ ಹೃದಯವನ್ನೂ ಭಾವನೆಗಳಿಂದ ತುಂಬುವಂತೆ ಮಾಡಿತು.

ಧರ್ಮಧ್ವಜಾರೋಹಣದ ಈ ಸಂದರ್ಭಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ನೂರಾರು ಮಂದಿ ಸಂತರು ಸೇರಿದಂತೆ ಸಹಸ್ರಾರು ಗಣ್ಯರು ಸಾಕ್ಷಿಯಾದರು.

(ವೀಡಿಯೊ ಕೃಪೆ: Instagram ನಲ್ಲಿ MyGovindia)

PARYAYA: ಧರ್ಮ ಧ್ವಜಾರೋಹಣ: ಅಯೋಧ್ಯೆ ಈಗ ಸಂಪೂರ್ಣ!: ಧರ್ಮ ಧ್ವಜಾರೋಹಣ: ಅಯೋಧ್ಯೆ ಈಗ ಸಂಪೂರ್ಣ! ಪ್ರ ಧಾ ನಿ ನರೇಂದ್ರ ಮೋದಿ ಅವರು ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ಮಂದಿರದಲ್ಲಿ 2025 ನವೆಂಬರ್‌ 25ರ ಸೋಮವಾರ ಧರ್ಮ ಧ್ವಜವನ್ನ...

Friday, March 1, 2024

ಮೂವತ್ತೇ ದಿನಗಳಲ್ಲಿ ಮೇಲೆದ್ದ ದೇವಾಲಯ...

  ಮೂವತ್ತೇ ದಿನಗಳಲ್ಲಿ ಮೇಲೆದ್ದ ದೇವಾಲಯ...

ಭಾನುವಾರ ಲೋಕಾರ್ಪಣೆ, ಅಯೋಧ್ಯೆಯ ನಂಟೂ ಉಂಟು..

ಬೆಂಗಳೂರು: ಇದು ಕೇವಲ 30 ದಿನಗಳ ಅವಧಿಯಲ್ಲಿ ನಿರ್ಮಾಣಗೊಂಡ ಕಲ್ಲಿನ ದೇಗುಲ. ಅಷ್ಟೇ ಅಲ್ಲ ಅಯೋಧ್ಯೆಯ ಬಾಲರಾಮನ ಜೊತೆ ನಂಟು ಹೊಂದಿರುವ ದೇವಾಲಯ. ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ನಿರ್ಮಾಣಗೊಂಡಿರುವ ಶ್ರೀ ಮಹಾಗಣಪತಿ, ಶ್ರೀ ವೆಂಕಟೇಶ್ವರ ಮತ್ತು ಶ್ರೀ ಅಭಯ ಆಂಜನೇಯ ಸ್ವಾಮಿ ದೇವಸ್ಥಾನವು ಕೇವಲ 30 ದಿನಗಳ ಅವಧಿಯಲ್ಲಿ ನಿರ್ಮಾಣಗೊಳ್ಳುವುದರೊಂದಿಗೆ ಇತಿಹಾಸ ಸೃಷಿಸಿದೆ.

ವಾಸ್ತವವಾಗಿ ಈ ಬಡಾವಣೆಯಲ್ಲಿ ದೇವಾಲಯದ ನಿರ್ಮಾಣ ಆಗಬೇಕು ಎಂಬುದು ಇಲ್ಲಿನ ನಿವಾಸಿಗಳ ಸುಮಾರು ಎರಡು ದಶಕಕ್ಕೂ ಹೆಚ್ಚಿನ ಅವಧಿಯ ಕನಸು. ಸುಮಾರು 20 ವರ್ಷಗಳ ಹಿಂದೆ ಇಲ್ಲಿ ಬಡಾವಣೆ ನಿರ್ಮಾಣ ಮಾಡುವ ಸಮಯದಲ್ಲೇ ಬಡಾವಣೆಯ ನಿರ್ಮಾಪಕರು ಇಲ್ಲಿ ದೇವಾಲಯ ನಿರ್ಮಿಸಿಕೊಡುವ ಭರವಸೆ ಕೊಟ್ಟದ್ದಲ್ಲದೆ ಅದಕ್ಕಾಗಿ ಭೂಮಿ ಪೂಜೆಯನ್ನೂ ನೆರವೇರಿಸಿದ್ದರು.

ಆದರೆ ಕಾರಣಾಂತರಗಳಿಂದ ದೇವಾಲಯ ನಿರ್ಮಾಣ ಕಾರ್ಯ ಮುಂದಕ್ಕೆ ಹೋಗುತ್ತಲೇ ಬಂದಿತ್ತು. ಒಂದು ವರ್ಷದ ಹಿಂದೆ ಬಡಾವಣೆಯ ಹಿರಿಯ ಸದಸ್ಯರು ದೇವಾಲಯ ನಿರ್ಮಾಣ ಮಾಡಲೇಬೇಕು ಎಂಬ ಸಂಕಲ್ಪದೊಂದಿಗೆ ಶ್ರೀ ಬಾಲಾಜಿ ಮಹಾಗಣಪತಿ ದೇವಸ್ಥಾನ ಸೇವಾ ಸಮಿತಿ ಟ್ರಸ್ಟ್‌ ರಚಿಸಿಕೊಂಡು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾದರು. ಬಡಾವಣೆಯ ನಿರ್ಮಾಪಕರೂ ದೇವಸ್ಥಾನ ನಿರ್ಮಾಣಕ್ಕೆ ನೆರವಿನ ಹಸ್ತ ನೀಡುವ ಭರವಸೆ ಕೊಟ್ಟರು.

ಆದರೂ ದೇವಾಲಯ ನಿರ್ಮಾಣ ಕಾರ್ಯಕ್ಕೆ ವೇಗ ಲಭಿಸಲಿಲ್ಲ. ಮತ್ತೆ ಮತ್ತೆ ಅಡ್ಡಿ ಆತಂಕಗಳು ಎದುರಾಗುತ್ತಲೇ ಬಂದವು. ಕೊನೆಗೆ ಸಾದಹಳ್ಳಿಯ ಸಾಲಿಗ್ರಾಮ ಭೂ ವರಾಹ ಸ್ವಾಮಿ ಸನ್ನಿಧಿಗೆ ತೆರಳಿ ದೇವಾಲಯ ನಿರ್ಮಾಣ ನಿರ್ವಿಘ್ನವಾಗಿ ನೆರವೇರಲಿ ಎಂದು ಪ್ರಾರ್ಥಿಸಿಕೊಂಡ ಸಮಿತಿಯ ಸದಸ್ಯರು ಅಲ್ಲಿನ ಆನಂದ ಗುರೂಜಿ ಮಾರ್ಗದರ್ಶನದಂತೆ ದೇವಸ್ಥಾನ ನಿರ್ಮಾಣಕ್ಕೆ ಮುಂದಾದರು.

2024 ಜನವರಿ 11ರ ನಸುಕಿನಲ್ಲಿ ಅತ್ಯಂತ ಶ್ರೇಷ್ಠ ಮುಹೂರ್ತ ಎಂಬುದಾಗಿ ಪರಿಗಣಿಸಲಾಗಿರುವ ಬ್ರಾಹ್ಮೀ ಮುಹೂರ್ತದಲ್ಲಿ ಭೂಮಿ ಪೂಜೆಯನ್ನು ನೆರವೇರಿಸಿ ದೇವಾಲಯದ ಪಾಯ ನಿರ್ಮಾಣದ ಕೆಲಸ ಆರಂಭಿಸಿದರು. ಸಮಿತಿಯ ಒಂದು ತಂಡವು ತಮಿಳುನಾಡಿನ ಮಹಾಬಲಿಪುರಂಗೆ ತೆರಳಿ ಇಡೀ ದಿನ ಹುಡುಕಾಡಿ ಶ್ರೀ ವೆಂಕಟೇಶ್ವರ (ಬಾಲಾಜಿ) ಮತ್ತು ಅಭಯ ಆಂಜನೇಯ ಸ್ವಾಮಿಯ ವಿಗ್ರಹಗಳನ್ನು ಆಯ್ಕೆ ಮಾಡಿಕೊಂಡು ಬಂದಿತು.

ಅಯೋಧ್ಯೆಯ ಸಂಬಂಧ!

ಬಡಾವಣೆಯ ಶಿಲ್ಪಿ ಎನ್.‌ ಎಂ. ಬಡಿಗೇರ ಅವರು ಸುಮಾರು ನಾಲ್ಕು ವರ್ಷಗಳ ಹಿಂದೆ ಮೈಸೂರಿನ ಹೆಗ್ಗಡದೇವನ ಕೋಟೆಯಿಂದ ಕೆಲವು ಕಪ್ಪು ಶಿಲೆ ಅಥವಾ ಕೃಷ್ಣ ಶಿಲೆಗಳನ್ನು ಆಯ್ಕೆ ಮಾಡಿಕೊಂಡು ಬೆಂಗಳೂರಿನ ತಮ್ಮ ನಿವಾಸಕ್ಕೆ ವಿಗ್ರಹಗಳನ್ನು ಕೆತ್ತಲೆಂದೇ ತಂದಿದ್ದರು. ಈ ಬಂಡೆಗಳಲ್ಲಿ ಅವರು ಮಹಾಗಣಪತಿ ಮತ್ತು ಸರಸ್ವತಿ ದೇವಿಯ ವಿಗ್ರಹಗಳನ್ನು ನಿರ್ಮಿಸಿದ್ದಾರೆ. ಅತ್ಯಂತ ವಿಶೇಷವೆಂದರೆ ಈ ವರ್ಷ ಲೋಕಾರ್ಪಣೆಗೊಂಡಿರುವ ಅಯೋಧ್ಯೆಯ ಚಾರಿತ್ರಿಕ ರಾಮ ಮಂದಿರದಲ್ಲಿ ಈಗ ಪ್ರತಿಷ್ಠಾಪನೆಗೊಂಡಿರುವ ಬಾಲರಾಮ ಕೂಡಾ ಇದೇ ಪ್ರದೇಶದ ಕೃಷ್ಣಶಿಲೆಯಿಂದ ನಿರ್ಮಾಣಗೊಂಡಿರುವ ವಿಗ್ರಹ.

ಬಡಾವಣೆಯಲ್ಲಿ ದೇವಾಲಯ ನಿರ್ಮಾಣದ ಪ್ರಸ್ತಾಪ ಬರುತ್ತಿದ್ದಂತೆಯೇ ಬಡಿಗೇರ ಅವರು ತಾವು ನಾಲ್ಕು ವರ್ಷಗಳ ಶ್ರಮದಲ್ಲಿ ನಿರ್ಮಿಸಿದ ಇದೇ ಕೃಷ್ಣ ಶಿಲೆಯ ಶ್ರೀ ಮಹಾಗಣಪತಿ ವಿಗ್ರಹವನ್ನು ದೇವಾಲಯಕ್ಕೆ ನೀಡುವುದಾಗಿ ಘೋಷಿಸಿದರು.


ಅತ್ತ ಮಹಾಬಲಿಪುರಂನಲ್ಲಿ ಬಾಲಾಜಿ ಮತ್ತು ಅಭಯ ಆಂಜನೇಯ ವಿಗ್ರಹದ ಹುಡುಕಾಟಕ್ಕಾಗಿ ತೆರಳಿದ್ದ ತಂಡಕ್ಕೆ ಇಡೀ ದಿನ ಹುಡುಕಾಡಿದರೂ ಯಾವುದೇ ವಿಗ್ರಹ ಮನಸ್ಸಿಗೆ ತೃಪ್ತಿ ನೀಡಿರಲಿಲ್ಲ. ಕೊನೆಗೆ ವಾಪಸಾಗಬೇಕೆಂದು ಯೋಚಿಸಿ ಹೊರಟಾಗ ವಿಗ್ರಹಗಳಿದ್ದ ಪುಟ್ಟ ಅಂಗಡಿಯೊಂದು ಕಂಡಿತು. ಅಲ್ಲಿದ್ದ ವೆಂಕಟೇಶ್ವರ ವಿಗ್ರಹ ಎಲ್ಲರಿಗೂ ತೃಪ್ತಿ ನೀಡಿತು. ಬೆಂಗಳೂರಿನ ದಿಕ್ಕಿಗೆ ಮುಖ ಮಾಡಿ ನಿಂತಿದ್ದ ಈ ವಿಗ್ರಹ ಕಳೆದ ನಾಲ್ಕು ವರ್ಷಗಳಿಂದ ಅಲ್ಲಿ ಮಾರಾಟವಾಗದೆ ಹಾಗೆಯೇ ಉಳಿದಿತ್ತು ಎಂಬುದು ಅಂಗಡಿಕಾರರ ಜೊತೆಗೆ ಮಾತನಾಡಿದಾಗ ತಿಳಿಯಿತು.

ಈ ಬಾಲಾಜಿ ವಿಗ್ರಹದ ಎದುರಿನಲ್ಲೇ ಇದ್ದ ಅಭಯ ಆಂಜನೇಯ ಸ್ವಾಮಿಯ ವಿಗ್ರಹವೂ ತಂಡದ ಗಮನ ಸೆಳೆಯಿತು. ವಿಗ್ರಹ ಆಯ್ಕೆಯ ತಂಡ ಈ ಎರಡೂ ವಿಗ್ರಹಗಳನ್ನು ದೇವಾಲಯದ ಸಲುವಾಗಿ ಆಯ್ಕೆ ಮಾಡಿತು. ಮರುದಿನವೇ ಎರಡೂ ವಿಗ್ರಹಗಳು ಬಡಾವಣೆಗೆ ಬಂದಿಳಿದವು.

ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯ ದಿನವೇ ಬಡಾವಣೆಯ ಮಂದಿರದ ಉದ್ಘಾಟನೆಯೂ ನೆರವೇರಬೇಕು ಎಂಬುದು ಸಮಿತಿಯ ಸದಸ್ಯರ ಆಶಯವಾಗಿತ್ತು. ಆದರೆ ಮತ್ತೆ ವಿಘ್ನಗಳು ಎದುರಾಗಿ ಸುಮಾರು ಜನವರಿ 16ಕ್ಕೆ ದೇವಾಲಯ ನಿರ್ಮಾಣ ಕಾಮಗಾರಿ ನಿಂತಿತು.

ಛಲ ಬಿಡದ ತ್ರಿವಿಕ್ರಮನಂತೆ ಸಮಿತಿ ಸದಸ್ಯರು ಫೆಬ್ರುವರಿ ಮೊದಲ ವಾರದಲ್ಲಿ ಮತ್ತೆ ದೇವಾಲಯ ನಿರ್ಮಾಣ ಕಾರ್ಯದಲ್ಲಿ ಸಕ್ರಿಯರಾದರು. ಫೆಬ್ರುವರಿ 3ಕ್ಕೆ ದೇವಾಲಯ ನಿರ್ಮಾಣ ಕಾರ್ಯ ಪುನರಾರಂಭ ಮಾಡಿ, ಫೆಬ್ರುವರಿ 29ರ ವೇಳೆಗೆ ಅದನ್ನು ಪೂರ್ಣಗೊಳಿಸಿದರು.

ಇದೀಗ ಭವ್ಯವಾಗಿ ಎದ್ದು ನಿಂತಿರುವ ಶ್ರೀ ಮಹಾಗಣಪತಿ, ಶ್ರೀ ವೆಂಕಟೇಶ್ವರ ಮತ್ತು ಶ್ರೀ ಅಭಯ ಆಂಜನೇಯ ಸ್ವಾಮಿ ದೇವಾಲಯದ ಲೋಕಾರ್ಪಣೆ ಹಾಗೂ ಶ್ರೀ ದೇವರುಗಳ ಪ್ರಾಣ ಪ್ರತಿಷ್ಠಾಪನೆ 2024ರ ಭಾನುವಾರ ಮಾಘ ಬಹುಳ ಸಪ್ತಮೀ ಅನೂರಾಧ ನಕ್ಷತ್ರ ಪ್ರಾತಃಕಾಲ 9.15ರಿಂದ 10.30ಕ್ಕೆ ಸಲ್ಲುವ ಮೇಷ ಲಗ್ನದಲ್ಲಿ ನೆರವೇರಲಿದೆ.

ಅದಕ್ಕೆ ಪೂರ್ವಭಾವಿಯಾಗಿ ಶನಿವಾರ ಸಂಜೆಯಿಂದಲೇ ಗಂಗಾಪೂಜೆ ಮತ್ತಿತರ ಧಾರ್ಮಿಕ ವಿಧಿಗಳು ಆರಂಭವಾಗಲಿದೆ.


ಮೂವತ್ತೇ ದಿನಗಳಲ್ಲಿ ಮೇಲೆದ್ದ ದೇವಾಲಯ...

Sunday, November 25, 2018

ಏಕತಾ ಪ್ರತಿಮೆಗಿಂತ ಎತ್ತರದ ಶ್ರೀರಾಮ ಪ್ರತಿಮೆಗೆ ಅಸ್ತು

ಏಕತಾ ಪ್ರತಿಮೆಗಿಂತ ಎತ್ತರದ ಶ್ರೀರಾಮ ಪ್ರತಿಮೆಗೆ ಅಸ್ತು
ಲಕ್ನೋ:  ರಾಮ ಮಂದಿರ ನಿರ್ಮಾಣಕ್ಕಾಗಿ ಬೇಡಿಕೆ ತಾರಕಕ್ಕೆ ಏರಿರುವುದರ ಮಧ್ಯೆಯೇ, ಅಯೋಧ್ಯೆಯಲ್ಲಿ  ೨೨೧ ಮೀಟರ್  ಎತ್ತರದ ಶ್ರೀರಾಮನ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಉತ್ತರಪ್ರದೇಶದ ಪ್ರಧಾನ ಕಾರ್ಯದರ್ಶಿ (ಮಾಹಿತಿ) ಅವನೀಶ್ ಅವಸ್ತಿ ೨೦೧೮ ರ ನವೆಂಬರ್ ೨೫ ರ ಭಾನುವಾರ  ಪ್ರಕಟಿಸಿದರು.

ಪ್ರತಿಮೆಯ  ನೈಜ ಎತ್ತರವು ೧೫೧ ಮೀಟರ್ ಆಗಿದ್ದರೆ, ಪ್ರತಿಮೆಯ ತಲೆಯ ಮೇಲಿನ  ಛತ್ರಿ ೨೦ ಮೀಟರ್ ಮತ್ತು ಪೀಠ  ೫೦ ಮೀಟರ್  ಎತ್ತರ ಆಗುತ್ತದೆ ಎಂದು ಅವರು ಹೇಳಿದರು.

ಪೀಠದಲ್ಲಿ  ವಸ್ತುಸಂಗ್ರಹಾಲಯದ ವ್ಯವಸ್ಥೆ ಮಾಡಲಾಗುವುದು ಎಂದು ಅವಸ್ತಿ ನುಡಿದರು.
ಪ್ರತಿಮೆಯನ್ನು ನಿರ್ಮಿಸಲು  ಐದು ಕಂಪನಿಗಳನ್ನು  ಪಟ್ಟಿ ಮಾಡಲಾಗಿದ್ದು, ಶನಿವಾರ  ಸಂಜೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ಅ ಮುಂಚೆ  ಅವರ ವಿನ್ಯಾಸಗಳನ್ನು ಪ್ರಸ್ತುತ ಪಡಿಸಲಾಗಿದೆ  ಎಂದು ಅಧಿಕಾರಿ ಹೇಳಿದರು.

ಪ್ರತಿಮೆಯ ಸ್ಥಾಪನೆಗಾಗಿ  ಮಣ್ಣಿನ ಪರೀಕ್ಷೆಯನ್ನು ಮಾಡಲಾಗುತ್ತಿದೆ ಎಂದು ಅಧಿಕಾರಿ ನುಡಿದರು.
ಅಕ್ಟೋಬರ್ ೩೧ ರಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಮೊತ್ತ ಮೊದಲ ಗೃಹ ಸಚಿವ  ‘ಉಕ್ಕಿನ ಮನುಷ್ಯ’ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ೧೮೨ ಮೀಟರ್  ಎತ್ತರದ ಪ್ರತಿಮೆಯನ್ನು ಗುಜರಾತಿನಲ್ಲಿ ಲೋಕಾರ್ಪಣೆ ಮಾಡಿದ್ದರು. ಇದು ವಿಶ್ವದಲ್ಲೇ ಅತ್ಯಂತ  ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಅಯೋಧ್ಯಾ ವರದಿ:  ಈ ಮಧ್ಯೆ ಅಯೋಧ್ಯೆಯಲ್ಲಿ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತೊಮ್ಮೆ ರಾಮ ಮಂದಿರ ನಿರ್ಮಾಣದ  ಬೇಡಿಕೆಯನ್ನು ಪುನರುಚ್ಚರಿಸಿದರು. ೨೦೧೮ ರ ನವೆಂಬರ್ ೨೫ ರ ಭಾನುವಾರ ಅಯೋಧ್ಯೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಠಾಕ್ರೆ, ರಾಮ ಮಂದಿರವನ್ನು ನಿರ್ಮಿಸದಿದ್ದರೆ, ಬಿಜೆಪಿ ಸರ್ಕಾರವು ಕೇಂದ್ರದಲ್ಲಿ ಉಳಿಯುವುದಿಲ್ಲ ಎಂದು ಎಚ್ಚರಿಸಿದರು.

ಪಕ್ಷ ಅಧಿಕಾರದಲ್ಲಿದ್ದರೆ ಅಥವಾ ಇಲ್ಲದೇ ಇದ್ದರೂ ರಾಮ ಮಂದಿರವನ್ನು  ಖಂಡಿತವಾಗಿಯೂ ನಿರ್ಮಿಸಲಾಗುವುದು ಎಂದು ಉದ್ಧವ್ ಹೇಳಿದರು.


"ಮಂದಿರವನ್ನು  ನಿರ್ಮಿಸದಿದ್ದರೆ, ಈ ಸರ್ಕಾರವು ಉಳಿಯಲು ಸಾಧ್ಯವಿಲ್ಲ, ಆದರೆ ಸರ್ಕಾರ  ಉಳಿಯದೇ ಇದ್ದರೂ ಮಂದಿರವನ್ನು ನಿರ್ಮಿಸಲಾಗುವುದು" ಎಂದು ಅವರು ನುಡಿದರು.

ಭಾನುವಾರ ಬೆಳಗ್ಗೆ  ರಾಮಲಲ್ಲಾ ದರ್ಶನಕ್ಕೆ  ಹೋಗಿದ್ದಾಗ  ರಾಮ ಮಂದಿರ ನಿರ್ಮಾಣ ಪೂರ್ಣಗೊಳಿಸಲು ಸಂತರ ಆಶೀರ್ವಾದ ಪಡೆದುದಾಗಿ ಠಾಕ್ರೆ ಹೇಳಿದರು.
"ನಿಮ್ಮ ಆಶೀರ್ವಾದ  ಇಲ್ಲದೆ ನಾವು ಕೈಗೊಳ್ಳಲು ಹೊರಟಿರುವ ಕಾರ್ಯವನ್ನು ಪೂರ್ಣಗೊಳಿಸಲು ಆಗುವುದಿಲ್ಲ ಎಂದು ನಾನು  ನನ್ನನ್ನು ಆಶೀರ್ವದಿಸಿದ ಸಂತರಿಗೆ ಹೇಳಿದ್ದೇನೆ’ ಎಂದು ಅವರು ನುಡಿದರು.

ಅಯೋಧ್ಯೆಗೆ ಯಾವುದೇ ರಹಸ್ಯ ಕಾರ್ಯಸೂಚಿಯೊಂದಿಗೆ ಬಂದಿಲ್ಲ. ಪ್ರಪಂಚದಾದ್ಯಂತದ ಎಲ್ಲಾ ಭಾರತೀಯರ ಮತ್ತು ಹಿಂದೂಗಳ ಭಾವನೆಗಳನ್ನು ವ್ಯಕ್ತಪಡಿಸಲು ಇಲ್ಲಿಗೆ ಬಂದಿದ್ದೇನೆ. ಅವರು ರಾಮ ಮಂದಿರವನ್ನು ಕಟ್ಟಲು ಕಾಯುತ್ತಿದ್ದಾರೆ "ಎಂದು ಠಾಕ್ರೆ ಹೇಳಿದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿದ  ಠಾಕ್ರೆ, "ಮಂಡಿರ್ ಥಾ, ಹೈ ಔರ್ ರಹೇಗಾ" (’ಅಲ್ಲಿ ಮಂದಿರವಿತ್ತು, ಅಲ್ಲಿ ಮಂದಿರವಿದೆ ಮತ್ತು ಮಂದಿರವು ಉಳಿಯುತ್ತದೆ.’) ಎಂದು ಮುಖ್ಯಮಂತ್ರಿ ಹೇಳಿದ್ದಾರೆ ಎಂದು ನಾನು ಕೇಳಿದೆ. ಆದರೆ ಅದು ನಮ್ಮ ನಂಬಿಕೆ, ನಮ್ಮ ಬದ್ಧತೆ ಮತ್ತು ನಮ್ಮ ಭಾವನೆ. ಅಲ್ಲಿ ಮಂದಿರವನ್ನು ನಾವು ಕಾಣುತ್ತಿಲ್ಲ ಎಂಬುದು ನಮ್ಮ ನೋವು. ಈ ಮಂದಿರವನ್ನು ನಾವು ಕಾಣುವುದು ಯಾವಾಗ?’ ಎಂದು ಠಾಕ್ರೆ  ಪ್ರಶ್ನಿಸಿದರು.