ಇವರೆಲ್ಲ ಭಾರತದ ಈವರೆಗಿನ ಪ್ರಧಾನಿಗಳು, ಮುಂದಿನ ಪ್ರಧಾನಿ …… ?
ನವದಹಲಿ: ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ಲೋಕಸಭೆಯ 543 ಸ್ಥಾನಗಳಿಗೆ ನಡೆದಿರುವ ಚುನಾವಣೆಯ ಫಲಿತಾಂಶಗಳು ದೇಶವನ್ನು ಕುತೂಹಲಕಾರೀ ಘಟ್ಟಕ್ಕೆ ತಂದು ನಿಲ್ಲಿಸಿವೆ. ಸುಮಾರು 292 ಸ್ಥಾನಗಳ ಸನಿಹದಲ್ಲಿ ಬಂದು ನಿಂತಿರುವ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟವು ಮೂರನೇ ಬಾರಿಗೆ ಕೇಂದ್ರದಲ್ಲಿ ಸರ್ಕಾರ ರಚನೆಯ ಘೋಷಣೆ ಮಾಡಿದೆ.
233 ಸ್ಥಾನಗಳ ಅಂಚಿನಲ್ಲಿ ಇರುವ ಕಾಂಗ್ರೆಸ್ ನೇತೃತ್ವದ ʼಇಂಡಿʼ ಐಎನ್ ಡಿಐ ಮೈತ್ರಿಕೂಟದೊಂದಿಗೆ ಇಡೀ ದಿನ ಹಾವು -ಏಣಿ ಆಟ ನಡೆಸಿದರೂ, ಅಂತಿಮವಾಗಿ ನಿತೀಶ್ ಕುಮಾರ್ ನೇತೃತ್ವದ ಜನತಾ ದಳ (ಯು) ಮತ್ತು ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗುದೇಶಂ ಪಕ್ಷ (ಟಿಡಿಪಿ) ಎನ್ ಡಿಎ ಜೊತೆಗೇ ನಿಲ್ಲುವುದಾಗಿ ಸ್ಪಷ್ಟನೆ ನೀಡುವುದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಮತ್ತೆ ಪ್ರಧಾನಿಯಾಗಿ ಮುಂದುವರೆಯುವ ಘೋಷಣೆಯನ್ನು ಬಿಜೆಪಿ ಮಾಡಿದೆ.
ರಾತ್ರಿ ದೆಹಲಿಯ ಪಕ್ಷ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮೂರನೇ ಬಾರಿಗೆ ಆಡಳಿತ ನಡೆಸಲು ಬಿಜೆಪಿ ಹಾಗೂ ಎನ್ ಡಿಎ ಮೈತ್ರಿಕೂಟಕ್ಕೆ ಆಶೀರ್ವಾದ ಮಾಡಿದ್ದಕ್ಕಾಗಿ ದೇಶದ ಜನತೆಗೆ ವಂದನೆಗಳನ್ನು ಸಲ್ಲಿಸಿದ ಪ್ರಧಾನಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಅಗತ್ಯ ಬಹುಮತಕ್ಕಿಂತ ಹೆಚ್ಚಿನ ಸ್ಥಾನ ಗಳಿಸಿರುವ ಎನ್ ಡಿಎ ಸರ್ಕಾರ ರಚಿಸುವುದು ಎಂಬುದಾಗಿ ಸ್ಪಷ್ಟ ಪಡಿಸಿದರು.
(ವಿವರಗಳಿಗೆ ಪಕ್ಕದಲ್ಲಿರುವ ಪ್ರಧಾನಿ ಮೋದಿ ಚಿತ್ರ ಕ್ಲಿಕ್ ಮಾಡಿ)
ಸುಮಾರು 240 ಸ್ಥಾನಗಳಲ್ಲಿ ಗೆಲುವು/ ಮುನ್ನಡೆ ದಾಖಲಿಸುವುದರೊಂದಿಗೆ ಲೋಕಸಭೆಯಲ್ಲಿ ಅತಿದೊಡ್ಡ ಪಕ್ಷವಾಗಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ), ಎನ್ ಡಿಎ ಮೈತ್ರಿಕೂಟಕ್ಕೆ ಬಹುಮತ (292 ಸ್ಥಾನ) ಲಭಿಸಿದ್ದು ಸರ್ಕಾರ ರಚಿಸುವುದು ಖಚಿತ ಎಂಬುದಾಗಿ ಇದಕ್ಕೂ ಮುನ್ನವೇ ಘೋಷಿಸಿತು. ಇಂಡಿ ಮೈತ್ರಿಕೂಟದಿಂದ ಬಿಹಾರದ ಮುಖ್ಯಮಂತ್ರಿ ಉಪಪ್ರಧಾನಿ ಹುದ್ದೆಯ ಆಮಿಷ ಬಂದಿದ್ದರೂ ಜನತಾಳ (ಯು) ಎನ್ ಡಿಎ ಮೈತ್ರಿಕೂಟದಲ್ಲೇ ಮುಂದುವರೆಯುವುದಾಗಿ ಪಕ್ಷದ ನಾಯಕ ಕೆ.ಸಿ. ತ್ಯಾಗಿ ಪ್ರಕಟಿಸಿದರು.
ಚುನಾವಣೆಯಲ್ಲಿ ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಬಿಜೆಪಿಯು ಭಾರೀ ಹಿನ್ನಡೆ ಅನುಭವಿಸಿದ್ದು ದಿಟವಾಗುತ್ತಿದ್ದಂತೆಯೇ ಎನ್ ಡಿಎಯ ಅಂಗಪಕ್ಷವಾದ ತೆಲುಗುದೇಶಂ ನಾಯಕ ಚಂದ್ರಬಾಬು ನಾಯ್ಡು ಅವರನ್ನು ಸಂಪರ್ಕಿಸಲು ಯತ್ನಿಸಿದ ಇಂಡಿ ಮೈತ್ರಿಕೂಟವು ಆಂದ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನದ ಕೊಡುಗೆ ನೀಡುವ ಘೋಷಣೆ ಮಾಡಿದ್ದರೂ, ತೆಲುಗು ದೇಶಂ ಪಕ್ಷ ಕೂಡಾ ಎನ್ ಡಿಎ ಮೈತ್ರಿಕೂಟದಲ್ಲೇ ಮುಂದುವರೆಯುವುದಾಗಿ ಘೋಷಿಸಿತು.
ಈ ಹಿನ್ನೆಲೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟವು ಮೂರನೇ ಬಾರಿಗೆ ಕೇಂದ್ರದಲ್ಲಿ ಸರ್ಕಾರ ರಚನೆ ಮಾಡುವುದು ಖಚಿತವಾಗುವಂತೆ ಕಂಡು ಬರುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ವಾರಾಣಸಿಯಲ್ಲಿ ಜಯಭೇರಿ ಭಾರಿಸಿದ್ದರೆ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡಾ ಜಯಭೇರಿ ಭಾರಿಸಿದ್ದಾರೆ. ಆದರೆ ಅವರ ಸಂಪುಟದ ಸದಸ್ಯರಾದ ಸ್ಮೃತಿ ಇರಾನಿ, ರಾಜೀವ ಚಂದ್ರಶೇಖರ್ ಸೋಲುಂಡಿದ್ದಾರೆ.
ಬಿಜೆಪಿಯು ಉತ್ತರ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳದಲ್ಲಿ ಭಾರೀ ಹಿನ್ನಡೆ ಅನುಭವಿಸಿದ್ದು, ರಾಜಸ್ಥಾನ, ಮಧ್ಯಪ್ರದೇಶ, ಅಸ್ಸಾಂ, ಒಡಿಶಾ, ಬಿಹಾರ,ಗುಜರಾತ್, ಕರ್ನಾಟಕ, ಆಂದ್ರ ಪ್ರದೇಶ, ತೆಲಂಗಾಣ ಮತ್ತಿತರ ಕಡೆ ಉತ್ತಮ ಸಾಧನೆ ಮಾಡಿದೆ. ಬಿಜೆಪಿಗೆ ಹಿನ್ನಡೆಯಾಗಿರುವ ರಾಜ್ಯಗಳಲ್ಲಿ ಇಂಡಿ ಮೈತ್ರಿಕೂಟದ ಕಾಂಗ್ರೆಸ್, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್, ಡಿಎಂಕೆ ಮುನ್ನಡೆ ಸಾಧಿಸಿವೆ. ತಮಿಳುನಾಡಿನಲ್ಲಿ ಡಿಎಂಕೆ, ಕೇರಳದಲ್ಲಿ ಕಾಂಗ್ರೆಸ್, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತ್ವತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುನ್ನಡೆ/ ಗೆಲುವು ದಾಖಲಿಸಿವೆ.
ಆಂಧ್ರಪ್ರದೇಶ ವಿಧಾನಸಭೆಗೆ ನಡೆದಿರುವ ಚುನಾವಣೆಯಲ್ಲಿ ತೆಲುಗು ದೇಶಂ ಪಕ್ಷ, ಬಿಜೆಪಿ ಮತ್ತು ಜನಸೇನಾ ಪಕ್ಷಗಳನ್ನು ಒಳಗೊಂಡ ಎನ್ ಡಿಎ ಮೈತ್ರಿಕೂಟ ಭರ್ಜರಿ ಜಯ ಸಾಧಿಸಿದ್ದು, ಒಡಿಶಾ ವಿಧಾನಸಭೆಯಲ್ಲೂ ಬಿಜೆಪಿ ಜಯಭೇರಿ ದಾಖಲಿಸಿದೆ. ಈ ಎರಡೂ ರಾಜ್ಯಗಳಲ್ಲಿ ಎನ್ ಡಿಎ ಸರ್ಕಾರ ರಚನೆಯಾಗಲಿದೆ. ಆಂಧ್ರಪ್ರದೇಶದಲ್ಲಿ ಈ ವಾರದಲ್ಲೇ ಸರ್ಕಾರ ರಚಿಸುವುದಾಗಿ ತೆಲುಗುದೇಶಂ ಪಕ್ಷ (ಟಿಡಿಪಿ) ಘೋಷಿಸಿದೆ.
ಈ ಮಧ್ಯೆ, ಜೆಡಿಯುನ ನಿತೀಶ್ ಕುಮಾರ್ ಅವರಿಗೆ ಉಪ ಪ್ರಧಾನಿ ಹುದ್ದೆ ನೀಡುವುದಾಗಿ ಹೇಳಿರುವ ಇಂಡಿ ಮೈತ್ರಿಕೂಟಕ್ಕೆ ತನ್ನ ಪ್ರಧಾನಿ ಯಾರು ಎಂಬುದೇ ಸ್ಪಷ್ಟವಾಗಿಲ್ಲ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣವು ರಾಹುಲ್ ಗಾಂಧಿ ಪ್ರಧಾನಿಯಾಗಲಿ ಎಂಬುದಾಗಿ ಹೇಳಿದರೆ, ಸಮಾಜವಾದಿ ಪಕ್ಷವು ಅಖಿಲೇಶ ಯಾದವ್ ಪ್ರಧಾನಿಯಾಗಬೇಕು ಎಂದು ಬಯಸಿದೆ. ಎನ್ ಸಿಪಿಯ ನಾಯಕ ಶರದ್ ಪವಾರ್ ಅವರು ಟಿಡಿಪಿಯ ನಾಯಕ ಚಂದ್ರಬಾಬು ನಾಯ್ಡು ಅವರನ್ನು ಸಂಪರ್ಕಿಸಿದ್ದಕ್ಕೆ ಅಸಮಾಧಾನ ವ್ಯಕ್ತ ಪಡಿಸಿರುವ ಜಮ್ಮು ಕಾಶ್ಮೀರದ ಒಮರ್ ಅಬ್ದುಲ್ಲ ʼಚುನಾವಣಾ ಪೂರ್ವ ಮೈತ್ರಿಯ ಪ್ರಕಾರವೇ ಮುಂದುವರೆಯೋಣ, ಕುದುರೆ ವ್ಯಾಪಾರ ಬೇಡʼ ಎಂದು ಹೇಳಿದ್ದಾರೆ.
ಒಟ್ಟಾರೆಯಾಗಿ, ಕೇಂದ್ರದಲ್ಲಿ ಸರ್ಕಾರ ರಚನೆಯ ಕಸರತ್ತು ಆರಂಭವಾಗಿದ್ದು, ಒಂದು ವಾರದ ಒಳಗೆ ʼಭಾರತವನ್ನು ಆಳುವವವರು ಯಾರು?ʼ ಎಂಬ ಪ್ರಶ್ನೆಗೆ ಉತ್ತರ ಲಭಿಸಲಿದೆ.
ಚುನಾವಣೆಯ ನಿಖರ ಫಲಿತಾಂಶಕ್ಕಾಗಿ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ:
No comments:
Post a Comment