Showing posts with label SIR. Show all posts
Showing posts with label SIR. Show all posts

Tuesday, October 6, 2026

PARYAYA: ಎಸ್‌ಐಆರ್‌: ಕಪಿಲ್‌ ಸಿಬಲ್‌ ಏನು ಹೇಳುತ್ತಾರೆ?

 ಎಸ್‌ಐಆರ್‌: ಕಪಿಲ್‌ ಸಿಬಲ್‌ ಏನು ಹೇಳುತ್ತಾರೆ?

ಕೇಂದ್ರ ಸಚಿವ ಕಿರಣ್‌ ರಿಜಿಜು ಅವರು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ ಐಆರ್‌) ವಿವಾದದ ಹಿನ್ನೆಲೆಯಲ್ಲಿ 2013ರಲ್ಲಿ ಕಾನೂನು ಸಚಿವರಾಗಿದ್ದ ಕಪಿಲ್‌ ಸಿಬಲ್‌ ಅವರು ಸಂಸತ್ತಿನಲ್ಲಿ ನೀಡಿದ್ದ ಹೇಳಿಕೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

 "ಕಪಿಲ್ ಸಿಬಲ್ ಅವರು ಯಾವಾಗಲೂ ಭ್ರಷ್ಟರು, ಉಗ್ರವಾದಿಗಳು ಮತ್ತು ಸಮಾಜಘಾತುಕ ಶಕ್ತಿಗಳನ್ನು ರಕ್ಷಿಸುತ್ತಿರುವುದು ಕಂಡುಬರುವುದರಿಂದ ನನಗೆ ಅವರನ್ನು ಇಷ್ಟವಿರಲಿಲ್ಲ.

ಆದರೆ ಮೊದಲ ಬಾರಿಗೆ ನನಗೆ ಅವರ ಬಗ್ಗೆ ಮೆಚ್ಚುಗೆಯಾಗಿದೆ; ಏಕೆಂದರೆ ಅವರು ಸಂಸತ್ತಿನಲ್ಲಿ ಕಾನೂನು ಸಚಿವರಾಗಿದ್ದ ತಮ್ಮ ಹಳೆಯ ಭಾಷಣದ ಮೂಲಕ ಕಾಂಗ್ರೆಸ್ ಪಕ್ಷದ ನಕಲಿ ಮತ ಕಳವು (ವೋಟ್ ಚೋರಿ) ನಾಟಕವನ್ನು ಬಯಲು ಮಾಡಿದ್ದಾರೆ!!" ಎಂದು ವಿಡಿಯೋ ಜೊತೆಗೆ ರಿಜಿಜು ಷರಾ ಬರೆದಿದ್ದಾರೆ.
ವಿಡಿಯೋ ನೋಡಿ:

ಕಪಿಲ್ ಸಿಬಲ್ ಅವರ 2013ರ ಸಂಸತ್ ಭಾಷಣದ ಸಾರಾಂಶ

ಕೇಂದ್ರ ಸಚಿವ ಕಿರಣ್‌ ರಿಜಿಜು ಅವರು ಹಂಚಿಕೊಂಡಿರುವ, 2013ರಲ್ಲಿ ಕಪಿಲ್ ಸಿಬಲ್ ಅವರು ಕಾನೂನು ಸಚಿವರಾಗಿ ಸಂಸತ್ತಿನಲ್ಲಿ ನೀಡಿದ್ದ ಭಾಷಣದ ವಿವರ ಹೀಗಿದೆ:

"ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವ ಅಥವಾ ಸರಿಪಡಿಸುವ ಪ್ರಕ್ರಿಯೆಯು ಸಂಪೂರ್ಣವಾಗಿ ಕಾನೂನುಬದ್ಧವಾದ ಪ್ರಕ್ರಿಯೆಯಾಗಿದೆ. ಯಾವುದೇ ರೀತಿಯ ನಕಲಿ ಅಥವಾ ತಪ್ಪಾದ ನಮೂದುಗಳನ್ನು ತಡೆಯಲು ಮತ್ತು ಚುನಾವಣಾ ವ್ಯವಸ್ಥೆಯ ಪಾವಿತ್ರ್ಯತೆಯನ್ನು ಕಾಪಾಡಲು ಚುನಾವಣಾ ಆಯೋಗಕ್ಕೆ ಹಾಗೂ ಚುನಾವಣಾ ನೋಂದಣಿ ಅಧಿಕಾರಿಗೆ ನಿರ್ದಿಷ್ಟ ನಿಯಮಗಳಡಿ ಅಧಿಕಾರ ನೀಡಲಾಗಿದೆ.

ಅಲ್ಲದೆ, ಮತದಾರರ ಪಟ್ಟಿಯಿಂದ ಯಾರ ಹೆಸರಾದರೂ ತಪ್ಪಾಗಿ ಕೈಬಿಡಲ್ಪಟ್ಟರೆ, ಅಥವಾ ಅರ್ಹ ನಾಗರಿಕರು ತಮ್ಮ ಹೆಸರನ್ನು ಸೇರಿಸಿಕೊಳ್ಳಲು ಬಯಸಿದರೆ, ಅವರು ನಿಗದಿತ ನಿಯಮಗಳ ಪ್ರಕಾರ ಚುನಾವಣಾ ಆಯೋಗವನ್ನು ಅಥವಾ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಸೂಕ್ತ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣಾ ಪಟ್ಟಿಯನ್ನು ಪಾರದರ್ಶಕವಾಗಿ ಇಡಲು ಇರುವ ಒಂದು ಸಾಂವಿಧಾನಿಕ ಪ್ರಕ್ರಿಯೆಯಾಗಿದೆ."

 2026ರ ಪ್ರಸ್ತುತ ರಾಜಕೀಯ ಬೆಳವಣಿಗೆಗಳಲ್ಲಿ (SIR ಪ್ರಕ್ರಿಯೆ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ ವಿವಾದದ ಸಂದರ್ಭದಲ್ಲಿ), ಕೇಂದ್ರ ಸಚಿವ ಕಿರಣ್‌ ರಿಜಿಜು ಅವರು 2013ರಲ್ಲಿ ಕಾನೂನು ಸಚಿವರಾಗಿದ್ದ ಕಪಿಲ್ ಸಿಬಲ್ ಆಡಿದ ಈ ಹಳೆಯ ಮಾತುಗಳನ್ನು ಈಗಿನ ವಿರೋಧ ಪಕ್ಷದ ನಿಲುವನ್ನು ಪ್ರಶ್ನಿಸಲು ಉಲ್ಲೇಖಿಸಿದ್ದಾರೆ.

PARYAYA: ಎಸ್‌ಐಆರ್‌: ಕಪಿಲ್‌ ಸಿಬಲ್‌ ಏನು ಹೇಳುತ್ತಾರೆ?:   ಎಸ್‌ಐಆರ್‌: ಕಪಿಲ್‌ ಸಿಬಲ್‌ ಏನು ಹೇಳುತ್ತಾರೆ? ಕೇಂ ದ್ರ ಸಚಿವ ಕಿರಣ್‌ ರಿಜಿಜು ಅವರು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ ಐಆರ್‌) ವಿವಾದದ ಹಿನ್ನೆಲೆಯ...

Friday, August 7, 2026

PARYAYA: ನಿಮ್ಮ ಹೆಸರು ಈ ಪಟ್ಟಿಗೆ ಸೇರಿದೆಯಾ? ಈಗಲೇ ನೋಡಿಕೊಳ್ಳಿ..

 ನಿಮ್ಮ ಹೆಸರು ಈ ಪಟ್ಟಿಗೆ ಸೇರಿದೆಯಾ? ಈಗಲೇ ನೋಡಿಕೊಳ್ಳಿ..

ಕರ್ನಾಟಕದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ (ಎಸ್‌ ಐ ಆರ್)‌ ಎಎಸ್‌ಡಿಡಿಒ ಎಂಬುದಾಗಿ ವರ್ಗೀಕರಿಸಲಾದ ೧.೧೦ ಕೋಟಿಗೂ ಹೆಚ್ಚಿನ ಮತದಾರರ ಪಟ್ಟಿಯನ್ನು ರಾಜ್ಯದ ಮುಖ್ಯ ಚುನಾವಣಾಧಿಕಾರಿ (ಸಿಇಒ) ಅನ್ಬು ಕುಮಾರ್‌ ಪ್ರಕಟಿಸಿದ್ದಾರೆ.

ಎಎಸ್‌ಡಿಡಿಒ ಅಂದರೆ ಪತ್ತೆಯಾಗದ (ಅಬ್ಸೆಂಟ್-ಎ) ಶಾಶ್ವತ ಸ್ಥಳಾಂತರ (ಶಿಫ್ಟೆಡ್-‌ ಎಸ್)‌, ಮೃತ (ಡೆಡ್-ಡಿ), ಹೆಚ್ಚು ಕಡೆ ನೋಂದಣಿ (ಡೂಪ್ಲಿಕೇಟ್-‌ ಡಿ) ಮತ್ತು ಇತರೆ (ಅದರ್ಸ್-ಒ) ಎಂದು ಅರ್ಥ. ಅಂದರೆ, ಪತ್ತೆಯಾಗದ, ಶಾಶ್ವತವಾಗಿ ಸ್ಥಳಾಂತರಗೊಂಡಿರುವ, ಮೃತರಾಗಿರುವ, ಒಂದಕ್ಕಿಂತ ಹೆಚ್ಚು ಕಡೆ ಹೆಸರು ನೋಂದಣಿಯಾಗಿರುವ ಮತ್ತು ಇತರೆ ಮತದಾರರು ಎಂದು ಅರ್ಥ.

ನಿಮ್ಮ ಹೆಸರು ಈ ಪಟ್ಟಿಗೆ ಸೇರ್ಪಡೆಯಾಗಿದೆಯೇ ಎಂದು ಪರಿಶೀಲಿಸಲು ಈ ಕೊಂಡಿಯನ್ನು (Link) ceo.karnataka.gov.in/asddo.html ಕ್ಲಿಕ್‌ ಮಾಡಿ ಪರಿಶೀಲಿಸಬಹುದು.

ನಿಮ್ಮ ಹೆಸರು ಈ ಪಟ್ಟಿಗೆ ಸೇರ್ಪಡೆ ಆಗಿದ್ದರೆ, ನಿಮ್ಮ ಬಿಎಲ್‌ ಒ ಅವರನ್ನು ಸಂಪರ್ಕಿಸಿ ಏನು ಮಾಡಬೇಕು ಎಂದು ವಿಚಾರಿಸಿ. ಚುನಾವಣಾ ಆಯೋಗವು ಪಟ್ಟಿ ಮಾಡಿರುವ ೧೧ ದಾಖಲೆಗಳಲ್ಲಿ ಯಾವ ದಾಖಲೆ ಸಲ್ಲಿಸಿ, ನಿಮ್ಮ ಹೆಸರನ್ನು ಅಂತಿಮ ಮತದಾರರ ಪಟ್ಟಿಗೆ ಹೇಗೆ ಸೇರ್ಪಡೆ ಮಾಡಿಕೊಳ್ಳಬಹುದು ಎಂದು ತಿಳಿದುಕೊಳ್ಳಬಹುದು.

ಈ ಸುದ್ದಿಯನ್ನೂ ಓದಿ: 

ಮತದಾರರ ಪಟ್ಟಿಯಲ್ಲಿ ವಿಳಾಸ ಬದಲಾವಣೆ: 'ಫಾರ್ಮ್ 6' ಪರಿಹಾರ

PARYAYA: ನಿಮ್ಮ ಹೆಸರು ಈ ಪಟ್ಟಿಗೆ ಸೇರಿದೆಯಾ? ಈಗಲೇ ನೋಡಿಕೊಳ್ಳಿ..:   ನಿಮ್ಮ ಹೆಸರು ಈ ಪಟ್ಟಿಗೆ ಸೇರಿದೆಯಾ? ಈಗಲೇ ನೋಡಿಕೊಳ್ಳಿ.. ಕ ರ್ನಾಟಕದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ (ಎಸ್‌ ಐ ಆರ್)‌ ಎಎಸ್‌ಡಿಡಿಒ ಎಂಬುದಾಗಿ ವರ್...

Thursday, July 9, 2026

PARYAYA: ಮತದಾರರ ಪಟ್ಟಿಯಲ್ಲಿ ವಿಳಾಸ ಬದಲಾವಣೆ: 'ಫಾರ್ಮ್ 6' ಪರಿಹಾರ

 ಮತದಾರರ ಪಟ್ಟಿಯಲ್ಲಿ ವಿಳಾಸ ಬದಲಾವಣೆ: 'ಫಾರ್ಮ್ 6'  ಪರಿಹಾರ

 ಬೆಂಗಳೂರು: ಮತದಾರರ ಪಟ್ಟಿಯಲ್ಲಿರುವ ಹಳೆಯ ವಿಳಾಸ ಈಗ ಬದಲಾಗಿದ್ದರೆ, ಅಂತಹವರಿಗೆ ಎಣಿಕೆ ನಮೂನೆ (Enumeration Form) ತಲುಪುವುದಿಲ್ಲ ಎಂಬ ಆತಂಕ ಸದ್ಯ ನಗರದ ಮತದಾರರಲ್ಲಿ ಮನೆಮಾಡಿದೆ. ಆದರೆ, ಈ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ರಾಜ್ಯ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ.

ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ (CEO) ಅವರು ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆಸಿದ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತ ಸಭೆಯಲ್ಲಿ ಈ ಮಹತ್ವದ ಮಾಹಿತಿ ಹಂಚಿಕೊಳ್ಳಲಾಗಿದೆ.

ಪ್ರಮುಖ ಅಂಶಗಳು:

  • ವಿಳಾಸ ಬದಲಾವಣೆ: ಹಾಲಿ ಮತದಾರರ ಪಟ್ಟಿಯಲ್ಲಿರುವ ವಿಳಾಸಕ್ಕಿಂತ ಪ್ರಸ್ತುತ ವಾಸವಿರುವ ವಿಳಾಸ ಬದಲಾಗಿದ್ದರೆ, ಅವರಿಗೆ ಎಣಿಕೆ ನಮೂನೆಗಳನ್ನು ವಿತರಿಸಲಾಗುವುದಿಲ್ಲ. ಹೀಗಾಗಿ, ಅವರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ.
  • ಪರಿಹಾರವೇನು?: ಆಗಸ್ಟ್ 5ರ ನಂತರ ಕರಡು ಮತದಾರರ ಪಟ್ಟಿಯು ಪ್ರಕಟವಾಗಲಿದೆ. ಆ ನಂತರ ನಡೆಯುವ ಪರಿಶೀಲನೆ ಹಾಗೂ ಆಕ್ಷೇಪಣೆಗಳ ಅವಧಿಯಲ್ಲಿ, ಮತದಾರರು 'ಫಾರ್ಮ್ 6' (Form 6) ಭರ್ತಿ ಮಾಡಿ ಸಲ್ಲಿಸುವ ಮೂಲಕ ಅಂತಿಮ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸಿಕೊಳ್ಳಬಹುದು.
  • ನಗರ ಪ್ರದೇಶಗಳಿಗೆ ವಿಶೇಷ ಗಮನ: ಬೆಂಗಳೂರಿನಂತಹ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಮನೆ ಬದಲಾವಣೆ ಸಾಮಾನ್ಯ. ಈ ಸ್ಪಷ್ಟನೆಯು ಇಂತಹ ಸಾವಿರಾರು ಮತದಾರರಲ್ಲಿ ಇದ್ದ ಗೊಂದಲವನ್ನು ನಿವಾರಿಸಲಿದೆ ಎಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಅಭಿಪ್ರಾಯಪಟ್ಟಿದ್ದಾರೆ.

ಸಭೆಯಲ್ಲಿ ಚರ್ಚಿಸಲ್ಪಟ್ಟ ಇತರ ವಿಷಯಗಳು:

ಸಭೆಯು ಕೇವಲ ವಿಳಾಸ ಬದಲಾವಣೆಗೆ ಸೀಮಿತವಾಗಿರಲಿಲ್ಲ; ಹಲವು ಪ್ರಮುಖ ವಿಚಾರಗಳ ಕುರಿತು ಪಕ್ಷಗಳ ಪ್ರತಿನಿಧಿಗಳು ಆಯೋಗದ ಗಮನ ಸೆಳೆದಿದ್ದಾರೆ:

  • ವಿತರಣೆಯ ಅಂಕಿಅಂಶ: ಎಣಿಕೆ ನಮೂನೆಗಳ ವಿತರಣೆ ಶೇ. 80ರಷ್ಟು ಪೂರ್ಣಗೊಂಡಿದೆ ಎಂಬ ಆಯೋಗದ ಹೇಳಿಕೆಯ ಬಗ್ಗೆ ಬಿಜೆಪಿ ಪ್ರತಿನಿಧಿಗಳು ಪ್ರಶ್ನಿಸಿದ್ದಾರೆ. ಕೇವಲ ನಮೂನೆಗಳನ್ನು ಮನೆಗೆ ತಲುಪಿಸುವುದು ಮಾತ್ರವಲ್ಲದೆ, ಬೂತ್ ಮಟ್ಟದ ಅಧಿಕಾರಿಗಳು (BLOs) ಮತದಾರರಿಗೆ ಪ್ರಕ್ರಿಯೆಯನ್ನು ಸರಿಯಾಗಿ ವಿವರಿಸಿದ್ದಾರೆಯೇ ಎಂಬ ಬಗ್ಗೆ ಸ್ಪಷ್ಟನೆ ಕೋರಿದ್ದಾರೆ.
  • ಕ್ಷೇತ್ರ ಮಟ್ಟದ ಪರಿಶೀಲನೆ: ಜಿಲ್ಲೆಗಳು, ತಾಲೂಕುಗಳು ಮತ್ತು ಮತಗಟ್ಟೆಗಳಲ್ಲಿನ ವಾಸ್ತವ ಸ್ಥಿತಿಯನ್ನು ತಿಳಿಯಲು ಮುಖ್ಯ ಚುನಾವಣಾಧಿಕಾರಿಗಳು ಸ್ವತಃ ಕ್ಷೇತ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಕಾಂಗ್ರೆಸ್ ಪ್ರತಿನಿಧಿಗಳು ಸಲಹೆ ನೀಡಿದ್ದಾರೆ.
  • ಇತರೆ ಸುಧಾರಣೆಗಳು: ಮತದಾರರ ಹೆಸರು ಅಥವಾ ಉಪನಾಮದಲ್ಲಿನ ಕಾಗುಣಿತ ದೋಷಗಳನ್ನು ಸರಿಪಡಿಸುವುದು, ಮದುವೆಯಾದ ಮಹಿಳೆಯರ ಹೆಸರಿನಲ್ಲಿ ಪತಿಯ ಹೆಸರನ್ನು ಸೇರಿಸುವಂತಹ ತಾಂತ್ರಿಕ ಬದಲಾವಣೆಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ರಾಜಕೀಯ ಪಕ್ಷಗಳು ಮನವಿ ಮಾಡಿವೆ. ಅಲ್ಲದೆ, ಬಿಎಲ್‌ಒಗಳು (BLO) ಮತ್ತು ಬೂತ್ ಮಟ್ಟದ ಏಜೆಂಟರ (BLA) ನಡುವಿನ ಸಮನ್ವಯವನ್ನು ಬಲಪಡಿಸುವ ಅಗತ್ಯವನ್ನೂ ಒತ್ತಿ ಹೇಳಲಾಗಿದೆ.

ಈ ಹೊಸ ಮಾಹಿತಿಯು ಮತದಾರರಿಗೆ ತಮ್ಮ ಹೆಸರನ್ನು ಪಟ್ಟಿಯಲ್ಲಿ ಸೇರಿಸಿಕೊಳ್ಳಲು ಅಥವಾ ಬದಲಾವಣೆಗಳನ್ನು ಮಾಡಿಕೊಳ್ಳಲು ಸೂಕ್ತ ಅವಕಾಶ ಕಲ್ಪಿಸಿದೆ. 

PARYAYA: ಮತದಾರರ ಪಟ್ಟಿಯಲ್ಲಿ ವಿಳಾಸ ಬದಲಾವಣೆ: 'ಫಾರ್ಮ್ 6' ಪರಿಹಾರ:   ಮತದಾರರ ಪಟ್ಟಿಯಲ್ಲಿ ವಿಳಾಸ ಬದಲಾವಣೆ: ' ಫಾರ್ಮ್ 6'  ಪರಿಹಾರ   ಬೆಂ ಗಳೂರು: ಮತದಾರರ ಪಟ್ಟಿಯಲ್ಲಿರುವ ಹಳೆಯ ವಿಳಾಸ ಈಗ ಬದಲಾಗಿದ್ದರೆ , ಅಂತಹವರಿಗೆ ಎಣಿಕ...

Wednesday, May 27, 2026

PARYAYA: ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಸಿಂಧು: ಸುಪ್ರೀಂಕೋರ್ಟ್‌

 ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಸಿಂಧು: ಸುಪ್ರೀಂಕೋರ್ಟ್‌

ನವದೆಹಲಿ: ದೇಶದ ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ನಿಟ್ಟಿನಲ್ಲಿ ಭಾರತೀಯ ಚುನಾವಣಾ ಆಯೋಗ (ECI) ಕೈಗೊಂಡಿರುವ 'ವಿಶೇಷ ಸಮಗ್ರ ಪರಿಷ್ಕರಣೆ' (Special Intensive Revision - SIR) ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಮಾನ್ಯತೆ ನೀಡಿದೆ. ಈ ಪ್ರಕ್ರಿಯೆಯು ಸಾಂವಿಧಾನಿಕವಾಗಿ ಮತ್ತು ಶಾಸನ ಬದ್ಧವಾಗಿ ಸಿಂಧುವಾಗಿದೆ ಎಂದು ಸುಪ್ರೀಂ ಕೋರ್ಟ್ ೨೦೨೬ ಮೇ ೨೭ರ ಬುಧವಾರ ಮಹತ್ವದ ತೀರ್ಪು ನೀಡಿದೆ.

ತೀರ್ಪಿನ ಮುಖ್ಯಾಂಶಗಳು:

  • ಆಯೋಗದ ಅಧಿಕಾರ:  ಬಿಹಾರದಲ್ಲಿ ನಡೆದ ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಆಯೋಗದ ಕ್ರಮದಲ್ಲಿ ಯಾವುದೇ ಸಂವಿಧಾನಿಕ ಉಲ್ಲಂಘನೆಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ.
  • ಪೌರತ್ವದ ವಿಚಾರದಲ್ಲಿ ಮಹತ್ವದ ಸೂಚನೆ: ಪರಿಷ್ಕರಣೆಯ ವೇಳೆ ಪೌರತ್ವವನ್ನು ಪರಿಶೀಲಿಸುವ ಅಧಿಕಾರ ಆಯೋಗಕ್ಕೆ ಇದೆ. ಆದರೆ, ಪಟ್ಟಿಯಿಂದ ಹೆಸರು ತೆಗೆದುಹಾಕಿದ ತಕ್ಷಣ ಅವರಿಗೆ ಪೌರತ್ವ ಇಲ್ಲ ಎಂದರ್ಥವಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
  • ಸಂತ್ರಸ್ತರಿಗೆ ನ್ಯಾಯಾಂಗ ರಕ್ಷಣೆ: ಪೌರತ್ವ ಸಾಬೀತುಪಡಿಸಲು ವಿಫಲರಾದವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿದರೆ, ಅಂತಹ ಪ್ರಕರಣಗಳನ್ನು ಸೂಕ್ತ ಪ್ರಾಧಿಕಾರಕ್ಕೆ ಕಳುಹಿಸಿ, ಹೆಚ್ಚಿನ ಕಾನೂನು ವಿಚಾರಣೆ ನಡೆಸುವಂತೆ ಆಯೋಗಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
  • ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ: ಮತದಾರರ ಪಟ್ಟಿಯ ಪರಿಷ್ಕರಣೆಯು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಅವಶ್ಯಕ ಎಂದು ಅಭಿಪ್ರಾಯಪಟ್ಟಿರುವ ಕೋರ್ಟ್, ಪ್ರಜಾ ಪ್ರಾತಿನಿಧ್ಯ ಕಾಯ್ದೆಯಡಿ ಆಯೋಗಕ್ಕೆ ಈ ಅಧಿಕಾರವಿರುವುದನ್ನು ದೃಢಪಡಿಸಿದೆ.

ಏನಿದು SIR?

ನಕಲಿ, ಮೃತ ವ್ಯಕ್ತಿಗಳು ಮತ್ತು ಅನರ್ಹ ಮತದಾರರನ್ನು (ಅಕ್ರಮ ವಲಸಿಗರು ಸೇರಿದಂತೆ) ಮತದಾರರ ಪಟ್ಟಿಯಿಂದ ಕೈಬಿಡಲು ಮತ್ತು ಪಟ್ಟಿಯನ್ನು ಪಾರದರ್ಶಕವಾಗಿಸಲು ಕಳೆದ ವರ್ಷ ಜೂನ್‌ನಲ್ಲಿ ಆಯೋಗವು ಬಿಹಾರದಲ್ಲಿ ಈ ಪ್ರಕ್ರಿಯೆಯನ್ನು ಆರಂಭಿಸಿತ್ತು. ಆ ಬಳಿಕ ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ ರಾಜ್ಯಗಳಲ್ಲೂ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯನ್ನು ನಡೆಸಲಾಗಿತ್ತು. ಇದಕ್ಕೆ ಕಾಂಗ್ರೆಸ್‌ ಸಹಿತ ಪ್ರತಿ ಪಕ್ಷಗಳಿಂದ ತೀವ್ರ ಟೀಕೆ, ವಿರೋಧ ವ್ಯಕ್ತವಾಗಿತ್ತು.

ಕರ್ನಾಟಕದಲ್ಲಿ

ಕರ್ನಾಟಕದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಜೂನ್ 20 ರಿಂದ ಪ್ರಾರಂಭವಾಗಲಿದೆ. ಜೂನ್ 30 ರಿಂದ ಜುಲೈ 29 ರವರೆಗೆ ಮನೆ ಮನೆಗೆ ಭೇಟಿ ನೀಡುವ ಅಭಿಯಾನ ನಡೆಯಲಿದ್ದು, ಅಕ್ಟೋಬರ್ 7 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲು ವೇಳಾಪಟ್ಟಿ ನಿಗದಿಪಡಿಸಲಾಗಿದೆ.

ಈ ವಿಚಾರದಲ್ಲಿ ಕಟ್ಟೆಚ್ಚರ ವಹಿಸಲು ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಇತ್ತೀಚೆಗೆ ನಿರ್ಧರಿಸಿದೆ.


PARYAYA: ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಸಿಂಧು: ಸುಪ್ರೀಂಕೋರ್ಟ್‌:   ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಸಿಂಧು : ಸುಪ್ರೀಂ ಕೋರ್ಟ್‌ ನ ವದೆಹಲಿ: ದೇಶದ ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ನಿಟ್ಟಿನಲ್ಲಿ ಭಾರತೀಯ ಚುನಾವಣಾ ಆಯೋಗ ( ECI...