ನಾನು ಮೆಚ್ಚಿದ ವಾಟ್ಸಪ್

Thursday, January 21, 2016

ಇಂದಿನ ಇತಿಹಾಸ History Today ಜೂನ್ 28

 

ಇಂದಿನ ಇತಿಹಾಸ

ಜೂನ್ 28


ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷೆಯಾಗಿ ನಟಿ-ನಿರ್ಮಾಪಕಿಡಾ.ಜಯಮಾಲಾ ಆಯ್ಕೆಯಾದರು. ಈದಿನ ನಡೆದ ಚುನಾವಣೆಯಲ್ಲಿ ನಿರ್ಮಾಪಕ ಭಾ.ಮ.ಹರೀಶ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪ್ರಪ್ರಥಮ ಮಹಿಳಾ ಅಧ್ಯಕ್ಷೆ ಎಂಬ ಹೆಗ್ಗಳಿಕೆಗೆ ಜಯಮಾಲಾ ಪಾತ್ರರಾದರು.

2016: ಹೈದರಾಬಾದ್: ತೆಲಂಗಾಣಕ್ಕೆ ಪ್ರತ್ಯೇಕ ಹೈಕೋರ್ಟ್ ಸ್ಥಾಪಿಸಬೇಕು ಎಂದು ನ್ಯಾಯಾಧೀಶರು ನಡೆಸುತ್ತಿರುವ ಹೋರಾಟ ತೀವ್ರವಾಗಿದ್ದು, ಹೈದರಾಬಾದ್ ಹೈಕೋರ್ಟ್ ಶಿಸ್ತು ಕ್ರಮದ ಆಧಾರದ ಮೇಲೆ 11 ನ್ಯಾಯಾಧೀಶರನ್ನು ಅಮಾನತುಗೊಳಿಸಿತು. ಹಿಂದಿನ ದಿನ  ತೆಲಂಗಾಣ ನ್ಯಾಯಾಧೀಶರ ಅಸೋಸಿಯೇಷನ್ ಅಧ್ಯಕ್ಷ ಕೆ. ರವೀಂದ್ರ ರೆಡ್ಡಿ ಮತ್ತು ಕಾರ್ಯದರ್ಶಿ ವರಪ್ರಸಾದ್ ಅವರನ್ನು ಅಮಾನತು ಮಾಡಲಾಗಿತ್ತು. ಈದಿನ ಮತ್ತೂ 9 ನ್ಯಾಯಾಧೀಶರನ್ನು ಅಮಾನತು ಮಾಡಿ ಹೈದರಾಬಾದ್ ಹೈಕೋರ್ಟ್ ಅದೇಶ ಹೊರಡಿಸಿತು.  11 ನ್ಯಾಯಾಧೀಶರನ್ನು ಅಮಾನತು ಮಾಡಿರುವ ಕ್ರಮವನ್ನು ವಿರೋಧಿಸಿ ತೆಲಂಗಾಣದ ಸುಮಾರು 200 ನ್ಯಾಯಾಧೀಶರು ಸಾಮೂಹಿಕ ರಜೆಯ ಮೇಲೆ ತೆರಳಲು ನಿರ್ಧರಿಸಿದರು.

2016: ಬಾಕು (ಅಜರ್ಬೈಜಾನ್): ಐಎಸ್ಎಸ್ಎಫ್ ವಿಶ್ವ ಶೂಟಿಂಗ್ ಟೂರ್ನಿಯ ಪುರುಷರ 50 ಮೀಟರ್ ರೈಫಲ್ 3 ಪೊಸಿಷನ್ ವಿಭಾಗದಲ್ಲಿ ಭಾರತದ ಸಂಜೀವ್ ರಜಪೂತ್ ಬೆಳ್ಳಿ ಪದಕ ಜಯಿಸಿದರು. ಸಂಜೀವ್ ರಜಪೂತ್ ಫೈನಲ್ನಲ್ಲಿ 456.9 ಅಂಕ ಕಲೆ ಹಾಕುವ ಮೂಲಕ ಬೆಳ್ಳಿ ಪದಕ ಗೆದ್ದುಕೊಂಡರು. ಕ್ರೋಷಿಯಾದ ಪೀಟರ್ ಗ್ರೋಸಾ 457.5 ಅಂಕ ಕಲೆ ಹಾಕಿ ಚಿನ್ನದ ಪದಕ ಗೆದ್ದರೆ, ಕೊರಿಯಾದ ಹುಯೆಂಜುನ್ ಕಿಮ್ 445.5 ಅಂಕ ಕಲೆ ಹಾಕಿ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಅರ್ಹತಾ ಸುತ್ತಿನಲ್ಲಿ ಸಂಜೀವ್ 1167 ಅಂಕ ಕಲೆ ಹಾಕಿ 7ನೇ ಸ್ಥಾನ ಪಡೆಯುವ ಮೂಲಕ ಫೈನಲ್ಗೆ ಅರ್ಹತೆ ಗಿಟ್ಟಿಸಿದ್ದರು. ಆದರೆ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಸಾಧನೆ ಮಾಡಿರುವ ಗಗನ್ ನಾರಂಗ್ 1161 ಅಂಕ ಕಲೆಹಾಕಿ 23ನೇ ಸ್ಥಾನ ಪಡೆದರೆ, ಚೈನ್ ಸಿಂಗ್ 1159 ಅಂಕ ಕಲೆಹಾಕಿ 32ನೇ ಸ್ಥಾನ ಪಡೆಯುವ ಮೂಲಕ ಫೈನಲ್ಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು.

2016: ನವದೆಹಲಿ: ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ ನೂತನ ಶ್ರೇಯಾಂಕ ಪ್ರಕಟಿಸಿದ್ದು, ಭಾರತ ಪುರುಷರ ಹಾಕಿ ತಂಡ ಏಳನೇ ಶ್ರೇಯಾಂಕದಿಂದ ಐದನೇ ಶ್ರೇಯಾಂಕಕ್ಕೆ ಬಡ್ತಿ ಪಡೆದುಕೊಳ್ಳುವ ಮೂಲಕ ತಮ್ಮ ಸ್ಥಾನವನ್ನು ಬಲಪಡಿಸಿಕೊಂಡಿತು. ಲಂಡನ್ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಬೆಳ್ಳಿ ಪದಕ ಗೆದ್ದ ಭಾರತ ತಂಡ ಎರಡು ಸ್ಥಾನ ಬಡ್ತಿ ಪಡೆಯುವ ಮೂಲಕ ಐದನೇ ಸ್ಥಾನ ಅಲಂಕರಿಸಿತು. ನೂತನ ಶ್ರೇಯಾಂಕದ ಪ್ರಕಾರ ಆಸ್ಟ್ರೇಲಿಯಾ ಪ್ರಥಮ ಸ್ಥಾನವನ್ನು ಭದ್ರಪಡಿಸಿಕೊಂಡಿತು. ದ್ವಿತೀಯ ಸ್ಥಾನ ನೆದರ್ಲ್ಯಾಂಡ್ ಹಾಗೂ ತೃತೀಯ ಸ್ಥಾನವನ್ನು ಜರ್ಮನಿ ತನ್ನದಾಗಿಸಿಕೊಂಡವು. ಮುಂಬರುವ ಅಗಸ್ಟ್ನಲ್ಲಿ ನಡೆಯಲಿರುವ ರಿಯೋಡಿ’ಜನೈರೋದಲ್ಲಿ ಒಲಿಂಪಿಕ್ ನಡೆಯಲಿರುವ ಹಿನ್ನೆಲೆ ಭಾರತ ಟಾಪ್ ಫೈವ್ನಲ್ಲಿ ಸ್ಥಾನ ಪಡೆದಿರುವುದು ಆಟಗಾರರ ಆತ್ಮವಿಶ್ವಾಸ ಹೆಚ್ಚಿಸಿತು. ಮಹಿಳಾ ವಿಭಾಗದಲ್ಲಿ ಅರ್ಜೆಂಟೀನಾ ಅಗ್ರ ಸ್ಥಾನ ಪಡೆದಿದ್ದು, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟು ಕೊಂಡಿವೆ. ಭಾರತದ ವನಿತೆಯರು 13ನೇ ಸ್ಥಾನ ಪಡೆದುಕೊಂಡರು.

2016: ಉತಾಹ್: ನಾಸಾದಿಂದ ಜಗತ್ತಿನ ಪ್ರಥಮ ಶಕ್ತಿಶಾಲಿ ರಾಕೆಟನ್ನು ಉತಾಹ್ ಉಡಾವಣೆ ಕೇಂದ್ರದಿಂದ ಜೂನ್ 28ರಂದು (ಭಾರತದಲ್ಲಿ ಜೂನ್ 29) ಉಡಾವಣೆ ಮಾಡಲಿದೆ. ಬಾಹ್ಯಾಕಾಶ ಯಾತ್ರಿಗಳಿಗೆ ಮತ್ತು ಮಂಗಳ ಗೃಹ ಹಾಗೂ ಇನ್ನಿತರ ಬಾಹ್ಯಾಕಾಶ ಯಾತ್ರೆಗಳಿಗೆ ರಾಕೆಟ್ ಸಹಾಯವಾಗಲಿದೆ ಎಂದು ನಾಸಾ ಪ್ರಕಟಿಸಿತು. ಜೂನ್ 28ರ  ಬೆಳಗಿನ ಜಾವ ಉಡಾವಣೆ ಮಾಡಲಾಗುವ ರಾಕೆಟ್ ಜಗತ್ತಿನ ಶಕ್ತಿದಾಯಕ ರಾಕೆಟ್ ಆಗಲಿದೆ ಎಂದು ನಾಸಾ ತಿಳಿಸಿತು. ಬಾಹ್ಯಾಕಾಶದಲ್ಲಿ ಯಾನಿಗಳ ನಿರ್ದಿಷ್ಟ ಕಕ್ಷೆ ಜತೆಗೆ ದತ್ತಾಂಶ ಕೂಡ ಒದಗಿಸಲಿದೆ ಎಂದು ನಾಸಾ ಹೇಳಿದೆ. ಉಡಾವಣೆ ಮಾಡಲಿರುವ ರಾಕೆಟ್ ಪ್ರಯೋಗ ಕಡೆಯ ಸಲದ್ದಾಗಿದ್ದು ಇದರ ನಂತರ 2018 ರಲ್ಲಿ ನಾಸಾ ನಿಗದಿತ ಇಎಮ್1 ಎಂಬ ಹೆಸರಿನಲ್ಲಿ ಅಧಿಕೃತ ಸೇವೆಯನ್ನು ಓರಿಯನ್ ಬಾಹ್ಯಾಕಾಶ ನೌಕೆಗೆ ಜೋಡಣೆ ಮಾಡಲಿದೆ. ಓರಿಯನ್ ನೌಕೆ ಚಂದ್ರಯಾನಕ್ಕೆ ರಾಕೆಟ್ ಜತೆ ಇನ್ನೂ 13 ಉಪಗ್ರಹಗಳನ್ನು 2018 ರಲ್ಲಿ ಹೊತ್ತೊಯ್ಯಲಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಉಪಕರಣಗಳು ಅಥವಾ ಕೂಬ್ಸ್ಯಾಟ್ಸ್ ಎಂದು ಕರೆಯಲ್ಪಡುವ ವಸ್ತುಗಳನ್ನು ಹೊರಲಿದೆ. ಇವು ಮುಂಬರುವ ಉದ್ದೇಶಿತ ಮನುಕುಲದ ಮಂಗಳ ಗೃಹ ವಾಸದ ಬಗ್ಗೆ ನಿಖರ ಮಾಹಿತಿ ಒದಗಿಸುತ್ತವೆ ಎಂದು ನಾಸಾದ ಉಪ ನಿರ್ವಾಹಕ ದಾವಾ ನ್ಯೂಮಾನ್ ಹೇಳಿದರು.

2016: ಜುನಾಗಢ: ಗೋವು ಪವಿತ್ರವಾದ ಪ್ರಾಣಿ, ಕಾಮಧೇನು ಎಂದೆಲ್ಲಾ ಪೂಜಿಸುವ ಪರಿಪಾಠ ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದೆ. ಅದಕ್ಕೆ ಪೂರಕವಾಗಿ ಗೋ ಮೂತ್ರದಲ್ಲಿ ಈಗ ಚಿನ್ನದ ಅಂಶಗಳು ಪತ್ತೆಯಾಗಿರುವುದು ಈದಿನ ಹೊಸ ಸುದ್ದಿ.  ಸತತ 4 ವರ್ಷಗಳ ನಿರಂತರ ಸಂಶೋಧನೆಯ ಫಲಿತಾಂಶವನ್ನು ಜುನಾಗಢ ಕೃಷಿ ವಿವಿ ವಿಜ್ಞಾನಿಗಳು ಈ ದಿನ ಬಹಿರಂಗ ಪಡಿಸಿದರು. ಗಿರ್ ತಳಿಯ 400 ಗೋವುಗಳ ಮೂತ್ರವನ್ನು ಸಂಗ್ರಹಿಸಿ ವಿವಿಯ ಆಹಾರ ಪರೀಕ್ಷಾ ಲ್ಯಾಬ್ನಲ್ಲಿ ಪ್ರಯೋಗಕ್ಕೆ ಒಳಪಡಿಸಲಾಗಿತ್ತು. 1ಲೀಟರ್ ಗೋಮೂತ್ರದಲ್ಲಿ 3 ರಿಂದ 10 ಗ್ರಾಂ ಚಿನ್ನ ಪತ್ತೆಯಾಗಿದೆ. ನೀರಿನಲ್ಲಿ ಕರಗಬಲ್ಲ ಅಯಾನ್ಗಳ ರೂಪದಲ್ಲಿ ಪತ್ತೆಯಾಗಿರುವ ಚಿನ್ನವನ್ನು ರಾಸಾಯನಿಕ ವಿಧಾನದಿಂದ ಘನ ರೂಪಕ್ಕೂ ತರಬಹುದು ಎಂದು ಸಂಶೋಧನಾ ತಂಡದ ಮುಖ್ಯಸ್ಥ, ಬಯೋ ಟೆಕ್ನಾಲಜಿ ವಿಭಾಗ ಅಧ್ಯಕ್ಷ ಡಾ. ಬಿ..ಗೋಲಾಕಿಯಾ ಹೇಳಿದರು. ಚಿನ್ನದ ಬೆಲೆ ಗಗನಕ್ಕೆ ಏರುತ್ತಿರುವಾಗ, ಹಾಲು ಕೊಡುವ ಗೋವುಗಳೂ ಚಿನ್ನವನ್ನೇ ಕೊಟ್ಟರೆ ವನಿತೆಯರ ವೇಷಭೂಷಣ ಇನ್ನಷ್ಟು ಮೆರಗು ಪಡೆಯಬಹುದು.
338ಕ್ಕೂ ಹೆಚ್ಚು ಪ್ರತಿಜೀವಕ ಪತ್ತೆ: ಗ್ಯಾಸ್ ಕ್ರೋಮೆಟೋಗ್ರಾಫಿ-ಮಾಸ್ ಸ್ಪೆಕ್ಟೋಮೆಟ್ರಿ ವಿಧಾನ ಬಳಸಿ ಪ್ರಯೋಗ ಮಾಡಿದ್ದು ಯಶ ನೀಡಿದೆ . 5100 ಸಂಯುಕ್ತಗಳೂ ಗೋಮೂತ್ರದಲ್ಲಿ ಕಂಡುಬಂದಿದೆ. ಇವುಗಳಲ್ಲಿ 338ಕ್ಕೂ ಹೆಚ್ಚು ಪ್ರತಿಜೀವಕ (ಆಂಟಿ ಬಯಾಟಿಕ್)ಗಳಾಗಿದ್ದು, ಜೌಷಧೀಯ ಬಳಕೆಗೆ ಬರುತ್ತದೆ. ಎಮ್ಮೆ, ಕುದುರೆ, ಒಂಟೆ, ಮೇಕೆ ಗಳ ಮೂತ್ರವನ್ನೂ ಪ್ರಯೋಗಕ್ಕೆ ಒಲಪಡಿಸಿದ್ದೆವು. ಗೋಮೂತ್ರದಲ್ಲಿ ಕಂಡುಬಂದ ಯಾವುದೇ ಆಂಟಿ ಬಯಾಟಿಕ್ಗಳು ಅವುಗಳಲ್ಲಿ ಪತ್ತೆಯಾಗಿಲ್ಲ ಎಂದು ವಿಜ್ಞಾನಿಗಳು ವಿವರಿಸಿದರು.

2016: ಶ್ರೀನಗರ: ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಸ್ಥಳೀಯ ನಾಯಕ ಎನಿಸಿಕೊಂಡಿದ್ದ ವ್ಯಕ್ತಿಯೋರ್ವ ಈದಿನ ಮುಂಜಾನೆಯಿಂದ ಕುಪ್ವಾರದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಬಲಿಯಾಗಿದ್ದಾನೆ ಎಂದು ಭದ್ರತಾ ಸಿಬ್ಬಂದಿ ತಿಳಿಸಿದರು. ಮುಜಾಹಿದ್ದೀನ್ ಸಂಘಟನೆಯಲ್ಲಿ ಗುರುತಿಸಿಕೊಂಡು ಪ್ರಮುಖ ನಾಯಕನಾಗಿ ಹೊರಹೊಮ್ಮಿ, ಈಗ ಯೋಧರ ಗುಂಡಿಗೆ ಬಲಿಯಾದ ವ್ಯಕ್ತಿಯನ್ನು ಸಮೀರ್ ವಾನಿ ಎಂದು ಗುರುತಿಸಲಾಯಿತು. ಕಳೆದೆರಡು ದಿನಗಳಿಂದಲೂ ಗಡಿಯಲ್ಲಿ ಉಗ್ರರು ಮತ್ತು ಭಾರತೀಯ ಯೋಧರ ನಡುವೆ ಗುಂಡಿನ ಚಕಮಕಿ ನಡೆಯುತ್ತಲೇ ಇದ್ದು, ಇದೀಗ ಬಲಿಯಾದ ಸಮೀರ್ ಎಂಬಾತ ನಗ್ರಿ ಹಳ್ಳಿಯಲ್ಲಿ ನಡೆಸಲಾದ ಎನ್ಕೌಂಟರ್ ವೇಳೆ ಬಲಿಯಾದ ಬಳಿಕ ಭಾರತೀಯ ಯೋಧರು ನಗ್ರಿಯ ಮನೆ ಮನೆಯಲ್ಲೂ ಶೋಧ ಕಾರ್ಯ ನಡೆಸುತ್ತಿದ್ದು, ಉಗ್ರರು ಅಡಗಿರುವ ಸಾಧ್ಯತೆ ಇದೆ. ಅಲ್ಲದೆ, ಸ್ಥಳೀಯರನ್ನು ಸ್ಥಳಾಂತರಿಸಲಾಗಿದ್ದು, ಉಗ್ರರು ಹೇಗೂ ತಪ್ಪಿಸಿಕೊಳ್ಳಬಾರದೆನ್ನುವ ಕಾರಣಕ್ಕಾಗಿ ಭದ್ರತೆ ಹೆಚ್ಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಸಮೀರ್ ವಾನಿ ಹತ್ಯೆ ಬಳಿಕ ಹಿಂಸಾತ್ಮಕ ಪ್ರತಿಭಟನೆಗಳೂ ನಡೆದವು ಎಂದು ವರದಿಗಳು ತಿಳಿಸಿದವು.
2008: ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷೆಯಾಗಿ ನಟಿ-ನಿರ್ಮಾಪಕಿ ಡಾ.ಜಯಮಾಲಾ ಆಯ್ಕೆಯಾದರು. ಈದಿನ ನಡೆದ ಚುನಾವಣೆಯಲ್ಲಿ ನಿರ್ಮಾಪಕ ಭಾ.ಮ.ಹರೀಶ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪ್ರಪ್ರಥಮ ಮಹಿಳಾ ಅಧ್ಯಕ್ಷೆ ಎಂಬ ಹೆಗ್ಗಳಿಕೆಗೆ ಜಯಮಾಲಾ ಪಾತ್ರರಾದರು.

2007: ದೇಶದ ಆರ್ಥಿಕ ಬುನಾದಿಯನ್ನೇ ನಡುಗಿಸಿದ್ದ ನಕಲಿ ಛಾಪಾ ಕಾಗದ ಪ್ರಕರಣದ ಪ್ರಮುಖ ಆರೋಪಿ ಅಬ್ದುಲ್ ಕರೀಂ ತೆಲಗಿಗೆ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಮೋಕಾ) ನ್ಯಾಯಾಲಯ 13 ವರ್ಷ ಕಠಿಣ ಸಜೆ ಮತ್ತು 100 ಕೋಟಿ ರೂಪಾಯಿ ದಂಡ ವಿಧಿಸಿತು. ಇಷ್ಟೊಂದು ಮೊತ್ತದ ದಂಡ ವಿಧಿಸಿದ್ದು ರಾಷ್ಟ್ರದಲ್ಲೇ ಇದು ಮೊಲನೆಯ ಬಾರಿ ಎನ್ನಲಾಗಿದೆ. ನ್ಯಾಯಾಧೀಶರಾದ ಚಿತ್ರಾ ಬೇಡಿ ಅವರು ಈ ತೀರ್ಪು ನೀಡಿದರು.

2007: ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಹಾಗೂ ಅವರ ಸಂಪುಟದ ಸಹೋದ್ಯೋಗಿ ಸ್ವಾಮಿ ಪ್ರಸಾದ್ ಮೌರ್ಯ ಅವರು ಉತ್ತರ ಪ್ರದೇಶ ವಿಧಾನ ಪರಿಷತ್ತಿಗೆ ಅವಿರೋಧವಾಗಿ ಆಯ್ಕೆಯಾದರು.

2007: ಮೊಘಲರ ಕಾಲದ ಐತಿಹಾಸಿಕ ಕೆಂಪು ಕೋಟೆಯನ್ನು ಯುನೆಸ್ಕೊ ವಿಶ್ವ ಪರಂಪರೆ ಪಟ್ಟಿಗೆ ಸೇರಿಸಿತು. ವಿಶ್ವದಾದ್ಯಂತ ಒಟ್ಟು 45 ಸ್ಮಾರಕಗಳನ್ನು ಈ ಪಟ್ಟಿಗೆ ಸೇರಿಸಲು ಗುರುತಿಸಲಾಗಿತ್ತು. ಕೆಂಪುಕೋಟೆಯ ಜೊತೆಗೆ ಜಪಾನಿನ ಇವಾಮಿ ಜಿನ್ ಜಾನ್ ಸಿಲ್ವರ್ ಮೈನ್, ತುರ್ಕಮೆನಿಸ್ಥಾನದ ಪಾರ್ಥಿಯಾನ ಪೋರ್ಟ್ರೆಸೆಸ್ ಆಫ್ ಆಫ್ ನಿಸಾ, ಹಾಗೂ ಆಸ್ಟ್ರೇಲಿಯಾದ ಸಿಡ್ನಿ ಒಪೆರಾ ಹೌಸ್ ಸಹಾ ವಿಶ್ವ ಪರಂಪರೆ ಪಟ್ಟಿಗೆ ಸೇರ್ಪಡೆಯಾದವು. ಐದನೆಯ ಮೊಘಲ್ ಚಕ್ರವರ್ತಿ ಷಹಜಹಾನ್ ರಾಜಧಾನಿಯನ್ನು ಆಗ್ರಾದಿಂದ ಷಹಜನಾಬಾದಿಗೆ ಸ್ಥಳಾಂತರಗೊಳಿಸಿದಾಗ ಕೆಂಪುಕೋಟೆಯನ್ನು ನಿರ್ಮಿಸಿದ. ಹೊಸ ರಾಜಧಾನಿಯ ಪೂರ್ವದ ಅಂಚಿನಲ್ಲಿ ಕಟ್ಟಿದ ಈ ಕೋಟೆಗೆ ಕೆಂಪು ಬಣ್ಣದ ಕಲ್ಲುಗಳನ್ನು ಬಳಸಿದ್ದರಿಂದ `ಕೆಂಪು ಕೋಟೆ' (ಲಾಲ್ ಕಿಲಾ) ಎಂಬ ಹೆಸರು ಬಂತು. ಯಮುನಾ ನದಿಯ ತಟದಲ್ಲಿರುವ ಈ ಕೆಂಪುಕೋಟೆ 2.5 ಕಿ.ಮೀ. ಉದ್ದವಿದ್ದು, 16ರಿಂದ 33 ಮೀಟರುವರೆಗೆ ಎತ್ತರವಿದೆ. 1638ರಲ್ಲಿ ಈ ಕೋಟೆಯ ನಿರ್ಮಾಣಕಾರ್ಯ ಆರಂಭವಾಗಿ 1648ರಲ್ಲಿ ಪೂರ್ಣಗೊಂಡಿತು.

2007: ಕನ್ನಡದ ಖ್ಯಾತ ಲೇಖಕ ಹಂಪ ನಾಗರಾಜಯ್ಯ ಮತ್ತು ತೆಲುಗಿನ ವೆಟೂರಿ ಆನಂದ ಮೂರ್ತಿ ಅವರು `ಭಾಷಾ ಸಮ್ಮಾನ್' ಪ್ರಶಸ್ತಿಗೆ ಆಯ್ಕೆಯಾದರು.

2006: ವಿಶ್ವಸಂಸ್ಥೆಯ 192ನೇ ಸದಸ್ಯ ರಾಷ್ಟ್ರವಾಗಿ ಮಾಂಟೆನಿಗ್ರೊ ಗಣರಾಜ್ಯ ಹೊರಹೊಮ್ಮಿತು. 191 ಸದಸ್ಯ ಬಲದ ವಿಶ್ವಸಂಸ್ಥೆ ಸಾಮಾನ್ಯ ಅಧಿವೇಶನ ಮಾಂಟೆನಿಗ್ರೊ ಸದಸ್ಯತ್ವವನ್ನು ಒಪ್ಪಿಕೊಂಡಿತು.

1997: ಲಾಸ್ ವೆಗಾಸ್ನಲ್ಲಿ ವಿಶ್ವ ಬಾಕ್ಸಿಂಗ್ ಸಂಘದ ಹೆವಿವೇಯ್ಟ್ ಪ್ರಶಸ್ತಿಗಾಗಿ ಹೋರಾಟದ ಮೂರನೇ ಸುತ್ತಿನ ಬಳಿಕ ಎದುರಾಳಿ ಇವಾಂಡರ್ ಹೋಲಿಫೀಲ್ಡ್ ಅವರ ಕಿವಿ ಕಚ್ಚಿದ್ದಕ್ಕಾಗಿ ಮೈಕ್ ಟೈಸನ್ ಅವರನ್ನು ಬಾಕ್ಸಿಂಗ್ ಕ್ರೀಡೆಯಿಂದ ಅನರ್ಹಗೊಳಿಸಲಾಯಿತು. ನೆವಾಡಾ ಸ್ಟೇಟ್ ಅಥ್ಲೆಟಿಕ್ ಕಮೀಷನ್ ನಂತರ ಟೈಸನ್ ಅವರ ಬಾಕ್ಸಿಂಗ್ ಲೈಸೆನ್ಸನ್ನು ನವೀಕರಿಸಿತು.

1982: ಕಾನ್ಪುರ ಮತ್ತು ಮೈನ್ ಪುರಿ ಜಿಲ್ಲೆಗಳಲ್ಲಿ ನಡೆದ 16 ಜನರ ಕಗ್ಗೊಲೆ ಪ್ರಕರಣದ ಪ್ರತಿಧ್ವನಿಯಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ವಿಶ್ವನಾಥ ಪ್ರತಾಪ್ ಸಿಂಗ್ ರಾಜೀನಾಮೆ ಸಲ್ಲಿಸಿದರು.

1972: ಭಾರತದ ಸಂಖ್ಯಾಶಾಸ್ತ್ರಜ್ಞ ಹಾಗೂ ಭೌತತಜ್ಞ ಪ್ರಶಾಂತ ಚಂದ್ರ ಮಹಾಲನೋಬಿಸ್ (1893-1972) ಅವರು ತಮ್ಮ 79ನೇ ಹುಟ್ಟುಹಬ್ಬಕ್ಕಿಂತ ಒಂದು ದಿನ ಮೊದಲು ನಿಧನರಾದರು. ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ ಸ್ಟಿಟ್ಯೂಟ್ ಹುಟ್ಟು ಹಾಕಿದ ಅವರು ಭಾರತದ ಕೈಗಾರಿಕಾ ಧೋರಣೆ ಮತ್ತು ಎರಡನೆಯ ಪಂಚವಾರ್ಷಿಕ ಯೋಜನೆ (1956-61) ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. 1950ರಲ್ಲಿ ನ್ಯಾಷನಲ್ ಸ್ಯಾಂಪಲ್ ಸರ್ವೆ ನಡೆಸಿದ ಅವರು ಭಾರತದಲ್ಲಿ ಸಂಖ್ಯಾಶಾಸ್ತ್ರ ಸಂಬಂಧಿ ಚಟುವಟಿಕೆಗಳನ್ನು ಸಮನ್ವಯಗೊಳಿಸಲು ಸೆಂಟ್ರಲ್ ಸ್ಟಾಟಿಸ್ಟಿಕಲ್ ಆರ್ಗನೈಸೇಷನ್ ಸ್ಥಾಪಿಸಿದರು.

1948: ಸಂಗೀತ, ಪತ್ರಿಕೋದ್ಯಮ, ಜಾಹೀರಾತು, ಸಾರ್ವಜನಿಕ ಸಂಪರ್ಕ ಇತ್ಯಾದಿ ಹಲವಾರು ಕ್ಷೇತ್ರಗಳಲ್ಲಿ ಬಹುಮುಖ ಪ್ರತಿಭೆ ಹೊಂದಿದ್ದ ಗಾಯತ್ರಿ ಚಂದ್ರಶೇಖರ ಅವರು ನೇತ್ರ ಶಸ್ತ್ರಚಿಕಿತ್ಸಕ ಎಸ್. ಕೃಷ್ಣಮೂರ್ತಿ- ರುಕ್ಮಿಣಿ ದಂಪತಿಯ ಮಗಳಾಗಿ ಮೈಸೂರಿನಲ್ಲಿ ಜನಿಸಿದರು.

1944: ಗ್ರಾಮೀಣ ವೈದ್ಯರಾಗಿ, ಸಾಹಿತಿಯಾಗಿ, ಸಾಹಿತ್ಯ ಸಂಘಟಕರಾಗಿ ಖ್ಯಾತರಾಗಿರುವ ಡಾ. ನಾರಾಯಣ ಭಟ್ಟ ಮೊಗಸಾಲೆ (ಡಾ. ನಾ. ಮೊಗಸಾಲೆ) ಅವರು ವಿಠಲಭಟ್ಟ- ಸರಸ್ವತಿ ದಂಪತಿಯ ಮಗನಾಗಿ ಕಾಸರಗೋಡು ಜಿಲ್ಲೆ ಕೋಳ್ಯೂರು ಗ್ರಾಮದ ಮೊಗಸಾಲೆಯಲ್ಲಿ ಜನಿಸಿದರು. 1966ರಲ್ಲಿ ಕಾಂತಾವರದಲ್ಲಿ ರೈತ ಯುವಕ ಸಂಘ, 1976ರಲ್ಲಿ ಬೇಲಾಡಿಯಲ್ಲಿ ಕಾಂತಾವರ ಕನ್ನಡ ಸಂಘ, 1978ರಲ್ಲಿ ಮೂಡುಬಿದರೆಯಲ್ಲಿ ವರ್ಧಮಾನ ಪ್ರಶಸ್ತಿ ಪೀಠ ಸ್ಥಾಪಿಸಿದ ವೈದ್ಯ ನಾ. ಮೊಗಸಾಲೆ ಅವರು ಈ ಪ್ರಶಸ್ತಿ ಪೀಠದ ಮೂಲಕ ಕರ್ನಾಟಕದಾದ್ಯಂತ ಸಾಹಿತ್ಯ ವಲಯದಲ್ಲಿ ಸುಪರಿಚಿತ ವ್ಯಕ್ತಿ. ಸಾಹಿತ್ಯ ಸಂಘಟನೆಯೊಂದಿಗೆ 14ಕ್ಕೂ ಹೆಚ್ಚು ಸೃಜನಶೀಲ ಸಾಹಿತ್ಯ ಕೃತಿಗಳನ್ನು ರಚಿಸಿದ ಮೊಗಸಾಲೆ ಹಲವಾರು ಕವನ ಸಂಕಲನಗಳನ್ನೂ ಪ್ರಕಟಿಸಿದವರು. ಕಡೆಂಗೋಡ್ಲು ಪ್ರಶಸ್ತಿ, ಬಿ.ಎಚ್. ಶ್ರೀಧರ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಹಾವನೂರು ಪ್ರತಿಷ್ಠಾನ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ವಿಶ್ವೇಶ್ವರಯ್ಯ ನವರತ್ನ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದ ಮೊಗಸಾಲೆ ಅವರನ್ನು ಅಭಿಮಾನಿಗಳು `ಅಯಸ್ಕಾಂತಾವರ' ಅಭಿನಂದನಾ ಗ್ರಂಥ ಸಮರ್ಪಿಸಿ ಉಡುಪಿಯಲ್ಲಿ ಅಭಿನಂದಿಸಿದರು.

1928: ಸಮನ್ವಯ ಕವಿ, ಸೌಜನ್ಯದ ಕವಿ, ಭಾವಜೀವಿ ಎಂದೆಲ್ಲ ಖ್ಯಾತರಾದ ಚೆನ್ನವೀರ ಕಣವಿ ಅವರು ಸಕ್ರಪ್ಪ- ಪಾರ್ವತವ್ವ ದಂಪತಿಯ ಮಗನಾಗಿ ಧಾರವಾಡ ಜಿಲ್ಲೆಯ ಹೊಂಬಳದಲ್ಲಿ ಜನಿಸಿದರು.

1921: ರಾಜಾಮಣಿ ನಾಗರಾಜರಾವ್ ಜನನ.

1921: ಪಿ.ವಿ. ನರಸಿಂಹರಾವ್ ಜನ್ಮದಿನ. ಕಾಂಗ್ರೆಸ್ (ಐ) ಪಕ್ಷದ ಧುರೀಣರಾಗಿದ್ದ ಇವರು 1991ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ (ಐ) ಗೆದ್ದಾಗ ಭಾರತದ ಪ್ರಧಾನಮಂತ್ರಿಯಾದರು.

1919: ಫ್ರಾನ್ಸಿನಲ್ಲಿ `ವಾರ್ಸಿಲ್ಲಿಸ್ ಒಪ್ಪಂದ'ಕ್ಕೆ ಸಹಿ ಮಾಡಿ ಮೊದಲನೇ ಜಾಗತಿಕ ಯುದ್ಧವನ್ನು ಕೊನೆಗೊಳಿಸಲಾಯಿತು.

1914: ಸರ್ಬ್ ರಾಷ್ಟ್ರೀಯವಾದಿ ಗಾವ್ರಿಲೋ ಪ್ರಿನ್ಸಿಪ್ ಆಸ್ಟ್ರಿಯಾದ ಆರ್ಕ್ ಡ್ಯೂಕ್ ಫ್ರಾನ್ಸಿಸ್ ಫರ್ಡಿನಾಂಡ್ ಮತ್ತು ಅವರ ಪತ್ನಿ ಸೋಫಿ ಅವರನ್ನು ಸರಯೇವೊದಲ್ಲಿ ಹತ್ಯೆ ಮಾಡಿದ. ಈ ಘಟನೆ ಮೊದಲ ಜಾಗತಿಕ ಯುದ್ಧಕ್ಕೆ ಕಾರಣವಾಯಿತು.

1461: ಇಂಗ್ಲೆಂಡಿನ ರಾಜನಾಗಿ 4ನೇ ಎಡ್ವರ್ಡನ ಪಟ್ಟಾಭಿಷೇಕ ನಡೆಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Post a Comment