ನಾನು ಮೆಚ್ಚಿದ ವಾಟ್ಸಪ್

Tuesday, February 27, 2024

PARYAYA: ಇದೀಗ ಬಿಡುಗಡೆಯಾಗಿದೆ……

 ಇದೀಗ ಬಿಡುಗಡೆಯಾಗಿದೆ……

ಬೆಂಗಳೂರು: ಬೆಂಗಳೂರಿನಲ್ಲಿ ತಲೆಯ ಮೇಲೊಂದು ಸೂರು ಕಟ್ಟಿಸಿಕೊಳ್ಳಲು ದಶಕಗಳ ಕಾಲ ನಡೆದ ʼಗಾಂಧಿಗಿರಿ ಹೋರಾಟವನ್ನು ಬಿಡಿಸಿಟ್ಟಿರುವ ʼಬೆಂಗಳೂರಿನ ಭೂ ಮಾಫಿಯಾ ಭ್ರಷ್ಟಾಚಾರದ ಚಕ್ರವ್ಯೂಹʼ ಪುಸ್ತಕ ಇದೀಗ ಬಿಡುಗಡೆಯಾಗಿದೆ.

ಬೆಂಗಳೂರಿನ ಗ್ಲೋಬಲ್‌ ಅಕಾಡೆಮಿ ಆಫ್‌ ಟೆಕ್ನಾಲಜಿ ಕಾಲೇಜು ಸಭಾಂಗಣದಲ್ಲಿ ೨೦೨೪ ಫೆಬ್ರುವರಿ ೨೫ರ ಭಾನುವಾರ ನಡೆದ ಸಮಾರಂಭದಲ್ಲಿ ಡಿಜಿಟಲ್‌ ತಜ್ಞ ಡಾ. ಶಂಕರ ಕೆ. ಪ್ರಸಾದ್‌ ಮತ್ತು ಪತ್ರಕರ್ತ ನೆತ್ರಕೆರೆ ಉದಯಶಂಕರ ವಿರಚಿತ ʼಬೆಂಗಳೂರಿನ ಭೂ ಮಾಫಿಯಾ ಭ್ರಷ್ಟಾಚಾರದ ಚಕ್ರವ್ಯೂಹʼ ಪುಸ್ತಕವನ್ನು ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಡಾ. ಡಿ.ವಿ. ಗುರುಪ್ರಸಾದ್‌ ಮತ್ತು ಚಾಣಕ್ಯ ವಿಶ್ವ ವಿದ್ಯಾಲಯದ ಸಂದರ್ಶಕ ಪ್ರಾದ್ಯಾಪಕ ಪ್ರೊ. ಸದಾನಂದ ಜಾನೆಕರೆ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಆನ್‌ ಲೈನ್‌ ಮೂಲಕ ತಮ್ಮ ಸಂದೇಶ ನೀಡಿದ ಕರ್ನಾಟಕದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.‌ ಸಂತೋಷ ಹೆಗ್ಡೆ ಅವರು “ಸಮಾಜದಲ್ಲಿ ಶಾಂತಿಸೌಹಾರ್ದತೆ ನೆಲೆಸಲು ತೃಪ್ತಿ ಮತ್ತು ಮಾನವೀಯತೆಯನ್ನು ಅಳವಡಿಸಿಕೊಳ್ಳುವುದೊಂದೇ ದಾರಿ” ಎಂದು ಹೇಳಿದರು.

ನಮ್ಮಲ್ಲಿ ಅರ್ಥಿಕತೆ ಮುನ್ನಡೆಯುತ್ತಿದ್ದರೂ ದುರಾಸೆಯಿಂದಾಗಿ ಸಮಾಜದಲ್ಲಿನ ಶಾಂತಿಸೌಹಾರ್ದತೆ ಅಳಿಯುತ್ತಿದೆ.  ನಾವು ಚಿಕ್ಕವರಾಗಿದ್ದಾಗ ನಮ್ಮ ಹಿರಿಯರು ಮಕ್ಕಳಿಗೆ ಚಿಕ್ಕಂದಿನಿಂದಲೇ ಮೌಲ್ಯಗಳನ್ನು ಹೇಳಿಕೊಡುತ್ತಿದ್ದರು. ತಪ್ಪು ಮಾಡಿದವರಿಗೆ ಶಿಕ್ಷೆ ನೀಡುತ್ತಿದ್ದರು. ಅಂತಹ ಮೌಲ್ಯ ಆಗ ಇತ್ತು.  ಇಂದು ಪ್ರಾಮಾಣಿಕತೆ ಉಳಿದಿಲ್ಲ. ಶ್ರೀಮಂತಿಕೆಯ ಪೂಜೆ ನಡೆಯುತ್ತಿದೆ. ತಪ್ಪೆಸಗಿದ ವ್ಯಕ್ತಿ ಜೈಲಿಗೆ ಹೋಗಿ ಹೊರಕ್ಕೆ ಬಂದರೆ ಅವರಿಗೆ ಅಪೂರ್ವ ಸ್ವಾಗತ ನೀಡಲಾಗುತ್ತಿದೆʼ ಎಂದು ಅವರು ವಿಷಾದಿಸಿದರು.

ವ್ಯಕ್ತಿ ಶ್ರೀಮಂತನಾಗುವುದು ತಪ್ಪಲ್ಲ. ಆದರೆ ಅಕ್ರಮ ಎಸಗಿ ಅದನ್ನು ಸಂಪಾದಿಸಬಾರದು. ಅಂತಹ ಸಂಪತ್ತು ಉಳಿಯುವುದಿಲ್ಲ ಎಂದು ನುಡಿದ ಹೆಗ್ಡೆ,  ಕಳೆದ ಕೆಲವು ದಶಕಗಳಿಂದ ದುರಾಸೆಯ ಪರಿಣಾಮವಾಗಿ ಸಂಭವಿಸಿದ 1948 ಜೀಪ್‌ ಹಗರಣಬೊಪೋರ್ಸ್‌ ಹಗರಣಕಾಮನ್ವೆಲ್ತ್‌ ಗೇಮ್ಸ್‌ ಹಗರಣಪೂಂಜಿ ಹಗರಣಕೋಲ್‌ ಗೇಟ್ ಹಗರಣಗಳನ್ನು ಉದಾಹರಿಸಿ ಭ್ರಷ್ಟಾಚಾರದ ಪ್ರಮಾಣ 52 ಲಕ್ಷ ರೂಪಾಯಿಗಳಿಂದ 1.92 ಕೋಟಿ ರೂಪಾಯಿಗಳವರೆಗೆ ಬೆಳೆದದ್ದನ್ನು ಉದಾಹರಿಸಿದರು.

ಇದೇ ವೇಳೆಗೆ ಸಂಸತ್ತಿನಲ್ಲಿ ವೇತನಭತ್ಯೆ ಪಡೆಯುವ ಜನ ಪ್ರತಿನಿಧಿಗಳು ಸಂಸತ್ತಿನಲ್ಲಿ ಮಾತನಾಡುವುದು ಕಡಿಮೆಯಾಗುತ್ತಿದೆ ಎಂದು ನುಡಿದ ಅವರು ಇಂತಹ ಸ್ಥಿತಿಯಲ್ಲಿ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಮುಖ್ಯ ಅತಿಥಿ ಚಾಣಕ್ಯ ವಿಶ್ವ ವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕ ಸದಾನಂದ ಜಾನೆಕೆರೆ ಅವರು ಜನಹಿತಕ್ಕಾಗಿ ಶ್ರಮಿಸಬೇಕಾದ ಪ್ರಜಾಪ್ರಭುತ್ವ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತಿದೆ ಎಂಬುದನ್ನು ಪುಸ್ತಕ ಬಿಡಿಸಿ ಇಡುತ್ತಿದೆ. ಯುವಕರುವಿಶೇಷವಾಗಿ ಸಮಾಜ ಶಾಸ್ತ್ರ ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕಾದ ವಿಚಾರಗಳು ಇಲ್ಲಿವೆ ಎಂದು ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗಕಾರ್ಯಾಂಗನ್ಯಾಯಾಂಗ ಮತ್ತು ಮಾಧ್ಯಮರಂಗಕ್ಕೆ ಜನಹಿತ ಸಾಧನೆಗಾಗಿ ತಮ್ಮದೇ ಆದ ಕೆಲಸಗಳಿವೆ. ಅವುಗಳ ಜಾರಿಗಾಗಿ ಕಾನೂನುಗಳಿವೆ. ಆದರೆ ಈ ವ್ಯವಸ್ಥೆಯ ಆಯಕಟ್ಟಿನ ಜಾಗದಲ್ಲಿ ಇರುವವರು ತಮ್ಮ ಸ್ವಹಿತಾಸಕ್ತಿ ಬೆಳೆಸಿಕೊಂಡು ಅದರ ಪೋಷಣೆಗಾಗಿ ಕಾನೂನುಗಳನ್ನೇ ಹೇಗೆ ತಿರುಚುತ್ತಾರೆ ಎಂಬುದರ ಒಳನೋಟವನ್ನು ಪುಸ್ತಕ ನೀಡುತ್ತಿದೆ ಎಂದು ಅವರು ನುಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ವಿಯಾಗಲು ನಿರಂತರ ಜಾಗೃತಿಹೋರಾಟ ಅಗತ್ಯ. ಹಾಗೆಯೇ ಆರ್‌ ಟಿ ಐ ವ್ಯವಸ್ಥೆ ದುರ್ಬಲವಾಗದಂತೆ ನೋಡಿಕೊಳ್ಳಬೇಕು ಎಂದು ಅವರು ನುಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಡಾ. ಡಿ.ವಿ. ಗುರುಪ್ರಸಾದ್‌ ಅವರು ಮಾತನಾಡಿ ಭ್ರಷ್ಟಾಚಾರವನ್ನು ನಿಯಂತ್ರಿಸಲು ಇರುವುದು ಒಂದೇ ದಾರಿ. ಲಂಚ ಕೊಡುವುದಿಲ್ಲ ಮತ್ತು ಇತರರಿಂದ ತೆಗೆದುಕೊಳ್ಳುವುದಿಲ್ಲ ಎಂಬುದಾಗಿ ಹಿರಿಯರು ನಿರ್ಧಾರ ಮಾಡುವುದು ಮತ್ತು ಮಕ್ಕಳಿಗೆ ಇಂತಹ ಮೌಲ್ಯಗಳನ್ನು ಶಾಲಾ ಮಟ್ಟದಿಂದಲೇ ಕಲಿಸಿಕೊಡುವುದು ಎಂದು ಹೇಳಿದರು.

ʼಏನೇ ಮಾಡಿದರೂ ನಡೀತದೆ ಎಂಬ ಭಾವನೆ ಮಕ್ಕಳಲ್ಲಿ ಮೂಡದಂತೆ ಎಚ್ಚರಿಕೆ ವಹಿಸಬೇಕುʼ ಎಂದೂ ಅವರು ನುಡಿದರು.

ಚಿತ್ರನಟ ಅರುಣ ಕುಮಾರ್‌ ಪುಸ್ತಕದ ಅಧ್ಯಾಯವೊಂದನ್ನು ವಾಚಿಸಿದರು.

ಲೇಖಕರಲ್ಲಿ ಒಬ್ಬರಾದ ಡಾ. ಶಂಕರ ಕೆ. ಪ್ರಸಾದ್‌ ಪವರ್‌ ಪಾಯಿಂಟ್‌ ಪ್ರಸಂಟೇಷನ್‌ ಮೂಲಕ ಪುಸ್ತಕ ಬರೆಯಲು ಏನು ಕಾರಣ ಎಂದು ವಿವರಿಸಿಸಮಸ್ಯೆಗಳ ನಿವಾರಣೆಗೆ ತಂತ್ರಜ್ಞಾನ ಅಳವಡಿಕೆಯ ಮಾಹಿತಿ ಪುಸ್ತಕದಲ್ಲಿದೆ ಎಂದರು.

ಸಹಲೇಖಕ ನೆತ್ರಕೆರೆ ಉದಯಶಂಕರ ಧನ್ಯವಾದ ಅರ್ಪಿಸಿದರು. ನಿವೃತ್ತ ನ್ಯಾಯಾಧೀಶ ಪ್ರಾಣೇಶ್‌ ವಾಸುಕಿ ರಮೇಶ್‌ಅಮರನಾಥ್‌ನಾಗೇಶ್‌, ಗುಣಶೇಖರ ನಾಯ್ಡು ಮಾತನಾಡಿದರು. ಶಂಕರ ನಾರಾಯಣ ಕಾರಂತ ಕಾರ್ಯಕ್ರಮ ನಿರ್ವಹಿಸಿದರು. 

ಹಿರಿಯ  ಸಾಹಿತಿ ಗೊ.ರು. ಚನ್ನಬಸಪ್ಪ, ಗ್ಲೋಬಲ್‌ ಅಕಾಡೆಮಿ ಆಫ್‌ ಟೆಕ್ನಾಲಜಿ ಕಾಲೇಜು ಪ್ರಾಂಶುಪಾಲ ಪೃಥ್ವೀ ರೆಡ್ಡಿ ಮತ್ತಿತರರು ಸಮಾರಂಭದಲ್ಲಿ ಹಾಜರಿದ್ದರು.

ಚಿತ್ರಗಳ ಸಮೀಪ ದರ್ಶನಕ್ಕೆ ಚಿತ್ರಗಳನ್ನು ಕ್ಲಿಕ್‌ ಮಾಡಿ.

ಆನ್‌ ಲೈನ್‌ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕರ್ನಾಟಕದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.‌ ಸಂತೋಷ ಹೆಗ್ಡೆ ಅವರ ವಿಡಿಯೋ ಸಂದೇಶ ಆಲಿಸಲು ಕೆಳಗೆ ಕ್ಲಿಕ್‌ ಮಾಡಿ. 


ಪುಸ್ತಕ ಖರೀದಿಗೆ ಕ್ಲಿಕ್‌ ಮಾಡಿ: https://buynow.sampoornaswaraj.org/

PARYAYA: ಇದೀಗ ಬಿಡುಗಡೆಯಾಗಿದೆ……:   ಇದೀಗ ಬಿಡುಗಡೆಯಾಗಿದೆ…… ಬೆಂ ಗಳೂರು: ಬೆಂಗಳೂರಿನಲ್ಲಿ ತಲೆಯ ಮೇಲೊಂದು ಸೂರು ಕಟ್ಟಿಸಿಕೊಳ್ಳಲು ದಶಕಗಳ ಕಾಲ ನಡೆದ ʼ ಗಾಂಧಿಗಿರಿ ಹೋರಾಟವನ್ನು ಬಿಡಿಸಿಟ್ಟಿರುವ ʼ ಬೆ...

Sunday, February 25, 2024

PARYAYA: ಸಮುದ್ರದಡಿಯಲ್ಲಿ ಶ್ರೀಕೃಷ್ಣನಿಗೆ ಪ್ರಧಾನಿ ಮೋದಿ ಪೂಜೆ

 ಸಮುದ್ರದಡಿಯಲ್ಲಿ ಶ್ರೀಕೃಷ್ಣನಿಗೆ ಪ್ರಧಾನಿ ಮೋದಿ ಪೂಜೆ

ವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 2024 ಫೆಬ್ರುವರಿ 25ರ ಭಾನುವಾರ ಗುಜರಾತ್ ಕರಾವಳಿಯ ಅರಬ್ಬೀ ಸಮುದ್ರದ ಒಳಕ್ಕೆ ಇಳಿದು ಸಮುದ್ರದಡಿ ಮುಳುಗಿದ್ದ ಪುರಾತನ ದ್ವಾರಕಾದಲ್ಲಿ ನೀರೊಳಗಿನ ಪೂಜೆಯನ್ನು ನೆರವೇರಿಸಿ ಇತಿಹಾಸ ಸೃಷ್ಟಿಸಿದರು.

ಭಗವಾನ್ ಶ್ರೀಕೃಷ್ಣನೊಂದಿಗಿನ ಸಂಪರ್ಕಕ್ಕೆ ಹೆಸರುವಾಸಿಯಾದ ದ್ವಾರಕಾಒಂದು ಕಾಲದಲ್ಲಿ ಅಭಿವೃದ್ಧಿ ಹೊಂದುತ್ತಿರುವ ನಗರವಾಗಿದ್ದುಶತಮಾನಗಳ ಹಿಂದೆ ಸಮುದ್ರದ ಅಡಿಯಲ್ಲಿ ಮುಳುಗಿದೆ ಎಂದು ನಂಬಲಾಗಿದೆ.

ಸ್ಕೂಬಾ ಡೈವಿಂಗ್ ಅನ್ನು ಬೈಟ್ ದ್ವಾರಕಾ ದ್ವೀಪದ ಬಳಿ ದ್ವಾರಕಾದ ಕರಾವಳಿಯಲ್ಲಿ ನಡೆಸಲಾಗುತ್ತದೆಅಲ್ಲಿ ಜನರು ಪುರಾತತ್ತ್ವಜ್ಞರು ಉತ್ಖನನ ಮಾಡಿದ ಪ್ರಾಚೀನ ದ್ವಾರಕಾದ ನೀರೊಳಗಿನ ಅವಶೇಷಗಳನ್ನು ನೋಡಬಹುದು.

ಈದಿನಐತಿಹಾಸಿಕ ಮತ್ತು ಆಧ್ಯಾತ್ಮಿಕ ಮಹತ್ವವುಳ್ಳ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಲು ಪ್ರಧಾನಿ ಮೋದಿ ಸ್ಕೂಬಾ ಗೇರ್‌ನಲ್ಲಿ ಮತ್ತು ನೀಲಿ ನೀರಿಗೆ ಇಳಿಯುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ಈ ವಿಡಿಯೋ ಚಿತ್ರ ಇಲ್ಲಿದೆ: 


PARYAYA: ಸಮುದ್ರದಡಿಯಲ್ಲಿ ಶ್ರೀಕೃಷ್ಣನಿಗೆ ಪ್ರಧಾನಿ ಮೋದಿ ಪೂಜೆ:   ಸಮುದ್ರದಡಿಯಲ್ಲಿ ಶ್ರೀಕೃಷ್ಣನಿಗೆ ಪ್ರಧಾನಿ ಮೋದಿ ಪೂಜೆ ನ ವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 2024 ಫೆಬ್ರುವರಿ 25ರ ಭಾನುವಾರ ಗುಜರಾತ್ ಕರಾವಳಿಯ ಅರಬ್ಬೀ ಸಮುದ್...

Saturday, February 24, 2024

PARYAYA: ಗಾಂಧಿಗಿರಿಯ ʼಗುಲಾಬಿ ಗ್ಯಾಂಗ್‌ʼ ಕಥೆಗೆ ಇದೀಗ ಪುಸ್ತಕ ರೂಪ

 ಗಾಂಧಿಗಿರಿಯ ʼಗುಲಾಬಿ ಗ್ಯಾಂಗ್‌ʼ ಕಥೆಗೆ ಇದೀಗ ಪುಸ್ತಕ ರೂಪ


ಬೆಂ
ಗಳೂರು: ಬಿಬಿಎಂಪಿ ಖಾತೆಗಳಿಗಾಗಿ ʼಗಾಂಧಿಗಿರಿʼ ಹೋರಾಟ ನಡೆಸುತ್ತಿದ್ದ ಬೆಂಗಳೂರಿನ ಗುಲಾಬಿ ಗ್ಯಾಂಗ್‌ ಕಥೆ ಇದೀಗ ಪುಸ್ತಕ ರೂಪದಲ್ಲಿ ಪ್ರಕಟಗೊಂಡಿದೆ. ಪುಸ್ತಕದ ಬಿಡುಗಡೆ ಸಮಾರಂಭವು ಫೆಬ್ರುವರಿ 25ರ ಭಾನುವಾರ ಬೆಳಗ್ಗೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ಬಂಗಾರಪ್ಪ ನಗರದಲ್ಲಿನ ಗ್ಲೋಬಲ್‌ ಅಕಾಡೆಮಿ ಆಫ್‌ ಟೆಕ್ನಾಲಜಿ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ.

ಕರ್ನಾಟಕದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.‌ ಸಂತೋಷ ಹೆಗ್ಡೆ ಅವರು ʼಬೆಂಗಳೂರಿನ ಭೂ ಮಾಫಿಯಾ ಭ್ರಷ್ಟಾಚಾರದ ಚಕ್ರವ್ಯೂಹʼ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ. ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಹಾಗೂ ಲೇಖಕ ಡಾ. ಡಿ.ವಿ. ಗುರುಪ್ರಸಾದ್‌ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಚಾಣಕ್ಯ ವಿಶ್ವ ವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕ ಪ್ರೊ. ಸದಾನಂದ ಜಾನೆಕೆರೆ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಡಿಜಿಟಲ್‌ ತಂತ್ರಜ್ಞಾನ ಪರಿಣತ ಡಾ. ಶಂಕರ ಕೆ. ಪ್ರಸಾದ್‌ ಮತ್ತು ಹಿರಿಯ ಪತ್ರಕರ್ತ ನೆತ್ರಕೆರೆ ಉದಯಶಂಕರ ಈ ಪುಸ್ತಕವನ್ನು ಬರೆದಿದಾರೆ. ಸಚ್ಚಿದಾನಂದ ನಗರ ನ್ಯಾಯಪರ ಆಂದೋಲನವು ಸಮಾರಂಭವನ್ನು ಸಂಘಟಿಸಿದೆ.

ಬೆಂಗಳೂರಿನ ಬಡಾವಣೆಯೊಂದರ ಸುಮಾರು 950 ಕುಟುಂಬಗಳ ಸದಸ್ಯರು ಸೂರು ಕಟ್ಟಿಕೊಳ್ಳಲು ಹೊರಟಾಗ ಎದುರಾದ ಸಮಸ್ಯೆಗಳ ಸರಮಾಲೆಯ ಕಥೆಯನ್ನು ಪುಸ್ತಕ ಹೊಂದಿದೆ. ಭೂ ಮಾಫಿಯಾ, ಅಧಿಕಾರಿಗಳು ಮತ್ತು ರಾಜಕಾರಣಿಗಳ ʼಭ್ರಷ್ಟಾಚಾರದ ಚಕ್ರವ್ಯೂಹʼ ಪಡೆ ಹೇಗೆ ಅವರನ್ನು ಕಾಡಿತು ಎಂಬ ವಿವರದ ಜೊತೆಗೆ ಇಂತಹ ಸಮಸ್ಯೆಗಳ ಪರಿಹಾರಕ್ಕೆ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬಹುದು ಎಂಬ ಅನ್ವೇಷಣೆಯೇ ಈ ಪುಸ್ತಕದ ಹೂರಣ ಎಂದು ಪುಸ್ತಕವನ್ನು ಪ್ರಕಟಿಸಿರುವ ಸಂಪೂರ್ಣ ಸ್ವರಾಜ್‌ ಫೌಂಡೇಷನ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

PARYAYA: ಗಾಂಧಿಗಿರಿಯ ʼಗುಲಾಬಿ ಗ್ಯಾಂಗ್‌ʼ ಕಥೆಗೆ ಇದೀಗ ಪುಸ್ತಕ ರೂಪ:   ಗಾಂಧಿಗಿರಿಯ ʼ ಗುಲಾಬಿ ಗ್ಯಾಂಗ್‌ ʼ ಕಥೆಗೆ ಇದೀಗ ಪುಸ್ತಕ ರೂಪ ಬೆಂಗಳೂರು: ಬಿಬಿಎಂಪಿ ಖಾತೆಗಳಿಗಾಗಿ ʼ ಗಾಂಧಿಗಿರಿ ʼ ಹೋರಾಟ ನಡೆಸುತ್ತಿದ್ದ ಬೆಂಗಳೂರಿನ ಗುಲಾಬಿ ಗ...

Sunday, February 4, 2024

PARYAYA: ಇಂದಿನ ಇತಿಹಾಸ History Today ಫೆಬ್ರುವರಿ 04

ಇಂದಿನ ಇತಿಹಾಸ
ಫೆಬ್ರುವರಿ 04

2024:ಡೆಹ್ರಾಡೂನ್:‌ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಅಧ್ಯಕ್ಷತೆಯಲ್ಲಿ ಮುಖ್ಯಮಂತ್ರಿಗಳ ನಿವಾಸದಲ್ಲಿ 2024 ಫೆಬ್ರುವರಿ 4ರಂದು ನಡೆದ ಸಂಪುಟ ಸಭೆಯಲ್ಲಿ ಉತ್ತರಾಖಂಡ ಸಚಿವ ಸಂಪುಟವು ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ವರದಿಯನ್ನು ಅನುಮೋದಿಸಿತು. ಇದರೊಂದಿಗೆ ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲಿರುವ ದೇಶದ ಮೊತ್ತ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಉತ್ತರಾಖಂಡ ಭಾಜನವಾಗಲಿದೆ. ಸಂಪುಟದ ಅನುಮೋದನೆ ಪಡೆದಿರುವ ಯುಸಿಸಿ ಮಸೂದೆಯನ್ನು ಫೆಬ್ರವರಿ ರಂದು ಉತ್ತರಾಖಂಡ್ ಅಸೆಂಬ್ಲಿ ಅಧಿವೇಶನದಲ್ಲಿ ಸರ್ಕಾರ ಮಂಡಿಸುವ ಸಾಧ್ಯತೆಯಿದೆ. ಉತ್ತರಾಖಂಡ ವಿಧಾನಸಭೆಯ ವಿಶೇಷ ನಾಲ್ಕು ದಿನಗಳ ಅಧಿವೇಶನವನ್ನು ಫೆಬ್ರವರಿ 5ರಿಂದ 8ರವರೆಗೆ ಈಗಾಗಲೇ ಕರೆಯಲಾಗಿದೆ.

2009: ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ಅವರಿಗೆ 'ಸಿದ್ಧಗಂಗಾಶ್ರೀ' ಪ್ರಶಸ್ತಿಯನ್ನು ತುಮಕೂರು ಸಿದ್ಧಗಂಗಾ ಮಠದಲ್ಲಿ ನಡೆದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜನ್ಮಶತಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಪ್ರದಾನ ಮಾಡಿ, ಗೌರವಿಸಲಾಯಿತು. ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳು ಮತ್ತು ಹಿತೈಷಿಗಳ ಸಂಘದ ಕೊಡುಗೆಯಾದ ಪ್ರಶಸ್ತಿಯನ್ನು ಮಠದ ಹಳೆಯ ವಿದ್ಯಾರ್ಥಿಯೂ ಆದ ಕವಿ ಶಿವರುದ್ರಪ್ಪ ಅವರಿಗೆ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಪ್ರದಾನ ಮಾಡಿ, ಆಶೀರ್ವದಿಸಿದರು. ಪ್ರಶಸ್ತಿಯ ಮೊತ್ತ ಒಂದು ಲಕ್ಷ ರೂಪಾಯಿಯನ್ನು ಶಿವರುದ್ರಪ್ಪ ಅವರು ತೆಗೆದುಕೊಳ್ಳದೆ ಮಠದ ದಾಸೋಹ ನಿಧಿಗೆ ಅರ್ಪಿಸಿದರು.

2009: ಹಲವು ಔಷಧೀಯ ಗುಣಗಳ ಆಗರವಾಗಿರುವ 'ತುಳಸಿ' ಸಸ್ಯವನ್ನು ಅದ್ಭುತ ಪ್ರೇಮಸೌಧ 'ತಾಜ್ ಮಹಲ್' ರಕ್ಷಣೆಗಾಗಿ ಈಗ ಬಳಸಿಕೊಳ್ಳಲಾಗುತ್ತಿದೆ ಎಂದು 'ಆರ್ಗ್ಯಾನಿಕ್ ಇಂಡಿಯಾ'ದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಕೃಷ್ಣನ್ ಗುಪ್ತಾ ಲಖನೌದಲ್ಲಿ ಪ್ರಕಟಿಸಿದರು. 'ತಾಜ್ ಮಹಲ್' ಅನ್ನು ವಾಯು ಮಾಲಿನ್ಯದಿಂದ ರಕ್ಷಿಸಲು ಉತ್ತರಪ್ರದೇಶದ ಅರಣ್ಯ ಇಲಾಖೆ ಹಾಗೂ ಲಖನೌ ಮೂಲದ ಆರ್ಗ್ಯಾನಿಕ್ ಇಂಡಿಯಾ ಕಂಪೆನಿ ಜಂಟಿಯಾಗಿ ಹತ್ತು ಲಕ್ಷ ತುಳಸಿ ಗಿಡಗಳನ್ನು ನೆಡಲು ನಿರ್ಧರಿಸಿವೆ ಎಂದು ಅವರು ಹೇಳಿದರು. ಈಗಾಗಲೇ 20 ಸಾವಿರ ತುಳಸಿ ಗಿಡಗಳನ್ನು ನೆಡಲಾಗಿದೆ. ತಾಜಮಹಲ್ ಸುತ್ತಲಿನ ಪಾರ್ಕ್‌ಗಳು ಹಾಗೂ ಆಗ್ರಾದಾದ್ಯಂತ ಇನ್ನಷ್ಟು ಸಸಿಗಳನ್ನು ನೆಡಲಾಗುವುದು ಎಂದು ಕೃಷ್ಣನ್ ಗುಪ್ತಾ ತಿಳಿಸಿದರು. ತುಳಸಿ ಪರಿಸರವನ್ನು ಶುದ್ಧೀಕರಿಸಲು ಅತ್ಯಂತ ಸೂಕ್ತ ಸಸ್ಯ. ಈ ಸಸ್ಯ ಅತಿ ಹೆಚ್ಚು ಪ್ರಮಾಣದಲ್ಲಿ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ. ಕೈಗಾರಿಕೆಗಳು ಹಾಗೂ ಸಂಸ್ಕರಣಾ ಘಟಕಗಳಿಂದ ಹೊರಸೂಸುವ ಮಲಿನ ವಾಯುವನ್ನು ಶುದ್ಧೀಕರಿಸುತ್ತದೆ ಎಂದು ನುಡಿದರು. ಆಗ್ರಾದ ಸುತ್ತಲೂ ಬೃಹತ್ ಪ್ರಮಾಣದಲ್ಲಿ ತುಳಸಿ ಗಿಡ ನೆಡುವ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ. ಈ ಕೆಲಸದಲ್ಲಿ ಕೈಜೋಡಿಸುವಂತೆ ಗ್ರಾಮ ಪಂಚಾಯಿತಿಗಳು ಹಾಗೂ ಶಾಲೆಗಳನ್ನು ಕೇಳಿಕೊಳ್ಳಲಾಗಿದೆ ಎಂದು ಆಗ್ರಾದ ವಲಯ ಅರಣ್ಯಾಧಿಕಾರಿ ಆರ್.ಪಿ. ಭಾರ್ತಿ ಹೇಳಿದರು.

2009: ಶ್ರೀಲಂಕಾದ ಕದನ ನಿರತ ಉತ್ತರ ವನ್ನೀ ಪ್ರಾಂತ್ಯದಲ್ಲಿ ಶೆಲ್ ದಾಳಿಯಿಂದ ಕನಿಷ್ಠ 52 ನಾಗರಿಕರು ಮೃತರಾದರು. ಆಸ್ಪತ್ರೆಯೊಂದಕ್ಕೆ ಬಾಂಬ್ ಬಿದ್ದಿತು. ಗಾಯಾಳುಗಳಿಗೆ ವೈದ್ಯಕೀಯ ಸೌಲಭ್ಯ ಪೂರೈಸುವಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಈ ಆಸ್ಪತ್ರೆಯ ಮೇಲೆ ಸರಣಿ ಬಾಂಬ್‌ಗಳನ್ನು ಹಾಕಲಾಯಿತು.

2009: ದೇವನಹಳ್ಳಿ ತಾಲ್ಲೂಕಿನ ಎಂಟು ಮರಳು ಫಿಲ್ಟರ್ ಘಟಕಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದರು. ಅಕ್ರಮದಲ್ಲಿ ತೊಡಗಿದ್ದ ಮೂರು ಮಂದಿಯನ್ನು ಬಂಧಿಸಿ, 18 ಲಾರಿ, ಐದು ಟ್ರಾಕ್ಟರ್, ಐದು ಜೆಸಿಬಿ ಮತ್ತು 34 ಬೃಹತ್ ಪಂಪ್‌ಗಳನ್ನು ವಶಪಡಿಸಿಕೊಂಡರು. ತಾಲ್ಲೂಕಿನ ಚಿಕ್ಕಗೊಲ್ಲಹಳ್ಳಿ, ಗೊಲ್ಲಹಳ್ಳಿ, ಕಾರಹಳ್ಳಿ, ಮಾಯಸಂದ್ರ, ತೈಲಗಿರಿ, ಮಿಸ್ಕನಹಳ್ಳಿ, ಬ್ಯಾಡರಹಳ್ಳಿ, ಗುಡ್‌ರಿಚ್ ಗ್ರಾಮಗಳಲ್ಲಿ ಮರಳು ದಂಧೆ ನಡೆಯುತ್ತಿತ್ತು. ಸರ್ಕಾರ ಭೂ ರಹಿತರಿಗೆ ಮಂಜೂರು ಮಾಡುವ ಜಮೀನಿನಲ್ಲಿ ಮರಳು ಫಿಲ್ಟರ್ ಮಾಡಲಾಗುತ್ತಿತ್ತು. ನಿಯಮ ಪ್ರಕಾರ ಈ ಭೂಮಿಯನ್ನು ಕೃಷಿಗೆ ಬಿಟ್ಟು ಬೇರೆ ಯಾವುದೇ ಉದ್ಧೇಶಕ್ಕೂ ಬಳಸುವಂತಿಲ್ಲ. ಆದರೆ ಈ ಜಮೀನನ್ನು ಮರಳು ಫಿಲ್ಟರ್ ದಂಧೆಗೆ ಗುತ್ತಿಗೆ ನೀಡಲಾಗಿತ್ತು.

2008: ಉಡುಪಿ ಕೃಷ್ಣಮಠದ ಇತಿಹಾಸದಲ್ಲಿ ಅಲ್ಲೋಲ, ಕಲ್ಲೋಲಕ್ಕೆ ಕಾರಣವಾಗಿದ್ದ ಪುತ್ತಿಗೆ ಪರ್ಯಾಯ ವಿವಾದ ಬಗೆಹರಿಯಿತು. ಈದಿನ ಜರುಗಿದ ನಾಟಕೀಯ ಬೆಳವಣಿಗೆಯೊಂದರಲ್ಲಿ ಪುತ್ತಿಗೆ ಪರ್ಯಾಯ ವಿವಾದಕ್ಕೆ ತಾತ್ಕಾಲಿಕ ತೆರೆ ಬಿದ್ದು, ಭಯೋತ್ಪಾದಕರ ಬೆದರಿಕೆಯ ಮಧ್ಯೆಯೂ ಕೃಷ್ಣಮಠದ ಪರಿಸರದಲ್ಲಿ ಹೊಸ ಸಂಚಲನ ಆರಂಭಗೊಂಡಿತು. ಪುತ್ತಿಗೆ ಪರ್ಯಾಯ ವಿವಾದ ಸೌಹಾರ್ದಯುತವಾಗಿ ಬಗೆಹರಿದಿದೆ ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥರು ಹೇಳಿಕೆ ನೀಡಿದರು. ಅದನ್ನು `ತಾತ್ವಿಕ'ವಾಗಿ ಬೆಂಬಲಿಸಿರುವ ವಿರೋಧಿ ಯತಿಗಳು ಕೃಷ್ಣ ಪೂಜೆ ವಿಚಾರದಲ್ಲಿ `ಷರತ್ತುಬದ್ಧ' ಒಪ್ಪಿಗೆ ಸೂಚಿಸಿದರು. ಇದರ ಬೆನ್ನಲ್ಲೇ ಪುತ್ತಿಗೆ ಶ್ರೀಗಳೂ `ಸುಖಾಂತ್ಯಕ್ಕೆ ಸಮ್ಮತಿ ಇದೆ' ಎಂದು ತಿಳಿಸಿದರು. ಇದರೊಂದಿಗೆ ವಿವಾದ ಬಗೆಹರಿದದ್ದು ಖಚಿತವಾಯಿತು. ಅಷ್ಟಮಠದ ಆರು ಯತಿಗಳು ವಿಧಿಸಿದ್ದ ಷರತ್ತಿನಲ್ಲಿ 'ಕೃಷ್ಣಪೂಜೆ' ಪ್ರಮುಖವಾಗಿತ್ತು. ಪುತ್ತಿಗೆ ಶ್ರೀಗಳು ಕೃಷ್ಣಪೂಜೆಯನ್ನು ಸ್ವತಃ ಮಾಡುವ ಬದಲು ಶೀರೂರು ಮಠಾಧೀಶರಿಗೆ ವಹಿಸಿದ್ದರು. ಶೀರೂರು ಮಠಾಧೀಶರು ಅಸ್ವಸ್ಥತೆ ಕಾರಣ ಈದಿನ ಕೃಷ್ಣಪೂಜೆ ಮಾಡಲಾಗದೇ ಹೋದಾಗ ಪೇಜಾವರ ಶ್ರೀಗಳ ಜೊತೆ ನಡೆದ ಮಾತುಕತೆಯಿಂದ ವಿವಾದ ಬಗೆಹರಿಯಿತು. ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥರು ಈವರೆಗೆ ಗರ್ಭಗುಡಿಯಲ್ಲಿರುವ ಕಡೆಗೋಲು ಕೃಷ್ಣನ ಮೂಲ ಬಿಂಬವನ್ನು ಸ್ಪರ್ಶಿಸಿಲ್ಲ. ಅವರು ಮುಂದಿನ ದಿನಗಳಲ್ಲೂ ಅದನ್ನು ಸ್ಪರ್ಶಿಸಬಾರದು. ಅವರು ಎಲ್ಲಿಯವರೆಗೆ ಸ್ಪರ್ಶಿಸುವುದಿಲ್ಲವೋ, ಅಲ್ಲಿಯವರೆಗೆ ಕೃಷ್ಣಪೂಜಾ ವಿಷಯದಲ್ಲಿ ಷರತ್ತುಬದ್ಧ ಬೆಂಬಲ ನೀಡುತ್ತೇವೆ ಎಂದು ಇತರ ಯತಿಗಳು ಸ್ಪಷ್ಟ ಪಡಿಸಿದರು.

2008: ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬರಾದ ಎನ್. ಆರ್. ನಾರಾಯಣ ಮೂರ್ತಿ ಅವರು ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಂದಿನ ರಾಷ್ಟ್ರಪತಿ ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ಸಮ್ಮುಖದಲ್ಲಿ ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಎಂದು ಆಪಾದಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿತು. ಮುಖ್ಯ ನ್ಯಾಯಮೂರ್ತಿ ಕೆ. ಜಿ. ಬಾಲಕೃಷ್ಣನ್, ನ್ಯಾಯಮೂರ್ತಿಗಳಾದ ಸಿ. ಕೆ. ಠಕ್ಕರ್ ಮತ್ತು ಆರ್. ವಿ. ರವೀಂದ್ರನ್ ಅವರನ್ನು ಒಳಗೊಂಡ ಪೀಠವು ಅರ್ಜಿಯನ್ನು ತಿರಸ್ಕರಿಸಿ, `ಇದೊಂದು ಪ್ರಚಾರ ತಂತ್ರ. ಘಟನೆಯ ಬಗ್ಗೆ ನಾರಾಯಣಮೂರ್ತಿ ಅವರು ಈಗಾಗಲೇ ಕ್ಷಮೆ ಕೋರಿದ್ದಾರೆ, ಈ ಅರ್ಜಿಯನ್ನು ಪುರಸ್ಕರಿಸಲಾಗದು' ಎಂದು ಹೇಳಿತು. ಕನ್ನಡ ರಕ್ಷಣಾ ವಕೀಲರ ವೇದಿಕೆ ಈ ಸಂಬಂಧ ಅರ್ಜಿ ಸಲ್ಲಿಸಿ, ರಾಷ್ಟ್ರಪತಿ ಡಾ. ಕಲಾಂ ಪಾಲ್ಗೊಂಡ್ದಿದ ಕಾರ್ಯಕ್ರಮದಲ್ಲಿ ಅಧಿಕೃತ ಶಿಷ್ಟಾಚಾರದ ಹಾಡಿನ ರೂಪದ ರಾಷ್ಟ್ರಗೀತೆ ಹಾಡಿಸದೆ ನಾರಾಯಣಮೂರ್ತಿ ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ' ಎಂದು ಆಪಾದಿಸಿತ್ತು.

2008: ಇಂದಿರಾನಗರದ ಚಿನ್ಮಯ ಮಿಷನ್ ಆಸ್ಪತ್ರೆಯಿಂದ (ಸಿಎಂಎಚ್) 100 ಅಡಿ ರಸ್ತೆಯವರೆಗಿನ ಮರಗಳನ್ನು ಕಡಿಯುವುದಕ್ಕೆ ತಡೆ ನೀಡಿ ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ (ಬಿ ಎಂ ಆರ್ ಸಿ) ಹೈಕೋರ್ಟ್ ಆದೇಶಿಸಿತು. ಮರ ಕಡಿಯುತ್ತಿರುವುದನ್ನು ಪ್ರಶ್ನಿಸಿ `ಸಿಎಂಎಚ್ ರಸ್ತೆ ವ್ಯಾಪಾರಸ್ಥರು ಮತ್ತು ನಾಗರಿಕರ ಕ್ಷೇಮಾಭಿವೃದ್ಧಿ ಸಂಘ' ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಈ ಆದೇಶ ಹೊರಡಿಸಿ, ವಿಚಾರಣೆ ಮುಂದೂಡಿದರು.

2008: ಚಲಿಸುವ ರೈಲಿಗೆ ಸಿಕ್ಕಿ ಹಾಕಿಕೊಂಡು ಗರ್ಭಣಿ ಆನೆ ಸೇರಿದಂತೆ ಮೂರು ಆನೆಗಳು ಸ್ಥಳದಲ್ಲೇ ಸತ್ತುಹೋದ ಕರುಳು ಹಿಂಡುವ ದುರ್ಘಟನೆ ಈದಿನ ಬೆಳಗಿನ ಜಾವ ಕೊಯಮತ್ತೂರು ಸಮೀಪ ಘಟಿಸಿತು. ವರ್ಕ್ ಶಾಪಿನಲ್ಲಿ `ಸರ್ವೀಸಿಂಗ್' ಮುಗಿದ ಮೇಲೆ ಮೂರು ಬೋಗಿಗಳ ಖಾಲಿ ರೈಲು ನಿಲ್ದಾಣಕ್ಕೆ ವಾಪಸ್ಸು ಹೋಗುತ್ತಿದ್ದಾಗ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿತು.

2008: ಬೆಂಗಳೂರಿನ ರಾಜರಾಜೇಶ್ವರಿ ನಗರದ ಆಂಧ್ರ ಬ್ಯಾಂಕಿಗೆ ಹಾಡಹಗಲೇ ಮಾರಕಾಸ್ತ್ರಗಳೊಂದಿಗೆ ನುಗ್ಗಿದ ದರೋಡೆಕೋರರು ವ್ಯವಸ್ಥಾಪಕರನ್ನು ಥಳಿಸಿ, ಸುಮಾರು 2.50 ಲಕ್ಷ ರೂಪಾಯಿ ನಗದು ದೋಚಿಕೊಂಡು ಪರಾರಿಯಾದರು. ಮಧ್ಯಾಹ್ನ 1.50ರ ಸುಮಾರಿಗೆ ಐವರು ಮುಸುಕುಧಾರಿಗಳು ಬಿಇಎಂಎಲ್ ಮೂರನೇ ಹಂತದ ಎ ಎನ್ ಎಸ್ ರಸ್ತೆಯಲ್ಲಿನ ಬ್ಯಾಂಕಿಗೆ ನುಗ್ಗಿ ಈ ದುಷ್ಕೃತ್ಯ ಎಸಗಿದರು.

2008: ಕರ್ನಾಟಕ, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಹರಿಯುವ ಕೃಷ್ಣಾ- ಗೋದಾವರಿ ಸೇರಿದಂತೆ ಮೂರು ಅಂತಾರಾಜ್ಯ ನದಿ ಜೋಡಣೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರ ತೀರ್ಮಾನಿಸಿತು.

2008: ಕಥಕ್ಕಳಿ ನೃತ್ಯ ಪ್ರಕಾರದ ಹೆಸರಾಂತ ಕಲಾವಿದ ಗಿರಿಸನ್ (46) ತಿರುವನಂತಪುರದಲ್ಲಿ ಹೃದಯಾಘಾತದಿಂದ ನಿಧನರಾದರು. ರೆಸಾರ್ಟ್ ಒಂದರಲ್ಲಿ ಈದಿನ ರಾತ್ರಿ ನೃತ್ಯ ಪ್ರದರ್ಶನ ನೀಡಿದ ನಂತರ ಗಿರಿಸನ್ ನೆರೆದ ವಿದೇಶಿ ಪ್ರವಾಸಿಗರ ಜತೆ ಛಾಯಾಚಿತ್ರಕ್ಕೆ ಪೋಜು ನೀಡುತ್ತಿದ್ದಾಗ ತೀವ್ರ ಹೃದಯಾಘಾತಕ್ಕೊಳಗಾಗಿ ನೆಲಕ್ಕೆ ಕುಸಿದರು. ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ. ಮುಖದ ಮೇಲಿನ ಮೇಕಪ್, ಆಭರಣಗಳು ಮತ್ತು ಕಾಸ್ಟ್ಯೂಮ್ ಹಾಗೇ ಇದ್ದವು.

2008: ಪೂರ್ವ ನೇಪಾಳದ ಬಿರಾಟ್ ನಗರದಲ್ಲಿ ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಿಸುವ ರೇಡಿಯೋ ಕೇಂದ್ರವೊಂದು ಅಸ್ತಿತ್ವಕ್ಕೆ ಬಂದಿತು. ಈ `ಪೂರ್ವಾಂಚಲ' ಎಫ್ ಎಂ ಕೇಂದ್ರ ನೇಪಾಳದಲ್ಲಿ ಸಮುದಾಯದಿಂದಲೇ ನಿರ್ವಹಿಸಲ್ಪಡುವ ಮೊದಲ ಎಫ್ ಎಂ ಕೇಂದ್ರವಾಗಿದ್ದು, ದಿನಕ್ಕೆ ಎಂಟು ಗಂಟೆಗಳ ಕಾಲ ಕಾರ್ಯಕ್ರಮ ಪ್ರಸಾರ ಮಾಡುವುದು. ಅಂಗರಕ್ಷಕ ಸಿಬ್ಬಂದಿಯಿಂದ ಹಿಡಿದು ಮ್ಯಾನೇಜರ್ ಹುದ್ದೆಯವರೆಗೆ 24 ಮಹಿಳೆಯರು ಈ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

2007: ವಿಶ್ವದ ಮಾಜಿ ಅಗ್ರ ರಾಂಕಿಂಗ್ ಆಟಗಾರ್ತಿ ಸ್ವಿಟ್ಜಲ್ಯಾಂಡಿನ ಮಾರ್ಟಿನಾ ಹಿಂಗಿಸ್ ಅವರು ಟೋಕಿಯೋದಲ್ಲಿ ನಡೆದ ಪಾನ್ ಫೆಸಿಫಿಕ್ ಓಪನ್ ಟೆನಿಸ್ ಚಾಂಪಿಯನ್ ಶಿಪ್ ಟೂರ್ನಿಯಲ್ಲಿ ದಾಖಲೆಯ ಐದನೇ ಬಾರಿಗೆ ಪ್ರಶಸ್ತಿಯ ಕಿರೀಟವನ್ನು ಮುಡಿಗೆ ಏರಿಸಿಕೊಂಡರು. ಫೈನಲ್ ಪಂದ್ಯದಲ್ಲಿ ಹಿಂಗಿಸ್ ರಷ್ಯಾದ ಅನಾ ಇವಾನೋವಿಕ್ ಅವರನ್ನು ಮಣಿಸಿದರು. 1997, 1999, 2000 ಮತ್ತು 2002ರಲ್ಲಿಯೂ ಹಿಂಗಿಸ್ ಅವರು ಪಾನ್ ಫೆಸಿಫಿಕ್ ಓಪನ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ಕಳೆದ ವರ್ಷ ಮಾತ್ರ ಎಲೆನಾ ಡೆಮೆಂಟೀವಾ ಎದರು ಸೋತು ಪ್ರಶಸ್ತಿಯಿಂದ ವಂಚಿತರಾಗಿದ್ದರು.

2007: ನೆಲದಿಂದ ನೆಲಕ್ಕೆ ಪ್ರಯೋಗಿಸಬಹುದಾದ `ಬ್ರಹ್ಮೋಸ್' ಕ್ಷಿಪಣಿಯ ಪರೀಕ್ಷಾ ಪ್ರಯೋಗವನ್ನು ಒರಿಸ್ಸಾದ ಬಾಲಸೋರ್ ಜಿಲ್ಲೆಯ ಚಂಡಿಪುರದ ಆಂತರಿಕ ಪರೀಕ್ಷಾ ವಲಯದಲ್ಲಿ ಮಧ್ಯಾಹ್ನ 12.15ರ ವೇಳೆಗೆ ಯಶಸ್ವಿಯಾಗಿ ನಡೆಸಲಾಯಿತು. 9.2 ಮೀಟರ್ ಉದ್ದದ ಈ ಕ್ಷಿಪಣಿ 290 ಕಿ.ಮೀ. ವ್ಯಾಪ್ತಿಯವರೆಗೆ ದಾಳಿ ನಡೆಸುವ ಸಾಮರ್ಥ್ಯ ಹೊಂದ್ದಿದು 200 ಕಿಲೋ ತೂಕದ ಸಿಡಿತಲೆಗಳನ್ನು ಒಯ್ಯಬಲ್ಲುದು.

2007: ಭಾರತೀಯ ಮೂಲದ ಅಮೆರಿಕನ್ ಗಗನಯಾನಿ ಸುನೀತಾ ವಿಲಿಯಮ್ಸ್ ಅವರು ಮೈಕೆಲ್ ಲೋಪೆಜ್ ಅವರ ಜೊತೆಗೆ ತಮ್ಮ ಎರಡನೇ ಬಾಹ್ಯಾಕಾಶ ನಡಿಗೆಯಲ್ಲಿ ಪಾಲ್ಗೊಂಡರು. ಅಂದಾಜು ಆರೂವರೆ ಗಂಟೆಗಳ ಕಾಲದ ಈ ಬಾಹ್ಯಾಕಾಶ ನಡಿಗೆಯಲ್ಲಿ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ತಂಪುಗೊಳಿಸುವ ವ್ಯವಸ್ಥೆಯ ದುರಸ್ತಿ ಕಾರ್ಯ ಕೈಗೊಂಡರು.

2007: ಕನ್ನಡ ಸಿನೆಮಾ ಮತ್ತು ರಂಗಭೂಮಿಯ ಹಿರಿಯ ನಟ ಶಿವಮೊಗ್ಗ ವೆಂಕಟೇಶ್ (60) ಶಿವಮೊಗ್ಗದಲ್ಲಿ ನಿಧನರಾದರು. 70ರ ದಶಕದಲ್ಲಿ ಅಭಿನಯ ತಂಡ ಕಟ್ಟುವ ಮೂಲಕ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪ್ರಭುತ್ವದ ವಿರುದ್ಧ ಜನಜಾಗೃತಿ ಮೂಡಿಸುವಲ್ಲಿ ವೆಂಕಟೇಶ್ ಪ್ರಮುಖ ಪಾತ್ರ ವಹಿಸಿದ್ದರು. ಉತ್ತಮ ಪ್ರಭುತ್ವ ಲೊಳಲೊಟ್ಟೆ, ನಮ್ಮೊಳಗೊಬ್ಬ ನಾಜೂಕಯ್ಯ, ಹಯವದನ ಮುಂತಾದ ನಾಟಕಗಳ ಮೂಲಕ ರಂಗಭೂಮಿಯಲ್ಲಿ ತಮ್ಮ ಛಾಪು ಮೂಡಿಸಿದ್ದ ಅವರು ರಾಜ್ಯಪ್ರಶಸ್ತಿ ಸಹಿತ ವಿವಿಧ ಪ್ರಶಸ್ತಿಗಳನ್ನು ಗಳಿಸಿದ್ದರು. ಕನ್ನೇಶ್ವರ ರಾಮ, ಸಂತ ಶಿಶುನಾಳ ಶರೀಫ, ಆಸ್ಫೋಟ, ಚೋಮನ ದುಡಿ, ಆಕ್ಸಿಡೆಂಟ್ ಸೇರಿದಂತೆ ಇತ್ತೀಚಿನ ಮುನ್ನುಡಿ ಚಿತ್ರದವರೆಗೂ ವಿವಿಧ ಚಲನಚಿತ್ರಗಳಲ್ಲಿ ಅವರು ಅಭಿನಯಿಸಿದ್ದರು.

2006: ಫಿಲಿಪ್ಪೀನ್ಸಿನ ಮನಿಲಾಕ್ಕೆ 15 ಕಿ.ಮೀ. ದೂರದ ಪಾಸಿಗ್ ಎಂಬಲ್ಲಿನ ಕ್ರೀಡಾಂಗಣ ಒಂದರಲ್ಲಿ ಆಯೋಜಿಸಲಾಗಿದ್ದ ಕೌನ್ ಬನೇಗಾ ಕರೋಡಪತಿ ಮಾದರಿಯ ವೊವೊವಿ ಹೆಸರಿನ ಟೆಲಿವಿಷನ್ ಕಾರ್ಯಕ್ರಮ ವೀಕ್ಷಿಸಲು ನೆರೆದಿದ್ದ ಗುಂಪಿನಲ್ಲಿ ಉಂಟಾದ ನೂಕುನುಗ್ಗಲಿಗೆ 88 ಜನ ಬಲಿಯಾಗಿ 200ಕ್ಕೂ ಹೆಚ್ಚು ಜನ ಗಾಯಗೊಂಡರು.

2006: ಅಂತಾರಾಷ್ಟ್ರೀಯ ಸಮುದಾಯದ ವಿರೋಧದ ನಡುವೆಯೂ ಪರಮಾಣು ಕಾರ್ಯಕ್ರಮ ಮುಂದುವರೆಸಿದ ಇರಾನ್ ಪ್ರಕರಣವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಶಿಫಾರಸು ಮಾಡಲಾಯಿತು. ಇರಾನ್ ಹಣೆಬರಹ ನಿರ್ಧರಿಸುವ ನಿಟ್ಟಿನಲ್ಲಿ ಈ ದಿನ ನಡೆದ ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (ಐಎಇಎ) ನಡೆಸಿದ ಚುನಾವಣೆಯಲ್ಲಿ ಭಾರತ ಸೇರಿದಂತೆ 27 ರಾಷ್ಟ್ರಗಳು ಇರಾನ್ ವಿರುದ್ಧ ಮತ ಚಲಾಯಿಸಿದವು. ಪರವಾಗಿ 3 ಮತಗಳು ಚಲಾವಣೆಗೊಂಡವು.

1990: ಕೇರಳದ ಎರ್ನಾಕುಲಂ ಜಿಲ್ಲೆಯನ್ನು ಭಾರತದ ಮೊತ್ತ ಮೊದಲ ಸಾಕ್ಷರ ಜಿಲ್ಲೆ ಎಂಬುದಾಗಿ ಘೋಷಿಸಲಾಯಿತು.

1983: ಅಮೆರಿಕನ್ ಗಾಯಕಿ ಕರೇನ್ ಕಾರ್ಪೆಂಟರ್ ಮೃತರಾದರು. ಇವರ ಸಹೋದರ ಕೂಡಾ ಗಾಯಕನಾಗಿದ್ದು ಇವರಿಬ್ಬರ ಜೋಡಿ `ಕಾರ್ಪೆಂಟರ್ ದ್ವಯರ ಜೋಡಿ' ಎಂದೇ ಖ್ಯಾತಿ ಪಡೆದಿತ್ತು.

1977: ಕಲಾವಿದ ಮನು ಚಕ್ರವರ್ತಿ ಜನನ.

1974: ಕಲಾವಿದ ಗಣೇಶ ರಾಮಣ್ಣ ಮರೂರ ಜನನ.

1974: ಭಾರತದ ಗಣಿತ ತಜ್ಞ ಹಾಗೂ ಭೌತ ತಜ್ಞ ಸತ್ಯೇಂದ್ರನಾಥ ಬೋಸ್ ತಮ್ಮ 80ನೇ ವಯಸ್ಸಿನಲ್ಲಿ ನಿಧನರಾದರು.

1958: ಕಲಾವಿದೆ ಮೀರಾ ಎಚ್. ಎನ್. ಜನನ.

1945: ಮಿತ್ರ ಪಡೆಗಳ ಧುರೀಣರಾದ ರೂಸ್ ವೆಲ್ಟ್, ಚರ್ಚಿಲ್ ಮತ್ತು ಸ್ಟಾಲಿನ್ ಕ್ರೀಮಿಯಾದ ಯಾಲ್ಟಾದಲ್ಲಿ ಸಭೆ ಸೇರಿದರು. ಪೋಲಿಶ್ ಸಮಸ್ಯೆ ಕುರಿತು ಚರ್ಚಿಸುವುದು ಈ ಸಭೆಯ ಮುಖ್ಯ ಉದ್ದೇಶವಾಗಿತ್ತು.

1942: ಕಲಾವಿದ ಸದಾಶಿವಗೌಡ ಸಿದ್ದಗೌಡ ಜನನ.

1938: ಬಿರ್ಜು ಮಹಾರಾಜ್ ಹುಟ್ಟಿದ ದಿನ. ಕಥಕ್ ನೃತ್ಯ ಪಟು ಹಾಗೂ ನೃತ್ಯ ಸಂಯೋಜಕರಾದ ಇವರು ಕಥಕ್ ಕಲೆಯನ್ನು ನೃತ್ಯರೂಪದಲ್ಲಿ ಜನಪ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು.

1938: ರಂಗಭೂಮಿಯ ಹಿರಿಯ ಕಲಾವಿದೆ, ದೂರದರ್ಸನ ಧಾರಾವಾಹಿಗಳ ಮೌಲ್ಯಯುತ ಪಾತ್ರಗಳ ನಿರ್ವಹಣೆಯ ಅನುಭವಿ ಪಾತ್ರಧಾರಿ ಎಂದೇ ಖ್ಯಾತರಾದ ಭಾರ್ಗವಿ ನಾರಾಯಣ್ ಅವರು ಡಾ. ಎಂ. ರಾಮಸ್ವಾಮಿ- ನಾಮಗಿರಿಯಮ್ಮ ದಂಪತಿಯ ಮಗಳಾಗಿ ಬೆಂಗಳೂರಿನಲ್ಲಿ ಜನಿಸಿದರು.

1931: ಸಾಹಿತಿ, ಸಮಾಜ ಸೇವಕ ಮಾ.ಭ. ಪೆರ್ಲ ಹುಟ್ಟಿದ ದಿನ. ಕಾಸರಗೋಡು ಜಿಲ್ಲೆಯ ಸೆಟ್ಟಬೈಲು ಗ್ರಾಮ ಇವರ ಹುಟ್ಟೂರು. ತಂದೆ ಗುರು ವೆಂಕಟೇಶ ಭಟ್ಟರು, ತಾಯಿ ಲಕ್ಷ್ಮಿ. ಕಥೆ, ಲೇಖನ, ಕಾದಂಬರಿ, ಸಂದರ್ಶನ ಸೇರಿದಂತೆ 25ಕ್ಕೂ ಹೆಚ್ಚು ಕೃತಿ ರಚಿಸಿದ ಇವರು ರಾಯಚೂರಿನ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾಗಲೇ ಸೇವಾ ಭಾರತಿ ಟ್ರಸ್ಟ್ ಮೂಲಕ ಪ್ರೇರಣಾ ಬುದ್ದಿಮಾಂದ್ಯ ಮಕ್ಕಳ ಶಾಲೆ ಸ್ಥಾಪಿಸಿದ್ದರು. ಪೆರ್ಲಕ್ಕೆ ವಾಪಸಾದ ಬಳಿಕವೂ ಬಾಲಮಂದಿರ, ಬಾಲಭಾರತಿ ವಿದ್ಯಾಕೇಂದ್ರ ಪ್ರಾಥಮಿಕ ಶಾಲೆ ಆರಂಭಿಸಿದವರು. ಸಮುದಾಯ ಪತ್ರಿಕೆ ಕರಾಡ ಮಾಸಪತ್ರಿಕೆಯ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಿದರು.

1926: ಕಲಾವಿದ ವೆಂ.ಮು. ಜೋಶಿ ಜನನ.

1924: ಮಾಜಿ ರಾಷ್ಟ್ರಪತಿ ದಿವಂಗತ ಕೆ.ಆರ್. ನಾರಾಯಣನ್ ಅವರು ಈದಿನ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಜನಿಸಿದರು. ತೀರಾ ಬಡ ಕುಟುಂಬದಲ್ಲಿ ಹುಟ್ಟಿದ ಅವರು 1997ರ ಜುಲೈ 25ರಿಂದ ಐದು ವರ್ಷಗಳ ಕಾಲ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು. ರಾಷ್ಟ್ರಪತಿ ಸ್ಥಾನ ಅಲಂಕರಿಸಿದ ಮೊಟ್ಟ ಮೊದಲ ದಲಿತ ಹಾಗೂ ಮಲಯಾಳಿ ವ್ಯಕ್ತಿ ಎಂಬ ಹೆಗ್ಗಳಿಕೆ ಇವರದು.

1922: ಪಂಡಿತ್ ಭೀಮಸೇನ್ ಜೋಶಿ ಹುಟ್ಟಿದ ದಿನ. ಖ್ಯಾತ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತಗಾರರಾದ ಇವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದವರು.

1920: ಕಲಾವಿದ ಕೆ.ಬಿ. ಕುಲಕರ್ಣಿ ಜನನ.

1920: ಕಲಾವಿದ ಕೆ.ಬಿ. ಕಾಳೆ ಜನನ.

1917: ಪಾಕಿಸ್ಥಾನಿ ಸೇನಾಪಡೆಗಳ ಮುಖ್ಯ ಸೇನಾಧಿಕಾರಿ ಆಗಾ ಮಹಮ್ಮದ್ ಯಾಹ್ಯಾ ಖಾನ್ (1917-1980) ಹುಟ್ಟಿದರು.

1969-71ರ ಅವಧಿಯಲ್ಲಿ ಇವರು ಪಾಕಿಸ್ಥಾನದಲ್ಲಿ ಅಧ್ಯಕ್ಷರಾಗಿದ್ದರು.

1913: ಅಮೆರಿಕಾದ ಕರಿಯ ಮಹಿಳೆ ರೋಸಾ ಪಾರ್ಕ್ಸ್ (1913-2005) ಹುಟ್ಟಿದರು. ಬಸ್ಸಿನಲ್ಲಿ ಬಿಳಿಯ ವ್ಯಕ್ತಿಯೊಬ್ಬನಿಗೆ ಆಸನ ಬಿಟ್ಟುಕೊಡಲು ಈಕೆ ನಿರಾಕರಿಸಿದ ಘಟನೆ 1955ರಲ್ಲಿ ಅಲಬಾಮಾದ ಮಾಂಟ್ಗೊಮೆರಿಯಲ್ಲಿ ಬಸ್ಸು ಬಹಿಷ್ಕಾರ ಚಳವಳಿಯೊಂದಿಗೆ ಅಮೆರಿಕದ ನಾಗರಿಕ ಹಕ್ಕುಗಳ ಚಳವಳಿಗೆ ನಾಂದಿಯಾಯಿತು.

1902: ಲಿಂಡ್ ಬರ್ಗ್ (1902-1974) ಹುಟ್ಟಿದ ದಿನ. ಇವರು 1927ರ ಮೇ ತಿಂಗಳಲ್ಲಿ ನ್ಯೂಯಾರ್ಕಿನಿಂದ ಪ್ಯಾರಿಸ್ಸಿಗೆ ಮೊತ್ತ ಮೊದಲ ಬಾರಿಗೆ ಅಟ್ಲಾಂಟಿಕ್ ಸಾಗರದ ಮೇಲಿನಿಂದ ಎಲ್ಲೂ ನಿಲ್ಲದೆ ಸತತವಾಗಿ ಏಕವ್ಯಕ್ತಿ ವಿಮಾನ ಹಾರಾಟ ನಡೆಸಿ ದಾಖಲೆ ನಿರ್ಮಿಸಿದರು.

1861: ಅಲಬಾಮಾದ ಮಾಂಟ್ಗೊಮೆರಿಯಲ್ಲಿ ದಕ್ಷಿಣ ಅಮೆರಿಕಾದ ಏಳು ಪ್ರತ್ಯೇಕತಾವಾದಿ ರಾಜ್ಯಗಳು ಒಟ್ಟುಗೂಡಿ `ಕನ್ಫೆಡರೇಟ್ ಸ್ಟೇಟ್ ಆಫ್ ಅಮೆರಿಕಾ' ಸ್ಥಾಪನೆ ಮಾಡಿದವು.
PARYAYA: ಇಂದಿನ ಇತಿಹಾಸ History Today ಫೆಬ್ರುವರಿ 04: ಇಂದಿನ ಇತಿಹಾಸ ಫೆಬ್ರುವರಿ 04 2024:ಡೆಹ್ರಾಡೂನ್:‌ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಅಧ್ಯಕ್ಷತೆಯಲ್ಲಿ ಮುಖ್ಯಮಂತ್ರಿಗಳ ನಿವಾಸದಲ್ಲಿ 2024 ಫೆಬ್ರುವರಿ 4ರಂದು ...

Saturday, February 3, 2024

PARYAYA: ಇಂದಿನ ಇತಿಹಾಸ History Today ಫೆಬ್ರುವರಿ 03

ಇಂದಿನ ಇತಿಹಾಸ
ಫೆಬ್ರುವರಿ 3
2024: 
ನವದೆಹಲಿ:  ಹಿರಿಯ ಬಿಜೆಪಿ ನಾಯಕ, ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ನೀಡಿ ಗೌರವಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2024 ಫೆಬ್ರುವರಿ 3ರ ಶನಿವಾರ ಬೆಳಗ್ಗೆ ಘೋಷಿಸಿದರುʼನನಗೆ ಇದೊಂದು ಭಾವನಾತ್ಮಕ ಕ್ಷಣʼ ಎಂದು ಹೇಳಿದ ಮೋದಿ, ʼನಮ್ಮ ಕಾಲದ ಅತ್ಯಂತ ಗೌರವಾನ್ವಿತ ರಾಜನೀತಿಜ್ಞರಲ್ಲಿ ಎಲ್ ಕೆ ಅಡ್ವಾಣಿ ಅವರು ಒಬ್ಬರುಭಾರತದ ಅಭಿವೃದ್ಧಿಗೆ ಅವರ ಕೊಡುಗೆ ಅವಿಸ್ಮರಣೀಯʼ ಎಂದು ನುಡಿದರು. "ಶ್ರೀ ಎಲ್‌ಕೆ ಅಡ್ವಾಣಿ ಜಿ ಅವರಿಗೆ ಭಾರತ ರತ್ನ ನೀಡಲಾಗುವುದು ಎಂದು ತಿಳಿಸಲು ನನಗೆ ತುಂಬಾ ಸಂತೋಷವಾಗಿದೆ. ನಾನು ಅವರೊಂದಿಗೆ ಮಾತನಾಡಿದ್ದೇನೆ ಮತ್ತು ಈ ಗೌರವ ಪುರಸ್ಕೃತರಾಗಿರುವುದಕ್ಕಾಗಿ ಅವರನ್ನು ಅಭಿನಂದಿಸಿದ್ದೇನೆ" ಎಂದು ಪ್ರಧಾನಿ ಮೋದಿ ಟ್ವೀಟ್‌ ಮಾಡಿದರು. ಶ್ರೀ ಅಡ್ವಾಣಿ ಅವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಉಪಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಹಲವಾರು ಸಚಿವಾಲಯಗಳ ಮುಖ್ಯಸ್ಥರಾಗಿದ್ದರು. ಅವರು 1970 ಮತ್ತು 2019 ರ ನಡುವೆ ಸಂಸತ್ತಿನ ಉಭಯ ಸದನಗಳ ಸದಸ್ಯರಾಗಿದ್ದರು. 

2012:  ಕನ್ನಡ ಚಿತ್ರರಂಗದ ಹಾಸ್ಯನಟ ಮತ್ತು ರಂಗಭೂಮಿ ಕಲಾವಿದ ಕರಿಬಸವಯ್ಯ (51) ಅವರು ಈದಿನ (ಫೆಬ್ರುವರಿ 3) ಮಧಾಹ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಜನವರಿ 31ರಂದು ಕನಕಪುರದಲ್ಲಿ ಹರಿಕಥೆ ಕಾರ್ಯಕ್ರಮ ನಡೆಸಿ ಮನೆಗೆ ಹಿಂದಿರುಗುತ್ತಿದ್ದಾಗ ತಲಘಟ್ಟಪುರ ಬಳಿ ಅವರ ಕಾರು ಮರಕ್ಕೆ ಗುದ್ದಿ ಅಪಘಾತ ಸಂಭವಿಸಿತ್ತು. ತೀವ್ರ ಗಾಯಗೊಂಡಿದ್ದ ಕರಿಬಸವಯ್ಯ ಅವರನ್ನು ಪ್ರಿಸ್ಟೈನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮಧ್ಯಾಹ್ನ 2.30ರ ಸುಮಾರಿಗೆ ಕೊನೆಯುಸಿರೆಳೆದರು.  ರಂಗಭೂಮಿ ಹಿನ್ನೆಲೆಯಿಂದ ಬಂದ ಕರಿಬಸವಯ್ಯ ಸುಮಾರು 300 ಚಿತ್ರಗಳಲ್ಲಿ ನಟಿಸಿದ್ದರು. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ `ಉಂಡೂ ಹೋದ ಕೊಂಡೂ ಹೋದ` ಅವರ ಮೊದಲ ಚಿತ್ರ. `ತಾಯಿ`, `ಉಲ್ಟಾಪಲ್ಟಾ`, `ಪರಿಚಯ`, `ಯಾರಿಗೆ ಸಾಲತ್ತೆ ಸಂಬಳ`, `ಜನುಮದ ಜೋಡಿ`, `ಹೋಳಿ`, `ನೂರೂ ಜನ್ಮಕು`, `ಮುಂಗಾರಿನ ಮಿಂಚು`, `ಕೊಟ್ರೇಶಿ ಕನಸು`, `ಭೂಮಿ ತಾಯಿಯ ಚೊಚ್ಚಲ ಮಗ`, `ಅರಮನೆ` ಮುಂತಾದ ಚಿತ್ರಗಳಲ್ಲಿ ಹಾಸ್ಯಕಲಾವಿದರಾಗಿ ಅವರು ನಟಿಸಿದ್ದರು. `ಸಂಗೊಳ್ಳಿ ರಾಯಣ್ಣ`, `ಬ್ರೇಕಿಂಗ್ ನ್ಯೂಸ್`, `ನೆನಪಿನಂಗಳ`, `ಮಂಜುನಾಥ ಬಿಎಎಲ್‌ಎಲ್‌ಬಿ` ಮುಂತಾದವು ಅವರ ಬಿಡುಗಡೆಯಾಗಬೇಕಿದ್ದ ಅವರ ಅಭಿನಯದ ಚಿತ್ರಗಳು.

2008: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೊದಲ ವಿಮಾನವು ಮಾರ್ಚ್ 30ರ ಮಧ್ಯರಾತ್ರಿ 12 ಗಂಟೆಗೆ ಪ್ರಯಾಣ ಬೆಳೆಸುವುದು, ಇದಕ್ಕೂ ಮುನ್ನ ಮಾರ್ಚ್ 29ರ ರಾತ್ರಿ ಎಂಟು ಗಂಟೆ ನಂತರ ಖಾಸಗಿ ಸಂಸ್ಥೆಯ ವಿಮಾನವೊಂದು ನಿಲ್ದಾಣಕ್ಕೆ ಆಗಮಿಸುವುದು. ಮಾರ್ಚ್ 29ರ ರಾತ್ರಿ ಎಂಟು ಗಂಟೆಯ ನಂತರ ಯಾವುದೇ ವಿಮಾನದ ಆಗಮನಕ್ಕೆ ಎಚ್ ಎ ಎಲ್ ವಿಮಾನ ನಿಲ್ದಾಣದಲ್ಲಿ ಅವಕಾಶ ಇರುವುದಿಲ್ಲ ಎಂದು ಎಚ್ ಎ ಎಲ್ ಅಧಿಕಾರಿಗಳು ಪ್ರಕಟಿಸಿದರು.

2008: ಆಸ್ಟ್ರೇಲಿಯಾ ವಿರುದ್ಧ ಬ್ರಿಸ್ಬೇನಿನಲ್ಲಿ ನಡೆದ ಪಂದ್ಯದಲ್ಲಿ `ಹಿಟ್ ವಿಕೆಟ್' ರೂಪದಲ್ಲಿ ವಿಕೆಟ್ ಒಪ್ಪಿಸಿದ ಸಚಿನ್ ತೆಂಡೂಲ್ಕರ್ ಅವರು ಈ ರೀತಿಯಲ್ಲಿ ಔಟಾದ ಭಾರತದ ಮೂರನೇ ಬ್ಯಾಟ್ಸ್ ಮನ್ ಎನಿಸಿಕೊಂಡರು. ಪಂದ್ಯದಲ್ಲಿ ಉತ್ತಮ ಆರಂಭ ಪಡೆದಿದ್ದ ಮಾಸ್ಟರ್ ಬ್ಲಾಸ್ಟರ್ ಅವರು ಬ್ರೆಟ್ ಲೀ ಎಸೆತದಲ್ಲಿ ಔಟಾದರು. ಚೆಂಡನ್ನು ರಕ್ಷಣಾತ್ಮಕವಾಗಿ ಆಡಿ ರನ್ ಗಳಿಸುವ ಪ್ರಯತ್ನದ ವೇಳೆ ಸಚಿನ್ ಅವರ ಬಲಗಾಲು ಸ್ಟಂಪ್ ಗೆ ತಾಗಿ ಬೇಲ್ಸ್ ಕೆಳಕ್ಕುರುಳಿತು. ತಮ್ಮ ವೃತ್ತಿಜೀವನದಲ್ಲಿ ತೆಂಡೂಲ್ಕರ್ ಇದೇ ಮೊದಲ ಬಾರಿಗೆ ಹಿಟ್ ವಿಕೆಟ್ ರೂಪದಲ್ಲಿ ಔಟಾಗಿ ನಯನ್ ಮೋಂಗಿಯ ಹಾಗೂ ಅನಿಲ್ ಕುಂಬ್ಳೆ ಅವರ ಸಾಲಿಗೆ ಸೇರಿಕೊಂಡರು. 1995ರಲ್ಲಿ ಶಾರ್ಜಾದಲ್ಲಿ ಪಾಕಿಸ್ಥಾನದ ವಿರುದ್ಧದ ಪಂದ್ಯದಲ್ಲಿ ಮೋಂಗಿಯಾ ಅವರು ವಾಸೀಂ ಅಕ್ರಂ ಎಸೆತದಲ್ಲಿ ಇದೇ ರೀತಿ ಔಟಾಗಿದ್ದರು. 2003ರಲ್ಲಿ ವೆಲ್ಲಿಂಗ್ಟನ್ನಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅನಿಲ್ ಕುಂಬ್ಳೆ ಅವರು ಹಿಟ್ ವಿಕೆಟ್ ರೂಪದಲ್ಲಿ ಆಂಡ್ರೆ ಆಡಮ್ಸ್ ಗೆ ವಿಕೆಟ್ ಒಪ್ಪಿಸಿದ್ದರು. ತೆಂಡೂಲ್ಕರ್ ಅಲ್ಲದೆ ಏಕದಿನ ಕ್ರಿಕೆಟಿನಲ್ಲಿ 10,000 ರನ್ ಪೂರೈಸಿರುವ ಇನ್ನಿಬ್ಬರು ಆಟಗಾರರಾದ ಪಾಕಿಸ್ಥಾನದ ಇಂಜಮಾಮ್ ಉಲ್ ಹಕ್ ಹಾಗೂ ವೆಸ್ಟ್ ಇಂಡೀಸಿನ ಬ್ರಯನ್ ಲಾರಾ ಹಿಟ್ ವಿಕೆಟ್ ರೂಪದಲ್ಲಿ ಔಟಾಗಿದ್ದರು.

2008: ಮೈಸೂರಿನ ಸ್ವರ ಮಾಧುರ್ಯ ಟ್ರಸ್ಟ್ ನೀಡುವ ಸುಗಮ ಸಂಗೀತ ಕಲಾನಿಧಿ ಪ್ರಶಸ್ತಿಯನ್ನು ಖ್ಯಾತ ಕಲಾವಿದ ಪುತ್ತೂರು ನರಸಿಂಹ ನಾಯಕ್ ಅವರಿಗೆ ಕೈಗಾರಿಕೋದ್ಯಮಿ ಕೆ.ವಿ. ಮೂರ್ತಿ ಪ್ರದಾನ ಮಾಡಿದರು. 

2008: ಆಫ್ರಿಕಾದ ರುವಾಂಡಾ ದಕ್ಷಿಣ ಭಾಗದಲ್ಲಿ ಸಂಭವಿಸಿದ ಭೂಕಂಪದಲ್ಲಿ ಕನಿಷ್ಠ 31 ಮಂದಿ ಮೃತರಾಗಿ 380ಕ್ಕೂ ಅಧಿಕ ಮಂದಿ ಗಾಯಗೊಂಡರು. ಕಂಪನದ ಪ್ರಮಾಣ ರಿಕ್ಟರ್ ಮಾಪಕದಲ್ಲಿ 5ರಷ್ಟಿತ್ತು.

2008: ಛತ್ತೀಸ್ ಗಢ ಮೂಲದ 14 ವರ್ಷದ ಬಾಲಕಿ ಆರತಿಕುಮಾರಿ ದೇಹದ ಬಲಭಾಗದಲ್ಲಿರುವ ಹೃದಯದ ರಂಧ್ರವನ್ನು ಶಸ್ತ್ರಚಿಕಿತ್ಸೆಯಿಂದ ಮುಚ್ಚುವ ಮೂಲಕ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ವೈದ್ಯರು ವಿಶೇಷ ಸಾಧನೆ ಮೆರೆದರು. ಹತ್ತು ಸಾವಿರ ಮಕ್ಕಳಿಗೆ ಒಬ್ಬರಲ್ಲಿ ಮಾತ್ರ ಕಂಡು ಬರುವ ಡೆಕ್ಸಟ್ರೊಕಾರ್ಡಿಯ (ಬಲಭಾಗದಲ್ಲಿರುವ ಅಂಗಗಳು ಎಡಭಾಗದಲ್ಲಿ ಮತ್ತು ಎಡಭಾಗದಲ್ಲಿರುವ ಅಂಗಗಳು ಬಲಭಾಗದಲ್ಲಿ ಇರುವುದು) ಎಂಬ ಅಪರೂಪದ ಅಂಗ ರಚನೆಯನ್ನು ಆರತಿ ಹೊಂದಿದ್ದಳು. ಉಸಿರಾಟಕ್ಕೆ ತೊಂದರೆ ನೀಡುತ್ತಿದ್ದ ಆಕೆಯ ಹೃದಯದ ರಂಧ್ರವನ್ನು ಶಸ್ತ್ರಚಿಕಿತ್ಸೆಯಿಂದ ಮುಚ್ಚುವ ಮೂಲಕ ಹೃದಯ ಕವಾಟದಲ್ಲಿ ರಕ್ತ ಹರಿಯುವಿಕೆಯನ್ನು ವೈದ್ಯರು ಸುಗಮಗೊಳಿಸಿದರು.

2008: ಜನಪ್ರಿಯ ರಂಗಪ್ರಕಾರ `ನೌಟಂಕಿ'ಯ ಹೆಸರಾಂತ ಕಲಾವಿದ ಮಾಸ್ಟರ್ ಗಿರಿಜ  (92) ಜೈಪುರದಲ್ಲಿ ನಿಧನರಾದರು. ಉತ್ತರ ಭಾರತದಲ್ಲಿ ಅತ್ಯಂತ ಜನಪ್ರಿಯ ರಂಗ ಪ್ರಕಾರವಾಗಿರುವ `ನೌಟಂಕಿ' ಬೆಳವಣಿಗೆ  ಮತ್ತು ಅದರ  ಜನಪ್ರಿಯತೆಗೆ ಅತ್ಯಂತ ಸೃಜನಶೀಲವಾಗಿ ತೊಡಗಿಸಿಕೊಂಡವರಲ್ಲಿ ಗಿರಿಜ ಮುಂಚೂಣಿ ನಾಯಕರು. ಅವರು ರಾಜಸ್ಥಾನ, ಉತ್ತರ ಪ್ರದೇಶ ಮಾತ್ರವಲ್ಲ ದೇಶದ ಎಲ್ಲಡೆ ಹಲವಾರು ಪ್ರದರ್ಶನಗಳನ್ನು ನೀಡಿದ್ದಾರೆ. ಈ ರಂಗಪ್ರಕಾರಕ್ಕೆ ಅವರು ಸಲ್ಲಿಸಿದ ಸೇವೆಗಾಗಿ ಹಲವಾರು ಪ್ರಶಸ್ತಿ, ಸನ್ಮಾನಗಳೂ ಸಂದಿವೆ. 

2008: ಪಕ್ಷಿಜ್ವರ (ಕೋಳಿಜ್ವರ) ಹರಡುವುದನ್ನು ತಡೆಯುವ ಉದ್ದೇಶದಿಂದ ಪಶ್ಚಿಮಬಂಗಾಳ ಗಡಿಯಲ್ಲಿ ಕೋಳಿಗಳ ಹತ್ಯೆಗೆ ಕೇಂದ್ರ ಸರ್ಕಾರ ಸೂಚನೆ ನೀಡಿದ ಮೇರೆಗೆ ಅಸ್ಸಾಂ ಸರ್ಕಾರವು ಮುಂಜಾಗ್ರತಾ ಕ್ರಮವಾಗಿ ಸಾವಿರಾರು ಕೋಳಿಗಳನ್ನು ಕೊಲ್ಲಲು ಆರಂಭಿಸಿತು.

2008: ಸುನಾಮಿ ಚಂಡಮಾರುತಗಳ ಬಗ್ಗೆ ಅರಿಯುವ ಮುನ್ನೆಚ್ಚರಿಕೆ ಸಂಶೋಧನೆಗಳಲ್ಲಿ ಅಮೆರಿಕದ ನಾಸಾ ಮಹತ್ವದ ಸಾಧನೆ ಮಾಡಿತು. ಸದ್ಯ ಜಾರಿಯಲ್ಲಿರುವ ವಿಧಾನಗಳಿಗಿಂತಲೂ ಹೆಚ್ಚು ವಿಶ್ವಾಸಾರ್ಹ ಪದ್ಧತಿ ಮೂಲಕ  ಸುನಾಮಿ ಕಂಪನಗಳ ಖಚಿತತೆಯನ್ನು ಅರಿಯುವಲ್ಲಿ ನಾಸಾ ವಿಜ್ಞಾನಿಗಳು ಯಶಸ್ವಿಯಾದರು. ಇದರಿಂದ ಸುನಾಮಿ ಸಂಭವಿಸಬಹುದಾದ ಪ್ರದೇಶಗಳ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗಳ ನಕಾರಾತ್ಮಕ ಬೆಳವಣಿಗೆ ಹಾಗೂ ಜೀವ ಹಾನಿ ತಡೆಗಟ್ಟಬಹುದಾಗಿದೆ ಎಂದು ಕ್ಯಾಲಿಫೋರ್ನಿಯಾದ ನಾಸಾ ಪ್ರಯೋಗಾಲಯದ ವಿಜ್ಞಾನಿ ವೈ.ಟೋನಿ ಸಾಂಗ್ ಹೇಳಿದರು. ಸುನಾಮಿ ಅಲೆಗಳು ಕಡಲತೀರಕ್ಕೆ ತಲುಪುವ ಮುನ್ಸೂಚನೆಯ ಸಮಯವನ್ನು ಇನ್ನು ಮುಂದೆ ನಾಸಾದ ಜಾಗತಿಕ ಸ್ಥಿತಿ ಪದ್ಧತಿ ಕೇಂದ್ರಗಳು ಖಚಿತವಾಗಿ ಅರಿಯಲಿವೆ ಎಂಬುದನ್ನು ಟೋನಿ ಪ್ರಾತ್ಯಕ್ಷಿಕೆ ಮೂಲಕ ಪ್ರದರ್ಶಿಸಿದರು. ಈ ವರೆವಿಗೂ ಸುನಾಮಿ ಗಾತ್ರಗಳ ಮುನ್ಸೂಚನೆಯನ್ನು ಭೂಕಂಪನದ ವಿಸ್ತಾರದ ಆಧಾರದ ಮೇಲೆ ನಿರ್ಧರಿಸುವ ಪದ್ಧತಿಯಿತ್ತು. ಆದರೆ ಈ ಪದ್ಧತಿಯಿಂದ ಬಲವಾದ ಸುನಾಮಿ ಅಲೆಗಳ ಖಚಿತ ಸೂಚನೆಗಳನ್ನು ಪಡೆಯಲು ಸಾಧ್ಯವಿಲ್ಲ ಎಂಬುದು ಇತ್ತೀಚಿನ ಅಧ್ಯಯನಗಳಿಂದ ವ್ಯಕ್ತವಾಗಿತ್ತು.

 2007: ಅಂಧರಿಗೂ ಭಗವದ್ಗೀತೆ ಓದುವ ಸೌಭಾಗ್ಯವನ್ನು ಕಲ್ಪಿಸಿಕೊಡುವ ಪ್ರಯತ್ನವನ್ನು ರಾಷ್ಟ್ರದಲ್ಲೇ ಪ್ರಥಮ ಬಾರಿಗೆ ಬೆಂಗಳೂರಿನ ರೋಟರಿ ಸಂಸ್ಥೆ ಕಬ್ಬನ್ ಪಾರ್ಕ್ ಶಾಖೆ ಮಾಡಿತು. ಸ್ವಾಮಿ ಚಿನ್ಮಯಾನಂದರು 29 ಆವೃತ್ತಿಗಳಲ್ಲಿ ವಿಶ್ಲೇಷಿಸಿದ ಭಗವದ್ಗೀತೆಯ ಬ್ರೈಲ್ ಲಿಪಿ ಆವೃತ್ತಿಯನ್ನು ಚಿನ್ಮಯ ಮಿಷನ್ ಮುಖ್ಯಸ್ಥ ಬ್ರಹ್ಮಾನಂದ ಸ್ವಾಮೀಜಿ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು.

2007: ಇರಾಕಿನ ಬಾಗ್ದಾದ್ ನಗರದ ಜನ ನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ ಆತ್ಮಾಹುತಿ ದಳದ ಉಗ್ರಗಾಮಿಯೊಬ್ಬ  ಲಾರಿಯನ್ನು ಸ್ಫೋಟಗೊಳಿಸಿದ ಪರಿಣಾಮವಾಗಿ ಕನಿಷ್ಠ 121 ಜನ ಮೃತರಾಗಿ, 226ಕ್ಕೂ ಹೆಚ್ಚು ಜನ ಗಾಯಗೊಂಡರು. ಟೈಗ್ರಿಸ್ ನದಿ ದಡದಲ್ಲಿ ಸುನ್ನಿ ಅರಬ್ಬರು, ಶಿಯಾಗಳು ಮತ್ತು ಕುರ್ದರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಬಾಗ್ದಾದ್ ಸಮೀಪದ ಅಲ್ ಸದ್ರಿಯಾ ಪ್ರದೇಶದಲ್ಲಿ ಈ ಭೀಕರ ಸ್ಫೋಟ ಸಂಭವಿಸಿತು. ಸ್ಫೋಟಕ್ಕೆ ತುತ್ತಾದ ಬಹುತೇಕ ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿದರು. ನವೆಂಬರ್ 23ರಿಂದೀಚೆಗೆ ಇರಾಕಿನಲ್ಲಿ ಸಂಭವಿಸಿರುವ ದಾಳಿಗಳಲ್ಲಿ ಇದು ಅತ್ಯಂತ ಭೀಕರ ದಾಳಿ. ನವೆಂಬರ್ 23ರಂದು ನಡೆದ ಕಾರು ಬಾಂಬ್ ದಾಳಿಯಲ್ಲಿ 200ಕ್ಕೂ ಜನ ಮೃತರಾಗಿದ್ದರು. 

2007: ಬಿಹಾರಿನ ಪಟ್ನಾದಲ್ಲಿ ಹೊಸದಾಗಿ ನಿರ್ಮಿಸಲಾದ ಮಹಾಬೋಧಿ ಸಂಸ್ಥೆಯ ಜಯಶ್ರೀ ಮಹಾಬೋಧಿ ವಿಹಾರ ದೇವಸ್ಥಾನದಲ್ಲಿ ಬುದ್ಧನ ಪವಿತ್ರ ಅವಶೇಷಗಳನ್ನು ಇರಿಸಲಾಯಿತು. ಟಿಬೆಟಿಯನ್ನರ ಧಾರ್ಮಿಕ ಗುರು ದಲೈಲಾಮಾ ಅವರ ನೇತೃತ್ವದಲ್ಲಿ ವೇದಘೋಷಗಳ ಮಧ್ಯೆ ಈ ಅವಶೇಷಗಳನ್ನು ಶುದ್ಧಗೊಳಿಸಲಾಯಿತು. ಶ್ರೀಲಂಕಾದ ಐವರು ಬೌದ್ಧ ಭಿಕ್ಷುಗಳು ಈ ಅವಶೇಷಗಳನ್ನು ತೆಗೆದುಕೊಂಡು ಬಂದಿದ್ದರು. ಬುದ್ಧನ ಇಬ್ಬರು ಪ್ರಮುಖ ಶಿಷ್ಯರಾದ ಸರಿಪುತ್ತ ಮತ್ತು ಮೊದ್ಗಲ್ಯಾಯನ ಅವರ ಅವಶೇಷಗಳನ್ನೂ ಇದೇ ಮಂದಿರದಲ್ಲಿ ಇರಿಸಲಾಯಿತು.

2007: ಚಿತ್ರನಟಿ ನಂದಿತಾದಾಸ್, ಫ್ಯಾಷನ್ ವಿನ್ಯಾಸಗಾರ್ತಿ ರೀತು ಬೆರಿ ಮತ್ತು ಕೈಗಾರಿಕೋದ್ಯಮಿ ಕಿರಣ್ ಮಜುಂದಾರ್ ಅವರಿಗೆ ನವದೆಹಲಿಯಲ್ಲಿ ಕಲ್ಪನಾ ಚಾವ್ಲಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

2007: ಕ್ರಿಕೆಟ್ ಒಳಗೊಂಡಂತೆ ಪ್ರಮುಖ ಕ್ರೀಡೆಗಳ ಪ್ರಸಾರ ಹಕ್ಕು ಪಡೆದಿರುವ ಖಾಸಗಿ ಚಾನೆಲ್ ಗಳು ನೇರ ಪ್ರಸಾರವನ್ನು ದೂರದರ್ಶನದ ಜೊತೆಗೆ ಹಂಚಿಕೊಳ್ಳಬೇಕು ಎಂಬ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಅಬ್ದುಲ್ ಕಲಾಂ ಒಪ್ಪಿಗೆ ನೀಡಿದ್ದು, ಅದು ಈ ದಿನ ನಡುರಾತ್ರಿಯಿಂದಲೇ ಜಾರಿಗೆ ಬಂದಿತು.

2007: ಯಕ್ಷಗಾನ ಕಲಾವಿದ, ಅರ್ಥದಾರಿ ದೇರಾಜೆ ಸೀತಾರಾಮಯ್ಯ ಅವರ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿಗೆ ಸಾಹಿತಿ ಎಸ್. ಎಲ್, ಭೈರಪ್ಪ ಆಯ್ಕೆಯಾದರು.

2007: ವಿಶ್ವ ವಿಖ್ಯಾತ ವಿಜ್ಞಾನಿ `ಜೀನ್ ಥೆರೆಪಿ'ಯ ಜನಕ ಎಂದೇ ಪರಿಗಣಿತರಾದ ಅಮೆರಿಕದ ವಿಲಿಯಂ ಫ್ರೆಂಚ್ ಆಂಡರ್ಸನ್ (70) ಅವರಿಗೆ ಲಾಸ್ ಏಂಜೆಲಿಸ್ನ ನ್ಯಾಯಾಲಯವೊಂದು ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ್ದಕ್ಕಾಗಿ 14 ವರ್ಷಗಳ ಸೆರೆವಾಸ ವಿಧಿಸಿತು.

2007: ಕೋಚಿಯ ಶಸ್ತ್ರಚಿಕಿತ್ಸಕರಾದ ಪಾವುಲ್ ವಿ ಜೋಸೆಫ್ ಮತ್ತು ವಿನೋದ ಬಿ. ನಾಯರ್ ಅವರು  44 ವರ್ಷದ ಸುರೇಶ ಬಾಬು ಎಂಬ ವ್ಯಕ್ತಿಯ ಮೇಲೆ ಐದೂವರೆ ಗಂಟೆಗಳ ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿ ಆತನ ನಾಲಿಗೆಯನ್ನು ಮಾಮೂಲಿ ಗಾತ್ರಕ್ಕೆ ಇಳಿಸಿದರು. ಆತನ ನಾಲಿಗೆ ಮಾಮೂಲಿ ಗಾತ್ರಕ್ಕಿಂತ ಮೂರುಪಟ್ಟು ದೊಡ್ಡದಾಗಿತ್ತು. ಅಂದರೆ 13.5 ಸೆಂ.ಮೀ. ಉದ್ದ ಹಾಗೂ 12 ಸೆಂ.ಮೀ. ಅಗಲವಾಗಿತ್ತು! ಈ ಶಸ್ತ್ರಚಿಕತ್ಸೆಗೆ ವೈದ್ಯರು ಅತ್ಯಾಧುನಿಕ `ಹಾರ್ಮೋನಿಕ್ ಸ್ಕಾಲ್ಪೆಲ್' ಎಂಬ ಉಪಕರಣ ಬಳಸಿದರು.
2006: ಕರ್ನಾಟಕದ 18ನೇ ಮುಖ್ಯಮಂತ್ರಿಯಾಗಿ  ಎಚ್. ಡಿ. ಕುಮಾರಸ್ವಾಮಿ ಮತ್ತು 5ನೇ ಉಪಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದರು. ಇದರೊಂದಿಗೆ ಜನತಾದಳ (ಎಸ್)- ಬಿಜೆಪಿ ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂತು. ರಾಜ್ಯದಲ್ಲಿ ಹೊಸ ರಾಜಕೀಯ ಶಕೆ ಆರಂಭವಾಯಿತು.

2006: ಸೇನಾ ನ್ಯಾಯಾಲಯದ ವಿಚಾರಣೆಗೆ ಒಳಗಾಗಿದ್ದ ಭಾರತೀಯ ವಾಯುಪಡೆಯ ಪ್ರಪ್ರಥಮ ಮಹಿಳಾ ಫ್ಲೈಯಿಂಗ್ ಅಧಿಕಾರಿ ಅಂಜಲಿ ಗುಪ್ತಾ ಅವರನ್ನು ಸೇನೆಯಿಂದ ವಜಾ ಮಾಡಲಾಯಿತು. ಈ ಸಂಬಂಧ ಸೇನಾ ನ್ಯಾಯಾಲಯ ನೀಡಿದ್ದ ಆದೇಶವನ್ನು ವಾಯುಪಡೆ ಮುಖ್ಯಸ್ಥ ಎಸ್.ಪಿ. ತ್ಯಾಗಿ ಎತ್ತಿ ಹಿಡಿದರು. ಇದರೊಂದಿಗೆ ಅಂಜಲಿ ಅವರು ತಮ್ಮ ಕೆಲವು ಸಹೋದ್ಯೋಗಿಗಳ ವಿರುದ್ಧ ಮಾಡಿದ್ದ ಲೈಂಗಿಕ ಕಿರುಕುಳದ ಆರೋಪ ಸೇರಿದಂತೆ ಇತರ ಆರೋಪಗಳೆಲ್ಲ ಬಿದ್ದು ಹೋದವು. 

1982: ಧರ್ಮಸ್ಥಳದ `ರತ್ನಗಿರಿ' ಬೆಟ್ಟದ ಮೇಲೆ ಪ್ರತಿಷ್ಠಾಪಿಸಲಾಗಿರುವ ಭಗವಾನ್ ಬಾಹುಬಲಿಯ ಮೊದಲ ಮಹಾಮಸ್ತಕಾಭಿಷೇಕ ಈದಿನ ಸಂಭ್ರಮೋತ್ಸಾಹದೊಂದಿಗೆ ನಡೆಯಿತು.

1968: ಬಾಂಬೆಯ (ಈಗಿನ ಮುಂಬೈ) ಬ್ರಾಬೋರ್ನ್ ಸ್ಟೇಡಿಯಂನಲ್ಲಿ ಮೊತ್ತ ಮೊದಲ `ಫ್ರಾಂಕೀ' ಮಾರಾಟಗೊಂಡಿತು. ಅಮರಜಿತ್ ಟಿಬ್ ಅವರ ಮಿದುಳಿನ ಕೂಸಾದ ಇದರ ಹೆಸರನ್ನು ಸರ್ ಫ್ರಾಂಕ್ ವೊರೆಲ್ ಅವರಿಂದ ಪಡೆಯಲಾಯಿತು.

1966: ಸೋವಿಯತ್ ಬಾಹ್ಯಾಕಾಶ ನೌಕೆ `ಲ್ಯೂನಾ 9' ಮೊತ್ತ ಮೊದಲ ರಾಕೆಟ್ ನಿಯಂತ್ರಣದ ನೆರವಿನೊಂದಿಗೆ ಚಂದ್ರನಲ್ಲಿ ಇಳಿಯಿತು.

1959: ರಾಕ್ ಸಂಗೀತದ ಜನಕ ಎಂದೇ ಖ್ಯಾತರಾದ ಅಮೆರಿಕನ್ ಗಾಯಕ ಬುಡ್ಡಿ ಹಾಲ್ಲಿ ಅಮೆರಿಕದಲ್ಲಿ ಸಂಭವಿಸಿದ ವಿಮಾನ ಅಪಘಾತವೊಂದರಲ್ಲಿ ರಿಚ್ಚೀ ವ್ಯಾಲೆನ್ಸ್ ಮತ್ತು ಜೆ.ಪಿ. ರಿಚಡರ್್ಸನ್ ಜೊತೆಗೆ ಅಸು ನೀಗಿದರು. ಆಗ ಹಾಲ್ಲಿಯ ಪ್ರಾಯ ಕೇವಲ 22 ವರ್ಷ.

1959: ಅಪರೂಪದ ಸಂಗೀತ ರಚನೆಗಾರ, ಧ್ವನಿ ಅನ್ವೇಷಕ, ರಂಗಭೂಮಿ ನಟ ಅನಂತರಾಮ್ (ಜೆರ್ರಿ) ಅವರು ಆರ್. ಜಿ. ಕೃಷ್ಣನ್- ಸೀತಾಲಕ್ಷ್ಮಮ್ಮ ದಂಪತಿಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು. ಬಿರುಗಾಳಿ, ಮಳೆ ಶಬ್ದ, ಹರಿವ ನದಿ ನೀರಿನ ಜುಳು ಜುಳು ನಾದ ಮುಂತಾದ ಹಿನ್ನೆಲೆ ಸಂಗೀತ ಶಬ್ದವನ್ನು ಅನುಪಯೋಗಿ ವಸ್ತುಗಳಾದ ಕರಟ, ಕಲ್ಲು, ಗೋಲಿ, ಬಿದಿರು, ಪರಂಗಿ ಕೊಂಬು, ಪ್ಲಾಸ್ಟಿಕ್ ಬಕೆಟಿನಿಂದ ಹೊರಹೊಮ್ಮಿಸುವ ನಾದ ವಿಶೇಷತೆಯನ್ನು ಕರಗತ ಮಾಡಿಕೊಂಡಿದ್ದ ಅನಂತರಾಮ್ ತಮ್ಮದೇ `ರಂಗಸ್ವರ' ಸಂಸ್ಥೆಯ ಮೂಲಕ ರಂಗಗೀತೆಗಳ ಪ್ರಚಾರದಲ್ಲಿ ನಿರತರಾದ ವ್ಯಕ್ತಿ.

1938: ಭಾರತದ ಚಿತ್ರ ನಟಿ ವಹೀದಾ ರೆಹಮಾನ್ ಹುಟ್ಟಿದ ದಿನ.

1928: ಖ್ಯಾತ ಸಾಹಿತಿ ಪ್ರೊ. ಎಚ್. ತಿಪ್ಪೇರುದ್ರ ಸ್ವಾಮಿ (1928-1994) ಶಿವಮೊಗ್ಗ ಜಿಲ್ಲೆಯ ಹೊನ್ನಾಳಿಯ ಬಡ ಕುಟುಂಬದಲ್ಲಿ ಜನಿಸಿದರು.

1925: ವಿಕ್ಟೋರಿಯಾ ಟರ್ಮಿನಸ್ನಿಂದ ಕುರ್ಲಾವರೆಗೆ ಗ್ರೇಟ್ ಇಂಡಿಯನ್ ಪೆನಿನ್ ಸ್ಯುಲರ್ ರೈಲ್ವೆಯ ಬಂದರು ಶಾಖೆಯ ಆರಂಭದೊಂದಿಗೆ ಭಾರತದಲ್ಲಿ ಮೊತ್ತ ಮೊದಲ ಎಲೆಕ್ಟ್ರಿಕ್ ರೈಲುಸೇವೆ ಆರಂಭಗೊಂಡಿತು.

1928: ಖ್ಯಾತ ಸಾಹಿತಿ ಪ್ರೊ. ಎಚ್. ತಿಪ್ಪೇರುದ್ರ ಸ್ವಾಮಿ (1928-1994) ಶಿವಮೊಗ್ಗ ಜಿಲ್ಲೆಯ ಹೊನ್ನಾಳಿಯ ಬಡ ಕುಟುಂಬದಲ್ಲಿ ಜನಿಸಿದರು.

1924: ಅಮೆರಿಕದ 28ನೇ ಅಧ್ಯಕ್ಷ ವುಡ್ರೋ ವಿಲ್ಸನ್ ವಾಷಿಂಗ್ಟನ್ನಿನಲ್ಲಿ ತಮ್ಮ 67ನೇ ವಯಸ್ಸಿನಲ್ಲಿ ನಿಧನರಾದರು. ಹೊಸದಾಗಿ ನಿರ್ಮಿಸಲಾದ ನ್ಯಾಷನಲ್ ಕೆಥೆಡ್ರಲ್ನಲ್ಲಿ ಅವರ ಪಾರ್ಥಿವ ಶರೀರವನ್ನು ಸಮಾಧಿ ಮಾಡಲಾಯಿತು. ರಾಜಧಾನಿಯಲ್ಲಿ ಸಮಾಧಿ ಮಾಡಲಾದ ಮೊತ್ತ ಮೊದಲ ಅಧ್ಯಕ್ಷ ಈತ.

1916: ಮಹಾತ್ಮಾ ಗಾಂಧಿಯವರು ಬನಾರಸ್ ಹಿಂದು ವಿಶ್ವ ವಿದ್ಯಾಲಯವನ್ನು ರಾಷ್ಟ್ರಕ್ಕೆ ಅರ್ಪಿಸಿದರು. ವಾರಣಾಸಿಯಲ್ಲಿ ಇರುವ ಈ ವಿಶ್ವವಿದ್ಯಾಲಯ ವಿಶ್ವದ ಮೂರು ಅತಿದೊಡ್ಡ ವಸತಿ ವ್ಯವಸ್ಥೆ ಉಳ್ಳ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದ್ದು, 1300 ಎಕರೆ ಪ್ರದೇಶದಲ್ಲಿ ಹರಡಿದೆ. 124 ಸಂಯೋಜಿತ ಕಾಲೇಜುಗಳು ಸೇರಿ ಆರು ಉನ್ನತ ಅಧ್ಯಯನ ಕೇಂದ್ರಗಳನ್ನು ಒಳಗೊಂಡಿದೆ.

1867: ರಾಜಕುಮಾರ ಮುತ್ಸುಹಿತೊ ಜಪಾನಿನ ಚಕ್ರವರ್ತಿ ಮೀಜಿ ಆದರು. ಮತ್ತು 1912ರವರೆಗೆ ಆಳ್ವಿಕೆ ನಡೆಸಿದರು.

1821: ಎಲಿಜಬೆತ್ ಬ್ಲಾಕ್ವೆಲ್ (1821-1910) ಹುಟ್ಟಿದ ದಿನ. ಆಂಗ್ಲೊ ಇಂಡಿಯನ್ ವೈದ್ಯಳಾದ ಈಕೆ ಆಧುನಿಕ ಕಾಲದ ಮೊತ್ತ ಮೊದಲ ಮಹಿಳಾ ವೈದ್ಯಳೆಂಬ ಖ್ಯಾತಿಗೆ ಪಾತ್ರಳಾಗಿದ್ದಾಳೆ.

PARYAYA: ಇಂದಿನ ಇತಿಹಾಸ History Today ಫೆಬ್ರುವರಿ 03: ಇಂದಿನ ಇತಿಹಾಸ ಫೆಬ್ರುವರಿ 3 2024: ನವದೆಹಲಿ :  ಹಿರಿಯ ಬಿಜೆಪಿ ನಾಯಕ , ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ...