ಕಿಸಾನ್ ‘ದ್ರೋಣ’ ನಿನಗಿದೋ ಸಲಾಂ…!
ಒಂದು ಕಥೆ ನೆನಪಾಗ್ತದೆ. ಮಹಾಭಾರತದ ಕಥೆ ಅದು. ಪಾಂಡವರು ಮತ್ತು ಕೌರವರು ಎಳೆಯರಾಗಿದ್ದಾಗ ಬಾವಿಯೊಂದರ ಸಮೀಪ ಆಟವಾಡ್ತಾ ಇದ್ದರು. ಆಟದ ಮಧ್ಯೆ ಅವರ ಚೆಂಡು ಬಾವಿಗೆ ಬಿತ್ತು. ಮಕ್ಕಳೆಲ್ಲ ಬಾವಿಯ ಸುತ್ತ ನಿಂತು ನೋಡಿದರು. ಚೆಂಡು ಆಳಕ್ಕೆ ಬಿದ್ದಿದೆ. ಚೆಂಡನ್ನು ಮೇಲೆ ತರುವುದು ಹೇಗೋ ಗೊತ್ತಾಗಲಿಲ್ಲ.
ಅಷ್ಟರಲ್ಲಿ ಅಲ್ಲೊಬ್ಬ ಗಡ್ಡಧಾರಿ ಯುವಕ ಬಂದ.ಮಕ್ಕಳೆಲ್ಲ ಬಾವಿ ಸುತ್ತ ಸೇರಿ ಬಾವಿಗೆ ಇಣುಕುತ್ತಿದ್ದುದನ್ನು ಕಂಡ. ‘ಏನಪ್ಪ ಕಥೆ?’ ಎಂದು ಕೇಳುತ್ತಾ ತಾನೂ ಇಣುಕಿ ನೋಡಿದ. ಚೆಂಡು ಆಳವಾದ ಬಾವಿಯ ನೀರಿನಲ್ಲಿ ತೇಲುತ್ತಿದ್ದುದು ಕಂಡಿತು.
‘ಅರಸುಮಕ್ಕಳು ನೀವು, ಶಸ್ತ್ರಾಸ್ತ್ರ ನಿಪುಣರು. ನಿಮಗೆ ಯಾರಿಗೂ ಚೆಂಡನ್ನು ಹೊರತೆಗೆಯುವ ಬಗೆ ಗೊತ್ತಿಲ್ಲವೇ?’ ಅಂತ ಮಕ್ಕಳನ್ನು ಕೇಳಿದ.
ಮಕ್ಕಳೆಲ್ಲ ‘ಉಹೂಂ’ ಎಂದರು. ‘ನಾನು ತೋರಿಸ್ತೇನೆ ನೋಡಿ’ ಅಂತ ಹೇಳಿದ ಗಡ್ಡಧಾರಿ ಯುವಕ ದರ್ಭೆಯೊಂದನ್ನು ಮಂತ್ರಿಸಿ ಚೆಂಡಿನತ್ತ ಗುರಿ ಮಾಡಿ ಬಾವಿಗೆ ಎಸೆದ. ಅದು ನೇರವಾಗಿ ಸಾಗಿ ಚೆಂಡಿನ ಹೊರಮೈಯನ್ನು ಕಚ್ಚಿಕೊಂಡಿತು. ಯುವಕ ಇನ್ನೊಂದು
ಮಕ್ಕಳು ಅರಮನೆಗೆ ಓಡಿ ತಾತ ಭೀಷ್ಮನಿಗೆ ಈ ವಿಚಾರವನ್ನು ಹೇಳಿದವು. ಭೀಷ್ಮ ಮೈದಾನಕ್ಕೆ ಸರಸರನೆ ಬಂದ. ಮಂತ್ರ ದರ್ಭೆ ಪ್ರಯೋಗದಿಂದ ಚೆಂಡನ್ನು ಹೊರತೆಗೆದ ಗಡ್ಡಧಾರಿಯನ್ನು ಆತ್ಮೀಯವಾಗಿ ಅರಮನೆಗೆ ಕರೆದೊಯ್ಡು ಉಪಚರಿಸಿದ. ಮಕ್ಕಳಿಗೆ ಬಿಲ್ವಿದ್ಯೆಯನ್ನು ಹೇಳಿಕೊಡಬೇಕು ಅಂತ ಕೇಳಿಕೊಂಡ.
ಆ ಬಳಿಕ ಪಾಂಡವರು, ಕೌರವರು ಆತನಿಂದಲೇ ಬಿಲ್ವಿದ್ಯೆ ಕಲಿತು ಶಸ್ತ್ರಾಸ್ತ್ರ ಪ್ರಯೋಗದಲ್ಲಿ ಪಾರಂಗತರಾದರು.
ಈ ಗಡ್ಡಧಾರಿ ಯುವಕ ಯಾರೆಂದು ನಿಮಗೆ ಈಗಾಗಲೇ ಗೊತ್ತಾಗಿರಬೇಕಲ್ಲವೇ?
‘ಹೌದು’ ಆತನೇ ದ್ರೋಣ. ಮುಂದಕ್ಕೆ ‘ದ್ರೋಣಾಚಾರ್ಯ’ ಎಂದೇ ಪರಿಚಿತನಾದ. ಗುರಿ ಇಡುವುದರಲ್ಲಿ ಈ ದ್ರೋಣ ಹೆಸರುವಾಸಿ. ಬಾಣ ಬಿಡುವಾಗ ಗುರಿ ಇಟ್ಟು ಬಿಡುವುದು ಅತ್ಯಗತ್ಯ ಎಂಬುದನ್ನು ಆತ ಹೇಳಿಕೊಟ್ಟಿದ್ದ. ಮಕ್ಕಳ ಪೈಕಿ ಅರ್ಜುನ ಅವರ ಮಾತುಗಳನ್ನು ಲಕ್ಷ್ಯವಿಟ್ಟು ಕೇಳಿಕೊಂಡು ಆತನ ಅಚ್ಚುಮೆಚ್ಚಿನ ಶಿಷ್ಯನಾಗಿದ್ದ.
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು, ಕೃಷಿಕರಿಗೆ ಅನುಕೂಲವಾಗುವ ಉಪಕರಣ ಒಂದಕ್ಕೆ ಇತ್ತೀಚೆಗೆ ಚಾಲನೆ ನೀಡಿದರು. ಆ ಉಪಕರಣದ ಹೆಸರೇನು ಗೊತ್ತೇ? ‘ದ್ರೋಣ’. ಇಂಗ್ಲಿಷ್ ಪ್ರಭಾವ ನೋಡಿ. ನಾವು ಆ ಪದವನ್ನು ‘ಡ್ರೋನ್’ ಎಂಬುದಾಗಿ ಉಚ್ಚರಿಸುತ್ತೇವೆ.
ಮಹಾಭಾರತದ ದ್ರೋಣ ಹೇಗೆ ನಿಖರವಾಗಿ ಗುರಿ ಇಟ್ಟು ಬಾಣ ಪ್ರಯೋಗ ಮಾಡುತ್ತಿದ್ದನೋ ಹಾಗೆಯೇ ಈ ‘ಡ್ರೋನ್’ ಕೂಡಾ ನಿಖರತೆಗೆ ಹೆಸರುವಾಸಿ. ಈ ‘ಡ್ರೋನ್’ಗೆ ಏನಾದರೂ ಒಂದು ವಸ್ತನ್ನು ಜೋಡಿಸಿ, ನಿರ್ದಿಷ್ಟ ಜಾಗಕ್ಕೆ ತಲುಪಿಸಲು ಸೂಚನೆ ಕೊಟ್ಟು ಹಾರಿಸಿದರೆ, ಚಾಚೂ ತಪ್ಪದೆ ಅದನ್ನು ಅಲ್ಲಿಗೆ ಮುಟ್ಟಿಸುವ ಸಾಮರ್ಥ್ಯ ಈ ‘ಡ್ರೋನ್’ಗೆ ಉಂಟು.
‘ದ್ರೋಣ’ ಅಂದಾಗ ನಮಗೆಲ್ಲ ನೆನಪಾಗುವುದೇನು? ಮಹಾಭಾರತ ಯುದ್ಧ! ಈಗಿನ ‘ಡ್ರೋನ್’ ಎಂದಾಗ ನಮಗೆ ನೆನಪಾಗುವುದೇನು? ‘ಯುದ್ಧ’ವೇ.
ಏಕೆಂದರೆ ಈ ‘ಡ್ರೋನ್’ ಹುಟ್ಟಿಕೊಂಡ ಕಾಲದಿಂದಲೇ ಬಳಕೆ ಆಗ್ತಾ ಇದ್ದದ್ದು ಯುದ್ಧೋಪಕರಣಗಳ ಸಾಗಣೆ, ವೈರಿಗಳ ಜಾಡು ಪತ್ತೆ ಇತ್ಯಾದಿ ಯುದ್ಧ ಸಂಬಂಧಿ ಕೆಲಸಗಳಿಗಾಗಿಯೇ.
ಆದರೆ ದಿನಗಳೆದಂತೆ ಆಧುನಿಕ ಕಾಲದ ಈ ‘ಡ್ರೋನ್’ ಸಮರಾಂಗಣದಿಂದ ಈಚೆ ರಸ್ತೆಗಳಲ್ಲಿ ಹಾರಾಡುತ್ತಾ ಕಡೆಗೆ ಮದುವೆ ಮನೆಗಳಿಗೇ ಲಗ್ಗೆ ಇಟ್ಟ. ಮದುವೆ ಮನೆಗಳಲ್ಲಿ ಅತ್ತ ಪುರೋಹಿತರ ಮಂತ್ರೋಚ್ಛಾರಣೆ ಆಗುತ್ತಿದ್ದರೆ ಈ ‘ಡ್ರೋನ್’ ಟುರ್ರ್… ಸದ್ದು ಮಾಡುತ್ತಾ ಮದುಮಕ್ಕಳ, ಪುರೋಹಿತರ, ಬಂಧು ಬಾಂಧವರ ತಲೆಗಳ ಮೇಲೆ ಹಾರಾಡಿದ. ಈತ ಮಾಡುತ್ತಿದ್ದ ಕೆಲಸ – ಮಂಟಪದ ಸುತ್ತಮುತ್ತ ಅಡ್ಡಾಡುತ್ತಾ ‘ಕ್ಲಿಕ್’ ‘ಕ್ಲಿಕ್’ ಫೊಟೋ ಹೊಡೆಯುವ ಫೊಟೋಗ್ರಾಫರುಗಳ ಕೆಲಸ. ಇಲ್ಲವೇ ‘ವಿಡಿಯೋ’ ತೆಗೆಯುವ ಕೆಲಸ.
ಈ ಡ್ರೋನ್ ಗುರಿ ಬಹಳ ನಿಖರ. ಎಲ್ಲಿಗೆ ಬೇಕೆಂದರೆ ಅಲ್ಲಿಗೆ ಹೋಗುವ ಛಾತಿ, ಎಲ್ಲಾದರೂ ಬಾಂಬ್ ಹಾಕಬೇಕೆಂದರೆ ಕರಾರುವಾಕ್ಕಾಗಿ ಅದೇ ಜಾಗಕ್ಕೆ ಬಾಂಬ್. ಎಲ್ಲಿಗಾದರೂ ಔಷಧ ಸಾಗಿಸಬೇಕೆಂದರೆ ಅಲ್ಲಿಗೇ ಔಷಧ ರವಾನೆ. ಯಾವುದಾದರೂ ನಿರ್ದಿಷ್ಟ ಜಾಗದ ಫೊಟೋ ವಿಡಿಯೋ ಬೇಕೆಂದರೆ ಅದೇ ಜಾಗದ ಫೊಟೋ ಇಲ್ಲವೇ ವಿಡಿಯೋ ಕ್ಷಣ ಮಾತ್ರದಲ್ಲಿ ಸಿದ್ಧ..
ಈ ಡ್ರೋನ್ ಇಷ್ಟೆಲ್ಲ ಕೆಲಸ ಮಾಡುವುದು ಹೇಗೆ? ಅತ್ಯಾಧುನಿಕ ತಂತ್ರಜ್ಞಾನವಾದ ಕೃತಕ ಬುದ್ಧಿಮತ್ತೆ ಅಂದರೆ ಆರ್ಟಿಫೀಷಿಯಲ್ ಇಂಟಲಿಜೆನ್ಸ್), ಯಂತ್ರ ಕಲಿಕೆ (ಮೆಷಿನ್ ಲರ್ನಿಂಗ್) ಮತ್ತು ದೂರ ಸಂವೇದನೆ (ರಿಮೋಟ್ ಸೆನ್ಸಿಂಗ್) ಇವುಗಳ ಸಂಯೋಜನೆಯಿಂದ. ಇದರ ಜೊತೆಗೆ ನ್ಯಾವಿಗೇಷನ್ ಸಿಸ್ಟಮ್, ಜಿಪಿಎಸ್, ಉತ್ತಮ ಗುಣಮಟ್ಟದ ಕ್ಯಾಮೆರಾಗಳು, ಪ್ರೋಗ್ರಾಮಿಂಗ್ ಮಾಡಬಹುದಾದ ನಿಯಂತ್ರಣಗಳು ಕೂಡಾ ಈ ‘ಡ್ರೋನ್’ನಲ್ಲಿ ಇರುತ್ತವೆ. ಮನುಷ್ಯರು ಇಲ್ಲದೆಯೇ ಕಾರ್ಯ ನಿರ್ವಹಿಸುವ ಈ ‘ಡ್ರೋನ್’ ಸೂಚಿಸುವ ಕೆಲಸವನ್ನು ಅತ್ಯಂತ ನಿಖರವಾಗಿ ಮಾಡುತ್ತದೆ. ಇದೊಂದು ಹಾರುವ ರೊಬೋಟ್.
ಹೆಚ್ಚಿನ ರೈತರು ಪ್ರಸ್ತುತ ಕೃಷಿಗಾಗಿ ಉಪಗ್ರಹಗಳಿಂದ ಲಭಿಸುವ ಮಾಹಿತಿ ಅಥವಾ ಡೇಟಾವನ್ನು ಬಳಸುತ್ತಾರೆ. ಆದರೆ ಇದು ತುಂಬಾ ತುಟ್ಟಿ. ಆಧುನಿಕ ತಂತ್ರಜ್ಞಾನದ ಜೊತೆಗೆ ಸಜ್ಜಾದ ಈ ‘ಡ್ರೋನ್’ ಒದಗಿಸುವ ಸಮೀಕ್ಷಾ ಮಾಹಿತಿ ಉಪಗ್ರಹ ಒದಗಿಸುವ ಮಾಹಿತಿಗಿಂತಲೂ ಹೆಚ್ಚು ನಿಖರ. ಹಾಗೆಯೇ ಅಗ್ಗ ಕೂಡಾ.. ಹೀಗಾಗಿ ಈಗ ‘ಡ್ರೋನ್’ ಬಳಕೆ ಕೃಷಿಯಲ್ಲೂ ಹೆಚ್ಚುತ್ತಿದೆ.
ಹಾಗಿದ್ದರೆ ಡ್ರೋನ್ ಮೂಲಕ ಕೃಷಿಯಲ್ಲಿ ಏನೇನು ಮಾಡಬಹುದು?
1. ನೀರಾವರಿಗಾಗಿ ನಿಗಾ ವಹಿಸುವುದು: ವಿವಿಧ
ಬಗೆಯ ಸಂವೇದಕ ಅಥವಾ ಸೆನ್ಸರುಗಳನ್ನು ಒಳಗೊಂಡ ಡ್ರೋನ್ ಗಳು ತುಂಬಾ ಶುಷ್ಕವಾಗಿರುವ ಪ್ರದೇಶವನ್ನು ಗುರುತಿಸುತ್ತವೆ. ಹೀಗಾಗಿ ಡ್ರೋನ್ ಸಮೀಕ್ಷೆಯನ್ನು ಆಧರಿಸಿ ನೀರಾವರಿಯಲ್ಲಿ ನೀರಿನ ದಕ್ಷತೆಯನ್ನು ಹೆಚ್ಚಿಸಬಹುದು. ಎಲ್ಲಿಗೆ ಅಗತ್ಯವಿದಯೋ ಆ ಪ್ರದೇಶಕ್ಕೆ ಕರಾರುವಾಕ್ಕಾಗಿ ನೀರು ಒದಗಿಸಿ ಬೆಳೆಗಳ ಸಮರ್ಪಕ ಬೆಳವಣಿಗೆ ಆಗುವಂತೆ ನೋಡಿಕೊಳ್ಳಬಹುದು.
2. 2. ಬೆಳೆ ಆರೋಗ್ಯದ ನಿಗಾ ವಹಿಸುವುದು: ಸಸಿಗಳ ಆರೋಗ್ಯ ಪತ್ತೆ, ಆರಂಭಿಕ ಹಂತದ ಬ್ಯಾಕ್ಟೀರಿಯಾ/ ಶಿಲೀಂದ್ರ ಬಾಧೆ ಗುರುತಿಸುವುದು. ಯಾವ ಸಸಿಗಳ ವಿಭಿನ್ನ ಪ್ರಮಾಣದ ಹಸಿರು ಬೆಳಕು ಮತ್ತು ನಿಯರ್ –ಇನ್ ಫ್ರಾರೆಡ್ ಸ್ಪೆಕ್ಟ್ರೋಸ್ಕೋಪಿ (ಎನ್ ಐ ಆರ್ ಎಸ್) ಬೆಳಕನ್ನು ಪ್ರತಿಬಿಂಬಿಸುತ್ತವೆ ಎಂಬುದನ್ನು ಕೃಷಿ ಡ್ರೋನ್ ಪತ್ತೆ ಹಚ್ಚುತ್ತದೆ. ಇದನ್ನು ಆಧರಿಸಿ ಗಿಡಗಳ ದೋಷಗಳ ಮೇಲ್ವಿಚಾರಣೆ ಪತ್ತೆ ಸಾಧ್ಯ. ಇದು ಬೆಳೆಗಳ ರಕ್ಷಣೆಗೆ ಹಾಗೆಯೇ ಬೆಳೆ ವಿಫಲವಾದರೆ ರೈತರಿಗೆ ನಿಖರ ಮಾಹಿತಿಯೊಂದಿಗೆ ವಿಮಾ ಕೋರಿಕೆ ದಾಖಲಿಸಲು ನೆರವಾಗುತ್ತದೆ.
3. ಬೆಳೆಹಾನಿ ಮೌಲ್ಯಮಾಪನ: ಮಲ್ಟಿ ಸ್ಪೆಕ್ಟ್ರಲ್ ಸಂವೇದಕಗಳು ಮತ್ತು ಆರ್ ಜಿಬಿ ಸಂವೇದಕ ಅಳವಡಿಸಲಾದ ಕೃಷಿ ಡ್ರೋನ್ ಗಳು ಕಳೆಗಳು, ಸೋಂಕುಗಳು, ಕೀಟಗಳಿಂದ ಉಂಟಾಗುವ ಕ್ಷೇತ್ರ ಪ್ರದೇಶಗಳನ್ನು ಕೂಡಾ ಪತ್ತೆ ಹಚ್ಚಿ ಬೆಳೆ ಹಾನಿಯ ಮೌಲ್ಯ ಮಾಪನ ಮಾಡುತ್ತವೆ. ಈ ಮಾಹಿತಿಯನ್ನು ಆಧರಿಸಿ ಸೋಂಕುಗಳ ವಿರುದ್ಧ ಹೋರಾಡಬಹುದು. ಅತ್ಯಂತ ಖಚಿತವಾಗಿ ಈ ನಿರ್ದಿಷ್ಟ ಪ್ರದೇಶಕ್ಕೆ ರಾಸಾಯನಿಕ ಸಿಂಪರಣೆ ಮಾಡಿ ಬೆಳೆ ರಕ್ಷಣೆಗೆ ಅನುಕೂಲ ಮಾಡಿಕೊಡುತ್ತವೆ. ಇದರಿಂದ ರೈತರ ಬೆಳೆ ಸಂರಕ್ಷಣಾ ಖರ್ಚುವೆಚ್ಚ ಗಮನಾರ್ಹವಾಗಿ ಇಳಿಯುತ್ತದೆ.
4. 4. ಮಣ್ಣಿನ ವಿಶ್ಲೇಷಣೆ: ಡ್ರೋನ್ ಸಮೀಕ್ಷೆಯು ರೈತರಿಗೆ ತಮ್ಮ ಭೂಮಿಯ ಮಣ್ಣಿನ ಸ್ಥಿತಿಗತಿಯ ಮಾಹಿತಿ ತಿಳಿಯಲು ನೆರವಾಗುತ್ತದೆ. ಮಲ್ಟಿ ಸ್ಪೆಕ್ಟ್ರಲ್ ಸಂವೇದಕಗಳು ಬೀಜ ನೆಡುವಿಕೆ ಮಾದರಿ, ಮಣ್ಣಿನ ಸಂಪೂರ್ಣ ವಿಶ್ಲೇಷಣೆ, ನೀರಾವರಿ ಮತ್ತು ಸಾರಜನಕ ಮಟ್ಟದ ನಿರ್ವಹಣೆಗೆ ಉಪಯುಕ್ತವಾದ ಡೇಟಾ ಒದಗಿಸುತ್ತದೆ. ನಿಖರವಾದ ಫೊಟೋಗ್ರಾಮೆಟ್ರಿ/ 3ಡಿ ಮ್ಯಾಪಿಂಗ್ ರೈತರಿಗೆ ತಮ್ಮ ಮಣ್ಣಿನ ಸ್ಥಿತಿಯನ್ನು ಸಂಪೂರ್ಣವಾಗಿ ವಿಶ್ಲೇಷಿಸಲು ನೆರವಾಗುತ್ತದೆ.
5. 5. ಗಿಡ ನೆಡುವಿಕೆ: ಭಾರತದಲ್ಲಿ ಡ್ರೋನ್ ನವೋದ್ಯಮಗಳು ಡ್ರೋನ್ ನಾಟಿ ವ್ಯವಸ್ಥೆಯನ್ನು ಕಂಡು ಹಿಡಿದಿವೆ. ಇದರಲ್ಲಿ ಬೀಜಕೋಶಗಳು, ಬೀಜಗಳು ಮತ್ತು ನಿರ್ಣಾಯಕ ಪೋಷಕಾಂಶಗಳನ್ನು ಡ್ರೋನ್ ಗಳು ಮಣ್ಣಿಗೆ ನೇರವಾಗಿ ಶೂಟ್ ಮಾಡುತ್ತವೆ. ಈ ತಂತ್ರಜ್ಞಾನವು ವೆಚ್ಚವನ್ನು ಶೇಕಡಾ 85ರಷ್ಟು ಇಳಿಸುವುದರ ಜೊತೆಗೆ ಗಿಡಗಳ ಸ್ಥಿರತೆ, ದಕ್ಷತೆಯನ್ನು ಹೆಚ್ಚಿಸುತ್ತದೆ.
6. 6. ಕೃಷಿ ಸಿಂಪರಣೆ: ಡ್ರೋನ್ ಮೂಲಕ ಕೀಟನಾಶಕಗಳನ್ನು ಬೆಳೆಗಳಿಗೆ ಸಿಂಪರಣೆ ಮಾಡಬಹುದು. ಇದರಲ್ಲಿ ಮಾನವ ಸಂಪರ್ಕ ಅತ್ಯಂತ ಸೀಮಿತ, ಹೀಗಾಗಿ ಮನುಷ್ಯರಿಗೆ ಅಪಾಯ ಕಡಿಮೆ. ಯಾವುದೇ ವಾಹನ, ವಿಮಾನಗಳಗಿಂತ ಹೆಚ್ಚಿನ ವೇಗದಲ್ಲಿ ಕೃಷಿ ಡ್ರೋನ್ ಸಿಂಪರಣೆ ಕಾರ್ಯವನ್ನು ನಿರ್ವಹಿಸುತ್ತದೆ. ಸಮಸ್ಯಾತ್ಮಕ ಪ್ರದೇಶವನ್ನು ನಿಖರವಾಗಿ ಗುರುತಿಸಿ, ಅಲ್ಲಿಗೇ ಚಿಕಿತ್ಸೆ ನೀಡಲು ಸಹಕರಿಸುತ್ತದೆ. ತಜ್ಞರ ಪ್ರಕಾರ ಡ್ರೋನ್ ಸಿಂಪರಣೆಯು ಇತರ ವಿಧಾನಗಳಿಗೆ ಹೋಲಿಸಿದರೆ ಐದು ಪಟ್ಟು ಹೆಚ್ಚು ವೇಗವನ್ನು ಹೊಂದಿದೆ.ಸವಾಲಿನ ಭೂಪ್ರದೇಶಗಳು, ಸೋಂಕಿತ ಪ್ರದೇಶಗಳು, ಎತ್ತರದ ಬೆಳೆಗಳು, ವಿದ್ಯುತ್ ಮಾರ್ಗಗಳಲ್ಲಿ ಕೀಟನಾಶಕ ಸಿಂಪರಣೆಗೆ ಡ್ರೋಣ್ ಬಳಕೆ ರೈತರ ಪಾಲಿಗೆ ಹೆಚ್ಚು ಸುರಕ್ಷಿತವಾಗುತ್ತದೆ.
7. ಜಾನುವಾರು ನಿಗಾ: ಡ್ರೋನ್ ಸಮೀಕ್ಷೆಯಿಂದ ರೈತರು ತಮ್ಮ ಬೆಳೆಗಳ ಮೇಲೆ ಮಾತ್ರವೇ ಅಲ್ಲ ತಮ್ಮ ಜಾನುವಾರುಗಳ ಚಲನವಲನಗಳ ಮೇಲೆ ಕೂಡಾ ನಿಗಾ ಇರಿಸಬಹುದು. ಥರ್ಮಲ್ ಸೆನ್ಸರ್ ತಂತ್ರಜ್ಞಾನವು ಕಳೆದುಹೋದ ಪ್ರಾಣಿಗಳನ್ನು ಹುಡುಕಲು ಮತ್ತು ಜಾನುವಾರುಗಳ ಗಾಯ ಅಥವಾ ಅನಾರೋಗ್ಯ ಪತ್ತೆಗೆ ಸಹಾಯ ಮಾಡುತ್ತದೆ. ಡ್ರೋನ್ ಗಳು ಈ ನಿಟ್ಟಿನಲ್ಲಿ ತುಂಬಾ ಅನುಕೂಲಕರ.
8. 8. ಉತ್ಪಾದನಾ ಸಾಮರ್ಥ್ಯ ಹೆಚ್ಚಳ: ಕೃಷಿಯಲ್ಲಿ ಡ್ರೋನ್ ಬಳಕೆಯಿಂದ ಸಮಗ್ರ ನೀರಾವರಿ, ಬೆಳೆ ಆರೋಗ್ಯದ ಮೇಲ್ವಿಚಾರಣೆ, ಮಣ್ಣಿನ ಆರೋಗ್ಯದ ಬಗ್ಗೆ ಜ್ಞಾನ ಹೆಚ್ಚುವುದರಂದ ಪರಿಸರ ಬದಲಾವಣೆಗೆ ಹೊಂದಿಕೊಂಡು ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಬಹುದು.
9. 9. ಸಂಪನ್ಮೂಲಗಳ ಸದ್ಬಳಕೆ: ಪರಿಣಾಮಕಾರಿ ತಂತ್ರಜ್ಞಾನದ ಅಳವಡಿಕೆಯಿಂದ ಯಾವುದೇ ಸಂಪನ್ಮೂಲಗಳನ್ನು ಪೋಲಾಗದಂತೆ ಬಳಕೆ ಮಾಡಿಕೊಳ್ಳಬಹುದು.ಕೃಷಿ ಡ್ರೋನ್ ಗಳು ನೀರು, ಬೀಜ, ಕೀಟನಾಶಕಗಳಂತಹ ಎಲ್ಲ ಸಂಪನ್ಮೂಲಗಳ ಅತ್ಯುತ್ತಮ ಬಳಕೆಯನ್ನು ಸಾಧ್ಯವಾಗಿಸುತ್ತದೆ.
11. ಇದಿಷ್ಟೇ ಅಲ್ಲ ಡ್ರೋನ್ ಬಳಕೆಯಿಂದ ನಮ್ಮ ರೈತರು ತಮ್ಮ ತಾಜಾ ಹಣ್ಣು, ತರಕಾರಿ ಮತ್ತಿತ ಬೆಳೆಗಳನ್ನು ನೇರವಾಗಿ ತಮ್ಮ ಹೊಲಗಳಿಂದ ಮಾರುಕಟ್ಟೆಗೆ ರವಾನಿಸಬಹುದು. ಮೀನುಗಾರರು ಹಿಡಿದ ಮೀನುಗಳನ್ನು ತಾಜಾತನ ಕೆಡದಂತೆಯೇ ಮಾರುಕಟ್ಟೆಗೆ ರವಾನಿಸಬಹುದು.
ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ನಿಯಮಿತ ಸಂಸ್ಥೆಯು ಇತ್ತೀಚೆಗೆ ಒಂದು ಕ್ರಾಂತಿಕಾರಿ ಕೆಲಸವನ್ನು ಮಾಡುತ್ತಿರುವುದು ನೆನಪಾಗುತ್ತಿದೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅಡಿಕೆ ಕೊಯ್ಯುವುದು ಮತ್ತು ಅಡಿಕೆ ಮರಗಳ ಕೊಳೆ ರೋಗ ನಿವಾರಣೆಗೆ ಔಷಧ ಸಿಂಪರಣೆ ದೊಡ್ಡ ಸವಾಲಿನ ಕೆಲಸವಾಗಿತ್ತು. ಅಪಾಯಕಾರಿಯಾದ ಈ ಕೆಲಸಕ್ಕೆ ಜನ ಸಿಗುವುದೇ ಕಷ್ಟವಾಗಿತ್ತು. ಆಗ ಹೊಸದಾಗಿ ಸೃಷ್ಟಿಸಿದ ‘ಫೈಬರ್ ದೋಟಿ’ ಉಪಕರಣದಿಂದ ಸುಲಭವಾಗಿ ಅಡಿಕೆ ಕೊಯ್ಲು, ಔಷಧ ಸಿಂಪರಣೆಯನ್ನು ಮರ ಏರದೆ ನೆಲದಿಂದಲೇ ಮಾಡಬಹುದು ಎಂಬುದು ಗೊತ್ತಾಯಿತು. ಈ ಸಂಸ್ಥೆಯ ಯುವಕರಿಗೆ ಈ ಉಪಕರಣದ ಬಳಕೆಗೆ ತರಬೇತಿ ನೀಡಿ ನುರಿತ ಸಿಬ್ಬಂದಿಯ ತಂಡವನ್ನೇ ರಚಿಸಿತು. ಅಗತ್ಯ ಇರುವಲ್ಲಿಗೆ ಈ ಸಿಬ್ಬಂದಿಯನ್ನು ಕಳುಹಿಸುವ ವ್ಯವಸ್ಥೆ ಮಾಡಿತು. ಇದರಿಂದ ಯುವಕರಿಗೆ ಕೆಲಸ, ರೈತರಿಗೂ ಅಡಿಕೆ ಕೊಯ್ಲು, ಔಷಧ ಸಿಂಪರಣೆಗೆ ಅನುಕೂಲ ಆಯಿತು.
ಇದೇ ರೀತಿ ಗ್ರಾಮಗಳ ಯುವಕರು, ಸಂಘ ಸಂಸ್ಥೆಗಳು ಅಥವಾ ಗ್ರಾಮ ಪಂಚಾಯತಿಗಳು ಪ್ರತಿ ಹಳ್ಳಿಗಳಲ್ಲಿ ಡ್ರೋನ್ ಇಟ್ಟುಕೊಂಡು ರೈತರ ನೆರವಿಗೆ ಮುಂದಾಗಬಹುದು. ಇದರಿಂದ ರೈತರಿಗೆ ಕೃಷಿಗೆ ನೆರವಾಗುವುದರ ಜೊತೆಗೆ ಬೆಳೆಗಳಿಗೆ ಕ್ಷಿಪ್ರ ಮಾರುಕಟ್ಟೆ ದೊರಕಿಸಲೂ ಸಹಾಯವಾಗುತ್ತದೆ.
ಭಾರತದಲ್ಲಿ ಈಗಾಗಲೇ ಪಂಜಾಬ್, ಗೋವಾ, ಉತ್ತರ ಪ್ರದೇಶ, ಮಧ್ಯಪ್ರದೇಶ, ಆಂದ್ರಪ್ರದೇಶ, ತಮಿಳುನಾಡು, ಅಸ್ಸಾಂ, ರಾಜಸ್ಥಾನ, ತೆಲಂಗಾಣದಲ್ಲಿ 'ಕಿಸಾನ್ ಡ್ರೋನ್ ಯಾತ್ರಾ' ಶುರುವಾಗಿದೆ.
‘ಕಿಸಾನ್ ಡ್ರೋನ್’ ಯಾತ್ರಾಕ್ಕೆ ಚಾಲನೆ ನೀಡಿದ ಪ್ರಧಾನಿ ಕೃಷಿ ಇದರೊಂದಿಗೆ ಬಾನೆತ್ತರಕ್ಕೆ ಏರಲಿದೆ ಎಂದಿದ್ದಾರೆ. ಕೃಷಿ ಉತ್ಪಾದನೆ, ಮಾರುಕಟ್ಟೆಯಲ್ಲಿ ಅನಂತ ಅವಕಾಶ, ಯುವಕರಿಗೆ ಹೊಸ ಉದ್ಯೋಗಾವಕಾಶಗಳು ಲಭಿಸಲಿದೆ ಎಂದಿದ್ದಾರೆ. ಅದು ಶೀಘ್ರ ನೆರವೇರಲಿ ಎಂದು ಹಾರೈಸೋಣ.
PARYAYA: ಕಿಸಾನ್ ‘ದ್ರೋಣ’ ನಿನಗಿದೋ ಸಲಾಂ…!: ಕಿಸಾನ್ ‘ದ್ರೋಣ’ ನಿನಗಿದೋ ಸಲಾಂ…! ಒಂದು ಕಥೆ ನೆನಪಾಗ್ತದೆ. ಮಹಾಭಾರತದ ಕಥೆ ಅದು. ಪಾಂಡವರು ಮತ್ತು ಕೌರವರು ಎಳೆಯರಾಗಿದ್ದಾಗ ಬಾವಿಯೊಂದರ ಸಮೀಪ ಆಟವಾಡ್ತಾ ಇದ್ದರು...
No comments:
Post a Comment