ಇಂದಿನ ಇತಿಹಾಸ
ಜೂನ್ 13
2016: ಅಲಹಾಬಾದ್: ಪಕ್ಷವನ್ನು ಯಶಸ್ವಿನತ್ತ ಒಯ್ಯುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ಕಾರ್ಯಕರ್ತರಿಗೆ ಸೇವೆ, ಸಮತೋಲನ, ನಿಯಂತ್ರಣ, ಪರಾನುಭೂತಿ ಮತ್ತು ಸಂಭಾಷಣೆ ಸೇರಿದಂತೆ ಏಳು ಅಂಶಗಳ ‘ಮಂತ್ರ’ವನ್ನು ಅಲಹಾಬಾದ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಬೋಧಿಸಿದರು. ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಇಲ್ಲಿ ಈ ವಿಚಾರವನ್ನು ತಿಳಿಸಿದರು. 2014ನೇ ವರ್ಷ ರಾಷ್ಟ್ರದ ರಾಜಕೀಯದಲ್ಲಿ ಮಹತ್ವದ ಬದಲಾವಣೆಯ ವರ್ಷ. ಆಗ ಬಿಜೆಪಿ ತನ್ನನ್ನು ಕೇಂದ್ರೀಯ ಶಕ್ತಿಯಾಗಿ ರೂಪಿಸಿಕೊಂಡಿತು. ಅದಾಗಿ 2 ವರ್ಷದಲ್ಲಿ ಈಗ ಮೋದಿ ಸರ್ಕಾರದ ಜನಪ್ರಿಯತೆ ದೃಢವಾಗಿ ನಿಂತಿದೆ ಎಂದು ಜೇಟ್ಲಿ ಹೇಳಿದರು. ‘ಭಾರತವನ್ನು ಧೋರಣಾ ಪಾರ್ಶ್ವ ವಾಯುವಿಗೆ ತುತ್ತಾದಂತೆ ಕಾಣಲಾಗುತ್ತಿತ್ತು. ಈಗ ಜಾಜ್ವಲ್ಯಮಾನ ಚುಕ್ಕಿಯಾಗಿ ಮತ್ತು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂಬುದಾಗಿ ಪರಿಗಣಿಸಲಾಗುತ್ತಿದೆ’ ಎಂದು ಜೇಟ್ಲಿ ವಿವರಿಸಿದರು. ಸಂಜೆ ಅಲಹಾಬಾದಿನಲ್ಲಿ ಬೃಹತ್ ‘ಪರಿವರ್ತನಾ’ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ವಿವರಿಸಿ, ಉತ್ತರಪ್ರದೇಶದಲ್ಲಿ ಬದಲಾವಣೆಯ ಕಾಲ ಬಂದಿದೆ ಎಂದು ಹೇಳಿದರು. ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಮತ್ತು ಮಾಯಾವತಿ ಜುಗಲ್ಬಂದಿ ನಡೆಯುತ್ತಿದೆ. ಇದನ್ನು ಮುರಿಯುವವರೆಗೆ ಉತ್ತರ ಪ್ರದೇಶದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಅವರು ನುಡಿದರು.
2016: ನವದೆಹಲಿ/ ಮುಂಬೈ/ ಭೋಪಾಲ್: ಕೇಂದ್ರೀಯ ಚಲನಚಿತ್ರ ದೃಢೀಕರಣ ಮಂಡಳಿಯು (ಸಿಬಿಎಫ್ಸಿ) ಚಲನಚಿತ್ರಗಳನ್ನು ಸೆನ್ಸಾರ್ ಮಾಡುವಂತಿಲ್ಲ ಎಂದು ಈದಿನ ತೀರ್ಪು ನೀಡಿದ ಬಾಂಬೆ ಹೈಕೋರ್ಟ್, ‘ಉಡ್ತಾ ಪಂಜಾಬ್’ ಚಿತ್ರ ಬಿಡುಗಡೆಗೆ ಅನುಮತಿ ನೀಡಿತು. ಸಿನಿಮಾದಲ್ಲಿ ಮೂತ್ರ ಮಾಡುವ ದೃಶ್ಯವೊಂದನ್ನು ಮಾತ್ರ ಕಿತ್ತುಹಾಕುವಂತೆ ಹೈಕೋರ್ಟ್ ಚಿತ್ರ ನಿರ್ದೇಶಕರಿಗೆ ಸೂಚಿಸಿತು. ಮಂಡಳಿ ಮತ್ತು ‘ಉಡ್ತಾ ಪಂಜಾಬ್’ ಚಿತ್ರ ನಿರ್ಮಾಪಕರ ನಡುವಣ ವಿವಾದಕ್ಕೆ ಸಂಬಂಧಿಸಿದಂತೆ ತೀರ್ಪು ನೀಡುತ್ತಾ ಹೈಕೋರ್ಟ್ ಈ ಆದೇಶವನ್ನು ನೀಡಿತು. ಚಲನ ಚಿತ್ರಗಳಿಗೆ ಕತ್ತರಿ ಪ್ರಯೋಗ ಮಾಡುವ (ಸೆನ್ಸಾರ್) ಅಧಿಕಾರವನ್ನು ಶಾಸನಬದ್ಧವಾಗಿ ಸಿಬಿಎಫ್ಸಿ ಹೊಂದಿಲ್ಲ. ಏಕೆಂದರೆ ಸಿನೆಮಾಟೋಗ್ರಾಫ್ ಕಾಯ್ದೆಯಲ್ಲಿ ಸೆನ್ಸಾರ್ ಎಂಬ ಪದ ಸೇರ್ಪಡೆಯಾಗಿಲ್ಲ ಎಂದು ನ್ಯಾಯಾಲಯ ಹೇಳಿತು. ‘ಮಂಡಳಿಯಲ್ಲಿ ಸೆನ್ಸಾರ್ ಎಂಬ ಪದದ ಪ್ರಸ್ತಾಪವೇ ಇಲ್ಲ. ಮಂಡಳಿಯು ಸಂವಿಧಾನ ಮತ್ತು ಸುಪ್ರೀಂಕೋರ್ಟ್ ನಿರ್ದೇಶನಗಳ ಪ್ರಕಾರ ಮಾತ್ರವೇ ತನ್ನ ಅಧಿಕಾರಗಳನ್ನು ಬಳಸಬೇಕು ಎಂದು ನ್ಯಾಯಾಲಯ ವಿವರಿಸಿತು. ‘ಉಡ್ತಾ ಪಂಜಾಬ್’ ಚಿತ್ರವು ಸ್ಥಳ ಒಂದರಲ್ಲಿ ಮಾದಕ ದ್ರವ್ಯ ಹಾವಳಿಯನ್ನು ತೋರಿಸುವ ಚಿತ್ರ. ಅದರಲ್ಲಿ ಪಂಜಾಬನ್ನು ಕೆಟ್ಟದಾಗಿ ತೋರಿಸುವಂತಹ ಅಥವಾ ರಾಷ್ಟ್ರದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಧಕ್ಕೆ ಉಂಟು ಮಾಡುವಂತಹ ಯಾವುದೇ ವಿಚಾರ ನಮಗೆ ಕಾಣುತ್ತಿಲ್ಲ. ಸೃಜನಾತ್ಮಕ ಸ್ವಾತಂತ್ರ್ಯ ವನ್ನು ಅನಗತ್ಯವಾಗಿ ಹತ್ತಿಕ್ಕಬಾರದು. ಚಿತ್ರದಲ್ಲಿ ಏನು ಇರಬೇಕು ಎಂದು ಯಾರೂ ಚಿತ್ರನಿರ್ಮಾಪಕನಿಗೆ ನಿರ್ದೇಶನ ನೀಡುವಂತಿಲ್ಲ ಎಂದು ನ್ಯಾಯಾಲಯ ಹೇಳಿತು. ಬೆಳಗ್ಗೆ ತೀರ್ಪಿನ ಮೊದಲ ಭಾಗವನ್ನು ಓದಿ ಹೇಳಿದ ನ್ಯಾಯಮೂರ್ತಿಗಳು ಊಟದ ವಿರಾಮದ ಬಳಿಕ ಉಳಿದ ಭಾಗವನ್ನು ಓದಿ ಹೇಳಿದರು. ‘ಉಡ್ತಾ ಪಂಜಾಬ್’ ಚಿತ್ರಕ್ಕೆ 13 ಕತ್ತರಿ ಪ್ರಯೋಗದ ಬಳಿಕ ‘ಎ’ (ವಯಸ್ಕ) ಪ್ರಮಾಣಪತ್ರ ನೀಡಿ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ ಎಂದು ಸಿಬಿಎಫ್ಸಿ ಅಧ್ಯಕ್ಷರಾದ ಪಹ್ಲಾಜ್ ನಿಹಲಾನಿ ಸೋಮವಾರ ಬೆಳಗ್ಗೆ ಪ್ರಕಟಿಸಿದ್ದರು. ಇದಕ್ಕೆ ಮುನ್ನ ಮಂಡಳಿ 89 ಭಾಗಗಳಿಗೆ ಮಂಡಳಿ ಕತ್ತರಿ ಪ್ರಯೋಗ ಮಾಡಿತ್ತು. ಶೀರ್ಷಿಕೆಯಲ್ಲಿದ್ದ ಪಂಜಾಬ್ ಹೆಸರನ್ನೂ ಕಿತ್ತು ಹಾಕಲು ಸೂಚಿಸಿತ್ತು.
2016: ಅಲಹಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಅಲಹಾಬಾದಿನಲ್ಲಿ ಇರುವ ಕ್ರಾಂತಿಕಾರಿ ಚಂದ್ರಶೇಖರ ಆಜಾದ್ ಪಾರ್ಕ್ನಲ್ಲಿ ಆಜಾದ್ ಅವರ ಪ್ರತಿಮೆಗೆ ನಮನ ಸಲ್ಲಿಸಿದರು. ಆಜಾದ್ ಎಂದೇ ಪ್ರಸಿದ್ಧರಾಗಿರುವ ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್ ಅವರು, ಕ್ರಾಂತಿಕಾರಿ ರಾಮ್ ಪ್ರಸಾದ್ ಬಿಸ್ಮಿಲ್ ಸ್ಥಾಪಿಸಿದ ಹಿಂದುಸ್ಥಾನ್ ರಿಪಬ್ಲಿಕನ್ ಅಸೋಸಿಯೇಶನ್ ಸಂಘಟನೆಯನ್ನು ಅವರ ಮರಣದ ನಂತರ ಹಿಂದುಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ ಎಂದು ಮರುನಾಮಕರಣ ಮಾಡಿ ಮುನ್ನಡೆಸಿದ್ದರು.
2016: ನ್ಯೂಯಾರ್ಕ್: ಅಮೆರಿಕದ ಫ್ಲೋರಿಡಾದ ಒರ್ಲಾಂಡೋವಿನ ಸಲಿಂಗಕಾಮಿ ನೈಟ್ಕ್ಲಬ್ನಲ್ಲಿ ಹಿಂದಿನ ದಿನ ರಾತ್ರಿ ನಡೆದ ಶೂಟೌಟ್ನಲ್ಲಿ ಮೃತರಾದ 50 ಕ್ಕೂ ಹೆಚ್ಚು ಮಂದಿಗೆ ಸಂತಾಪ ಸೂಚಿಸಿ ನಗರದ ಎಂಪೈರ್ ಸ್ಟೇಟ್ ಕಟ್ಟಡವು ಕೆಲ ಕಾಲ ವಿದ್ಯುದ್ದೀಪಗಳನ್ನು ಸಂಪೂರ್ಣವಾಗಿ ಆರಿಸಿದರೆ, ವಿಶ್ವ ವ್ಯಾಪಾರ ಕೇಂದ್ರ ಕಟ್ಟಡವು ಮೃತರ ನೆನಪಿಗಾಗಿ ಇಡೀ ಕಟ್ಟಡವು ಸಲಿಂಗಕಾಮಿಗಳ ಧ್ವಜದ ಬಣ್ಣಗಳಲ್ಲಿ ಝುಗಮಗಿಸಿ ಗೌರವ ವ್ಯಕ್ತ ಪಡಿಸಿತು. ಐಸಿಸ್ ಉಗ್ರ ಓಮರ್ ಮಾಟಿನ್ ಜೂನ್ 12ರಂದು ನಡೆಸಿದ ಗುಂಡಿನ ದಾಳಿಯಲ್ಲಿ 50 ಜನ ಮೃತರಾಗಿ 53 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಆಧುನಿಕ ಅಮೆರಿಕ ಕಂಡ ಅತ್ಯಂತ ಭಯಾನಕ ಮತ್ತು ದೊಡ್ಡ ಹತ್ಯಾಕಾಂಡ ಇದಾಗಿದೆ. ಮೃತರಿಗೆ ಸಂತಾಪ ಸೂಚಿಸುವ ದೃಷ್ಟಿಯಿಂದ ಅಮೆರಿಕ ಧ್ವಜವನ್ನು ಅರ್ಧಕ್ಕೆ ಹಾರಿಸಿಲಾಗುತ್ತಿದೆ ಎಂದು ನ್ಯೂಯಾರ್ಕ್ ಮೇಯರ್ ಬಿಲ್ ಡೆ ಬ್ಲೆಸಿಯೊ ತಿಳಿಸಿದರು.
2016: ಸಾಂತಾ ಮೋನಿಕಾ (ಕ್ಯಾಲಿಫೋರ್ನಿಯಾ): ಅಸಾಲ್ಟ್ ರೈಫಲ್ಗಳು ಮತ್ತು ಸ್ಪೋಟಕಗಳನ್ನು ತಯಾರಿಸಲು ಬಳಸಲಾಗುವ ರಾಸಾಯನಿಕಗಳನ್ನು ಹೊಂದಿದ್ದ ಇಂಡಿಯಾನಾ ವ್ಯಕ್ತಿಯೊಬ್ಬನನ್ನು ಕ್ಯಾಲಿಫೋರ್ನಿಯಾದಲ್ಲಿ ಆತ ಸಹಸ್ರಾರು ಜನ ಸೇರುವ ವಾರ್ಷಿಕ ಉತ್ಸವ ’ಗೇ ಪ್ರೈಡ್ ಪೆರೇಡ್’ಗೆ ಹೊರಟಿದ್ದಾಗ ಹಿಂದಿನ ದಿನ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಫ್ಲೋರಿಡಾದ ಓರ್ಲಾಂಡೋವಿನ ಸಲಿಂಗಕಾಮಿ ನೈಟ್ ಕ್ಲಬ್ನಲ್ಲಿ ನಡೆದ ಹತ್ಯಾಕಾಂಡದಲ್ಲಿ ಕನಿಷ್ಠ 50 ಜನ ಸಾವನ್ನಪ್ಪಿದ ಘಟನೆ ಸಂಭವಿಸಿದ ಕೆಲವೇ ಗಂಟೆಗಳ ಬಳಿಕ ಕ್ಯಾಲಿಫೋರ್ನಿಯಾದ ಸಾಂಟಾ ಮೋನಿಕಾದಲ್ಲಿ ಜೇಮ್ಸ್ ವೆಸ್ಲೆ ಹೊವೆಲ್ ಎಂಬ 20ರ ಹರೆಯದ ವ್ಯಕ್ತಿಯನ್ನು ಶಸ್ತ್ರಾಸ್ತ್ರ ಸಜ್ಜಿತನಾಗಿ ಹೊರಟ್ಟಿದ್ದಾಗ ಬಂಧಿಸಲಾಯಿತು. ಏನಿದ್ದರೂ ಉಭಯ ಘಟನೆಗಳಿಗೆ ಸಂಪರ್ಕ ಕಲ್ಪಿಸುವ ಸಾಕ್ಷ್ಯಾಧಾರಗಳೇನೂ ಲಭಿಸಿಲ್ಲ ಎಂದು ಅಧಿಕಾರಿಗಳು ಹೇಳಿದರು. ಬಿಳಿ ಬಣ್ಣದ ಸೆಡನ್ ವಾಹನವನ್ನು ತಪ್ಪು ಮಾರ್ಗದಲ್ಲಿ ನಿಲ್ಲಿಸಿದ್ದ ಹೊವೆಲ್ನ ಸಂಶಯಾಸ್ಪದ ನಡವಳಿಕೆಗಳನ್ನು ಗಮನಿಸಿ ಸ್ಥಳೀಯ ನಿವಾಸಿಗಳು ಪೊಲೀಸರಿಗೆ ಸುಳಿವು ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಪರಿಶೀಲಿಸಿದಾಗ ಚಾಲಕನ ಪಕ್ಕದ ಪ್ರಯಾಣಿಕರ ಆಸನದಲ್ಲಿ ಒಂದು ಅಸಾಲ್ಟ್ ರೈಫಲ್ ಕಾಣಿಸಿತು. ತತ್ ಕ್ಷಣವೇ ಇಡೀ ವಾಹನವನ್ನು ಅಧಿಕಾರಿಗಳು ತಪಾಸಿಸಿದರು. ಆಗ ಇನ್ನೆರಡು ಅಸಾಲ್ಟ್ ರೈಫಲ್ಗಳು, ಪ್ರಬಲ ಮ್ಯಾಗಜಿನ್ಗಳು ಮತ್ತು 5 ಗ್ಯಾಲನ್ ಬಕೆಟ್ನಷ್ಟು ಸ್ಪೋಟಕ ತಯಾರಿ ರಾಸಾಯನಿಕ ಪತ್ತೆಯಾದವು ಎಂದು ವರದಿಗಳು ಹೇಳಿವೆ.
2016: ಹರಾರೆ: ಭಾರತದ ಯುವ ಪಡೆ ಜಿಂಬಾಬ್ವೆಯಲ್ಲಿ ಕಮಾಲ್ ಮಾಡಿತು. ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗದಲ್ಲಿ ಶಿಸ್ತು ಬದ್ಧ ಪ್ರದರ್ಶನದಿಂದಾಗಿ ಈದಿನ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಜಿಂಬಾಬ್ವೆ ನೀಡಿದ 127ರನ್ ಗುರಿಯನ್ನು ಕೇವಲ 26.5 ಓವರ್ಗೆ ತಲುಪುವ ಮೂಲಕ ಸರಣಿಯನ್ನು ತನ್ನ ಕೈವಶ ಮಾಡಿಕೊಂಡಿತು. 127 ರನ್ ಗುರಿ ಬೆನ್ನು ಹತ್ತಿದ ಭಾರತಕ್ಕೆ ಕನ್ನಡಿಗರಾದ ಕೆ.ಎಲ್ ರಾಹುಲ್ (33) ಹಾಗೂ ಕರಣ್ ನಾಯರ್ (39) ಉತ್ತಮ ಆರಂಭ ನೀಡಿದರು. ಅಂಬಟಿ ರಾಯಡು ಅಜೇಯ 41 ರನ್ ಸಿಡಿಸುವ ಮೂಲಕ ತಂಡವನ್ನು ಜಯದ ಗುರಿಯತ್ತ ತಲುಪಿಸಿದರು. ಭಾರತ ಅಂತಿಮವಾಗಿ 26.5 ಓವರ್ಗೆ ಎರಡು ವಿಕೆಟ್ ನಷ್ಟಕ್ಕೆ 129ರನ್ ಗಳಿಸಿತು. ಈ ಮೂಲಕ ಧೋನಿ ನೇತೃತ್ವದ ಯುವ ಸೇನೆ ಸರಣಿಯನ್ನು ತನ್ನ ಕೈವಶ ಮಾಡಿಕೊಂಡಿತು. ಇದಕ್ಕೂ ಮೊದಲು ಟಾಸ್ ಗೆದ್ದ ಭಾರತ ಜಿಂಬಾಬ್ವೆಯನ್ನು ಬ್ಯಾಟಿಂಗ್ಗೆ ಆಮಂತ್ರಿಸಿತು. ಆರಂಭದಿಂದಲೇ ಶಿಸ್ತುಬದ್ಧ ದಾಳಿ ನಡೆಸಿದ ಧೋನಿ ಪಡೆಗೆ ಬರಿಂದರ್ ಸ್ರಾನ್ ಮೊದಲ ವಿಕೆಟ್ ದೊರಕಿಸಿದರು. 39 ರನ್ಗಳಾಗುವಷ್ಟರಲ್ಲಿ ಮೂರು ಪ್ರಮುಖ ವಿಕೆಟ್ ಕಳೆದುಕೊಂಡ ಜಿಂಬಾಬ್ವೆಗೆ ಚಿಬಾಬಾ (21) ಮತ್ತು ಸಿಬಾಂಡ (51) ಜತೆಯಾಟ ಸ್ವಲ್ಪ ಮಟ್ಟಿಗೆ ಆಸರೆಯಾಯಿತು. ಇದರಿಂದಾಗಿ ಜಿಂಬಾಬ್ವೆ 34.3 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 126 ರನ್ಗಳಿಸಿತು.
2016: ನಾಗಪುರ: ಅಮರಾವತಿ ಮೂಲದ 23 ವರ್ಷದ ಮಹಿಳೆಯೊಬ್ಬಳು ನಾಗಪುರದ ಸಿಟಿ ಆಸ್ಪತ್ರೆಯಲ್ಲಿ ಬಹಳ ವಿಚಿತ್ರವಾದ ಮಗುವಿಗೆ ಜನ್ಮ ನೀಡಿದ್ದು ಬೆಳಕಿಗೆ
ಬಂತು. ಶರೀರದಲ್ಲಿ ಚರ್ಮವೇ ಇಲ್ಲದ ಈ ಅವಸ್ಥೆಯನ್ನು ವೈದ್ಯರು ಹರೇಲಕ್ವಿನ್ ಇಚ್ತ್ಯೋಸಿಸ್ ಎಂದು ಗುರುತಿಸಿದ್ದು, ಮೂರು ಲಕ್ಷ ಜನನದಲ್ಲಿ ಒಂದು ಮಗು ಈ ರೀತಿ ಜನಿಸುತ್ತಿದ್ದು ವಂಶವಾಹಿ ಸೀಳುವಿಕೆ ಇದಕ್ಕೆ ಕಾರಣ ಎಂದು ಹೇಳಿದರು.. ಆರಂಭದಲ್ಲಿ ಮಗು ಉಸಿರಾಟದ ತೊಂದರೆ ಅನುಭವಿಸಿದ್ದರೂ ಸದ್ಯ ಮಗುವಿಗೆ ಯಾವುದೇ ತೊಂದರೆಯಿಲ್ಲ ಎಂದು ವೈದ್ಯರು ತಿಳಿಸಿದರು. 1980ರಲ್ಲಿ ಪಾಕಿಸ್ತಾನದಲ್ಲೂ ಇದೇ ರೀತಿಯ ಮಗು ಹುಟ್ಟಿದ್ದು 2008ರ ವರೆಗೆ ಜೀವಿಸಿತ್ತು ಎಂದು ಅವರು ತಿಳಿಸಿದ್ದಾರೆ.
2016: ವಾಷಿಂಗ್ಟನ್: ಪ್ಲೋರಿಡಾದ ಒರ್ಲಾಂಡೋದಲ್ಲಿರುವ ಸಲಿಂಗಿಗಳ ನೈಟ್ಕ್ಲಬ್ನಲ್ಲಿ ನಡೆದ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ (ಐಸಿಎಸ್) ಸಂಘಟನೆ ಹೊತ್ತಿತು.. ಆದರೆ ಈ ಕುರಿತು ಅಮೆರಿಕ ಅಧಿಕಾರಿಗಳು ದಾಳಿಯಲ್ಲಿ ಉಗ್ರರ ಕೈವಾಡವಿರುವ ಬಗ್ಗೆ ಈ ವರೆಗೂ ಯಾವುದೇ ಸಾಕ್ಷ್ಯಾಧಾರಗಳು ಲಭಿಸಿಲ್ಲ ಎಂದು ಹೇಳಿದರು. ಸಲಿಂಗಿಗಳ ನೈಟ್ ಕ್ಲಬ್ನಲ್ಲಿ ನಡೆದ ದಾಳಿಯಲ್ಲಿ ಸಾವು ಮತ್ತು ಗಾಯಾಳುಗಳು ಸೇರಿ 100 ಜನರ ಪ್ರಾಣಕ್ಕೆ ಕುತ್ತಾದ ಈ ದಾಳಿ ನಡೆಸಿರುವುದು ತಾವೇ ಎಂದು ಸಂಘಟನೆಯ ತನ್ನ ಜಾಲತಾಣಗಳಲ್ಲಿ ಹೇಳಿಕೆ ನೀಡಿತು. ಫ್ಲೋರಿಡಾದ ಒರ್ಲಾಂಡೋದಲ್ಲಿರುವ ಸಲಿಂಗಿಗಳ ನೈಟ್ಕ್ಲಬ್ಗೆ ನುಗ್ಗಿದ ಒಮರ್ ಮಾಟಿನ್ ಎಂಬ ಉಗ್ರ ಮಸಸೋಇಚ್ಛೆ ಗುಂಡಿನ ದಾಳಿ ನಡೆಸಿದ್ದ. ದಾಳಿಯಲ್ಲಿ 50ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು 53ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಘಟನೆಯ ಬಳಿಕ ಪೊಲೀಸರು ಹಂತಕನನ್ನು ಹತ್ಯೆಗೈದಿದ್ದರು.
2009: ಬಿಜೆಪಿಯಲ್ಲಿ ಅಶಿಸ್ತನ್ನು ಸಹಿಸಲಾಗದು ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಹೇಳುತ್ತಿದ್ದಂತೆಯೇ ಪಕ್ಷದ ಇನ್ನೊಬ್ಬ ಹಿರಿಯ ನಾಯಕ ಯಶವಂತ ಸಿನ್ಹಾ ಪಕ್ಷದೊಳಗೆ ತಮಗೆ ನೀಡಲಾಗಿರುವ ಎಲ್ಲ ಜವಾಬ್ದಾರಿಗಳೂ ಸೇರಿದಂತೆ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.
2009: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ನೂತನ ಆಯುಕ್ತರನ್ನಾಗಿ ಹಿರಿಯ ಐಎಎಸ್ ಅಧಿಕಾರಿ ಭರತ್ ಲಾಲ್ ಮೀನಾ ಅವರನ್ನು ನೇಮಿಸಲಾಯಿತು. ಇದೇ ಹುದ್ದೆಯಲ್ಲಿದ್ದ ಡಾ.ಎಸ್.ಸುಬ್ರಹ್ಮಣ್ಯ ಅವರನ್ನು ಕೃಷಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ವರ್ಗಾಯಿಸಲಾಯಿತು. ಮೀನಾ ಅವರು ಈ ಮುನ್ನ ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯಾಗಿದ್ದರು.
2009: ಕೆಲ ದಿನಗಳಿಂದ ಕಣ್ಮರೆಯಾಗಿದ್ದ ಕೈಗಾ ಅಣುಶಕ್ತಿ ಕೇಂದ್ರದ ವೈಜ್ಞಾನಿಕ ಅಧಿಕಾರಿ ಶವ ಈದಿನ ಕಾರವಾರ ಸಮೀಪದ ಕಾಳಿ ನದಿಯಲ್ಲಿ ಪತ್ತೆಯಾಗಿ, ನಾಪತ್ತೆ ಪ್ರಕರಣ ದುಃಖಾಂತ್ಯ ಕಂಡಿತು.
2009: ಸೊಗಸಾದ ಪ್ರದರ್ಶನ ತೋರಿದ ಸುರಂಜಯ್ ಸಿಂಗ್ ಅವರು ಚೀನಾದ ಜುಹಾಯ್‌ನಲ್ಲಿ ನಡೆದ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ ಫ್ಲೈವೇಟ್ ವಿಭಾಗದಲ್ಲಿ ಭಾರತಕ್ಕೆ ಚಿನ್ನ ತಂದಿತ್ತರು. ಈ ಮೂಲಕ 15 ವರ್ಷಗಳಿಂದ ಭಾರತ ಎದುರಿಸುತ್ತಿದ್ದ ಬಂಗಾರದ ಪದಕದ ಬರವನ್ನು ನೀಗಿಸಿದರು. ಫೈನಲ್‌ನಲ್ಲಿ ಸುರಂಜಯ್ 9-8 ರಲ್ಲಿ ಚೀನಾದ ಲಿ ಚಾವೊ ಅವರನ್ನು ಮಣಿಸಿದರು. ಆದರೆ ತೊಕ್‌ಚೊಮ್ ನನಾವೊ ಸಿಂಗ್ (48 ಕೆ.ಜಿ. ವಿಭಾಗ) ಮತ್ತು ಜೈ ಭಗವಾನ್ ಅವರು ಫೈನಲ್‌ನಲ್ಲಿ ಸೋಲು ಅನುಭವಿಸಿ ಬೆಳ್ಳಿಗೆ ತೃಪ್ತಿಪಟ್ಟರು. ಭಾರತಕ್ಕೆ ಏಷ್ಯನ್ ಚಾಂಪಿಯನ್‌ಷಿಪ್‌ನ ಚಿನ್ನ 1994 ರಲ್ಲಿ ಕೊನೆಯದಾಗಿ ಲಭಿಸಿತ್ತು. ಟೆಹರಾನ್‌ನಲ್ಲಿ ನಡೆದಿದ್ದ ಚಾಂಪಿಯನ್‌ಷಿಪ್‌ನ ಸೂಪರ್ ಹೆವಿವೇಟ್ ವಿಭಾಗದಲ್ಲಿ ರಾಜ್‌ಕುಮಾರ್ ಸಾಂಗ್ವಾನ್ ಬಂಗಾರ ಪಡೆದಿದ್ದರು. 15 ವರ್ಷಗಳ ಬಿಡುವಿನ ಬಳಿಕ ಭಾರತಕ್ಕೆ ಈಗ ಮತ್ತೆ ಚಿನ್ನ ಲಭಿಸಿತು.
2009: ಮಲಪ್ಪುರಮ್ನಲ್ಲಿ ಹಿರಿಯ ಸಿಪಿಎಂ ನಾಯಕ ಇ.ಎಂ.ಎಸ್. ನಂಬೂದರಿಪಾಡ್ ಅವರ ಜನ್ಮಶತಮಾನೋತ್ಸವವನ್ನು ಸಿಪಿಎಂ ಪಕ್ಷವು ಸಂಭ್ರಮದಿಂದ ಆಚರಿಸಿತು. ಆದರೆ ಮುಖ್ಯಮಂತ್ರಿ ವಿ. ಎಸ್. ಅಚ್ಚುತಾನಂದನ್ ಅವರ ಅನುಪಸ್ಥಿತಿಯೊಂದಿಗೆ ಪಕ್ಷದೊಳಗಿನ ಭಿನ್ನಮತ ಸ್ಪಷ್ಟವಾಗಿ ಗೋಚರಿಸಿತು. ಎರಡು ದಿನಗಳ ಜನ್ಮಶತಮಾನೋತ್ಸವವನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕರಾಟ್ ಅವರು ಉದ್ಘಾಟಿಸಿದರು. ಆದರೆ ರಾಜ್ಯದಲ್ಲಿ ಚುನಾವಣೆಯ ಸೋಲಿನಿಂದ ಕಳಾಹೀನವಾದ ಪಕ್ಷದ ಮುಖಂಡರಲ್ಲಿ ಅಂತಹ ಉತ್ಸಾಹ ಕಂಡುಬರಲಿಲ್ಲ.
2009: 235 ಮಂದಿಯನ್ನು ಹೊತ್ತು ಫ್ರ್ಯಾಂಕ್‌ಫರ್ಟ್‌ಗೆ ಹೊರಟುದ್ದ ಏರ್ ಇಂಡಿಯಾ ವಿಮಾನದಲ್ಲಿ ಹೊರಟ ಸಾಂಬಾರು ಘಾಟಿನಿಂದಾಗಿ ಎಚ್ಚರಿಕೆ ಗಂಟೆ ಮೊಳಗಿ ವಿಮಾನ ತುರ್ತು ಭೂಸ್ಪರ್ಶ ಮಾಡಿದ ಪ್ರಸಂಗ ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ ಮಾಡಿದ ಘಟನೆ ಮುಂಬೈಯಲ್ಲಿ ಘಟಿಸಿತು. ಮುಂಜಾನೆ 2.30ರ ಸುಮಾರಿಗೆ ಫ್ರ್ಯಾಂಕ್‌ಫರ್ಟ್‌ಗೆ ಹೊರಟಿದ್ದ ವಿಮಾನದ ಸರಕು ಸಾಗಣೆ ವಿಭಾಗದಲ್ಲಿ ಪ್ರಯಾಣಿಕರೊಬ್ಬರು ಇರಿಸಿದ್ದ ಚೀಲದಿಂದ ಸಾಂಬಾರು ಪುಡಿಯ ವಾಸನೆ ಬರಲಾರಂಭಿಸಿತು. ಪರಿಣಾಮ ವಿಮಾನದ ಎಚ್ಚರಿಕೆ ಗಂಟೆ ಮೊಳಗಲಾರಂಭಿಸಿತು. ತಕ್ಷಣ ವಿಮಾನವನ್ನು ಮುಂಬೈ ನಿಲ್ದಾಣಕ್ಕೆ ವಾಪಸ್ಸು ಕರೆತರಲಾಯಿತು.
2009: ತಾಜ್ ಹೋಟೆಲ್ ಸಮೂಹದ ಒಡೆತನ ಹೊಂದಿರುವ ಇಂಡಿಯನ್ ಹೋಟೆಲ್ಸ್ ಕಂಪೆನಿಯು ಮುಂಬೈನ ಹೊರವಲಯದಲ್ಲಿರುವ ಪುರಾತನ ಪಂಚತಾರಾ ಆಸ್ತಿಯಾದ ಸೀ ರಾಕ್ ಹೋಟೆಲನ್ನು ರೂ 680 ಕೋಟಿಗೆ ಸ್ವಾಧೀನಪಡಿಸಿಕೊಂಡಿತು. ಟಾಟಾ ಸ್ವಾಮ್ಯದ ತಾಜ್ ಸಮೂಹವು ಈದಿನ ಇದನ್ನು ಘೋಷಿಸಿತು. ದಕ್ಷಿಣ ಬಾಂದ್ರಾದಲ್ಲಿ ಸೀ ರಾಕ್ ಹೋಟೆಲ್ ನೆಲೆಗೊಂಡ ಜಾಗದ ಒಡೆತನ ಹೊಂದಿದ ಇಎಲ್‌ಇಎಲ್ ಹೋಟೆಲ್ಸ್ ಅಂಡ್ ಇನ್‌ವೆಸ್ಟ್‌ಮೆಂಟ್ಸ್‌ನಲ್ಲಿ ತಾಜ್ ಸಮೂಹ ಈಗ ಶೇ 85ರಷ್ಟು ಪಾಲು ಪಡೆದಿದೆ. ಇದರೊಂದಿಗೆ ತಾಜ್ ಸಮೂಹವು ಮುಂಬೈಯಲ್ಲಿ ಅರೇಬಿಯನ್ ಸಮುದ್ರದತ್ತ ಮೊಗ ಮಾಡಿ ನಿಂತ ಒಟ್ಟು ನಾಲ್ಕು ಆತಿಥ್ಯ ಸಂಬಂಧಿ ಆಸ್ತಿ ಹೊಂದಿದಂತಾಯಿತು.
2009: ಕೆನಡಾದಲ್ಲಿ ಎಂಟು ಮಂದಿ ಶ್ವೇತವರ್ಣಿಯರು ಹನ್ನೆರಡು ವರ್ಷಗಳ ಹಿಂದೆ ಭಾರತೀಯ ಮೂಲದ ಬಾಲಕಿಯೊಬ್ಬಳನ್ನು ಹೊಡೆದು ಕೊಂದು ನದಿಯೊಂದರಲ್ಲಿ ಎಸೆದ ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿಗೆ ವ್ಯಾಂಕೋವರ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತು. 1997ರಲ್ಲಿ ವಿಕ್ಟೋರಿಯ ನಗರದಲ್ಲಿ 26 ವರ್ಷ ವಯಸ್ಸಿನ ಕೆಲ್ಲಿಎಲಾರ್ಡ್ ಎಂಬ ಆರೋಪಿಯು ಇತರ ಎಂಟು ಮಂದಿ ಅಪ್ರಾಪ್ತ ವಯಸ್ಸಿನ ಶ್ವೇತ ವರ್ಣಿಯರೊಂದಿಗೆ ಸೇರಿ 14 ವರ್ಷದ ಭಾರತೀಯ ಮೂಲದ ರೀನಾ ವಿರ್ಕ್ ಎಂಬ ಬಾಲಕಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿತ್ತು. ಕೊಲೆಯಾದ ವಾರದ ನಂತರ ನದಿಯಲ್ಲಿ ತೇಲಿತ್ತು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಆರೋಪಿಯು ತಪ್ಪು ಎಸಗಿರುವುದಾಗಿ ತಿಳಿಸಿ ಜೀವಾವಧಿ ಶಿಕ್ಷೆಯ ತೀರ್ಪು ಪ್ರಕಟಿಸಿತು.
2009: ಇರಾನ್ ಅಧ್ಯಕ್ಷರಾಗಿ ಆಡಳಿತಾರೂಢ ಅಧ್ಯಕ್ಷ ಮಹಮದ್ ಅಹಮ ದಿನೆಜಾದ್ ಪುನರಾಯ್ಕೆಯಾಗಿದ್ದಾರೆ ಎಂದು ಆಂತರಿಕ ಸಚಿವಾಲಯ ಪ್ರಕಟಿಸಿತು. ಹಿಂದಿನ ದಿನ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ ಇರಾನ್ ಇತಿಹಾಸದಲ್ಲೇ ಪ್ರಥಮ ಬಾರಿಗೆ ಶೇಕಡಾ 80ರಷ್ಟು ಮತದಾನ ನಡೆದಿತ್ತು. ಅಹಮದಿನೆಜಾದ್‌ಗೆ ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡರಲ್ಲೂ ಭಾರಿ ಜನಬೆಂಬಲ ವ್ಯಕ್ತವಾಗಿ, ಅವರು ಶೇಕಡಾ 65ರಷ್ಟು ಮತ ಪಡೆದಿದ್ದರು.
2008: ವಕ್ರ ಅಥವಾ ಸೊಟ್ಟ ಪಾದ ಸರಿಪಡಿಸಲು ಉನ್ನತ ಮಟ್ಟದ ಚಿಕಿತ್ಸೆಯನ್ನು ಉಚಿತವಾಗಿ ನೀಡುವ ಸರ್ಕಾರಿ ಮತ್ತು ಖಾಸಗಿ ಸಹ ಭಾಗಿತ್ವದ `ಹೆಜ್ಜೆ ಗುರುತು' ಯೋಜನೆಗೆ ಬೆಂಗಳೂರಿನಲ್ಲಿ ಚಾಲನೆ ನೀಡಲಾಯಿತು. ಹೆಚ್ಚುವರಿ ಪಾದಗಳನ್ನು ಹೊಂದಿದ್ದ ಬಾಲಕಿ ಲಕ್ಷ್ಮಿಗೆ ಅಪರೂಪದ ಶಸ್ತ್ರಚಿಕಿತ್ಸೆ ನೆರವೇರಿಸಿ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದ ನಗರದ `ಸ್ಪರ್ಶ' ಆಸ್ಪತ್ರೆಯು ರಾಜ್ಯ ಸರ್ಕಾರದ ಜತೆಗೂಡಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುವುದು.
2007: ಮಹಾತ್ಮ ಗಾಂಧಿ ಮೊಮ್ಮಗ ರಾಮಚಂದ್ರ ಗಾಂಧಿ (70) ಅವರು ನವದೆಹಲಿಯ ಭಾರತೀಯ ಅಂತಾರಾಷ್ಟ್ರೀಯ ಕೇಂದ್ರದ (ಐಸಿಸಿ) ಕೊಠಡಿಯಲ್ಲಿ ಮೃತರಾದರು. ಪಶ್ಚಿಮ ಬಂಗಾಳದ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಅವರ ಹಿರಿಯ ಸೋದರರಾದ ರಾಮಚಂದ್ರ ಗಾಂಧಿ ಜೂನ್ 10ರಂದಷ್ಟೇ ಇಲ್ಲಿಗೆ ಬಂದಿದ್ದರು. ಪ್ರಿನ್ಸ್ ಟನ್ ವಿವಿಯ ಮಾಜಿ ಪ್ರಾಧ್ಯಾಪಕ, ಮಹಾತ್ಮ ಗಾಂಧಿಯವರ ಕೊನೆಯ ಮಗ ದೇವದಾಸ್ ಗಾಂಧಿ ಅವರ ಪುತ್ರರಾದ ರಾಮಚಂದ್ರ ಗಾಂಧಿ ಹಲವಾರು ಪುಸ್ತಕ, ನಾಟಕಗಳನ್ನು ರಚಿಸಿದ್ದಲ್ಲದೆ ತಾತ ಮಹಾತ್ಮ ಗಾಂಧಿ ಬಗ್ಗೆ ಚಲನಚಿತ್ರವನ್ನೂ ನಿರ್ಮಿಸಿದ್ದರು. ಇವರ ತಾಯಿ ಲಕ್ಷ್ಮಿ ಸ್ವಾತಂತ್ರ್ಯ ಹೋರಾಟಗಾರ ರಾಜಾಜಿಯವರ ಪುತ್ರಿ.
2007: ಆಫ್ರಿಕಾದ ಆಧುನಿಕ ಸಾಹಿತ್ಯದ ಪಿತಾಮಹ ಎಂದೇ ಗುರುತಿಸಲಾಗಿರುವ ನೈಜೀರಿಯಾ ಸಂಜಾತ ಚಿನುವಾ ಅಚಿಯೆ ಅವರು 2007ನೇ ಸಾಲಿನ ಮ್ಯಾನ್ ಬೂಕರ್ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾದರು. 60ಸಾವಿರ ಪೌಂಡ್ ಮೊತ್ತದ ಈ ಪ್ರಶಸ್ತಿಯನ್ನು ಕಾದಂಬರಿ ಕ್ಷೇತ್ರಕ್ಕೆ ನೀಡಿದ ಅಸಾಧಾರಣ ಕೊಡುಗೆಗಾಗಿ ಪ್ರತಿ ಎರಡು ವರ್ಷಕ್ಕೊಮ್ಮೆನೀಡಲಾಗುತ್ತದೆ. 2005ರಲ್ಲಿ ಮೊತ್ತ ಮೊದಲ ಬಾರಿಗೆ ಈ ಪ್ರಶಸ್ತಿಯನ್ನು ಇಸ್ಮಾಯಿಲ್ ಕದರೆ ಅವರಿಗೆ ನೀಡಲಾಗಿತ್ತು. ಅಚಿಬೆ ಅವರು 1958ರಲ್ಲಿ ಬರೆದ `ಥಿಂಗ್ಸ್ ಫಾಲ್ ಅಪಾರ್ಟ್' ಕಾದಂಬರಿ ವಿಶ್ವದಾದ್ಯಂತ ಖ್ಯಾತಿ ಗಳಿಸಿದ್ದು ಪ್ರಪಂಚದಾದ್ಯಂತ ಇದರ ಹತ್ತು ದಶಲಕ್ಷ ಪುಸ್ತಕಗಳು ಮಾರಾಟವಾಗಿವೆ.
2007: ಖ್ಯಾತ ಮುತ್ಸದ್ದಿ, ನೊಬೆಲ್ ಪ್ರಶಸ್ತಿ ವಿಜೇತ ಶಿಮನ್ ಪೆರೆಸ್ ಅವರು ಇಸ್ರೇಲಿನ ಅಧ್ಯಕ್ಷರಾಗಿ ಆಯ್ಕೆಯಾದರು.
2007: ಭೂಮಿಯಿಂದ ಸುಮಾರು 780 ಲಕ್ಷ ಜ್ಯೋತಿರ್ ವರ್ಷ ದೂರದಲ್ಲಿದ್ದ ಆಕಾಶಗಂಗೆಯ ಪ್ರಮುಖ ನಕ್ಷತ್ರವೊಂದು ಎರಡು ಬಾರಿ ಸ್ಫೋಟಗೊಂಡ ಪರಿಣಾಮವಾಗಿ ತನ್ನ ಅಸ್ತಿತ್ವ ಕಳೆದುಕೊಂಡಿದೆ ಎಂದು ಖಗೋಳ ಶಾಸ್ತ್ರಜ್ಞರು ವಾಷಿಂಗ್ಟನ್ನಿನಲ್ಲಿ ಬಹಿರಂಗಪಡಿಸಿದರು. 2004 ಮತ್ತು 2006ರಲ್ಲಿ ಈ ನಕ್ಷತ್ರ ಎರಡು ಸಲ ಭಾರಿ ಪ್ರಮಾಣದಲ್ಲಿ ಸ್ಫೋಟಗೊಂಡಿತ್ತು, ಇದು ಸೂರ್ಯನಿಗಿಂತ 50ರಿಂದ 100 ಪಟ್ಟು ದೊಡ್ಡದಾಗಿತ್ತು ಆಂತರಿಕ ಸ್ಫೋಟದ ಕಾರಣ ಇದು ಸಂಪೂರ್ಣವಾಗಿ ನಾಶವಾಗಿದೆ ಎಂದು ಖಗೋಳ ತಜ್ಞರು ನಿಯತಕಾಲಿಕವೊಂದರಲ್ಲಿ ತಿಳಿಸಿದರು.
2007: ಸಾಹಿತಿ ಎಚ್. ವಿ. ನಾಗರಾಜರಾವ್ ಅವರ ಅನುವಾದಿತ ಕೃತಿ `ಸಾರ್ಥ'ವು 2006ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಯಿತು. ಎಸ್.ಎಲ್. ಭೈರಪ್ಪ ಅವರ ಕಾದಂಬರಿ `ಸಾರ್ಥ'ವನ್ನು ನಾಗರಾಜರಾವ್ ಅವರು ಸಂಸ್ಕೃತಕ್ಕೆ ಅನುವಾದಿಸಿದ್ದಾರೆ.
2006: ಒರಿಸ್ಸಾದ ಭೈತರನಿಕಾ ವನ್ಯಪ್ರಾಣಿ ಮತ್ತು ಸಾಗರ ಜೀವಿಗಳ ಧಾಮದಲ್ಲಿನ ಮೊಸಳೆ ಸಂರಕ್ಷಣಾ ಕೇಂದ್ರದಲ್ಲಿ ವಿಶ್ವದಲ್ಲಿಯೇ ಅತಿ ದೊಡ್ಡದಾದ 23 ಅಡಿಗಳಷ್ಟು ಉದ್ದದ ಮೊಸಳೆ ಇರುವುದು ಬೆಳಕಿಗೆ ಬಂತು. ವಿಶ್ವ ವಿಖ್ಯಾತ ವನ್ಯ ಜೀವಿ ಧಾಮದಲ್ಲಿ ನಡೆಸಿದ ಪ್ರಾಣಿಗಳ ಗಣತಿ ಸಂದರ್ಭದಲ್ಲಿ ಇದು ಪತ್ತೆಯಾಗಿದ್ದು, 2006ರ ಸಾಲಿನ ಗಿನ್ನೆಸ್ ದಾಖಲೆಯಲ್ಲೂ ಸೇರ್ಪಡೆಯಾಗಿದೆ ಎಂದು ರಾಜ್ಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಸಿ. ಮೊಹಂತಿ ಈ ದಿನ ಪ್ರಕಟಿಸಿದರು.
2006: ಸುಪ್ರೀಂಕೋರ್ಟ್ ಆದೇಶದ ಮೇರೆಗೆ ದಂಡದ ರೂಪದಲ್ಲಿ ನೈಸ್ ಕಂಪೆನಿಗೆ ರಾಜ್ಯ ಸರ್ಕಾರ ನೀಡಿದ್ದ 5 ಲಕ್ಷ ರೂಪಾಯಿ ಮೊತ್ತದ ಚೆಕ್ ಬೌನ್ಸ್ ಆಯಿತು. ಚೆಕ್ಕನ್ನು ಕೆನರಾ ಬ್ಯಾಂಕಿಗೆ ಡೆಪಾಸಿಟ್ ಮಾಡಲಾಗಿತ್ತು.
2006: ಬಹುಮಹಡಿ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುವ ಸಲುವಾಗಿ ಲಾಹೋರ್ ನಗರದಲ್ಲಿದ್ದ ಏಕಮಾತ್ರ ಹಿಂದೂ ದೇವಾಲಯ `ಕೃಷ್ಣ ಮಂದಿರ'ವನ್ನು ಕೆಡವಿ ಹಾಕಲಾಗಿದೆ ಎಂದು ಇಸ್ಲಾಮಾಬಾದಿನ `ಡಾನ್' ವರದಿ ಮಾಡಿತು.
1996: ಜನತಾದಳ ಮುಖಂಡ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರನ್ನು ಆರು ವರ್ಷಗಳ ಅವಧಿಗೆ ಪಕ್ಷದಿಂದ ಉಚ್ಚಾಟಿಸಲಾಯಿತು. ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಅಧ್ಯಕ್ಷ ಲಾಲು ಪ್ರಸಾದ್ ಅವರು ಈ ಕ್ರಮ ಕೈಗೊಂಡರು.
1966: ಶಂಕಿತ ಅಪರಾಧಿಗಳ ಸಾಂವಿಧಾನಿಕ ಹಕ್ಕುಗಳಿಗೆ ಸಂಬಂಧಿಸಿದಂತೆ ಅಮೆರಿಕದ ಸುಪ್ರೀಂಕೋರ್ಟ್ ಮಿರಾಂಡ ವರ್ಸಸ್ ಅರಿಝೋನಾ ಪ್ರಕರಣದಲ್ಲಿ ಚಾರಿತ್ರಿಕ ತೀರ್ಪು ನೀಡಿತು. ಪೊಲೀಸರು ಪ್ರಶ್ನಿಸುವ ಮುನ್ನ ಶಂಕಿತ ಅಪರಾಧಿಗಳಿಗೆ ಅವರ ಸಾಂವಿಧಾನಿಕ ಹಕ್ಕುಗಳ ಬಗ್ಗೆ ತಿಳಿಸಬೇಕು ಎಂದು ಕೋರ್ಟ್ ಆದೇಶ ನೀಡಿತು. ಈ ತೀರ್ಪಿನ ಪ್ರಕಾರ ಬಂಧಿತ ಅಪರಾಧಿಗಳನ್ನು ಪ್ರಶ್ನಿಸುವ ಮುನ್ನ ಅವರಿಗೆ ಮೌನ ವಹಿಸುವ, ಅವರು ನೀಡುವ ಯಾವುದೇ ಹೇಳಿಕೆಯನ್ನು ಅವರ ವಿರುದ್ಧ ಬಳಸುವ ಸಾಧ್ಯತೆ ಇರುವ ಬಗ್ಗೆ ಹಾಗೂ ಅವರಿಗೆ ಅಟಾರ್ನಿಯೊಬ್ಬರ ಜತೆ ಸಮಾಲೋಚಿಸುವ ಹಕ್ಕು ಇದೆ ಎಂದು ಪೊಲೀಸರು ತಿಳಿಸಬೇಕು. ಈ ತೀರ್ಪು `ಮಿರಾಂಡಾ ವಾರ್ನಿಂಗ್ಸ್' ಎಂದೇ ಖ್ಯಾತಿ ಪಡೆದಿದೆ.
1965: ನಟ, ನಿರ್ದೇಶಕ, ನಾಟಕಕಾರ, ಹಾಸ್ಯ ನಾಟಕಗಳ ಮೂಲಕ ರಾಜ್ಯದಾದ್ಯಂತ ಮನೆ ಮಾತಾಗಿರುವ ಯಶವಂತ ಸರದೇಶಪಾಂಡೆ ಅವರು ಶ್ರೀಧರರಾವ್ ಗೋಪಾಲರಾವ ಸರದೇಶಪಾಂಡೆ- ಕಲ್ಪನಾದೇವಿ ದಂಪತಿಯ ಮಗನಾಗಿ ವಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿಯ ಉಕ್ಕಲಿಯಲ್ಲಿ ಜನಿಸಿದರು.
1963: ಕಲಾವಿದ ಎಂ. ಗುರುರಾಜ ಜನನ.
1962: ಸಾಹಿತಿ ಸುರೇಶ ಅಂಗಡಿ ಜನನ.
1960: ಕಲಾವಿದ ಶಿವಕುಮಾರ ಆರಾಧ್ಯ ಜನನ.
1959: ಕಲಾವಿದ ಆರ್. ಕೆ. ಪದ್ಮನಾಭ ಜನನ.
1958: ಸಾಹಿತಿ ಜಯರಾಮ ಕಾರಂತ ಜನನ.
1943: ಕಲಾವಿದೆ ಎಂ.ಜೆ. ಕಮಲಾಕ್ಷಿ ಜನನ.
1941: ಸಾಹಿತಿ ಜ.ಹೋ. ನಾರಾಯಣಸ್ವಾಮಿ ಜನನ.
1940: ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ಸಂದರ್ಭದಲ್ಲಿ ಪಂಜಾಬ್ ಗವರ್ನರ್ ಆಗಿದ್ದ ಮೈಕೆಲ್ ಒ'ಡಾಯರ್ ನನ್ನು ಕೊಂದುದಕ್ಕಾಗಿ ಭಾರತದ ಕ್ರಾಂತಿಕಾರಿ ಹೋರಾಟಗಾರ ಊಧಮ್ ಸಿಂಗ್ ಅವರನ್ನು ಲಂಡನ್ನಿನಲ್ಲಿ ಗಲ್ಲಿಗೇರಿಸಲಾಯಿತು.
1908: ಮುಜಾಫರ್ ಪುರ ಬಾಂಬ್ ಸ್ಫೋಟಕ್ಕಾಗಿ ಭಾರತೀಯ ಕ್ರಾಂತಿಕಾರಿ ಹೋರಾಟಗಾರ ಖುದೀರಾಮ್ ಬೋಸ್ ಅವರಿಗೆ ಮರಣದಂಡನೆ ವಿಧಿಸಲಾಯಿತು. ಈ ಬಾಂಬ್ ಸ್ಫೋಟದಲ್ಲಿ ಇಬ್ಬರು ಬ್ರಿಟಿಷ್ ಮಹಿಳೆಯರು ಮೃತರಾಗಿದ್ದರು.
1879: ಖ್ಯಾತ ಕ್ರಾಂತಿಕಾರಿ ಗಣೇಶ ದಾಮೋದರ ಸಾವರ್ಕರ್ ಜನನ.
1858: ಹದಿನೆಂಟನೆಯ ಶತಮಾನದ ಉತ್ತರಾರ್ಧದಲ್ಲಿ ಕನ್ನಡಕ್ಕಾಗಿ ದುಡಿಯವುದರೊಂದಿಗೆ ಸಮಾಜ ಸೇವೆಯನ್ನೂ ಕೈಂಕರ್ಯವನ್ನಾಗಿ ಮಾಡಿಕೊಂಡಿದ್ದ ಬುದ್ಧಯ್ಯ ಪುರಾಣಿಕ (13-6-1858ರಿಂದ 4-5-1959) (ಪೂರ್ಣ ಹೆಸರು ಶಿವಮೂರ್ತಿ ಬುದ್ಧಯ್ಯ ಸ್ವಾಮಿ ಮಗಿಪ್ರಭುದೇವ ಪುರಾಣಿಕ) ಅವರು ಮಗಿ ಪ್ರಭುದೇವರು-ಲಿಂಗಮ್ಮ ದಂಪತಿಯ ಪುತ್ರನಾಗಿ ವಿಜಾಪುರ ಜಿಲ್ಲೆಯ ತೇರದಾಳದಲ್ಲಿ ಈದಿನ ಜನಿಸಿದರು. ಕನ್ನಡ, ಮರಾಠಿ, ಇಂಗ್ಲಿಷ್, ಸಂಸ್ಕೃತದಲ್ಲಿವಿಶೇಷ ಪಾಂಡಿತ್ಯ ಹೊಂದಿದ್ದ ಪುರಾಣಿಕ ಕನ್ನಡ ಹಾಗೂ ಮರಾಠಿಯಲ್ಲಿ ಹಲವಾರು ಕೃತಿಗಳನ್ನು ರಚಿಸಿದರು.
1842: ರಾಣಿ ವಿಕ್ಟೋರಿಯಾ ಮತ್ತು ರಾಜಕುಮಾರ ಆಲ್ಬರ್ಟ್ ಸ್ಲೌಗ್ನಿಂದ ಪ್ಯಾಡ್ಡಿಂಗ್ಟನ್ ವರೆಗೆ ಗ್ರೇಟ್ ವೆಸ್ಟರ್ನ್ ರೈಲ್ವೇಯಲ್ಲಿ ಪ್ರಯಾಣ ಮಾಡಿದರು. ಈ ರೀತಿ ಪ್ರಯಾಣಕ್ಕೆ ರೈಲುಗಾಡಿಯನ್ನು ಬಳಸಿದ ಮೊದಲ ಬ್ರಿಟಿಷ್ ರಾಣಿ ಇವರು.
No comments:
Post a Comment