ಇಂದಿನ ಇತಿಹಾಸ
ಜೂನ್ 02
ತಿರುವನಂತಪುರದ ಪಾಳಯಂ ಜುಮ್ಮಾ ಮಸೀದಿ ಆವರಣದಲ್ಲಿ ಮುಸ್ಲಿಂ ಸಂಪ್ರದಾಯದಂತೆ ಖ್ಯಾತ ಲೇಖಕಿ ಕಮಲಾ ಸುರಯ್ಯಾ ಅವರಿಗೆ ಸಹಸ್ರಾರು ಜನರ ಕಂಬನಿ, ಗಣ್ಯರ ಅಂತಿಮ ನಮನ, ಸರ್ಕಾರದ ಪರವಾಗಿ ಕುಶಾಲತೋಪುಗಳ ಗೌರವ ವಂದನೆಯೊಂದಿಗೆ ಅಂತಿಮ ವಿದಾಯ ನೀಡಲಾಯತು.
2009: ಮುಂಬೈ ಮೇಲಿನ ಅಮಾನುಷ ದಾಳಿ ಹಿಂದಿನ 'ಮುಖ್ಯ ಮಿದುಳು' ಹಾಗೂ ಲಷ್ಕರ್ ಎ ತೊಯ್ಬಾ (ಎಲ್‌ಇಟಿ) ಉಗ್ರ ಸಂಘಟನೆಯ ಮಾರುವೇಷದ ಸಂಘಟನೆ ಎಂದು ವಿಶ್ವಸಂಸ್ಥೆಯಿಂದ ನಿಷೇಧಕ್ಕೆ ಒಳಗಾದ ಜೆಯುಡಿ ಮುಖ್ಯಸ್ಥ ಹಫೀಜ್‌ನನ್ನು ಬಿಡುಗಡೆ ಮಾಡಿದ್ದಕ್ಕೆ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಮುಂಬೈ ಮೇಲಿನ ದಾಳಿ ನಂತರ ವಿಶ್ವಸಂಸ್ಥೆ ಜೆಯುಡಿಯನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದಾಗ, ಪಾಕಿಸ್ಥಾನ ಸರ್ಕಾರವು ಕಳೆದ ಡಿಸೆಂಬರಿನಲ್ಲಿ ಹಫೀಜ್‌ನನ್ನು ಬಂಧಿಸಿ ಗೃಹಬಂಧನದಲ್ಲಿ ಇರಿಸಿತ್ತು.
2009: ರಿಯ ಸಂಸದ, ಬುಡಕಟ್ಟು ಸಮುದಾಯದ ನಾಯಕ ಕರಿಯಾ ಮುಂಡಾ ಅವರನ್ನು ಲೋಕಸಭಾ ಉಪಾಧ್ಯಕ್ಷ ಸ್ಥಾನಕ್ಕೆ ಹೆಸರಿಸಲು ಬಿಜೆಪಿಯು ನಿರ್ಧರಿಸಿತು.
2009: ಹಿಂದಿನ ದಿನ ಬೆಳಿಗ್ಗೆ ಕಣ್ಮರೆಯಾದ ಏರ್ ಫ್ರಾನ್ಸ್ ವಿಮಾನದ ಶಂಕಿತ ಅವಶೇಷಗಳು ಬ್ರೆಜಿಲ್‌ನ ಫೆರ್ನಾಂಡೊ ಡೆ ನರೊನ್ಹಾ ದ್ವೀಪ ಸಮೂಹಕ್ಕೆ 650 ಕಿ.ಮೀ. ಈಶಾನ್ಯ ದಿಕ್ಕಿನಲ್ಲಿ ಅಟ್ಲಾಂಟಿಕ್ ಸಾಗರದಲ್ಲಿ ಪತ್ತೆಯಾದವು. ವಿಮಾನ ನಾಪತ್ತೆಯಾದ ದಿಕ್ಕಿನಲ್ಲಿ ಸಮುದ್ರದಲ್ಲಿ ವಿಮಾನದ ಸೀಟುಗಳು ಮತ್ತು ಇತರ ಅವಶೇಷಗಳನ್ನು ತಾನು ಪತ್ತೆಹಚ್ಚಿದುದಾಗಿ ಬ್ರೆಜಿಲ್‌ನ ವಾಯುಪಡೆ ತಿಳಿಸಿತು.
2009: ತಿರುವನಂತಪುರದ ಪಾಳಯಂ ಜುಮ್ಮಾ ಮಸೀದಿ ಆವರಣದಲ್ಲಿ ಮುಸ್ಲಿಂ ಸಂಪ್ರದಾಯದಂತೆ ಖ್ಯಾತ ಲೇಖಕಿ ಕಮಲಾ ಸುರಯ್ಯಾ ಅವರಿಗೆ ಸಹಸ್ರಾರು ಜನರ ಕಂಬನಿ, ಗಣ್ಯರ ಅಂತಿಮ ನಮನ, ಸರ್ಕಾರದ ಪರವಾಗಿ ಕುಶಾಲತೋಪುಗಳ ಗೌರವ ವಂದನೆಯೊಂದಿಗೆ ಅಂತಿಮ ವಿದಾಯ ನೀಡಲಾಯತು.
2009: ರಾಹುಲ್ ಗಾಂಧಿ, ವರುಣ್ ಗಾಂಧಿ, ಮುಲಾಯಂ ಸಿಂಗ್, ರಾಜನಾಥ್ ಸಿಂಗ್ ,ಕಲ್ಯಾಣ್ ಸಿಂಗ್.. ಹೀಗೆ ಹಲವು ಗಣ್ಯರು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಹುಲ್ ಗಾಂಧಿ ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇದಕ್ಕೆ ಮುನ್ನ ಪ್ರತಿಪಕ್ಷ ನಾಯಕ ಎಲ್.ಕೆ. ಅಡ್ವಾಣಿ ಅವರಿಗೆ ಹಸ್ತಲಾಘವ ನೀಡಿದರು. ಮಗ ಪ್ರಮಾಣ ವಚನ ಸ್ವೀಕರಿಸುವುದನ್ನು ತಾಯಿ ಸೋನಿಯಾ ಸೋದರಿ ಪ್ರಿಯಾಂಕಾ, ಅವರ ಪತಿ ರಾಬರ್ಟ್ ವಾಧ್ರಾ ವೀಕ್ಷಿಸಿದರು.
2009: ಮಾತನಾಡುತ್ತಿರುವ ವ್ಯಕ್ತಿಯೊಬ್ಬನ ವಿಡಿಯೊ ತುಣುಕುಗಳನ್ನು ಇಟ್ಟುಕೊಂಡು ಕಂಪ್ಯೂಟರ್ ಸಹಾಯದಿಂದ ಅಂತಹ ವ್ಯಕ್ತಿಯ ಲಿಂಗವನ್ನು ಕಂಪ್ಯೂಟರ್ ಪರದೆಯಲ್ಲಿ ಬದಲಿಸಬಲ್ಲ ಸಾಫ್ಟ್‌ವೇರನ್ನು ಅಭಿವೃದ್ಧಿ ಪಡಿಸಿರುವುದಾಗಿ ವಿಜ್ಞಾನಿಗಳು ಲಂಡನ್ನಿನಲ್ಲಿ ಪ್ರಕಟಿಸಿದರು. ವ್ಯಕ್ತಿಯ ಮುಖದ ಮೇಲಿನ 30ಕ್ಕೂ ಅಧಿಕ ಬಗೆಯ ಭಾವನೆಗಳನ್ನು (ಉದಾ:ಅಚ್ಚರಿ,ಮುಗುಳ್ನಗು, ಸಿಟ್ಟು) ಹಾಗೂ ಇಂತಹ ಭಾವಗಳ ಸಂದರ್ಭದಲ್ಲಿ ಕಣ್ಣು, ಮೂಗು, ಬಾಯಿ ಮತ್ತಿತರ ಅವಯವಗಳ ಚಲನೆಗಳನ್ನು ದಾಖಲಿಸಲಾಗುತ್ತದೆ. ಪ್ರತಿಯೊಬ್ಬನ ಮುಖದ ಚಹರೆ, ಮುಖದ ಭಾವಗಳನ್ನು ಕಂಪ್ಯೂಟರಿಗೆ ಅಳವಡಿಸಿಕೊಂಡ ಬಳಿಕ ಅದು ಅಂತಹ ವ್ಯಕ್ತಿಯ ಮುಖದ ಭಾವವನ್ನು ಎದುರಿಗಿರುವ ಇನ್ನೊಬ್ಬ ವ್ಯಕ್ತಿಯ ಮುಖದ ಭಾವಕ್ಕೆ ಬದಲಿಸುತ್ತದೆ. ವ್ಯಕ್ತಿಯ ಧ್ವನಿಯ ಸಂಯೋಜನೆಯೇ ಇಲ್ಲಿ ಪ್ರಮುಖ ಅಂಶವಾಗಿರುವುದರಿಂದ ಹೆಣ್ಣನ್ನು ಎದುರಿಗಿರುವ ಗಂಡಿನಂತೆ ಹಾಗೂ ಗಂಡನ್ನು ಎದುರಿಗಿರುವ ಹೆಣ್ಣಿನಂತೆ ಪರದೆಯಲ್ಲಿ ಚಿತ್ರಿಸುವುದು ಸಾಧ್ಯ. ಕಂಪ್ಯೂಟರ್ ವಿಜ್ಞಾನಿಗಳಾದ ಬಾರಿಜಾನ್ ತಿಯಾಬಾಲ್ಡ್ ಮತ್ತು ಇಯಾನ್ ಮ್ಯಾಥ್ಯೂಸ್ ಈ ಸಂಶೋಧನೆ ನಡೆಸಿದ್ದಾರೆ ಎಂದು 'ನ್ಯೂ ಸೈಂಟಿಸ್ಟ್' ವರದಿ ಮಾಡಿತು. ಈ ಪ್ರಯೋಗಕ್ಕಾಗಿ ಒಟ್ಟು 30 ಸ್ವಯಂಸೇವಕರನ್ನು ಪ್ರಯೋಗಕ್ಕೆ ಗುರಿಪಡಿಸಲಾಗಿತ್ತು. ಒಬ್ಬರು ಇನ್ನೊಬ್ಬರೊಂದಿಗೆ ಮಾತನಾಡುತ್ತಿದ್ದುದನ್ನು ವಿಡಿಯೊ ಚಿತ್ರೀಕರಣ ಮಾಡುತ್ತ ಅವರ ಮುಂದೆಯೇ ಬದಲಾದ ಮುಖಚಹರೆಯನ್ನು ತೋರಿಸಿ ಅಚ್ಚರಿ ಮೂಡಿಸಲಾಗಿತ್ತು. ಲಿಂಗ ಬದಲಾವಣೆಗೆ ಕಂಪ್ಯೂಟರ್ ತೆಗೆದುಕೊಳ್ಳುವ ಸಮಯ ಕೇವಲ 150 ಮಿಲಿ ಸೆಕೆಂಡುಗಳು.
2009: ನಾಲ್ಕು ಶತಕೋಟಿ ವರ್ಷಗಳ ಹಿಂದೆ ಭೂಮಿಯ ಮೇಲೆ ದೊಡ್ಡಪ್ರಮಾಣದಲ್ಲಿ ಉಲ್ಕೆಗಳು ಅಪ್ಪಳಿಸ್ದಿದರಿಂದಲೇ ಭುವಿಯಲ್ಲಿ ಜೀವ ಸಂಕುಲ ನೆಲೆಸಲು ಸಾಧ್ಯವಾಗಿರಬೇಕು ಎಂಬುದನ್ನು ನೂತನ ಅಧ್ಯಯನವೊಂದು ಕಂಡುಕೊಂಡಿತು. ಲಂಡನ್‌ನ ಇಂಪೀರಿಯಲ್ ಕಾಲೇಜಿನ ಸಂಶೋಧಕರ ತಂಡವೊಂದು 'ಲೇಟ್ ಹೆವಿ ಬೊಂಬಾರ್ಡ್‌ಮೆಂಟ್' (ಎಲ್‌ಎಚ್‌ಬಿ) ಹೆಸರಿನ ಪ್ರಾಚೀನ ಉಲ್ಕಾಪಾತದ ಬಗ್ಗೆ ಅಧ್ಯಯನ ನಡೆಸುತ್ತಿದ್ದ ವೇಳೆ ಇದನ್ನು ಕಂಡುಕೊಂಡಿತು. ನಾಲ್ಕು ಶತ (ನಾನ್ನೂರು) ಕೋಟಿ ವರ್ಷಗಳ ಹಿಂದೆ ಸಂಭವಿಸಿದ ಈ ಉಲ್ಕಾಪಾತದ ಸಂದರ್ಭದಲ್ಲಿ 20 ದಶಲಕ್ಷ ವರ್ಷಗಳ ಅವಧಿಯಲ್ಲಿ ಲಕ್ಷಾಂತರ ಬಂಡೆಗಳು ಭೂಮಿ ಮತ್ತು ಮಂಗಳ ಗ್ರಹದ ಮೇಲೆ ಅಪ್ಪಳಿಸಿದ್ದವು. ಈ ಉಲ್ಕಾಪಾತದ ವೇಳೆ ಪ್ರತಿ ವರ್ಷ 10 ಶತಕೋಟಿ ಟನ್ ಕಾರ್ಬನ್ ಡೈಆಕ್ಸೈಡ್ ಮತ್ತು 10 ಶತಕೋಟಿ ಟನ್ ನೀರಿನ ತೇವಾಂಶ ಭೂಮಿಯ ವಾತಾವರಣ ಸೇರುವಂತಾಯಿತು. ಇಷ್ಟು ದೊಡ್ಡ ಪ್ರಮಾಣದಲ್ಲಿ ಇಂಗಾಲ ಮತ್ತು ನೀರಿನ ಅಂಶ ಭೂಮಿ ಮತ್ತು ಮಂಗಳನಲ್ಲಿ ಬಿಡುಗಡೆಯಾದುದರಿಂದ ಈ ಎರಡೂ ಗ್ರಹಗಳ ವಾತಾವರಣ ಬಿಸಿ ಮತ್ತು ತೇವಗೊಂಡಿತು. ಇದರಿಂದ ಜೀವ ಸಂಕುಲ ಇಲ್ಲಿ ಕುಡಿಯೊಡೆಯಿತು ಎಂದು ಅಧ್ಯಯನದಿಂದ ಕಂಡುಕೊಳ್ಳಲಾಯಿತು. ಭೂಮಿಗಿದ್ದ ಸೌಭಾಗ್ಯ ಮಂಗಳನಿಗೆ ಇರಲಿಲ್ಲ. ಭೂಮಿಗೆ ಇರುವಂತೆ ಮಂಗಳನಿಗೆ ಸೂರ್ಯನ ಕಿರಣದಿಂದ ಸಂರಕ್ಷಣೆ ಮಾಡಿಕೊಳ್ಳಲು ಗುರಾಣಿ ಇಲ್ಲ. ಹೀಗಾಗಿ ಅದರ ವಾತಾವರಣದಿಂದ ಈ ಅಂಶಗಳು ನಾಶವಾದವು ಎಂದು ಸಂಶೋಧನಾ ತಂಡದ ಮುಖ್ಯಸ್ಥರಾದ ಡಾ. ರಿಚರ್ಡ್ ಕೋರ್ಟ್ ಮತ್ತು ಪ್ರೊ. ಮಾರ್ಕ್ ಸೆಫ್ಟನ್ ಹೇಳಿದರು.
2009: ಹಿರಿಯ ಜಾನಪದ ಸಾಹಿತಿ, ರಾಜ್ಯೋತ್ಸವ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಡಾ.ನಿಂಗಣ್ಣ ಸಣ್ಣಕ್ಕಿ (70) ಈದಿನ ಗೋಕಾಕದಲ್ಲಿ ಅನಾರೋಗ್ಯದಿಂದಾಗಿ ನಿಧನರಾದರು. ನಿಂಗಣ್ಣ ಸಣ್ಣಕ್ಕಿ 40ಕ್ಕೂ ಹೆಚ್ಚು ಜಾನಪದ ಕೃತಿಗಳನ್ನು ರಚಿಸಿದ್ದರು. ಶಿಕ್ಷಕರಾಗಿ, ಪ್ರೌಢಶಾಲಾ ಮುಖ್ಯಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಇವರು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಗೆ ಮೂರು ಬಾರಿ ಸದಸ್ಯರಾಗಿದ್ದರು. ಸಣ್ಣಕ್ಕಿ ಅವರಿಗೆ 1982ರಲ್ಲಿ ಪಿಎಚ್‌ಡಿ ಪದವಿ, 1983ರಲ್ಲಿ ಜಾನಪದ ಕೇಂದ್ರ ಪ್ರಶಸ್ತಿ, 1987ರಲ್ಲಿ ಕರ್ನಾಟಕ ರಾಜ್ಯ ಆದರ್ಶ ಶಿಕ್ಷಕ ಪ್ರಶಸ್ತಿ, 1989ರಲ್ಲಿ ಮಾದರಿ ಶಿಕ್ಷಕ ರಾಷ್ಟ್ರ ಪ್ರಶಸ್ತಿ, 1996ರಲ್ಲಿ ಮೈಸೂರು ಜಾನಪದ ಪ್ರಶಸ್ತಿ, 1997ರಲ್ಲಿ ಬೆಳಗಾವಿ ರಾಜ್ಯೋತ್ಸವ ಗೌರವ, 2002ರಲ್ಲಿ ಅಂತರರಾಷ್ಟ್ರೀಯ ಸಂಸ್ಥೆ ನೀಡುವ ವಿಶ್ವ ಮಾನವ ಪ್ರಶಸ್ತಿ ಮತ್ತು 2003 ರಲ್ಲಿ 'ಜಾನಪದ ತರಂಗಗಳು' ಕೃತಿಗೆ ಸಿರಿಗನ್ನಡ ಪ್ರಶಸ್ತಿ ಲಭಿಸಿದ್ದವು.
2008: ತೈಲ ಬೆಲೆ ಏರಿಕೆಯಿಂದ ಆಗುವ ದುಷ್ಪರಿಣಾಮಗಳಿಂದ ಗ್ರಾಹಕರಿಗೆ ಸಂಪೂರ್ಣ ರಕ್ಷಣೆ ಒದಗಿಸುವ ಸ್ಥಿತಿಯಲ್ಲಿ ಸರ್ಕಾರ ಇಲ್ಲ ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರು ನವದೆಹಲಿಯಲ್ಲಿ ಹೇಳಿದರು. ಎಡಪಕ್ಷಗಳು ಸೇರಿದಂತೆ ವಿರೋಧ ಪಕ್ಷಗಳಿಂದ ಬೆಲೆ ಏರಿಕೆಗೆ ಸಂಬಂಧಿಸಿದಂತೆ ತೀವ್ರ ದಾಳಿಗೆ ತುತ್ತಾದ ಪ್ರಧಾನಿ ಅಸ್ಸೋಚೆಮ್ ವಾರ್ಷಿಕ ಸಭೆಯಲ್ಲಿ ಮಾತನಾಡುತ್ತಾ ಈ ಅಸಹಾಯಕತೆ ವ್ಯಕ್ತ ಪಡಿಸಿದರು. 'ಸಬ್ಸಿಡಿ ಮೊತ್ತ ಮೊತ್ತವನ್ನು ಇನ್ನಷ್ಟು ಹೆಚ್ಚಿಸಲು ಸಾಧ್ಯವಿಲ್ಲ, ಅಥವಾ ಉತ್ಪನ್ನಗಳು ಮತ್ತು ತೈಲ ಬೆಲೆಗಳ ವಿಶ್ವ ವ್ಯಾಪಿ ಉಬ್ಬರದಿಂದ ಆಗುವ ದುಷ್ಪರಿಣಾಮಗಳಿಂದ ಸಂಪೂರ್ಣವಾಗಿ ರಕ್ಷಿಸಲೂ ಸರ್ಕಾರಕ್ಕೆ ಸಾಧ್ಯವಿಲ್ಲ' ಎಂದು ಅವರು ಹೇಳಿದರು.
2008: ಒಂದೂವರೆ ವರ್ಷಕ್ಕೂ ಹಿಂದೆ ಅಪಹೃತಳಾಗಿದ್ದ ಮಹಿಳೆಯೊಬ್ಬಳು ಹಿಜ್ಬುಲ್ ಮುಜಾಹಿದೀನ್ ಉಗ್ರಗಾಮಿಗಳಿಗೆ ಚಳ್ಳೆಹಣ್ಣು ತಿನ್ನಿಸಿ ಅವರ ಕಪಿಮುಷ್ಟಿಯಿಂದ ಪಾರಾಗಿ ಬಂದ ಘಟನೆ ಜಮ್ಮುವಿನಲ್ಲಿ ಈದಿನ ಘಟಿಸಿತು. ಹಿಜ್ಬುಲ್ ಉಗ್ರಗಾಮಿಗಳು 2006ರ ನವೆಂಬರ್ 17ರಂದು ಪರ್ವೀನ್ ಬೇಗಂ ಎಂಬ 24 ವರ್ಷದ ಮಹಿಳೆಯೊಬ್ಬಳನ್ನು ಭಾದೇರ್ವಾಹ ಪ್ರದೇಶದ ಬಡೋಸೊ ಗ್ರಾಮದಿಂದ ಅಪಹರಿಸಿದ್ದರು. ಪರ್ವೀನ್ ಕುಟುಂಬ ಸದಸ್ಯರು ಆಕೆ ಕಣ್ಮರೆಯಾಗಿರುವ ಬಗ್ಗೆ ಠಾಣೆಗೆ ದೂರು ನೀಡಿದ್ದರು. ಸ್ವಯಂಘೋಷಿತ ಹಿಜ್ಬುಲ್ ಕಮಾಂಡರ್ ಮಂಝೂರ ಗನೀ ಆಕೆಯನ್ನು ಅಪಹರಿಸಿ, ನಂತರ ಸ್ವಯಂಘೋಷಿತ ಉಗ್ರಗಾಮಿ ಜಿಲ್ಲಾ ಕಮಾಂಡರ್ ಮತ್ತು ಹಣಕಾಸು ಮುಖ್ಯಸ್ಥ ಎಚ್.ಎಂ. ಶಮೀಮ್ ಥೂಲ್ ವಶಕ್ಕೆ ಒಪ್ಪಿಸಿದ್ದ. ಥೂಲ್ ಈ ವರ್ಷ ಏಪ್ರಿಲಿನಲ್ಲಿ ಹತನಾಗಿದ್ದ. ಈದಿನ ಉಗ್ರಗಾಮಿಗಳ ಕೈಸೆರೆಯಿಂದ ತಪ್ಪಿಸಿಕೊಂಡ ಬಳಿಕ ಪರ್ವೀನ್ ಬೇಗಂ ದೋಡಾ ಜಿಲ್ಲೆಯ ಪೊಲೀಸ್ ಠಾಣೆಯೊಂದಕ್ಕೆ ಬಂದು ಸೇರಿಕೊಳ್ಳುವಲ್ಲಿ ಯಶಸ್ವಿಯಾದಳು.
2008: ಪಾಕಿಸ್ಥಾನದ ರಾಜಧಾನಿ ಇಸ್ಲಾಮಾಬಾದಿನಲ್ಲಿ ಇರುವ ಡೆನ್ಮಾರ್ಕ್ ದೇಶದ ರಾಯಭಾರಿ ಕಚೇರಿಯ ಎದುರು ಭಾರಿ ಸ್ಫೋಟ ಸಂಭವಿಸಿ ಎಂಟು ಮಂದಿ ಮೃತರಾಗಿ ಇತರ 6 ಮಂದಿ ಗಾಯಗೊಂಡರು.
2008: ಕೇಂದ್ರ ಕಾನೂನು ಸಚಿವಾಲಯವು ಗುರ್ಜರರ ಮೀಸಲಾತಿಯ ಚೆಂಡನ್ನು (ವಿಷಯವನ್ನು) ರಾಜಸ್ಥಾನ ಸರ್ಕಾರದ ಅಂಗಳಕ್ಕೆ ವಾಪಸ್ ತಳ್ಳಿತು. ಯಾವುದೇ ಸಮುದಾಯಕ್ಕೆ ಮೀಸಲಾತಿ ನೀಡುವ ಅವಶ್ಯಕತೆ ಕುರಿತು ಆಯಾ ರಾಜ್ಯಗಳೇ ನಿರ್ಧಾರ ಕೈಗೊಳ್ಳಬೇಕೆಂದು ಅದು ತಿಳಿಸಿತು. ಗುರ್ಜರರಿಗೆ ಬುಡಕಟ್ಟು ವರ್ಗದ (ಎಸ್ಟಿ) ಸ್ಥಾನಮಾನ ನೀಡಿ ಶೇ 4ರಿಂದ 6ರಷ್ಟು ಮೀಸಲಾತಿ ಕೋಟಾ ಒದಗಿಸಲು ಕ್ರಮ ಕೈಗೊಳ್ಳುವಂತೆ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಪ್ರಧಾನಿಗೆ ಮನವಿ ಮಾಡಿದ್ದರು. ತಮ್ಮನ್ನು ಪರಿಶಿಷ್ಟ ವರ್ಗ ಎಂಬುದಾಗಿ ಘೋಷಿಸಿ ಮೀಸಲಾತಿ ಕಲ್ಪಿಸಲು ಒತ್ತಾಯಿಸಿ ರಾಜಸ್ಥಾನ, ಹರಿಯಾಣ, ಉತ್ತರಪ್ರದೇಶ, ದೆಹಲಿ ಮುಂತಾದ ಕಡೆ ಗುರ್ಜರರು ನಡೆಸಿದ ಪ್ರತಿಭಟನೆಯಲ್ಲಿ ಸುಮಾರು 43 ಮಂದಿ ಮೃತರಾಗಿದ್ದರು.
2008: ಗುರುವಾಯೂರಿನ ಖ್ಯಾತ ಶ್ರೀಕೃಷ್ಣ ದೇವಾಲಯದ ಗರ್ಭಗುಡಿಯಲ್ಲಿ ಬ್ಲೇಡಿನ ತುಂಡೊಂದು ಪತ್ತೆಯಾದ ಹಿನ್ನೆಲೆಯಲ್ಲಿ ಇಡೀ ದೇಗುಲವನ್ನೇ ಸಂಪೂರ್ಣವಾಗಿ ಶುದ್ಧೀಕರಿಸಿದ ಪ್ರಸಂಗ ನಡೆಯಿತು. ಈ ಬ್ಲೇಡು ದೇವರ ಅಲಂಕಾರಕ್ಕೆಂದು ಬಳಸುವ ಹೂವಿನ ಹಾರದ ಮೂಲಕ ಗರ್ಭಗುಡಿ ಸೇರಿರಬಹುದೆಂದು ಶಂಕಿಸಲಾಯಿತು. ದೇವಾಲಯಕ್ಕೆ ವಂಶಪಾರಂಪರ್ಯವಾಗಿ ಹೂವಿನ ಹಾರ ಸರಬರಾಜು ಮಾಡುವ 17 ಕುಟುಂಬಗಳಿವೆ. ಇವರು ಪೂಜೆಗೆ ಹೂವು ಹೊತ್ತು ತರುವ ಪ್ಲಾಸ್ಟಿಕ್ ಮತ್ತು ಗೋಣಿ ಚೀಲಗಳನ್ನು ಕೊಯ್ಯಲು ಬ್ಲೇಡ್ ಬಳಸಲಾಗುತ್ತದೆ. ಇದರೊಂದಿಗೆ ಬ್ಲೇಡ್ ಗರ್ಭಗುಡಿ ಸೇರಿರಬಹುದು ಎಂದು ಶಂಕಿಸಲಾಯಿತು.
2008: ತೀವ್ರ ಸ್ವರೂಪದ ವಿದ್ಯುತ್ ಸಮಸ್ಯೆ ಎದುರಿಸಿದ ಪಾಕಿಸ್ಥಾನವು ಹಗಲು ಹೊತ್ತನ್ನು ಒಂದು ಗಂಟೆ ಕಾಲ ವಿಸ್ತರಿಸಲು ನಿರ್ಧರಿಸಿತು. `ಹಗಲಿನ ಸಮಯ ಉಳಿಸುವ' (ಡಿಎಸ್ಟಿ) ಪರಿಕಲ್ಪನೆಯನ್ನು ದೇಶದಾದ್ಯಂತ ಜಾರಿಗೆ ತರಲಾಯಿತು. ಹಿಂದಿನ ದಿನ ಮಧ್ಯರಾತ್ರಿಯಲ್ಲಿ ಗಡಿಯಾರವನ್ನು ಒಂದು ಗಂಟೆಯಷ್ಟು ಮುಂದಕ್ಕೆ ಹಾಕಲಾಯಿತು.
2008: ತುರ್ಕ್ಮೆನಿಸ್ಥಾನದ ಗಡಿಗೆ ಹೊಂದಿಕೊಂಡ ಆಫ್ಘಾನಿಸ್ಥಾನದ ಬದ್ಘಿನ್ಸ್ ಪ್ರಾಂತ್ಯದಲ್ಲಿ ನಡೆದ ನ್ಯಾಟೊ ವಾಯುದಾಳಿಯಲ್ಲಿ ಕನಿಷ್ಠ 50 ಜನ ತಾಲಿಬಾನ್ ಉಗ್ರರು ಹತರಾಗಿದ್ದಾರೆ ಎಂದು ಆಫ್ಘಾನ್ ಅಧಿಕಾರಿಗಳು ತಿಳಿಸಿದರು. ಹಿಂದಿನ ದಿನ ರಾತ್ರಿ ಸುಮಾರು 300ರಿಂದ 400 ತಾಲಿಬಾನ್ ಉಗ್ರರು ಬಾಲಾ ಮುರ್ಫಾಬ್ ಜಿಲ್ಲೆಯಲ್ಲಿ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ನ್ಯಾಟೊ ವಾಯು ದಾಳಿ ನಡೆಸಿದಾಗ 50 ಜನ ಉಗ್ರರು ಮೃತರಾದರು.
2008: ಹತ್ತುವರ್ಷಗಳ ಹಿಂದೆ ಪಾಕಿಸ್ಥಾನದ ಗಡಿ ಪ್ರದೇಶದೊಳಗೆ ಆಕಸ್ಮಿಕವಾಗಿ ನುಸುಳಿ ಅಲ್ಲಿನ ಜೈಲಿನಲ್ಲಿ ಬಂಧನದಲ್ಲಿದ್ದ ಜಮ್ಮುವಿನ ಯುವಕ ಮಂಗಲ್ ಸಿಂಗ್ನನ್ನು ಬಿಡುಗಡೆ ಮಾಡಲಾಯಿತು. ಆತ ಸುರಕ್ಷಿತವಾಗಿ ಮನೆಸೇರಿದ. 1997ರ ಫೆಬ್ರುವರಿ 17ರಂದು ಈತ ಪಾಕ್ ವಶವಾಗಿದ್ದ.
2008: ವೈದ್ಯಕೀಯ ಪ್ರವಾಸೋದ್ಯಮ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರಿನ ವೊಕಾರ್ಟ್ ಆಸ್ಪತ್ರೆ ಜಾಗತಿಕ ಮಟ್ಟದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿ `ಅಂತರರಾಷ್ಟ್ರೀಯ ಮಟ್ಟದ ಉತ್ತಮ ಆಸ್ಪತ್ರೆ' ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ವೆಬ್ಸೈಟ್ ಮೂಲಕ ರೋಗಿಗಳಿಗೆ ಮಾಹಿತಿ ನೀಡುವ ವಿಷಯದಲ್ಲಿ ಮಾಡಿರುವ ಸಾಧನೆಯನ್ನು ಮೆಚ್ಚಿ ಅಮೆರಿಕದಲ್ಲಿ ನಡೆದ ವಿಶ್ವ ಆರೋಗ್ಯ ಸಮ್ಮೇಳನದಲ್ಲಿ ಈ ಪ್ರಶಸ್ತಿಯನ್ನು ನೀಡಲಾಯಿತು ಎಂದು ಆಸ್ಪತ್ರೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿಶಾಲ ಬಾಲಿ ಅವರು ತಿಳಿಸಿದರು.
2008: ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಜನತಾದಳ (ಯು) ಸೋಲಿಗೆ ನೈತಿಕ ಹೊಣೆ ಹೊತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಬಿ.ಸೋಮಶೇಖರ್ ರಾಜೀನಾಮೆ ನೀಡಿದರು. ತೆರವಾದ ಈ ಸ್ಥಾನಕ್ಕೆ ವಿಧಾನಪರಿಷತ್ ಸದಸ್ಯ ಡಾ. ಎಂ.ಪಿ.ನಾಡಗೌಡ ಅವರನ್ನು ನೇಮಕ ಮಾಡಲಾಯಿತು.
2008: ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮವು ಸಾಲ ಯೋಜನೆಯ ಅನುಷ್ಠಾನಕ್ಕೆ ನೀಡುವ `ಅತ್ಯುತ್ತಮ ಕಾರ್ಯಕ್ಷಮತಾ ಪ್ರಶಸ್ತಿ-1'ಯನ್ನು ರಾಜ್ಯದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು ಸತತವಾಗಿ ಮೂರನೇ ಬಾರಿಗೆ ಪಡೆದುಕೊಂಡಿತು.
2008: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಶಿರಾಡಿ ಘಾಟಿಯಲ್ಲಿ ವಾಹನಗಳ ಸಂಚಾರಕ್ಕೆ ಕೇಂದ್ರ ಭೂ ಸಾರಿಗೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಸಕಲೇಶಪುರದಲ್ಲಿ ಹಸಿರು ನಿಶಾನೆ ತೋರಿಸಿದರು. ಭಾರೀ ವಾಹನಗಳ ಸಂಚಾರದಿಂದ ಸಂಪೂರ್ಣವಾಗಿ ಹಾಳಾಗಿದ್ದ ಶಿರಾಡಿಘಾಟಿ ರಸ್ತೆಯನ್ನು ಅಭಿವೃದ್ಧಿಗೊಳಿಸುವ ಸಲುವಾಗಿ ಕಳೆದ ನವೆಂಬರ್ 14 ರಿಂದ ಈ ಮಾರ್ಗದ ಸಂಚಾರ ನಿರ್ಬಂಧಿಸಲಾಗಿತ್ತು.
2007: 1971ರಲ್ಲಿ ನಡೆದ ಯುದ್ಧದ ಸಂದರ್ಭದಲ್ಲಿ ನಾಪತ್ತೆಯಾದ ತಮ್ಮ ಕುಟುಂಬದ ಸದಸ್ಯರನ್ನು ಹುಡುಕುವ ಸಲುವಾಗಿ ಭಾರತದಿಂದ ಬಂದ ಹಲವಾರು ಯೋಧರ ಕುಟುಂಬಗಳು ಪಾಕಿಸ್ಥಾನದ ಜೈಲಿಗೆ ಭೇಟಿ ನೀಡಿ, ದಾಖಲೆಗಳನ್ನು ಪರಿಶೀಲಿಸಿದವು.
2007; ಪಾಕ್ ಸರ್ಕಾರ ಹೇರಿದ ನಿಷೇಧವನ್ನು ಉಲ್ಲಂಘಿಸಿ ಪಾಕಿಸ್ಥಾನಿ ಟಿವಿ ಚಾನೆಲ್ಲುಗಳು ಅಮಾನುತುಗೊಂಡ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಎಂ. ಚೌಧರಿ ಅವರ ಚಲನವಲನದ ನೇರ ಪ್ರಸಾರ ಮಾಡಿದವು.
2006: ಆನ್ ಲೈನ್ ಲಾಟರಿ ನಿಷೇಧಿಸಿದ ರಾಜ್ಯ ಸರ್ಕಾರದ ಕ್ರಮವನ್ನು ಹೈಕೋರ್ಟ್ ತಳ್ಳಿಹಾಕಿತು. 2004ರ ಜುಲೈ 29ರಂದು ಧರ್ಮಸಿಂಗ್ ಸರ್ಕಾರವು ಆನ್ ಲೈನ್ ಲಾಟರಿಯನ್ನು ರದ್ದು ಪಡಿಸಿತ್ತು.
2006: ಬಿಜೆಪಿ ಮುಖಂಡ ಪ್ರಮೋದ ಮಹಾಜನ್ ಅವರು ಅಕಾಲ ಮೃತ್ಯುವಿಗೆ ಈಡಾಗಿ ಸರಿಯಾಗಿ ಒಂದು ತಿಂಗಳ ನಂತರ ಅವರ ಪುತ್ರ ರಾಹುಲ್ ವಿಷಾಹಾರ ಸೇವನೆಯ ಪರಿಣಾಮವಾಗಿ ಅಸ್ವಸ್ಥಗೊಂಡರು. ಮೂವರು ಆಗಂತುಕರ ಜೊತೆಗೆ ಭೋಜನಕೂಟದಲ್ಲಿ ಪಾಲ್ಗೊಂಡ ಬಳಿಕ ಅವರು ಅಸ್ವಸ್ಥರಾಗಿದ್ದು ಅವರ ಜೊತೆಗೇ ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದ ಪ್ರಮೋದ ಮಹಾಜನ್ ಅವರ ಕಾರ್ಯದರ್ಶಿ ವಿವೇಕ ಮೊಯಿತ್ರಾ ಜೂನ್ 1ರ ರಾತ್ರಿ 3 ಗಂಟೆ ವೇಳೆಗೆ ಆಸ್ಪತ್ರೆಯಲ್ಲಿ ಮೃತರಾದರು.
2006: ಭಾರತೀಯ ಚಿತ್ರರಂಗದಲ್ಲಿ ಮಾಡಿದ ಸಾಧನೆಗಾಗಿ ಖ್ಯಾತ ಚಿತ್ರನಟಿ ಆಶಾ ಪರೇಖ್ ಅವರು ದುಬೈಯಲ್ಲಿ ನಡೆಯುವ ಏಳನೇ ಐಐಎಫ್ಎ ಪ್ರಶಸ್ತಿ ಪ್ರದಾನ ಸಮಾರಂಭದ `ಐಐಎಫ್ಎ ಪ್ರಶಸ್ತಿ-2006' ಗೆ ಆಯ್ಕೆಯಾದರು. `ಚಿತ್ ಚೋರ್', `ಅಮೃತ್' ಮತ್ತು `ಅಖೇಲಾ'ದಂತಹ ಭಾರತೀಯ ಚಿತ್ರಗಳ ಮೂಲಕ ಚಿತ್ರರಂಗಕ್ಕೆ ಸಲ್ಲಿಸಿದ ಕಾಣಿಕೆಗಾಗಿ ಸ್ಕ್ರಿಪ್ಟ್ ಮತ್ತು ಸಂಭಾಷಣೆ ರಚನೆಕಾರ ಒ.ಪಿ. ದತ್ತ ಮತ್ತು ಸಿನಿಮಾಟೋಗ್ರಾಫರ್ ಕೆ.ಕೆ. ಮೆನನ್ ಅವರನ್ನೂ ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. `ಅರುವತ್ತರ ದಶಕದ ನಾಟ್ಯರಾಣಿ' ಎಂದೇ ಖ್ಯಾತಿ ಪಡೆದ ಆಶಾ ಪರೇಖ್ ಅವರನ್ನು ಚಿತ್ರನಟಿ, ನಿರ್ಮಾಪಕಿ ಹಾಗೂ ಭಾರತೀಯ ಚಲನಚಿತ್ರ ಸೆನ್ಸಾರ್ ಮಂಡಳಿಯ ಮೊತ್ತ ಮೊದಲ ಮಹಿಳಾ ಅಧ್ಯಕ್ಷರಾಗಿ ಚಿತ್ರರಂಗಕ್ಕೆ ನೀಡಿದ ಕಾಣಿಕೆಗಾಗಿ ಸರ್ವಾನುಮತದಿಂದ `ಪ್ರಶಸ್ತಿ'ಗೆ ಆರಿಸಲಾಯಿತು.
1999: ಭೂತಾನ್ ದೇಶಕ್ಕೆ ಟಿವಿ ಬಂತು.
1967: ಪ್ರಗತಿಶೀಲ ಮನೋಭಾವದ ಕಲಾವಿದ ಡಾ. ಶಿವಾನಂದ ಬಂಟನೂರು ಅವರು ಹನುಮಂತರಾಯ- ಶಾಂತಾಬಾಯಿ ದಂಪತಿಯ ಮಗನಾಗಿ ಗುಲ್ಬರ್ಗ ಜಿಲ್ಲೆಯ ಜೇವರ್ಗಿಯಲ್ಲಿ ಜನಿಸಿದರು.
1966: ಅಮೆರಿಕದ ಬಾಹ್ಯಾಕಾಶ ನೌಕೆ `ಸರ್ವೇಯರ್' ಚಂದ್ರನ ಮೇಲೆ ಇಳಿಯಿತು.
1957: ಕಲಾವಿದ ಬಾಲಚಂದ್ರ ನಾಕೋಡ್ ಜನನ.
1953: ಕಲಾವಿದ ಮಹಾದೇವಪ್ಪ ಎಂ.ಸಿ. ಜನನ.
1953: ವೆಸ್ಟ್ ಮಿನ್ ಸ್ಟರ್ ಅಬ್ಬೆಯಲ್ಲಿ ಬ್ರಿಟನ್ನಿನ ರಾಣಿ ಎರಡನೇ ಎಲಿಜಬೆತ್ ಕಿರೀಟ ಧಾರಣೆ ನಡೆಯಿತು. ಆಕೆಯ ತಂದೆ ದೊರೆ ಆರನೇ ಜಾರ್ಜ್ ಮೃತನಾದ 16 ತಿಂಗಳುಗಳ ಬಳಿಕ ಈ ಕಿರೀಟಧಾರಣೆ ಕಾರ್ಯಕ್ರಮ ನಡೆಯಿತು. ಪ್ರಖರ ಬಿಸಿಲಿನ (ದೀರ್ಘ ಹಗಲಿನ) ದಿನವಾದ್ದರಿಂದ ಕಿರೀಟಧಾರಣೆಗೆ ಉತ್ತಮ ಎಂದು ಈ ದಿನವನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಆದರೆ ಅದೇ ದಿನ ಮಳೆ ಸುರಿಯಿತು.
1951: ಕಲಾವಿದ ಸೀತಾರಾಮ ಶೆಟ್ಟಿ ಜಿ. ಜನನ.
1943: ಅಮೆರಿಕದ ಖ್ಯಾತ ಸಿವಿಲ್ ಎಂಜಿನಿಯರ್ ಜಾನ್ ಫ್ರಾಂಕ್ ಸ್ಟೀವನ್ಸ್ ತಮ್ಮ 90ನೇ ವಯಸ್ಸಿನಲ್ಲಿ ಮೃತರಾದರು. ಪನಾಮಾ ಕಾಲುವೆ ಯೋಜನೆಯ ಮುಖ್ಯ ಎಂಜಿನಿಯರ್ ಆಗಿದ್ದ ಇವರು ಈ ಕಾಲುವೆ ಯೋಜನೆ ಯಶಸ್ಸಿಗೆ ಅಡಿಗಲ್ಲು ಹಾಕಿದವರು.
1929: ಹಾಸ್ಯ ಸಾಹಿತಿ, ಕಾದಂಬರಿಗಾರ್ತಿ ನುಗ್ಗೆಹಳ್ಳಿ ಪಂಕಜ ಅವರು ಎಸ್.ವಿ. ರಾಘವಾಚಾರ್- ಶಾಂತಮ್ಮ ದಂಪತಿಯ ಪುತ್ರಿಯಾಗಿ ಬೆಂಗಳೂರಿನಲ್ಲಿ ಈದಿನ ಜನಿಸಿದರು. ರಾತ್ರಿ ಹೊತ್ತಿನಲ್ಲಿ ಬರೆಯುವುದನ್ನು ರೂಢಿಸಿಕೊಂಡಿದ್ದ ಪಂಕಜ ಅವರು ರಚಿಸಿದ ಕೃತಿಗಳ ಸಂಖ್ಯೆ 40ಕ್ಕೂ ಹೆಚ್ಚು. ಅತ್ತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ, ಶ್ರೀರಸ ಪ್ರಶಸ್ತಿ, ಸ್ವಾತಂತ್ರ್ಯ ಸುವರ್ಣ ಮಹೋತ್ಸವ ಪ್ರಶಸ್ತಿ, ಲಿಪಿ ಪ್ರಾಜ್ಞೆ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಅನುಪಮಾ ಪ್ರಶಸ್ತಿ ಇತ್ಯಾದಿ ಪ್ರಶಸ್ತಿಗಳು ಅವರಿಗೆ ಲಭಿಸಿವೆ.
1911: ಕಲಾವಿದ ಸಿ.ಟಿ. ಶೇಷಾಚಲಂ ಜನನ.
1904: ಜಾನಿ ವೀಸ್ ಮುಲ್ಲರ್ (1904-84) ಜನ್ಮದಿನ. ಅಮೆರಿಕ ಫ್ರೀಸ್ಟೈಲ್ ಈಜುಗಾರರಾದ ಇವರು ಐದು ಒಲಿಂಪಿಕ್ಸ್ ಚಿನ್ನದ ಪದಕಗಳನ್ನು ಗೆದ್ದಿದ್ದರು. ನಂತರ ಚಲನಚಿತ್ರ ನಟನಾಗಿ `ಟಾರ್ಜಾನ್' ಪಾತ್ರದ ಮೂಲಕ ಮಿಂಚಿದರು.
1897: ನ್ಯೂಯಾರ್ಕ್ ಜರ್ನಲ್ನಲ್ಲಿ ತಾನು ಮರಣ ಹೊಂದಿದ್ದೇನೆಂಬ ಸುದ್ದಿ ಓದಿ ಮಾರ್ಕ್ ಟ್ವೇನ್ `ಇದು ತೀರಾ ಅತಿಶಯೋಕ್ತಿಯ ವರದಿ' ಎಂದು ಪ್ರತಿಕ್ರಿಯೆ ನೀಡಿದ.
1882: ಇಟಲಿ ಏಕೀಕರಣದ ರೂವಾರಿ ಜೋಸೆಫ್ ಗ್ಯಾರಿಬಾಲ್ಡಿ ಈದಿನ ನಿಧನರಾದರು. ಇವರ ಹಲವಾರು ಸೇನಾ ದಂಡಯಾತ್ರೆಗಳು ಇಟಲಿ ಏಕೀಕರಣಕ್ಕೆ ನೆರವಾದವು. ಇವರು ಜನಿಸಿದ್ದು 1807ರ ಜುಲೈ 4ರಂದು.
No comments:
Post a Comment