ಇಂದಿನ ಇತಿಹಾಸ History Today ಜೂನ್ 06
2017: ಭೋಪಾಲ್: ಮಧ್ಯಪ್ರದೇಶದ ಮಂಡ್‌ಸೌರ್ ಜಿಲ್ಲೆಯಲ್ಲಿ ಪ್ರತಿಭಟನೆ ನಿರತ ರೈತರು ಮತ್ತು ಪೊಲೀಸರ ಮಧ್ಯೆ ಸಂಭವಿಸಿದ ಘರ್ಷಣೆಯಲ್ಲಿ ಪೊಲೀಸರ ಗುಂಡೇಟಿಗೆ ಐವರು ರೈತರು ಬಲಿಯಾದರು. ಪರಿಸ್ಥಿತಿ ನಿಯಂತ್ರಿಸಲು ಕರ್ಫ್ಯೂ ಜಾರಿ ಮಾಡಿದ ಸರ್ಕಾರ ಘಟನೆಯ ನ್ಯಾಯಾಂಗ ತನಿಖೆಗೆ ಆದೇಶಿಸಿತು. ರೈತರು ತಮ್ಮ ಬೆಳೆದ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನೀಡುವುದು ಸೇರಿದಂತೆ ಸಾಲ ಮನ್ನಾಕ್ಕೆ ಒತ್ತಾಯಿಸಿ ಐದು ದಿನದಿಂದ ನಡೆಸುತ್ತಿದ್ದ ಪ್ರತಿಭಟನೆ ಈದಿನ ಹಿಂಸಾ ರೂಪ ಪಡೆದುಕೊಂಡಿತ್ತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ನಡೆಸಿದ ಗೋಲಿಬಾರಿಗೆ ಐವರು ರೈತರು ಬಲಿಯಾದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಕರ್ಫ್ಯು ವಿಧಿಸಿ, ಹೆಚ್ಚಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಯಿತು. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಘಟನೆಯ ನ್ಯಾಯಾಂಗ ತನಿಖೆಗೆ ಆದೇಶ ನೀಡಿದರು. ರೂ.10 ಲಕ್ಷ ಪರಿಹಾರ- ಘಟನೆಯಲ್ಲಿ ಮೃತರಾದ ರೈತರ ಕುಟುಂಬಗಳಿಗೆ ಘೋಷಿಸಲಾಗಿದ್ದ ರೂ.5 ಲಕ್ಷ ಪರಿಹಾರವನ್ನು ರೂ.10 ಲಕ್ಷಕ್ಕೆ ಹೆಚ್ಚಿಸಿ ಸರ್ಕಾರ ಆದೇಶಿಸಿತು. ಶಾಂತಿ ಕಾಪಾಡಲು ಮನವಿ: ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದೆ ಎಂದು ಭರವಸೆ ನೀಡಿದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು, ಜನರು ಹಿಂಸಾಚಾರಕ್ಕೆ ಪ್ರಚೋದನೆ ನೀಡಬಾರದು. ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದರು.
2017: ನವದೆಹಲಿ: ಅಕ್ಟೋಬರ್ 15ರಂದು ಕಾಂಗ್ರೆಸ್‌ನ ಆಂತರಿಕ ಚುನಾವಣೆ ನಿಗದಿಯಾಗಿದ್ದು, ಸೋನಿಯಾ
ಗಾಂಧಿ ಅಧ್ಯಕ್ಷ ಸ್ಥಾನ ತೊರೆಯುವ ಸಾಧ್ಯ ಹೆಚ್ಚಿದೆ ಎಂದು ವರದಿಗಳು ತಿಳಿಸಿದವು. ಆಂತರಿಕ ಚುನಾವಣೆ ಹೊತ್ತಿಗೆ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪಕ್ಷದ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವುದು ಸಾಧ್ಯವಾಗುವಂತೆ ಸೋನಿಯಾ ಅವರು ಸ್ಥಾನ ಬಿಟ್ಟುಕೊಡಬಹುದು ಎನ್ನಲಾಯಿತು. ಪಕ್ಷದ ಆಂತರಿಕ ಚುನಾವಣೆಯನ್ನು ವೇಗವಾಗಿ ಹಾಗೂ ಪ್ರಾಮಾಣಿಕ ರೀತಿಯಲ್ಲಿ ಅಕ್ಟೋಬರ್ 15ರಂದು ನಡೆಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ನಿರ್ಧರಿಸಲಾಯಿತು. ಆದರೆ ಸಭೆಯಲ್ಲಿ ರಾಹುಲ್‌ಗೆ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಹಿರಿಯ ಮುಖಂಡರು ಹೇಳಿದರು. 130 ವರ್ಷಗಳಷ್ಟು ಹಳೆಯ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ಆಯ್ಕೆ ಮಾಡಲು ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಎ.ಕೆ.ಆಂಟೊನಿ ಸೇರಿದಂತೆ ಹಿರಿಯ ಮುಖಂಡರು ಈ ಹಿಂದಿನ ಸಭೆಗಳಲ್ಲಿ ಒಲವು ತೋರಿದ್ದರು. 2013ರ ಜನವರಿಯಲ್ಲಿ ರಾಹುಲ್ ಗಾಂಧಿ ಕಾಂಗ್ರೆಸ್ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದರು.
2016: ನವದೆಹಲಿ: ಕುಸ್ತಿಪಟು ಸುಶೀಲ್ ಕುಮಾರ್ ಅವರ ರಿಯೋ ಒಲಿಂಪಿಕ್ಸ್ ಕನಸು ಹೆಚ್ಚೂ ಕಡಿಮೆ ಕಮರಿತು. ರಿಯೋ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸುವ ಅವಕಾಶಕ್ಕೆ ಆಯ್ಕೆ ಟ್ರಯಲ್ಸ್ ನಡೆಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿತು. ಇದರಿಂದಾಗಿ ಕಳೆದೆರಡು ಒಲಿಂಪಿಕ್ಸ್ನಲ್ಲಿ ಪದಕ ಗೆದ್ದುಕೊಂಡಿದ್ದ ಸುಶೀಲ್ ಕುಮಾರ್ ಅವರ ಹ್ಯಾಟ್ರಿಕ್ ಕನಸು ಬಹುತೇಕ ನುಚ್ಚುನೂರಾದಂತಾಗಿದೆ. ಸುಶೀಲ್ ಕುಮಾರ್ ಕಳೆದೆರಡು ಬಾರಿಯ ಒಲಿಂಪಿಕ್ಸ್ನಲ್ಲಿ 74 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಪದಕ ಗೆದ್ದುಕೊಂಡಿದ್ದರು. ಆದರೆ ಈ ಬಾರಿ ಈ ವಿಭಾಗದ ಸ್ಪರ್ಧೆ ನಡೆಸದಿರಲು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ತೀರ್ಮಾನಿಸಿತ್ತು. ಇದರಿಂದಾಗಿ ಸುಶೀಲ್ ಕುಮಾರ್ ಅವರು ನಾರಸಿಂಗ್ ಸ್ಪರ್ಧಿಸುವ 66 ಕೆಜಿ ವಿಭಾಗದಲ್ಲಿ ಸ್ಪರ್ಧಿಸುವುದಾಗಿ ಹಠ ಹೊತ್ತು ಕುಳಿತಿದ್ದರು. ಇದು ಸಹಜವಾಗಿ ವಿವಾದಕ್ಕೆ ನಾಂದಿ ಹಾಡುವಂತೆ ಮಾಡಿತ್ತು. ಆಯ್ಕೆ ಟ್ರಯಲ್ಸ್ ನಡೆಸಿ ಅದರಲ್ಲಿ ಯಾರು ಅರ್ಹತೆ ಗಿಟ್ಟಿಸಿಕೊಳ್ಳುತ್ತಾರೋ ಅವರನ್ನು ಒಲಿಂಪಿಕ್ಸ್ ಕಳುಹಿಸಿ ಎಂದು ಸುಶೀಲ್ ವಾದ ಮಂಡಿಸಿದ್ದರು. ಆದರೆ ಕಳೆದ ವರ್ಷ 66 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ನಾರಸಿಂಗ್ ಪದಕ ಗೆದ್ದುಕೊಳ್ಳಬಹುದಾದ ಅವಕಾಶ ಹೊಂದಿದ್ದಾರೆನ್ನುವ ಕಾರಣದಿಂದ ಅವರನ್ನೇ ಆಯ್ಕೆ ಮಾಡಲಾಗಿತ್ತು. ಈ ಕ್ರಮವನ್ನು ಪ್ರಶ್ನಿಸಿ ಸುಶೀಲ್ ಕೋರ್ಟ್ ಮೆಟ್ಟಿಲೇರಿ ಕಾನೂನು ಕ್ರಮಕ್ಕೆ ಮುಂದಾಗಿದ್ದರು.
2016: ನವದೆಹಲಿ: ಕ್ಯಾನ್ಸರ್, ಮಧುಮೇಹ, ಬ್ಯಾಕ್ಟೀರಿಯಾ ಸೋಂಕು ಮತ್ತು ರಕ್ತದೊತ್ತಡದಂತಹ ಕಾಯಿಲೆಗಳಿಗೆ ಬಳಕೆ ಮಾಡುವ ಪ್ರಮುಖ 56 ಔಷಧಗಳ ಬೆಲೆಯನ್ನು ಕೇಂದ್ರ ಸರ್ಕಾರ ಸುಮಾರು ಶೇ. 25ರಷ್ಟು ಕಡಿತ ಮಾಡಿತು. ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ (ಎನ್ಪಿಪಿಎ) ಔಷಧ ದರಗಳನ್ನು ಕಡಿತಗೊಳಿಸಿತು. ಔಷಧ ಬೆಲೆಯನ್ನು ಸರಾಸರಿ ಶೇ. 25 ರಷ್ಟು ಇಳಿಕೆ ಮಾಡಲಾಯಿತು. ಕೆಲವು ಔಷಧಗಳ ಬೆಲೆ ಶೇ. 10 ರಿಂದ 15 ರಷ್ಟು ಕಡಿತವಾಗಿದ್ದರೆ, ಕೆಲವು ಔಷಧಗಳ ಬೆಲೆಯನ್ನು ಶೇ. 45 ರಿಂದ 50 ರಷ್ಟು ಕಡಿತಗೊಳಿಸಲಾಯಿತು. ಈ ಔಷಧಗಳ ಬೆಲೆಯನ್ನು ವಾರ್ಷಿಕ ಶೇ. 10 ರಷ್ಟು ಏರಿಕೆ ಮಾಡಲು ಅವಕಾಶ ನೀಡಲಾಗಿದೆ. ಎಂದು ಎನ್ಪಿಪಿಎ ಅಧ್ಯಕ್ಷ ಭುಪೇಂದ್ರ ಸಿಂಗ್ ತಿಳಿಸಿದರು.
2016: ನವದೆಹಲಿ: ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟು ಮಾಡಿದ ಆಪಾದನೆಗಾಗಿ ಶಾರುಖ್ ಮತ್ತು ಸಲ್ಮಾನ್ ಖಾನ್ ಅವರ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲು ಮಾಡುವಂತೆ ಕೋರಿ ಸಲ್ಲಿಸಲಾದ ಕ್ರಿಮಿನಲ್ ದೂರನ್ನು ತೀಸ್ ಹಜಾರಿ ನ್ಯಾಯಾಲಯ ವಜಾ ಮಾಡಿತು. ರಿಯಾಲಿಟಿ ಶೋ ಒಂದರಲ್ಲಿ ನಿರ್ಮಿಸಲಾದ ಹಿಂದು ದೇವಾಲಯದ ಸೆಟ್ ಒಳಗೆ ಶೂಧಾರಿಗಳಾಗಿ ಪ್ರವೇಶಿದ ಹಿನ್ನಲೆಯಲ್ಲಿ ಬಾಲಿವುಡ್ ಸ್ಟಾರ್ ನಟರಾದ ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ 9ನೇ ಆವೃತ್ತಿಗೆ ಅತಿಥಿಯಾಗಿ ಆಗಮಿಸಿದ ಶಾರುಖ್ ಖಾನ್ ಜತೆಗೆ ಸಹ ನಟ ಸಲ್ಮಾನ್ ದೇವಾಲಯದ ಸೆಟ್ ಒಳಗೆ ಶೂ ಧರಿಸಿಕೊಂಡೇ ಪ್ರವೇಶ ಮಾಡಿದ್ದರು. ಇದರಿಂದಾಗಿ ಹಿಂದು ಭಾವನೆಗಳಿಗೆ ಧಕ್ಕೆ ಆಗಿದೆ. ಸ್ಟಾರ್ ನಟರು ಉದ್ದೇಶ ಪೂರ್ವಕ ಶೂನೊಂದಿಗೆ ದೇವಾಲಯದ ಒಳಗಡೆ ಪ್ರವೇಶ ಮಾಡಿದ್ದಾರೆ ಎಂಬ ಆರೋಪದ ಮೇಲೆ ಹಿಂದು ಸಂಘಟನೆಗಳು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದವು. ಈ ನಟರು ಉದ್ದೇಶ ಪೂರ್ವಕವಾಗಿ ಶೂ ಹಾಕಿಕೊಂಡು ನೈಜ ದೇವಾಲಯ ಪ್ರವೇಶ ಮಾಡಿಲ್ಲ. ಬಿಗ್ ಬಾಸ್ ಸಲುವಾಗಿ ಹಾಕಿದ್ದ ಸೆಟ್ನಲ್ಲಿ ನಿರ್ಮಿಸಲಾಗಿದ್ದ ದೇವಾಲಯದ ಮಾದರಿಯೊಳಗಷ್ಟೇ ಪ್ರವೇಶಿಸಿದ್ದರು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಉದ್ದೇಶ ಅವರಿಗೆ ಇರಲಿಲ್ಲ ಎಂದು ಪ್ರಕರಣದ ಕುರಿತು ಕೈಗೊಂಡ ಕ್ರಮದ ವರದಿಯಲ್ಲಿ ಪೊಲೀಸರು ತಿಳಿಸಿದ್ದರು. ವಕೀಲ ಗೌರವ್ ಗುಲಟಿ ಅವರು ಅಧಿನಿಯಮ 295ಎ, 298 ಹಾಗೂ 34ರ ಅನ್ವಯ ಶಾರುಖ್ ಖಾನ್, ಸಲ್ಮಾನ್ ಖಾನ್, ಕಲರ್ಸ್ ವಾಹಿನಿಯ ಮುಖ್ಯಸ್ಥರು ಹಾಗೂ ಬಿಗ್ಬಾಸ್ 9ನೇ ಆವೃತ್ತಿಯ ನಿರ್ದೇಶಕರ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.
2016: ನವದೆಹಲಿ: ಭಾರತದ ಭರವಸೆಯ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಎಟಿಪಿ ಡಬಲ್ಸ್ ಶ್ರೇಯಾಂಕ ಪಟ್ಟಿಯಲ್ಲಿ 10 ನೇ ಸ್ಥಾನ ಪಡೆಯುವ ಮೂಲಕ ಪುರುಷರ ಡಬಲ್ಸ್ ವಿಭಾಗದಲ್ಲಿ ರಿಯೋ ಒಲಿಂಪಿಕ್ಸ್ಗೆ ನೇರ ಅರ್ಹತೆ ಪಡೆದುಕೊಂಡರು. ಫ್ರೆಂಚ್ ಓಪನ್ ಚಾಂಪಿಯನ್ಷಿಪ್ನಲ್ಲಿ ಹಾಲಿ ಚಾಂಪಿಯನ್ಗಳಾದ ಮಾರ್ಕೆಲೊ ಮೇಲೋ ಮತ್ತು ಇವಾನ್ ಡಾಡ್ಜಿಗ್ ಸೋಲನುಭವಿಸಿದ ಕಾರಣ ಬೋಪಣ್ಣ ಎಟಿಪಿ ಶ್ರೇಯಾಂಕದಲ್ಲಿ 10ನೇ ಸ್ಥಾನ ಪಡೆದರು. ಬೋಪಣ್ಣ ಒಲಿಂಪಿಕ್ಸ್ಗೆ ನೇರ ಅರ್ಹತೆ ಪಡೆಯುವುದರ ಜತೆಗೆ ತಮಗಿಷ್ಟ ಬಂದ ಸಹ ಆಟಗಾರನನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯ ಪಡೆದರು. ಆ ಫ್ರೆಂಚ್ ಓಪನ್ನಲ್ಲಿ ಕ್ವಾರ್ಟ್ರ್ ಫೈನಲ್ ಪ್ರವೇಶಿಸಿದ್ದ ಲಿಯಾಂಡರ್ ಪೇಸ್ ಎಟಿಪಿ ಶ್ರೇಯಾಂಕದಲ್ಲಿ 46ನೇ ಸ್ಥಾನ ಪಡೆದರು. ಸಿಂಗಲ್ಸ್ ವಿಭಾಗದಲ್ಲಿ ಯೂಕಿ ಬಾಬ್ರಿ 6 ಸ್ಥಾನ ಕೆಳಗಿಳಿದು 147ನೇ ಸ್ಥಾನ ಪಡೆದರು. ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಸಾನಿಯಾ ಮಿರ್ಜಾ ಸ್ವಿಜರ್ಲೆಂಡ್ನ ಮಾರ್ಟಿನಾ ಹಿಂಗಿಸ್ ಅವರೊಂದಿಗೆ ಅಗ್ರಸ್ಥಾನವನ್ನು ಹಂಚಿಕೊಂಡರು.
2016: ನವದೆಹಲಿ: ಇಸ್ರೋದ ವಾಣಿಜ್ಯ ಅಂಗ ಸಂಸ್ಥೆಯಾದ ಆಂಟ್ರಿಕ್ಸ್ ಮತ್ತು ದೇವಾಸ್ ಮಲ್ಟಿ ಮೀಡಿಯಾ ಲಿ. ನಡುವೆ ನಡೆದಿದ್ದ 1200 ಕೋಟಿ ರೂ. ಒಪ್ಪಂದಕ್ಕೆ ಸಂಬಂಧಿಸಿದಂತೆ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯಡಿ ಜಾರಿ ನಿರ್ದೇಶನಾಲಯ ಶೋಕಾಸ್ ನೋಟಿಸ್ ಜಾರಿ ಮಾಡಿತು. ಆಂಟ್ರಿಕ್ಸ್-ದೇವಾಸ್ ಒಪ್ಪಂದದಲ್ಲಿ ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘನೆಯಾಗಿರುವ ಸಂಬಂಧ ಜಾರಿ ನಿರ್ದೇಶನಾಲಯ 2012ರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿತ್ತು. ಆಂಟ್ರಿಕ್ಸ್ ಮತ್ತು ದೇವಾಸ್ ಕಂಪನಿ ನಡುವೆ 2005ರ ಜನವರಿಯಲ್ಲಿ ತರಂಗಾಂತರ ಮಾರಾಟ ಸಂಬಂಧ ಒಪ್ಪಂದವೇರ್ಪಟ್ಟಿತ್ತು. ಈ ಒಪ್ಪಂದದಲ್ಲಿ ದೇಶದ ಸೂಕ್ಷ್ಮ ಹಿತಾಸಕ್ತಿಗಳಿಗೆ ಬಳಸಿಕೊಳ್ಳಲು ಮೀಸಲಿಟ್ಟಿದ್ದ ‘ಎಸ್’ ಬ್ಯಾಂಡ್ ತರಂಗಾಂತರಗಳನ್ನು ದೇವಾಸ್ ಕಂಪನಿಗೆ ವಿತರಿಸಲಾಗಿತ್ತು. ಈ ಸಂಬಂಧ 1,217.76 ಕೋಟಿ ರೂ. ಒಪ್ಪಂದವಾಗಿತ್ತು. ಈ ಒಪ್ಪಂದದಲ್ಲಿ ವಿದೇಶಿ ವಿನಿಮಯ ನಿಮಯಗಳು ಉಲ್ಲಂಘನೆಯಾಗಿರುವುದು ಸಾಬೀತಾದರೆ ಒಪ್ಪಂದದ 3 ಪಟ್ಟು ಮೊತ್ತವನ್ನು ದಂಡದ ರೂಪದಲ್ಲಿ ಪಾವತಿಸಬೇಕಾಗುತ್ತದೆ.
2016: ಜಿನೇವಾ: ಪರಮಾಣು ಸರಬರಾಜು ಗುಂಪಿನ (ಎನ್ಎಸ್ಜಿ) ಸದಸ್ಯನಾಗುವ ಭಾರತದ ಯತ್ನಗಳನ್ನು ಬೆಂಬಲಿಸುವುದಾಗಿ ಸ್ವಿಜರ್ಲೆಂಡ್ ಭರವಸೆ ನೀಡಿತು. ತಮ್ಮ ಪಂಚರಾಷ್ಟ್ರ ಪ್ರವಾಸದ ಅಂಗವಾಗಿ ಈದಿನ ಸ್ವಿಜರ್ಲೆಂಡ್ಗೆ ಆಗಮಿಸಿದ್ದ ಮೋದಿ ಅವರು ಸ್ವಿಸ್ ಅಧ್ಯಕ್ಷ ಜೊಹಾನ್ ಶಿನೀಡರ್- ಅಮ್ಮಾನ್ ಅವರ ಜೊತೆಗೆ ಮಾತನಾಡಿದ ಸಂದರ್ಭದಲ್ಲಿ ಸಿಜರ್ಲೆಂಡ್ ಈ ಭರವಸೆ ಕೊಟ್ಟಿತು. ‘ಎನ್ಎಸ್ಜಿ ಸದಸ್ಯನಾಗುವ ಭಾರತದ ಪ್ರಯತ್ನವನ್ನು ಬೆಂಬಲಿಸುವುದಾಗಿ ನಾವು ಭರವಸೆ ನೀಡಿದ್ದೇವೆ’ ಎಂದು ಸ್ವಿಸ್ ಫೆಡರೇಶನ್ ಅಧ್ಯಕ್ಷ ಜೊಹಾನ್ ಅವರು ಪ್ರಧಾನಿ ಮೋದಿ ಜೊತೆಗೆ ನೀಡಿದ ಜಂಟಿ ಹೇಳಿಕೆಯಲ್ಲಿ ತಿಳಿಸಿದರು. ‘ರೆಡ್ ಕ್ರಾಸ್ ಸಂಸ್ಥೆಯ ತಾಯ್ನಾಡಾಗಿರುವ ಈ ನಗರ ಮಾನವೀಯತೆಯ ಆತ್ಮವನ್ನು ಹೊಂದಿರುವ ನಗರ’ ಎಂದು ಮೋದಿ ಪ್ರಶಂಸಿದರು. ಇದಕ್ಕೆ ಮುನ್ನ ಜಿನೇವಾದಲ್ಲಿ ಕೈಗಾರಿಕೋದ್ಯಮ ನಾಯಕರ ಜೊತೆ ಮಾತುಕತೆ ನಡೆಸಿದ ಪ್ರಧಾನಿ ‘ನಾವು ವಿಶ್ವದರ್ಜೆಯ ಉತ್ಪಾದನೆಯನ್ನು ಬಯಸುತ್ತಿದ್ದೇವೆ. ಹೀಗಾಗಿ ಸ್ವಿಸ್ ಮಾದರಿಯ ಕೌಶಲ್ಯ ಅಭಿವೃದ್ಧಿ ನಮಗೆ ಅತ್ಯಂತ ಪ್ರಸ್ತುತ’ ಎಂದು ಅವರು ನುಡಿದರು. ಸ್ವಿಸ್ ಕೈಗಡಿಯಾರಗಳಿಗೆ ವಜ್ರಗಳು ಬಂದಿರುವುದು ಗುಜರಾತಿನಿಂದ. ಆದ್ದರಿಂದ ನಿಮ್ಮ ಕಳವಳಗಳ ಬಗ್ಗೆ ನಾನು ಅತ್ಯಂತ ಹೆಚ್ಚಿನ ಕಾಳಜಿ ವಹಿಸುತ್ತೇನೆ ಎಂದು ಮೋದಿ ಹೇಳಿದರು. ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರದಾರರಾಗುವಂತೆ ಸ್ವಿಸ್ ಕಂಪೆನಿಗಳಿಗೆ ಆಹ್ವಾನ ನೀಡಿದ ಪ್ರಧಾನಿ, ಕಾಳಧನ ಮತ್ತು ತೆರಿಗೆ ವಂಚನೆಯನ್ನು ನಿಗ್ರಹಿಸುವುದು ನಮಗೆ ಅತ್ಯಂತ ಮಹತ್ವದ ವಿಚಾರ ಎಂದು ಹೇಳಿದರು. ಮೋದಿ ಅವರು ಜಿನೇವಾಕ್ಕೆ ಖತಾರ್ನ ದೋಹಾದಿಂದ ಕಳೆದ ರಾತ್ರಿ ಆಗಮಿಸಿದ್ದರು.
2016: ನವದೆಹಲಿ: ಯಮುನಾ ನದಿ ದಂಡೆಯಲ್ಲಿ ವಿಶ್ವ ಸಂಸ್ಕೃತಿ ಸಮ್ಮೇಳನ ಆಯೋಜಿಸಿ ನದಿ ಪಾತ್ರಕ್ಕೆ ಧಕ್ಕೆಯುಂಟು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಟ್ ಆಫ್ ಲಿವಿಂಗ್ ದೆಹಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ 4.75 ಕೋಟಿ ರೂ. ದಂಡ ಪಾವತಿಸಿತು. ಬ್ಯಾಂಕ್ ಗ್ಯಾರಂಟಿ ನೀಡಲು ಅನುವು ಮಾಡಿಕೊಡುವಂತೆ ಆರ್ಪ್ ಆಫ್ ಲಿವಿಂಗ್ ಸಲ್ಲಿಸಿದ್ದ ಅರ್ಜಿಯನ್ನು ಹಸಿರು ನ್ಯಾಯ ಪೀಠ ತಿರಸ್ಕರಿಸಿತ್ತು ಮತ್ತು ದಂಡ ಪಾವತಿಸಲು ಸೂಚನೆ ನೀಡಿತ್ತು. ವಿಶ್ವ ಸಂಸ್ಕೃತಿ ಸಮ್ಮೇಳನ ಆಯೋಜಿಸಲು ಯಮುನಾ ದಂಡೆಯಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗಿತ್ತು ಜತೆಗೆ ನೆಲವನ್ನು ಸಮತಟ್ಟು ಮಾಡಿ ವಿವಿಧ ಸೌಲಭ್ಯಗಳನ್ನು ಒದಗಿಸಲಾಗಿತ್ತು. ಇದರಿಂದಾಗಿ ಯಮುನಾ ನದಿ ದಂಡೆಗೆ ಹಾನಿಯಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಹಸಿರು ನ್ಯಾಯ ಪೀಠವು ಆರ್ಟ್ ಆಫ್ ಲಿವಿಂಗ್ ಸಂಸ್ಥೆಗೆ ಪರಿಹಾರವಾಗಿ 5 ಕೋಟಿ ರೂ. ಪಾವತಿಸುವಂತೆ ಸೂಚಿಸಿತ್ತು. ಆ ನಂತರ ಆರ್ಟ್ ಆಫ್ ಲಿವಿಂಗ್ ಕೇವಲ 25 ಲಕ್ಷ ರೂ. ಪಾವತಿಸಿತ್ತು. ಸಮ್ಮೇಳನ ಮುಗಿದ ನಂತರ ಉಳಿದ ಮೊತ್ತವನ್ನು ಪಾವತಿಸುವುದಾಗಿ ತಿಳಿಸಿತ್ತು. ಆದರೆ ದಂಡ ಪಾವತಿಸಲು ವಿಳಂಬ ಮಾಡಿತ್ತು. ಈ ಸಂಬಂಧ ಮೇ 25 ರಂದು ವಿಚಾರಣೆ ನಡೆಸಿದ ಹಸಿರು ನ್ಯಾಯ ಪೀಠ ಆದಷ್ಟು ಶೀಘ್ರ ಉಳಿದ ಮೊತ್ತವನ್ನು ಪಾವತಿಸುವಂತೆ ಸೂಚಿಸಿತ್ತು.
2016: ವಾಷಿಂಗ್ಟನ್: ಅಮೆರಿಕಾ ಮೂಲದ ಪ್ರಶಸ್ತಿ ವಿಜೇತ ಛಾಯಾಗ್ರಾಹಕ ಪತ್ರಕರ್ತ ಡೇವಿಡ್ ಗಿಲ್ಕಿ ಅವರು ಅಪಘಾನಿಸ್ತಾನದಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಸಾವನ್ನಪ್ಪಿದರು. 50ರ ಹರೆಯದ ಡೇವಿಡ್ ಅವರು ಅಮೆರಿಕಾದ ರಾಷ್ಟ್ರೀಯ ಸಾರ್ವಜನಿಕ ರೇಡಿಯೋದಲ್ಲಿ ಕಾರ್ಯ ರ್ನಿಹಿಸುತ್ತಿದ್ದರು. ಅಷ್ಟೇ ಅಲ್ಲ ಹವ್ಯಾಸಿ ಛಾಯಾಚಿತ್ರಕಾರರಾಗಿ ಕೂಡ ಪರಿಚಿತರಾಗಿದ್ದರು. ಅಪ್ಘಾನ್ ಸೇನಾ ಘಟಕದ ಜೊತೆ ಹೆಲ್ಮಂಡ್ ಪ್ರಾಂತ್ಯದಲ್ಲಿ ಹೋಗುತ್ತಿದ್ದಾಗ ವಾಹನಗಳ ಮೇಲೆ ದಾಳಿ ನಡೆದಿದ್ದು, ಗಿಲ್ಕಿ ಅವರು ಗುಂಡು ತಾಗಿ ಸಾವನ್ನಪ್ಪಿದ್ದಾರೆ ಎಂದು ಎನ್ಪಿ ಆರ್ ವಕ್ತಾರ ಇಸಾಬೆಲ್ ಲಾರಾ ಸ್ಪಷ್ಟಪಡಿಸಿದರು. ಗಿಲ್ಕಿ ಅವರಿಗೆ 2010ರಲ್ಲಿ ಜಾರ್ಜ್ ಪೋಲ್ಕ್ ಪ್ರಶಸ್ತಿ, 2007ರಲ್ಲಿ ಎಮ್ಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿದ್ದವು. ದಾಳಿಯಲ್ಲಿ 38ರ ಹರೆಯದ ಅಪ್ಘಾನ್ ಅನುವಾದಕ ಜಬಿಹುಲ್ಲಾ ತಮನ್ನಾ ಕೂಡಾ ಸಾವನ್ನಪ್ಪಿದ್ದಾರೆ. ತಮನ್ನಾ ಈ ಮೊದಲು ಹವ್ಯಾಸಿ ಛಾಯಾಚಿತ್ರಕಾರರಾಗಿ ಕಾರ್ಯನಿರ್ವಹಿಸಿದ್ದರು. ಟಾಮ್ ಬೌಮನ್ ಹಾಗೂ ಮೊನಿಕಾ ಎಂಬ ಪತ್ರಕರ್ತರ ಮೇಲೂ ಗುಂಡಿನ ದಾಳಿ ನಡೆದಿತ್ತು. ಅದೃಷ್ಟವಶಾತ್ ಅವರು ಸಾವಿನಿಂದ ತಪ್ಪಿಸಿಕೊಂಡಿದ್ದರು.
2016: ಇಸ್ಲಾಮಾಬಾದ್: ಅಣ್ವಸ್ತ್ರ ಶಕ್ತಿಯ ಡ್ರೋಣ್ ದಾಳಿ ನಡೆಸಿ ಕ್ಷಣಾರ್ಧದಲ್ಲಿ ಸಂಪೂರ್ಣ ಭಾರತವನ್ನು ಸುಟ್ಟು ಭಸ್ಮ ಮಾಡುತ್ತೇವೆ ಎಂದು ಪಾಕಿಸ್ತಾನದ ಜಮಾತ್-ಉದ್-ದವಾ ಸಂಘಟನೆಯ ವಿವಾದಿತ ಮುಖ್ಯಸ್ಥ ಹಫೀಜ್ ಸಯೀದ್ ಭಾರತಕ್ಕೆ ಎಚ್ಚರಿಕೆ ನೀಡಿದ. 26/11ರ ಮುಂಬೈ ದಾಳಿ ಸಂಚುಕೋರ ಹಫೀಜ್ ಸಯೀದ್ ಭಾರತದ ಕುರಿತು ವಿವಾದಿತ ಹೇಳಿಕೆ ನೀಡಿರುವುದಾಗಿ ಪಾಕಿಸ್ತಾನ ಮೂಲದ ವಾಹಿನಿಯೊಂದು ವರದಿ ಮಾಡಿತು. ಈಗಾಗಲೇ ಭಾರತದ ಮೇಲೆ ದಾಳಿ ಮಾಡಲು ಯೋಜನೆಯನ್ನು ರೂಪಿಸಲಾಗಿದೆ. ಅದಕ್ಕೆ ಪೂರಕವಾದ ಶಸ್ತ್ರಾಸ್ತ್ರಗಳನ್ನು ಸಂಗ್ರಹಣೆ ಮಾಡಲಾಗುತ್ತಿದೆ ಎಂದು ಹಫೀಜ್ ಹೇಳಿಕೆ ತಿಳಿಸಿತು.
ಇದಕ್ಕಾಗಿ ಐಎಸ್ಐ ಸೇರಿದಂತೆ ಭಯೋತ್ಪಾದಕ ಸಂಘಟನೆಗಳಿಗೆ ಸದಸ್ಯರ ನೇಮಕಾತಿ ಸಹ ನಡೆದಿದೆ ಎನ್ನಲಾಯಿತು.. ಈಗಾಗಲೇ ಗಡಿ ಪ್ರದೇಶದಲ್ಲಿ ಎರಡು ದಿನಗಳ ಕಾಲ ಠಿಕಾಣಿ ಹೂಡಿದ್ದ ಈ ಮುಖಂಡ 10 ಗ್ರಾಮಗಳಿಗೆ ತೆರಳಿ ಪ್ರಚೋದನಕಾರಿ ಭಾಷಣ ನಡೆಸಿದ್ದ. ಇತನನ್ನು 2008ರಲ್ಲಿ ವಿಶ್ವಸಂಸ್ಥೆ ಭಯೋತ್ಪಾದಕ ಎಂದು ಘೋಷಿಸಿತ್ತು. ಅಮೆರಿಕವು ಈತನ ತಲೆಗೆ 1 ಕೋಟಿ ಡಾಲರ್ ಬಹುಮಾನವನ್ನು ಘೋಷಿಸಿತ್ತು.
2016: ಪುದುಚೆರಿ: ಪುದುಚೆರಿಯ ನೂತನ ಮುಖ್ಯಮಂತ್ರಿಯಾಗಿ ಮಾಜಿ ಕೇಂದ್ರ ಸಚಿವ ವಿ ನಾರಾಯಣಸ್ವಾಮಿ ಪುದುಚೆರಿಯ ಬೀಚ್ ರೋಡ್ನ ಗಾಂಧಿ ಉದ್ಯಾನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರು ವಿ. ನಾರಾಯಣ ಸ್ವಾಮಿ ಮತ್ತು ಇತರ ಐವರು ಸಂಪುಟ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು. 30 ಸದಸ್ಯ ಬಲದ ಪುದುಚೆರಿ ವಿಧಾನ ಸಭೆಯಲ್ಲಿ ಕಾಂಗ್ರೆಸ್ -ಡಿಎಂಕೆ ಮೈತ್ರಿಕೂಟವು 17ಸದಸ್ಯರನ್ನು ಪಡೆದಿತ್ತು.
2016: ನವದೆಹಲಿ: 2014ರಲ್ಲಿ 52ರ ಹರೆಯದ ಡ್ಯಾನಿಷ್ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಆಕೆಯನ್ನು ದರೋಡೆ ಮಾಡಿದ ಪ್ರಕರಣದಲ್ಲಿ ಐವರು ಆರೋಪಿಗಳೂ ತಪ್ಪಿತಸ್ಥರು ಎಂದು ದೆಹಲಿಯ ನ್ಯಾಯಾಲಯವೊಂದು ತೀರ್ಪು ನೀಡಿತು. ತಮ್ಮ ತೀರ್ಪು ಪ್ರಕಟಿಸಿದ ಬಳಿಕ ಅಡಿಷನಲ್ ಸೆಷನ್ಸ್ ನ್ಯಾಯಾಧೀಶ ರಮೇಶ ಕುಮಾರ್ ಅವರು ಶಿಕ್ಷೆಯ ಪ್ರಮಾಣ ನಿಗದಿ ಪಡಿಸಲು ಜೂನ್ 9ರಂದು ಅಹವಾಲುಗಳನ್ನು ಆಲಿಸಲಾಗುವುದು ಎಂದು ಹೇಳಿದರು. ‘ಎಲ್ಲಾ ಆರೋಪಿಗಳನ್ನೂ ಅವರ ವಿರುದ್ಧ ಹೊರಿಸಲಾಗಿದ್ದ ಎಲ್ಲಾ ಅಪರಾಧಗಳಲ್ಲೂ ತಪ್ಪಿತಸ್ಥರು ಎಂದು ತೀರ್ಮಾನಿಸಲಾಗಿದೆ’ ಎಂದು ನ್ಯಾಯಾಧೀಶರು ಹೇಳಿದರು. ಎಲ್ಲಾ ಐವರೂ ಆರೋಪಿಗಳ ವಿರುದ್ಧ ಹೊರಿಸಲಾದ ಸಾಮೂಹಿಕ ಅತ್ಯಾಚಾರ, ದರೋಡೆ, ಅಪಹರಣ ಮತ್ತು ಅಕ್ರಮ ಸ್ಥಾನಬದ್ಧತೆ. ಸಮಾನ ಉದ್ದೇಶ ಇತ್ಯಾದಿ ಅಪರಾಧಗಳು ಸಾಬೀತಾಗಿವೆ ಎಂದು ನ್ಯಾಯಾಧೀಶರು ಹೇಳಿದರು. ಅಪರಾಧಿಗಳಾದ ಮಹೇಂದ್ರ ಅಲಿಯಾಸ್ ಗಂಜ (27), ಮೊಹಮ್ಮದ್ ರಾಜ (23), ರಾಜು (24), ಅರ್ಜುನ್ (22), ರಾಜು ಚಕ್ಕ (23) ನ್ಯಾಯಾಲಯದಲ್ಲಿ ಹಾಜರಿದ್ದರು. 2014ರ ಜನವರಿ 14ರಂದು ಚೂರಿ ತೋರಿಸಿ ಡ್ಯಾನಿಷ್ ಪ್ರವಾಸಿಯನ್ನು ಬೆದರಿಸಿದ ಅಪರಾಧಿಗಳು ಆಕೆಯನ್ನು ನವದೆಹಲಿ ರೈಲ್ವೆ ನಿಲ್ದಾಣ ಬಳಿಯ ವಿಭಾಗೀಯ ರೈಲ್ವೆ ಅಧಿಕಾರಿಗಳ ಕ್ಲಬ್ ಸಮೀಪದ ನಿರ್ಜನ ಸ್ಥಳಕ್ಕೆ ಒಯ್ದು ಸಾಮೂಹಿಕ ಅತ್ಯಾಚಾರ ಎಸಗಿ ಆಕೆಯ ಬಳಿ ಇದ್ದ ಹಣವನ್ನು ದೋಚಿದ್ದರು ಎಂದು ಪ್ರಾಸೆಕ್ಯೂಷನ್ ಹೇಳಿತ್ತು.
2016: ರಾಜ್ಕೋಟ್: ಅಕ್ರಮವಾಗಿ ಸಾಗರ ಗಡಿ ನಿಯಂತ್ರಣ ರೇಖೆ ದಾಟಿದ ಹಿನ್ನೆಲೆಯಲ್ಲಿ ಪಾಕಿಸ್ತಾನ ಗಡಿ ಭದ್ರತಾ ದಳದಿಂದ ಬಂಧನಕ್ಕೊಳಗಾಗಿದ್ದ 18 ಮಂದಿ ಭಾರತೀಯ ಮೀನುಗಾರರನ್ನು ಪಾಕಿಸ್ತಾನ ಕರಾಚಿ ಜೈಲಿನಿಂದ ಬಿಡುಗಡೆ ಮಾಡಿತು. ಹಿಂದಿನ ದಿನ ಸಂಜೆ ಬಿಡುಗಡೆಗೊಳಗಾದ ಮೀನುಗಾರರನ್ನು ಪಾಕಿಸ್ತಾನ ಅಧಿಕಾರಿಗಳು ಪಂಜಾಬ್ನ ವಾಘಾ ಗಡಿಯಲ್ಲಿ ಭಾರತೀಯ ಅಧಿಕಾರಿಗಳಿಗೆ ಒಪ್ಪಿಸಿದರು.
2016: ಮುಂಬೈ: ಬಹುಭಾಷಾ ಗಾಯಕ ಬೆನ್ನಿ ದಯಾಲ್ ತಮ್ಮ ಸ್ನೇಹಿತೆ ಕ್ಯಾಥರೀನ್ ತಂಗಮ್ನ್ನು ಕೈ ಹಿಡಿಯುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿರಿಸಿದರು. ಸಂಗೀತ ನಿರ್ದೇಶಕ ವಿಶಾಲ್ ದಡ್ಲಾನಿ ಟ್ವೀಟ್ ಮಾಡುವ ಮೂಲಕ ಬೆನ್ನಿ ದಯಾಲ್ ವಿವಾಹವನ್ನು ಖಚಿತ ಪಡಿಸಿದರು. 32ರ ಹರೆಯದ ಬ್ಯಾಂಗ್ ಬ್ಯಾಂಗ್ ಗಾಯಕ ದಯಾಲ್ ಸಾಂಪ್ರದಾಯಿಕ ದೋತಿ – ಕುರ್ತಾದಲ್ಲಿ ಮಿಂಚಿದರು. ವಿವಾಹ ಸಂಭ್ರಮಕ್ಕೆ ವಿಶಾಲ್ ದಡ್ಲಾನಿ ಸಾಕ್ಷಿಯಾಗಿದ್ದು, ಬಾಲಿವುಡ್ನ ಸ್ಟಾರ್ ನಟ-ನಟಿಯರು ಈ ಗಾಯಕನಿಗೆ ವಿವಾಹದ ಶುಭಾಶಯ ಕೋರಿದರು. ತಮಿಳು, ತೆಲಗು, ಹಿಂದಿ, ಕನ್ನಡ, ಮಲಯಾಳಂ ಭಾಷೆಗಳಲ್ಲಿ ನೂರಕ್ಕೂ ಅಧಿಕ ಹಾಡುಗಳನ್ನು ಬೆನ್ನಿ ದಯಾಲ್ ಹಾಡಿದ್ದು, ಹಿಂದಿಯ ಪಪ್ಪು ಕಾಂಟ್ ಡಾನ್ಸ್ ಸಾಲಾ, ಕೈಸೆ ಮುಜೆ, ದಾರು ದೈಸಿ, ಏಕ್ ಮೈನ್ ಔರ್ ಏಕ್ ತು, ಬತ್ತಮಿಜ್ ದಿಲ್, ಲತ್ ಲಗ್ ಗಯಿ ಸೇರಿದಂತೆ ಹಲವಾರು ಜನಪ್ರಿಯ ಗೀತೆಗಳನ್ನು ಹಾಡಿದ್ದರು. ಕನ್ನಡಲ್ಲಿ ಲವ್ ಗರು ಚಿತ್ರದ ತಂಗಾಳಿ ತನ್ನೆದೆಯಲ್ಲಿ, ಉಲ್ಲಾಸ ಉತ್ಸಾಹ – ಚಕೋರಿ ಚಕೋರಿ, ಮಸ್ತ ಮಜಾ ಮಾಡಿ- ಜಣ ಜಣ ಕಾಂಚಾಣ ಸೇರಿದಂತೆ ಹಲವು ಹಾಡುಗಳು ಇವರ ಕಂಠ ಸಿರಿಯಲ್ಲಿ ಮೂಡಿಬಂದಿದ್ದವು.
2009: 'ಆಲ್ ರಷ್ಯನ್' ಫೈನಲ್'ನಲ್ಲಿ ಸ್ವೆಟ್ಲಾನಾ ಕುಜ್ನೆಟ್ಸೋವಾ ಗೆದ್ದರೆ, ದಿನಾರ ಸಫಿನಾ ಬಿದ್ದರು. ಪ್ಯಾರಿಸ್ಸಿನಲ್ಲಿ ನಡೆದ ಫ್ರೆಂಚ್ ಓಪನ್ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಅಧಿಕಾರಯುತ ಗೆಲುವು ಪಡೆದ ಕುಜ್ನೆಟ್ಸೋವಾ ಚಾಂಪಿಯನ್ ಪಟ್ಟ ತಮ್ಮದಾಗಿಸಿದರು. ರೋಲಂಡ್ ಗ್ಯಾರೋಸ್‌ನ ಸೆಂಟರ್ ಕೋರ್ಟಿನಲ್ಲಿ ನಡೆದ ಪಂದ್ಯದಲ್ಲಿ ಟೂರ್ನಿಯ ಏಳನೇ ಶ್ರೇಯಾಂಕದ ಆಟಗಾರ್ತಿ ರಷ್ಯಾದ ಕುಜ್ನೆಟ್ಸೋವಾ 6-4, 6-2 ರಲ್ಲಿ ತಮ್ಮದೇ ದೇಶದ ದಿನಾರ ಸಫಿನಾ ಅವರನ್ನು ಮಣಿಸಿ, ಮಿರುಗುವ ಟ್ರೋಫಿಗೆ ಮುತ್ತಿಕ್ಕಿದರು.
2009: ವಿಶ್ವದಲ್ಲೇ ಮೊಟ್ಟ ಮೊದಲಬಾರಿಗೆ ದೃಷ್ಟಿದಾಯಿ ಆಕರಕೋಶಗಳನ್ನು (ಸ್ಟೆಮ್ ಸೆಲ್) ಕಂಡುಹಿಡಿದ ಆಸ್ಟ್ರೇಲಿಯಾ ವಿಜ್ಞಾನಿಗಳು ಹೊಸ ಸಂಶೋಧನೆಗೆ ನಾಂದಿ ಹಾಡಿದರು. ನ್ಯೂಸೌತ್‌ವೇಲ್ಸ್ ವಿಶ್ವವಿದ್ಯಾಲಯದ ಸಂಶೋಧಕರ ತಂಡವೊಂದು ದೃಷ್ಟಿ ಕಳೆದುಕೊಂಡ ರೋಗಿಯೊಬ್ಬರಿಗೆ ಅವರದೇ ಆಕರಕೋಶ ಬಳಸಿ ದೃಷ್ಟಿ ನೀಡಿತು. ಮೊದಲು ಕಾಂಟ್ಯಾಕ್ಟ್ ಲೆನ್ಸ್ ಮೇಲೆ ಕೋಶಗಳನ್ನು ಕಸಿ ಮಾಡಿ ಹತ್ತು ದಿನಗಳ ಕಾಲ ಭಗ್ನವಾದ ಕಾರ್ನಿಯಾ ಮೇಲೆ ಕೂರಿಸಲಾಗುತ್ತದೆ. ಆ ಅವಧಿಯಲ್ಲಿ ಕೋಶ ಮತ್ತೆ ಕಾರ್ನಿಯಾದಲ್ಲಿ ಬೆಳೆಯತೊಡಗುತ್ತದೆ. ಈ ವಿಧಾನವನ್ನು ಇತರೆ ಅಂಗಗಳ ಕಸಿಗೆ ಕೂಡ ಬಳಸಬಹುದು ಎಂದು ಸಂಶೋಧಕರು ತಿಳಿಸಿದರು. ಪ್ರಸ್ತುತ ಮೂರು ರೋಗಿಗಳ ಮೇಲೆ ಈ ಪ್ರಯೋಗ ನಡೆಯಿತು. ಇದೊಂದು ಸರಳ ಮತ್ತು ಅತಿ ಕಡಿಮೆ ಬೆಲೆಯ ವಿಧಾನ ಎಂದು ಸಂಶೋಧಕರು ತಿಳಿಸಿದರು. ಈ ವಿಧಾನದಲ್ಲಿ ಬಾಹ್ಯ ನೇತ್ರ ಪಡೆಯುವ ಅವಶ್ಯಕತೆ ಇಲ್ಲದೇ ರೋಗಿಯ ಆಕರ ಕೋಶದಿಂದಲೇ ದೃಷ್ಟಿ ನೀಡಬಹುದು. ರೋಗಿ ಆಸ್ಪತ್ರೆಯಲ್ಲಿ ದಾಖಲಾಗುವ ಅವಶ್ಯಕತೆ ಇಲ್ಲದೆ ಕಾಂಟ್ಯಾಕ್ಟ್ ಲೆನ್ಸ್ ಅಳವಡಿಸಿಕೊಂಡು ಕೆಲವೇ ಗಂಟೆಗಳಲ್ಲಿ ಮನೆಗೆ ತೆರಳಬಹುದು. ಬಡರೋಗಿಗಳಿಗೆ ಇದರಿಂದ ಹೆಚ್ಚಿನ ಲಾಭವಾಗಲಿದೆ ಎಂಬುದು ಸಂಶೋಧಕರ ಅಭಿಪ್ರಾಯ.
2009: ತಮ್ಮ ಜಮೀನಿನಲ್ಲಿ ಸರ್ಕಾರ ನಡೆಸುತ್ತಿರುವ ತೈಲ ಹಾಗೂ ಅನಿಲ ಅನ್ವೇಷಣೆ ವಿರುದ್ಧ ಪೆರುವಿನ ಅಮೆಜಾನ್ ಪ್ರದೇಶದ ಮೂಲನಿವಾಸಿಗಳು (ಇಂಡಿಯನ್) ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ 25 ಪ್ರತಿಭಟನಾಕಾರರು ಹಾಗೂ 9 ಮಂದಿ ಪೊಲೀಸರು ಸಾವನ್ನಪ್ಪಿದ ಘಟನೆ ನಡೆಯಿತು. ಉಟ್ಕುಬಾಂಬಾದ ಉತ್ತರ ಪ್ರಾಂತ್ಯದಲ್ಲಿರುವ -ಡೆವಿಲ್ಸ್ ಕರ್ವ್ ಎಂಬ ಪ್ರದೇಶದಲ್ಲಿ ಸುಮಾರು 5,000 ಇಂಡಿಯನ್ನರು ಮುಚ್ಚಿದ್ದ ರಸ್ತೆಯನ್ನು ಅಧಿಕಾರಿಗಳು ತೆರವುಗೊಳಿಸಿದಾಗ ಈ ಘಟನೆ ಸಂಭವಿಸಿತು.
2009: ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಸಾರ್ವಜನಿಕ ಕ್ಷೇತ್ರಕ್ಕೆ ನೀಡಿರುವ ಸೇವೆಯನ್ನು ಗುರುತಿಸಿ ಬ್ರಿಟನ್ನಿನ ಕ್ವೀನ್ಸ್ ಬೆಲ್‌ಫಾಸ್ಟ್ ವಿಶ್ವವಿದ್ಯಾಲಯ (ಕ್ಯೂಯುಬಿ) ಅವರಿಗೆ ಗೌರವ ಡಾಕ್ಟರೇಟ್ ಪದವಿ ('ಡಿಯುನಿವ್' ಪದವಿ) ನೀಡಲು ನಿರ್ಧರಿಸಿತು.
2008: ಬ್ಯಾಂಕಾಕಿನಲ್ಲಿ ಅಂತಾರಾಷ್ಟ್ರೀಯ ಭಾರತೀಯ ಸಿನಿಮಾ ಅಕಾಡೆಮಿ (ಐಐಎಫ್-ಐಫಾ) ಚಲನ ಚಿತ್ರೋತ್ಸವಕ್ಕೆ ಖ್ಯಾತ ಚಿತ್ರನಟ ಅಮಿತಾಭ್ ಬಚ್ಚನ್ ಚಾಲನೆ ನೀಡಿದರು. ಐಫಾ ಪ್ರಶಸ್ತಿ ಪ್ರದಾನ ಸಮಾರಂಭದ ಉದ್ಘಾಟನೆ ಸಮಾರಂಭದಲ್ಲಿ ಜಯಾ ಬಚ್ಚನ್, ದಿಯಾ ಮಿರ್ಜಾ, ಥಾಯ್ಲೆಂಡಿನಲ್ಲಿನ ಭಾರತದ ರಾಯಭಾರಿ ಲತಾ ರೆಡ್ಡಿ ಮತ್ತಿತರ ಗಣ್ಯರೂ ಭಾಗವಹಿಸಿದ್ದರು.
2007: ದೇಶದಲ್ಲೇ ಮೊದಲ ಜಲ ಸಾಕ್ಷರತಾ ಕೇಂದ್ರ ಎಂಬ ಹಿರಿಮೆಯೊಂದಿಗೆ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ನೀರ್ನಹಳ್ಳಿಯಲ್ಲಿ `ಮಲೆನಾಡು ಮಳೆ ಕೇಂದ್ರ ಕೆಂಗ್ರೆ' ಕಾರ್ಯಾರಂಭಗೊಂಡಿತು. ಮಲೆನಾಡಿನ ನೀರ್ನಹಳ್ಳಿ ಮಾಧ್ಯಮಿಕ ಶಿಕ್ಷಣಾಲಯವನ್ನು ಕೇಂದ್ರವಾಗಿ ಇರಿಸಿಕೊಂಡು ರೂಪಿಸಲಾದ ಈ ಕೇಂದ್ರವು ನೆಲ, ಜಲ ಸಂರಕ್ಷಣೆಯ ಪಾಠವನ್ನು ಪ್ರತ್ಯಕ್ಷ ಪ್ರಾತ್ಯಕ್ಷಿಕೆ, ಯಶೋಗಾಥೆಗಳ ಮೂಲಕ ಹೇಳುವ ವಿನೂತನ ಯತ್ನ. ಮಳೆ ಮಾಪನ, ನೀರಿನ ಅಂದಾಜು, ಗುಡ್ಡದಲ್ಲಿ ನೀರಿಂಗಿಸುವ ಸುಲಭ ರಚನೆ, ಕಟ್ ಅಗಳ, ಸಿಲ್ಪಾಲಿನ್ ಟ್ಯಾಂಕ್, ಗಲ್ಲಿಪ್ಲಗ್, ಬಾಂದಾರ, ಛಾವಣಿ ನೀರಿನ ಕೊಯ್ಲು, ತೆರೆದ ಬಾವಿ ಹಾಗೂ ಕೊಳವೆ ಬಾವಿಗೆ ಜಲ ಮರುಪೂರಣ, ಇಂಗು ಕಾಲುವೆ ಸೇರಿದಂತೆ ನೀರುಳಿತಾಯದ ವಿವಿಧ 28 ಮಾದರಿಗಳು ಇಲ್ಲಿವೆ. ಬರಹಗಾರ ಶಿವಾನಂದ ಕಳವೆ ಅವರ ಕನಸಿನ ಕೂಸಾದ ಈ ಮಲೆನಾಡು ಮಳೆ ಕೇಂದ್ರವು ಸೀತಾರಾಮ ಹೆಗಡೆ ನೀರ್ನಹಳ್ಳಿ ಅಧ್ಯಕ್ಷತೆಯಲ್ಲಿ ಕಾರ್ಯ ನಿರ್ವಹಿಸುವುದು. ಸಂಸದ ಅನಂತ ಕುಮಾರ ಹೆಗಡೆ ಈ ಕೇಂದ್ರವನ್ನು ಉದ್ಘಾಟಿಸಿದರು. ಜಲ ತಜ್ಞ ಶ್ರೀಪಡ್ರೆ ವಿಶೇಷ ಉಪನ್ಯಾಸ ನೀಡಿದರು.
2007: ಹೈದರಾಬಾದಿನಲ್ಲಿ ತೃತೀಯ ರಂಗ ಮತ್ತೆ ಚಾಲನೆಗೆ ಬಂತು. ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ತೆಲುಗುದೇಶಂ ವರಿಷ್ಠ ಚಂದ್ರಬಾಬು ನಾಯ್ಡು ಮನೆಯಲ್ಲಿ ಎಂಟು ಪ್ರಾದೇಶಿಕ ಪಕ್ಷಗಳ ನಾಯಕರು ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ಪರ್ಯಾಯವಾಗಿ ನೂತನ ರಾಷ್ಟ್ರೀಯ ರಂಗಕ್ಕೆ ಚಾಲನೆ ನೀಡಿದರು. ಚಂದ್ರಬಾಬು ನಾಯ್ಡು, ಜಯಲಲಿತಾ, ಮುಲಾಯಂ ಸಿಂಗ್, ಎಸ್. ಬಂಗಾರಪ್ಪ, ಓಂ ಪ್ರಕಾಶ್ ಚೌಟಾಲ, ಬಾಬುಲಾಲ ಮರಾಂಡಿ, ವೈಕೊ ಈ ನೂತನ ರಂಗದ ನಾಯಕರು.
2007: 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದ್ದ ಇನ್ನೂ ಮೂವರಿಗೆ ವಿಶೇಷ ಟಾಡಾ ನ್ಯಾಯಾಲಯ ಶಿಕ್ಷೆಯ ಸ್ವರೂಪವನ್ನು ಪ್ರಕಟಿಸಿತು. ಚಿತ್ರನಟ ಸಂಜಯದತ್ ಅವರಿಗೆ ಎಕೆ -56 ರೈಫಲ್, ಕೈಬಾಂಬ್ ಹಾಗೂ ಮದ್ದುಗುಂಡು ಪೂರೈಸಿದ್ದ ಇಬ್ರಾಹಿಂ ಯಾನೆ ಬಾಬಾ ಮೂಸಾ ಚೌಹಾಣ್ ಇವರಲ್ಲಿ ಒಬ್ಬ ವ್ಯಕ್ತಿಯಾಗಿದ್ದು ಭೂಗತ ದೊರೆ ಅಬು ಸಲೇಂ ಸಹಚರ.
2007: ಮ್ಯಾರಥಾನ್ ನಡಿಗೆ ಮೂಲಕ ಅಚ್ಚರಿ ಹುಟ್ಟಿಸಿದ್ದ ಒರಿಸ್ಸಾದ ಬಾಲಕ ಬುಧಿಯಾ ಸಿಂಗ್ ನ ಇನ್ನೊಂದು ಬಹುಚರ್ಚಿತ ದೀರ್ಘನಡಿಗೆಗೆ ಜಿಲ್ಲಾ ಆಡಳಿತ ತಡೆ ಹಾಕಿದ ಪರಿಣಾಮವಾಗಿ ಈ ನಡಿಗೆ ಆರಂಭವಾಗಲಿಲ್ಲ.
2007: ಡೆಹ್ರಾಡೂನ್ ಮೂಲದ ಹಿಮಾಲಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯ ನರರೋಗ ತಜ್ಞ ಡಾ. ಚರಿತೇಶ ಗುಪ್ತ ಅವರು ಡೆಹ್ರಾಡೂನಿನ ವರ್ತಕ ಎಚ್.ಎಸ್. ಅಗರ್ ವಾಲ್ ಅವರ ಮೆದುಳಿನಲ್ಲಿದ್ದ ಒಂಬತ್ತು ಗಡ್ಡೆಗಳನ್ನು ಹೊರತೆಗೆಯುವ ಮೂಲಕ ಸಹೋದ್ಯೋಗಿ ಡಾ. ಕೆ.ಕೆ. ಬನ್ಸಾಲ್ ಅವರು 8 ಮೆದುಳುಗಡ್ಡೆಗಳನ್ನು ಹೊರತೆಗೆಯುವ ಮೂಲಕ ಕಳೆದ ವರ್ಷ ಮಾಡಿದ್ದ ಗಿನ್ನೆಸ್ ದಾಖಲೆಯನ್ನು ಮುರಿದರು.
2006: ಲಾಭದಾಯಕ ಹುದ್ದೆಗೆ ಸಂಬಂಧಿಸಿದ ಕರ್ನಾಟಕ ವಿಧಾನ ಮಂಡಲದ `ಅನರ್ಹತೆ ತಡೆಗಟ್ಟುವ ತಿದ್ದುಪಡಿ ಮಸೂದೆ -2006'ನ್ನು ವಿಧಾನ ಮಂಡಲದ ಉಭಯ ಸದನಗಳು ಅಂಗೀಕರಿಸಿದವು.
2006: ಕ್ಷುಲ್ಲಕ ಕಾರಣಕ್ಕಾಗಿ ಅಪ್ಪ ಹಾಗೂ ಅಮ್ಮನನ್ನು ಬ್ಯಾಟಿನಿಂದ ಹೊಡೆದ ಮಗನಿಗೆ ಕರ್ನಾಟಕ ಹೈಕೋರ್ಟ್ ಒಂದು ಲಕ್ಷ ರೂಪಾಯಿ ದಂಡ ಹಾಗೂ ಮೂರು ತಿಂಗಳ ಕಠಿಣ ಸಜೆಯ ಶಿಕ್ಷೆಯನ್ನು ವಿಧಿಸಿತು. ಬೆಳಗಾವಿಯ ಉಚಗಾಂವ್ನ ಹೊನಗೇಕರ್ ಗಲ್ಲಿಯ ನಿವಾಸಿ ಪರಶುರಾಮ ಎನ್. ಜಾದವ್ ಗೆ ನ್ಯಾಯಮೂರ್ತಿ ಕೆ. ಶ್ರೀಧರರಾವ್ ಈ ಶಿಕ್ಷೆ ವಿಧಿಸಿ ತೀರ್ಪು ನೀಡಿದರು.
1984: ಸಿಖ್ ಉಗ್ರಗಾಮಿಗಳ ವಿರುದ್ಧ ಭಾರತೀಯ ಸೇನೆ `ಆಪರೇಷನ್ ಬ್ಲೂಸ್ಟಾರ್' ಆರಂಭಿಸಿತು. ಅಮೃತಸರದ ಸ್ವರ್ಣಮಂದಿರವನ್ನು ತಮ್ಮ ನೆಲೆಯನ್ನಾಗಿ ಮಾಡಿಕೊಂಡಿದ್ದ ಉಗ್ರಗಾಮಿಗಳನ್ನು ಅಲ್ಲಿಂದ ಹೊರತಳ್ಳಲು ಸ್ವರ್ಣ ಮಂದಿರಕ್ಕೆ ಮುತ್ತಿಗೆ ಹಾಕಿತು. ಉಗ್ರಗಾಮಿ ನಾಯಕ ಜರ್ನೈಲ್ ಸಿಂಗ್ ಭಿಂದ್ರನ್ ವಾಲೆ ಮತ್ತು ಆತನ ಬೆಂಬಲಿಗರು ಈ ಕಾರ್ಯಾಚರಣೆಯಲ್ಲಿ ಹತರಾದರು.
1982: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸ್ ಈದಿನ ನಿಧನರಾದರು. 1972ರ ಮಾರ್ಚ್ 20ರಿಂದ 1977ರ ಡಿಸೆಂಬರ್ 31ರವರೆಗೆ ಇವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಉಳುವವನೇ ಹೊಲದೊಡೆಯ ಇವರ ಕಾಲದಲ್ಲಿ ಜಾರಿಯಾದ ಕ್ರಾಂತಿಕಾರಿ ಸುಧಾರಣಾ ಕಾರ್ಯಕ್ರಮ.
1982: ಒರಿಸ್ಸಾ ಕರಾವಳಿಯಲ್ಲಿ ರಾತ್ರಿ ಸಂಭವಿಸಿದ ಭೀಕರ ಚಂಡಮಾರುತ ಹಾವಳಿಗೆ 125 ಮಂದಿ ಬಲಿಯಾಗಿ ನೂರಾರು ಮಂದಿ ಗಾಯಗೊಂಡರು. 6000ಕ್ಕೂ ಹೆಚ್ಚು ಮಂದಿ ಗ್ರಾಮಸ್ಥರು ನಿರ್ವಸಿತರಾದರು.
1945: ಸಾಹಿತಿ ಚಂದ್ರಶೇಖರ ಹೇರ್ಳೆ ಜನನ.
1938: ಸಾಹಿತಿ ಕು.ಗೋ. ಜನನ.
1937: ಸಾಹಿತಿ ನಾ. ಡಿಸೋಜಾ ಜನನ.
1924: ಸಾಹಿತಿ ಡಾ. ಖಡಬಡಿ ಬಿ.ಕೆ. ಜನನ.
1923: ಸಾಹಿತಿ ಆರ್. ಡಿ. ಕಾಮತ್ ಜನನ.
1920: ಎಚ್. ನರಸಿಂಹಯ್ಯ ಜನನ.
1914: ಸಾಹಿತಿ ಮಹಾದೇವ ಅಣ್ಣಿಗೇರಿ ಜನನ.
1914: ಕರ್ನಾಟಕ ಸಂಗೀತಕ್ಕೆ ವಿಶಿಷ್ಟ ಕೊಡುಗೆ ನೀಡಿದ ಗಾಯಕ ಆರ್. ಕೆ. ನಾರಾಯಣಸ್ವಾಮಿ (6-6-1914ರಿಂದ 4-9-2005) ಅವರು ಕೃಷ್ಣ ಶಾಸ್ತ್ರಿಗಳು ಹಾಗೂ ಕನ್ನಡ ಸಂಸ್ಕೃತ ಭಾಷೆಗಳ ಉದ್ಧಾಮ ಪಂಡಿತೆ ಸಣ್ಣಮ್ಮ ದಂಪತಿಯ ಮಗನಾಗಿ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ರುದ್ರಪಟ್ಟಣದಲ್ಲಿ ಜನಿಸಿದರು.
1891: ಸಣ್ಣ ಕಥೆಗಳ ಜನಕ ಎಂದೇ ಖ್ಯಾತರಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್ (6-6-1891ರಿಂದ 6-6-1986) ಅವರು ರಾಮಸ್ವಾಮಿ ಅಯ್ಯಂಗಾರ್- ತಿರುಮಲಮ್ಮ ದಂಪತಿಯ ಪುತ್ರನಾಗಿ ಕೋಲಾರ ಜಿಲ್ಲೆಯ ಮಾಸ್ತಿಯಲ್ಲಿ ಜನಿಸಿದರು.
1832: ಇಂಗ್ಲಿಷ್ ತತ್ವಜ್ಞಾನಿ ಹಾಗೂ ಅರ್ಥತಜ್ಞ ಜೆರೆಮಿ ಬೆಂಥಮ್ ತನ್ನ 84ನೇ ವಯಸ್ಸಿನಲ್ಲಿ ಮೃತನಾದ. ಆತನ ಅಪೇಕ್ಷೆಯಂತೆ ಆತನ ಅಸ್ಥಿಪಂಜರವನ್ನು ಮರುಜೋಡಣೆ ಮಾಡಿ, ಬಟ್ಟೆ ಸುತ್ತಿ, ವ್ಯಾಕ್ಸ್ ತಲೆಯನ್ನು ಅದಕ್ಕೆ ಜೋಡಿಸಿ ಗಾಜಿನ ಪೆಟ್ಟಿಗೆಯಲ್ಲಿ ಇರಿಸಲಾಯಿತು. ಆತನ ಶವ ಹಾಗೂ ತಲೆಯನ್ನು ಲಂಡನ್ನಿನ ಯುನಿವರ್ಸಿಟಿ ಕಾಲೇಜಿನಲ್ಲಿ ರಕ್ಷಿಸಿ ಇಡಲಾಗಿದೆ.
1829: ಅಲನ್ ಒಕ್ಟೇವಿಯನ್ ಹ್ಯೂಮ್ (1829-1912) ಜನ್ಮದಿನ. ಭಾರತದಲ್ಲಿ ಬ್ರಿಟಿಷ್ ಆಡಳಿತಗಾರನಾಗಿದ್ದ ಈತ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ವ್ಯಕ್ತಿ.
1683: ಬ್ರಿಟನ್ನಿನ ಪ್ರಪ್ರಥಮ ಮ್ಯೂಸಿಯಂ `ಆಶ್ಮೋಲಿಯನ್ ಮ್ಯೂಸಿಯಂ'ನ್ನು ಸಾರ್ವಜನಿಕರ ವೀಕ್ಷಣೆಗಾಗಿ ತೆರೆಯಲಾಯಿತು. ಆಕ್ಸ್ ಫರ್ಡಿನ ಬ್ರಾಡ್ ಸ್ಟ್ರೀಟಿನಲ್ಲಿ ಇರುವ ಈ ಮ್ಯೂಸಿಯಂನ್ನು ಎಲಿಯಾಸ್ ಅಶ್ಮೋಲೆ ಸ್ಥಾಪಿಸಿದರು.
1674: ರಾಯಗಢ ಕೋಟೆಯಲ್ಲಿ ಮರಾಠಾ ವೀರ ಶಿವಾಜಿಯ ಕಿರೀಟಧಾರಣೆ ನಡೆಯಿತು. `ಛತ್ರಪತಿ' ಬಿರುದನ್ನೂ ಈ ಸಂದರ್ಭದಲ್ಲಿ ಶಿವಾಜಿಗೆ ನೀಡಲಾಯಿತು. ಈ ಘಟನೆ ಹದಿನೇಳನೇ ಶತಮಾನದ ಪ್ರಮುಖ ರಾಜಕೀಯ ಘಟನೆಗಳಲ್ಲಿ ಒಂದು ಎಂದು ಪರಿಗಣಿತವಾಯಿತು. ಮೊಘಲರ ಆಳ್ವಿಕೆ ವಿರುದ್ಧ ಬಂಡ್ದೆದ ಶಿವಾಜಿ ತನ್ನದು ಸ್ವತಂತ್ರ ರಾಜ್ಯ ಎಂದು ಘೋಷಿಸಿ, ಹೊಸ ರಾಜಕೀಯ ಸಂಸ್ಕೃತಿಗೆ ನಾಂದಿ ಹಾಡಿದ.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment