ಸದ್ದಿಲ್ಲದೆ ಸುದ್ದಿ ಮಾಡುತ್ತಿದೆ… ಆತ್ಮ ನಿರ್ಭರ ಗ್ರಾಮ ಪಂಚಾಯಿತಿ..!
ಅಂದು ಭಾನುವಾರ. 2023ರ ಫೆಬ್ರುವರಿ 12. ಬೆಳಗ್ಗೆ ಚಹಾ ಕುಡಿಯುತ್ತಾ ʼಪ್ರಜಾವಾಣಿʼ ಪತ್ರಿಕೆ ಕೈಗೆತ್ತಿಕೊಂಡರು.
ಪತ್ರಿಕೆ ಓದುತ್ತಾ ಸಾಪ್ತಾಹಿಕ ಪುರವಣಿ ಕಡೆಗೆ ಗಮನ ಹರಿಸಿದರು. ಅಲ್ಲಿ “ಆತ್ಮ ನಿರ್ಭರ ಗ್ರಾಪಂ ಕಟ್ಟಲು ಕೈಪಿಡಿʼ ಎಂಬ ಬರಹದ ಕಡೆಗೆ ಅವರ ಗಮನ ಹರಿಯಿತು. ಪೂರ್ತಿಯಾಗಿ ಅದನ್ನು ಓದಿದರು. ಅದು ʼ21ನೇ ಶತಮಾನದ ಆತ್ಮನಿರ್ಭರ ಗ್ರಾಮ ಪಂಚಾಯತಿʼ ಪುಸ್ತಕದ ಬಗೆಗಿನ ಬರಹ. ಓದಿ ಮುಗಿಸುತ್ತಿದ್ದಂತೆ ಈ ಪುಸ್ತಕವನ್ನು ಕೊಳ್ಳಲೇಬೇಕು ಎಂದು ಅನಿಸಿತು. ಕೂಡಲೇ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿನ ಸಂಪೂರ್ಣ ಸ್ವರಾಜ್ ಸಂಸ್ಥೆಯ ವಿಳಾಸವನ್ನು ಗುರುತು ಹಾಕಿಕೊಂಡು, ಅಲ್ಲಿಗೆ ದೌಡಾಯಿಸಿದರು. ಪುಸ್ತಕದ ಒಂದು ಪ್ರತಿಯನ್ನು ಕೊಂಡು ಕೊಂಡು ಮನೆಗೆ ವಾಪಸಾದರು. ಮನೆಗೆ ವಾಪಸಾಗುತ್ತಲೇ ಅದರ ಪುಟಗಳನ್ನು ತಿರುವಿ ಹಾಕುತ್ತಾ ಹೋದರು.
ಪುಸ್ತಕವನ್ನು ಓದುತ್ತಿದ್ದಂತೆಯೇ ಅವರಿಗೆ ಮನಸ್ಸಿಗೆ ಬಂದ ಯೋಚನೆ- ʼನಾನು ಯಾಕೆ ಅರಸೀಕೆರೆ ತಾಲೂಕಿನಲ್ಲಿ ಇರುವ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಈ ಪುಸ್ತಕದ ಒಂದೊಂದು ಪ್ರತಿಯನ್ನು ಕೊಡಬಾರದು?”. ವೆಂಕಟೇಶ ಮೂರ್ತಿ ಅವರು ತಡ ಮಾಡಲಿಲ್ಲ. ಸಂಪೂರ್ಣ ಸ್ವರಾಜ್ ಸಂಸ್ಥೆಯ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ಟ್ರಸ್ಟಿ ಡಾ. ಶಂಕರ ಕೆ. ಪ್ರಸಾದ್ ಅವರನ್ನು ಸಂಪರ್ಕಿಸಿದರು. ಅರಸೀಕೆರೆ ತಾಲೂಕಿನ ನಲ್ವತ್ತನಾಲ್ಕು ಗ್ರಾಮ ಪಂಚಾಯಿತಿಗಳಿಗೆ ಬೇಕಾಗುವಷ್ಟು ಪುಸ್ತಕಗಳನ್ನು ಖರೀದಿಸಿದರು. ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳ ಮೂಲಕ ಎಲ್ಲ ಗ್ರಾಮ ಪಂಚಾಯಿತಿಗಳಿಗೂ ಪುಸ್ತಕ ತಲುಪಿಸುವ ವ್ಯವಸ್ಥೆ ಮಾಡಿದರು.
ಇಷ್ಟಕ್ಕೂ ಪ್ರಜಾವಾಣಿಯ ಆ ಲೇಖನದಲ್ಲಿ ಇದ್ದುದಾದರೂ ಏನು? ಪೂರ್ತಿ ಲೇಖನವನ್ನೇನೂ ಇಲ್ಲಿ ಹೇಳುವುದಿಲ್ಲ. ಆದರೆ ಆದರೆ ಸಾರಾಂಶ ಇಷ್ಟು: “ಈ ಕೃತಿ ಯಾರಿಗಾಗಿ ಎನ್ನುವ ಪ್ರಶ್ನೆಗೆ ಲೇಖಕರು ಆರಂಭದಲ್ಲೇ ಸ್ಪಷ್ಟ ಉತ್ತರ ನೀಡಿದ್ದಾರೆ. ಗ್ರಾಮದ ಅಭಿವೃದ್ಧಿಯ ಜವಾಬ್ದಾರಿ ಹೊತ್ತ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನೇ ಈ ಕೃತಿಯ ಮೊದಲ ಓದುಗರನ್ನಾಗಿ ಲೇಖಕರು ಆಯ್ಕೆ ಮಾಡಿದ್ದಾರೆ. ಜೊತೆಗೆ ಚುನಾಯಿತ ಪ್ರತಿನಿಧಿಗಳು, ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಕಾರ್ಯದರ್ಶಿಗಳಿಗೂ ಇದು ಮಾರ್ಗದರ್ಶಿಯಾಗಬಲ್ಲುದು. ಜೊತೆಗೆ ಇಲ್ಲಿರುವ ವಿಷಯಗಳನ್ನು ಅರಿತರೆ ಗ್ರಾಮದ ಪ್ರತಿಯೊಬ್ಬ ನಾಗರಿಕನೂ ತನ್ನ ಹಕ್ಕುಗಳು ಹಾಗೂ ತನ್ನ ಗ್ರಾಮಕ್ಕೆ ಸಿಗಬೇಕಾದ ಸವಲತ್ತುಗಳ ಬಗ್ಗೆ ಸ್ಥಳೀಯ ಸರ್ಕಾರಕ್ಕೆ ಆಗ್ರಹಿಸಬಹುದಾಗಿದೆ.”
ಪ್ರಜಾವಾಣಿ ಅಷ್ಟೇ ಅಲ್ಲ, ವಿಜಯ ಕರ್ನಾಟಕ, ಕನ್ನಡ ಪ್ರಭ ಪತ್ರಿಕೆಗಳಲ್ಲೂ ಈ ಪುಸ್ತಕದ ಬಗ್ಗೆ ವಿವರಗಳು ಬಂದಿವೆ. ಪುಸ್ತಕದ ಬಗ್ಗೆ ವಿವರ ಆ ಪುಸ್ತಕ ರೂಪುಗೊಂಡದ್ದರ ಹಿಂದಿನ ಶ್ರಮ, ಅದರಲ್ಲಿ ವಿವರಿಸಿರುವ ವಿವಿಧ ವಿಚಾರಗಳ ಬಗ್ಗೆ ಈ ಪತ್ರಿಕೆಗಳು ಬರೆದಿವೆ. ಭಾರತವು ಆತ್ಮ ನಿರ್ಭರ ಆಗಬೇಕಿದ್ದರೆ ಹೇಗೆ ಮೊದಲು ಗ್ರಾಮಗಳು ಆತ್ಮ ನಿರ್ಭರ ಆಗಬೇಕು, ಗ್ರಾಮದ ಅಭ್ಯುದಯಕ್ಕೆ ಪಂಚಾಯಿತಿಗಳು ಹೇಗೆ ಕೆಲಸ ಮಾಡಬಹುದು, ನವೀನ ತಂತ್ರಜ್ಞಾನಗಳನ್ನು ಬಳಸಬಹುದು ಎಂಬಿತ್ಯಾದಿ ವಿವರಗಳು ಪುಸ್ತಕದಲ್ಲಿ ಇರುವ ಬಗ್ಗೆ ಉಲ್ಲೇಖಿಸಿವೆ.
ಕೊರವಂಕದ ವೆಂಕಟೇಶ ಮೂರ್ತಿಯವರ ಹಾಗೆ ಹತ್ತಾರು ಮಂದಿ ಇದೀಗ ಈ ಪುಸ್ತಕದ ಬಗ್ಗೆ ಗಮನಿಸುತ್ತಿದ್ದಾರೆ. ಗದಗದಲ್ಲಿ ಇತ್ತೀಚೆಗೆ ನಡೆದ ʼಸ್ವಯಂ ಆಡಳಿತದ ದೇಶೀ ಮಾದರಿಗಳುʼ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಪ್ರತಿನಿಧಿಗಳು ಈ ಪುಸ್ತಕದ ಬಗ್ಗೆ ಕುತೂಹಲದಿಂದ ವಿಚಾರಿಸಿದರು. ಬಹಳಷ್ಟು ಮಂದಿ ಪುಸ್ತಕಗಳಿಗಾಗಿ ʼಆರ್ಡರ್ʼ ನೀಡಿದರು. ಬಹಳಷ್ಟು ಮಂದಿ ಕುತೂಹಲದಿಂದ ಪುಸ್ತಕದ ಬಗ್ಗೆ ವಿಚಾರಿಸುತ್ತಿದ್ದಾರೆ. ವಾಟ್ಸಪ್ ಸಂದೇಶಗಳನ್ನೂ ಕಳುಹಿಸುತ್ತಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್ ಅವರು ಕೂಡಾ ಇತ್ತೀಚೆಗೆ ತಮ್ಮನ್ನು ಭೇಟಿ ಮಾಡಿದ್ದ ಡಾ. ಶಂಕರ ಪ್ರಸಾದ್ ಅವರ ಜೊತೆಗೆ ಪುಸ್ತಕದ ಬಗ್ಗೆ ಕುತೂಹಲದಿಂದ ವಿಚಾರಿಸಿದರು.
ಪುಸ್ತಕದ ಕನ್ನಡ ಆವೃತ್ತಿಯ ಪ್ರತಿಗಳನ್ನು ಸಂಪೂರ್ಣ ಸ್ವರಾಜ್ ಫೌಂಡೇಶನ್ನಿನ ವೆಬ್ ಸೈಟ್ ಮೂಲಕ (ಲಿಂಕ್: https://www.sampoornaswaraj.org/) ಖರೀದಿಸಬಹುದು. ಭಾರತ ಆತ್ಮ ನಿರ್ಭರ ಆಗಬೇಕು ಎಂಬುದಾಗಿ ನೀವು ಬಯಸುತ್ತಿದ್ದರೆ, ಪಂಚಾಯತಿಯನ್ನು ಮೊದಲು ಆತ್ಮ ನಿರ್ಭರವನ್ನಾಗಿ ಮಾಡುವತ್ತ ಗಮನಿಸಿ. ಅದಕ್ಕೆ ಮಾರ್ಗದರ್ಶಿ ಈ ಪುಸ್ತಕ- ಈಗಲೇ ಕೊಂಡುಕೊಳ್ಳಿ.
ವಿಡಿಯೋ ನೋಡಲು ಈ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ:
No comments:
Post a Comment