ಭಾರತೀಯ ವಿದ್ಯಾಭವನದಲ್ಲಿ ಡಿ.17 ಮತ್ತು 18ರಂದು
ಬೆಂಗಳೂರು: ಖ್ಯಾತ ಹಿಂದೂಸ್ತಾನಿ ಕಲಾವಿದ ಉಸ್ತಾದ್ ಫಯಾಜ್ ಖಾನ್ ಅವರು ಸ್ಥಾಪಿಸಿರುವ ಪರ್ವೀನ್ ಬೇಗಂ ಸ್ಮೃತಿ ಎಜುಕೇಷನ್ ಟ್ರಸ್ಟ್ ವತಿಯಿಂದ ಡಿಸೆಂಬರ್ 17 ಮತ್ತು 18ರಂದು ನಗರದ ಭಾರತೀಯ ವಿದ್ಯಾಭವನದಲ್ಲಿ 4ನೇ ವರ್ಷದ ವಾರ್ಷಿಕೋತ್ಸವ ಹಾಗೂ ಸಂಗೀತ ಕಛೇರಿ ಏರ್ಪಡಿಸಲಾಗಿದೆ.
ತಮ್ಮ ಪತ್ನಿ ಪರ್ವೀನ್ ಬೇಗಂ ಅವರ ಸ್ಮರಣಾರ್ಥ ಫಯಾಜ್ ಖಾನ್ ಅವರು ಸ್ಥಾಪಿಸಿರುವ ಈ ಟ್ರಸ್ಟ್ ಪ್ರತಿ ವರ್ಷ ಎರಡು ದಿನಗಳ ಸಂಗೀತ ಕಾರ್ಯಕ್ರಮ ನಡೆಸುತ್ತ ಬರುತ್ತಿದ್ದು, ಈ ಬಾರಿ ಪಂಡಿತ್ ರಾಜೀವ್ ತಾರಾನಾಥ್ ಅವರ ಸರೋದ್ ವಾದನ ಸಹಿತ ಹಲವಾರು ಸಂಗೀತ ಕಲಾವಿದರ ಕಛೇರಿಗಳು ನಡೆಯಲಿದೆ. 17 ಮತ್ತು 18ರಂದು ಸಂಜೆ 5 ರಿಂದ ರಾತ್ರಿ 9ರ ವರೆಗೆ ಕಾರ್ಯಕ್ರಮಗಳು ಸಭ್ಯರನ್ನು ರಂಜಿಸಲಿವೆ.
17ರಂದು ದಿಲ್ಷಾದ್ ಖಾನ್ ಅವರಿಂದ ಸಾರಂಗಿ, ಹಿರಣ್ಮಯಿ ಶರ್ಮಾ ಅವರಿಂದ ಹಿಂದೂಸ್ತಾನಿ ಗಾಯನ ಹಾಗೂ ಪಂಡಿತ್ ರಾಜೀವ್ ತಾರಾನಾಥ ಅವರಿಂದ ಸರೋದ್ ವಾದನ ನಡೆಯಲಿದೆ.
18ರಂದು ರಶೀದ್ ಮುಸ್ತಾಫ ತಿರಾಕ್ವಾ ಅವರಿಂದ ತಬ್ಲಾ ವಾದನ (ಅಪ್ಪ-ಮಗನಿಂದ ತಬ್ಲಾ ಜುಗಲ್ಬಂದಿ), ಸರ್ಫ್ರಾಜ್ ಖಾನ್ ಅವರಿಂದ ಸಾರಂಗಿ ಹಾಗೂ ಉಸ್ತಾದ್ ಫಯಾಜ್ ಖಾನ್ ಅವರಿಂದ ಹಿಂದೂಸ್ತಾನಿ ಗಾಯನ ನಡೆಯಲಿದೆ.
ಕಲಾವಿದರ ಕಿರು ಪರಿಚಯ
ಉಸ್ತಾದ್ ಫಯಾಜ್ ಖಾನ್
ದೇಶ ಕಂಡ ಅಪ್ರತಿಮ ಹಾಡುಗಾರ, ಸಂಗೀತ ವಾದ್ಯ ಕಲಾವಿದ ಹಾಗೂ ಶ್ರೇಷ್ಠ ಗುರು ಉಸ್ತಾದ್ ಫಯಾಜ್ ಖಾನ್. ಕಿರಾಣಾ ಘರಾನಾದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಇವರು ಆಕಾಶವಾಣಿಯ ಎ ಗ್ರೇಡ್ ಕಲಾವಿದರು. ದೇಶ, ವಿದೇಶಗಳಲ್ಲಿ ಹಲವಾರು ಕಛೇರಿಗಳನ್ನು ನೀಡಿರುವ ಇವರು ಸಿನಿಮಾ ಸಂಗೀತಕ್ಕೂ ವಿಶಿಷ್ಟ ಕೊಡುಗೆ ನೀಡಿದ್ದಾರೆ.
ಪಂಡಿತ್ ರಾಜೀವ್ ತಾರಾನಾಥ
ಜಗದ್ವಿಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ ಅವರು ಅಲಿ ಅಕ್ಬರ್ ಖಾನ್ ಅವರ ಹಾದಿಯಲ್ಲಿ ಪಯಣ ಬೆಳೆಸಿದವರು. ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿರುವ ಇವರು ದೇಶ, ವಿದೇಶಗಳಲ್ಲಿ ಹಲವಾರು ಕಛೇರಿಗಳನ್ನು ನಡೆಸಿಕೊಟ್ಟಿದ್ದಾರೆ.
ಹಿಂದೂಸ್ತಾನಿ ಸಂಗೀತದಲ್ಲಿ ಈಗಾಗಲೇ ಗುರುತಿಸಿಕೊಂಡಿರುವ ಹಿರಣ್ಮಯಿ ಶರ್ಮಾ ಅವರು ಭಕ್ತಿ, ಲಘು ಸಂಗೀತ ಕ್ಷೇತ್ರದಲ್ಲೂ ಗಮನ ಸೆಳೆದಿದ್ದಾರೆ. ಈಗಾಗಲೇ ೨೬ ಸಿನಿಮಾಗಳಲ್ಲಿ ಹಾಡಿದ್ದಾರೆ.
ಸರ್ಫ್ರಾಜ್ ಖಾನ್
ಸರ್ಫ್ರಾಜ್ ಖಾನ್ ಅವರು ತಮ್ಮ ಸಂಗೀತ ಕುಟುಂಬದ ಎಂಟನೇ ತಲೆಮಾರಿನ ಕಲಾವಿದ. ಸಾರಂಗಿ ದಂತಕತೆ ಪದ್ಮವಿಭೂಷಣ ಪಂಡಿತ್ ರಾಮ್ನಾರಾಯಣ್ಜಿ ಅವರ ಶಿಷ್ಯರಾಗಿರುವ ಇವರು ಈಗಾಗಲೇ ದೇಶ, ವಿದೇಶಗಳ ಹಲವು ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ.
ದಿಲ್ಷಾದ್ ಖಾನ್
ಸಾರಂಗಿ ಕ್ಷೇತ್ರದಲ್ಲಿ ಈಗಾಗಲೇ ಖ್ಯಾತರಾಗಿರುವ ಕುಟುಂಬದ ೯ನೇ ಕುಡಿ ದಿಲ್ಷಾದ್ ಖಾನ್. ಚಿಕ್ಕಪ್ಪ ಪದ್ಮಭೂಷಣ ಉಸ್ತಾದ್ ಸುಲ್ತಾನ್ ಖಾನ್ ಸಹಾಬ್ ಜತೆಗೆ ಕಾರ್ಯಕ್ರಮ ನೀಡಿರುವ ದಿಲ್ಷಾದ್ ಅವರು ೨೦೦೯ರಲ್ಲಿ ಪ್ರತಿಷ್ಠಿತ ಗ್ರಾಮಿ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ೫೦೦ಕ್ಕೂ ಅಧಿಕ ಬಾಲಿವುಡ್ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ.
ಷಾರಿಕ್ ಮುಸ್ತಾಫ
ತಬ್ಲಾದಲ್ಲಿ ಫರೂಕಾಬಾದ್ ಘರಾನಾ ಶೈಲಿಯ ಖ್ಯಾತ ಕಲಾವಿದರಾಗಿರುವ ಷಾರಿಕ್ ಮುಸ್ತಾಫ ಅವರು ತಮ್ಮ ತಂದೆ ಉಸ್ತಾದ್ ರಶೀದ್ ಮುಸ್ತಾಫ ಅವರೊಂದಿಗೆ ವೇದಿಕೆಯಲ್ಲಿ ಪರಿಚಿತರಾದವರು. ತಮ್ಮ ತಬ್ಲಾ ಕುಟುಂಬದ ೫ನೇ ಕುಡಿ ಇವರು.
No comments:
Post a Comment