ಪಾಕ್ನಲ್ಲಿ ಐಸಿಸ್ ಬಾಂಬ್: 100 ಸಾವು
ಕರಾಚಿ: ಆತ್ಮಾಹುತಿ ಬಾಂಬ್ ದಾಳಿಯಲ್ಲಿ 100ಕ್ಕೈ ಹೆಚ್ಚು ಜನ ಸಾವನ್ನಪ್ಪಿ, ಇತರ ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಾಕಿಸ್ತಾನದ ಸಿಂಧ್ ಪ್ರದೇಶದಲ್ಲಿರುವ ಸೆಹವಾನ್ ಪಟ್ಟಣದ ಸೂಫಿ ಶಹಬಾಜ್ ಕಲಂದರ್ ಪ್ರಾರ್ಥನಾ ಮಂದಿರದ ಬಳಿ 16 ಫೆಬ್ರುವರಿ 2017ರ ಗುರುವಾರ ಘಟಿಸಿತು.ಒಂದು ವಾರದ ಅವಧಿಯೊಳಗೆ ಪಾಕಿಸ್ತಾನದಲ್ಲಿ ಸಂಭವಿಸಿದ ಐದನೇ ಆತ್ಮಾಹುತಿ ಬಾಂಬ್ ದಾಳಿ ಇದು. ಧಮಲ್–ಎ–ಸೂಫಿ ಎಂಬ ಧಾರ್ಮಿಕ ಕಾರ್ಯಕ್ರಮದಲ್ಲಿ ನೆರದಿದ್ದ ನೂರಾರು ಭಕ್ತಾದಿಗಳನ್ನು ಗುರಿಯಾಗಿಸಿಕೊಂಡು ಬಾಂಬ್ ದಾಳಿ ನಡೆಸಲಾಯಿತು.
30 ಮೃತದೇಹಗಳನ್ನು ಮತ್ತು ಗಾಯಗೊಂಡಿರುವವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಮೊಯಿನುದ್ದೀನ್ ಸಿದ್ದಿಕಿ ತಿಳಿಸಿದ್ದಾರೆ. ಸೆಹವಾನ್ ಪಟ್ಟಣದ ಸುತ್ತುಮುತ್ತಲಿನ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ದಾಳಿಯಲ್ಲಿ ಕನಿಷ್ಠ 100 ಜನ ಸಾವನ್ನಪ್ಪಿದ್ದಾರೆ ಎಂಬ ವರದಿಗಳು ಬಂದಿದ್ದು, ಇತರ ಕೆಲವು ವರದಿಗಳು ಸಾವಿನ ಸಂಖ್ಯೆ ಅಂದಾಜು 50 ಎಂದು ತಿಳಿಸಿದವು. ಪ್ರತಿ ಗುರುವಾರ ಭಕ್ತಾದಿಗಳು ಸಾಮೂಹಿಕವಾಗಿ ಪ್ರಾರ್ಥನೆ ನೆರವೇರಿಸಲು ಈ ಸ್ಥಳದಲ್ಲಿ ಜಮಾಯಿಸುತ್ತಿದ್ದರು. ಮಹಿಳೆಯರಿಗಾಗಿ ಮೀಸಲಿರಿಸುತ್ತಿದ್ದ ಸ್ಥಳದಲ್ಲಿ ಪ್ರಬಲ ಬಾಂಬ್ ಸ್ಫೋಟಿಸಿತು.
ಸ್ಫೋಟ ನಡೆದ ಸ್ಥಳ ಪಾಕಿಸ್ತಾನ ಮತ್ತು ಅಫಘಾನಿಸ್ತಾನದ ಧಾರ್ಮಿಕ ಸೂಫಿ ಸಂತತಿಯ ಪ್ರಸಿದ್ಧ ತತ್ವಜ್ಞಾನಿ ಮತ್ತು ಕವಿ ಲಾಲ್ ಶಹಬಾಜ್ ಖಲಂದರ್ ಅವರಿಗೆ ಸೇರಿದೆ. ಸ್ಫೋಟದ ಹೊಣೆಯನ್ನು ಐಸಿಸ್ ಉಗ್ರ ಸಂಘಟನೆ ಹೊತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.