ಗಾಯನ ನಿಲ್ಲಿಸಿದ ’ಗಾನ ಕೋಗಿಲೆ’ ಲತಾ ಮಂಗೇಶ್ಕರ್
ಮುಂಬೈ: ‘ಭಾರತದ ಗಾನ ಕೋಗಿಲೆ’ ಎಂಬುದಾಗಿಯೇ ಖ್ಯಾತರಾಗಿದ್ದ ಗಾಯಕಿ ಲತಾ ಮಂಗೇಶ್ಕರ್ (೯೨) ಅವರು 2022 ಫೆಬ್ರುವರಿ 6ರ ಭಾನುವಾರ ನಿಧನರಾದರು.
ಕೋವಿಡ್-೧೯ ದೃಢಪಟ್ಟ ಹಿನ್ನೆಲೆ ಚಿಕಿತ್ಸೆಗಾಗಿ ಅವರನ್ನು ಮುಂಬೈಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಜನವರಿ ೮ರಂದು ದಾಖಲಿಸಲಾಗಿತ್ತು. ಕೆಲವು ವಾರಗಳಿಂದ ಅವರು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದರು.
ಇತ್ತೀಚೆಗೆ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಾಣಿಸಿಕೊಂಡಿತ್ತಾದರೂ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ, ಭಾನುವಾರ ಬೆಳಿಗ್ಗೆ ಅವರು ಅಗಲಿದರು.
ಗಾನ ಕೋಗಿಲೆ
ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರು ಸುಮಾರು ಏಳು ದಶಕಗಳ ಕಾಲ ಹಿನ್ನೆಲೆ ಗಾಯಕಿಯಾಗಿ ಮನರಂಜಿಸಿದ್ದಾರೆ. ೧೯೪೨ರಿಂದ ಆರಂಭವಾದ ಅವರ ಗಾಯನ ಯಾನದಲ್ಲಿ ೩೦,೦೦೦ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಏ ಮೇರೆ ವತನ್ ಕೆ ಲೋಗೊ, ಲಗ್ ಜಾ ಗಲೇ, ಏಹ್ ಕಹಾ ಆಗಯೇ ಹಮ್ ಹಾಗೂ ಪ್ಯಾರ್ ಕಿಯಾ ತೊ ಡರ್ನಾ ಕ್ಯಾ,...ಸೇರಿದಂತೆ ಅವರ ನೂರಾರು ಹಾಡುಗಳು ಇವತ್ತಿಗೂ ಅಪಾರ ಜನಪ್ರಿಯತೆ ಪಡೆದಿವೆ.
ಭಾರತರತ್ನ, ಪದ್ಮ ವಿಭೂಷಣ, ಪದ್ಮಭೂಷಣ ಮತ್ತು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾಗಿರುವ ಲತಾ ಮಂಗೇಶ್ಕರ್ ಅವರು ಭಾರತೀಯ ಚಿತ್ರರಂಗದ ಐಕಾನ್ ಆಗಿದ್ದು, ದೊಡ್ಡ ಸಂಖ್ಯೆಯ ಹಿಂದಿ ಚಲನಚಿತ್ರಗಳಿಗೆ ಹಿನ್ನೆಲೆ ಗಾಯಕಿಯಾಗಿ ಹಾಡಿದ್ದಾರೆ. ಮರಾಠಿ ಮತ್ತು ಬಂಗಾಳಿ ಸೇರಿದಂತೆ ಹಲವಾರು ಪ್ರಾದೇಶಿಕ ಭಾಷೆಗಳಲ್ಲೂ ಅವರು ಹಲವಾರು ಹಾಡುಗಳನ್ನು ಹಾಡಿದ್ದಾರೆ.
ಪ್ರತಿಷ್ಠಿತ ಗಾಯಕ ಮನೆತನಕ್ಕೆ ಸೇರಿದ ಲತಾ ಮಂಗೇಶ್ಕರ್ ಅವರು ಸಂಗೀತ ರಚನೆ ಹಾಗೂ ಕೆಲವು ಚಿತ್ರಗಳ ನಿರ್ಮಾಣವನ್ನೂ ಮಾಡಿದ್ದಾರೆ.
೧೯೨೯ರಲ್ಲಿ ಜನಿಸಿದ್ದ ಲತಾ ಅವರು ಐವರು ಮಕ್ಕಳ ಪೈಕಿ ಹಿರಿಯವರು. ಶಾಸ್ತೀಯ ಸಂಗೀತಗಾರರಾಗಿದ್ದ ತಂದೆ ಪಂಡಿತ ದೀನಾನಾಥ್ ಮಂಗೇಶ್ಕರ್ ಅವರು ಕಿರಿಯ ಲತಾ ಮಂಗೇಶ್ಕರ್ ಅವರಿಗೆ ಸಂಗೀತದ ಮೊದಲ ಪಾಠ ಮಾಡಿದ್ದರು. ೧೯೪೨ರಲ್ಲಿ ತಂದೆ ಮೃತರಾದ ಬಳಿಕ, ೧೩ರ ಹರೆಯದ ಲತಾ ಮಂಗೇಶ್ಕರ್ ಅವರು ಮರಾಠಿ ಸಿನಿಮಾಗಳಿಗೆ ಹಾಡುವ ಮೂಲಕ ಗಾಯನ ವೃತ್ತಿಯನ್ನು ಆರಂಭಿಸಿದರು.
೧೯೪೫ರಲ್ಲಿ ಲತಾ ಅವರು ಮಧುಬಾಲಾ ನಟನೆಯ ಮಹಲ್ ಚಲಚಿತ್ರದ ’ಆಯೇಗಾ ಆನೇವಾಲ’ ಚಿತ್ರದ ಮೂಲಕ ಮೊತ್ತ ಮೊದಲಿಗೆ ಪ್ರಸಿದ್ಧಿಗೆ ಬಂದರು. ಆ ಬಳಿಕ ಲತಾ ಮಂಗೇಶ್ಕರ್ ಅವರ ಧ್ವನಿ ಮತ್ತು ಗಾಯನ ವೃತ್ತಿ ಹೊಸ ಉತ್ತುಂಗಕ್ಕೆ ಏರಿತು..
ಬೈಜು ಬಾವ್ರಾ, ಮದರ್ ಇಂಡಿಯಾ ಮತ್ತು ಮುಘಲ್-ಇ-ಆಜಂ ದಂತಹ ಚಿತ್ರಗಳಲ್ಲಿ ನೌಶದ್ ರಚನೆಯ ರಾಗ ಆಧಾರಿತ ಹಾಡುಗಳನ್ನು ಅವರು ಹಾಡಿದರು. ಶಂಕರ್ ಜೈಕಿಷನ್ ಅವರ ಹಿಟ್ ಸಿನಿಮಾಗಳಾದ ಬರ್ಸಾತ್, ಶ್ರೀ ೪೨೦, ಸಲೀಲ್ ಚೌಧರಿ ಮಧುಮತಿ ಚಿತ್ರದ ಹಾಡುಗಳು ಲತಾ ಮಂಗೇಶ್ಕರ್ ಅವರಿಗೆ ಅತ್ಯುತ್ತಮ ಹಿನ್ನೆಲೆಗಾಯಕಿ ಫಿಲಂಫೇರ್ ಪ್ರಶಸ್ತಿಯನ್ನು ತಂದು ಕೊಟ್ಟವು. ಬಳಿಕ ಬೀಸ್ ಸಾಲ್ ಬಾದ್, ಖಾನ್ದಾನ್ ಮತ್ತು ಜೀನೆ ಕಿ ರಾಹ್ ಚಿತ್ರಗಳ ಹಾಡುಗಳಿಗೂ ಅವರಿಗೆ ಇನ್ನೂ ಮೂರು ಫಿಲಂಫೇರ್ ಪ್ರಶಸ್ತಿಗಳು ಬಂದವು. ಪರಿಚಯ್, ಕೋರಾ ಕಾಗಜ್ ಮತ್ತು ಲೇಕಿನ್ ಚಿತ್ರಗಳಲ್ಲಿ ಅತ್ಯುತ್ತಮ ಹಿನ್ನೆಲೆ ಗಾಯಕಿಯಾಗಿ ಅವರಿಗೆ ಮೂರು ರಾಷ್ಟ್ರೀಯ ಪ್ರಶಸ್ತಿಗಳು ಬಂದವು.
ಪಾಕೀಜಾ, ಅಭಿಮಾನ್, ಅಮರ್ ಪ್ರೇಮ್, ಆನಂದಿ, ಸಿಲ್ ಸಿಲಾ, ಚಾಂದನಿ, ಸಾಗರ್, ರುಡಾಲಿ, ದಿಲ್ ವಾಲೇ ದುಲ್ಹನಿಯಾ ಲೇ ಜಾಯೇಂಗೆ ಇತ್ಯಾದಿ ಚಿತ್ರಗಳು ಅವರ ಅತ್ಯುತ್ತಮ ಹಿನ್ನೆಲೆ ಗಾಯನಕ್ಕಾಗಿ ಪ್ರಸಿದ್ಧವಾಗಿವೆ.
ಲತಾ ಮಂಗೇಶ್ಕರ್ ಅವರ ದೇಶಭಕ್ತಿ ಗೀತೆಗಳಲ್ಲಿ ೧೯೬೨ರಲ್ಲಿ ಚೀನಾ ಜೊತೆಗಿನ ಸಮರದಲ್ಲಿ ಹುತಾತ್ಮರಾದ ಭಾರತೀಯ ಯೋಧರ ಸ್ಮರಣೆಗಾಗಿ ಹಾಡಿದ ’ಆಯೇ ಮೇರೆ ವತನ್ ಕೆ ಲೋಗೋ’ ಅತ್ಯಂತ ಖ್ಯಾತಿ ಪಡೆದ ಹಾಡಾಗಿದ್ದು ಇದನ್ನು ೧೯೬೩ರ ಗಣರಾಜ್ಯೋತ್ಸವ ದಿನ ನವದೆಹಲಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ಹಾಡಲಾಗಿತ್ತು. ಲತಾ ಮಂಗೇಶ್ಕರ್ ಅವರು ಈ ಹಾಡನ್ನು ರಾಷ್ಟ್ರಪತಿ ಎಸ್. ರಾಧಾಕೃಷ್ಣನ್ ಮತ್ತು ಪ್ರಧಾನಿ ಜವಾಹರಲಾಲ್ ನೆಹರೂ ಅವರ ಸಮ್ಮುಖದಲ್ಲಿ ಹಾಡಿದ್ದರು.
ಲತಾ ಮಂಗೇಶ್ಕರ್ ಅವರು ಹಿಡಿಯಷ್ಟು ಮರಾಠಿ ಚಿತ್ರಗಳಿಗೆ ಸಂಗೀತ ರಚನೆಯನ್ನೂ ಮಾಡಿದ್ದಾರೆ. ಇವುಗಳಲ್ಲಿ ಸಧಿ ಮನಸೆ ಚಿತ್ರವು ಅವರಿಗೆ ಮಹಾರಾಷ್ಟ್ರ ರಾಜ್ಯ ಸರ್ಕಾರದ ಅತ್ಯುತ್ತಮ ಸಂಗೀತ ನಿರ್ದೇಶಕಿ ಪ್ರಶಸ್ತಿಯನ್ನು ೧೯೬೫ರಲ್ಲಿ ತಂದುಕೊಟ್ಟಿತ್ತು. ಅವರು ನಿರ್ಮಿಸಿದ ಕೆಲವೇ ಕೆಲವು ಚಿತ್ರಗಳ ಪೈಕಿ ೧೯೯೦ರಲ್ಲಿ ನಿರ್ಮಿಸಿದ ಲೇಖಿನ್ ಚಿತ್ರವೂ ಒಂದಾಗಿದ್ದು ಅದರಲ್ಲಿ ಸ್ವತಃ ಲತಾ ಅವರೇ ಹಾಡಿದ್ದರು.
No comments:
Post a Comment