Friday, November 1, 2019

ಇಂದಿನ ಇತಿಹಾಸ History Today ನವೆಂಬರ್ 01

ನವದೆಹಲಿ: (ಇಪಿಸಿಎ) ದೆಹಲಿ-ಎನ್ಸಿಆರ್ ಪ್ರದೇಶದಲ್ಲಿ ಆರೋಗ್ಯ ತುರ್ತುಸ್ಥಿತಿಯನ್ನು ರಾಜಧಾನಿ ನವದೆಹಲಿಯಲ್ಲಿ ವಾಯು ಮಾಲಿನ್ಯವು ಅಂಕೆ ಮೀರಿವಿಷಮ ಸ್ಥಿತಿಗೆ (ಸಿವಿಯರ್ ಪ್ಲಸ್) ತಲುಪಿದ್ದನ್ನು ಅನುಸರಿಸಿ ಸುಪ್ರೀಂಕೋರ್ಟ್ ನೇಮಿಸಿದ ಪರಿಸರ ಮಾಲಿನ್ಯ (ತಡೆ ಮತ್ತು ನಿಯಂತ್ರಣ) ಪ್ರಾಧಿಕಾರವು ಘೋಷಣೆ ಮಾಡಿದ್ದು 2019 ನವೆಂಬರ್ ೫ರವರೆಗೆ ಎಲ್ಲ ನಿರ್ಮಾಣ ಚಟುವಟಿಕೆಗಳನ್ನೂ 2019 ನವೆಂಬರ್ 01ರ ಶುಕ್ರವಾರ ನಿಷೇದಿಸಿತು. ಇದೇ ವೇಳೆಗೆ ದೆಹಲಿ ಸರ್ಕಾರವು ನವೆಂಬರ್ ೫ರವರೆಗೆ ಶಾಲೆಗಳಿಗೆ ರಜೆ ಘೋಷಿಸಿತುವಾಯುಗುಣಮಟ್ಟ ವಿಪರೀತ ಎನಿಸುವಷ್ಟು ಕೆಳಕ್ಕೆ ಕುಸಿದಿದ್ದು, ದೆಹಲಿಗರು ಉಸಿರು ಎಳೆದುಕೊಳ್ಳಲು ಚಡಪಡಿಸಬೇಕಾದ ಸ್ಥಿತಿ ಉಂಟಾಗಿದೆ ಎಂದು ಹೇಳಿರುವ ಪ್ರಾಧಿಕಾರ ಚಳಗಾಲದ ಅವಧಿಯಲ್ಲಿ ಪಟಾಕಿ ಸಿಡಿಸುವುದನ್ನೂ ನಿಷೇಧಿಸಿತು. ಉತ್ತರ ಪ್ರದೇಶ, ಹರಿಯಾಣ ಮತ್ತು ದೆಹಲಿಯ ಮುಖ್ಯಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ ಪ್ರಾಧಿಕಾರದ ಅಧ್ಯಕ್ಷ ಭುರೇಲಾಲ್ ಅವರು ದೆಹಲಿ-ಎನ್ಸಿಆರ್ ಪ್ರದೇಶದಲ್ಲಿ ವಾಯುಗುಣಮಟ್ಟ ಗುರುವಾರ ರಾತ್ರಿ ಇನ್ನಷ್ಟು ಕುಸಿದಿದ್ದು, ಪ್ರಸ್ತುತ ವಿಷಮ ಸ್ಥಿತಿಯ ಹಂತದಲ್ಲಿದೆ ಎಂದು ತಿಳಿಸಿದರು. ‘ವಾಯುಮಾಲಿನ್ಯವು ಎಲ್ಲರ ಮೇಲೆ, ನಿರ್ದಿಷ್ಟವಾಗಿ ನಮ್ಮ ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ನಾವು ಇದನ್ನು ಆರೋಗ್ಯ ತುರ್ತುಸ್ಥಿತಿ ಎಂಬುದಾಗಿ ಪರಿಗಣಿಸಬೇಕುಎಂದು ಭುರೇಲಾಲ್ ಪತ್ರದಲ್ಲಿ ಬರೆದರು. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ರಾಜಧಾನಿಯ ಎಲ್ಲ ಶಾಲೆಗಳಿಗೂ ನವೆಂಬರ್ 5ರ ಮಂಗಳವಾರದವರೆಗೆ ರಜೆ ಘೋಷಣೆ ಮಾಡಿದರು. ದೆಹಲಿಯನ್ನು ಗ್ಯಾಸ್ ಚೇಂಬರ್ ಆಗಿ ಪರಿವರ್ತಿಸಿದ್ದಕ್ಕಾಗಿ ರಾಜ್ಯಗಳನ್ನು ದೂಷಿಸಿದ ಮುಖ್ಯಮಂತ್ರಿ ಕೇಜ್ರಿವಾಲ್, ಈದಿನ ಶಾಲಾ ಮಕ್ಕಳಿಗೆ ೫೦ ಲಕ್ಷ ಮುಖವಾಡಗಳನ್ನು (ಮಾಸ್ಕ್) ವಿತರಿಸಿದರು ಮತ್ತು ಅವುಗಳನ್ನು ಬಳಸುವಂತೆ ಇತರ ನಿವಾಸಿಗಳಿಗೂ ಮನವಿ ಮಾಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2019: ನವದೆಹಲಿ: ೨೫,೦೦೦ ರೂಪಾಯಿಗಳ ಜುಜುಬಿ ದಂಡದ ಹಣವನ್ನು ಉಳಿಸುವ ಸಲುವಾಗಿ ಲಕ್ಷಾಂತರ ರೂಪಾಯಿಗಳನ್ನು ಖಟ್ಲೆಗಾಗಿ ವೆಚ್ಚ ಮಾಡಿದ ಕೇರಳ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಚಾಟಿ ಬೀಸಿತು. ಕೇರಳ ಸರ್ಕಾರವು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ಇಂತಹ ಕ್ಷುಲ್ಲಕ ಮತ್ತು ಅನಗತ್ಯ ಪ್ರಕರಣದಾಖಲಿಸಿದ್ದಕ್ಕಾಗಿ ಅದನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು. ಇಂತಹ ದುಸ್ಸಾಹಸಗಳನ್ನು ಮಾಡುವುದರ ವಿರುದ್ಧ ಕಠಿಣ ಎಚ್ಚರಿಕೆ ನೀಡಿತು. ಭವಿಷ್ಯದಲ್ಲಿ ಕೇರಳ ಸರ್ಕಾರದಿಂದ ಇಂತಹ ಅರ್ಜಿ ಸಲ್ಲಿಕೆಯಾದರೆ ನಾವು ಭಾರೀ ದಂಡ ವಿಧಿಸಬೇಕಾಗುತ್ತದೆ ಎಂಬದಾಗಿ ನಾವು ಸ್ಪಷ್ಟ ಪಡಿಸಬಯಸುತ್ತೇವೆಎಂದು ಸುಪ್ರೀಂಕೋರ್ಟ್ ಇತ್ತೀಚೆಗೆ ನೀಡಿದ ತನ್ನ ಆದೇಶದಲ್ಲಿ ಎಚ್ಚರಿಸಿತು. ಹೈಕೋರ್ಟ್ ತೀರ್ಪೊಂದನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆಯಲ್ಲಿ ಸುಪ್ರೀಂಕೋರ್ಟ್ ಕೇರಳ ಸರ್ಕಾರವನ್ನು ರೀತಿ ಕಟುವಾಗಿ ತರಾಟೆಗೆ ತೆಗೆದುಕೊಂಡಿತು. ಎರಡು ದಿನಾಂಕಗಳಲ್ಲಿ ಆರೋಪಿಯನ್ನು ಹಾಜರು ಪಡಿಸಲು ರಾಜ್ಯ ಸರ್ಕಾರ ವಿಫಲವಾದ ಬಳಿಕ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ದುಬೈಯಿಂದ ಸಾಕ್ಷ ನೀಡುವ ಸಲುವಾಗಿ ಬಂದಿದ್ದ ಸಾಕ್ಷಿದಾರನಿಗೆ ೨೫,೦೦೦ ರೂಪಾಯಿಗಳನ್ನು ಪಾವತಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಆಜ್ಞಾಪಿಸಿದ್ದರು. ಆರೋಪಿ ಹಾಜರಿಲ್ಲದ ಕಾರಣ ಸಾಕ್ಷ್ಯ ನೀಡಿಕೆಯನ್ನು ಮುಂದೂಡಬೇಕಾಗಿ ಬಂದಿತ್ತು. ವಿಚಾರಣಾ ನ್ಯಾಯಾಧೀಶರ ಆದೇಶದ ವಿರುದ್ಧ ಕೇರಳ ಸರ್ಕಾರವು ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿತು. ವಿಚಾರಣಾ ನ್ಯಾಯಾಧೀಶರ ಆದೇಶವು ಸರಿಯಾಗಿಯೇ ಇದೆ ಎಂದು ಹೇಳಿ ಹೈಕೋರ್ಟ್ ಅದನ್ನು ಎತ್ತಿ ಹಿಡಿಯಿತು. ವಿಚಾರಣಾ ನ್ಯಾಯಾಧೀಶರ ಆದೇಶವನ್ನು ಎತ್ತಿ ಹಿಡಿದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿತು. ಮತ್ತು ತನ್ಮೂಲಕ, ೨೫,೦೦೦ ರೂಪಾಯಿಗಳನ್ನು ಉಳಿಸಲು ಖಟ್ಲೆಗಳಿಗಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡುವ ಮಾರ್ಗವನ್ನು ಆರಿಸಿಕೊಂಡಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2019: ಔರಂಗಾಬಾದ್: ಆಡಳಿತಾರೂಢ ಎನ್ಡಿಎ ಮೈತ್ರಿಕೂಟದ ಅಂಗಪಕ್ಷಗಳಾದ ಬಿಜೆಪಿ ಮತ್ತು ಶಿವಸೇನೆ ಅಧಿಕಾರ ಹಂಚಿಕೆ ಮತ್ತು ಮುಂದಿನ ಸರ್ಕಾರ ರಚನೆಯ ಬಗೆಗಿನ ತಮ್ಮ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವವರೆಗೆ  ನಾನೇ ಮುಖ್ಯಮಂತ್ರಿಯಾಗುತ್ತೇನೆ, ಅವಕಾಶ ಕೊಡಿಎಂದು ಹೇಳುವ ಮೂಲಕ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ರೈತರೊಬ್ಬರು ಆಡಳಿತಾರೂಢ ಮೈತ್ರಿಕೂಟದಜಗಳಕ್ಕೆ ವಿಶಿಷ್ಟ ಪರಿಹಾರ ಸೂಚಿಸಿದರು. ಕೇಜ್ತಾಲ್ಲೂಕಿನ ವಡ್ಮೌಲಿ ನಿವಾಸಿ ಶ್ರೀಕಾಂತ್ ವಿಷ್ಣು ಗಡಲೆ ಎಂಬ ರೈತ ಗುರುವಾರ ಬೀಡ್ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಿದ ಪತ್ರದಲ್ಲಿ ಪರಿಹಾರವನ್ನು ಸಲಹೆ ಮಾಡಿದರು. ವಿಧಾನಸಭಾ ಚುನಾವಣಾ ಫಲಿತಾಂಶದ ನಂತರ ಭುಗಿಲೆದ್ದಿರುವ ಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿದ ತಮ್ಮ ಸಮಸ್ಯೆಯನ್ನು ಶಿವಸೇನೆ ಮತ್ತು ಬಿಜೆಪಿ ಇನ್ನೂ ಬಗೆಹರಿಸಿಕೊಂಡಿಲ್ಲ ಎಂದು ಅವರು ಪತ್ರದಲ್ಲಿ ಅಸಮಾಧಾನ ವ್ಯಕ್ತ ಪಡಿಸಿದರು. "ನೈಸರ್ಗಿಕ ವಿಪತ್ತುಗಳು (ಅಕಾಲಿಕ ಮಳೆ) ರಾಜ್ಯದಲ್ಲಿ ಕೊಯ್ಲು ಮಾಡಲು ಸಿದ್ಧವಾದ ಬೆಳೆಗಳಿಗೆ ಅಡ್ಡಿಯಾಗಿದೆ. ವಿಪತ್ತುಗಳ ಬಗ್ಗೆ ರೈತರು ಉದ್ವಿಗ್ನರಾಗಿದ್ದಾರೆ. ರೈತರು ಬಳಲುತ್ತಿರುವ ಸಮಯದಲ್ಲಿ, ಶಿವಸೇನೆ ಮತ್ತು ಬಿಜೆಪಿ ಮುಖ್ಯಸ್ಥರಿಗೆ ತಮ್ಮಅಧಿಕಾರದ ಸಮಸ್ಯೆಯನ್ನು  ಪರಿಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಟೀಕಿಸಿದರು. "ಆದ್ದರಿಂದ, ಇವರ ಸಮಸ್ಯೆ ಬಗೆಹರಿಯುವವರೆಗೆ, ರಾಜ್ಯಪಾಲರು ಮುಖ್ಯಮಂತ್ರಿ ಹುದ್ದೆಯ ಜವಾಬ್ದಾರಿಯನ್ನು ನನಗೆ ಹಸ್ತಾಂತರಿಸಬೇಕು" ಎಂದು ಗಡಾಲೆ ಹೇಳಿದ್ದಾರೆ. ‘ನಾನು ರೈತರ ಸಮಸ್ಯೆಗಳನ್ನು ಬಗೆಹರಿಸಿ ಅವರಿಗೆ ನ್ಯಾಯ ನೀಡುತ್ತೇನೆಎಂದು ಗಡಾಲೆ ತಿಳಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2019: ನವದೆಹಲಿಜಾರ್ಖಂಡ್ ವಿಧಾನಸಭೆ ಚುನಾವಣೆಯ ದಿನಾಂಕವನ್ನು 2019 ನವೆಂಬರ್ 1ರ ಶುಕ್ರವಾರ ಚುನಾವಣಾ ಆಯೋಗ ಘೋಷಣೆ ಮಾಡಿತು.  ನವೆಂಬರ್​ 30ರಿಂದ5 ಹಂತಗಳಲ್ಲಿ
ಮತದಾನ ನಡೆಯಲಿದ್ದು, ಡಿಸೆಂಬರ್ 23ಕ್ಕೆ ಫಲಿತಾಂಶ ಹೊರ ಬೀಳಲಿದೆ.  ಮುಖ್ಯ ಚುನಾವಣಾಧಿಕಾರಿ ಸುನಿಲ್ ಅರೋರಾ ಜಾರ್ಖಂಡ್ವಿಧಾನಸಭೆ ಚುನಾವಣೆಯ ದಿನಾಂಕ ಘೋಷಿಸಿದರು. ಸುದ್ದಿಗೋಷ್ಠಿಯಲ್ಲಿ ಜಾರ್ಖಂಡ್ವಿಧಾನಸಭೆ ಚುನಾವಣೆ ನವೆಂಬರ್​ 30ರಿಂದ 5 ಹಂತಗಳಲ್ಲಿ ನಡೆಯಲಿದೆ. ಡಿಸೆಂಬರ್ 23ಕ್ಕೆ ಫಲಿತಾಂಶ ಬರಲಿದೆ ಎಂದು ಅವರು ಪ್ರಕಟಿಸಿದರು.
.30ಕ್ಕೆ ಮೊದಲ ಹಂತದ ಮತದಾನಡಿ.7ರಂದು 2ನೇ ಹಂತದ ಮತದಾನಡಿ.12ರಂದು 3ನೇ ಹಂತದ ಮತದಾನಡಿ.16ರಂದು 4ನೇ ಹಂತದ ಮತದಾನಡಿ.20ರಂದು 5ನೇ ಹಂತದ ಮತದಾನ ನಡೆಯಲಿದೆ. ರಾಜ್ಯದಲ್ಲಿ ಈದಿನದಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆರಾಜ್ಯ ವಿಧಾನಸಭೆಯ ಐದು ವರ್ಷಗಳ ಅವಧಿ ಜನವರಿ 5, 2020 ಕ್ಕೆ ಮುಕ್ತಾಯಗೊಳ್ಳಲಿದೆ. ಚುನಾವಣಾ ಖರ್ಚಿನ ಮೇಲೆ ಹಿಡಿತ ಸಾಧಿಸಲು ಪ್ರತಿ ಜಿಲ್ಲೆಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳನ್ನು ನೇಮಿಸಲಾಗುತ್ತಿದೆ ಎಂದು ಅರೋರಾ ಹೇಳಿದರು. ಜಾರ್ಖಂಡ್ 81 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. 81 ಸ್ಥಾನಗಳ ಶಾಸಕರ ಅಧಿಕಾರಾವಧಿ ಜನವರಿ 5ರಂದು ಅಂತ್ಯವಾಗಲಿದೆಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಕಳೆದ ಲೋಕಸಭಾ ಚುನಾವಣೆಯಲ್ಲಿ 2ನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ ನಡೆಯುತ್ತಿರುವ 3ನೇ ರಾಜ್ಯದ ಚುನಾವಣೆ ಇದಾಗಿದೆ. ರಾಜ್ಯದಲ್ಲಿ ಕೂಡ ಬಿಜೆಪಿ ಅಧಿಕಾರದಲ್ಲಿದೆ. ಹೀಗಾಗಿ, ಜಾರ್ಖಂಡ್ ಚುನಾವಣೆ ಬಿಜೆಪಿಗೆ ಪ್ರತಿಷ್ಠೆಯ ವಿಷಯವಾಗಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2019: ನವದೆಹಲಿ: ಐಎನ್ ಎಕ್ಸ್ ಮೀಡಿಯಾ ಹಣ ವರ್ಗಾವಣೆ ಪ್ರಕರಣದಲ್ಲಿ ತಿಹಾರ್ ಸೆರೆಮನೆ ಸೇರಿರುವ ಕೇಂದ್ರದ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅನಾರೋಗ್ಯ ನೆಲೆಯಲ್ಲಿ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು 2019 ನವೆಂಬರ್ 01ರ ಶುಕ್ರವಾರ ಇತ್ಯರ್ಥ ಪಡಿಸಿದ ದೆಹಲಿ ಹೈಕೋರ್ಟ್ ಮಾಜಿ ಸಚಿವರಿಗೆ ಸ್ವಚ್ಛ ಪರಿಸರ, ಮಾಲಿನ್ಯ ಮುಖವಾಡ  ಮತ್ತು ಪರಿಶುದ್ಧ ನೀರು (ಮಿನರಲ್ ವಾಟರ್) ಒದಗಿಸುವಂತೆ ತಿಹಾರ್ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿತು. ಕ್ರೋನ್ಸ್ ಕಾಯಿಲೆಯಿಂದ ಬಳಲುತ್ತಿರುವ ಚಿದಂಬರಂ ಅವರನ್ನು ಆಸ್ಪತ್ರೆಗೆ ದಾಖಲಿಸಬೇಕಾದ ಅಗತ್ಯ ಇಲ್ಲ ಎಂಬುದಾಗಿ ಏಮ್ಸ್ ವೈದ್ಯಕೀಯ ಮಂಡಳಿಯು ನ್ಯಾಯಾಲಯಕ್ಕೆ ತಿಳಿಸಿದ ಬಳಿಕ ಪೀಠವು ನಿರ್ದೇಶನ ನೀಡಿತು.  ಚಿದಂಬರಂ ಅವರ ಆರೋಗ್ಯದ ಬಗ್ಗೆ ಅಭಿಪ್ರಾಯ ನೀಡಲು ವೈದ್ಯಕೀಯ ಮಂಡಳಿಯೊಂದನ್ನು ರಚಿಸುವಂತೆ ಏಮ್ಸ್ ನಿರ್ದೇಶಕರಿಗೆ ಪೀಠವು 2019 ಅಕ್ಟೋಬರ್ 31ರ ಗುರುವಾರ ಆಜ್ಞಾಪಿಸಿತ್ತುಕ್ರೋನ್ಸ್ ಕಾಯಿಲೆಯು ಜೀರ್ಣಾಂಗದಲ್ಲಿ ಉರಿಯೂತ ಉಂಟುಮಾಡುವ ಕಾಯಿಲೆಯಾಗಿದ್ದು ಕಿಬ್ಬೊಟ್ಟೆಯಲ್ಲಿ ನೋವು, ಅತಿಸಾರ ಅಥವಾ ಭೇದಿ ಮತ್ತು ತೂಕನಷ್ಟಕ್ಕೆ ಕಾರಣವಾಗುತ್ತದೆ.  ಹೈದರಾಬಾದ್ ಮೂಲದ ಜಠರತಜ್ಞ ನಾಗೇಶ್ವರ ರೆಡ್ಡಿ ಅವರನ್ನೂ ತಪಾಸಣೆ ನಡೆಸುವ ಏಮ್ಸ್  ವೈದ್ಯಕೀಯ ಮಂಡಳಿಗೆ ಸೇರ್ಪಡೆ ಮಾಡಿಕೊಳ್ಳುವಂತೆ ಹೈಕೋರ್ಟ್ ಹೇಳಿತ್ತು. ಚಿದಂಬರಂ ಅವರು ವೈದ್ಯಕೀಯ ನೆಲೆಯಲ್ಲಿ ತಮಗೆ ಮಧ್ಯಂತರ ಜಾಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದರು. ತಮ್ಮ ದೇಹಸ್ಥಿತಿ ಹದಗೆಡುತ್ತಿರುವುದರಿಂದ ಸ್ವಚ್ಛ ಪರಿಸರದ ಅಗತ್ಯ ತಮಗಿದೆ. ಆದ್ದರಿಂದ ತಮ್ಮ ಕುಟುಂಬ ವೈದ್ಯರಾದ ನಾಗೇಶ್ವರ ರೆಡ್ಡಿ ಅವರಿಂದ ತಪಾಸಣೆ ಮಾಡಿಸಿಕೊಳ್ಳುವ ಸಲುವಾಗಿ ಮತ್ತು ಅವರ ಜೊತೆ ಸಮಾಲೋಚನೆಗಾಗಿ ತಮಗೆ ಆರು ದಿನಗಳ ಮಧ್ಯಂತರ ಜಾಮೀನು ನೀಡಬೇಕು ಎಂದು ಚಿದಂಬರಂ ಅರ್ಜಿ ಸಲ್ಲಿಸಿದ್ದರು. ರೆಡ್ಡಿಯವರು ಹೈದರಾಬಾದಿನ ಏಷ್ಯನ್ ಇನ್ ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೊಎಂಟೆರಾಲಜಿಯ ಖ್ಯಾತ ಜಠರತಜ್ಞರಾಗಿದ್ದಾರೆ. ೨೦೧೭ರಲ್ಲಿ ತಮಗೆ ಕಂಡು ಬಂದಿದ್ದ ಕ್ರೋನ್ಸ್ ಕಾಯಿಲೆಯ ಪರಿಣಾಮವಾಗಿ ಅಕ್ಟೋಬರ್ ೫ರಿಂದ ತಮಗೆ ತೀವ್ರ ಸ್ವರೂಪದ ಸತತ ನೋವು ಕಿಬ್ಬೊಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು ಅದಕ್ಕೆ ತುರ್ತಾಗಿ ಚಿಕಿತ್ಸೆ ಪಡೆಯುವ ಅಗತ್ಯವಿದೆ ಎಂದು ಚಿದಂಬರಂ ಪ್ರತಿಪಾದಿಸಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

               


Thursday, October 31, 2019

ಇಂದಿನ ಇತಿಹಾಸ History Today ಅಕ್ಟೋಬರ್ 31

2019: ನವದೆಹಲಿ: ಇದುವರೆಗೆ ರಾಜ್ಯವಾಗಿದ್ದ ಜಮ್ಮು ಮತ್ತು ಕಾಶ್ಮೀರವು, ರಾಷ್ಟ್ರೀಯ ಏಕತಾ ದಿನವಾಗಿ ಆಚರಣೆಗೊಳ್ಳುತ್ತಿರುವ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಭಾಯಿ ಪಟೇಲ್‌ಅವರ ೧೪೪ನೇ ಜನ್ಮದಿನವಾದ 2019 ಅಕ್ಟೋಬರ್ 31ರ ಗುರುವಾರ ಇತಿಹಾಸದ ಗರ್ಭವನ್ನು ಸೇರಿದ್ದು, ಹೊಸ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಜನ್ಮ ತಳೆದವು. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ ಸಂವಿಧಾನದ ೩೭೦ನೇ ವಿಧಿಯನ್ನು ಸಂಸತ್ತು 2019 ಆಗಸ್ಟ್ ೫ರಂದು ರದ್ದು ಪಡಿಸಿದ ೮೬ ದಿನಗಳ ಬಳಿಕ, 2019 ಅಕ್ಟೋಬರ್ ೩೦ರ ಬುಧವಾರ ಮಧ್ಯರಾತ್ರಿ ಜಮ್ಮು ಮತ್ತು ಕಾಶ್ಮೀರ ರಾಜ್ಯವು ಅಸ್ತಿತ್ವವನ್ನು ಕಳೆದುಕೊಂಡು, ನೂತನ ಕೇಂದ್ರಾಡಳಿತ ಪ್ರದೇಶಗಳು ಅಸ್ತಿತ್ವಕ್ಕೆ ಬಂದವು. ಆರ್.ಕೆ. ಮಾಥುರ್ ಅವರು ಲಡಾಖ್ ಕೇಂದ್ರಾಡಳಿತ ಪ್ರದೇಶದ  ಮೊದಲ ಲೆಫ್ಟಿನೆಂಟ್‌ಗವರ್ನರ್ ಆಗಿ ಪ್ರಮಾಣ ವಚನ ಸ್ವೀಕರಿಸಿದರು.  ಗೃಹ ಸಚಿವಾಲಯವು ತಡರಾತ್ರಿ ಹೊರಡಿಸಿದ ಅಧಿಸೂಚನೆಯಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು "ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ’  ಹಾಗೂ ‘ಲಡಾಖ್ ಕೇಂದ್ರಾಡಳಿತ ಪ್ರದೇಶ’ ಎಂಬುದಾಗಿ ಬದಲಾಯಿಸಲಾಗಿದೆ ಮತ್ತು ‘ಶಾಶ್ವತ ನಿವಾಸಿಗಳು ಅಥವಾ ಆನುವಂಶಿಕ ರಾಜ್ಯ’ ವಿಷಯಗಳನ್ನು ಕೈಬಿಡಲಾಗಿದೆ’ ಎಂದು ಘೋಷಿಸಲಾಯಿತು. ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವು ಪುದುಚೆರಿಯಂತಹ ಶಾಸಕಾಂಗ, ಚುನಾಯಿತ ಶಾಸನಸಭೆ ಮತ್ತು ಮುಖ್ಯಮಂತ್ರಿಯನ್ನು ಹೊಂದಿರುತ್ತದೆ. ಇನ್ನೊಂದೆಡೆಯಲ್ಲಿ  ಲಡಾಖ್ ಕೇಂದ್ರಾಡಳಿತ ಪ್ರದೇಶವು ಶಾಸನಸಭೆರಹಿತವಾದ ಚಂಡೀಗಢ ಮಾದರಿಯ ಕೇಂದ್ರಾಡಳಿತ ಪ್ರದೇಶವಾಗಿರುತ್ತದೆ. ಇದು ಎರಡು ಗುಡ್ಡಗಾಡು ಅಭಿವೃದ್ಧಿ ಮಂಡಳಿಗಳನ್ನು ಹೊಂದಿರುತ್ತದೆ. ಜಮ್ಮು ಮತ್ತು ಕಾಶ್ಮೀರ ಮರುಸಂಘಟನಾ ಕಾಯ್ದೆ, ೨೦೧೯ರ ಅಡಿಯಲ್ಲಿ ಎರಡೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಸ್ಥರಾಗಿ ಆಡಳಿತವನ್ನು ಲೆಫ್ಟಿನೆಂಟ್ ಗವರ್ನರುಗಳು (ಎಲ್-ಜಿ) ವಹಿಸಿಕೊಂಡರು. (ವಿವರಗಳಿಗೆ  ಇಲ್ಲಿ  ಕ್ಲಿಕ್ ಮಾಡಿರಿ)

2019: ನವದೆಹಲಿ/ ಕೇವಡಿಯಾ: ಸಂವಿಧಾನದ ೩೭೦ನೇ ವಿಧಿಯು ಜಮ್ಮು ಮತ್ತು ಕಾಶ್ಮೀರವನ್ನು ರಾಷ್ಟ್ರದ ಇತರ ಭಾಗಳಿಂದ ಪ್ರತ್ಯೇಕಿಸುವ ’ಕೃತಕಗೋಡೆಯನ್ನು’ ಸೃಷ್ಟಿಸಿತ್ತು; ಆಗಸ್ಟ್ ೫ರಂದು ಅದನ್ನು ರದ್ದು ಪಡಿಸುವ ಮೂಲಕ ಸರ್ದಾರ್ ಪಟೇಲ್‌ಅವರು ಕಂಡಿದ್ದ ಭಾರತವನ್ನು ಏಕೀಕರಣ ಮಾಡುವ ಕನಸಿನ ಯೋಜನೆಯನ್ನು ಈಡೇರಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2019 ಅಕ್ಟೋಬರ್ 31ರ ಗುರುವಾರ ಹೇಳಿದರು. ಪ್ರಧಾನಿಯವರು ಗುಜರಾತಿನ ಕೇವಡಿಯಾದಲ್ಲಿ ಭಾರತದ ಮೊದಲ ಗೃಹ ಸಚಿವರ ೧೪೪ನೇ ಜನ್ಮದಿನವನ್ನು ‘ರಾಷ್ಟ್ರೀಯ ಏಕತಾ ದಿನ’ವಾಗಿ ಆಚರಿಸುವ ಸಲುವಾಗಿ ನಡೆದ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಸರ್ದಾರ್ ಪಟೇಲರ ೧೪೪ನೇ ಜನ್ಮದಿನದಂದು ಪ್ರಧಾನಿ ಮೋದಿಯವರು ಏಕತಾ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ತಮ್ಮ ಶ್ರದ್ಧಾಂಜಲಿಯನ್ನು ಸಲ್ಲಿಸಿದರು. ಪ್ರಧಾನಿ ಭೇಟಿಯ ಹಿನ್ನೆಲೆಯಲ್ಲಿ ಪ್ರದೇಶದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು. ಏಕತಾ ಪ್ರತಿಮೆಯನ್ನು ಕಳೆದ ವರ್ಷ ಸರ್ದಾರ್ ಪಟೇಲ್ ಅವರ ಗೌರವಾರ್ಥವಾಗಿ ನಿರ್ಮಿಸಿ ಉದ್ಘಾಟಿಸಲಾಗಿತ್ತು.  ಮೋದಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರವು ೨೦೧೪ರಿಂದೀಚೆಗೆ ಸರ್ದಾರ್ ಪಟೇಲ್‌ ಜನ್ಮದಿನವನ್ನು ರಾಷ್ಟ್ರೀಯ ಏಕತಾ ದಿನವಾಗಿ ಆಚರಿಸುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ‘ರಾಜಕೀಯ ಸ್ಥಿರತೆಯ ಮತ್ತು ಅಭಿವೃದ್ಧಿಯ ಹೊಸ ಯುಗ’ ಉದಯಿಸಿದ್ದು, ಸ್ವಾತಂತ್ರ್ಯಾ ನಂತರ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಬ್ಲಾಕ್ ಮತು ಅಭಿವೃದ್ಧಿ ಮಂಡಳಿ (ಬಿಡಿಸಿ) ಚುನಾವಣೆಗಳು ಇತ್ತೀಚೆಗೆ ನಡೆದವು ಎಂದು ಮೋದಿ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2019: ನವದೆಹಲಿ/ ಮುಂಬೈ: ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಕೇಸರಿ ಮೈತ್ರಿಕೂಟದ ಬಿಕ್ಕಟ್ಟು
ಬಗೆಹರಿಯದೇ ಇದ್ದರೂ, ನವೆಂಬರ್ ೪-೫ರ ವೇಳೆಗೆ ವಾಂಖೇಡೆ ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಸಲು ಬಿಜೆಪಿ ಸಿದ್ಧತೆ ಆರಂಭಿಸಿತು. ಆದರೆ ಶಿವಸೇನೆ- ಬಿಜೆಪಿ ಮಧ್ಯೆ ಹಗ್ಗ ಜಗ್ಗಾಟ ಮುಂದುವರೆದಿದ್ದು, ಸೇನೆಯು ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆಗೂ ಮಾತುಕತೆ ನಡೆಸಿತು.ಶಿವಸೇನೆಯ ಸಂಜಯ ರಾವತ್ ಅವರು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಭೇಟಿ ಮಾಡಿ ಮಾತುಕತೆ ನಡೆಸಿದರು. ಶಿವಸೇನೆಯು ೫೦:೫೦ ಅಧಿಕಾರ ಹಂಚಿಕೆ ಸೂತ್ರದ ಕುರಿತ ತನ್ನ ಪಟ್ಟನ್ನು ಸಡಿಲಿಸಿದೆ ಎಂಬ ವರದಿಗಳ ಮಧ್ಯೆಯೇ ಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ’ಶಿವ ಸೈನಿಕನನ್ನು ಮಹಾರಾಷ್ಟ್ರದ ಮುಖ್ಯಮಂತ್ರಿಯನ್ನಾಗಿ ಮಾಡಲಾಗುವುದು ಎಂದು ಶಾಸಕರ ಸಭೆಯಲ್ಲಿ ಘೋಷಿಸುವ ಮೂಲಕ ತಾನಿನ್ನೂ ಪಟ್ಟು ಸಡಿಲಿಸಿಲ್ಲ ಎಂದು ಸುಳಿವು ನೀಡಿದರು. ಕ್ಷವು ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆಗೆ ಇನ್ನೂ ಮಾತುಕತೆ ನಡೆಸುತ್ತಿದೆ ಮತ್ತು ಶಿವಸೈನಿಕನನ್ನು ಮಹಾರಾಷ್ಟ್ರದ ಮುಖ್ಯಮಂತ್ರಿಯನ್ನಾಗಿ ಮಾಡಲು ಬಯಸಿದೆ. ನಾವು ಯಾವುದಕ್ಕೆ ಬದ್ಧರಾಗಿದ್ದೇವೋ ಅದನ್ನೇ ಕೇಳುತ್ತಿದ್ದೇವೆ’ ಎಂದು ಠಾಕ್ರೆ ಹೇಳಿದರು. ೫೦:೫೦ ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಬಿಜೆಪಿ ಭರವಸೆ ಕೊಟ್ಟಿಲ್ಲ ಎಂಬುದಾಗಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಹೇಳಿರುವುದಕ್ಕೆ ಭ್ರಮನಿರಸನ ವ್ಯಕ್ತ ಪಡಿಸಿದ ಉದ್ಧವ್ ’ಅಮಿತ್ ಶಾ ಮತ್ತು ತಮ್ಮ ಮಧ್ಯೆ ಯಾವುದಕ್ಕೆ ಬದ್ಧತೆ ವ್ಯಕ್ತ ಪಡಿಸಲಾಗಿತ್ತು ಎಂದು ಫಡ್ನವಿಸ್ ಅವರು ಮೊದಲು ಸ್ಪಷ್ಟ ಪಡಿಸಿಕೊಳ್ಳಲಿ’ ಎಂದು ಹೇಳಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ) 

2019: ಇಸ್ಲಾಮಾಬಾದ್: ಕೇಂದ್ರ ಪಾಕಿಸ್ತಾನದ ಪ್ಯಾಸೆಂಜರ್ ರೈಲುಗಾಡಿಯೊಂದಕ್ಕೆ 2019
ಅಕ್ಟೋಬರ್  31ರ ಗುರುವಾರ ಬೆಂಕಿ ಹತ್ತಿಕೊಂಡ ಪರಿಣಾಮವಾಗಿ ಕನಿಷ್ಠ ೭೩ ಮಂದಿ ಸುಟ್ಟು ಕರಕಲಾಗಿದ್ದು, ಇತರ ೪೦ಕ್ಕೂ ಹೆಚ್ಚು ಮಂದಿ ಸುಟ್ಟ ಗಾಯಗಳಿಗೆ ಒಳಗಾಗಿದ್ದಾರೆ ಎಂದು ಪ್ರಾಂತೀಯ ಸಚಿವರು ತಿಳಿಸಿದರು. ಬೋಗಿಗಳಲ್ಲಿ ಧಗಧಗಿಸುತ್ತಿದ್ದ ಬೆಂಕಿಯ ಕೆನ್ನಾಲಗೆ ಹಾಗೂ ರೈಲುಬೋಗಿಗಳ ಒಳಗಿನಿಂದ ಪ್ರಯಾಣಕರ ಹಾಹಾಕಾರ, ಕಿರಿಚಾಟ ಕೇಳುತ್ತಿದ್ದ ಭೀಕರ ದೃಶ್ಯಗಳನ್ನು ಟೆಲಿವಿಷನ್‌ಗಳು ಪ್ರಸಾರ ಮಾಡಿದವು. ಪಂಜಾಬ್ ಪ್ರಾಂತದ ರಹೀಮ್ ಯಾರ್ ಖಾನ್ ಜಿಲ್ಲೆಯ ಸಮೀಪ ಈ ದುರಂತ ಸಂಭವಿಸಿತು. ’ನಮಗೆ ಬಂದಿರುವ ವರದಿಗಳ ಪ್ರಕಾರ ೬೫ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ೪೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ’ ಎಂದು ಪ್ರಾಂತೀಯ ಆರೋಗ್ಯ ಸಚಿವೆ ಡಾ. ಯಾಸ್ಮೀನ್ ರಶೀದ್ ಹೇಳಿದರು. ಗಾಯಾಳುಗಳನ್ನು ಸಮೀಪದ ಬಹವಾಲ್ಪುರ ಮತ್ತು ಆಸುಪಾಸಿನ ಆಸ್ಪತ್ರೆಗಳಿಗೆ ಒಯ್ಯಲಾಗಿದೆ ಎಂದು ಆಕೆ ನುಡಿದರು. ಕೇವಲ ೧೮ ಶವಗಳು ಗುರುತಿಸುವ ಸ್ಥಿತಿಯಲ್ಲಿದ್ದು, ಉಳಿದ ಶವಗಳು ಗುರುತಿಸಲೂ ಸಾಧ್ಯವಾಗದಷ್ಟು ಕರಟಿಹೋಗಿವೆ ಎಂದು ಅವರು ಹೇಳಿದರು. ’ಭಯಾನಕ.. ಪ್ರಯಾಣಿಕರು ಒಯ್ದಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಿಸಿದ್ದರಿಂದ ಸಂಭವಿಸಿದ ಈ ದುರಂತ ಭಯಾನಕ’ ಎಂದು ಮಾನವ ಹಕ್ಕುಗಳ ಸಚಿವೆ ಶಿರೀನ್ ಮಝಾರಿ ಟ್ವೀಟ್ ಮಾಡಿದರು. ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಾಗ ಕೆಲವು ಪ್ರಯಾಣಿಕರು ಬೆಳಗಿನ ಉಪಾಹಾರ ಸಿದ್ಧ ಪಡಿಸುವುದರಲ್ಲಿ ತಲ್ಲೀನರಾಗಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದವು. ದುರಂತಕ್ಕೆ ಈಡಾಗಿರುವ ರೈಲು ಪಾಕಿಸ್ತಾನದ ಅತ್ಯಂತ ಹಳೆಯ ಹಾಗೂ ಜನಪ್ರಿಯ ಸೇವೆ ಒದಗಿಸುತ್ತಿದ್ದ ’ತೇಝಗಮ್’. ಇದು ಇಸ್ಲಾಮಾಬಾದ್ ಸಮೀಪದ ರಾವಲ್ಪಿಂಡಿ ಮತ್ತು ದಕ್ಷಿಣದ ಬಂದರು ನಗರ ಕರಾಚಿ ಮಧ್ಯೆ ಸಂಚರಿಸುತ್ತದೆ. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)