Sunday, February 27, 2022

PARYAYA: ಕಿಸಾನ್ ‘ದ್ರೋಣ’ ನಿನಗಿದೋ ಸಲಾಂ…!

 ಕಿಸಾನ್  ‘ದ್ರೋಣ’ ನಿನಗಿದೋ ಸಲಾಂ…!

ಒಂದು ಕಥೆ ನೆನಪಾಗ್ತದೆ. ಮಹಾಭಾರತದ ಕಥೆ ಅದು.  ಪಾಂಡವರು ಮತ್ತು ಕೌರವರು ಎಳೆಯರಾಗಿದ್ದಾಗ ಬಾವಿಯೊಂದರ ಸಮೀಪ ಆಟವಾಡ್ತಾ ಇದ್ದರು. ಆಟದ ಮಧ್ಯೆ ಅವರ ಚೆಂಡು ಬಾವಿಗೆ ಬಿತ್ತು. ಮಕ್ಕಳೆಲ್ಲ ಬಾವಿಯ ಸುತ್ತ ನಿಂತು ನೋಡಿದರು. ಚೆಂಡು ಆಳಕ್ಕೆ ಬಿದ್ದಿದೆ. ಚೆಂಡನ್ನು ಮೇಲೆ ತರುವುದು ಹೇಗೋ ಗೊತ್ತಾಗಲಿಲ್ಲ.

ಅಷ್ಟರಲ್ಲಿ ಅಲ್ಲೊಬ್ಬ ಗಡ್ಡಧಾರಿ ಯುವಕ ಬಂದ.ಮಕ್ಕಳೆಲ್ಲ ಬಾವಿ ಸುತ್ತ ಸೇರಿ ಬಾವಿಗೆ ಇಣುಕುತ್ತಿದ್ದುದನ್ನು ಕಂಡ. ‘ಏನಪ್ಪ ಕಥೆ?’ ಎಂದು ಕೇಳುತ್ತಾ ತಾನೂ ಇಣುಕಿ ನೋಡಿದ. ಚೆಂಡು ಆಳವಾದ ಬಾವಿಯ ನೀರಿನಲ್ಲಿ ತೇಲುತ್ತಿದ್ದುದು ಕಂಡಿತು.

‘ಅರಸುಮಕ್ಕಳು ನೀವು, ಶಸ್ತ್ರಾಸ್ತ್ರ ನಿಪುಣರು. ನಿಮಗೆ ಯಾರಿಗೂ ಚೆಂಡನ್ನು ಹೊರತೆಗೆಯುವ ಬಗೆ ಗೊತ್ತಿಲ್ಲವೇ?’ ಅಂತ ಮಕ್ಕಳನ್ನು ಕೇಳಿದ.

ಮಕ್ಕಳೆಲ್ಲ ‘ಉಹೂಂ’ ಎಂದರು. ‘ನಾನು ತೋರಿಸ್ತೇನೆ ನೋಡಿ’ ಅಂತ ಹೇಳಿದ ಗಡ್ಡಧಾರಿ ಯುವಕ ದರ್ಭೆಯೊಂದನ್ನು ಮಂತ್ರಿಸಿ ಚೆಂಡಿನತ್ತ ಗುರಿ ಮಾಡಿ ಬಾವಿಗೆ ಎಸೆದ. ಅದು
 ನೇರವಾಗಿ ಸಾಗಿ ಚೆಂಡಿನ ಹೊರಮೈಯನ್ನು ಕಚ್ಚಿಕೊಂಡಿತುಯುವಕ ಇನ್ನೊಂದು

ದರ್ಭೆಯನ್ನು ಮಂತ್ರಿಸಿ ಎಸೆದಅದು ಮೊದಲಿನ ದರ್ಭೆಯ ಹಿಂಭಾಗಕ್ಕೆ ಅಂಟಿಕೊಂಡಿತುಹಾಗೆಯೇ ಇನ್ನೊಂದಷ್ಟು ದರ್ಭೆಗಳನ್ನು ಬಾಣಗಳನ್ನು ಬಿಡುವಂತೆ ಒಂದೊಂದಾಗಿ ಬಾವಿಗೆ ಎಸೆದಎಲ್ಲವೂ ಒಂದಕ್ಕೊಂದು ಜೋಡಿಕೊಂಡು ಹಗ್ಗದಂತೆ ಬೆಸೆದವುಬಳಿಕ ಯುವಕ ಅದನ್ನು ಮೇಲಕ್ಕೆ ಎಳೆದ. ಅದರ ಜೊತೆಗೇ ಚೆಂಡು ಬಾವಿಯಿಂದ ಹೊರಕ್ಕೆ ಬಂತು.

ಮಕ್ಕಳು ಅರಮನೆಗೆ ಓಡಿ ತಾತ ಭೀಷ್ಮನಿಗೆ ಈ ವಿಚಾರವನ್ನು ಹೇಳಿದವು. ಭೀಷ್ಮ ಮೈದಾನಕ್ಕೆ ಸರಸರನೆ ಬಂದ. ಮಂತ್ರ ದರ್ಭೆ  ಪ್ರಯೋಗದಿಂದ  ಚೆಂಡನ್ನು ಹೊರತೆಗೆದ ಗಡ್ಡಧಾರಿಯನ್ನು ಆತ್ಮೀಯವಾಗಿ ಅರಮನೆಗೆ ಕರೆದೊಯ್ಡು ಉಪಚರಿಸಿದ. ಮಕ್ಕಳಿಗೆ ಬಿಲ್ವಿದ್ಯೆಯನ್ನು ಹೇಳಿಕೊಡಬೇಕು ಅಂತ ಕೇಳಿಕೊಂಡ. 

ಆ ಬಳಿಕ ಪಾಂಡವರು, ಕೌರವರು ಆತನಿಂದಲೇ ಬಿಲ್ವಿದ್ಯೆ ಕಲಿತು ಶಸ್ತ್ರಾಸ್ತ್ರ ಪ್ರಯೋಗದಲ್ಲಿ ಪಾರಂಗತರಾದರು.

ಈ ಗಡ್ಡಧಾರಿ ಯುವಕ ಯಾರೆಂದು ನಿಮಗೆ ಈಗಾಗಲೇ ಗೊತ್ತಾಗಿರಬೇಕಲ್ಲವೇ?

‘ಹೌದು’ ಆತನೇ ದ್ರೋಣ. ಮುಂದಕ್ಕೆ ‘ದ್ರೋಣಾಚಾರ್ಯ’ ಎಂದೇ ಪರಿಚಿತನಾದ. ಗುರಿ ಇಡುವುದರಲ್ಲಿ ಈ ದ್ರೋಣ ಹೆಸರುವಾಸಿ. ಬಾಣ ಬಿಡುವಾಗ ಗುರಿ ಇಟ್ಟು ಬಿಡುವುದು ಅತ್ಯಗತ್ಯ ಎಂಬುದನ್ನು ಆತ ಹೇಳಿಕೊಟ್ಟಿದ್ದ. ಮಕ್ಕಳ ಪೈಕಿ ಅರ್ಜುನ ಅವರ ಮಾತುಗಳನ್ನು ಲಕ್ಷ್ಯವಿಟ್ಟು ಕೇಳಿಕೊಂಡು ಆತನ ಅಚ್ಚುಮೆಚ್ಚಿನ ಶಿಷ್ಯನಾಗಿದ್ದ. 

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು, ಕೃಷಿಕರಿಗೆ ಅನುಕೂಲವಾಗುವ ಉಪಕರಣ ಒಂದಕ್ಕೆ ಇತ್ತೀಚೆಗೆ ಚಾಲನೆ ನೀಡಿದರು. ಆ ಉಪಕರಣದ ಹೆಸರೇನು ಗೊತ್ತೇ? ‘ದ್ರೋಣ’. ಇಂಗ್ಲಿಷ್ ಪ್ರಭಾವ ನೋಡಿ. ನಾವು ಆ ಪದವನ್ನು ‘ಡ್ರೋನ್’ ಎಂಬುದಾಗಿ ಉಚ್ಚರಿಸುತ್ತೇವೆ.

ಮಹಾಭಾರತದ ದ್ರೋಣ ಹೇಗೆ ನಿಖರವಾಗಿ ಗುರಿ ಇಟ್ಟು ಬಾಣ ಪ್ರಯೋಗ ಮಾಡುತ್ತಿದ್ದನೋ ಹಾಗೆಯೇ ಈ ‘ಡ್ರೋನ್’ ಕೂಡಾ ನಿಖರತೆಗೆ ಹೆಸರುವಾಸಿ. ಈ ‘ಡ್ರೋನ್’ಗೆ ಏನಾದರೂ ಒಂದು ವಸ್ತನ್ನು ಜೋಡಿಸಿ, ನಿರ್ದಿಷ್ಟ ಜಾಗಕ್ಕೆ ತಲುಪಿಸಲು ಸೂಚನೆ ಕೊಟ್ಟು ಹಾರಿಸಿದರೆ, ಚಾಚೂ ತಪ್ಪದೆ ಅದನ್ನು ಅಲ್ಲಿಗೆ ಮುಟ್ಟಿಸುವ ಸಾಮರ್ಥ್ಯ  ಈ ‘ಡ್ರೋನ್’ಗೆ ಉಂಟು.

‘ದ್ರೋಣ’ ಅಂದಾಗ ನಮಗೆಲ್ಲ ನೆನಪಾಗುವುದೇನುಮಹಾಭಾರತ ಯುದ್ಧ!   ಈಗಿನ ‘ಡ್ರೋನ್’ ಎಂದಾಗ ನಮಗೆ ನೆನಪಾಗುವುದೇನು? ‘ಯುದ್ಧವೇ.

ಏಕೆಂದರೆ
  ‘ಡ್ರೋನ್’ ಹುಟ್ಟಿಕೊಂಡ ಕಾಲದಿಂದಲೇ ಬಳಕೆ ಆಗ್ತಾ ಇದ್ದದ್ದು ಯುದ್ಧೋಪಕರಣಗಳ ಸಾಗಣೆ,  ವೈರಿಗಳ ಜಾಡು ಪತ್ತೆ ಇತ್ಯಾದಿ ಯುದ್ಧ ಸಂಬಂಧಿ ಕೆಲಸಗಳಿಗಾಗಿಯೇ.

ಆದರೆ ದಿನಗಳೆದಂತೆ ಆಧುನಿಕ ಕಾಲದ  ‘ಡ್ರೋನ್’ ಸಮರಾಂಗಣದಿಂದ ಈಚೆ ರಸ್ತೆಗಳಲ್ಲಿ ಹಾರಾಡುತ್ತಾ ಕಡೆಗೆ ಮದುವೆ ಮನೆಗಳಿಗೇ ಲಗ್ಗೆ ಇಟ್ಟಮದುವೆ ಮನೆಗಳಲ್ಲಿ ಅತ್ತ ಪುರೋಹಿತರ ಮಂತ್ರೋಚ್ಛಾರಣೆ ಆಗುತ್ತಿದ್ದರೆ  ‘ಡ್ರೋನ್’ ಟುರ್ರ್… ಸದ್ದು ಮಾಡುತ್ತಾ ಮದುಮಕ್ಕಳಪುರೋಹಿತರಬಂಧು ಬಾಂಧವರ ತಲೆಗಳ ಮೇಲೆ ಹಾರಾಡಿದಈತ ಮಾಡುತ್ತಿದ್ದ ಕೆಲಸ – ಮಂಟಪದ ಸುತ್ತಮುತ್ತ ಅಡ್ಡಾಡುತ್ತಾ ‘ಕ್ಲಿಕ್’ ‘ಕ್ಲಿಕ್’ ಫೊಟೋ ಹೊಡೆಯುವ ಫೊಟೋಗ್ರಾಫರುಗಳ ಕೆಲಸಇಲ್ಲವೇ ‘ವಿಡಿಯೋ’ ತೆಗೆಯುವ ಕೆಲಸ.

ಈ ಡ್ರೋನ್ ಗುರಿ ಬಹಳ ನಿಖರ. ಎಲ್ಲಿಗೆ ಬೇಕೆಂದರೆ ಅಲ್ಲಿಗೆ ಹೋಗುವ ಛಾತಿ, ಎಲ್ಲಾದರೂ ಬಾಂಬ್ ಹಾಕಬೇಕೆಂದರೆ ಕರಾರುವಾಕ್ಕಾಗಿ ಅದೇ ಜಾಗಕ್ಕೆ ಬಾಂಬ್. ಎಲ್ಲಿಗಾದರೂ ಔಷಧ ಸಾಗಿಸಬೇಕೆಂದರೆ ಅಲ್ಲಿಗೇ ಔಷಧ ರವಾನೆ. ಯಾವುದಾದರೂ ನಿರ್ದಿಷ್ಟ ಜಾಗದ ಫೊಟೋ ವಿಡಿಯೋ ಬೇಕೆಂದರೆ ಅದೇ ಜಾಗದ ಫೊಟೋ ಇಲ್ಲವೇ ವಿಡಿಯೋ ಕ್ಷಣ ಮಾತ್ರದಲ್ಲಿ ಸಿದ್ಧ..

ಈ ಡ್ರೋನ್ ಇಷ್ಟೆಲ್ಲ ಕೆಲಸ ಮಾಡುವುದು ಹೇಗೆ? ಅತ್ಯಾಧುನಿಕ ತಂತ್ರಜ್ಞಾನವಾದ  ಕೃತಕ ಬುದ್ಧಿಮತ್ತೆ ಅಂದರೆ ಆರ್ಟಿಫೀಷಿಯಲ್ ಇಂಟಲಿಜೆನ್ಸ್), ಯಂತ್ರ ಕಲಿಕೆ (ಮೆಷಿನ್ ಲರ್ನಿಂಗ್) ಮತ್ತು ದೂರ ಸಂವೇದನೆ (ರಿಮೋಟ್ ಸೆನ್ಸಿಂಗ್) ಇವುಗಳ ಸಂಯೋಜನೆಯಿಂದ. ಇದರ ಜೊತೆಗೆ ನ್ಯಾವಿಗೇಷನ್ ಸಿಸ್ಟಮ್, ಜಿಪಿಎಸ್, ಉತ್ತಮ ಗುಣಮಟ್ಟದ ಕ್ಯಾಮೆರಾಗಳು, ಪ್ರೋಗ್ರಾಮಿಂಗ್ ಮಾಡಬಹುದಾದ ನಿಯಂತ್ರಣಗಳು ಕೂಡಾ ಈ ‘ಡ್ರೋನ್’ನಲ್ಲಿ ಇರುತ್ತವೆ. ಮನುಷ್ಯರು ಇಲ್ಲದೆಯೇ ಕಾರ್ಯ ನಿರ್ವಹಿಸುವ ಈ ‘ಡ್ರೋನ್’ ಸೂಚಿಸುವ ಕೆಲಸವನ್ನು ಅತ್ಯಂತ ನಿಖರವಾಗಿ ಮಾಡುತ್ತದೆ. ಇದೊಂದು ಹಾರುವ ರೊಬೋಟ್.

ಹೆಚ್ಚಿನ ರೈತರು ಪ್ರಸ್ತುತ ಕೃಷಿಗಾಗಿ ಉಪಗ್ರಹಗಳಿಂದ ಲಭಿಸುವ ಮಾಹಿತಿ ಅಥವಾ ಡೇಟಾವನ್ನು ಬಳಸುತ್ತಾರೆಆದರೆ ಇದು ತುಂಬಾ ತುಟ್ಟಿಆಧುನಿಕ ತಂತ್ರಜ್ಞಾನದ ಜೊತೆಗೆ ಸಜ್ಜಾದ ಈ ‘ಡ್ರೋನ್’  ಒದಗಿಸುವ ಸಮೀಕ್ಷಾ ಮಾಹಿತಿ ಉಪಗ್ರಹ ಒದಗಿಸುವ ಮಾಹಿತಿಗಿಂತಲೂ ಹೆಚ್ಚು ನಿಖರ. ಹಾಗೆಯೇ ಅಗ್ಗ ಕೂಡಾ.. ಹೀಗಾಗಿ ಈಗ ‘ಡ್ರೋನ್’ ಬಳಕೆ ಕೃಷಿಯಲ್ಲೂ ಹೆಚ್ಚುತ್ತಿದೆ.

ಹಾಗಿದ್ದರೆ ಡ್ರೋನ್ ಮೂಲಕ ಕೃಷಿಯಲ್ಲಿ ಏನೇನು ಮಾಡಬಹುದು?

1.       ನೀರಾವರಿಗಾಗಿ ನಿಗಾ ವಹಿಸುವುದು:  ವಿವಿಧ
ಬಗೆಯ ಸಂವೇದಕ ಅಥವಾ
 ಸೆನ್ಸರುಗಳನ್ನು ಒಳಗೊಂಡ ಡ್ರೋನ್ ಗಳು ತುಂಬಾ ಶುಷ್ಕವಾಗಿರುವ ಪ್ರದೇಶವನ್ನು ಗುರುತಿಸುತ್ತವೆಹೀಗಾಗಿ ಡ್ರೋನ್ ಸಮೀಕ್ಷೆಯನ್ನು ಆಧರಿಸಿ ನೀರಾವರಿಯಲ್ಲಿ ನೀರಿನ ದಕ್ಷತೆಯನ್ನು ಹೆಚ್ಚಿಸಬಹುದುಎಲ್ಲಿಗೆ ಅಗತ್ಯವಿದಯೋ  ಪ್ರದೇಶಕ್ಕೆ ಕರಾರುವಾಕ್ಕಾಗಿ ನೀರು ಒದಗಿಸಿ ಬೆಳೆಗಳ ಸಮರ್ಪಕ ಬೆಳವಣಿಗೆ ಆಗುವಂತೆ ನೋಡಿಕೊಳ್ಳಬಹುದು.

2.      2.  ಬೆಳೆ ಆರೋಗ್ಯದ ನಿಗಾ ವಹಿಸುವುದು: ಸಸಿಗಳ ಆರೋಗ್ಯ ಪತ್ತೆಆರಂಭಿಕ ಹಂತದ ಬ್ಯಾಕ್ಟೀರಿಯಾಶಿಲೀಂದ್ರ ಬಾಧೆ ಗುರುತಿಸುವುದುಯಾವ ಸಸಿಗಳ ವಿಭಿನ್ನ ಪ್ರಮಾಣದ ಹಸಿರು ಬೆಳಕು ಮತ್ತು ನಿಯರ್ –ಇನ್ ಫ್ರಾರೆಡ್ ಸ್ಪೆಕ್ಟ್ರೋಸ್ಕೋಪಿ (ಎನ್  ಆರ್ ಎಸ್ಬೆಳಕನ್ನು ಪ್ರತಿಬಿಂಬಿಸುತ್ತವೆ ಎಂಬುದನ್ನು ಕೃಷಿ ಡ್ರೋನ್  ಪತ್ತೆ ಹಚ್ಚುತ್ತದೆಇದನ್ನು ಆಧರಿಸಿ ಗಿಡಗಳ ದೋಷಗಳ ಮೇಲ್ವಿಚಾರಣೆ ಪತ್ತೆ ಸಾಧ್ಯಇದು ಬೆಳೆಗಳ ರಕ್ಷಣೆಗೆ ಹಾಗೆಯೇ ಬೆಳೆ ವಿಫಲವಾದರೆ ರೈತರಿಗೆ ನಿಖರ ಮಾಹಿತಿಯೊಂದಿಗೆ ವಿಮಾ ಕೋರಿಕೆ ದಾಖಲಿಸಲು ನೆರವಾಗುತ್ತದೆ.   

3.  ಬೆಳೆಹಾನಿ ಮೌಲ್ಯಮಾಪನ: ಮಲ್ಟಿ ಸ್ಪೆಕ್ಟ್ರಲ್ ಸಂವೇದಕಗಳು ಮತ್ತು ಆರ್ ಜಿಬಿ ಸಂವೇದಕ ಅಳವಡಿಸಲಾದ ಕೃಷಿ ಡ್ರೋನ್ ಗಳು ಕಳೆಗಳು, ಸೋಂಕುಗಳು, ಕೀಟಗಳಿಂದ ಉಂಟಾಗುವ ಕ್ಷೇತ್ರ ಪ್ರದೇಶಗಳನ್ನು ಕೂಡಾ ಪತ್ತೆ ಹಚ್ಚಿ ಬೆಳೆ ಹಾನಿಯ ಮೌಲ್ಯ ಮಾಪನ ಮಾಡುತ್ತವೆ. ಈ ಮಾಹಿತಿಯನ್ನು ಆಧರಿಸಿ ಸೋಂಕುಗಳ ವಿರುದ್ಧ ಹೋರಾಡಬಹುದು. ಅತ್ಯಂತ ಖಚಿತವಾಗಿ ಈ ನಿರ್ದಿಷ್ಟ ಪ್ರದೇಶಕ್ಕೆ ರಾಸಾಯನಿಕ ಸಿಂಪರಣೆ ಮಾಡಿ ಬೆಳೆ ರಕ್ಷಣೆಗೆ ಅನುಕೂಲ ಮಾಡಿಕೊಡುತ್ತವೆ. ಇದರಿಂದ ರೈತರ ಬೆಳೆ ಸಂರಕ್ಷಣಾ ಖರ್ಚುವೆಚ್ಚ ಗಮನಾರ್ಹವಾಗಿ ಇಳಿಯುತ್ತದೆ.

4.       4ಮಣ್ಣಿನ ವಿಶ್ಲೇಷಣೆ: ಡ್ರೋನ್ ಸಮೀಕ್ಷೆಯು ರೈತರಿಗೆ ತಮ್ಮ ಭೂಮಿಯ ಮಣ್ಣಿನ ಸ್ಥಿತಿಗತಿಯ ಮಾಹಿತಿ ತಿಳಿಯಲು ನೆರವಾಗುತ್ತದೆ. ಮಲ್ಟಿ ಸ್ಪೆಕ್ಟ್ರಲ್ ಸಂವೇದಕಗಳು ಬೀಜ ನೆಡುವಿಕೆ ಮಾದರಿ, ಮಣ್ಣಿನ ಸಂಪೂರ್ಣ ವಿಶ್ಲೇಷಣೆ, ನೀರಾವರಿ ಮತ್ತು ಸಾರಜನಕ ಮಟ್ಟದ ನಿರ್ವಹಣೆಗೆ ಉಪಯುಕ್ತವಾದ ಡೇಟಾ ಒದಗಿಸುತ್ತದೆ. ನಿಖರವಾದ ಫೊಟೋಗ್ರಾಮೆಟ್ರಿ/ 3ಡಿ ಮ್ಯಾಪಿಂಗ್ ರೈತರಿಗೆ ತಮ್ಮ ಮಣ್ಣಿನ ಸ್ಥಿತಿಯನ್ನು ಸಂಪೂರ್ಣವಾಗಿ ವಿಶ್ಲೇಷಿಸಲು ನೆರವಾಗುತ್ತದೆ.

5.   5.    ಗಿಡ ನೆಡುವಿಕೆ: ಭಾರತದಲ್ಲಿ ಡ್ರೋನ್ ನವೋದ್ಯಮಗಳು ಡ್ರೋನ್ ನಾಟಿ ವ್ಯವಸ್ಥೆಯನ್ನು ಕಂಡು ಹಿಡಿದಿವೆ. ಇದರಲ್ಲಿ ಬೀಜಕೋಶಗಳು, ಬೀಜಗಳು ಮತ್ತು ನಿರ್ಣಾಯಕ ಪೋಷಕಾಂಶಗಳನ್ನು ಡ್ರೋನ್ ಗಳು ಮಣ್ಣಿಗೆ ನೇರವಾಗಿ ಶೂಟ್ ಮಾಡುತ್ತವೆ. ಈ ತಂತ್ರಜ್ಞಾನವು ವೆಚ್ಚವನ್ನು ಶೇಕಡಾ 85ರಷ್ಟು ಇಳಿಸುವುದರ ಜೊತೆಗೆ ಗಿಡಗಳ ಸ್ಥಿರತೆ, ದಕ್ಷತೆಯನ್ನು ಹೆಚ್ಚಿಸುತ್ತದೆ.

6.      6.   ಕೃಷಿ ಸಿಂಪರಣೆ: ಡ್ರೋನ್ ಮೂಲಕ ಕೀಟನಾಶಕಗಳನ್ನು ಬೆಳೆಗಳಿಗೆ ಸಿಂಪರಣೆ ಮಾಡಬಹುದು. ಇದರಲ್ಲಿ ಮಾನವ ಸಂಪರ್ಕ   ಅತ್ಯಂತ ಸೀಮಿತಹೀಗಾಗಿ ಮನುಷ್ಯರಿಗೆ ಅಪಾಯ ಕಡಿಮೆಯಾವುದೇ ವಾಹನವಿಮಾನಗಳಗಿಂತ ಹೆಚ್ಚಿನ ವೇಗದಲ್ಲಿ ಕೃಷಿ ಡ್ರೋನ್ ಸಿಂಪರಣೆ ಕಾರ್ಯವನ್ನು ನಿರ್ವಹಿಸುತ್ತದೆಸಮಸ್ಯಾತ್ಮಕ ಪ್ರದೇಶವನ್ನು ನಿಖರವಾಗಿ ಗುರುತಿಸಿಅಲ್ಲಿಗೇ ಚಿಕಿತ್ಸೆ ನೀಡಲು ಸಹಕರಿಸುತ್ತದೆತಜ್ಞರ ಪ್ರಕಾರ ಡ್ರೋನ್ ಸಿಂಪರಣೆಯು ಇತರ ವಿಧಾನಗಳಿಗೆ ಹೋಲಿಸಿದರೆ ಐದು ಪಟ್ಟು ಹೆಚ್ಚು ವೇಗವನ್ನು ಹೊಂದಿದೆ.ಸವಾಲಿನ ಭೂಪ್ರದೇಶಗಳು, ಸೋಂಕಿತ ಪ್ರದೇಶಗಳು, ಎತ್ತರದ ಬೆಳೆಗಳು, ವಿದ್ಯುತ್ ಮಾರ್ಗಗಳಲ್ಲಿ ಕೀಟನಾಶಕ ಸಿಂಪರಣೆಗೆ ಡ್ರೋಣ್ ಬಳಕೆ ರೈತರ ಪಾಲಿಗೆ ಹೆಚ್ಚು ಸುರಕ್ಷಿತವಾಗುತ್ತದೆ.   

7.  ಜಾನುವಾರು ನಿಗಾ: ಡ್ರೋನ್ ಸಮೀಕ್ಷೆಯಿಂದ ರೈತರು ತಮ್ಮ ಬೆಳೆಗಳ ಮೇಲೆ ಮಾತ್ರವೇ ಅಲ್ಲ ತಮ್ಮ ಜಾನುವಾರುಗಳ ಚಲನವಲನಗಳ ಮೇಲೆ ಕೂಡಾ ನಿಗಾ ಇರಿಸಬಹುದು. ಥರ್ಮಲ್ ಸೆನ್ಸರ್ ತಂತ್ರಜ್ಞಾನವು ಕಳೆದುಹೋದ ಪ್ರಾಣಿಗಳನ್ನು ಹುಡುಕಲು ಮತ್ತು ಜಾನುವಾರುಗಳ ಗಾಯ ಅಥವಾ ಅನಾರೋಗ್ಯ ಪತ್ತೆಗೆ ಸಹಾಯ ಮಾಡುತ್ತದೆಡ್ರೋನ್ ಗಳು  ನಿಟ್ಟಿನಲ್ಲಿ ತುಂಬಾ ಅನುಕೂಲಕರ.

8.    8.   ಉತ್ಪಾದನಾ ಸಾಮರ್ಥ್ಯ ಹೆಚ್ಚಳ: ಕೃಷಿಯಲ್ಲಿ ಡ್ರೋನ್ ಬಳಕೆಯಿಂದ ಸಮಗ್ರ ನೀರಾವರಿ, ಬೆಳೆ ಆರೋಗ್ಯದ ಮೇಲ್ವಿಚಾರಣೆ, ಮಣ್ಣಿನ ಆರೋಗ್ಯದ ಬಗ್ಗೆ ಜ್ಞಾನ ಹೆಚ್ಚುವುದರಂದ ಪರಿಸರ ಬದಲಾವಣೆಗೆ ಹೊಂದಿಕೊಂಡು ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಬಹುದು.

9.    9.  ಸಂಪನ್ಮೂಲಗಳ ಸದ್ಬಳಕೆ: ಪರಿಣಾಮಕಾರಿ ತಂತ್ರಜ್ಞಾನದ ಅಳವಡಿಕೆಯಿಂದ ಯಾವುದೇ ಸಂಪನ್ಮೂಲಗಳನ್ನು ಪೋಲಾಗದಂತೆ ಬಳಕೆ ಮಾಡಿಕೊಳ್ಳಬಹುದು.ಕೃಷಿ ಡ್ರೋನ್ ಗಳು ನೀರುಬೀಜಕೀಟನಾಶಕಗಳಂತಹ ಎಲ್ಲ ಸಂಪನ್ಮೂಲಗಳ ಅತ್ಯುತ್ತಮ ಬಳಕೆಯನ್ನು ಸಾಧ್ಯವಾಗಿಸುತ್ತದೆ.

10. ಮಿಡತೆ ಹಿಂಡಿನ ನಿಯಂತ್ರಣ: ರಾಜಸ್ಥಾನದಲ್ಲಿ ಕೆಲ ಸಮಯದ ಹಿಂದೆ ಮಿಡತೆ ದಂಡು ದಾಳಿ ಮಾಡಿದ್ದು ನಮಗೆಲ್ಲ ನೆನಪಿದೆ. ಆ ಮಿಡತೆಗಳ ದಂಡು ನಿಗ್ರಹಕ್ಕಾಗಿ ರಾಜಸ್ಥಾನ ಸರ್ಕಾರ ಡ್ರೋನ್ ಬಳಸಿತು. ಗಿಡ, ಸಸಿ, ಬೆಳೆಗಳನ್ನು ಸಾರಾಸಗಟು ನಾಶ ಮಾಡುತ್ತಿದ್ದ ಮಿಡತೆಗಳ ದಂಡನ್ನು ಯಶಸ್ವಿಯಾಗಿ ನಿಗ್ರಹಿಸಿತು.

11. ಇದಿಷ್ಟೇ ಅಲ್ಲ ಡ್ರೋನ್ ಬಳಕೆಯಿಂದ ನಮ್ಮ ರೈತರು ತಮ್ಮ ತಾಜಾ ಹಣ್ಣು, ತರಕಾರಿ ಮತ್ತಿತ ಬೆಳೆಗಳನ್ನು ನೇರವಾಗಿ ತಮ್ಮ ಹೊಲಗಳಿಂದ ಮಾರುಕಟ್ಟೆಗೆ ರವಾನಿಸಬಹುದು. ಮೀನುಗಾರರು ಹಿಡಿದ ಮೀನುಗಳನ್ನು ತಾಜಾತನ ಕೆಡದಂತೆಯೇ ಮಾರುಕಟ್ಟೆಗೆ ರವಾನಿಸಬಹುದು.

ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ನಿಯಮಿತ ಸಂಸ್ಥೆಯು ಇತ್ತೀಚೆಗೆ ಒಂದು ಕ್ರಾಂತಿಕಾರಿ ಕೆಲಸವನ್ನು ಮಾಡುತ್ತಿರುವುದು ನೆನಪಾಗುತ್ತಿದೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅಡಿಕೆ ಕೊಯ್ಯುವುದು ಮತ್ತು ಅಡಿಕೆ ಮರಗಳ ಕೊಳೆ ರೋಗ ನಿವಾರಣೆಗೆ ಔಷಧ ಸಿಂಪರಣೆ ದೊಡ್ಡ ಸವಾಲಿನ ಕೆಲಸವಾಗಿತ್ತು. ಅಪಾಯಕಾರಿಯಾದ ಈ ಕೆಲಸಕ್ಕೆ ಜನ ಸಿಗುವುದೇ ಕಷ್ಟವಾಗಿತ್ತು. ಆಗ ಹೊಸದಾಗಿ ಸೃಷ್ಟಿಸಿದ ‘ಫೈಬರ್ ದೋಟಿ’ ಉಪಕರಣದಿಂದ ಸುಲಭವಾಗಿ ಅಡಿಕೆ ಕೊಯ್ಲು, ಔಷಧ ಸಿಂಪರಣೆಯನ್ನು ಮರ ಏರದೆ ನೆಲದಿಂದಲೇ ಮಾಡಬಹುದು ಎಂಬುದು ಗೊತ್ತಾಯಿತು. ಈ ಸಂಸ್ಥೆಯ ಯುವಕರಿಗೆ ಈ ಉಪಕರಣದ ಬಳಕೆಗೆ ತರಬೇತಿ ನೀಡಿ ನುರಿತ ಸಿಬ್ಬಂದಿಯ ತಂಡವನ್ನೇ ರಚಿಸಿತು. ಅಗತ್ಯ ಇರುವಲ್ಲಿಗೆ ಈ ಸಿಬ್ಬಂದಿಯನ್ನು ಕಳುಹಿಸುವ ವ್ಯವಸ್ಥೆ ಮಾಡಿತು. ಇದರಿಂದ ಯುವಕರಿಗೆ ಕೆಲಸ, ರೈತರಿಗೂ ಅಡಿಕೆ ಕೊಯ್ಲು, ಔಷಧ ಸಿಂಪರಣೆಗೆ ಅನುಕೂಲ ಆಯಿತು.

ಇದೇ ರೀತಿ ಗ್ರಾಮಗಳ ಯುವಕರು, ಸಂಘ ಸಂಸ್ಥೆಗಳು ಅಥವಾ ಗ್ರಾಮ ಪಂಚಾಯತಿಗಳು ಪ್ರತಿ ಹಳ್ಳಿಗಳಲ್ಲಿ ಡ್ರೋನ್ ಇಟ್ಟುಕೊಂಡು ರೈತರ ನೆರವಿಗೆ ಮುಂದಾಗಬಹುದು. ಇದರಿಂದ ರೈತರಿಗೆ ಕೃಷಿಗೆ ನೆರವಾಗುವುದರ ಜೊತೆಗೆ  ಬೆಳೆಗಳಿಗೆ ಕ್ಷಿಪ್ರ ಮಾರುಕಟ್ಟೆ  ದೊರಕಿಸಲೂ ಸಹಾಯವಾಗುತ್ತದೆ.

ಭಾರತದಲ್ಲಿ ಈಗಾಗಲೇ ಪಂಜಾಬ್, ಗೋವಾ, ಉತ್ತರ ಪ್ರದೇಶ, ಮಧ್ಯಪ್ರದೇಶ, ಆಂದ್ರಪ್ರದೇಶ, ತಮಿಳುನಾಡು, ಅಸ್ಸಾಂ, ರಾಜಸ್ಥಾನ, ತೆಲಂಗಾಣದಲ್ಲಿ 'ಕಿಸಾನ್ ಡ್ರೋನ್ ಯಾತ್ರಾ' ಶುರುವಾಗಿದೆ.

‘ಕಿಸಾನ್ ಡ್ರೋನ್’ ಯಾತ್ರಾಕ್ಕೆ ಚಾಲನೆ ನೀಡಿದ ಪ್ರಧಾನಿ ಕೃಷಿ ಇದರೊಂದಿಗೆ ಬಾನೆತ್ತರಕ್ಕೆ ಏರಲಿದೆ ಎಂದಿದ್ದಾರೆಕೃಷಿ ಉತ್ಪಾದನೆಮಾರುಕಟ್ಟೆಯಲ್ಲಿ ಅನಂತ ಅವಕಾಶಯುವಕರಿಗೆ ಹೊಸ ಉದ್ಯೋಗಾವಕಾಶಗಳು ಲಭಿಸಲಿದೆ ಎಂದಿದ್ದಾರೆ. ಅದು ಶೀಘ್ರ ನೆರವೇರಲಿ ಎಂದು ಹಾರೈಸೋಣ.

 -ನೆತ್ರಕೆರೆ ಉದಯಶಂಕರ

 PARYAYA: ಕಿಸಾನ್ ‘ದ್ರೋಣ’ ನಿನಗಿದೋ ಸಲಾಂ…!:   ಕಿಸಾನ್   ‘ದ್ರೋಣ’ ನಿನಗಿದೋ ಸಲಾಂ…! ಒಂದು ಕಥೆ ನೆನಪಾಗ್ತದೆ. ಮಹಾಭಾರತದ ಕಥೆ ಅದು.   ಪಾಂಡವರು ಮತ್ತು ಕೌರವರು ಎಳೆಯರಾಗಿದ್ದಾಗ ಬಾವಿಯೊಂದರ ಸಮೀಪ ಆಟವಾಡ್ತಾ ಇದ್ದರು...

Sunday, February 6, 2022

PARYAYA: ಗಾಯನ ನಿಲ್ಲಿಸಿದ ’ಗಾನ ಕೋಗಿಲೆ’ ಲತಾ ಮಂಗೇಶ್ಕರ್

 ಗಾಯನ ನಿಲ್ಲಿಸಿದ ’ಗಾನ ಕೋಗಿಲೆ’ ಲತಾ ಮಂಗೇಶ್ಕರ್

ಮುಂಬೈ: ‘ಭಾರತದ ಗಾನ ಕೋಗಿಲೆ’ ಎಂಬುದಾಗಿಯೇ  ಖ್ಯಾತರಾಗಿದ್ದ ಗಾಯಕಿ ಲತಾ ಮಂಗೇಶ್ಕರ್ (೯೨) ಅವರು 2022 ಫೆಬ್ರುವರಿ 6ರ ಭಾನುವಾರ ನಿಧನರಾದರು.

ಕೋವಿಡ್-೧೯ ದೃಢಪಟ್ಟ ಹಿನ್ನೆಲೆ ಚಿಕಿತ್ಸೆಗಾಗಿ ಅವರನ್ನು ಮುಂಬೈಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಜನವರಿ ೮ರಂದು ದಾಖಲಿಸಲಾಗಿತ್ತು. ಕೆಲವು ವಾರಗಳಿಂದ ಅವರು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದರು.

ಇತ್ತೀಚೆಗೆ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಾಣಿಸಿಕೊಂಡಿತ್ತಾದರೂ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ, ಭಾನುವಾರ ಬೆಳಿಗ್ಗೆ ಅವರು ಅಗಲಿದರು.

ಗಾನ ಕೋಗಿಲೆ

ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರು ಸುಮಾರು ಏಳು ದಶಕಗಳ ಕಾಲ ಹಿನ್ನೆಲೆ ಗಾಯಕಿಯಾಗಿ ಮನರಂಜಿಸಿದ್ದಾರೆ. ೧೯೪೨ರಿಂದ ಆರಂಭವಾದ ಅವರ ಗಾಯನ ಯಾನದಲ್ಲಿ ೩೦,೦೦೦ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.  ಏ ಮೇರೆ ವತನ್ ಕೆ ಲೋಗೊ, ಲಗ್ ಜಾ ಗಲೇ, ಏಹ್ ಕಹಾ ಆಗಯೇ ಹಮ್ ಹಾಗೂ ಪ್ಯಾರ್ ಕಿಯಾ ತೊ ಡರ್ನಾ ಕ್ಯಾ,...ಸೇರಿದಂತೆ ಅವರ ನೂರಾರು ಹಾಡುಗಳು ಇವತ್ತಿಗೂ ಅಪಾರ ಜನಪ್ರಿಯತೆ ಪಡೆದಿವೆ.

ಭಾರತರತ್ನ, ಪದ್ಮ ವಿಭೂಷಣ, ಪದ್ಮಭೂಷಣ ಮತ್ತು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾಗಿರುವ ಲತಾ ಮಂಗೇಶ್ಕರ್ ಅವರು ಭಾರತೀಯ ಚಿತ್ರರಂಗದ ಐಕಾನ್ ಆಗಿದ್ದು, ದೊಡ್ಡ ಸಂಖ್ಯೆಯ ಹಿಂದಿ ಚಲನಚಿತ್ರಗಳಿಗೆ ಹಿನ್ನೆಲೆ ಗಾಯಕಿಯಾಗಿ ಹಾಡಿದ್ದಾರೆ. ಮರಾಠಿ ಮತ್ತು ಬಂಗಾಳಿ ಸೇರಿದಂತೆ ಹಲವಾರು ಪ್ರಾದೇಶಿಕ ಭಾಷೆಗಳಲ್ಲೂ ಅವರು ಹಲವಾರು ಹಾಡುಗಳನ್ನು ಹಾಡಿದ್ದಾರೆ.

ಪ್ರತಿಷ್ಠಿತ ಗಾಯಕ ಮನೆತನಕ್ಕೆ ಸೇರಿದ ಲತಾ ಮಂಗೇಶ್ಕರ್ ಅವರು ಸಂಗೀತ ರಚನೆ ಹಾಗೂ ಕೆಲವು ಚಿತ್ರಗಳ ನಿರ್ಮಾಣವನ್ನೂ ಮಾಡಿದ್ದಾರೆ.

೧೯೨೯ರಲ್ಲಿ ಜನಿಸಿದ್ದ ಲತಾ ಅವರು ಐವರು ಮಕ್ಕಳ ಪೈಕಿ ಹಿರಿಯವರು. ಶಾಸ್ತೀಯ ಸಂಗೀತಗಾರರಾಗಿದ್ದ ತಂದೆ ಪಂಡಿತ ದೀನಾನಾಥ್ ಮಂಗೇಶ್ಕರ್ ಅವರು ಕಿರಿಯ ಲತಾ ಮಂಗೇಶ್ಕರ್ ಅವರಿಗೆ ಸಂಗೀತದ ಮೊದಲ ಪಾಠ ಮಾಡಿದ್ದರು. ೧೯೪೨ರಲ್ಲಿ ತಂದೆ ಮೃತರಾದ ಬಳಿಕ, ೧೩ರ ಹರೆಯದ ಲತಾ ಮಂಗೇಶ್ಕರ್ ಅವರು ಮರಾಠಿ ಸಿನಿಮಾಗಳಿಗೆ ಹಾಡುವ ಮೂಲಕ ಗಾಯನ ವೃತ್ತಿಯನ್ನು ಆರಂಭಿಸಿದರು.

೧೯೪೫ರಲ್ಲಿ ಲತಾ ಅವರು ಮಧುಬಾಲಾ ನಟನೆಯ ಮಹಲ್ ಚಲಚಿತ್ರದ ’ಆಯೇಗಾ ಆನೇವಾಲ’ ಚಿತ್ರದ ಮೂಲಕ ಮೊತ್ತ ಮೊದಲಿಗೆ ಪ್ರಸಿದ್ಧಿಗೆ ಬಂದರು. ಆ ಬಳಿಕ ಲತಾ ಮಂಗೇಶ್ಕರ್ ಅವರ ಧ್ವನಿ ಮತ್ತು ಗಾಯನ ವೃತ್ತಿ ಹೊಸ ಉತ್ತುಂಗಕ್ಕೆ ಏರಿತು..

ಬೈಜು ಬಾವ್ರಾ, ಮದರ್ ಇಂಡಿಯಾ ಮತ್ತು ಮುಘಲ್-ಇ-ಆಜಂ ದಂತಹ ಚಿತ್ರಗಳಲ್ಲಿ ನೌಶದ್ ರಚನೆಯ ರಾಗ ಆಧಾರಿತ ಹಾಡುಗಳನ್ನು ಅವರು ಹಾಡಿದರು. ಶಂಕರ್ ಜೈಕಿಷನ್ ಅವರ ಹಿಟ್ ಸಿನಿಮಾಗಳಾದ ಬರ್ಸಾತ್, ಶ್ರೀ ೪೨೦, ಸಲೀಲ್ ಚೌಧರಿ ಮಧುಮತಿ ಚಿತ್ರದ ಹಾಡುಗಳು ಲತಾ ಮಂಗೇಶ್ಕರ್ ಅವರಿಗೆ ಅತ್ಯುತ್ತಮ ಹಿನ್ನೆಲೆಗಾಯಕಿ  ಫಿಲಂಫೇರ್ ಪ್ರಶಸ್ತಿಯನ್ನು ತಂದು ಕೊಟ್ಟವು. ಬಳಿಕ ಬೀಸ್ ಸಾಲ್ ಬಾದ್, ಖಾನ್ದಾನ್ ಮತ್ತು ಜೀನೆ ಕಿ ರಾಹ್ ಚಿತ್ರಗಳ ಹಾಡುಗಳಿಗೂ ಅವರಿಗೆ ಇನ್ನೂ ಮೂರು ಫಿಲಂಫೇರ್ ಪ್ರಶಸ್ತಿಗಳು ಬಂದವು. ಪರಿಚಯ್, ಕೋರಾ ಕಾಗಜ್ ಮತ್ತು ಲೇಕಿನ್ ಚಿತ್ರಗಳಲ್ಲಿ ಅತ್ಯುತ್ತಮ ಹಿನ್ನೆಲೆ ಗಾಯಕಿಯಾಗಿ ಅವರಿಗೆ  ಮೂರು ರಾಷ್ಟ್ರೀಯ ಪ್ರಶಸ್ತಿಗಳು ಬಂದವು.

ಪಾಕೀಜಾ, ಅಭಿಮಾನ್, ಅಮರ್ ಪ್ರೇಮ್, ಆನಂದಿ, ಸಿಲ್ ಸಿಲಾ, ಚಾಂದನಿ, ಸಾಗರ್, ರುಡಾಲಿ, ದಿಲ್ ವಾಲೇ ದುಲ್ಹನಿಯಾ ಲೇ ಜಾಯೇಂಗೆ ಇತ್ಯಾದಿ ಚಿತ್ರಗಳು ಅವರ ಅತ್ಯುತ್ತಮ ಹಿನ್ನೆಲೆ ಗಾಯನಕ್ಕಾಗಿ ಪ್ರಸಿದ್ಧವಾಗಿವೆ.

ಲತಾ ಮಂಗೇಶ್ಕರ್ ಅವರ ದೇಶಭಕ್ತಿ ಗೀತೆಗಳಲ್ಲಿ ೧೯೬೨ರಲ್ಲಿ ಚೀನಾ ಜೊತೆಗಿನ ಸಮರದಲ್ಲಿ ಹುತಾತ್ಮರಾದ ಭಾರತೀಯ ಯೋಧರ ಸ್ಮರಣೆಗಾಗಿ ಹಾಡಿದ ’ಆಯೇ ಮೇರೆ ವತನ್ ಕೆ ಲೋಗೋ’ ಅತ್ಯಂತ ಖ್ಯಾತಿ ಪಡೆದ ಹಾಡಾಗಿದ್ದು ಇದನ್ನು ೧೯೬೩ರ ಗಣರಾಜ್ಯೋತ್ಸವ ದಿನ ನವದೆಹಲಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ಹಾಡಲಾಗಿತ್ತು. ಲತಾ ಮಂಗೇಶ್ಕರ್ ಅವರು ಈ ಹಾಡನ್ನು ರಾಷ್ಟ್ರಪತಿ ಎಸ್. ರಾಧಾಕೃಷ್ಣನ್ ಮತ್ತು ಪ್ರಧಾನಿ ಜವಾಹರಲಾಲ್ ನೆಹರೂ ಅವರ ಸಮ್ಮುಖದಲ್ಲಿ ಹಾಡಿದ್ದರು.

ಲತಾ ಮಂಗೇಶ್ಕರ್ ಅವರು ಹಿಡಿಯಷ್ಟು ಮರಾಠಿ ಚಿತ್ರಗಳಿಗೆ ಸಂಗೀತ ರಚನೆಯನ್ನೂ ಮಾಡಿದ್ದಾರೆ. ಇವುಗಳಲ್ಲಿ ಸಧಿ ಮನಸೆ ಚಿತ್ರವು  ಅವರಿಗೆ ಮಹಾರಾಷ್ಟ್ರ ರಾಜ್ಯ ಸರ್ಕಾರದ ಅತ್ಯುತ್ತಮ ಸಂಗೀತ ನಿರ್ದೇಶಕಿ ಪ್ರಶಸ್ತಿಯನ್ನು ೧೯೬೫ರಲ್ಲಿ ತಂದುಕೊಟ್ಟಿತ್ತು. ಅವರು ನಿರ್ಮಿಸಿದ ಕೆಲವೇ ಕೆಲವು ಚಿತ್ರಗಳ ಪೈಕಿ ೧೯೯೦ರಲ್ಲಿ ನಿರ್ಮಿಸಿದ ಲೇಖಿನ್ ಚಿತ್ರವೂ ಒಂದಾಗಿದ್ದು ಅದರಲ್ಲಿ ಸ್ವತಃ ಲತಾ ಅವರೇ ಹಾಡಿದ್ದರು.

ಲತಾ ಮಂಗೇಶ್ಕರ್ ಅವರ ಮೈ ನವಿರೇಳಿಸುವ ಒಂದು ಹಾಡಿನ ಪರಿ ಇಲ್ಲಿದೆ ನೋಡಿ:



PARYAYA: ಗಾಯನ ನಿಲ್ಲಿಸಿದ ’ಗಾನ ಕೋಗಿಲೆ’ ಲತಾ ಮಂಗೇಶ್ಕರ್:   ಗಾಯನ ನಿಲ್ಲಿಸಿದ ’ಗಾನ ಕೋಗಿಲೆ’ ಲತಾ ಮಂಗೇಶ್ಕರ್ ಮುಂಬೈ: ‘ಭಾರತದ ಗಾನ ಕೋಗಿಲೆ’ ಎಂಬುದಾಗಿಯೇ   ಖ್ಯಾತರಾಗಿದ್ದ ಗಾಯಕಿ ಲತಾ ಮಂಗೇಶ್ಕರ್ ( ೯೨ ) ಅವರು 2022 ಫೆಬ್ರು...

Sunday, January 9, 2022

PARYAYA: ಅಬ್ಬೆ ಮಾಡುಗು ರುಚಿ ರುಚಿ ದೋಸೆ..!

ಅಬ್ಬೆ ಮಾಡುಗು ರುಚಿ ರುಚಿ ದೋಸೆ..!

ಅಮ್ಮನ ಕೈ ಅಡುಗೆ ಯಾರಿಗೆ ಇಷ್ಟವಿಲ್ಲ? ಅದರಲ್ಲೂ ರುಚಿ ರುಚಿಯಾದ ತಿನಸುಗಳು ಅಂದರಂತೂ ಪಂಚ ಪ್ರಾಣ.

ಹವ್ಯಕರ ಅಡುಗೆಯಲ್ಲಿ ದೋಸೆ ವೈವಿದ್ಯ ಲೋಕ ಪ್ರಸಿದ್ಧ . ಹವ್ಯಕ ಅಮ್ಮಂದಿರು ಎಂತೆಂತಹ ದೋಸೆಗಳನ್ನು ಮಾಡುತ್ತಾರೆ ಎಂದು ನೋಡಿ.

ಇಲ್ಲಿ ಅಡ್ವಾಯಿ ಸವಿತಕ್ಕ ರಚಿಸಿದ ಕವನಕ್ಕೆ ಏತಡ್ಕ ಡಾ. ಅನ್ನಪೂರ್ಣೇಶ್ವರಿ (ಪೂರ್ಣಕ್ಕ) ಸ್ವರ ಸೇರಿಸಿದ್ದಾರೆ.

ಗೀತೆ ಮುಗಿಯುವ ಹೊತ್ತಿಗೆ ನಿಮ್ಮ ಬಾಯಲ್ಲಿ ನೀರೂರಿದರೆ ಖಂಡಿತ ನಮಗೆ ತಿಳಿಸಲು ಮರೆಯಬೇಡಿ. ಮತ್ತು ಇದನ್ನು ವಿಡಿಯೋ ಸಹಿತವಾಗಿ ನಿಮ್ಮ ಬಂಧು-ಮಿತ್ರರಿಗೆ ಕಳುಹಿಸಿ. ಅವರೂ ದೋಸೆಯ ರುಚಿ ಸವಿಯಲಿ.

ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ.



PARYAYA: ಅಬ್ಬೆ ಮಾಡುಗು ರುಚಿ ರುಚಿ ದೋಸೆ..!:   ಅಬ್ಬೆ ಮಾಡುಗು ರುಚಿ ರುಚಿ ದೋಸೆ..! ಅಮ್ಮನ ಕೈ ಅಡುಗೆ ಯಾರಿಗೆ ಇಷ್ಟವಿಲ್ಲ ? ಅದರಲ್ಲೂ ರುಚಿ ರುಚಿಯಾದ ತಿನಸುಗಳು ಅಂದರಂತೂ ಪಂಚ ಪ್ರಾಣ . ಹವ್ಯಕರ ಅಡು...