Tuesday, July 25, 2017

ರಮಾನಾಥ ರೈ ಅವರಿಗೆ ರಾಜ್ಯ ಗೃಹ ಸಚಿವ ಪಟ್ಟ Ramananth Rai to become Home Minister

ರಮಾನಾಥ ರೈ ಅವರಿಗೆ ರಾಜ್ಯ ಗೃಹ ಸಚಿವ ಪಟ್ಟ
ಬೆಂಗಳೂರು: ಕೆ.ಪಿ.ಸಿ.ಸಿ. ಅಧ್ಯಕ್ಷರಾಗಿರುವ ಡಾ.ಜಿ. ಪರಮೇಶ್ವರ್‌ ಅವರು ತೆರವುಗೊಳಿಸಿದ್ದ ಗೃಹ ಖಾತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಅರಣ್ಯ ಸಚಿವ ರಮಾನಾಥ ರೈ ಅವರಿಗೆ  ನೀಡಲು ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ ಎಂದು ಸುದ್ದಿಮೂಲಗಳು ತಿಳಿಸಿವೆ.


ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು. ಮಂಗಳವಾರ ಈ ಸಂಬಂಧ ಸಚಿವ ರಮಾನಾಥ ರೈ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಗೃಹ ಖಾತೆಯ ಜವಾಬ್ದಾರಿ ನೀಡುವ ಕುರಿತು  ಚರ್ಚಿಸಿದರು.  ಹೈಕಮಾಂಡ್‌ ಸೂಚನೆಯನ್ನೂ ರೈ ಅವರಿಗೆ ಮನವರಿಕೆ ಮಾಡಿಕೊಟ್ಟರು.

ಚರ್ಚೆಯ ಬಳಿಕ ರಮಾನಾಥ ರೈ ಗೃಹ ಖಾತೆಯ ಜವಾಬ್ದಾರಿ ಹೊರಲು ಸಹಮತಿ ವ್ಯಕ್ತಪಡಿಸಿದ್ದಾರೆ ಎಂದು ಸಿಎಂ ಆಪ್ತ ಮೂಲಗಳು ತಿಳಿಸಿವೆ.

Ramananth Rai to become Home Minister 

Saturday, July 22, 2017

“ತೆಂಗಿನ ಕಾಯಿ”ಗೆ ಮತ, ಬೆಳಗಿತು “ಕಮಲ”ದ ಬಲ್ಬ್!

“ತೆಂಗಿನ ಕಾಯಿ”ಗೆ ಮತ,
ಬೆಳಗಿತು “ಕಮಲ”ದ ಬಲ್ಬ್!
ಮುಂಬೈ: ವಿದ್ಯುನ್ಮಾನ ಮತಯಂತ್ರಗಳು (ಇವಿಎಂ) ಸಂಪೂರ್ಣ ದೋಷಮುಕ್ತ ಎಂಬುದಾಗಿ ಭಾರತದ ಚುನಾವಣಾ ಆಯೋಗ ನಿರಂತರ ಪ್ರತಿಪಾದಿಸುತ್ತಿದ್ದರೂ, ಇವಿಎಂ ಅಸಮರ್ಪಕವಾಗಿ ಕಾರ್ಯ ನಿರ್ವಹಿಸಿದ ಪ್ರಕರಣ ಮಹಾರಾಷ್ಟ್ರದಲ್ಲಿ ಘಟಿಸಿದೆ.
ಮಾಹಿತಿ ಹಕ್ಕು ಕಾಯ್ದೆಯ ಅಡಿ ಒದಗಿಸಲಾದ ಮಾಹಿತಿಯಿಂದ ಇದು ಬೆಳಕಿಗೆ ಬಂದಿದೆ.
ಬುಲ್ದಾನ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಸುಲ್ತಾನಪುರ ಮತಗಟ್ಟೆಯಲ್ಲಿ ಈ ಘಟನೆ ಘಟಿಸಿದೆ. ಯಾರೇ ವ್ಯಕ್ತಿ ಪಕ್ಷೇತರ ಅಭ್ಯರ್ಥಿ ಒಬ್ಬರ ತೆಂಗಿನಕಾಯಿ ಚಿಹ್ನೆಗೆ ಮತ ಹಾಕಿದಾಗಲೆಲ್ಲ, ಬಿಜೆಪಿಯ ಕಮಲ ಚಿಹ್ನೆಯ ಮುಂಭಾಗದ ಎಲ್ಇಡಿ ಬಲ್ಬ್ ಮಿನುಗುತ್ತಿತ್ತು ಎಂದು ಆರ್ ಟಿಐ ಮಾಹಿತಿ ಹೇಳಿದೆ.
ಚುನಾವಣಾಧಿಕಾರಿ ಈ ವಿಷಯವನ್ನು ಜಿಲ್ಲಾಧಿಕಾರಿಗೆ ವರದಿ ಮಾಡಿದ್ದರು ಎಂದು ಆರ್ ಟಿ ಐ ಮಾಹಿತಿ ತಿಳಿಸಿದೆ.
Voted for Coconut, But Lotus Lit Up!
For details Visit: www.paryaya.com 

Friday, July 21, 2017

“ಅಡಾಲ್ಫ್ ಹಿಟ್ಲರ್’ ಆಗಿ ಕಿರಣ್ ಬೇಡಿ! ಕಾಂಗ್ರೆಸ್ಸಿನಿಂದ ಪೋಸ್ಟರ್ ವಾರ್!

“ಅಡಾಲ್ಫ್ ಹಿಟ್ಲರ್’ ಆಗಿ ಕಿರಣ್ ಬೇಡಿ!
ಪುದುಚೆರಿ: ಪುದುಚೆರಿಯ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಮತ್ತು ಕಾಂಗ್ರೆಸ್ ನಡುವಣ ಘರ್ಷಣೆ ಅತ್ಯಂತ ಕೊಳಕು ತಿರುವನ್ನು ಪಡೆದುಕೊಂಡಿದ್ದು, ಕಾಂಗ್ರೆಸ್ ಪಕ್ಷವು ಬೇಡಿ ಅವರನ್ನು “ಅಡಾಲ್ಫ್ ಹಿಟ್ಲರ್’ನಂತೆ ಬಿಂಬಿಸುವ ಪೋಸ್ಟರುಗಳನ್ನು ಪ್ರಕಟಿಸಿದೆ.
ಸ್ವತಃ ಕಿರಣ್ ಬೇಡಿ ಅವರು ಈ ಪೋಸ್ಟರನ್ನು ಗುರುವಾರ, 20 ಜುಲೈ 2017ರಂದು ಟ್ವೀಟ್ ಮಾಡಿದ್ದಾರೆ.
ಪೋಸ್ಟರಿನಲ್ಲಿ ಕಿರಣ್ ಬೇಡಿ ಚಿತ್ರಕ್ಕೆ ಹಿಟ್ಲರ್ ಮೀಸೆಯನ್ನು ಬಿಡಿಸಲಾಗಿದೆ. ಶಾಸಕರ  ನಾಮಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ತಮ್ಮನ್ನು ಖಂಡಿಸುವ ಭರದಲ್ಲಿ ಸ್ಥಳೀಯ ಕಾಂಗ್ರೆಸ್ ಘಟಕವು ತಮ್ಮ ಚಿತ್ರವನ್ನು ಈ ರೀತಿಯಾಗಿ ವಿರೂಪಗೊಳಿಸಿದೆ ಎಂದು ಕಿರಣ್ ಬೇಡಿ ಹೇಳಿದ್ದಾರೆ.
ಇದಕ್ಕೆ ಮುನ್ನ ಆಡಳಿತಾರೂಢ ಕಾಂಗ್ರೆಸ್ ಸದಸ್ಯರು ಮೂವರು ಬಿಜೆಪಿ ಸದಸ್ಯರನ್ನು ಪುದುಚರಿ ವಿಧಾನಸಭೆಗೆ ತಮ್ಮ ಬಳಿ ಸಮಾಲೋಚಿಸದೆಯೇ ನಾಮಕರಣ ಮಾಡಿದ್ದನ್ನು ಪ್ರತಿಭಟಿಸಿ ಮೆರವಣಿಗೆ ನಡೆಸಿದ್ದರು.
Visit: www.paryaya.com

Wednesday, July 19, 2017

ಶಿಮ್ಲಾ: ಕಣಿವೆಗೆ ಉರುಳಿದ ಬಸ್ಸು, 20ಕ್ಕೂ ಹೆಚ್ಚು ಸಾವು

ಶಿಮ್ಲಾ: ಕಣಿವೆಗೆ ಉರುಳಿದ ಬಸ್ಸು,

 20ಕ್ಕೂ ಹೆಚ್ಚು ಸಾವು
ಶಿಮ್ಲಾ: ಹಿಮಾಚಲ ಪ್ರದೇಶದ ಶಿಮ್ಲಾದ ರಾಮಪುರದಲ್ಲಿ ಬಸ್ಸೊಂದು ಕಣಿವೆ ಉರುಳಿದ ಪರಿಣಾಮವಾಗಿ ಗುರುವಾರ, 20ನೇ ಜುಲೈ 2017ರಂದು 28ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ.

ಬಸ್ಸು ಸೋಲನ್ ಕಡೆಗೆ ಪ್ರಯಾಣ ಹೊರಟಿತ್ತು
.
ರಕ್ಷಣಾ ಕಾರ್ಯಾಚರಣೆ ಜಾರಿಯಲ್ಲಿದೆ ಎಂದು ವರದಿ ತಿಳಿಸಿದೆ.

Over 20 killed in Bus accient: Visit – www.paryaya.com

ಪಾಕ್ ಭಯೋತ್ಪಾದಕರ “ಸುರಕ್ಷಿತ ಸ್ವರ್ಗ” ಎನ್ನುತ್ತಿದೆ ಅಮೆರಿಕ..!

ಪಾಕ್ ಭಯೋತ್ಪಾದಕರ “ಸುರಕ್ಷಿತ ಸ್ವರ್ಗ” ಎನ್ನುತ್ತಿದೆ ಅಮೆರಿಕ..

ವಾಷಿಂಗ್ಟನ್:  ಪಾಕಿಸ್ತಾನ ಭಯೋತ್ಪಾದಕರ “ಸುರಕ್ಷಿತ ಸ್ವರ್ಗ’ ಎಂದು ಅಮೆರಿಕ ಹೇಳಿದೆ. ಬುಧವಾರ, 19 ಜುಲೈ 2017ರಂದು “ಕಂಟ್ರಿ ರಿಪೋರ್ಟ್ ಆನ್ ಟೆರರಿಸಂ’ ಎಂಬ ತನ್ನ ವರದಿಯಲ್ಲಿ ಪಾಕಿಸ್ತಾನವು ಭಯೋತ್ಪಾದಕರಿಗೆ ಸುರಕ್ಷಿತವಾದ ಸ್ವರ್ಗಳಾಗಿರುವ ರಾಷ್ಟ್ರಗಳಲ್ಲಿ ಪಾಕಿಸ್ತಾನವೂ ಸೇರಿದೆ ಎಂದು ಅಮೆರಿಕ ತಿಳಿಸಿದೆ.

ವಿದೇಶಾಂಗ ಇಲಾಖೆಯು ಅಮೆರಿಕನ್ ಕಾಂಗ್ರೆಸ್ಸಿನ ಒಪ್ಪಿಗೆ ಪಡೆದಿರುವ  ಈ ವಾರ್ಷಿಕ  ವರದಿಯಲ್ಲಿ ಎಲ್ ಇಟಿ ಮತ್ತು ಜೆಇಎಂನಂತಹ ಭಯೋತ್ಪಾದಕರ ಸಂಘಟನೆಗಳು ಪಾಕಿಸ್ತಾನದಲ್ಲಿ 2016ರಿಂದಲೂ ಕಾರ್ಯಾಚರಣೆ, ತರಬೇತಿಗಳನ್ನು ಸಂಘಟಿಸುತ್ತಿವೆ ಜತೆಗೆ ನಿಧಿ ಸಂಗ್ರಹವನ್ನೂ ಮಾಡುತ್ತಿವೆ ಎಂದು ಹೇಳಿದೆ.

ಪಾಕಿಸ್ತಾನಿ ಸೇನೆ ಮತ್ತು ಭದ್ರತಾ ಪಡೆಗಳು ತೆಹ್ರೀಕ್- ಇ – ತಾಲಿಬಾನ್ ಪಾಕಿಸ್ತಾನ್ ನಂತಹ ಪಾಕಿಸ್ತಾನದಲ್ಲಿ ದಾಳಿ ನಡೆಸುತ್ತಿರುವ ಸಂಘಟನೆಗಳ ವಿರುದ್ದ ಕಾರ್ಯಾಚರಣೆ ಕೈಗೊಂಡಿವೆ. ಆದರೆ ಅಫ್ಘನ್ ತಾಲಿಬಾನ್ ಅಥವಾ ಹಖ್ಖಾನಿ ಇತ್ಯಾದಿ ಸಂಘಟನೆಗಳ ವಿರುದ್ಧ ಪರಿಣಾಮಕಾರಿ ಕೈಗೊಂಡಿಲ್ಲ ಎಂದು ವರದಿ ಹೇಳಿದೆ.


ವಿವರಗಳಿಗೆ ಭೇಟಿ ಕೊಡಿ: www.paryaya.com

Friday, July 14, 2017

ತ್ರಾಲ್‌ನಲ್ಲಿ ಗುಂಡಿನ ಕಾಳಗ: ಇಬ್ಬರು ಭಯೋತ್ಪಾದಕರ ಹತ್ಯೆ

ತ್ರಾಲ್‌ನಲ್ಲಿ ಗುಂಡಿನ ಕಾಳಗ: ಇಬ್ಬರು ಭಯೋತ್ಪಾದಕರ ಹತ್ಯೆ

ಶ್ರೀನಗರ: ದಕ್ಷಿಣ ಕಾಶ್ಮೀರದ ತ್ರಾಲ್‌ ಪ್ರದೇಶದ ಸತೋರಾದಲ್ಲಿ ಶನಿವಾರ 15 ಜುಲೈ 2017ರಂದು  ಭದ್ರತಾಪಡೆಗಳು ಕಾರ್ಯಾಚರಣೆ ನಡೆಸಿ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಗೈದಿವೆ. 
ಭಯೋತ್ಪಾದಕರ ವಾಸ್ತವ್ಯ ಬಗ್ಗೆ ಗುಪ್ತಚರ ಇಲಾಖೆಯ ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆಗಿಳಿದ ಸೇನಾ ಪಡೆಗಳು ಇಬ್ಬರನ್ನು ಹತ್ಯೆಗೈದು ಕಾರ್ಯಾಚರಣೆ ಮುಂದುವರೆಸಿದವು. ಇನ್ನೂ ಕೆಲ ಭಯೋತ್ಪಾಕದರು ಅಡಗಿರುವ ಬಗ್ಗೆ ವರದಿಯಾಗಿದೆ. 
ಇದೇ ಭಯೋತ್ಪಾದಕರು ಜೂನ್‌ 9 ರಂದು ತ್ರಾಲ್‌ನ  ಅರಿಬಾಲ್‌ನ ಸಿಆರ್‌ಪಿಎಫ್ ಕ್ಯಾಂಪ್‌ಗೆ ಗ್ರೆನೇಡ್‌ ಎಸೆದಿದ್ದರು ಎನ್ನಲಾಗಿದ್ದು, ಈ ದಾಳಿಯಲ್ಲಿ ಓರ್ವ ಬಿಎಸ್‌ಎಫ್ ಜವಾನ ಗಾಯಗೊಂಡಿದ್ದ. 

ಪ್ರಸಕ್ತ ವರ್ಷ ಸೇನಾ ಪಡೆಗಳು ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು  ಕಾಶ್ಮೀರದಲ್ಲಿ 102 ಉಗ್ರರನ್ನು ಹತ್ಯೆಗೈದಿರುವ ಅಂಕಿ ಅಂಶ ಲಭ್ಯವಾಗಿದೆ. 
Two Terrorists gunned down at Tral, J & K.

Thursday, July 13, 2017

ಬ್ಲಡ್ ಕ್ಯಾನ್ಸರ್ ವಿರುದ್ಧ ಜೀನ್ ಥೆರೆಪಿ, ವಿಶ್ವದ ಪ್ರಥಮ ರಾಷ್ಟ್ರ ಅಮೆರಿಕ

ಬ್ಲಡ್ ಕ್ಯಾನ್ಸರ್ ವಿರುದ್ಧ ಜೀನ್ ಥೆರೆಪಿ, ವಿಶ್ವದ

ಪ್ರಥಮ ರಾಷ್ಟ್ರ
ಅಮೆರಿಕ
ವಾಷಿಂಗ್ಟನ್:  ಮಕ್ಕಳು, ಹದಿಹರೆಯದ ಮಂದಿಯ ಜೀವ ಹಿಂಡುವ ಸಾಮಾನ್ಯ ಬ್ಲಡ್ ಕ್ಯಾನ್ಸರ್ (ಲ್ಯುಕೇಮಿಯಾ) ಕಾಯಿಲೆಗೆ ವಂಶವಾಹಿ ಚಿಕಿತ್ಸೆ (ಜೀನ್ ಥೆರೆಪಿ) ಒದಗಿಸುವ ವಿಶ್ವದ ಪ್ರಥಮ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಅಮೆರಿಕ ಪಾತ್ರವಾಗಿದೆ.

ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ಸಲಹಾ ಸಮಿತಿಯು 2017 ಜುಲೈ 12ರ ಬುಧವಾರ 10-0 ಮತಗಳ ಅಂತರದಲ್ಲಿ ಯುನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾ ಅಂಡ್ ನೋವಾರ್ಟಿಸ್ ಕಾರ್ಪೋರೇಷನ್ ಅಭಿವೃದ್ಧಿ ಪಡಿಸಿದ ಲ್ಯುಕೇಮಿಯಾ ಚಿಕಿತ್ಸೆಗೆ ಅನುಮತಿ ನೀಡಿದೆ.

ಚಿಕಿತ್ಸೆ ಹೇಗೆ?
ಸಿಎಆರ್-ಟಿ (ಕಾರ್-ಟಿ) ಹೆಸರಿನ ಈ ವಂಶವಾಹಿ ಚಿಕಿತ್ಸೆಯಲ್ಲಿ ರೋಗಿಯ ಪ್ರತಿರಕ್ಷಣಾ ಕೋಶಗಳನ್ನು (ಇಮ್ಯೂನ್ ಸೆಲ್ಸ್) ತೆಗೆದುಕೊಂಡು, ಅವುಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿ ಮತ್ತೆ ದೇಹಕ್ಕೆ ಮರುಸೇರ್ಪಡೆ ಮಾಡಲಾಗುತ್ತದೆ.

ಕೃತಕ ಪ್ರಯೋಗಾಲಯದಲ್ಲಿರೋಗಿಯ ರಕ್ತದಲ್ಲಿನ ಪ್ರತಿರಕ್ಷಣಾ ಕೋಶಗಳ ಸಂಖ್ಯೆಯನ್ನು ಹೆಚ್ಚಿಸಿ ಅವು ಕ್ಯಾನ್ಸರ್ ಕೋಶಗಳನ್ನು ನಾಶಪಡಿಸುವಂತೆ ಮಾಡಿ ಬಳಿಕ ಅದನ್ನು ರಕ್ತಕ್ಕೆ ಸೇರಿಸಲಾಗುತ್ತದೆ. ದೇಹದಲ್ಲಿ ಮಾರ್ಪಾಡುಗೊಂಡ ಪ್ರತಿರಕ್ಷಣಾ ಕೋಶಗಳು ಅಗಣಿತವಾಗಿ ಬೆಳೆದು ಕ್ಯಾನ್ಸರ್ ಕೋಶಗಳನ್ನು ಕೊಂದು ಹಾಕುತ್ತವೆ.

ಚಿಕಿತ್ಸೆ ಪಡೆದ ಪ್ರಥಮ ಬಾಲಕಿ ಎಮಿಲಿ
ಪೆನ್ಸಿಲ್ವೇನಿಯಾದ ಫಿಲಿಪ್ಸ್ ಬರ್ಗಿನ ಟೋಮ್ ವೈಟ್ ಹೆಡ್ ಅವರ ಪುತ್ರಿ 12 ವರ್ಷದ ಎಮಿಲಿ ಐದು ವರ್ಷಗಳ ಹಿಂದೆ ಪ್ರಯೋಗಾತ್ಮಕವಾಗಿ ಈ ಚಿಕಿತ್ಸೆ ಪಡೆದು ಸಂಪೂರ್ಣವಾಗಿ ಗುಣಮುಖಳಾಗಿದ್ದಾಳೆ.

ಅಂದಿನಿಂದಲೂ ಈ ಚಿಕತ್ಸೆಗೆ ಸರ್ಕಾರಿ ಮನ್ನಣೆ ಪಡೆಯಲು ಯತ್ನಗಳು ನಡೆದಿದ್ದು ಇದೀಗ ಸರ್ಕಾರ ಸಮ್ಮತಿ ಮುದ್ರೆ ಲಭಿಸಿದೆ.

ವೆಚ್ಚ ಎಷ್ಟಾಗಬಹುದು?
ತಜ್ಞರ ಪ್ರಕಾರ ಈ ಚಿಕಿತ್ಸೆಗೆ ಅಂದಾಜು ಸಹಸ್ರ ಡಾಲರ್ ವೆಚ್ಚ ಆಗಬಹುದು. ಆದರೆ ಒಮ್ಮೆ ಚಿಕಿತ್ಸೆ ಪಡೆದರೆ ಸಾಕು, ಜೀವಮಾನ ಪರ್ಯಂತ ರೋಗಿಗೆ ಮತ್ತೆ ಈ ಕ್ಯಾನ್ಸರ್ ಕಾಡುವುದಿಲ್ಲ.

ಅಡ್ಡ ಪರಿಣಾಮಗಳಿವೆಯೇ?

ಚಿಕಿತ್ಸೆ ನೀಡುವ ಹಂತದಲ್ಲಿ ಜ್ವರ ಕಾಡಬಹುದು. ಇತರ ಅಡ್ಡ ಪರಿಣಾಮಗಳ ಬಗ್ಗೆ ಈವರೆಗೆ ಸ್ಪಷ್ಟತೆ ಲಭಿಸಿಲ್ಲ.

ವಿಜ್ಞಾನಿಗಳು ಇದೀಗ ಈ ಚಿಕಿತ್ಸೆಯನ್ನು ಇತರ ಕ್ಯಾನ್ಸರ್ ರೋಗಗಳಲ್ಲೂ ಪ್ರಯೋಗಿಸಬಹುದೇ ಎಂದು ಅಧ್ಯಯನ ಮಾಡುತ್ತಿದ್ದಾರೆ.

ಹೆಚ್ಚಿನ ವಿವರಗಳಿಗೆ: www.paryaya.com