ಇಂದಿನ ಇತಿಹಾಸ History Today ಜನವರಿ 09
2018: ನವದೆಹಲಿ: ಕರ್ನಾಟಕ ಮತ್ತು ತಮಿಳುನಾಡಿನ ನಡುವಣ ದಶಕಗಳಷ್ಟು ಹಳೆಯದಾದ ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ತಿಂಗಳ ಒಳಗಾಗಿ ತೀರ್ಪು ನೀಡುವ ಬಗ್ಗೆ ಸುಪ್ರೀಂಕೋರ್ಟ್ ಸುಳಿವು ನೀಡಿತು. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಮತ್ತು ನ್ಯಾಯಮೂರ್ತಿಗಳಾದ
ಎ.ಎಂ. ಖಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಅವನ್ನು ಒಳಗೊಂಡ ಪೀಠವು ನಾಲ್ಕು ವಾರಗಳಲ್ಲಿ ತಾನು ತೀರ್ಪು ನೀಡಿದ ಬಳಿಕವಷ್ಟೇ ಯಾವುದೇ ವೇದಿಕೆಯು ಕಾವೇರಿ ಜಲಾನಯನಕ್ಕೆ ಸಂಬಂಧಿಸಿದ ವಿಷಯವನ್ನು ಮುಟ್ಟಲು ಸಾಧ್ಯ ಎಂದು ಹೇಳಿತು. ವಿಷಯಕ್ಕೆ ಸಂಬಂಧಿಸಿದಂತೆ ಎರಡು ದಶಕಗಳಲ್ಲಿ ಸಾಕಷ್ಟು ಗೊಂದಲ ಸೃಷ್ಟಿಸಲಾಗಿದೆ ಎಂದೂ ಪೀಠ ಅಭಿಪ್ರಾಯ ಪಟ್ಟಿತು. ಕಾವೇರಿ ಜಲವಿವಾದ ನ್ಯಾಯಾಧಿಕರಣವು ನೀರು ಹಂಚಿಕೆಗೆ ಸಂಬಂಧಿಸಿದಂತೆ ೨೦೦೭ರಲ್ಲಿ ನೀಡಿದ್ದ ತೀರ್ಪಿನ ವಿರುದ್ಧ ಕರ್ನಾಟಕ, ತಮಿಳುನಾಡು ಮತ್ತು ಕೇರಳ ಸಲ್ಲಿಸಿದ್ದ ಮೇಲ್ಮನವಿಗಳ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ಬಳಿಕ ೨೦೧೭ರ ಸೆಪ್ಟೆಂಬರ್ ೨೦ರಂದು ಸುಪ್ರೀಂಕೋರ್ಟ್ ಪೀಠವು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.
ಬೆಂಗಳೂರು ಮತ್ತು ಸುತ್ತಮುತ್ತಣ ಜಿಲ್ಲೆಗಳ ನಿವಾಸಿಗಳಿಗೆ ಕುಡಿಯುವ ನೀರು ಸರಬರಾಜು ಸಲುವಾಗಿ ನ್ಯಾಯಾಲಯವು ಮಧ್ಯಪ್ರವೇಶ ಮಾಡಬೇಕು ಎಂಬುದಾಗಿ ದಾನಿ ಕಿರಣ್ ಮಜುಂದಾರ್ ಶಾ ನೇತೃತ್ವದ ನಾಗರಿಕರ ಗುಂಪೊಂದು ೨೦೧೬ರಲ್ಲಿ ಸಲ್ಲಿಸಿದ್ದ ಮನವಿಯ ವಿಚಾರಣೆ ಕಾಲದಲ್ಲಿ ಸುಪ್ರೀಂಕೋರ್ಟ್ ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ತೀರ್ಪು ನೀಡುವ ಸುಳಿವನ್ನು ನೀಡಿತು. ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ (ಬೆಂಗಳೂರು ಪೊಲಿಟಿಕಲ್ ಆಕ್ಷನ್ ಕಮಿಟಿ- ಬಿಪಿಎಸಿ) ನೇತೃತ್ವದಲ್ಲಿ ಈ ತಂಡವು ಸುಪ್ರೀಂಕೋರ್ಟನ್ನು
ಸಂಪರ್ಕಿಸಿತ್ತು. ಸಮಿತಿಯ ಅಧ್ಯಕ್ಷರಾದ ಕಿರಣ್ ಮಜುಂದಾರ್ ಶಾ, ಉಪಾಧ್ಯಕ್ಷರಾದ ಇನ್ಫೋಸಿಸ್ ನ ಮಾಜಿ ನಿರ್ದೇಶಕ ಹಾಗೂ ಶಿಕ್ಷಣ ತಜ್ಞ ಮೋಹನದಾಸ ಪೈ ಅವರು ಬೆಂಗಳೂರಿನ ಜನರಿಗೆ ಕುಡಿಯುವ ನೀರಿನ ತೀವ್ರ ಅಗತ್ಯವಿದೆ. ಅವರ ಹಕ್ಕನ್ನು ಸುಪ್ರೀಂಕೋರ್ಟ್ ರಕ್ಷಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು. ಬೆಂಗಳೂರಿನಲ್ಲಿ ಹಿಂಸಾಚಾರಗಳು ಸಂಭವಿಸಿದ ಬಳಿಕ ಅರ್ಜಿದಾರರು ಈ ಅರ್ಜಿಯನ್ನು ಸಲ್ಲಿಸಿದ್ದು, ಬೆಂಗಳೂರು ನಗರ ಮತ್ತು ಆಸುಪಾಸಿನ ಪ್ರದೇಶಗಳ ಕುಡಿಯುವ ನೀರಿನ ಹಕ್ಕುಗಳ ರಕ್ಷಣೆ ಸುಪ್ರೀಂಕೋರ್ಟ್ ಮಧ್ಯ ಪ್ರವೇಶದಿಂದ ಮಾತ್ರ ಸಾಧ್ಯ ಎಂಬ ನಂಬಿಕೆಯಿಂದ ಈ ಅರ್ಜಿ ಸಲ್ಲಿಸಲಾಗಿದೆ ಎಂದು ಬಿಪಿಎಸಿ ಮನವಿ ತಿಳಿಸಿದೆ. ಬೆಂಗಳೂರು ನಗರ ಮತ್ತು ದಕ್ಷಿಣ ಕರ್ನಾಟಕದ ಇತರ ಹಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಇದೆ. ಕೇವಲ ಬೆಂಗಳೂರಿಗೇ ವರ್ಷಕ್ಕೆ ೧೯ ಟಿಎಂಸಿ ನೀರನ್ನು ಕರ್ನಾಟಕದ ಅಧಿಕಾರಿಗಳೂ ಸರಬರಾಜು ಮಾಡಬೇಕಾಗುತ್ತದೆ. ಬೆಂಗಳೂರು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದ ಜಿಲ್ಲೆಗಳಿಗೆ ವರ್ಷಕ್ಕೆ ಅಂದಾಜು ೨೬ ಟಿಎಂಸಿಯಷ್ಟು ಕುಡಿಯುವ ನೀರು ಬೇಕಾಗುತ್ತದೆ ಎಂದು ಬಿಪಿಎಸಿ ವಕೀಲರಾದ ಅಪರ್ಣಾ ಭಟ್ ತನ್ನ ಅರ್ಜಿಯಲ್ಲಿ ತಿಳಿಸಿದರು. ೨೦೧೬-೧೭ರಲ್ಲಿ ನೈಋತ್ಯ ಮುಂಗಾರು ಕರ್ನಾಟಕದ ಬಹುತೇಕ ಭಾಗಗಳಲ್ಲಿ, ವಿಶೇಷವಾಗಿ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ವಿಫಲಗೊಂಡಿದೆ. ಹೀಗಾಗಿ ಕರ್ನಾಟಕದ ಬಹುತೇಕ ಜಲಾಶಯಗಳ ನೀರಿನ ಮಟ್ಟ ಕುಗ್ಗಿದೆ. ಪರಿಣಾಮವಾಗಿ ಜಲಾಶಯಗಳ ದಾಸ್ತಾನು ಕೂಡಾ ಕಡಿಮೆಯಾಗಿದೆ. ಕರ್ನಾಟಕದ ಹಾರಂಗಿ, ಹೇಮಾವತಿ, ಕೆಆರ್ ಎಸ್ ಮತ್ತು ಕಬಿನಿ ಜಲಾಶಯಗಳಲ್ಲಿ ೧೬.೦೯.೨೦೧೬ರ ಪ್ರಕಾರ ನೀರಿನ ಇದ್ದ ನೀರಿನ ಸಂಗ್ರಹ ೨೮.೭೭ ಟಿಎಂಸಿ. ಬೆಂಗಳೂರು, ಮೈಸೂರು, ಮಂಡ್ಯ ಮತ್ತು ಕಾವೇರಿ ಅಚ್ಚುಕಟ್ಟು ಪ್ರದೇಶದ ಇತರ ಜಿಲ್ಲೆಗಳಿಗೆ ಬೇಕಾದ ನೀರಿನ ಪ್ರಮಾಣ ಅಂದಾಜು ೨೬ ಟಿಎಂಸಿ ಎಂದು ಅರ್ಜಿ ವಿವರಿಸಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಇನ್ನಷ್ಟು ನೀರು ಬಿಡುಗಡೆ ಮಾಡಿದರೆ, ಬೆಂಗಳೂರು ಮತ್ತು ಇತರ ಪಟ್ಟಣಗಳಿಗೆ ಸರಬರಾಜಿಗೆ ಜಲಾಶಯಗಳಲ್ಲಿ ನೀರು ಸಾಕಷಟು ನೀರು ಸಿಗುವುದಿಲ್ಲ. ಈ ನಿಟ್ಟಿನಲ್ಲಿ ಅಧಿಕಾರಿಗಳು ತುರ್ತು ಗಮನ ಹರಿಸಬೇಕಾಗಿದ್ದು ಈ ಕಾರಣದಿಂದ ಇದನ್ನು ಈ ನ್ಯಾಯಾಲಯದ ಗಮನಕ್ಕೆ ತರುತ್ತಿದ್ದೇವೆ ಎಂದು ಅರ್ಜಿದಾರರು ಸುಪ್ರೀಂಕೋರ್ಟಿಗೆ ತಿಳಿಸಿದ್ದಾರೆ.
2018: ನವದೆಹಲಿ: ಚಿತ್ರ ಮಂದಿರಗಳಲ್ಲಿ ರಾಷ್ಟ್ರಗೀತೆ ಹಾಡುವುದು ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ಚಿತ್ರಮಂದಿರಗಳಲ್ಲಿ
ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಿ ಈ ಹಿಂದೆ ನೀಡಿದ್ದ ತನ್ನ ಆದೇಶವನ್ನು ಈದಿನ ಪರಿಷ್ಕರಿಸಿದ ಸುಪ್ರೀಂಕೋರ್ಟ್ ರಾಷ್ಟ್ರಗೀತೆ ಹಾಡುವುದನ್ನು ಚಿತ್ರಮಂದಿರಗಳ ಮಾಲೀಕರಿಗೆ ಬಿಡಬೇಕು ಎಂದು ಹೇಳಿತು. ಏನಿದ್ದರೂ, ಚಿತ್ರಮಂದಿರದಲ್ಲಿ
ರಾಷ್ಟ್ರಗೀತೆ ಹಾಡಿದರೆ, ಆಗ ರಾಷ್ಟ್ರಗೀತೆಗೆ ನೀಡಬೇಕಾದ ಗೌರವವನ್ನು ಕಡ್ಡಾಯವಾಗಿ ನೀಡಲೇಬೇಕು. ರಾಷ್ಟ್ರಗೀತೆ ಹಾಡುವಾಗ ಎದ್ದು ನಿಂತುಕೊಂಡು ರಾಷ್ಟ್ರಗೀತೆಗೆ ಸೂಕ್ತ ಗೌರವ ಕೊಡಬೇಕು ಎಂದು ಕೋರ್ಟ್ ಹೇಳಿತು. ೨೦೧೬ರಲ್ಲಿ ಮುಖ್ಯ ನ್ಯಾಯಮೂರ್ತಿ ಆಗುವುದಕ್ಕೆ ಮುನ್ನ ಈಗಿನ ಮುಖ್ಯ ನ್ಯಾಯಮೂರ್ತಿಯಾಗಿರುವ ದೀಪಕ್ ಮಿಶ್ರ ನೇತೃತ್ವದ ಪೀಠವು ಎಲ್ಲ ಚಿತ್ರ ಮಂದಿರಗಳಲ್ಲೂ ಚಲನಚತ್ರ ಪ್ರದರ್ಶನಕ್ಕೆ ಮುನ್ನ ರಾಷ್ಟ್ರಗೀತೆ ಹಾಡುವುದು ಕಡ್ಡಾಯ ಮತ್ತು ಈ ವೇಳೆಯಲ್ಲಿ ಪ್ರೇಕ್ಷಕರು ಎದ್ದು ನಿಂತು ರಾಷ್ಟ್ರಗೀತೆಗೆ ಗೌರವ ನೀಡಬೇಕು ಎಂದು ೨೦೧೬ರ ನವೆಂಬರ್ ೩೦ರಂದು ಆದೇಶ ನೀಡಿತ್ತು. ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಹಾಡುವ ಸಂದರ್ಭದಲ್ಲಿ ಎದ್ದುನಿಂತು ಗೌರವ ಸೂಚಿಸುವುದು ತಮ್ಮ ತಾಯ್ನಾಡಿನ ಮೇಲಿನ ಪ್ರೇಮವನ್ನು ವ್ಯಕ್ತ ಪಡಿಸಲು ಸಾರ್ವಜನಿಕರಿಗೆ ಇರುವ ಅವಕಾಶ ಎಂದು ಕೋರ್ಟ್ ಹೇಳಿತ್ತು. ಚಿತ್ರ ಮಂದಿರಗಳಲ್ಲಿ
ರಾಷ್ಟ್ರಗೀತೆಗೆ ಗೌರವ ತೋರಿಸುವ ಶಿಷ್ಟಾಚಾರವು ನಮ್ಮ ರಾಷ್ಟ್ರೀಯ ಗುರುತು, ರಾಷ್ಟ್ರದ ಸಮಗ್ರತೆ ಮತ್ತು ಸಂವಿಧಾನಬದ್ಧ ದೇಶಭಕ್ತಿಯ ಬೇರಿನಲ್ಲಿ ಇರುವಂತಹುದು ಎಂದು ಕೋರ್ಟ್ ಅಭಿಪ್ರಾಯಪಟ್ಟಿತ್ತು. ಚಿತ್ರಮಂದಿರಗಳಲ್ಲಿ
ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಿ ನೀಡಲಾಗಿರುವ ಆದೇಶವನ್ನು ಹಿಂತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರ ಹಿಂದಿನ ದಿನ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿತ್ತು. ಇದರ ಬೆನ್ನಲ್ಲೇ, ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಿ ೨೦೧೬ರಲ್ಲಿ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಪರಿಷ್ಕರಿಸಿತು. ರಾಷ್ಟ್ರಗೀತೆ ನುಡಿಸುವುದು ಮತ್ತು ಹಾಡುವುದಕ್ಕೆ ಸಂಬಂಧಿಸಿದಂತೆ ಮಾರ್ಗದರ್ಶಿ ಸೂತ್ರಗಳನ್ನು ರಚಿಲು ಸಚಿವರ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಕೇಂದ್ರ ಸರ್ಕಾರದ ಪರವಾಗಿ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಸುಪ್ರೀಂಕೋರ್ಟಿಗೆ ತಿಳಿಸಿದ್ದರು. ಮಾರ್ಗದರ್ಶಿ ಸೂತ್ರಗಳನ್ನು ರಚಿಸಲು ವಿಸ್ತೃತ ಸಮಾಲೋಚನೆಗಳನ್ನು ನಡೆಸಬೇಕಾಗಿದ್ದು
ಅದಕ್ಕೆ ಕನಿಷ್ಠ ೬ ತಿಂಗಳು ಬೇಕಾಗಬಹುದು. ಶಿಫಾರಸುಗಳು ಸಿದ್ಧವಾದ ಬಳಿಕ ಸರ್ಕಾರವು ಈ ಬಗ್ಗೆ ಅಧಿಸೂಚನೆ ಅಥವಾ ಸುತ್ತೋಲೆಯನ್ನು ನೀಡುವುದು ಎಂದು ಅವರು ಸರ್ಕಾರ ಹೇಳಿತು. ಈ ಬಗ್ಗೆ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ಹಿಂದಿನ ಆದೇಶವನ್ನು ಪರಿಷ್ಕರಿಸಿತು. ದೇಶಪ್ರೇಮದ ಹೆಸರಿನಲ್ಲಿ ನಡೆಯುತ್ತಿರುವ ಅನೈತಿಕ ಪೊಲೀಸ್ಗಿರಿಗೆ ಕಡಿವಾಣ ಹಾಕಲು ರಾಷ್ಟ್ರಗೀತೆ ಕಡ್ಡಾಯ ಆದೇಶ ರದ್ದು ಮಾಡುವ ಬಗ್ಗೆ ಸುಪ್ರೀಂ ಕೋರ್ಟ್ ಹಿಂದಿನ ವಿಚಾರಣೆ ಸಂದರ್ಭದಲ್ಲಿ ಸುಳಿವು ನೀಡಿತ್ತು.
2018: ನವದೆಹಲಿ: ಭಾರತದ ಬದಲಾವಣೆಯಲ್ಲಿ ಕೈಜೋಡಿಸಲು ಮುಂದೆ ಬರುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ವಿದೇಶಗಳಲ್ಲಿ ಇರುವ ಭಾರತೀಯ ಮೂಲದ ಶಾಸಕರು ಮತ್ತು ರಾಜಕೀಯ ನಾಯಕರಿಗೆ ಇಲ್ಲಿ ಮನವಿ ಮಾಡಿದರು. ವಿಶ್ವಾದ್ಯಂತ ವಾಸವಾಗಿರುವ ಭಾರತೀಯ ಮೂಲದ ಶಾಸಕರು, ಸಂಸದರು ಮತ್ತು ರಾಜಕೀಯ ನಾಯಕರನ್ನು ಸಂಪರ್ಕಿಸುವ ಸಲುವಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಇಲ್ಲಿ ಸಂಘಟಿಸಿದ್ದ ಪ್ರಪ್ರಥಮ ಪಿಐಒ (ಭಾರತೀಯ ಮೂಲದ ವ್ಯಕ್ತಿಗಳ) ಸಂಸದೀಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮಾತನಾಡಿದರು. ತಮ್ಮ ಪೂರ್ವಜರ ತಾಯ್ನಾಡಿನ ಜೊತೆಗೆ ವಿಶ್ವಾದ್ಯಂತ ಇರುವ ಮೂಲ ಭಾರತೀಯರನ್ನು ಮರುಸಂಪರ್ಕಿಸುವ ಯತ್ನವಾಗಿ ಈ ಸಮ್ಮೇಳನವನ್ನು ಸಂಘಟಿಸಲಾಗಿತ್ತು.
‘ನಿಮ್ಮ ಪೂರ್ವಜರು ಕಾರಣಾಂತರಗಳಿಂದ ವಿವಿಧ ಸಂದರ್ಭಗಳಲ್ಲಿ ಭಾರತದಿಂದ ಹೊರಹೋಗಿದ್ದಾರೆ.
ಆದ್ದರಿಂದ ನೀವು ಭಾರತೀಯ ವಿಮಾನಿಲ್ದಾಣಕ್ಕೆ
ಬಂದಾಗ ನಿಮಗೆ ಈ ದೇಶದ ಜೊತೆಗೆ ಇರುವ ಬಾಂಧವ್ಯವನ್ನು ನೆನಪಿಸಲಾಗುತ್ತಿದೆ.
ನಿಮಗೆ ಭಾರತಕ್ಕೆ ವಾಪಸಾಗುವ ಇಚ್ಛೆ ಇದೆ. ನಾನು ನಿಮ್ಮ ಭಾವನೆಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲೆ’ ಎಂದು ಮೋದಿ ನುಡಿದರು. ಭಾರತೀಯ ಮೂಲದ ೧೨೪ ಮಂದಿ ಸಂಸತ್ ಸದಸ್ಯರು ಮತ್ತು ೧೭ ಮಂದಿ ಮೇಯರ್ಗಳು ಪ್ರವಾಸೀ ಭಾರತೀಯ ದಿವಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿತು. ‘ಒಂದು ಕೈಯಲ್ಲಿ ನೀವು ಭಾರತೀಯ ಸಂಸ್ಕೃತಿಯನ್ನು ಸಂರಕ್ಷಿಸಿ ಇಟ್ಟುಕೊಂಡಿದ್ದೀರಿ.
ಇನ್ನೊಂದು ಕೈಯಲ್ಲಿ ನಿಮ್ಮ ಜನರು ಕ್ರೀಡೆ, ಕಲೆ, ಸಿನಿಮಾ ಮತ್ತು ಜಾಗತಿಕ ವೇದಿಕೆಗಳಲ್ಲಿ ನೀವು ನಿಮ್ಮನ್ನು ಅಂಗೀಕರಿಸಿರುವ ರಾಷ್ಟ್ರದ ಕಲ್ಯಾಣಕ್ಕಾಗಿ ಕೊಡುಗೆ ಸಲ್ಲಿಸಿದ್ದೀರಿ’ ಎಂದು ಮೋದಿ ಹಿಂದಿಯಲ್ಲಿ ಮಾತನಾಡುತ್ತಾ ಹೇಳಿದರು. ಗಯಾನಾದ ಮಾಜಿ ಅಧ್ಯಕ್ಷ ಭರತ್ ಜಗದೇವ ಅವರು ಸಮಾರಂಭದಲ್ಲಿ ಹಾಜರಿಸುವುದನ್ನು
ವಿಶೇಷವಾಗಿ ಪ್ರಸ್ತಾಪಿಸಿದ ಮೋದಿ, ಮಾರಿಷಸ್ ನಿಂದ ಗಯಾನಾವರೆಗಿನ ಭೂಮಿಯಲ್ಲಿ ಹಲವಾರು ಭಾರತೀಯ ಮೂಲದ ಮಂದಿ ತಮ್ಮ ರಾಷ್ಟ್ರದ ನಾಯಕರಾಗಿದ್ದಾರೆ.
ಇಂದು ನಮ್ಮ ಮುಂದೆ ಪುಟ್ಟ ಜಾಗತಿಕ ಸಂಸತ್ತು ಇದೆ. ನಮ್ಮ ಹೆಮ್ಮೆ ಮತ್ತು ಘನತೆಯನ್ನು ವಿಸ್ತರಿಸಿದ್ದಕ್ಕಾಗಿ ನೀವೆಲ್ಲರೂ ನಮ್ಮ ಮೆಚ್ಚುಗೆಗೆ ಅರ್ಹರಾಗಿದ್ದೀರಿ’ ಎಂದು ಪ್ರಧಾನಿ ಹೇಳಿದರು. ಭಾರತವು ಮಹತ್ವಾಕಾಂಕ್ಷೆಯ
ಸಾಮಾಜಿಕ ಬದಲಾವಣೆಗಳನ್ನು ಅನುಭವಿಸುತ್ತಿದೆ. ಮರುಬದಲಾವಣೆ ಮಾಡಲಾಗದಂತಹ ಬದಲಾವಣೆಯ ಗಾಳಿ ದೇಶದಲ್ಲಿ ಬೀಸುತ್ತಿದೆ. ಭಾರತೀಯ ಮೂಲದ ನಾಯಕರು ಈ ಬದಲಾವಣೆಯಲ್ಲಿ ತಮ್ಮ ಕೈಗಳನ್ನು ಜೋಡಿಸಲು ಮುಂದೆ ಬರಬೇಕು ಎಂದು ಅವರು ನುಡಿದರು. ಇದಕ್ಕೆ ಮುನ್ನ ಸಮಾರಂಭದ ಉದ್ದೇಶವನ್ನು ವಿವರಿಸಿದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಪ್ರವಾಸೀ ಭಾರತೀಯ ದಿವಸ್ ಕಾರ್ಯಕ್ರಮವನ್ನು ಆರಂಭಿಸಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕೊಡುಗೆಯನ್ನು ನೆನಪಿಸಿದರು. ೧೪೧ ಮಂದಿ ಕಾನೂನು ನಿರ್ಮಾಪಕರು ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಬಗ್ಗೆ ಖಚಿತಪಡಿಸಿದ್ದಾರೆ.
೧೩೪ ಮಂದಿ ನಾಯಕರು ಪ್ರತಿಕೂಲ ಹವಾಮಾನದ ನಡುವೆಯೂ ಈದಿನದ ಕಾರ್ಯಕ್ರಮಕ್ಕೆ ಹಾಜರಾಗಿದ್ದಾರೆ ಎಂದು ಹೇಳಿದ ಸುಷ್ಮಾ, ಸಮ್ಮೇಳನವು ಈ ನಾಯಕರು ತಾವು ವಾಸವಾಗಿರುವ ರಾಷ್ಟ್ರಗಳಲ್ಲಿ ಸಂಸತ್ತು ತಲುಪುವವರೆಗೆ ನಡೆಸಿದ ಹೋರಾಟದ ಬಗ್ಗೆ ಬೆಳಕು ಚೆಲ್ಲಲಿದೆ ಎಂದು ವಿವರಿಸಿದರು.
2018: ವಾಷಿಂಗ್ಟನ್: ಎಚ್-೧ಬಿ ವೀಸಾ ಹೊಂದಿರುವವರನ್ನು ರಾಷ್ಟ್ರ ತ್ಯಜಿಸುವಂತೆ ಒತ್ತಾಯಿಸುವ ಯಾವುದೇ ಪ್ರಸ್ತಾಪವನ್ನು ಟ್ರಂಪ್ ಆಡಳಿತ ರಿಶೀಲಿಸುತ್ತಿಲ್ಲ ಎಂದು ಅಮೆರಿಕದ ಅಧಿಕಾರಿಗಳು ಸ್ಪಷ್ಟ ಪಡಿಸಿದರು. ಇದರೊಂದಿಗೆ ಅಮೆರಿಕದಲ್ಲಿರುವ ಭಾರತೀಯ ಟೆಕ್ಕಿಗಳು ನಿರಾಳರಾದರು. ಟ್ರಂಪ್ ಆಡಳಿತವು ಎಚ್-೧ಬಿ ವೀಸಾ ನಿಯಮಗಳನ್ನು ಬಿಗಿಗೊಳಿಸುವ ಬಗ್ಗೆ ಪರಿಶೀಲಿಸುತ್ತಿದೆ,
ಇದರಿಂದ ೭,೫೦,೦೦೦ ಭಾರತೀಯರನ್ನು ರಾಷ್ಟ್ರದಿಂದ ಹೊರಹಾಕಬೇಕಾಗಬಹುದು ಎಂಬುದಾಗಿ ವರದಿಗಳು ಪ್ರಕಟವಾದ ಕೆಲ ದಿನಗಳ ಬಳಿಕ ಅಮೆರಿಕ ಪೌರತ್ವ ಮತ್ತು ವಲಸೆ ಸೇವಾ (ಯುಎಸ್ ಸಿಐಎಸ್) ಇಲಾಖೆ ಈ ಪ್ರಕಟಣೆ ನೀಡಿತು. ಅಮೆರಿಕ
ಪೌರತ್ವ ಮತ್ತು ವಲಸೆ ಸೇವಾ (ಯುಎಸ್ ಸಿಐಎಸ್) ಇಲಾಖೆಯು ಎಚ್-೧ಬಿ ವೀಸಾ ಹೊಂದಿರುವವರನ್ನು ಅಮೆರಿಕ ತ್ಯಜಿಸುವಂತೆ ಒತ್ತಡ ಹೇರುವಂತಹ ಯಾವುದೇ ನಿಯಮ ಬದಲಾವಣೆಯನ್ನೂ ಪರಿಶೀಲಿಸುತ್ತಿಲ್ಲ. ಇಲಾಖೆಯು ೨೧ನೇ ಶತಮಾನದಲ್ಲಿ ಅಮೆರಿಕದ ಸ್ಪರ್ಧಾತ್ಮಕತೆ ಕಾಯ್ದೆಯ (ಎಸಿ೨೧) ಸೆಕ್ಷನ್ ೧೦೪ ಸಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡುವ ಮೂಲಕ ಎಚ್-೧ಬಿ ವೀಸಾ ಹೊಂದಿರುವವರನ್ನು ರಾಷ್ಟ್ರ ತ್ಯಜಿಸುವಂತೆ ಒತ್ತಡ ಹೇರಲಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ತಪ್ಪಭಿಪ್ರಾಯ ಮೂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಇದರಿಂದ ಎಚ್-೧ಬಿ ವಿಸ್ತರಣೆಯನ್ನು ೬ ವರ್ಷಗಳ ಮಿತಿಯಿಂದಾಚೆಯೂ ಮಾಡಲು ಅವಕಾಶ ಲಭಿಸಿದಂತಾಗಿದೆ. ‘ಒಂದು
ವೇಳೆ, ಬದಲಾವಣೆ ಮಾಡಿದರೂ ಅಂತಹ ಬದಲಾವಣೆಯು ಎಚ್-೧ಬಿ ವೀಸಾ ಹೊಂದಿರುವವರು ಅಮೆರಿಕ ತ್ಯಜಿಸುವಂತೆ ಮಾಡುವುದಿಲ್ಲ. ಏಕೆಂದರೆ ಎಸಿ೨೧ರ ಸೆಕ್ಷನ್ ೧೦೬(ಎ)-(ಬಿ) ಅಡಿಯಲ್ಲಿ ಒಂದು ವರ್ಷದ ಇನ್ಕ್ರಿಮೆಂಟ್ಗಳ ವಿಸ್ತರಣೆಗೆ ನೌಕರಿ ನೀಡಿದವರು ಮನವಿ ಮಾಡಬಹುದು’ ಎಂದು ಯುಎಸ್ ಸಿಐಎಸ್ ನ ಮಾಧ್ಯಮ ಬಾಂಧವ್ಯಗಳ ಮುಖ್ಯಸ್ಥ ಜೊನಾಥನ್ ವಿದಿಂಗ್ಟನ್ ಹೇಳಿಕೆಯಲ್ಲಿ ತಿಳಿಸಿದರು. ಅಧ್ಯಕ್ಷರ ‘ಬೈ ಅಮೆರಿಕನ್, ಹೈರ್ ಅಮೆರಿಕನ್’ ಎಕ್ಸಿಕ್ಯೂಟಿವ್ ಆದೇಶದ ಜಾರಿ ಸಲುವಾಗಿ ಹಲವಾರು ಬದಲಾವಣೆಗಳನ್ನು ಮಾಡುವ ಬಗ್ಗೆ ಏಜೆನ್ಸಿಯು ಪರಿಶೀಲಿಸುತ್ತಿದೆ. ವೀಸಾ ಆಧಾರಿತ ಉದ್ಯೋಗಗಳ ಪುನರ್ ವಿಮರ್ಶೆಯೂ ಇವುಗಳಲ್ಲಿ ಸೇರಿದೆ ಎಂದು ವಿದಿಂಗ್ಟನ್ ಹೇಳಿದರು. ಅಮೆರಿಕವು ಎಚ್-೧ಬಿ ವೀಸಾಗಳನ್ನು ವಿಸ್ತರಿಸದಂತೆ ತಡೆಯಲು ಹೊಸ ನಿಯಮಾವಳಿಗಳನ್ನು ರೂಪಿಸುವ ಬಗ್ಗೆ ಪರಿಶೀಲಿಸುತ್ತಿದೆ
ಎಂದು ಅಮೆರಿಕ ಮೂಲದ ಸುದ್ದಿ ಸಂಸ್ಥೆ ಮೆಕ್ ಕ್ಲಾತ್ಚಿ ಡಿಸಿ ಬ್ಯೂರೋ ವಾರದ ಹಿಂದೆ ವರದಿಯೊಂದನ್ನು ಪ್ರಕಟಿಸಿತ್ತು. ಈ ಬದಲಾವಣೆಯಿಂದ ಭಾರತ ಐಟಿ ಉದ್ಯೋಗಿಗಳಿಗೆ ಅತೀವ ತೊಂದರೆಯಾಗಬಹುದು
ಎಂದು ವರದಿ ತಿಳಿಸಿತ್ತು. ಅಂತಹ ನೀತಿ ಬದಲಾವಣೆಯನ್ನು ಯುಎಸ್ ಸಿಐಎಸ್ ಎಂದೂ ಪರಿಶೀಲಿಸಿಯೇ ಇಲ್ಲ ಎಂದು ಹೇಳಿದ ವಿದಿಂಗ್ಟನ್ ’ತೀವ್ರ ಒತ್ತಡದ ಪರಿಣಾಮವಾಗಿ ಯುಎಸ್ ಐಸಿಎಸ್ ತನ್ನ ನಿಲುವು ಬದಲಿಸಿದೆ ಎಂಬುದೂ ಸುಳ್ಳಿನ ಕಂತೆ’ ಎಂದು ನುಡಿದರು. ಎಚ್ -೧ಬಿ ವೀಸಾ ನಿಯಮಾವಳಿಗಳಲ್ಲಿ ಇಂತಹ ಬದಲಾವಣೆ ಮಾಡುವುದಕ್ಕೆ ಕೈಗಾರಿಕೆಗಳು ಮತ್ತು ಹಲವಾರು ಶಾಸನಕರ್ತರಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ‘ಇಂತಹ ಕ್ರಮವು ಭಾರತ ಮತ್ತು ಅಮೆರಿಕ ಎರಡು ದೇಶಗಳಿಗೂ ಹಾನಿಕಾರಕವಾಗಬಲ್ಲುದು’ ಎಂದು ಭಾರತೀಯ ಮಾಹಿತಿ ತಂತ್ರಜ್ಞಾನದ ವಾಣಿಜ್ಯ ಸಂಸ್ಥೆ ನ್ಯಾಷನಲ್ ಅಸೋಸಿಯೇಶನ್ ಆಫ್ ಸಾಫ್ಟವೇರ್ಸ್ ಅಂಡ್ ಸರ್ವೀಸಸ್ ಕಂಪೆನೀಸ್ (ನ್ಯಾಸ್ಕಾಮ್) ಎಚ್ಚರಿಕೆ ನೀಡಿತ್ತು. ಸಾಮಾನ್ಯ ವರ್ಗದಲ್ಲಿ ೬೫,೦೦೦ ವೀಸಾಗಳನ್ನು ಮತ್ತು ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ವಿಜ್ಞಾನ ಕ್ಷೇತ್ರಗಳಲ್ಲಿ ಅಮೆರಿಕದ ವಿಶ್ವ ವಿದ್ಯಾಲಯಗಳಿಂದ ಉನ್ನತ ಶಿಕ್ಷಣಕ್ಕಾಗಿ ಅರ್ಜಿ ಸಲ್ಲಿಸುವವರಿಗೆ ೨೦,೦೦೦ ವೀಸಾಗಳನ್ನು ನೀಡುವ ಅಧಿಕಾರವನ್ನು ಕಾಂಗ್ರೆಸ್ ಯುಎಸ್ ಐಸಿಎಸ್ ಗೆ ನೀಡಿದೆ.
2018: ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ಸಲ್ಲಿಸಿದ್ದ ರೆಡ್ ಕಾರ್ನರ್ ಅಜಿಯನ್ನು ಇಂಟರ್ ಪೋಲ್ ರದ್ದು ಪಡಿಸಿದ ಬೆನ್ನಲ್ಲೇ ಇದೀಗ ವಿವಾದಾತ್ಮಕ ಇಸ್ಲಾಮ್ ಧರ್ಮಬೋಧಕ ಝಾಕೀರ್ ನಾಯ್ಕ್ ವಿರುದ್ಧದ ತನಿಖೆಯ ವಿಚಾರದಲ್ಲಿ ಜಾರಿ ನಿರ್ದೇಶನಾಲಯವು ಜುಡಿಷಿಯಲ್ ಟ್ರಿಬ್ಯೂನಲ್ ನಲ್ಲಿ ಮುಜುಗರದ ಸನ್ನಿವೇಶವನ್ನು ಎದುರಿಸಿತು. ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ ಎ) ಮೇಲ್ಮನವಿ ನ್ಯಾಯಮಂಡಳಿ ಅಧ್ಯಕ್ಷ ನ್ಯಾಯಮೂರ್ತಿ ಮನಮೋಹನ್ ಸಿಂಗ್ ಅವರು ನಾಯ್ಕ್ ಆಸ್ತಿಪಾಸ್ತಿಯನ್ನು
ವಶಕ್ಕೆ ತೆಗೆದುಕೊಳ್ಳದಂತೆ
ಜಾರಿ ನಿರ್ದೇಶನಾಲಯವನ್ನು
ನಿರ್ಬಂಧಿಸಿದರು. ಇದೇ ವೇಳೆಗೆ ನಾಯ್ಕ್ ಮತ್ತು ಸ್ವಯಂಘೋಷಿತ ಆಧ್ಯಾತ್ಮಿಕ ನಾಯಕ ಅಸಾರಾಂ ಬಾಪು ನಡುವೆ ಹೋಲಿಕೆ ಮಾಡಿ ತನಿಖಾ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡರು. ‘ತಲಾ ೧೦,೦೦೦ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮೌಲ್ಯದ ಆಸ್ತಿಪಾಸ್ತಿ ಹೊಂದಿರುವ ೧೦ ಬಾಬಾಗಳನ್ನು ನಾನು ಹೆಸರಿಸಬಲ್ಲೆ, ಅವರೆಲ್ಲರೂ ಕ್ರಿಮಿನಲ್ ಖಟ್ಲೆಗಳನ್ನು ಎದುರಿಸುತ್ತಿದ್ದಾರೆ.
ಅವರಲ್ಲಿ ಒಬ್ಬರ ವಿರುದ್ಧವಾದರೂ ನೀವು ಕ್ರಮ ಕೈಗೊಂಡಿದ್ದೀರಾ?
ಅಸಾರಾಂ ಬಾಪು ವಿರುದ್ಧ ನೀವು ಏನು ಮಾಡಿದ್ದೀರಿ?’ ಎಂದು ಅವರು ಜಾರಿ ನಿರ್ದೇಶನಾಲಯದ ವಕೀಲರನ್ನು ಪ್ರಶ್ನಿಸಿದರು. ನಾಯ್ಕ್ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ
’ಆಯ್ದುಕೊಳ್ಳುವ’ ನೀತಿಯನ್ನು ಇಡಿ ಅನುಸರಿಸುತ್ತಿದೆಯೇ?
ಎಂದು ಪ್ರಶ್ನಿಸಿದ ನ್ಯಾಯಮಂಡಳಿ ಅಧ್ಯಕ್ಷ, ಕಳೆದ ೧೦ ವರ್ಷಗಳಲ್ಲಿ ಅಸಾರಾಂ ಬಾಪು ಆಸ್ತಿ ಮುಟ್ಟುಗೋಲಿಗೆ ಕ್ರಮ ಕೈಗೊಳ್ಳದ ಇಡಿ, ಈ ಪ್ರಕರಣದಲ್ಲಿ ಅತೀವ ಚುರುಕಾಗಿರುವಂತೆ
ಕಾಣಿಸುತ್ತಿದೆ ಎಂದು ವಿಶ್ಲೇಷಿಸಿದರು. ದೋಷಾರೋಪ ಪಟ್ಟಿಯಲ್ಲಿ (ಚಾರ್ಜ್ಶೀಟ್) ಸೂಕ್ತ ಅಪರಾಧಗಳನ್ನು ವಿವರಿಸದೇ ಇರುವಾಗ ಆಸ್ತಿ ಮುಟ್ಟುಗೋಲಿನ ಅಗತ್ಯ ಏನಿದೆ? ಎಂದು ನ್ಯಾಯಮಂಡಳಿಯು ಜಾರಿ ನಿರ್ದೇಶನಾಲಯದ ವಕೀಲರನ್ನು ತರಾಟೆಗೆ ತೆಗೆದುಕೊಂಡಿತು.
ನಾಯ್ಕ್ ತನ್ನ ಭಾಷಣಗಳ ಮೂಲಕ ಯುವಕರನ್ನು ಪ್ರಚೋದಿಸಿರುವುದಾಗಿ ವಕೀಲರು ಹೇಳಿದಾಗ, ನ್ಯಾಯಮೂರ್ತಿ ಸಿಂಗ್ ’ಇಂತಹ ಭಾಷಣಗಳಿಂದ ದಾರಿ ತಪ್ಪಿದ ಯುವಕರಿಂದ ಅಕ್ರಮ ಕೃತ್ಯಗಳಿಗೆ ತಮ್ಮನ್ನು ಪ್ರಚೋದಿಸಿದ ಬಗೆಗಿನ ಹೇಳಿಕೆಗಳನ್ನು ಅಥವಾ ಯಾವುದೇ ಮೇಲ್ನೋಟದ ಸಾಕ್ಷ್ಯಾಧಾರವನ್ನು
ಇಡಿ ಹಾಜರುಪಡಿಸಿಲ್ಲ’ ಎಂದು ಬೊಟ್ಟು ಮಾಡಿದರು. ‘ಈ ಭಾಷಣಗಳಿಂದ ಹೇಗೆ ಪ್ರಭಾವಕ್ಕೆ ಒಳಗಾಗಿದ್ದೇವೆ ಎಂದು ವಿವರಿಸಿದ ಯಾರಾದರೂ ಒಬ್ಬರ ಹೇಳಿಕೆಯನ್ನು ನೀವು ದಾಖಲಿಸಿಕೊಂಡಿದ್ದೀರಾ? ಢಾಕಾದಲ್ಲಿ ೨೦೧೫ರಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಈ ಭಾಷಣಗಳು ಯಾವುದಾದರೂ ಪಾತ್ರ ವಹಿಸಿದ್ದವೇ, ವಹಿಸಿದ್ದರೆ ಹೇಗೆ ಎಂಬ ಬಗೆಗೆ ನಿಮ್ಮ ಚಾಜ್ಶೀಟ್ ಪ್ರಸ್ತಾಪವನ್ನೂ ಮಾಡಿಲ್ಲ’ ಎಂದು
ನ್ಯಾಯಮೂರ್ತಿ ಹೇಳಿದರು. ತನ್ನ ಅನುಕೂಲಕ್ಕಾಗಿ ನಿರ್ದೇಶನಾಲಯವು, ಈ ಭಾಷಣದ ಶೇಕಡಾ ೯೯ರಷ್ಟನ್ನು ನಿರ್ಲಕ್ಷಿಸಿ, ಶೇಕಡಾ ೧ರಷ್ಟನ್ನು ಮಾತ್ರ ನೆಚ್ಚಿಕೊಂಡಿರುವಂತೆ
ಕಾಣುತ್ತದೆ ಎಂದು ನ್ಯಾಯಮೂರ್ತಿ ಸಿಂಗ್ ನುಡಿದರು. ನಿಮ್ಮ ಚಾರ್ಜ್ಶೀಟಿನ ಭಾಗವಾಗಿರುವ ಭಾಷಣವನ್ನು ನೀವು ಓದಿದ್ದೀರಾ? ನಾನು ಇಂತಹ ಹಲವಾರು ಭಾಷಣಗಳನ್ನು ಕೇಳಿದ್ದೇನೆ. ಅವುಗಳಲ್ಲಿ ಆಕ್ಷೇಪಾರ್ಹವಾದುದು ಏನೂ ಇರಲಿಲ್ಲ ಎಂದು ನಾನು ನಿಮಗೆ ಹೇಳಬಲ್ಲೆ ಎಂದೂ ಅವರು ನುಡಿದರು. ಬಳಿಕ ’ಯಥಾಸ್ಥಿತಿ ಪಾಲನೆ’ಯ ಆದೇಶ ನೀಡುವ ಮೂಲಕ ಚೆನ್ನೈಯ ಶಾಲೆ ಮತ್ತು ಮುಂಬೈಯ ವಾಣಿಜ್ಯ ಆಸ್ತಿಯನ್ನು ಭೌತಿಕವಾಗಿ ವಶಕ್ಕೆ ತೆಗೆದುಕೊಳ್ಳದಂತೆ
ಜಾರಿ ನಿರ್ದೇಶನಾಲಯವನ್ನು
ನ್ಯಾಯಮಂಡಳಿ ತಡೆಯಿತು. ಈ ಎರಡು ಆಸ್ತಿಗಳು ಸೇರಿದಂತೆ ನಾಯ್ಕ್ ಗೆ ಸೇರಿದ ೩ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ ಈಗಾಗಲೇ ಮುಟ್ಟುಗೋಲು ಹಾಕಿಕೊಂಡಿದೆ. ಆದರೆ ನಿರ್ದೇಶನಾಲಯವು ಅದನ್ನು ಭೌತಿಕವಾಗಿ ತನ್ನ ವಶಕ್ಕೆ ತೆಗೆದುಕೊಳ್ಳುವಂತಿಲ್ಲ ಎಂದು ನ್ಯಾಯಮೂರ್ತಿ ಹೇಳಿದರು.
2018:
ಲಕ್ನೋ: ರಾಷ್ಟ್ರದ ಬಹುತೇಕ ಮದ್ರಸಾಗಳು ಮಾನ್ಯತೆ ಪಡೆದಿಲ್ಲ ಮತ್ತು ಇಂತಹ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿರುವ ಮುಸ್ಲಿಮ್ ವಿದ್ಯಾರ್ಥಿಗಳು ಭಯೋತ್ಪಾದನೆಯತ್ತ ಸಾಗುತ್ತಾರೆ ಎಂದು ಶಿಯಾ ಕೇಂದ್ರೀಯ ವಕ್ಫ್ ಮಂಡಳಿ ಅಧ್ಯಕ್ಷ ವಾಸಿಮ್ ರಿಜ್ವಿ ಅವರು ಹೇಳಿದರು. ಪ್ರಧಾನಿ
ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಈ ಕುರಿತು ಪತ್ರ ಬರೆದಿರುವ ರಿಜ್ವಿ, ಮದ್ರಸಾಗಳನ್ನು ಮುಖ್ಯವಾಹಿನಿ ಶಿಕ್ಷಣಕ್ಕೆ ತರಬೇಕು ಎಂದು ಕೋರಿದರು. ಸುದ್ದಿ
ಸಂಸ್ಥೆ ಒಂದರ ಜೊತೆ ಮಾತನಾಡುತ್ತಿದ್ದ
ಶಿಯಾ ಕೇಂದ್ರೀಯ ವಕ್ಫ್ ಮಂಡಳಿ ಅಧ್ಯಕ್ಷರು ’ಎಷ್ಟು ಮದ್ರಸಾಗಳು ಎಂಜಿನಿಯರುಗಳನ್ನು,
ವೈದ್ಯರನ್ನು, ಐಎಎಸ್ ಅಧಿಕಾರಿಗಳನ್ನು ಸೃಷ್ಟಿಸಿವೆ? ಆದರೆ, ಕೆಲವು ಮದ್ರಸಾಗಳು ಭಯೋತ್ಪಾದಕರನ್ನು
ಸೃಷ್ಟಿಸಿವೆ’ ಎಂದು ಹೇಳಿದರು. ಮದ್ರಸಾಗಳನ್ನು ಕಾನ್ವೆಂಟ್ ಶಾಲೆಗಳಾಗಿ ಪರಿವರ್ತಿಸಬೇಕು, ಅಲ್ಲಿ ಇಸ್ಲಾಮಿಕ್ ಶಿಕ್ಷಣವನ್ನೂ ಒಂದು ಭಾಗವಾಗಿ ನೀಡಬೇಕು. ಅವುಗಳನ್ನು ಸಿಬಿಎಸ್ ಇ, ಐಸಿಎಸಿಇಳ ಜೊತೆ ಸಂಯೋಜಿಸಬೇಕು. ಮುಸ್ಲಿಮೇತರ ವಿದ್ಯಾರ್ಥಿಗಳಿಗೂ ಅಲ್ಲಿ ಅಧ್ಯಯನಕ್ಕೆ ಅವಕಾಶ ಕಲ್ಪಿಸಬೇಕು. ಧಾರ್ಮಿಕ ಶಿಕ್ಷಣವನ್ನು ಐಚ್ಛಿಕಗೊಳಿಸಬೇಕು.
ನಾನು ಈ ಬಗ್ಗೆ ಪ್ರಧಾನಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇನೆ. ಇದರಿಂದ ನಮ್ಮ ರಾಷ್ಟ್ರವು ಇನ್ನಷ್ಟು ಬಲಾಢ್ಯವಾಗುತ್ತದೆ’ ಎಂದು ರಿಜ್ವಿ ಪ್ರತಿಪಾದಿಸಿದರು.
ಹಲವಾರು ಮದ್ರಸಾಗಳು ಭಯೋತ್ಪಾದಕ ಚಟುವಟಿಕೆಗಳಿಗೆ ನೆರವಾಗಲು ಬಳಕೆಯಾಗುತ್ತಿವೆ
ಎಂದೂ ರಿಜ್ವಿ ಅವರು ತಮ್ಮ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ
ಎನ್ನಲಾಯಿತು.
2009: ಬ್ರಾಡ್‌ಕಾಸ್ಟ್ ಫಿಲ್ಮ್ ಕ್ರಿಟಿಕ್ಸ್ ಅಸೋಸಿಯೇಷನ್‌ನ 14ನೇ ವಾರ್ಷಿಕ ಪ್ರಶಸ್ತಿಗಳ 5 ವಿಭಾಗದಲ್ಲಿ 'ಸ್ಲಮ್‌ಡಾಗ್ ಮಿಲಿಯನೇರ್' ಪ್ರಶಸ್ತಿ ಗಿಟ್ಟಿಸಿಕೊಂಡಿತು. ಅತ್ಯುತ್ತಮ ಚಿತ್ರ, ಅತ್ಯುತ್ತಮ ಚಿತ್ರನಿರ್ದೇಶಕ (ಡ್ಯಾನಿ ಬೊಯೆ), ಅತ್ಯುತ್ತಮ ಲೇಖಕ (ಸಿಮೊನ್ ಬೇವೂಫೊಯ್), ಅತ್ಯುತ್ತಮ ಯುವ ನಟ (ದೇವ್ ಪಟೇಲ್) ಹಾಗೂ ಅತ್ಯುತ್ತಮ ಸಂಗೀತ (ಎ.ಆರ್.ರೆಹಮಾನ್) ಪ್ರಶಸ್ತಿ ಇದಕ್ಕೆ ಲಭಿಸಿದೆ. ಲಾಸ್‌ಏಂಜಲೀಸ್‌ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ವಿತರಿಸಲಾಯಿತು. ಭಾರತೀಯ ಲೇಖಕ ವಿಕಾಸ್ ಸ್ವರೂಪ್ ಅವರು ಬರೆದ 'ಕ್ಯೂ ಅಂಡ್ ಎ' ಕಾದಂಬರಿ ಆಧರಿತ 'ಸ್ಲಮ್ಡಾಗ್...' ಚಿತ್ರದ ಕತೆ ಮುಂಬೈನ ಕೊಳಚೆ ನಿವಾಸಿ ಬಾಲಕನ ಮೇಲೆ ಚಿತ್ರೀಕರಣಗೊಂಡಿದೆ. ಕೊಳಚೆ ನಿವಾಸಿ ಜಮಾಲ್ ಟಿ.ವಿಯೊಂದರ ಸ್ಪರ್ಧೆಯಲ್ಲಿ 2 ಕೋಟಿ ರೂಪಾಯಿ ಬಹುಮಾನ ಗೆಲ್ಲುವುದು ಹಾಗೂ ಆನಂತರದ ಬದುಕಿನ ಕತೆಯನ್ನು ಚಿತ್ರ ಒಳಗೊಂಡಿದೆ.
2009: ಲಕ್ಷಾಂತರ ಮಂದಿ ಕಂದಾಯ ನಿವೇಶನದಾರರ ಬೇಡಿಕೆಗೆ ಸರ್ಕಾರ ಕೊನೆಗೂ ಸ್ಪಂದಿಸಿತು. ಕಂದಾಯ ನಿವೇಶನ ಮತ್ತು ಅವುಗಳಲ್ಲಿ ನಿರ್ಮಿಸಿದ ಮನೆಗಳನ್ನು ನೋಂದಣಿ ಮಾಡಲು ರಾಜ್ಯ ಸಂಪುಟ ಸಭೆ ಒಪ್ಪಿಗೆ ನೀಡಿತು.. 2008ರ ಡಿಸೆಂ್ಗರ್ 31ರವರೆಗೆ ನಿರ್ಮಾಣವಾದ ಮನೆ ಮತ್ತು ನಿವೇಶನಗಳಿಗೆ ಸರ್ಕಾರದ ಈ ನಿರ್ಧಾರ ಅನ್ವಯಿಸುತ್ತದೆ ಎಂದು ಸಂಪುಟ ಸಭೆ ನಂತರ ಸಚಿವೆ ಶೋಭಾ ಕರಂದ್ಲಾಜೆ ಪ್ರಕಟಿಸಿದರು. ಈ ವ್ಯವಸ್ಥೆ ಜಾರಿಯಾಗಲು ಭೂ ಕಂದಾಯ ಅಧಿನಿಯಮಕ್ಕೆ ತಿದ್ದುಪಡಿ ಮಾಡಬೇಕು., ಅದಾದ ನಂತರ ಎರಡು ತಿಂಗಳ ಸಮಯ ಬೇಕಾಗುತ್ತದೆ.
2009: ದೇಶವನ್ನು ದೊಡ್ಡ ಪ್ರಮಾಣದಲ್ಲಿ ಇಂಧನ ಮುಗ್ಗಟ್ಟಿಗೆ ಸಿಲುಕಿಸಿದ ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳ ಅಧಿಕಾರಿಗಳ ಮುಷ್ಕರ ಈದಿನ ಸಂಜೆ ಕೊನೆಗೊಂಡಿತು. ಈದಿನ ಮಧ್ಯಾಹ್ನದ ಹೊತ್ತಿಗೆ ಬಿಪಿಸಿಎಲ್ ಕಂಪೆನಿಯ ಶೇ 70ರಷ್ಟು ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾದರೆ, ಸಂಜೆ ಹೊತ್ತಿಗೆ ಐಒಸಿ, ಒಎನ್‌ಜಿಸಿ, ಜಿಎಐಎಲ್ ಸಹಿತ ಇತರ ತೈಲ ಕಂಪೆನಿಗಳು ಅಧಿಕಾರಿಗಳು ಮುಷ್ಕರ ಕೊನೆಗೊಳಿಸಿದರು.
2009: ಬಹು ವಿವಾದಕ್ಕೆ ಕಾರಣವಾದ ಬೆಂಗಳೂರು ನಗರದ ಅರಮನೆ ರಸ್ತೆಯಲ್ಲಿನ 'ಏಟ್ರಿಯಾ' ಹೋಟೆಲ್ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ಶತಮಾನದಷ್ಟು ಹಳೆಯದಾಗಿರುವ ದಾಖಲೆಗಳ ಸಲ್ಲಿಕೆಗೆ ಹೈಕೋರ್ಟ್ ಆದೇಶಿಸಿತು. ಈ ಜಾಗ ಸರ್ಕಾರಕ್ಕೆ ಸೇರಿದ್ದೋ ಅಲ್ಲವೋ ಎಂಬುದನ್ನು ತಿಳಿಯಲು ಇಚ್ಛಿಸಿದ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಅವರು 1901ರ ದಾಖಲೆಗಳನ್ನು ಹಾಜರು ಪಡಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದರು. ಈ ಪ್ರಕರಣ ಆರಂಭವಾದದ್ದು 1901ರಲ್ಲಿ. ಬ್ರಿಟಿಷ್ ಪ್ರಜೆ ಲ್ಯಾನ್ ಲಾಟ್ಸ್ ರಿಕೇಟ್ಸ್ ಎನ್ನುವವರು 24.12 ಎಕರೆ ಜಾಗವನ್ನು ಮೈಸೂರಿನ ರಾಜಕುಮಾರಿಗೆ ಮಾರಾಟ ಮಾಡಿದ್ದರು. ಅದರಲ್ಲಿ ರಾಜಕುಮಾರಿ ನಾಲ್ಕು ಎಕರೆ ಜಾಗವನ್ನು ಏಟ್ರಿಯಾ ಹೋಟೆಲ್ ಮಾಲೀಕರಿಗೆ ಸೇರಿದಂತೆ ವಿವಿಧ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿದ್ದರು. ಈ ಜಾಗವನ್ನು ಹೋಟೆಲ್ ಮಾತ್ರವಲ್ಲದೇ, ಅಂದಿನ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಂಕರನಾರಾಯಣ, ಮೀನಾಕ್ಷಮ್ಮ ಹಾಗೂ ಇತರರಿಗೆ ಮಾರಾಟ ಮಾಡಿದ ಕಾರಣ, ಅವರು ಈ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಿಕೊಂಡರು. ಅಷ್ಟೇ ಅಲ್ಲದೇ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಿ.ಎಂ.ಚಂದ್ರಶೇಖರ್ ಅವರ ಸಂಬಂಧಿಯೊಬ್ಬರ 'ಫಾಸ್ಟ್ ಕಾರ್ಸ್' ಎಂಬ ಮಳಿಗೆ ಕೂಡ ನಿರ್ಮಾಣವಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ವಿವಾದ ಪ್ರಾರಂಭವಾದದ್ದು 2004ರಲ್ಲಿ. ಕರ್ನಾಟಕ ಲೋಕಸೇವಾ ಆಯೋಗದ ಅಂದಿನ ಕಾರ್ಯದರ್ಶಿ ಹರೀಶ್‌ಗೌಡ ಅವರು, ಈ ಜಾಗದ ಕುರಿತು ಸರ್ಕಾರಕ್ಕೆ ದೂರು ಸಲ್ಲಿಸಿದರು. 'ಇದು ಸರ್ಕಾರದ ಜಾಗವಾಗಿದ್ದು, ಹೋಟೆಲ್ ಸೇರಿದಂತೆ ಇತರರು ಅದನ್ನು ಕಬಳಿಸಿದ್ದಾರೆ' ಎಂದು ದೂರು ನೀಡಿದರು. ಈ ಬಗ್ಗೆ ತನಿಖೆ ನಡೆಸುವಂತೆ ಸರ್ಕಾರ ಜಿಲ್ಲಾಧಿಕಾರಿಗಳಿಗೆ ಆದೇಶಿಸಿತು.. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಎಲ್ಲರಿಗೂ ನೋಟಿಸ್ ಜಾರಿಗೆ ಆದೇಶಿಸಿದರು. ಈ ನೋಟಿಸ್ ಪ್ರಶ್ನಿಸಿ ಮೀನಾಕ್ಷಮ್ಮ ಹಾಗೂ ಇತರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಈ ಜಾಗವನ್ನು ರಾಜಕುಮಾರಿ ಮಾರಾಟ ಮಾಡಿರುವುದಕ್ಕೆ ಸಾಕ್ಷಿಯಾಗಿ ಅವರ ಖಾತೆಯಿಂದ ಹಣ ಸಂದಾಯ ಆಗಿರುವ ದಾಖಲೆಗಳು ಇವೆ. ಅಷ್ಟೇ ಅಲ್ಲದೇ ಇದು ಸರ್ಕಾರಕ್ಕೆ ಸೇರಿದ ಜಮೀನು ಅಲ್ಲ ಎಂಬ ಬಗ್ಗೆಯೂ ವಿವಿಧ ಸಾಕ್ಷ್ಯಗಳು ಇರುವುದಾಗಿ ಅರ್ಜಿದಾರರ ಪರ ವಾದಿಸುತ್ತಿರುವ ಹಿರಿಯ ವಕೀಲ ಎಂ.ಎಸ್. ಪದ್ಮನಾಭಯ್ಯ ಕೋರ್ಟ್‌ಗೆ ತಿಳಿಸಿದರು.
2009: ಸತ್ಯಂ ಕಂಪ್ಯೂಟರ್ ನಿರ್ಗಮಿತ ಅಧ್ಯಕ್ಷ ರಾಮಲಿಂಗ ರಾಜು ಈದಿನ ರಾತ್ರಿ ಹೈದರಾಬಾದ್ ಪೊಲೀಸರಿಗೆ ಶರಣಾದರು.
2007: ಈತನ ಹೆಸರು ಪುಟ್ಟು. ಶಿರಸಿಯ ಹೆಗಡೆಕಟ್ಟಾ ಬಳಿಯ ಶೀಗೆಹಳ್ಳಿಯ ಗೀತೆಮನೆ ಈತನ ಊರು. ಶಿರಸಿಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗಾಮಾಭಿವೃದ್ಧಿ ಸಂಸ್ಥೆ ಏರ್ಪಡಿಸಿದ 28ನೇ `ಕೃಷಿಮೇಳ'ದ ಮೆರವಣಿಗೆಯ ಉದ್ದಕ್ಕೂ ಗಾಂಭೀರ್ಯದಿಂದ ನಡೆದು ಬಂದ ಈತನ ಮೊಗದಲ್ಲಿ ಮಂದಹಾಸವಿತ್ತು. ತನಗಾಗಿ ವ್ಯವಸ್ಥೆ ಮಾಡಲಾಗಿದ್ದ ಚಪ್ಪರದ ಅಡಿ ನಿಂತು, ಬಂದವರನ್ನು ಮುದದಿಂದ ನೋಡುತ್ತಿದ್ದ ಈತನ ವಯಸ್ಸು ಕೇವಲ ಮೂರು ವರ್ಷ. ಹದಿನೈದು ವರ್ಷವಾದಂತೆ ಕಾಣುವ, ದಷ್ಟಪುಷ್ಟವಾಗಿ ಬೆಳೆದಿರುವ ಪುಟ್ಟು ಎಂದು ಪ್ರೀತಿಯಿಂದ ಕರೆಯಿಸಿಕೊಳ್ಳುವ ಈತ ಸಾಹಿವಾಲ್ ತಳಿಯ ಹೋರಿ. ಪಂಜಾಬಿನಲ್ಲಿ ಮಾತ್ರ ಕಾಣಸಿಗುವ ಈ ತಳಿ ಈಗ ಶಿರಸಿ, ಸಾಗರ ಹಾಗೂ ಸಿದ್ದಾಪುರ ಭಾಗದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಹೊಲದ ಕೆಲಸಕ್ಕೆ ಹೋರಿ ಬಳಸುವ ರೈತರು, ಆಕಳನ್ನು ಹೈನುಗಾರಿಕೆಗಾಗಿ ಬಳಸುವ ಮೂಲಕ ಈ ಅಪರೂಪದ ತಳಿ ರಕ್ಷಣೆಯಲ್ಲಿ ಸದ್ದಿಲ್ಲದೆಯೇ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಳೆದ ಆರು ವರ್ಷಗಳ ಹಿಂದೆ, ಹೊಸ ತಳಿಯ ಹುಡುಕಾಟದಲ್ಲಿದ್ದ ಮಲೆನಾಡಿನ ರೈತರು ಅಮೃತಮಹಲ್, ಲಾಂಗೋಲ್, ಹರಿಯಾಣ ಹೀಗೆ ಹತ್ತಾರು ತಳಿ ತಂದು ಸಾಕಿದರು. ಆದರೆ, ಅವುಗಳು ಸರಿಯಾಗಿ ಹಾಲು ಕೊಡದಿರುವುದು ಒಂದು ಕಡೆ. ಹೊಲದ ಕೆಲಸಕ್ಕೂ ಬಾರದೇ ಸತಾಯಿಸುತ್ತಿದ್ದುದು ಇನ್ನೊಂದು ಕಡೆ. ಆದರೆ, ಮಲೆನಾಡಿನ ರೈತರು ತಳಿ ಹುಡುಕುವಲ್ಲಿ ಜಾಣರು. ಶಿವಮೊಗ್ಗ ಜಿಲ್ಲೆಯ ಹೊಸನಗರದ ರಾಮಚಂದ್ರಾಪುರ ಮಠದ ಮಾರ್ಗದರ್ಶನದಿಂದ ಸಾಹಿವಾಲ್ ತಳಿಯನ್ನು ಹುಡುಕಿ ತಂದರು. ಅದನ್ನೇ ತಮ್ಮ ದೇಶಿ ತಳಿಯಾದ ಗಿಡ್ಡದ ಮೂಲಕ ವಂಶಾಭಿವೃದ್ಧಿ ಮಾಡಿ ಒಂದರಿಂದ ಸಾವಿರ ಸಂಖ್ಯೆಯ ತನಕ ಬೆಳೆಸಿದರು. ಇದೇ ತಳಿಯಲ್ಲಿ ಹುಟ್ಟಿರುವ ಮುದ್ದಾದ, ದಪ್ಪನೆಯ ಪುಟ್ಟುವಿಗೆ ಈಗ ಮೂರು ವರ್ಷ ಎಂದಾಗ ಯಾರೂ ನಂಬಲು ಸಾಧ್ಯವಿರಲಿಲ್ಲ. ಬೇರೆ ತಳಿಯಾದರೆ ಇಷ್ಟು ದಪ್ಪ ಬೆಳೆಯಲು ಕನಿಷ್ಟ 12 ವರ್ಷ ಬೇಕು. ಆದರೆ, ಸಾಹಿವಾಲ್ ತಳಿ ಮಾತ್ರ ಕೇವಲ ಮೂರೇ ವರ್ಷಕ್ಕೆ ದೊಡ್ಡದಾಗಿ ಬೆಳೆಯುತ್ತದೆ. ಹುಟ್ಟಿದ ನಾಲ್ಕೇ ವರ್ಷಕ್ಕೆ ಕರುಹಾಕುವ ಈ ತಳಿ ಒಂದು ಹೊತ್ತಿಗೆ 6ರಿಂದ 8 ಲೀಟರ್ ಹಾಲನ್ನು ಇನ್ನೊಮ್ಮೆ ಗರ್ಭಾವಸ್ಥೆಯಾಗುವ ಮೂರು ತಿಂಗಳ ತನಕವೂ ನೀಡುತ್ತದೆ. ಸಾಹಿವಾಲ್ ತಳಿಯ ಹೋರಿ ಬುದ್ದಿಯಲ್ಲೂ ಚುರುಕು. ಆಕಳು ಕೂಡಾ ಬುದ್ಧಿಯಲ್ಲಿ ಇತರ ತಳಿಗಳಿಗಿಂತ ಒಂದು ಹೆಜ್ಜೆ ಮುಂದೆ. ಮಲೆನಾಡ ಭಾಗದಲ್ಲಿ ಇದರ ಬೆಲೆ ಈಗ 15ರಿಂದ 18 ಸಾವಿರ ರೂಪಾಯಿ. ಹೋರಿಗೆ ಕಡಿಮೆ ದರ ಇದ್ದರೂ ಆಕಳಿಗೆ ದರ ಹೆಚ್ಚು. ಈಗ ಈ ತಳಿಯನ್ನು ಯಾರೂ ಮಾರಾಟ ಮಾಡುತ್ತಿಲ್ಲ. ಬೇಕಾದರೆ ಮಲೆನಾಡ ಗಿಡ್ಡದ ಮೂಲಕ ವಂಶಾಭಿವೃದ್ಧಿ ಮಾಡಿಕೊಳ್ಳಬೇಕು. ಹೆಚ್ಚೆಂದರೆ 20 ವರ್ಷಗಳ ಕಾಲ ಬದುಕುವ ಸಾಹಿವಾಲ್ ತಳಿ 5 ಬಾರಿ ಕರುಹಾಕಬಲ್ಲುದು ಎಂಬುದು ಕೃಷಿ ಮೇಳದಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದ ರೈತಾಪಿ ಕುಟುಂಬದ ಸೌಭದ್ರ ಹೆಗಡೆ ಅವರ ಅಭಿಪ್ರಾಯ.
2008: ಉಡುಪಿಯ ಕೃಷ್ಣಾಪುರಮಠದ ಪರ್ಯಾಯ ಸಮಾರೋಪ ಸಂದರ್ಭದಲ್ಲಿ ಕೃಷ್ಣಮಠದ ಮುಖ್ಯಪ್ರಾಣ ದೇವರಿಗೆ (ಹನುಮಂತ) ಅರ್ಪಿಸುವ ಉದ್ದೇಶದಿಂದ ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ನವರತ್ನಸಹಿತ ವಜ್ರಕವಚ ನಿರ್ಮಿಸಲಾಗಿದೆ ಎಂದು ಕೃಷ್ಣಾಪುರ ಮಠಾಧೀಶ ವಿದ್ಯಾಸಾಗರ ತೀರ್ಥರು ಪ್ರಕಟಿಸಿದರು ಕವಚ ಹಾಗೂ ಪಾಣಿಪೀಠ ನಿರ್ಮಾಣಕ್ಕೆ ಒಟ್ಟು 6.7 ಕಿಲೋ ಬಂಗಾರ, 5287 ವಜ್ರದ ಹರಳುಗಳನ್ನು (404.91 ಕ್ಯಾರೆಟ್) ಬಳಸಲಾಗಿದೆ. ಜತೆಗೆ ನವರತ್ನಗಳಾದ ಕೆಂಪು, ನೀಲ, ಪಚ್ಚೆ, ಪುಷ್ಯರಾಗ, ಇತ್ಯಾದಿ 2664 ಹರಳುಗಳನ್ನು (347.96 ಕ್ಯಾರೆಟ್) ಜೋಡಿಸಲಾಗಿದೆ ಎಂದು ಅವರು ವಿವರಿಸಿದರು. ಈ ಹಿಂದೆ ಶ್ರೀಕೃಷ್ಣನ ವಜ್ರಕವಚವನ್ನು ನಿರ್ಮಿಸಿದ ಹೈದರಾಬಾದಿನ ಗಿರಿರಾಜ ಚರಣ ಅವರೇ ಮುಖ್ಯಪ್ರಾಣ ದೇವರ ಕವಚ ನಿರ್ಮಿಸಿದ್ದಾರೆ. ಜನವರಿ 11ರಂದು ರಾತ್ರಿ ಅಷ್ಟಮಠಾಧೀಶರ ಉಪಸ್ಥಿತಿಯಲ್ಲಿ ಇದನ್ನು ಕೃಷ್ಣನಿಗೆ ಸಮರ್ಪಿಸಿ, ಬಳಿಕ ಮುಖ್ಯಪ್ರಾಣದೇವರಿಗೆ ತೊಡಿಸಲಾಗುವುದು ಎಂದು ಸ್ವಾಮೀಜಿ ನುಡಿದರು.
2008: ನ್ಯೂಜಿಲೆಂಡಿನ ನ್ಯಾಯಾಧೀಶ ಜಾನ್ ಹನ್ಸೆನ್ ಅವರನ್ನು ಹರಭಜನ್ ಸಿಂಗ್ ನಿಷೇಧ ಶಿಕ್ಷೆಯನ್ನು ಪ್ರಶ್ನಿಸಿ ಬಿಸಿಸಿಐ ಸಲ್ಲಿಸಿರುವ ಮೇಲ್ಮನವಿ ಬಗ್ಗೆ ವಿಚಾರಣೆ ನಡೆಸುವ ಆಯುಕ್ತರನ್ನಾಗಿ ನೇಮಿಸಲಾಯಿತು. ಜನಾಂಗೀಯ ನಿಂದನೆ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು (ಐಸಿಸಿ) ಹರಭಜನ್ ಗೆ 3 ಟೆಸ್ಟ್ ಪಂದ್ಯಗಳ ನಿಷೇಧ ಹೇರಿತ್ತು. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿತ್ತು. ಹರಭಜನ್ ಕೂಡಾ ಪ್ರತ್ಯೇಕ ಮನವಿ ಸಲ್ಲಿಸಿದ್ದರು.
2008: ಪ್ರತಿಪಕ್ಷ ನಾಯಕ ಎಲ್. ಕೆ.ಅಡ್ವಾಣಿ ಅವರು ಬಿಜೆಪಿ ಹಿರಿಯ ಧುರೀಣ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ದೇಶದ ಅತ್ಯುನ್ನತ ಭಾರತ ರತ್ನ ಪ್ರಶಸ್ತಿ ನೀಡಬೇಕೆನ್ನುವ ಪ್ರಸ್ತಾವನೆಯನ್ನು ಪ್ರಧಾನಿ ಮನಮೋಹನ್ ಸಿಂಗ್ ಅವರ ಮುಂದೆ ಇಟ್ಟರು. ಸಂಸದೀಯ ಪ್ರಜಾಪ್ರಭುತ್ವಕ್ಕೆ ವಾಜಪೇಯಿ ಅವರು ನೀಡಿರುವ ಕೊಡುಗೆ ಗೌರವಿಸಿ ಅವರಿಗೆ ಜನವರಿ 26 ರ ಗಣರಾಜ್ಯೋತ್ಸವದ ದಿನ `ಭಾರತ ರತ್ನ' ಪ್ರಶಸ್ತಿ ನೀಡಬೇಕೆಂದು ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದರು. ವಾಜಪೇಯಿ ಅವರು ದೀರ್ಘಕಾಲ ಸಂಸದೀಯ ಪಟುವಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಅಡ್ವಾಣಿ ಉಲ್ಲೇಖಿಸಿದರು.
2008: ವಿನ್ಯಾಸದಲ್ಲಿ ಒಂದನ್ನೊಂದು ಮೀರಿಸುವ ಮೂರು ಮಾದರಿಯ ಕಾರುಗಳ ಕಾನ್ಸೆಪ್ಟನ್ನು ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ನವದೆಹಲಿಯಲ್ಲಿ ಬಿಡುಗಡೆ ಮಾಡಿತು. ಕಣ್ಣು ಕೋರೈಸುವಂತಿದ್ದ ಎ- ಸ್ಟಾರ್, ಸ್ಪ್ಲಾಷ್ ಮತ್ತು ಕಿಜಾಶಿ ಕಾನ್ಸೆಪ್ಟ್ ಕಾರುಗಳು ವಿಶ್ವ ಮಾರುಕಟ್ಟೆಗೆ ಸುಜುಕಿ ಕೊಡುಗೆ. ಪ್ರಗತಿ ಮೈದಾನದಲ್ಲಿ ಆಟೋ ಎಕ್ಸ್ಪೋ ಪ್ರದರ್ಶನಕ್ಕೆ ಪೂರ್ವಭಾವಿಯಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಶೊಂಜಿ ನಕಾನಿಶಿ ಈ ಕಾರುಗಳ ಕಾನ್ಸೆಪ್ಟನ್ನು ಪರಿಚಯಿಸಿದರು. ಈ ಕಾರುಗಳು ಸಂಪೂರ್ಣವಾಗಿ ಭಾರತದಲ್ಲಿಯೇ ನಿರ್ಮಾಣಗೊಳ್ಳಲಿವೆ. ಕಿಜಾಶಿ ಕಾರು ಸುಜುಕಿ ಮೋಟಾರ್ ಕಾರ್ಪೋರೇಷನ್ನಿನ ಜಪಾನ್ ಘಟಕದಲ್ಲಿ ಸಿದ್ಧಗೊಳ್ಳಲಿದೆ. ಹಲವು ಕಾರಣಗಳಿಗಾಗಿ ಎ- ಸ್ಟಾರ್ ಕಾನ್ಸೆಪ್ಟ್ ಪ್ರಮುಖವಾಗಿದೆ. ಮೊದಲ ಬಾರಿಗೆ ಸಮಾನಾಂತರ ತಂತ್ರಜ್ಞಾನದ ಮೂಲಕ ಮಾರುತಿ ಸುಜುಕಿ ಈ ಕಾರಿನ ಕಾನ್ಸೆಪ್ಟ್ ಸಿದ್ಧಪಡಿಸಿದೆ. ಇದುವರೆಗೆ ವಿದೇಶಿ ಕಾರಿನ ಮಾದರಿಯನ್ನೇ ಇಟ್ಟುಕೊಂಡು ಭಾರತದ ಅಗತ್ಯತೆಗಳಿಗೆ ತಕ್ಕಂತೆ ಪರಿವರ್ತಿಸಿ ಬಿಡುಗಡೆ ಮಾಡಲಾಗುತ್ತಿತ್ತು. ಆದರೆ ಎ ಸ್ಟಾರ್ ಕಾನ್ಸೆಪ್ಟನ್ನು ಮೊತ್ತ ಮೊದಲ ಬಾರಿಗೆ ಭಾರತ ಮತ್ತು ಜಪಾನ್ ತಂತ್ರಜ್ಞರು ಏಕಕಾಲಕ್ಕೆ ಸಿದ್ಧಪಡಿಸಿದ್ದಾರೆ. ಎ ಸ್ಟಾರ್ ವಿನ್ಯಾಸವನ್ನು ರೂಪಿಸಿದವರು ಬೆಂಗಳೂರಿನ ಭಾರತ ವಿಜ್ಞಾನ ಸಂಸ್ಥೆಯಲ್ಲಿ ಓದಿದ ಸೌರವ್ ಮತ್ತು ರಾಜೇಶ್ ಎಂಬ ಇಬ್ಬರು ಯುವಕರು.
2008: ತಮಿಳುನಾಡಿನ ಮದುರೆ ಸಮೀಪದ ದಿಂಡಿಗಲ್ ಕ್ರಾಸ್ ಬಳಿ ಸಂಭವಿಸಿದ ಕಾರು ಮತ್ತು ಲಾರಿ ನಡುವಿನ ಮುಖಾಮುಖಿ ಅಪಘಾತದಲ್ಲಿ ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಳ್ಳಿ ಅವರ ಪುತ್ರ ನಾಗರಾಜ (35) ಮತ್ತು ಮೊಮ್ಮಗ ಕೈಲಾಸ (18) ಮೃತರಾದರು. ಮದುರೆಯಿಂದ ಬೆಂಗಳೂರಿಗೆ ಹೊರಟಿದ್ದ `ಇನ್ನೋವಾ' ಕಾರು ಬೆಳಗಿನ ಜಾವ 2 ಗಂಟೆಗೆ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತರಾಗಿ ಮೂವರು ಗಾಯಗೊಂಡರು. ನಾಗಮಾರಪಲ್ಲಿ ಕುಟುಂಬ ದುರ್ಘಟನೆಗಳ ಸರಮಾಲೆಯನ್ನೇ ಕಂಡಿದೆ. ಕಳೆದ ವರ್ಷ ಒಬ್ಬ ಪುತ್ರನ ಹತ್ಯೆಯಾಗಿದ್ದರೆ, 7 ವರ್ಷದ ಹಿಂದೆ ನಾಗಮಾರಪಲ್ಲಿ ಅವರ ಪತ್ನಿ ಲಕ್ಷ್ಮಿಬಾಯಿ ಅಪಘಾತದಲ್ಲಿ ಮೃತರಾಗಿದ್ದರು.
2008: ಸಿಂಗಪುರದ ಪ್ರಮುಖ ಉದ್ಯಮಪತಿಯಾಗಿರುವ ಮುಂಬೈ ಮೂಲದ ರಾಬರ್ಟ್ ವಿಶ್ವನಾಥನ್ ಚಂದ್ರನ್ ಅವರು ಇಂಡೋನೇಷ್ಯಾದ ರಿವೂ ಪ್ರಾಂತ್ಯದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತರಾದರು. ರಾಬರ್ಟ್ (57) ಅವರು ಸಿಂಗಪುರದಲ್ಲಿ ಬಹುಕೋಟಿ ಡಾಲರ್ ಮೊತ್ತದ ಪೆಟ್ರೋಲಿಯಂ ವ್ಯವಹಾರ ಹೊಂದಿದ್ದರು. ಚೆಮೊಯಿಲ್ ಎನರ್ಜಿ ಕಂಪೆನಿಯನ್ನು ಹುಟ್ಟುಹಾಕಿದ ಅವರ ಆಸ್ತಿ 49 ಕೋಟಿ ಮೊತ್ತದಷ್ಟಿದೆ.
2007: ರಾಷ್ಟ್ರಪತಿ ಡಾ. ಎ ಪಿ ಜೆ ಅಬ್ದುಲ್ ಕಲಾಂ ಅವರು ಅಬು ಧಾಬಿಯಲ್ಲಿ ನೆಲೆಸಿರುವ ಕನ್ನಡಿಗ ಬಿ.ಆರ್. ಶೆಟ್ಟಿ ಸೇರಿದಂತೆ 15 ಮಂದಿ ಭಾರತೀಯ ಮೂಲದ ಜನರಿಗೆ `ಪ್ರವಾಸಿ ಭಾರತೀಯ ಸನ್ಮಾನ' ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ತಮ್ಮ ಕ್ಷೇತ್ರದಲ್ಲಿ ಮಾಡಿದ ಸಾಧನೆ ಹಾಗೂ ಉಭಯ ರಾಷ್ಟ್ರಗಳ ನಡುವಣ ಬಾಂಧವ್ಯ ವೃದ್ಧಿಗಾಗಿ ಈ ಪ್ರಶಸ್ತಿ ನೀಡಲಾಗಿದೆ.
2007: ರೂಪಾ ಬಜ್ವಾ ಅವರ ಇಂಗ್ಲಿಷ್ ಕಾದಂಬರಿ `ಸ್ಯಾರಿ ಶಾಪ್' ಕೃತಿ ಕೇಂದ್ರ ಸಾಹಿತ್ಯ ಅಕಾಡೆಮಿಯ 2006ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾಯಿತು.
2007: ಹಿರಿಯ ಕಥೆಗಾರ ಮೈಸೂರಿನ ಪ್ರೊ. ಮಾಧವ ಕುಲಕರ್ಣಿ ಅವರ `ಉದ್ಯಾನವನ ಮತ್ತು ಇತರ ಕಥೆಗಳು' ಕಥಾ ಸಂಗ್ರಹವು ಮೂಡುಬಿದರೆಯ ವರ್ಧಮಾನ ಪ್ರಶಸ್ತಿ ಪೀಠದ 2005ರ ಸಾಲಿನ ವರ್ಧಮಾನ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಯಿತು. ಚಿಕ್ಕಮಗಳೂರಿನ ಜಯಾ ಯಾಜಿ ಶಿರಾಲಿ ಅವರ `ಶಂಕ್ರಿ' ಕಥಾ ಸಂಕಲನವು ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಯಿತು.
2007: ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷಾ ರಂಗಭೂಮಿಗಳಿಗೂ ರಾಷ್ಟ್ರೀಯ ಸ್ಥಾನಮಾನ ನೀಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಆಗ್ರಹಿಸಿ ಐದು ದಿನಗಳಿಂದ ನಡೆಸುತ್ತಿದ್ದ ನಿರಶನವನ್ನು ಉಭಯ ಸರ್ಕಾರಗಳ ಭರವಸೆ ಮೇರೆಗೆ ಹಿರಿಯ ರಂಗಕರ್ಮಿ ಪ್ರಸನ್ನ ಅವರು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿ ಅಂತ್ಯಗೊಳಿಸಿದರು. ಹನ್ನೊಂದನೇ ಪಂಚವಾರ್ಷಿಕ ಯೋಜನೆಯಡಿ ಐದು ರಾಜ್ಯಗಳಿಗೆ ರಾಷ್ಟ್ರೀಯ ನಾಟಕ ಶಾಲೆಯನ್ನು ಮಂಜೂರು ಮಾಡಿರುವುದಾಗಿಯೂ, ಇದರಲ್ಲಿ ಕರಾಟಕಕ್ಕೆ ಮೊದಲ ಆದ್ಯತೆ ನೀಡುವುದಾಗಿಯೂ ಕೇಂದ್ರ ಸಂಸ್ಕೃತಿ ಖಾತೆ ಸಚಿವೆ ಅಂಬಿಕಾ ಸೋನಿ ದೆಹಲಿಯಲ್ಲಿ ಪ್ರಕಟಿಸಿದರು.
2007: ಇರಾಕಿನ ಪದಚ್ಯುತ ಅಧ್ಯಕ್ಷ ಸದ್ದಾಮ್ ಹುಸೇನ್ ಅವರನ್ನು ಗಲ್ಲಿಗೇರಿಸಿದ ಸಂದರ್ಭದ 27 ಸೆಕೆಂಡುಗಳ ಅವಧಿಯ ಮತ್ತೊಂದು ವಿಡಿಯೋ ಚಿತ್ರ ಇಂಟರ್ನೆಟ್ಟಿನಲ್ಲಿ ಪ್ರಸಾರಗೊಂಡಿತು. ಸದ್ದಾಮ್ ಅವರ ಕೊರಳಲ್ಲಿ ಆಗಿರುವ ಗಾಯ ಈ ವಿಡಿಯೋದಲ್ಲಿ ಎದ್ದು ಕಾಣುತ್ತಿದೆ. ಸದ್ದಾಮ್ ಅವರನ್ನು ನೇಣಿಗೇರಿಸುವುದನ್ನು ಗುಪ್ತವಾಗಿ ಚಿತ್ರೀಕರಣ ಮಾಡಿದ ಎರಡನೇ ಘಟನೆ ಇದು. ಕ್ಯಾಮರಾ ಒಳಗೊಂಡ ಮೊಬೈಲಿನಿಂದ ಈ ಚಿತ್ರಿಕರಣ ಮಾಡಲಾಗಿದ್ದು, ಸದ್ದಾಮ್ ಅವರನ್ನು ನೇಣು ಹಾಕಿದ ಬಳಿಕ ಕೆಳಕ್ಕೆ ಇಳಿಸಿ ಕಬ್ಬಿಣದ ಮಂಚದ ಮೇಲೆ ಮಲಗಿಸುವವರೆಗಿನ ಚಿತ್ರೀಕರಣ ಇದೆ.
2007: ಹಿರಿಯ ಪತ್ರಕರ್ತ, ಖ್ಯಾತ ಕಥೆಗಾರ ಜಿ.ಎಸ್. ಸದಾಶಿವ (67) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಸಂಯುಕ್ತ ಕರ್ನಾಟಕ ಹಾಗೂ ಪ್ರಜಾವಾಣಿ, ಸುಧಾ ವಾರಪತಿಕೆ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದ ಅವರು ಕನ್ನಡ ಪ್ರಭದ ಕಾರ್ಯ ನಿರ್ವಾಹಕ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದರು.
2006: ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿರುವ ಚಾವುಂಡರಾಯ ಪ್ರಶಸ್ತಿಗೆ ಕನ್ನಡದ ಹಿರಿಯ ವಿದ್ವಾಂಸ ಪಂಡಿತ ಪ. ನಾಗರಾಜಯ್ಯ ಆಯ್ಕೆಯಾದರು.
2006: ಅರುಂಧತಿ ರಾಯ್ ಅವರ ರಾಜಕೀಯ ಪ್ರಬಂಧಗಳ ಸಂಕಲನ ದಿ ಅಲ್ಜೀಬ್ರಾ ಆಫ್ ಇನ್ಫಿನಿಟ್ ಜಸ್ಟೀಸ್ 2005ನೇ ಸಾಲಿನ ಕೇಂದ್ರ ಸಾಹಿತ್ಯ ಪ್ರಶಸ್ತಿಯ ಇಂಗ್ಲಿಷ್ ವಿಭಾಗಕ್ಕೆ ಆಯ್ಕೆಯಾಯಿತು.
2006: ಕೇರಳದ ಮಂಗಳಂ ಪ್ರಕಾಶನದ ಮಂಗಳ ಸಾಪ್ತಾಹಿಕದ ಮುಖ್ಯಸಂಪಾದಕ, ಪ್ರಕಾಶನ ಸಂಸ್ಥೆಯ ಮುಖ್ಯಸಂಪಾದಕ ಎಂ.ಸಿ. ವರ್ಗೀಸ್ (73) ಕೊಟ್ಟಾಯಮ್ಮಿನಲ್ಲಿ ನಿಧನರಾದರು. ಮಂಗಳ ಮಲಯಾಳಂ ದಿನಪತ್ರಿಕೆಯಲ್ಲದೆ ಕನ್ನಡದ ಮಂಗಳ ವಾರಪತ್ರಿಕೆ, ಬಾಲ ಮಂಗಳ ಮತ್ತು ಗಿಳಿವಿಂಡು ವರ್ಗೀಸ್ ಅವರ ಅವರ ಒಡೆತನಕ್ಕೆ ಸೇರಿವೆ.
1982: ಡಾ. ಎಸ್. ಝಡ್. ಖಾಸಿಂ ನೇತೃತ್ವದಲ್ಲಿ ದಕ್ಷಿಣ ಧ್ರುವಕ್ಕೆ (ಅಂಟಾರ್ಕ್ಟಿಕಾ) ಭಾರತದ ಮೊದಲ ಸಂಶೋಧನಾ ತಂಡದ ಪಯಣ. `ದಕ್ಷಿಣ ಗಂಗೋತ್ರಿ' ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಯಿತು.
1953: ಮೃದಂಗ, ತಬಲಾ, ಢೋಲಕ್, ಡೋಲ್ಕಿ, ಖೋಲ್, ಖಂಜಿರ ಮತ್ತಿತರ ಹಲವಾರು ವಾದ್ಯಗಳನ್ನು ನುಡಿಸುವುದರಲ್ಲಿ ಖ್ಯಾತಿ ಪಡೆದ ವಾದ್ಯ ಸಂಗೀತಗಾರ ಎಸ್. ಬಾಲಸುಬ್ರಹ್ಮಣ್ಯ ಅವರು ಬಯಾಲಜಿ ಸುಂದರೇಶನ್ ಎಂದೇ ಖ್ಯಾತರಾಗಿದ್ದ ಎಂ.ವಿ. ಸುಂದರೇಶನ್- ಸಾವಿತ್ರಿ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು.
1926: ಕಲಾವಿದೆ ಲಲಿತಾ ದೊರೈ ಜನನ.
1915: ಮಹಾತ್ಮಾ ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ತಮ್ಮ ಮೊತ್ತ ಮೊದಲ ಕಾನೂನುಭಂಗ ಚಳವಳಿ ನಡೆಸಿದ ಬಳಿಕ ಬಾಂಬೆಗೆ (ಈಗಿನ ಮುಂಬೈ) ಹಿಂದಿರುಗಿದರು. ಅಪೋಲೊ ಬಂದರಿಗೆ ಅವರಿದ್ದ ಹಡಗು ಬಂದಾಗ ವೈಸ್ರಾಯ್ ಸೇರಿದಂತೆ ಪ್ರಮುಖ ವ್ಯಕ್ತಿಗಳು ಹಾಜರಿದ್ದರು.
1913: ಅಮೆರಿಕಾದ ಅಧ್ಯಕ್ಷ ರಿಚರ್ಡ್ ಎಂ. ನಿಕ್ಸನ್ (1913-1994) ಹುಟ್ಟಿದ ದಿನ. 1969-74ರ ಅವಧಿಯಲ್ಲಿ ಅಮೆರಿಕಾದ ಅಧ್ಯಕ್ಷರಾಗಿದ್ದ ಇವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಮೊದಲ ಅಮೆರಿಕನ್ ಅಧ್ಯಕ್ಷ.
1873: ಫ್ರಾನ್ಸಿನ ಚಕ್ರವರ್ತಿ ನೆಪೋಲಿಯನ್ ಬೋನಪಾರ್ಟೆಯ ಸೋದರ ಸಂಬಂಧಿ 3ನೇ ನೆಪೋಲಿಯನ್ ತನ್ನ 64ನೇ ವಯಸ್ಸಿನಲ್ಲಿ ಕೆಂಟ್ನಲ್ಲಿ ಗಡೀಪಾರಾಗಿದ್ದ ಸಮಯದಲ್ಲಿ ಮೃತನಾದ.
1839: ಫೊಟೋಗ್ರಾಫ್ ಸಂಸ್ಕರಣೆಯ ಪೂರ್ಣ ವಿವರಣೆಯನ್ನು ಅಕಾಡೆಮಿ ಆಫ್ ಸೈನ್ಸಸ್ ಸಭೆಯಲ್ಲಿ ಖ್ಯಾತ ಖಗೋಳ ತಜ್ಞ ಹಾಗೂ ಭೌತತಜ್ಞ ಡಿ.ಎಫ್.ಜೆ. ಆರಗೊ ಪ್ರಕಟಿಸಿದರು. ಫ್ರಾನ್ಸಿನ ಜೋಸೆಫ್ ನೀಸೆಫೋರ್ ನೀಪೆಸ್ ಅವರು 1926-27ರಲ್ಲಿ ಮೊತ್ತ ಮೊದಲ ಫೊಟೋಗ್ರಾಫ್ ತಯಾರಿಸಿದ್ದರೂ ಅದರ ಗುಣಮಟ್ಟ ತುಂಬಾ ಕೆಳಮಟ್ಟದ್ದಾಗಿತ್ತು. ಅದನ್ನು ತಯಾರಿಸಲು ಸಮಯ ಕೂಡಾ 8 ಗಂಟೆ ಬೇಕಾಗುತ್ತಿತ್ತು. ಡ್ಯಾಗುಯೆರೆ ಅಭಿವೃದ್ಧಿ ಪಡಿಸಿದ ಸಂಸ್ಕರಣಾ ವಿಧಾನ ಕೇವಲ 20-30ರಿಂದ ನಿಮಿಷಗಳನ್ನು ತೆಗೆದುಕೊಂಡಿತು.
No comments:
Post a Comment