ಪಿಎಂ ವಿದ್ಯಾಲಕ್ಷ್ಮಿ: ಉನ್ನತ ವಿದ್ಯಾಭ್ಯಾಸಕ್ಕೆ ಅಡಚಣೆ ರಹಿತ ನೆರವು
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ೨೦೨೪ ನವೆಂಬರ್ ೬ರ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ʼಪ್ರಧಾನ ಮಂತ್ರಿ ವಿದ್ಯಾಲಕ್ಷ್ಮಿʼ ಎಂಬ ಇನ್ನೋಂದು ಕೇಂದ್ರೀಯ ಯೋಜನೆಗೆ ಅನುಮೋದನೆ ನೀಡಿದೆ. ೨೦೨೦ರ ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿಯಲ್ಲಿ ರೂಪುಗೊಂಡಿರುವ ಈ ಯೋಜನೆಯು ಯಾರೇ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಯಾವುದೇ ಹಣಕಾಸು ಅಡಚಣೆ ರಹಿತ ವಿದ್ಯಾಭ್ಯಾಸಕ್ಕೆ ಅನುವು ಮಾಡಿ ಕೊಡುತ್ತದೆ.
ಸರ್ಕಾರಿ ಮತ್ತು ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿವಿಧ ಕ್ರಮಗಳ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕೆ ಈ ಯೋಜನೆ ಮೂಲಕ ಹಣಕಾಸಿನ ನೆರವು ಲಭ್ಯವಾಗಲಿದೆ.
ಪ್ರಧಾನಮಂತ್ರಿ ವಿದ್ಯಾಲಕ್ಷ್ಮಿ ಯೋಜನೆಯ ಅಡಿಯಲ್ಲಿ ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಪಡೆಯುವ ಯಾರೇ ವಿದ್ಯಾರ್ಥಿಗೆ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಶಿಕ್ಷಣ ಶುಲ್ಕ ಮತ್ತು ಕೋರ್ಸಿಗೆ ಸಂಬಂಧಿಸಿದ ಇತರ ವೆಚ್ಚಗಳನ್ನು ಸಂಪೂರ್ಣವಾಗಿ ಸರ್ಕಾರಿ ಗ್ಯಾರಂಟಿಯ ಸಾಲದ ಮೂಲಕ ಪಡೆಯಲು ಅರ್ಹತೆಯನ್ನು ಒದಗಿಸುತ್ತದೆ.
ಯೋಜನೆಯು ಅತ್ಯಂತ ಸರಳ, ಪಾರದರ್ಶಕ ಮತ್ತು ವಿದ್ಯಾರ್ಥಿ ಸ್ನೇಹೀ ವ್ಯವಸ್ಥೆಯಾಗಿರಲಿದ್ದು, ಸಂಪೂರ್ಣ ಡಿಜಿಟಲ್ ಮತ್ತು ಆಂತರಿಕವಾಗಿ ಕಾರ್ಯನಿರ್ವಹಿಸುವಂತೆ ಇರುತ್ತದೆ.
ಎನ್ ಐ ಆರ್ ಎಫ್ ಶ್ರೇಯಾಂಕದಿಂದ ನಿರ್ಧರಿಸಲ್ಪಟ್ಟ ರಾಷ್ಟ್ರದ ಉನ್ನತ ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಗಳೀಗೆ ಯೋಜನೆ ಅನ್ವಯಿಸುತ್ತದೆ. ಅಗ್ರ ೧೦೦ ಸ್ಥಾನಗಳ ಒಳಗೆ ಬರುವ ಸರ್ಕಾರಿ ಮತ್ತು ಖಾಸಗಿ ಸೇರಿದಂತೆ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈ ಯೋಜನೆಯ ಲಾಭ ವಿದ್ಯಾರ್ಥಿಗಳಿಗೆ ಸಿಗಲಿದೆ.
೧೦೦ರಿಂದ ೨೦೦ ಸ್ಥಾನಗಳ ಒಳಗೆ ಬರುವ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕೂಡಾ ಈ ಯೋಜನೆ ಅನ್ವಯವಾಗಲಿದೆ. ಎನ್ ಐ ಆರ್ ಎಫ್ ಶ್ರೇಯಾಂಕವನ್ನು ಆಧರಿಸಿ ಈ ಶಿಕ್ಷಣ ಸಂಸ್ಥೆಗಳ ಪಟ್ಟಿಯನ್ನು ಪ್ರತಿವರ್ಷವೂ ನವೀಕರಿಸಲಾಗುತ್ತದೆ. ಮೊದಲಿಗೆ ೮೬೦ ಶಿಕ್ಷಣ ಸಂಸ್ಥೆಗಳಲ್ಲಿ ಆರಂಭವಾಗಲಿರುವ ಈ ಯೋಜನೆಯಿಂದ ೨೨ ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
₹ 7.5 ಲಕ್ಷದವರೆಗಿನ ಸಾಲದ ಮೊತ್ತಕ್ಕೆ, ವಿದ್ಯಾರ್ಥಿಯು ಬಾಕಿ ಉಳಿದಿರುವ ಡೀಫಾಲ್ಟ್‌ನ 75% ರಷ್ಟು ಕ್ರೆಡಿಟ್ ಗ್ಯಾರಂಟಿಗೆ ಅರ್ಹರಾಗಿರುತ್ತಾರೆ. ಈ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲಗಳು ಲಭ್ಯವಾಗುವಂತೆ ಬ್ಯಾಂಕ್‌ಗಳಿಗೆ ಬೆಂಬಲವನ್ನು ನೀಡುತ್ತದೆ.
ಮೇಲಿನವುಗಳ ಜೊತೆಗೆ, ವಾರ್ಷಿಕ ₹ 8 ಲಕ್ಷದವರೆಗಿನ ಕುಟುಂಬದ ಆದಾಯವನ್ನು ಹೊಂದಿರುವ ಮತ್ತು ಯಾವುದೇ ಸರ್ಕಾರಿ ವಿದ್ಯಾರ್ಥಿವೇತನ ಅಥವಾ ಬಡ್ಡಿ ರಿಯಾಯಿತಿ ಯೋಜನೆಗಳ ಅಡಿಯಲ್ಲಿ ಪ್ರಯೋಜನಗಳಿಗೆ ಅರ್ಹರಲ್ಲದ ವಿದ್ಯಾರ್ಥಿಗಳಿಗೆ ₹ 10 ಲಕ್ಷದವರೆಗಿನ ಸಾಲಕ್ಕೆ 3 ಪ್ರತಿಶತ ಬಡ್ಡಿ ರಿಯಾಯಿತಿಯನ್ನು ಸಹ ಒದಗಿಸಲಾಗುತ್ತದೆ.
ಪ್ರತಿ ವರ್ಷ ಒಂದು ಲಕ್ಷ ವಿದ್ಯಾರ್ಥಿಗಳಿಗೆ ಬಡ್ಡಿ ಸಹಾಯಧನ ನೀಡಲಾಗುವುದು. ಸರ್ಕಾರಿ ಸಂಸ್ಥೆಗಳಿಂದ ಬಂದಿರುವ ಮತ್ತು ತಾಂತ್ರಿಕ/ ವೃತ್ತಿಪರ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು. 2024-25 ರಿಂದ 2030-31ರ ಅವಧಿಯಲ್ಲಿ ₹ 3,600 ಕೋಟಿ ವೆಚ್ಚ ಮಾಡಲಿದ್ದು, ಈ ಅವಧಿಯಲ್ಲಿ 7 ಲಕ್ಷ ಹೊಸ ವಿದ್ಯಾರ್ಥಿಗಳು ಈ ಬಡ್ಡಿ ರಿಯಾಯಿತಿಯ ಲಾಭವನ್ನು ಪಡೆಯುವ ನಿರೀಕ್ಷೆಯಿದೆ.
ಉನ್ನತ ಶಿಕ್ಷಣ ಇಲಾಖೆಯು "ಪಿಎಂ-ವಿದ್ಯಾಲಕ್ಷ್ಮಿ" ಎಂಬ ಏಕೀಕೃತ ಪೋರ್ಟಲ್ (https://www.vidyalakshmi.co.in/Students/) ಅನ್ನು ಹೊಂದಿದ್ದು, ಎಲ್ಲಾ ಬ್ಯಾಂಕ್‌ಗಳು ಬಳಸಲು ಸರಳೀಕೃತ ಅಪ್ಲಿಕೇಶನ್ ಪ್ರಕ್ರಿಯೆಯ ಮೂಲಕ ವಿದ್ಯಾರ್ಥಿಗಳು ಶಿಕ್ಷಣ ಸಾಲ ಮತ್ತು ಬಡ್ಡಿ ರಿಯಾಯಿತಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ. ಇ-ವೋಚರ್ ಮತ್ತು ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ವ್ಯಾಲೆಟ್‌ಗಳ ಮೂಲಕ ಬಡ್ಡಿ ಉಪದಾನದ ಪಾವತಿಯನ್ನು ಮಾಡಲಾಗುತ್ತದೆ.