Thursday, January 2, 2020

ಇಂದಿನ ಇತಿಹಾಸ History Today ಜನವರಿ 02

2020: ತುಮಕೂರು:  ತುಮಕೂರು ನಗರದ  ಜೂನಿಯರ್ ಕಾಲೇಜು ಮೈದಾನದಲ್ಲಿ  2020 ಜನವರಿ 02ರ ಗುರುವಾರ ಕೇಂದ್ರ ಕೃಷಿ ಇಲಾಖೆಯಿಂದ ಆಯೋಜಿಸಲಾಗಿದ್ದ ವಿವಿಧ ರಾಜ್ಯಗಳ ೩೨ ರೈತರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಕರ್ಮಣ್ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಕೃಷಿ ಸಮ್ಮಾನ್ ಯೋಜನೆಯ ಫಲಾನುಭವಿಯಾಗಿ ಮಧುಗಿರಿ ದೊಡ್ಡೇರಿ ಹೋಬಳಿಯ ಗೊದ್ದನಪಾಳ್ಯದ ರೈತ ರಂಗಪ್ಪ ಪ್ರಧಾನಿ ಮೋದಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಅಲ್ಲದೇ ಮಧ್ಯಪ್ರದೇಶದ ರೈತ ಕರಣ್ ದೇವ್ ಸಿಂಗ್, ಬಿಹಾರದ ಗೋಪಾಲ್ ಪ್ರಸಾದ್, ಮಹಾರಾಷ್ಟ್ರದ ನರೇಂದ್ರ ಗೋವಲ್ ಪಾಟೀಲ್ ಸೇರಿದಂತೆ ದೇಶದ ವಿವಿಧ ರಾಜ್ಯಗಳ ೩೨ ರೈತರು ಪ್ರಶಸ್ತಿ ಸ್ವೀಕರಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಗಿಡಕ್ಕೆ ನೀರೆರೆಯುವ ಮೂಲಕ ಕೃಷಿ ಕರ್ಮಣ್ ಪ್ರಶಸ್ತಿ ಸಮಾರಂಭವನ್ನು ಉದ್ಘಾಟಿಸಿದ್ದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವರಾದ ಸದಾನಂದ ಗೌಡ, ಪ್ರಹ್ಲಾದ್ ಜೋಶಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ತುಮಕೂರು: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುತ್ತಿರುವುದಕ್ಕಾಗಿ ಕಾಂಗ್ರೆಸ್   ಮತ್ತು    ಅದರ  ಮಿತ್ರ ಪಕ್ಷಗಳ ವಿರುದ್ಧ 2020 ಜನವರಿ 02ರ  ಗುರುವಾರ ಇಲ್ಲಿ ಹರಿಹಾಯ್ದ ಪ್ರಧಾನಿ ನರೇಂದ್ರ ಮೋದಿ ಅವರು ’ಹಾಲಿ ಪ್ರತಿಭಟನೆಗಳು ಸಂಸತ್ತಿನ ವಿರುದ್ಧ’ ಎಂದು ಟೀಕಿಸಿ, ಕಳೆದ ೭೦ ವರ್ಷಗಳಿಂದ ತನ್ನ ಅಲ್ಪಸಂಖ್ಯಾತರ ವಿರುದ್ಧ ದೌರ್ಜನ್ಯಗಳನ್ನು ಎಸಗುತ್ತಿರುವ ಪಾಕಿಸ್ತಾನದ ವಿರುದ್ಧ ದನಿ ಎತ್ತರಿಸಿ ಎಂದು ಕಾಂಗ್ರೆಸ್ ಮತ್ತು ಇತರ ಪ್ರತಿಭಟನಕಾರರಿಗೆ ಕರೆ ನೀಡಿದರು. ಇಲ್ಲಿನ ಸಿದ್ದಗಂಗೆಯಲ್ಲಿ ಲಿಂಗೈಕ್ಯ ಸಿದ್ದಗಂಗಾ ಶಿವಕುಮಾರ ಸ್ವಾಮಿಯವರ ಗದ್ದುಗೆಗೆ ನಮನ ಸಲ್ಲಿಸಿದ ಪ್ರಧಾನಿ, ಬಳಿಕ ಮಠದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರಧಾನಿ ಮಾತನಾಡಿದರು. ‘ಭಾರತದಲ್ಲಿ ಆಶ್ರಯ ಕೋರಿ ಬಂದಿರುವ ನೆರೆಯ ರಾಷ್ಟ್ರಗಳ ಅಲ್ಪಸಂಖ್ಯಾತರಿಗೆ ರಕ್ಷಣೆ ಮತ್ತು ಬೆಂಬಲ ನೀಡುವುದು ನಮ್ಮ ಸಂಸ್ಕೃತಿ ಮತ್ತು ರಾಷ್ಟ್ರೀಯ ಹೊಣೆಗಾರಿಕೆ’ ಎಂದು ಪ್ರಧಾನಿ ನುಡಿದರು. ಭಾರತದ ಸಂಸತ್ತಿನ ವಿರುದ್ಧ ಪ್ರತಿಭಟಿಸುತ್ತಿರುವವರಿಗೆ ಪಾಕಿಸ್ತಾನದ ಕುಕೃತ್ಯಗಳನ್ನು ವಿಶ್ವಮಟ್ಟದಲ್ಲಿ ಬಯಲುಗೊಳಿಸಬೇಕಾದ ಅಗತ್ಯವಿದೆ ಎಂದು ಹೇಳಲು ನಾನು ಬಯಸುತ್ತೇನೆ.  ನೀವು ಪ್ರತಿಭಟಿಸಲು ಬಯಸುವಿರಾದರೆ ಕಳೆದ ೭೦ ವರ್ಷಗಳಲ್ಲಿ ಪಾಕಿಸ್ತಾನ ನಡೆಸಿರುವ ಕೃತ್ಯಗಳವಿರುದ್ಧ ದನಿಯೆತ್ತಬೇಕು ಮತ್ತು ಪ್ರತಿಭಟಿಸಬೇಕು ಎಂದು ನಾನು ಬಯಸುತ್ತೇನೆ, ನಿಮಗೆ ಅಂತಹ ಎದೆಗಾರಿಕೆ ಇರಬೇಕು’ ಎಂದು ಮೋದಿ ನುಡಿದರು. ‘ನೀವು ಘೋಷಣೆಗಳನ್ನು ಕೂಗಲು ಬಯಸುವುದಾದರೆ ಅಲ್ಲಿ ಅಲ್ಪಸಂಖ್ಯಾತರ ವಿರುದ್ಧ ದೌರ್ಜನ್ಯಗಳು ನಡೆಯುತ್ತಿರುವ ರೀತಿಯ ವಿರುದ್ಧ ಘೋಷಣೆ ಕೂಗಿ. ನೀವು ರ್‍ಯಾಲಿ ನಡೆಸಲು ಬಯಸುತ್ತೀರಾದರೆ ಅದನ್ನು ಪಾಕಿಸ್ತಾನದಿಂದ (ಭಾರತಕ್ಕೆ) ಬಂದಿರುವ ದಲಿತರು, ತುಳಿತಕ್ಕೆ ಒಳಗಾದವರ ಪರವಾಗಿ ಸಂಘಟಿಸಿ, ನೀವು ಧರಣಿ ನಡೆಸಲು ಬಯಸುತ್ತೀರಾದರೆ ಅದನ್ನು ಪಾಕಿಸ್ತಾನದ ಕೃತ್ಯಗಳ ವಿರುದ್ಧ ನಡೆಸಿ’ ಎಂದು ಪ್ರಧಾನಿ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಬೆಂಗಳೂರು: ತುಮಕೂರಿನ ಕಾರ್ಯಕ್ರಮದ ಬಳಿಕ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ
ನರೇಂದ್ರ ಮೋದಿ ಅವರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ (ಡಿಆರ್‌ಡಿಒ) ಯುವ ವಿಜ್ಞಾನಿಗಳಿಗೆ ಅತ್ಯಾಧುನಿಕ ಸಂಶೋಧನೆ ನಿಟ್ಟಿನಲ್ಲಿ ಬೆಳಕು ಚೆಲ್ಲುವ ಸಲುವಾಗಿ ಐದು ಪ್ರಯೋಗಾಲಯಗಳನ್ನು (ಲ್ಯಾಬೋರೇಟರಿ) ಉದ್ಘಾಟಿಸಿದರು. ಅತ್ಯಂತ ತ್ವರಿತವಾಗಿ ಬದಲಾಗುತ್ತಿರುವ ತಂತ್ರಜ್ಞಾನಗಳ ಹಿನ್ನೆಲೆಯಲ್ಲಿ ರಕ್ಷಣಾ ತಂತ್ರಜ್ಞಾನದಲ್ಲಿ ಸಂಶೋಧನೆ ಮತ್ತು ಹೊಸ ಆವಿಷ್ಕಾಗಳಿಗಾಗಿ ಹೋಡಿಕೆ ಮಾಡುವುದು ಅತಿ ಮುಖ್ಯ, ಸಂಶೋಧನೆಯಲ್ಲಿ ನಮ್ಮ ಯುವಕರು ಹಿಂದೆ ಬೀಳಬಾರದು ಎಂದು ಅವರು ಸಮಾರಂಭದಲ್ಲಿ ಮಾತನಾಡುತ್ತಾ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ:  ಒಟ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಸಂಗ್ರಹವು ೨೦೧೯ ರ ಡಿಸೆಂಬರಿನಲ್ಲಿ  ಸತತ ಎರಡನೇ ತಿಂಗಳು ೧ ಲಕ್ಷ ಕೋಟಿ ರೂ.ಗಳ ಮಾನದಂಡವನ್ನು ದಾಟಿದೆ. 
೧.೦೩ ಲಕ್ಷ ಕೋಟಿ ರೂ.ಸಂಗ್ರಹದೊಂದಿಗೆ, ಈ ಸಂಖ್ಯೆಯು ಹೆಚ್ಚಿದ ಬಳಕೆಯ ಹಿನ್ನೆಲೆಯಲ್ಲಿ ವರ್ಷಕ್ಕೆ ೯% ಬೆಳವಣಿಗೆ ಮತ್ತು ಉತ್ತಮ ಅನುಸರಣೆ ಯನ್ನು ದಾಖಲಿಸಿದೆ. ಅದಕ್ಕಿಂತ ಮುಖ್ಯವಾಗಿ, ಈ ಸಂಖ್ಯೆಯು  ಆರ್ಥಿಕತೆಯ ಹಿಂದೆ ಕೆಟ್ಟದ್ದಾಗಿರಬಹುದು  ಎಂಬುದಾಗಿ ಸರ್ಕಾರಿ ಅಧಿಕಾರಿಗಳು ಖಾಸಗಿಯಾಗಿ ಹೇಳುತ್ತಿರುವುದಕ್ಕೆ ಅನುಗುಣವಾಗಿದೆ ಎಂದು ಭಾವಿಸಲಾಯಿತು.   
‘ಸಂಗ್ರಹವು ಇನ್ನೂ ಉತ್ತಮವಾಗಬಹುದಿತ್ತು ಆದರೆ ಆಮದುಗಳ ಮೇಲೆ ಸಮಗ್ರ ಜಿಎಸ್ಟಿ (ಐಜಿಎಸ್ಟಿ) ಮೂಲಕ ಗಳಿಸಿದ ಆದಾಯದಲ್ಲಿ ೧೦% ಕುಸಿತವಾಗಿತ್ತು. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ದೇಶೀಯ ವಹಿವಾಟಿನ ಆದಾಯ ಸಂಗ್ರಹವು ೧೬% ನಷ್ಟು ಹೆಚ್ಚಾಗಿದೆ ಎಂದು ಈ ವಿಷಯದ ನೇರ ಜ್ಞಾನ ಹೊಂದಿರುವ ಅನಾಮಧೇಯರಾಗಿ ಇರಬಯಸಿದ ಇಬ್ಬರು ಆರ್ಥಿಕ ಸ್ಥಿತಿಯ ಬಗ್ಗೆ ತಿಳಿಸಿದರು. ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ೨೦೧೯ ರ ಸತತ ಮೂರು ತಿಂಗಳ ಕಾಲ ಜಿಎಸ್ಟಿ ಸಂಗ್ರಹವು ೧ ಲಕ್ಷ ಕೋಟಿ ರೂ.ಗಿಂತ ಕಡಿಮೆಯಾದ ನಂತರ ಇದೀಗ ಚೇತರಿಸಿಕೊಂಡಿದೆ. ಸೆಪ್ಟೆಂಬರ್ ಸಂಗ್ರಹವು ೯೧,೯೧೬ ಕೋಟಿ ರೂ., ಇದು ಫೆಬ್ರವರಿ ೨೦೧೮ ರ ನಂತರದ ಅತಿ ಕಡಿಮೆ. ಜಿಎಸ್ಟಿಯಲ್ಲಿ ಚೇತರಿಕೆ, ಇದು ತೆರಿಗೆ ಬಳಕೆಯ ಮೇಲೆ, ಇದು ಸಕಾರಾತ್ಮಕ ಸಂಕೇತವಾಗಿದೆ ಮತ್ತು ಪ್ರಸಕ್ತ ಹಣಕಾಸು ವರ್ಷದ ಉಳಿದ ತಿಂಗಳುಗಳಲ್ಲಿ ಸುಮಾರು ೩.೫ ಲಕ್ಷ ಕೋಟಿ ರೂ. ಸಂಗ್ರಹಿಸುವ ಗುರಿಯನ್ನು ಸಾಧಿಸಲು ಸಾಧ್ಯವಿದೆ ಎಂದು ಸೂಚಿಸುತ್ತದೆ ಎಂದು ಇಬ್ಬರು ಅಧಿಕಾರಿಗಳು ಹೇಳಿದರು.  (ವಿವರಗಳಿಗೆಇಲ್ಲಿ ಕ್ಲಿಕ್  ಮಾಡಿರಿ)


2020: ನವದೆಹಲಿ: ೨೦೧೯ರ ವರ್ಷದ ಕೊನೆಯ ತಿಂಗಳಾದ ಡಿಸೆಂಬರಿನಲ್ಲಿ ಕಂಡು ಬಂದಿರುವ ಸೂಚನೆಗಳು ಭಾರತೀಯ ಆರ್ಥಿಕತೆಯಲ್ಲಿ ಒಂದು ರೀತಿಯ ಪುನರುಜ್ಜೀವನವನ್ನು ಸೂಚಿಸುತ್ತವೆ   ಎಂದು  ಆರ್ಥಿಕ ತಜ್ಞರು 2020 ಜನವರಿ 02ರ ಗುರುವಾರ ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಭಾರತೀಯ ಆರ್ಥಿಕತೆಯ ಕೆಟ್ಟ ದಿನಗಳು ಮುಗಿದಿವೆ ಎಂಬ ತೀರ್ಮಾನಕ್ಕೆ  ಬರಲು ಕಾಲ ಪಕ್ವಗೊಂಡಿಲ್ಲ, ಇನ್ನಷ್ಟು ಕಾಲ ಕಾಯುವುದು ಒಳಿತು ಎಂದು ಅವರು ಹೇಳಿದ್ದಾರೆ. ಐಎಚ್‌ಎಸ್ ಮಾರ್ಕಿಟ್ ಸಂಗ್ರಹಿಸಿದ ನಿಕ್ಕಿ ಉತ್ಪಾದನಾ ಖರೀದಿ ವ್ಯವಸ್ಥಾಪಕರ ಸೂಚ್ಯಂಕವು ೨೦೧೯ ರ ಡಿಸೆಂಬರ್‌ನಲ್ಲಿ ೫೨.೭ ಕ್ಕೆ ಏರಿದ್ದು, ಇದು ೨೦೧೯ ರ ಮೇ ತಿಂಗಳ ನಂತರದ ಗರಿಷ್ಠ ಸೂಚ್ಯಂಕವಾಗಿದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು ಸತತ ಎರಡನೇ ತಿಂಗಳಲ್ಲಿ ೧ ಲಕ್ಷ ಕೋಟಿ ರೂ. ದಾಟಿದೆ. ಮಾರುತಿ ಸುಜುಕಿಯಂತಹ ಆಟೋ ಕಂಪೆನಿಗಳ ದೇಶೀಯ ಕಾರುಗಳ ಮಾರಾಟದಲ್ಲಿ ಏರಿಕೆ ಕಂಡಿದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಮ್‌ಐಇ) ಕ್ಯಾಪೆಕ್ಸ್ ಡೇಟಾಬೇಸ್ ಹೊಸ ಹೂಡಿಕೆ ಪ್ರಕಟಣೆಗಳು ಡಿಸೆಂಬರ್ ತ್ರೈಮಾಸಿಕದಲ್ಲಿ ಸಕಾರಾತ್ಮಕ ಬೆಳವಣಿಗೆ ದಾಖಲಿಸಿದ್ದನ್ನು ತೋರಿಸಿವೆ. ಡಿಸೆಂಬರ್ ತ್ರೈಮಾಸಿಕ ಈ ಸಕಾರಾತ್ಮಕ ಬೆಳವಣಿಗೆಯು, ಜೂನ್ ೨೦೧೮ ರಿಂದ ಕಂಡು ಬಂದ ಮೊದಲನೆಯ ಸಕಾರಾತ್ಮಕ ಬೆಳವಣಿಗೆಯಾಗಿದ್ದು,  ಡಿಸೆಂಬರ್ ತ್ರೈಮಾಸಿಕದಲ್ಲಿ ಭಾರತೀಯ ಆರ್ಥಿಕತೆಯು ಅಂತಿಮವಾಗಿ ಆರು ತ್ರೈಮಾಸಿಕ ಬೆಳವಣಿಗೆಯ ಕುಸಿತದಿಂದ ಮುರಿಯುವ ಲಕ್ಷಣಗಳು ಇದೆಯೇ ಎಂಬ ಪ್ರಶ್ನೆಯನ್ನು ಮೂಡಿಸಿವೆ. ಏನಿದ್ದರೂ ಭಾರತದ ಆರ್ಥಿಕತೆಯ ಕೆಟ್ಟದಿನಗಳು ಮುಕ್ತಾಯವಾಗಿವೆ ಎಂಬ ತೀರ್ಮಾನಕ್ಕೆ ಬರಲು ಇನ್ನಷ್ಟು ಸಮಯ ಕಾಯುವುದು ಒಳಿತು ಎಂದು ತಜ್ಞರು ಹೇಳಿದ್ದಾರೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ರಾಜಸ್ಥಾನದ ಕೋಟಾದಲ್ಲಿನ ಜೆಕೆ ಲೋನ್ ಆಸ್ಪತ್ರೆಯಲ್ಲಿ ಇನ್ನೂ ಎರಡು ಶಿಶುಗಳು ಸಾವನ್ನಪ್ಪುವುದರೊಂದಿಗೆ ಡಿಸೆಂಬರ್ ಆರಂಭದಿಂದ ಈವರೆಗೆ ಸಾವನ್ನಪ್ಪಿದ ಶಿಶುಗಳ 
ಸಂಖ್ಯೆ  ೧೦೨ಕ್ಕೆ ಏರಿದೆ. ಕಳೆದ ೭೨ ಗಂಟೆಗಳ ಅವಧಿಯಲಿ ೧೧ ಮಕ್ಕಳು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು 2020 ಜನವರಿ 02ರ ಗುರುವಾರ  ಮಧ್ಯಪ್ರವೇಶ ಮಾಡಿದರು. ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಶಿಶುಗಳ ಮರಣದ ಸಂಖ್ಯೆ ಖಂಡಿತವಾಗಿ ಹೆಚ್ಚಾಗಿದೆ ಎಂದು ಹೇಳಿದ ಕೇಂದ್ರ ಸಚಿವರು ಆರೋಗ್ಯ ಬಿಕ್ಕಟ್ಟು ನಿಭಾಯಿಸಲು ರಾಜ್ಯ ಸರ್ಕಾರಕ್ಕೆ ಬೆಂಬಲದ ಭರವಸೆ ನೀಡಿದರು. ’ನಾನು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರಿಗೆ ಪತ್ರ ಬರೆದು ವಿಷಯದ ಬಗ್ಗೆ ಗಮನ ಹರಿಸುವಂತೆ ಮನವಿ ಮಾಡಿದ್ದೇನೆ’ ಎಂದು ಅವರು ಹೇಳಿದರು.  ಡಿಸೆಂಬರ್ ತಿಂಗಳಲ್ಲಿ ಕನಿಷ್ಠ ೧೦೦ ಮಕ್ಕಳು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇದು ೨೦೧೮ರಲ್ಲಿ ಸಂಭವಿಸಿದ್ದ ೭೭ ಮಕ್ಕಳ ಸಾವಿನ ಸಂಖ್ಯೆಯನ್ನು ಮೀರಿದೆ. ೨೦೧೯ರ ಕೊನೆಯ ಎರಡು ದಿನಗಳಲ್ಲಿ ೯ ಶಿಶುಗಳು ಅಸು ನೀಗಿದ್ದು, ಈ ಎಲ್ಲ ಸಾವುಗಳೂ ಜನನ ಕಾಲದಲ್ಲಿನ ಕಡಿಮೆ ತೂಕದ ಕಾರಣ ಸಂಭವಿಸಿದೆ ಎಂದು ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ಸುರೇಶ್ ದುಲೇರಾ ನುಡಿದರು.  ಶಿಶು ಮರಣದ ಸಂಖ್ಯೆಯು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಕೂಡಾ ಪಕ್ಷದ ರಾಜ್ಯ ಅಧ್ಯಕ್ಷ ಅವಿನಾಶ್ ಪಾಂಡೆ ಅವರಿಂದ ವಿವರಣೆ ಕೇಳಿದ್ದಾರೆ. ಸಾವುಗಳ ಬಗ್ಗೆ ವಿವರವಾದ ವರದಿಯನ್ನು ಕಾಂಗ್ರೆಸ್ ಅಧ್ಯಕ್ಷರಿಗೆ ಸಲ್ಲಿಸಲಾಗಿದೆ ಎಂದು ಪಾಂಡೆ ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಜನವರಿ 02  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)


Wednesday, January 1, 2020

ಇಂದಿನ ಇತಿಹಾಸ History Today ಜನವರಿ 01

2020: ಬೆಂಗಳೂರು:  ೨೦೨೦ನೇ ಇಸವಿಯು ಭಾರತದ ಗಗನಯಾನ ಮತ್ತು ಚಂದ್ರಯಾನ-೩ರ ವರ್ಷ ಎಂಬುದಾಗಿ 2020 ಜನವರಿ 01ರ ಬುಧವಾರ ಇಲ್ಲಿ ಘೋಷಿಸಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಖ್ಯಸ್ಥ ಕೆ.ಶಿವನ್ ಅವರು ಭಾರತದ ಚೊಚ್ಚಲ ಮಾನವ ಸಹಿತ ಗಗನಯಾನ ಯೋಜನೆಯ ತರಬೇತಿ ಪಡೆಯಲು ಭಾರತೀಯ ವಾಯುಪಡೆಯ ನಾಲ್ವರು ಸಿಬ್ಬಂದಿಯನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಿಸಿದರು. ಇಸ್ರೋ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿವನ್ ಅವರು ನಾಲ್ವರು ಗಗನಯಾನಿಗಳು ಜನವರಿ ೩ನೇ ವಾರದಿಂದ ರಷ್ಯಾದಲ್ಲಿ ತರಬೇತಿ ಪಡೆಯಲಿದ್ದಾರೆ ಎಂದು ಹೇಳಿದರು. ಆದರೆ ಅವರ ಹೆಸರುಗಳನ್ನು ಇಸ್ರೋ ಅಧ್ಯಕ್ಷರು ಬಹಿರಂಗ ಪಡಿಸಲಿಲ್ಲ.  ‘ಗಗನಯಾನಕ್ಕೆ ಮುನ್ನ ಪ್ರೊಪಲ್ಷನ್ ಮಾಡ್ಯೂಲ್‌ಗಳ ಮಾನವ ರೇಟಿಂಗ್ ಮತ್ತು ಸಿಬ್ಬಂದಿ ತಪ್ಪಿಸಿಕೊಳ್ಳುವ ವ್ಯವಸ್ಥೆ ಸೇರಿದಂತೆ ಅನೇಕ ವ್ಯವಸ್ಥೆಗಳನ್ನು ಪರೀಕ್ಷಿಸಲಾಗುವುದು’ ಎಂದು ಶಿವನ್ ಹೇಳಿದರು. ಚಂದ್ರನ ದಕ್ಷಿಣ ಧ್ರುವ ಪ್ರದೇಶಕ್ಕೇ ಚಂದ್ರಯಾನ-೩ ಸಾಗಲಿದೆ. ಇದಕ್ಕಾಗಿ ಅಂದಾಜು ೬೦೦ ಕೋಟಿ ರೂಪಾಯಿ ವೆಚ್ಚವಾಗುವ ನಿರೀಕ್ಷೆ ಇದೆ ಎಂದು ಶಿವನ್ ಅಧಿಕೃತವಾಗಿ ಪ್ರಕಟಿಸಿದರು. ಚಂದ್ರಯಾನ-೩ ಯೋಜನೆಯಲ್ಲಿ ಲ್ಯಾಂಡರ್ ಮತ್ತು ರೋವರ್‌ನ್ನು ಮಾತ್ರ ಹೊಸದಾಗಿ ಬಳಸಲಾಗುವುದು. ಚಾಂದ್ರಕಕ್ಷೆಯಲ್ಲಿ ಸುತ್ತುತ್ತಿರುವ ಚಂದ್ರಯಾನ -೨ ಆರ್ಬಿಟರ್ ನ್ನೇ ಈ ಯೋಜನೆಯಲ್ಲಿ ಬಳಸಿಕೊಳ್ಳಲಾಗುವುದು. ಯೋಜನೆಗೆ ಕೇಂದ್ರ ಸರ್ಕಾರದ ಒಪ್ಪಿಗೆ ಲಭಿಸಿದ್ದು, ಸಿದ್ಧತೆ ಆರಂಭಿಸಲಾಗಿದೆ ಎಂದು ಶಿವನ್ ಹೇಳಿದರು.  (ವಿವರಗಳಿಗೆಇಲ್ಲಿ  ಕ್ಲಿಕ್ಕಿಸಿ)

2020: ನವದೆಹಲಿ: ಕರ್ನಾಟಕ ಮಹಾರಾಷ್ಟ್ರ ಸೇರಿದಂತೆ ದೇಶದ ಹನ್ನೆರಡು ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ’ಒಂದು ದೇಶ, ಒಂದು ರೇಷನ್ ಕಾರ್ಡ್’ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ. ಇದರಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ಹರ್ಯಾಣ, ರಾಜಸ್ಥಾನ, ಕೇರಳ, ಮಧ್ಯಪ್ರದೇಶ, ಗೋವಾ, ಜಾರ್ಖಂಡ್ ಮತ್ತು ತ್ರಿಪುರಾ ರಾಜ್ಯಗಳು ಕೂಡಾ ಸೇರಿವೆ.  ‘ಒನ್ ನೇಶನ್, ಒನ್ ರೇಷನ್ ಕಾರ್ಡ್’ ಯೋಜನೆ ೨೦೨೦ರ ಜನವರಿ ೧ರಿಂದ ಜಾರಿಯಾಗಲಿದ್ದು, ಈ ರಾಜ್ಯಗಳಲ್ಲಿರುವ ಫಲಾನುಭವಿಗಳಿಗೆ ಅವರ ಹಾಲಿ ರೇಷನ್ ಕಾರ್ಡಿನಲ್ಲಿಯೇ ಅವರ ಪಾಲಿನ ರೇಷನ್ ಲಭ್ಯವಾಗಲಿದೆ ಎಂದು ವರದಿ ತಿಳಿಸಿದೆ. ೨೦೨೦ರ ಜೂನ್ ವೇಳೆಗೆ ದೇಶದ ಎಲ್ಲಾ ರಾಜ್ಯಗಳಲ್ಲಿಯೂ ’ಒನ್ ನೇಷನ್, ಒನ್ ರೇಷನ್ ಕಾರ್ಡ್’ ಯೋಜನೆ ಜಾರಿಯಾಗಲಿದೆ ಎಂದು 2020 ಜನವರಿ 01ರ ಬುಧವಾರ ವರದಿ ಹೇಳಿತು. ನೂತನ ಆಹಾರ ಸರಬರಾಜು ಪ್ರಕಾರ, ನೂತನ ರೇಷನ್ ಕಾರ್ಡಿಗಾಗಿ ಉತ್ತಮ ಗುಣಮಟ್ಟದ ವಿನ್ಯಾಸವನ್ನು ಒದಗಿಸುವಂತೆ ರಾಜ್ಯಗಳ ಬಳಿ ಕೇಳಲಾಗಿದ್ದು, ಅದನ್ನು ೨೦೨೦ರ ಜೂನ್ ೧ರಂದು ಬಿಡುಗಡೆಗೊಳಿಸಲಾಗುವುದು. ವಿವಿಧ ರಾಜ್ಯಗಳ ರೇಷನ್ ಕಾರ್ಡುಗಳನ್ನು ಮತ್ತು ಕೇಂದ್ರಾಡಳಿತ ಪ್ರದೇಶಗಳು ಗುಣಮಟ್ಟದ ವಿನ್ಯಾಸದಲ್ಲಿ ವಿತರಿಸಲಿವೆ ಎಂದು ವರದಿ ತಿಳಿಸಿದೆ. (ವಿವರಗಳಿಗೆ ಇಲ್ಲಿ  ಕ್ಲಿಕ್ಕಿಸಿ)

2020: ನವದೆಹಲಿ
:
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇನ್ನು ಮಂದೆ ೪೨ ಮೀಟರಿಗಿಂತ ಎತ್ತರದ  ಕಟ್ಟಡ  ನಿರ್ಮಿಸುವಂತಿಲ್ಲ. ಕೇಂದ್ರೀಯ ಭಾಗದಲ್ಲಿ ಕೇಂದ್ರ ಸರ್ಕಾರದ ಸಚಿವಾಲಯಗಳು, ನೂತನ ಸಂಸತ್ ಭವನ, ರಾಜಪಥವನ್ನು ನವೀಕರಣಗೊಳಿಸಲಾಗುತ್ತಿದ್ದು, ಎಲ್ಲ ಕಟ್ಟಡಗಳು ಕೂಡ ಏಕರೂಪತೆಯಿಂದ ಕೂಡಿರಲು ಕೇಂದ್ರ ನಗರಾಭಿವೃದ್ಧಿ ಸಚಿವಾಲಯ 2020 ಜನವರಿ 01ರ ಬುಧವಾರ ಈ ನಿರ್ಧಾರ ಕೈಗೊಂಡಿತು. ಐತಿಹಾಸಿಕ ದೆಹಲಿ ಗೇಟ್ ೪೨ ಮೀಟರ್ ಎತ್ತರವಿದ್ದು, ಮುಂದೆ ನಿರ್ಮಾಣವಾಗುವ ಯಾವುದೇ ಕಟ್ಟಡಗಳು ಇದಕ್ಕಿಂತ ಒಂದು ಇಂಚು ಎತ್ತರ ಕೂಡ ಇರುವಂತಿಲ್ಲ. ಈ ಮೂರು ಕಟ್ಟಡಗಳ ನಿರ್ಮಾಣದ ಗುತ್ತಿಗೆ ಗುಜರಾತ್ ಮೂಲದ ಎಚ್ಸಿಪಿ ಡಿಸೈನ್ ಸಂಸ್ಥೆಗೆ ನೀಡಲಾಗಿದೆ. ೨೦೨೨ಕ್ಕೆ ೭೫ನೇ ಸ್ವಾತಂತ್ರೋತ್ಸವ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಂಸತ್ ಭವನವನ್ನು ಈ ಅವಧಿಯೊಳಗೆ ನಿರ್ಮಿಸಲು ಉದ್ದೇಶಿಸಲಾಗಿದೆ. ಉಳಿದ ಕಟ್ಟಡಗಳನ್ನು ೨೦೨೪ಕ್ಕೆ ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ. ಸುಮಾರು ೧೨ ಸಾವಿರ ಕೋಟಿ ರೂ.ವೆಚ್ಚದ ಯೋಜನೆ ಇದಾಗಿದೆ. ರಾಷ್ಟ್ರಪತಿ ಭವನವು ೩೪೫ ಎಕರೆ ವಿಸ್ತೀರ್ಣ ಹೊಂದಿದ್ದು, ಈ ಪೈಕಿ ೬೦ ಎಕರೆಯಲ್ಲಿ ಜೈವಿಕ ಉದ್ಯಾನ ನಿರ್ಮಿಸಲು ಪ್ರಸ್ತಾವನೆ ಇದೆ. ಜೊತೆಗೆ ಉಪರಾಷ್ಟ್ರಪತಿ ಹಾಗೂ ಪ್ರಧಾನಿ ನಿವಾಸವನ್ನು ಕೂಡ ನವೀಕರಿಸುವ ಸಾಧ್ಯತೆ ಇದೆ. (ವಿವರಗಳಿಗೆ ಇಲ್ಲಿ  ಕ್ಲಿಕ್ಕಿಸಿ)


2020: ಮುಂಬೈ: ಮದ್ಯ ದೊರೆ ವಿಜಯ್ ಮಲ್ಯ ಅವರಿಂದ ಜಫ್ತಿ ಮಾಡಲಾಗಿದ್ದ ಆಸ್ತಿಗಳನ್ನು ಬಳಕೆ  ಮಾಡಿ ಕೊಳ್ಳುವಂತೆ  ಮಲ್ಯ ಅವರಿಗೆ ಸಾಲ ನೀಡಿದ್ದ ಬ್ಯಾಂಕುಗಳಿಗೆ ಮುಂಬೈಯ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ನ್ಯಾಯಾಲಯ ಅನುಮತಿ ನೀಡಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಮೂಲಗಳು 2020 ಜನವರಿ 01ರ ಬುಧವಾರ ತಿಳಿಸಿದವು. ಇದರೊಂದಿಗೆ ಮಲ್ಯ ಅವರಿಗೆ ಮತ್ತೊಂದು ಸಂಕಷ್ಟ ಎದುರಾಯಿತು. ಆದಾಗ್ಯೂ ಸಂಬಂಧಪಟ್ಟ ಕಕ್ಷಿದಾರರಿಗೆ ಮುಂಬೈ ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿರುವ ಕೋರ್ಟ್ ತನ್ನ ಆದೇಶದ ಜಾರಿಗೆ ಜನವರಿ ೧೮ರವರೆಗೆ ತಡೆಯಾಜ್ಞೆ ನೀಡಿದೆ. ಮೂಲಗಳ ಪ್ರಕಾರ ಜಫ್ತಿ ಮಾಡಲಾದ ಆಸ್ತಿಗಳಲ್ಲಿ ಮುಖ್ಯವಾಗಿ ಷೇರುಗಳಂತಹ ಹಣಕಾಸು ಭದ್ರತೆಗಳು ಸೇರಿವೆ ಎಂದು ಮೂಲಗಳು ಹೇಳಿವೆ. ಕಳೆದ ವರ್ಷ ಫೆಬ್ರವರಿಯಲ್ಲಿ ಜಾರಿ ನಿರ್ದೇಶನಾಲಯವು ವಿಶೇಷ ಪಿಎಂಎಲ್‌ಎ ನ್ಯಾಯಾಲಯಕ್ಕೆ ಜಫ್ತು ಮಾಡಲಾದ ಆಸ್ತಿಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನೇತೃತ್ವದ ಬ್ಯಾಂಕುಗಳ ಒಕ್ಕೂಟವು ಬಳಕೆ ಮಾಡಿಕೊಳ್ಳಲು ತನ್ನ ಆಕ್ಷೇಪ ಇಲ್ಲ ಎಂದು ತಿಳಿಸಿತ್ತು. (ವಿವರಗಳಿಗೆ ಇಲ್ಲಿ  ಕ್ಲಿಕ್ಕಿಸಿ)


2020: ನವದೆಹಲಿ: ಭಾರತದ ಮೂರೂ ರಕ್ಷಣಾ ಪಡೆಗಳ ಪ್ರಪ್ರಥಮ ಮುಖ್ಯಸ್ಥರಾಗಿ (ಸಿಡಿಎಸ್) 2020
ಜನವರಿ 01ರ ಬುಧವಾರ   ಅಧಿಕಾರ  ವಹಿಸಿಕೊಂಡಿರುವ  ಜನರಲ್ ಬಿಪಿನ್ ರಾವತ್ ಅವರು ತಮ್ಮ ಮೊದಲ ಸಂದೇಶದಲ್ಲಿ ಸರ್ಕಾರದ ನಿರ್ದೇಶನಗಳನ್ನು ಪಾಲನೆ ಮಾಡುವ ಸೇನಾ ಪಡೆಗಳು ರಾಜಕೀಯದಿಂದ ದೂರ ಇರುತ್ತವೆ ಎಂದು ಹೇಳಿದರು. ಅಧಿಕಾರ ಸ್ವೀಕರಿಸಿದ ಬಳಿಕ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ ರಾವತ್ ಅವರು ಸ್ಮಾರಕಕ್ಕೆ ಹೂಗುಚ್ಛ ಇಡುವ ಮೂಲಕ ಗೌರವ ಸಲ್ಲಿಸಿ ಬಳಿಕ ತಮ್ಮ ವಿರುದ್ಧದ ಟೀಕೆಗಳಿಗೆ ಉತ್ತರ ನೀಡಿದರು. ಮೂರೂ ರಕ್ಷಣಾ ಪಡೆಗಳು ಸಂಘಟಿತ ರೀತಿಯಲ್ಲಿ ಒಂದೇ ತಂಡದಂತೆ ಕಾರ್ಯವೆಸಗಬೇಕು. ರಾಜಕೀಯದಿಂದ ದೂರವಿದ್ದು, ಸರ್ಕಾರ ನೀಡಿದ ನಿರ್ದೇಶನದಂತೆ ಕೆಲಸ ಮಾಡೋಣ ಎಂದು ಅವರು ಹೇಳಿದರು. ೧+೧+೧ ಎಂಬ ರೀತಿಯಲ್ಲಿ ಈ ತಂಡದ ಗುರಿ ಮೂರು ಅಲ್ಲ, ಅದು ಐದು ಅಥವಾ ಏಳು ಆಗಿರಬಹುದು. ಸಂಘಟಿತ ರೀತಿಯಲ್ಲಿ ನಮ್ಮ ಪ್ರಯತ್ನ ಮತ್ತಷ್ಟು ಹೆಚ್ಚು ಇರಬೇಕು. ಏಕೀಕರಣದ ಮೂಲಕ ನಾವು ಮತ್ತಷ್ಟು ಸಾಧಿಸಬೇಕು ಎಂದು ರಾವತ್ ನುಡಿದರು. ಸಂಪನ್ಮೂಲಗಳ ಸರಿಯಾದ ಬಳಕೆ ಮತ್ತು ಜಂಟಿ ತರಬೇತಿ ನೀಡುವುದರ ಬಗ್ಗೆ ಸಿಡಿಎಸ್ ಹೆಚ್ಚಿನ ಗಮನ ಹರಿಸುವುದು ಎಂದು  ಅವರು ಹೇಳಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್ಕಿಸಿ)




Tuesday, December 31, 2019

ಇಂದಿನ ಇತಿಹಾಸ History Today ಡಿಸೆಂಬರ್ 31

2019: ನವದೆಹಲಿ: ೨೦೨೪-೨೫ರ ವೇಳೆಗೆ ೫ ಟ್ರಿಲಿಯನ್ ಅಮೆರಿಕನ್ ಡಾಲರ್ ಜಿಡಿಪಿ ಗುರಿ ಸಾಧನೆಗಾಗಿ ಮುಂದಿನ ಐದು ವರ್ಷಗಳಲ್ಲಿ ಮೂಲಸವಲತ್ತು ಕ್ಷೇತ್ರದಲ್ಲಿ ಹೂಡಿಕೆಯನ್ನು ದುಪ್ಪಟ್ಟುಗೊಳಿಸುವ ಯೋಜನೆಯನ್ನು 2019 ಡಿಸೆಂಬರ್ 31ರ ಮಂಗಳವಾರ ಇಲ್ಲಿ ಅನಾವರಣಗೊಳಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ’ಮೂಲಸವಲತ್ತು ಕ್ಷೇತ್ರದಲ್ಲಿ ೧೦೫ ಲಕ್ಷ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಾಗುವುದು’ಎಂದು ಪ್ರಕಟಿಸಿದರು. ಮೂಲಸವಲತ್ತು ನೀಲನಕ್ಷೆ ರೂಪಿಸಲು ರಚಿಸಲಾಗಿದ್ದ ಕಾರ್ಯಪಡೆ ವರದಿಯನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ ಸಚಿವೆ ಸೀತಾರಾಮನ್ ಅವರು ಮುಂದಿನ ೫ ವರ್ಷಗಳಲ್ಲಿ ಮೂಲ ಸವಲತ್ತು ಕ್ಷೇತ್ರಕ್ಕೆ ೧೦೦ ಲಕ್ಷ ಕೋಟಿ ರೂಪಾಯಿಗಳ ಹೂಡಿಕೆ ಮೂಲಕ ಒತ್ತು ನೀಡಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಅವರ ಯೋಚನೆಗೆ ಅನುಗುಣವಾಗಿ ವಿಸ್ತೃತ ಯೋಜನೆಯನ್ನು ರೂಪಿಸಲಾಗಿದೆ ಎಂದು ಹೇಳಿದರು. ಯೋಜನೆಯ ಪ್ರಕಾರ ೨.೫ ಲಕ್ಷ ಕೋಟಿ ರೂಪಾಯಿಗಳ ಬಂದರು ಮತ್ತು ವಿಮಾನ ನಿಲ್ದಾಣ ಯೋಜನೆಗಳು, ೩.೨ ಲಕ್ಷ ಕೋಟಿ ರೂಪಾಯಿಗಳ ಡಿಜಿಟಲ್ ಮೂಲಸವಲತ್ತು ಯೋಜನೆಗಳು, ೧೬ ಲಕ್ಷ ಕೋಟಿ ರೂಪಾಯಿಗಳ ಗ್ರಾಮೀಣ, ಕೃಷಿ ಮತ್ತು ಆಹಾರ ಸಂಸ್ಕರಣೆ ಯೋಜನೆಗಳನ್ನು ಗುರುತಿಸಲಾಗಿದೆ. ಚಲನಶೀಲತಾ ಯೋಜನೆಗಳು ಸೇರಿದಂತೆ ೧೬ ಲಕ್ಷ ಕೋಟಿ ರೂಪಾಯಿಗಳ ಮೂಲ ಸವಲತ್ತು ಯೋಜನೆಗಳನ್ನು ಮೂಲಸವಲತ್ತು ರಾಷ್ಟ್ರೀಯ ಮೂಲಸವಲತ್ತು ಕೊಳವೆಮಾರ್ಗ (ನ್ಯಾಷನಲ್ ಇನ್‌ಫ್ರಾಸ್ಟ್ರಕ್ಚರ್ ಪೈಪ್‌ಲೈನ್- ಎನ್‌ಐಪಿ) ಯೋಜನೆಗಳಿಗೆ ಸೇರ್ಪಡೆ ಮಾಡಲಾಗುವುದು ಎಂದು ವಿತ್ತ ಸಚಿವೆ ತಿಳಿಸಿದರು. ರಾಷ್ಟ್ರೀಯ ಮೂಲಸವಲತ್ತು ಕೊಳವೆಮಾರ್ಗ ಹೂಡಿಕೆಯಲ್ಲಿ ಶೇಕಡಾ ೨೨-೨೫ರಷ್ಟನ್ನು ಖಾಸಗಿರಂಗವು ಹಂಚಿಕೊಳ್ಳಲಿದೆ. ಕೇಂದ್ರ ಮತ್ತು ರಾಜ್ಯಗಳು ಉಳಿದ ವೆಚ್ಚವನ್ನು ಸರಿಸಮವಾಗಿ ಹಂಚಿಕೊಳ್ಳಲಿವೆ ಎಂದು ವಿತ್ತ ಸಚಿವರು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2019: ನವದೆಹಲಿ:
2019 ಡಿಸೆಂಬರ್ 31ರ ಮಂಗಳವಾರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ
ಪ್ರಯಾಣಿಕರ ಮೂಲದರವನ್ನು ಏರಿಸಲು ರೈಲ್ವೇ ಸಚಿವಾಲಯವು 2019 ಡಿಸೆಂಬರ್ 31ರ ಮಂಗಳವಾರ ತಡರಾತ್ರಿಯಲ್ಲಿ ಆದೇಶ ನೀಡಿತು. ‘ರೈಲ್ವೇ ಸಚಿವಾಲಯವು ಮೂಲ ಪ್ರಯಾಣಿಕ ದರವನ್ನು (ಪ್ಯಾಸೆಂಜರ್ ಫೇರ್) ಪರಿಷ್ಕರಿಸಲು ನಿರ್ಧರಿಸಿದೆ. ಪರಿಷ್ಕೃತ ದರವು ೨೦೨೦ ಜನವರಿ ೧ರಿಂದ ಜಾರಿಗೆ ಬರುತ್ತದೆ’ ಎಂದು ಮಂಗಳವಾರ ರಾತ್ರಿ ಜಾರಿಗೊಳಿಸಲಾದ ಆದೇಶ ತಿಳಿಸಿತು.  ನೂತನ ಪಯಣದರ ಜಾರಿಗೆ ಕೆಲವೇ ಗಂಟೆಗಳು ಇರುವಾಗ ಈ ಆದೇಶವನ್ನು ಹೊರಡಿಸಲಾಯಿತು. ಕಿಲೋ ಮೀಟರ್ ದೂರಕ್ಕೆ ಸಾಮಾನ್ಯ ಹವಾನಿಯಂತ್ರಿತವಲ್ಲದ (ನಾನ್ ಎಸಿ) ರೈಲುಗಳಲ್ಲಿ ೧ ಪೈಸೆ ಮತ್ತು ಮೆಯಿಲ್ ಮತ್ತು ಎಕ್ಸ್ ಪ್ರೆಸ್ ರೈಲುಗಳಲ್ಲಿ (ಹವಾನಿಯಂತ್ರಿತವಲ್ಲದ ಬೋಗಿಗಳು)೨ ಪೈಸೆ ಹಾಗೂ ಹವಾನಿಯಂತ್ರಿತ ವರ್ಗಗಳಲ್ಲಿ ಪಯಣದರವನ್ನು ಕಿಲೋಮೀಟರಿಗೆ ೪ ಪೈಸೆಯಷ್ಟು ಏರಿಸಲಾಗಿದೆ. ಕೇಂದ್ರ ಸರ್ಕಾರವು ಪ್ರಯಾಣಿಕರ ದರ ಮತ್ತು ಸಾಗಣೆದರವನ್ನು ಪರಿಷ್ಕರಿಸಲು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂಬುದಾಗಿ ರೈಲ್ವೇ ಮಂಡಳಿ  ಅಧ್ಯಕ್ಷ ವಿನೋದ ಕುಮಾರ್ ಯಾದವ್ ಅವರು ಹೇಳಿದ ಕೇವಲ ಒಂದು ದಿನದ ಬಳಿಕ ರೈಲ್ವೇ ಪಯಣದರಗಳ ಏರಿಕೆಯಾಗಿದೆ. ಏನಿದ್ದರೂ ಯಾದವ್ ಅವರು ದರವನ್ನು ಸುಧಾರಿಸುವ ಅಗತ್ಯವಿದೆ ಎಂದು ಹೇಳಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2019: ನವದೆಹಲಿ:
೨೦೨೦ರಲ್ಲಿ ಭಾರತವು ಮೂರನೇ ಚಂದ್ರಯಾನವನ್ನು ನಡೆಸಲಿದೆ ಎಂದು
ಕೇಂದ್ರದ ಬಾಹ್ಯಾಕಾಶ ಇಲಾಖೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು 2019 ಡಿಸೆಂಬರ್ 31ರ ಮಂಗಳವಾರ ಇಲ್ಲಿ  ದೃಢ ಪಡಿಸಿದರು. ಕೇವಲ ಲ್ಯಾಂಡರ್ ಮತ್ತು ರೋವರ್ ಜೊತೆಗೆ ಚಂದ್ರಯಾನ -೩ ಮತ್ತೊಮ್ಮೆ ಚಂದ್ರನ ಅಂಗಳದಲ್ಲಿ ನಿಧಾನವಾಗಿ ಇಳಿಯುವ (ಸಾಫ್ಟ್ ಲ್ಯಾಂಡಿಂಗ್) ಪ್ರಯತ್ನ ಮಾಡಲಿದೆ ಎಂದು ಕೇಂದ್ರ ಸಚಿವರು ನುಡಿದರು. ‘ಹೌದು, ಭಾರತವು ತನ್ನ ಮೂರನೇ ಚಂದ್ರಯಾನವನ್ನು ೨೦೨೦ನೇ ಇಸವಿಯಲ್ಲಿ ನಡೆಸಲಿದೆ. ಆದಾಗ್ಯೂ, ನಾನು ಈ ಹಿಂದೆಯೇ ಹೇಳಿರುವಂತೆ ಚಂದ್ರಯಾನ-೨ನ್ನು ವಿಫಲವೆಂದು ಕರೆಯಲು ಸಾಧ್ಯವಿಲ್ಲ. ನಾವು ಅದರಿಂದ ಹಲವಾರು ವಿಷಯಗಳನ್ನು ಕಲಿತಿದ್ದೇವೆ. ವಿಶ್ವದಲ್ಲಿ ತನ್ನ ಮೊದಲನೇ ಯತ್ನದಲ್ಲೇ ಚಂದ್ರನ ಮೇಲೆ ಇಳಿದ ಯಾವುದೇ ರಾಷ್ಟ್ರವೂ ಇಲ್ಲ, ಅಮೆರಿಕವು ಇದಕ್ಕಾಗಿ ಹಲವಾರು ಪ್ರಯತ್ನಗಳನ್ನು ನಡೆಸಿತ್ತು. ಆದರೆ ನಮಗೆ ಅಂತಹ ಹಲವಾರು ಯತ್ನಗಳು ಬೇಕಾಗಲಾರದು’ ಎಂದು ಜಿತೇಂದ್ರ ಸಿಂಗ್ ಹೇಳಿದರು. ಚಂದ್ರಯಾನ-೨ ಯೋಜನೆಯು ಚಂದ್ರನ ಅಂಗಳವನ್ನು ತಲುಪಲು ಭಾರತ ನಡೆಸಿದ್ದ ಚೊಚ್ಚಲ ಯತ್ನವಾಗಿತ್ತು. ಸೆಪ್ಟೆಂಬರ್ ೭ರಂದು ಕೊನೆಯ ೨.೧ ಕಿಮೀ ಪಯಣ ಬಾಕಿ ಉಳಿದಿದ್ದಾಗ ಭೂ ಕೇಂದ್ರದ ಜೊತೆಗಿನ ವ್ಯೋಮನೌಕೆಯ ಸಂಪರ್ಕ ಕಡಿದುಹೋಗಿತ್ತು. ಇಳಿಯಬೇಕಿದ್ದ ತಾಣದಿಂದ ಕೇವಲ ೫೦೦ ಮೀಟರ್ ದೂರದಲ್ಲಿ ವಿಕ್ರಮ್ ಲ್ಯಾಂಡರ್ ಅಪ್ಪಳಿಸಿತ್ತು. ವಿಕ್ರಮ್ ಲ್ಯಾಂಡರ್ ಅಪ್ಪಳಿಸಿದ್ದನ್ನು ಜಿತೇಂದ್ರ ಸಿಂಗ್ ಅವರು ಸಂಸತ್ತಿನಲ್ಲಿ ಅಧಿಕೃತವಾಗಿ ದೃಢಪಡಿಸಿದ್ದರು. (ವಿವರಗಳಿಗೆ  ಇಲ್ಲಿ ಕ್ಲಿಕ್ ಮಾಡಿರಿ)


ನವದೆಹಲಿ: ಭಾರತದ ಮೂರು ರಕ್ಷಣಾ ಪಡೆಗಳ ಪ್ರಪ್ರಥಮ ಮುಖ್ಯಸ್ಥರಾಗಿ (ಚೀಫ್ ಆಫ್ ಡಿಫೆನ್ಸ್ ಸ್ಟಾಫ್- ಸಿಡಿಎಸ್)  ಜನರಲ್ ಬಿಪಿನ್ ರಾವತ್ ಅವರು 2020 ಜನವರಿ 01ರ ಬುಧವಾರ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇದೇ ವೇಳಗೆ ಕೇಂದ್ರ ಸರ್ಕಾರವು ಸೇನಾ ವ್ಯವಹಾರಗಳ ಇಲಾಖೆಯನ್ನು ಸೃಷ್ಟಿಸಿದ್ದು, ಇದರ ಮುಖ್ಯಸ್ಥರನ್ನಾಗಿಯೂ ಜನರಲ್ ರಾವತ್ ಅವರನ್ನೆ ನೇಮಕ ಮಾಡಿತು. ರಕ್ಷಣಾ ಪಡೆಗಳ ಮುಖ್ಯಸ್ಥರೇ (ಸಿಡಿಎಸ್) ಸೇನಾ ವ್ಯವಹಾರಗಳ ಇಲಾಖೆಗೂ ಮುಖ್ಯಸ್ಥರಾಗಿರುತ್ತಾರೆ ಎಂದು ಕೇಂದ್ರ ಸರ್ಕಾರದ ಆದೇಶ ತಿಳಿಸಿತು. ಸರ್ಕಾರದ ಆದೇಶದಂತೆ ಸಿಡಿಎಸ್ ಮುಖ್ಯಸ್ಥರಾಗಿರುವ ವಹಿಸಿಕೊಂಡಿರುವ ಜನರಲ್ ಬಿಪಿನ್ ರಾವತ್ ಸೇನಾ ವ್ಯವಹಾರಗಳ ಇಲಾಖೆಯ ಇಲಾಖೆಯ ನೇತೃತ್ವ ವಹಿಸಲಿದ್ದಾರೆ. ಹೊಸ ಇಲಾಖೆಯ ವ್ಯಾಪ್ತಿಯಲ್ಲಿ ಭೂ ಸೇನೆ, ವಾಯು ಮತ್ತು ನೌಕಾಪಡೆಯ ನೀತಿ, ಯೋಜನೆ ಮತ್ತು ಖರೀದಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಜನವರಿ 01ರ ಬುಧವಾರದಂದು ಜನರಲ್ ಬಿಪಿನ್ ರಾವತ್ ಅವರು ಭಾರತದ ಮೂರೂ ರಕ್ಷಣಾ ಪಡೆಗಳ ಪ್ರಪ್ರಥಮ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವರು. ಕೆಲ ದಿನಗಳ ಹಿಂದಷ್ಟೇ ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಹುದ್ದೆಯನ್ನು ಸೃಷ್ಟಿಸಲಾಗಿತ್ತು. ಭಾರತದ ರಕ್ಷಣಾ ಪಡೆಯ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗಳ ಮೂರೂ ವಿಭಾಗಗಳಲ್ಲಿ ಸಹಕಾರ- ಸಮನ್ವಯ ಸಾಧನೆಯ ಜವಾಬ್ದಾರಿ ಸಿಡಿಎಸ್ ಆವರದಾಗಿರುತ್ತದೆ. ಮೂರೂ ಇಲಾಖೆಗಳಿಗೆ ಸಂಬಂಧಿಸಿದಂತೆ ರಕ್ಷಣಾ ಸಚಿವರಿಗೆ ಸಿಡಿಎಸ್ ಅವರೇ ಏಕಗವಾಕ್ಷಿ ಸಲಹೆಗಾರರಾಗಿರುತ್ತಾರೆ. ಮೂರೂ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿರುವ ಜನರಲ್ ರಾವತ್ ಅವರು ೨೦೧೭ರಲ್ಲಿ ಭೂ ಸೇನಾ ಮುಖ್ಯಸ್ಥರಾಗಿ ನೇಮಕಗೊಂಡು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಅವರ ಸೇವಾವಧಿ ಈದಿನಕ್ಕೆ  ಮುಕ್ತಾಯಗೊಂಡಿತ್ತು. ಜನರಲ್ ಬಿಪಿನ್ ರಾವತ್ ಅವರ ಸ್ಥಾನಕ್ಕೆ, ಭೂಸೇನಾ ದಂಡನಾಯಕರಾಗಿ ನೇಮಕಗೊಂಡಿರುವ ಲೆಫ್ಟಿನೆಂಟ್ ಜನರಲ್ ಮನೋಜ್ ಮುಕುಂದ್ ನರವಣೆ ಅವರೂ ಮಂಗಳವಾರ ಭೂ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. (ವಿವರಗಳಿಗೆ ಇಲ್ಲಿಕ್ಲಿಕ್ ಮಾಡಿರಿ)