ಹಾಗಲ ಕಾಯಿ ತಿನ್ನುವ ಶಿಕ್ಷೆ!
ಇದು ಚೀನೀ ವೈಖರಿ!
ಬೀಜಿಂಗ್: ಮಾರಾಟದ ಗುರಿ ತಲುಪದೇ
ಇದ್ದರೆ ನೌಕರಿಗೆ ಏನು ಶಿಕ್ಷೆ ಕೊಡಬೇಕು? ಚೀನಾದ ಮಾದರಿ ಅನುಸರಿಸಿದರೆ ಹೆಚ್ಚೇನಿಲ್ಲ,
ಹಾಗಲಕಾಯಿ ತಿನ್ನಿಸಬೇಕು!
ಹೌದು. ಕೆಲಸದಲ್ಲಿ ನಿರ್ಲಕ್ಷ್ಯ ವಹಿಸಿದರೆ ಹಿಂಬಡ್ತಿ, ವೇತನ ಕಡಿತದಂತಹ ಕ್ರಮ ಕೈಗೊಂಡಿರುವ ಉದಾಹರಣೆ ಸಾಕಷ್ಟಿದೆ. ಚೀನಾದ ಚೊಂಗ್ಕ್ವಿಂಗ್ ಪ್ರಾಂತ್ಯದ ಲಿಶಾಂಗ್ ಡೆಕೋರೇಶನ್ಸ್ ಕಾಪೋರೇಷನ್ ಸಂಸ್ಥೆಯು ನಿಗದಿತ ಮಾರಾಟ ಗುರಿ ತಲುಪುವಲ್ಲಿ ವಿಫಲರಾದ 40 ಉದ್ಯೋಗಿಗಳಿಗೆ ಹಾಗಲಕಾಯಿ ತಿನ್ನುವಂತೆ ಶಿಕ್ಷೆ ವಿಧಿಸಿದೆ.
ಹಾಂ, ಎಷ್ಟು ಕಷ್ಟವಾದರೂ ಸರಿ, ಇತರ ಉದ್ಯೋಗಿಗಳ ಎದುರೇ ಅವರು ಹಾಗಲಕಾಯಿ ತಿನ್ನಬೇಕಾಗುತ್ತದೆ. ಉಗುಳಿದರೆ ಹೆಚ್ಚುವರಿ ಹಾಗಲಕಾಯಿ ತಿನ್ನುವಂತೆ ಸೂಚನೆ ನೀಡಲಾಗುತ್ತದಂತೆ!
ಸರಿಯಾಗಿ ಕೆಲಸ ಮಾಡದ ನೌಕರರಿಗೆ ಎಚ್ಚರಿಕೆ ನೀಡುವ ಉದ್ದೇಶದಿಂದ ಇಂತಹ ಶಿಕ್ಷೆ ವಿಧಿಸಿರುವುದಾಗಿ ಕಂಪನಿಯು ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ.
ಒತ್ತಾಯಪೂರ್ವಕವಾಗಿ ಹಾಗಲಕಾಯಿ ತಿನ್ನಿಸಿದ ದೃಶ್ಯವನ್ನು ಚೀನಾದ ಸಾಮಾಜಿಕ ಜಾಲತಾಣ ‘ವೈಬೋ’ದಲ್ಲಿ ಅಪ್ಲೋಡ್ ಮಾಡಲಾಗಿದ್ದು, ಅದು ಭಾರಿ ಸದ್ದು ಮಾಡುತ್ತಿದೆ. ಮೊದಲ ಸಲ ಹಾಗಲಕಾಯಿ ತಿಂದವರು ಸೇವಿಸಲಾಗದೇ ಆರೋಗ್ಯ ಸಮಸ್ಯೆಗೂ ತುತ್ತಾಗಿದ್ದಾರೆ ಎಂದು ಚೀನಾದ ದೈನಿಕ ವರದಿ ಮಾಡಿದೆ.
ವಿಚಿತ್ರ ಶಿಕ್ಷೆಗಳು: ಟಾರ್ಗೆಟ್ ತಲುಪದ ನೌಕರರಿಗೆ ಸಂಸ್ಥೆಯಲ್ಲಿ ಶಿಕ್ಷೆ ವಿಧಿಸಿದ್ದು ಇದೇ ಮೊದಲೇನಲ್ಲ. ಈ ಹಿಂದೆ ಕುರ್ಚಿಯಲ್ಲಿ ಕೂರುವಂತೆ ಮಾಡುವುದು, ಕಪ್ಪೆಯಂತೆ ತೆವಳುವುದು, ಫುಷ್ ಅಪ್, ಕಚೇರಿ ಕಟ್ಟಡದ ಸುತ್ತ ಓಡುವ ಶಿಕ್ಷೆ ನೀಡುವ ಮೂಲಕ ಅವಮಾನ ಮಾಡಲಾಗಿತ್ತು ಎಂದು ಅಲ್ಲಿನ ಮಹಿಳಾ ಸಿಬ್ಬಂದಿ ಹೇಳುತ್ತಾರೆ. ಇಂತಹ ಶಿಕ್ಷೆಗಳಿಂದ ಬೇಸತ್ತ ಶೇ. 50 ನೌಕರರು ಕೆಲಸವನ್ನೇ ಬಿಟ್ಟಿದ್ದಾರೆ.
ಚೀನಾದ ಕಾರ್ವಿುಕ ಕಾನೂನು 88 ಕಲಂ ಪ್ರಕಾರ, ಕಂಪನಿ ಮಾಲೀಕರಿಂದ ಯಾವುದೇ ಉದ್ಯೋಗಿಗೆ ದೈಹಿಕ ಅಥವಾ ಮಾನಸಿಕ ಹಾನಿ ಉಂಟಾದರೆ ಅಂತಹ ವೇಳೆ ಸೂಕ್ತ ಪರಿಹಾರ ನೀಡಬೇಕು. ಆದರೆ ಕಂಪನಿ ಮಾಲೀಕರು ಇದನ್ನು ನಿರ್ಲಕ್ಷಿಸಿ ನೌಕರರಿಗೆ ಶಿಕ್ಷೆ ವಿಧಿಸುತ್ತಿದ್ದಾರಂತೆ!.