ಭಾರತಕ್ಕೂ ಬಂತು 5 ಜಿ ಸೇವೆ: ಪ್ರಧಾನಿ ಮೋದಿ ಚಾಲನೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶೀ ತಂತ್ರಜ್ಞಾನ ಬಳಸಿದ 5ಜಿ ದೂರಸಂಪರ್ಕ ಸೇವೆಗಳಿಗೆ 2022 ಅಕ್ಟೋಬರ್ 1ರ ಶನಿವಾರ ಚಾಲನೆ ನೀಡಿದರು. ನವದೆಹಲಿಯ ಪ್ರಗತಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿಯವರು 5ಜಿ ಸೇವೆಗೆ ಚಾಲನೆ ನೀಡುವುದರೊಂದಿಗೆ ಭಾರತವು ಹೆಚ್ಚು ವೇಗದ ಅಂತರ್ಜಾಲ (ಇಂಟರ್ನೆಟ್) ಬಳಕೆಯ ಯುಗಕ್ಕೆ ಪದಾರ್ಪಣೆ ಮಾಡಿತು.
ಎಲ್ಲರಿಗೂ ಅಂತರ್ಜಾಲ (ಇಂಟರ್ನೆಟ್) ಒದಗಿಸುವ ಭರವಸೆಯನ್ನು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ನೀಡಿದರು.
ಆಯ್ದ 13 ನಗರಗಳಲ್ಲಿ 5ಜಿ ದೂರಸಂಪರ್ಕ ಸೇವೆ ಆರಂಭವಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ಇದು ಇಡೀ ದೇಶದಲ್ಲಿ ಹಂತ ಹಂತವಾಗಿ ಲಭ್ಯವಾಗಲಿದೆ.
ದೇಶದಲ್ಲಿ 5ಜಿ ಭಾಗ್ಯ ಲಭಿಸಿದ ನಗರಗಳು
ಬೆಂಗಳೂರು, ಚಂಡೀಗಢ, ಅಹಮದಾಬಾದ್, ಗಾಂಧಿನಗರ, ಗುರುಗ್ರಾಮ, ಹೈದರಾಬಾದ್, ಜಾಮ್‌ನಗರ, ಚೆನ್ನೈ, ದೆಹಲಿ, ಕೋಲ್ಕತ್ತ, ಮುಂಬೈ, ಪುಣೆ ಮತ್ತು ಲಖನೌ.
ಮುಕೇಶ್ ಅಂಬಾನಿ ಮಾಲೀಕತ್ವದ ಜಿಯೊ, ಸುನೀಲ್ ಭಾರ್ತಿ ಮಿತ್ತಲ್ ಮಾಲೀಕತ್ವದ ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳು 5ಜಿ ಸೇವೆಗಳನ್ನು ಆರಂಭಿಸಲು ಅಗತ್ಯವಿರುವ ತರಂಗಾಂತರಗಳನ್ನು ಹರಾಜಿನ ಮೂಲಕ ಖರೀದಿಸಿವೆ. ಖಾಸಗಿ ನೆಟ್‌ವರ್ಕ್ ಸ್ಥಾಪಿಸಲು ಅಗತ್ಯವಿರುವ 5ಜಿ ತರಂಗಾಂತರಗಳನ್ನು ಅದಾನಿ ಸಮೂಹ ಖರೀದಿಸಿದೆ.
5ಜಿ ಸೇವೆಗಳು ಆರಂಭವಾಗಿರುವುದರಿಂದ ಹೊಸ ಆರ್ಥಿಕ ಅವಕಾಶಗಳು ತೆರೆದುಕೊಳ್ಳುವ ನಿರೀಕ್ಷೆ ಇದೆ. 5ಜಿ ತಂತ್ರಜ್ಞಾನವು 4ಜಿ ತಂತ್ರಜ್ಞಾನಕ್ಕಿಂತ ಹಲವು ಪಟ್ಟು ಹೆಚ್ಚು ವೇಗದ ಇಂಟರ್ನೆಟ್ ಸಂಪರ್ಕವನ್ನು ಒದಗಿಸುತ್ತದೆ.
ಪ್ರಸ್ತತ 75 ದೇಶಗಳ 1947 ನಗರಗಳಲ್ಲಿ 5ಜಿ ಸೇವೆ ಲಭ್ಯವಿದೆ.
5ಜಿ ಬಳಸುತ್ತಿರುವ ಟಾಪ್ 10 ರಾಷ್ಟ್ರಗಳು: ಚೀನಾ (356 ನಗರಗಳು), ಅಮೆರಿಕ (296), ಫಿಲಿಫ್ಪೈನ್ಸ್ (98 ನಗರಗಳು), ದಕ್ಷಿಣ ಕೊರಿಯಾ (85 ನಗರಗಳು), 5 ಕೆನಡಾ (84 ನಗರಗಳು), ಸ್ಪೇನ್ (71 ನಗರಗಳು), ಇಟಲಿ (65 ನಗರಗಳು, ಜರ್ಮನಿ (58 ನಗರಗಳು), ಯುನೈಟೆಡ್ ಕಿಂಗ್‌ಡಮ್ (57 ನಗರಗಳು) ಮತ್ತು ಸೌದಿ ಅರೇಬಿಯಾ (48ನಗರಗಳು).
No comments:
Post a Comment