ಈ ಗ್ರಾಮ ಪಂಚಾಯತಿಯಲ್ಲಿ ‘ಸರ್’ ‘ಮ್ಯಾಡಮ್’ ಪದ ಬಳಸುವಂತಿಲ್ಲ..
ನ್ಯಾಯಾಲಯಕ್ಕೆ ಸಾಧ್ಯವಾಗದ್ದು, ಪಂಚಾಯತಿಗೆ ಸಾಧ್ಯವಾಯಿತು..!
ಆರು ತಿಂಗಳ ಹಿಂದೆ ಸುಪ್ರೀಂಕೋರ್ಟಿನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೋಬಡೆ ಅವರು ಯುವ ವಕೀಲರೊಬ್ಬರು ತಮ್ಮನ್ನು ‘ಯುವರ್ ಆನರ್’ ಎಂಬುದಾಗಿ ಸಂಬೋಧಿಸಿದಾಗ ಸಿಟ್ಟಿಗೆದ್ದಿದ್ದರು.
‘ನಿಮ್ಮ ಮನಸ್ಸಿನಲ್ಲಿ ಏನಿದೆ? ನೀವು ಅಮೆರಿಕದ ಸುಪ್ರೀಂಕೋರ್ಟಿನಲ್ಲಿ ಇದ್ದೇನೆ ಅಂದುಕೊಂಡಿದ್ದೀರೋ ಅಥವಾ ಅಲ್ಲಿನ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ಇದ್ದೇನೆ ಅಂದುಕೊಂಡಿದ್ದೀರೋ?’
ತತ್ ಕ್ಷಣವೇ ಕಾನೂನು ವಿದ್ಯಾರ್ಥಿಯಾಗಿದ್ದ ಯುವ ವಕೀಲರು ನಾಲಿಗೆ ಕಚ್ಚಿಕೊಂಡರು. ‘ತಪ್ಪಾಯಿತು, ಕ್ಷಮಿಸಿ’ ಎಂದು ಕೇಳಿಕೊಂಡು ಯುವ ವಕೀಲರು ‘ಇನ್ನು ಮುಂದೆ ‘ಮೈ ಲಾರ್ಡ್ಸ್ ಪದ ಬಳಸುತ್ತೇನೆ’ ಎಂದು ಉತ್ತರಿಸಿದರು.
‘ಏನಾದರೂ ಸರಿ. ನೀವು ಯಾವ ಪದ ಬಳಸುತ್ತೀರಿ ಎಂದೇ ನಾವು ಗಮನಿಸುತ್ತಿರುವುದಿಲ್ಲ, ಆದರೆ ತಪ್ಪು ಪದಗಳನ್ನು ಬಳಸಬೇಡಿ’ ಎಂದರು ಸಿಜೆಐ.
ಹಿಂದೆ, 2020ರ ಆಗಸ್ಟ್ ತಿಂಗಳಲ್ಲಿ ಕೂಡಾ ಇದೇ ರೀತಿ ನ್ಯಾಯಮೂರ್ತಿಗಳನ್ನು ಉದ್ದೇಶಿಸಿ ‘ಯುವರ್ ಆನರ್’ ಪದ ಬಳಸಿದಾಗ ಸಿಜೆಐ ಬೋಬ್ಡೆ ಸಿಡಿಮಿಡಿಗೊಂಡಿದ್ದರು. ಆಗ ಕೂಡಾ ‘ನೀವೇನು ಅಮೆರಿಕದ ಸುಪ್ರೀಂಕೋರ್ಟಿನ ಮುಂದೆ ಇದ್ದೀರೋ?’ ಎಂಬುದಾಗಿ ಅವರು ವಕೀಲರನ್ನು ಗದರಿದ್ದರು.
ಉನ್ನತ ನ್ಯಾಯಾಲಯಗಳಲ್ಲಿ ಸಾಮಾನ್ಯವಾಗಿ ಬಳಸುವ ‘ಮೈ ಲಾರ್ಡ್’, ‘ಯುವರ್ ಲಾರ್ಡ್ ಶಿಪ್’ ಮುಂತಾದ ಶಿಷ್ಟಾಚಾರದ ಪದಗಳು ನಮ್ಮ ದೇಶಕ್ಕೆ ಬ್ರಿಟಿಷ್ ಆಡಳಿತದ ಬಳುವಳಿಗಳು. ಈ ಪದಗಳ ಬಳಕೆಯನ್ನು ನಿಲ್ಲಿಸಬೇಕು ಎಂದು ಹಲವಾರು ವರ್ಷಗಳಿಂದಲೇ ಪ್ರಯತ್ನಗಳು ನಡೆಯುತ್ತಲೇ ಬಂದಿವೆ.
ಭಾರತದ ವಕೀಲರ ಸಂಘವಾದ ಬಾರ್ ಕೌನ್ಸಿಲ್ ಆಫ್ ಇಂಡಿಯಾಕ್ಕೆ ಇಂತಹ ಪದಗಳ ಬಳಕೆ ಬಗ್ಗೆ ನಿಯಮಗಳನ್ನು ರೂಪಿಸಲು 1961ರ ವಕೀಲರ ಕಾಯ್ದೆಯ ಸೆಕ್ಷನ್ 49 (1)(ಸಿ) ಅಧಿಕಾರ ನೀಡಿದೆ. 2006ರಲ್ಲೇ ಬಾರ್ ಕೌನ್ಸಿಲ್ ಆಫ್ ಇಂಡಿಯಾ , ‘ಮೈಲಾರ್ಡ್’ ‘ಯುವರ್ ಲಾರ್ಡ್ ಶಿಪ್’ ನಂತಹ ಪದಗಳನ್ನು ಬಳಸಲು ಉತ್ತೇಜನ ನೀಡಬಾರದು ಎಂದು ನಿರ್ಣಯ ಕೈಗೊಂಡಿತ್ತು.
2014ರಲ್ಲಿ ಶಿವಸಾಗರ್ ತಿವಾರಿ ಎಂಬ ವಕೀಲರೊಬ್ಬರು, ಇಂತಹ ಪದಗಳು ದೇಶದ ಘನತೆಗೆ ಧಕ್ಕೆ ತರುತ್ತವೆ ಮತ್ತು ಇವು ಗುಲಾಮಿತನದ ಸಂಕೇತವಾದ್ದರಿಂದ
ಅವುಗಳ ಬಳಕೆಯನ್ನು ನಿಷೇಧಿಸಬೇಕು’ ಎಂದು ಸುಪ್ರೀಂಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಆದರೆ ಆದರೆ ನ್ಯಾಯಮೂರ್ತಿಗಳಾದ ಎಚ್.ಎಲ್. ದತ್ತು ಮತ್ತು ಬೋಬ್ಡೆ ಅವರ ಪೀಠವು ‘ಈ ಪದಗಳ ಬಳಕೆ ಎಂದಿಗೂ ಕಡ್ಡಾಯವಾಗಿಲ್ಲ’ ಎಂಬುದಾಗಿ ಹೇಳಿ ಅರ್ಜಿಯನ್ನು ತಿರಸ್ಕರಿಸಿತ್ತು.‘ನ್ಯಾಯಾಲಯವನ್ನು ಗೌರವಯುತವಾಗಿ ಸಂಬೋಧಿಸಿ ಅಷ್ಟೆ. ನೀವು ‘ಸರ್’ ಎಂದರೂ ಒಪ್ಪುತ್ತೇವೆ, ‘ಯುವರ್ ಆನರ್’ ಎಂದರೂ ಒಪ್ಪುತ್ತೇವೆ, ‘ಲಾರ್ಡ್ ಶಿಪ್’ ಎಂದು ಕರೆದರೂ ಒಪ್ಪುತ್ತೇವೆ.’ ಎಂದು ಪೀಠ ಹೇಳಿತ್ತು.
ಆದರೆ, 2019ರಲ್ಲಿ ರಾಜಸ್ಥಾನ ಹೈಕೋರ್ಟ್ ‘ಮೈಲಾರ್ಡ್’ ‘ಯುವರ್ ಲಾರ್ಡ್ ಶಿಪ್’ ಪದಗಳ ಬಳಕೆಯನ್ನು ನಿಷೇಧಿಸಿತ್ತು. ಸಂವಿಧಾನವು ಸಮಾನತೆಯನ್ನು ಪ್ರತಿಪಾದಿಸಿರುವಾಗ ಇಂತಹ ಪದಗಳ ಬಳಕೆ ಸರಿಯಲ್ಲ ಎಂದು ರಾಜಸ್ಥಾನ ಹೈಕೋರ್ಟ್ ಸಾರಿತ್ತು.
ಆದರೂ ನ್ಯಾಯಾಲಯಗಳಲ್ಲಿ ಇಂತಹ ಪದಗಳ ಬಳಕೆ ನಿರಂತರವಾಗಿ ನಡೆಯುತ್ತಲೇ ಇದೆ.
ಬ್ರಿಟಿಷ್ ವಸಾಹತಿನ ಬಳುವಳಿ ಪದಗಳನ್ನು ನಿಷೇಧಿಸುವ ಬಗ್ಗೆ ನ್ಯಾಯಾಲಯಗಳೇ ಹೀಗೆ ದ್ವಂದ್ವದಲ್ಲಿ ಇರುವ ಹೊತ್ತಿನಲ್ಲಿ ಕೇರಳದ ಪುಟ್ಟ ಗ್ರಾಮ ಪಂಚಾಯತಿಯೊಂದು ‘ಸರ್ ಮತ್ತು ಮ್ಯಾಡಮ್’ ನಂತಹ ಬ್ರಿಟಿಷ್ ವಸಾಹತುಶಾಹಿಯ ಪದಗಳ ಬಳಕೆಯನ್ನು ನಿಷೇಧಿಸುವ ಮೂಲಕ ಇಂತಹ ಪದಗಳ ಬಳಕೆಯನ್ನು ನಿಷೇಧಿಸಿದ ದೇಶದ ಮೊತ್ತ ಮೊದಲ ಗ್ರಾಮ ಪಂಚಾಯತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕೇರಳದ ಪಾಲಕ್ಕಾಡ್ ಜಿಲ್ಲೆಯ ಮಾಥುರ್ ಗ್ರಾಮ ಪಂಚಾಯತಿಯು 2021ರ ಆಗಸ್ಟ್ 31ರ ಮಂಗಳವಾರ ‘ಸರ್ ಮತ್ತು ಮ್ಯಾಡಮ್’ ಪದಗಳ ಬಳಕೆಯನ್ನು ನಿಷೇಧಿಸುವ ಚಾರಿತ್ರಿಕ ನಿರ್ಣಯವನ್ನು ಕೈಗೊಂಡು ಇತಿಹಾಸ ಬರೆದಿದೆ.
16 ಸದಸ್ಯರ ಕಾಂಗ್ರೆಸ್ ಆಡಳಿತದ ಗ್ರಾಮ ಪಂಚಾಯಿತಿಯು ಈ ವಾರದ ಆರಂಭದಲ್ಲಿ ಅಂಗೀಕರಿಸಿದ ಸರ್ವಾನುಮತದ ನಿರ್ಣಯಕ್ಕೆ ಏಳು ಸಿಪಿಐ (ಎಂ) ನಾಮನಿರ್ದೇಶಿತರು ಮತ್ತು ಒಬ್ಬ ಬಿಜೆಪಿ ಸದಸ್ಯರ ಬೆಂಬಲ ಲಭಿಸಿದೆ. ಈ ವಿಚಾರದಲ್ಲಿ ಪಕ್ಷಗಳು ಯಾವುದೇ ರಾಜಕೀಯವನ್ನೂ ಎಳೆದುತರಲಿಲ್ಲ ಎಂಬುದೇ ವಿಶೇಷ.
ಸಾಮಾನ್ಯ ಜನರು, ಜನಪ್ರತಿನಿಧಿಗಳು ಮತ್ತು ನಾಗರಿಕ ಸಂಸ್ಥೆಯ ಅಧಿಕಾರಿಗಳ ನಡುವಣ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ ಇಂತಹ ಕ್ರಮ ಕೈಗೊಂಡಿರುವ ಮಾಥುರ್ ಗ್ರಾಮ ಪಂಚಾಯತಿ ಇದನ್ನು ಪಂಚಾಯತಿಯ ಪ್ರಕಟಣಾ ಫಲಕದಲ್ಲಿ ಅಂಟಿಸುವ ಮೂಲಕ ಜಾರಿಗೂ ತಂದಿದೆ.
ಜನರು, ಪಂಚಾಯತಿನ ಯಾವುದೇ ಅಧಿಕಾರಿಯನ್ನು ಉದ್ದೇಶಿಸಿ ‘ಸರ್’ ಅಥವಾ ‘ಮ್ಯಾಡಮ್’ ಎಂಬುದಾಗಿ ಸಂಬೋಧಿಸಬೇಕಾಗಿಲ್ಲ.
ಅಧಿಕಾರಿಯ ಹುದ್ದೆ ಅಥವಾ ಹೆಸರಿನಿಂದಲೇ ಸಂಬೋಧಿಸಬಹುದು. ಅಧಿಕಾರಿಗಳು ವಯಸ್ಸಾದವರೋ ಹಿರಿಯರೋ ಆಗಿದ್ದರೆ ಮಲಯಾಳಂನಲ್ಲಿ ‘ಚೇತಾ’/ ‘ಚೇತನ್’ (ಅಣ್ಣ) ಅಥವಾ ‘ಚೇಚಿ’ (ಅಕ್ಕ) ಇಂತಹ ಸ್ನೇಹಪರ ಪದಗಳನ್ನು ಬಳಸಬಹುದು.‘ಸರ್’ ಅಥವಾ ‘ಮ್ಯಾಡಮ್’ ಪದ ಬಳಸದ್ದಕ್ಕಾಗಿ ಸೇವೆ ನೀಡಲು ಯಾರಾದರೂ ನಿರಾಕರಿಸಿದರೆ ಜನರು ಪಂಚಾಯತ್ ಅಧ್ಯಕ್ಷರು ಅಥವಾ ಕಾರ್ಯದರ್ಶಿಗೆ ದೂರು ನೀಡಬಹುದು.
ಪಂಚಾಯತಿ ನಿರ್ಣಯದ ಪರಿಣಾಮವಾಗಿ ಈಗ ಅಲ್ಲಿನ ಅಧಿಕಾರಿಗಳು ತಮ್ಮ ಮೇಜಿನ ಮೇಲೆ ತಮ್ಮ ಹೆಸರು, ಹುದ್ದೆಗಳ ಫಲಕಗಳನ್ನೂ ಇಡುತ್ತಿದ್ದಾರೆ.
'ಸರ್' ಮತ್ತು 'ಮೇಡಂ' ಗೆ ಪರ್ಯಾಯ ಪದಗಳನ್ನು ನೀಡುವಂತೆ ಪಂಚಾಯತಿಯು ಅಧಿಕೃತ ಭಾಷಾ ಇಲಾಖೆಯನ್ನು ಕೂಡಾ ಕೋರಿದೆ.
ಪ್ರಜಾಪ್ರಭುತ್ವದಲ್ಲಿ ನಾಗರಿಕರೇ ಪ್ರಭುಗಳು. ನಾವೆಲ್ಲರೂ ಅವರಿಗೆ ಸೇವೆ ಒದಗಿಸುವ ಸೇವಕರು. ನಮ್ಮ ಸೇವೆ ಪಡೆಯಲು ಜನರು ನಮ್ಮನ್ನು ಅಂಗಲಾಚುವಂತೆ ಆಗಬಾರದು. ಇದಕ್ಕಾಗಿ, ಪಂಚಾಯತ್ ಪ್ರಸ್ತುತ 'ಅಪೇಕ್ಷಾ ನಮೂನೆ' (ಅರ್ಜಿ ನಮೂನೆ) ಯನ್ನು 'ಅವಕಾಶ ಪತ್ರಿಕೆ' (ಹಕ್ಕು ಪ್ರಮಾಣಪತ್ರ) ಆಗಿ ಬದಲಾಯಿಸಲೂ ಪಂಚಾಯತಿಯು ತೀರ್ಮಾನಿಸಿದೆ ಎಂದೂ ಪಂಚಾಯತಿಯ ಉಪಾಧ್ಯಕ್ಷರು ತಿಳಿಸಿದ್ದಾರೆ.
ಎಂತಹ ಅನುಕರಣೀಯ ಗ್ರಾಮ ಪಂಚಾಯತಿ ಇದು ಅಲ್ಲವೇ?
ವಿಡಿಯೋ ನೋಡಲು ಕೆಳಗೆ ಕ್ಲಿಕ್ ಮಾಡಿರಿ:
-ನೆತ್ರಕೆರೆ ಉದಯಶಂಕರ