Friday, February 23, 2018

ವಿಟ್ಲದ ಸರ್ಕಾರಿ ಎಲಿಮೆಂಟರಿ ಶಾಲೆಗೆ ಕಾಯಕಲ್ಪ



       ವಿಟ್ಲದ ಸರ್ಕಾರಿ ಎಲಿಮೆಂಟರಿ ಶಾಲೆಗೆ ಕಾಯಕಲ್ಪ
https://youtu.be/f4-Eiky6sXE

                                            
ವಿಟ್ಲ: ವಿಟ್ಲದ  ಎಲಿಮೆಂಟರಿ ಶಾಲೆ ಎಂದೇ ಖ್ಯಾತಿ ಪಡೆದ ವಿಟ್ಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಈಗ  ಬರೋಬ್ಬರಿ 139 ವರ್ಷ.  ನಾರಾಯಣ ಶೆಟ್ಟಿ ಅವರು ಮುಖ್ಯೋಪಾಧ್ಯಾಯರಾಗಿದ್ದಾಗ ಸುಮಾರು 1300 ವಿದ್ಯಾರ್ಥಿಗಳು ಇದ್ದ ಈ ಶಾಲೆಯ ಮಕ್ಕಳ ಸಂಖ್ಯೆ ಖಾಸಗಿ ಶಾಲೆಗಳ ಪೈಪೋಟಿಯಿಂದಾಗಿ ಕಡಿಮೆಯಾಗುತ್ತಾ ಬಂದು ಶತಮಾನೋತ್ಸವ ವೇಳೆಗೆ 960, ಬೆಳ್ಳಿಹಬ್ಬದ ವೇಳೆಗೆ 653ಕ್ಕೆ ಇಳಿದಿತ್ತು. ಇತ್ತೀಚೆಗೆ ಈ ಸಂಖ್ಯೆ 400ಕ್ಕೆ ಇಳಿದಿತ್ತು.

ಕನ್ನಡ ಚಿತ್ರರಂಗದ ಹಿರಿಯ ಸಂಗೀತ ನಿರ್ದೇಶಕ ವಿ. ಮನೋಹರ್  ಅವರಂತಹ ಹಲವಾರು ಪ್ರತಿಭೆಗಳನ್ನು ನಾಡಿಗೆ ನೀಡಿರುವ  ಶಾಲೆಯ ವಿದ್ಯಾರ್ಥಿಗಳ  ಸಂಖ್ಯೆ  ಎರಡು ವರ್ಷಗಳ ಹಿಂದೆ 400ಕ್ಕೆ ಇಳಿದಾಗ, ವಿಟ್ಲದ ಉದ್ಯಮಿ ಸುಬ್ರಾಯ ಪೈ ಅವರು ಈ ಶಾಲೆಯನ್ನು ದತ್ತು ಸ್ವೀಕರಿಸಿ ಕಾಯಕಲ್ಪ ನೀಡಿದರು.

ಶಾಲೆಯ ಸುತ್ತ 5 ಖಾಸಗಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಗಳಿದ್ದರೂ ಕೂಡಾ ಈ ಶಾಲೆಗೆ ಹಲವಾರು ಮೂಲಭೂತ ಸೌಲಭ್ಯಗಳನ್ನು ನೀಡಿ, ಗುಣಮಟ್ಟದ ಶಿಕ್ಷಣಕ್ಕೆ ಗುಣಮಟ್ಟದ ಶಿಕ್ಷಕರನ್ನು ನೇಮಿಸಿದರು. 1ರಿಂದ 8ನೇ ತರಗತಿವರೆಗೆ ಕನ್ನಡ ಮತ್ತು ಆಂಗ್ಲಭಾಷಾ ಶಿಕ್ಷಣದ ವ್ಯವಸ್ಥೆ ಮಾಡಿದರು. ಸಮೀಪದ ಹಳ್ಳಿಗಳ ಮಕ್ಕಳಿಗೆ ಶಾಲೆಗೆ ಬರಲು ವಾಹನ ವ್ಯವಸ್ಥೆ ರೂಪಿಸಿದರು.

ಶಾಲೆಗೆ ಪೀಠೋಪಕರಣ,  ರಂಗಮಂದಿರ, ಶಾಲಾ ರಿಪೇರಿ, ಪೆಯಿಂಟಿಂಗ್, ಕಾಪೌಂಡ್, ಗ್ರಂಥಾಲಯ ಇತ್ಯಾದಿ ಒದಗಿಸಿದರು. ಈಗ ಶಾಲಾ ಮಕ್ಕಳ ಸಂಖ್ಯೆ 615ಕ್ಕೆ ಏರಿದೆ. ಸರ್ಕಾರದಿಂದ ನೇಮಕಗೊಂಡ 15 ಶಾಲಾ ಶಿಕ್ಷಕರ ಜೊತೆಗೆ ತಾವೇ ವೇತನ ನೀಡಿ 6 ಶಿಕ್ಷಕರನ್ನು ನೇಮಿಸಿದ್ದಾರೆ. ತಾವೇ ಈ ಶಿಕ್ಷಕರ ವೇತನವನ್ನೂ ಭರಿಸುತ್ತಿದ್ದಾರೆ.

ಇನ್ನೊಬ್ಬ ಹಳೆ ವಿದ್ಯಾರ್ಥಿ, ಅಂತಾರಾಷ್ಟ್ರೀಯ ಮಟ್ಟದ ಉದ್ಯಮಿ ಸುಪ್ರಜಿತ್ ಆಫ್ ಇಂಡಸ್ಟ್ರೀಸ್ ನ ಸಿಎಂಡಿ ಅಜಿತ್ ಕುಮಾರ ರೈ ಅವರು 1.25 ಕೋಟಿ ರೂಪಾಯಿ ವೆಚ್ಚದಲ್ಲಿ ಮೂರು ಮಹಡಿಗಳ 10 ತರಗತಿ ಕೊಠಡಿ ಸಹಿತವಾದ ಬೃಹತ್ ಕಟ್ಟಡವನ್ನು ಒದಗಿಸಿಕೊಟ್ಟಿದ್ದಾರೆ.  ಗ್ರಾನೈಟ್ ನೆಲದಿಂದ ಶೋಭಿಸುವ ಈ ಕಟ್ಟಡ ಫೆಬ್ರುವರಿ 22ರ ಗುರುವಾರ ಲೋಕಾರ್ಪಣೆಗೊಂಡಿದೆ.

ವಿಟ್ಲದ ಇದೇ ಶಾಲೆಯ ಹಳೆ ವಿದ್ಯಾರ್ಥಿಗಳಾದ ವಿಟ್ಲದ ಜನಪ್ರಿಯ ವೈದ್ಯ ಮಂಜುನಾಥ ರೈ ಅವರ ಪುತ್ರ ಅಜಿತ ಕುಮಾರ ರೈ ಮತ್ತು ವಿಟ್ಲದ ಜನಪ್ರಿಯ ವ್ಯಾಪಾರೋದ್ಯಮಿ ಜನಾರ್ದನ ಪೈ ಅವರ ಪುತ್ರ ಸುಬ್ರಾಯ ಪೈ ಅವರ ಶಿಕ್ಷಣ ಪ್ರೇಮದ ಪರಿಣಾಮವಾಗಿ ವಿಟ್ಲದ ಆಸುಪಾನಿನಲ್ಲೇ ಅತ್ಯಂತ ಹಳೆಯ ಶಾಲೆ ಎಂಬುದಾಗಿ ಖ್ಯಾತಿ ಪಡೆದಿರುವ ವಿಟ್ಲದ ಎಲಿಮೆಂಟರಿ ಶಾಲೆ ಇದೀಗ ಖಾಸಗಿ ಶಾಲೆಗಳ ಜೊತೆಗೆ ಪೈಪೋಟಿಗೆ ನಿಲ್ಲುವಂತಾಗಿದ್ದು, ಗುಣಮಟ್ಟದ ಶಿಕ್ಷಣ ಎಲ್ಲ ಮಕ್ಕಳಿಗೂ ಲಭಿಸುವಂತಾಗಿದೆ.

ರೈ ಮತ್ತು ಪೈ ಗಳಂತಹ ಶಿಕ್ಷಣ ಪ್ರೇಮಿಗಳು ಊರೂರಲ್ಲೂ ಜನಿಸಿ, ಬೆಳೆಯುವಂತಾಗಲಿ, ಅವರ ಸೇವೆ ಇತರ ಎಲ್ಲರಿಗೂ ಅನುಕರಣೀಯವಾಗಲಿ ಎಂದು ಪರ್ಯಾಯ ತುಂಬು ಹೃದಯದಿಂದ ಹಾರೈಸುತ್ತದೆ.

-ನೆತ್ರಕೆರೆ ಉದಯಶಂಕರ

Click the image above or click here for video:
Video Courtesy: Vittla News App

Sunday, February 18, 2018

ಕರ್ನಾಟಕದ ರೈತ ಮುಖಂಡ ಕೆ.ಎಸ್.ಪುಟ್ಟಣ್ಣಯ್ಯ ಇನ್ನಿಲ್ಲ



ಕರ್ನಾಟಕದ ರೈತ ಮುಖಂಡ ಕೆ.ಎಸ್.ಪುಟ್ಟಣ್ಣಯ್ಯ  ಇನ್ನಿಲ್ಲ

ಮಂಡ್ಯ: ರೈತ ಮುಖಂಡ, ಮೇಲುಕೋಟೆ ಕ್ಷೇತ್ರದ ಸರ್ವೋದಯ ಪಕ್ಷದ ಶಾಸಕ ಕೆ.ಎಸ್ ಪುಟ್ಟಣ್ಣಯ್ಯ  ಫೆಬ್ರುವರಿ 18ರ ಭಾನುವಾರ ವಿಧಿವಶರಾದರು.  ಅವರಿಗೆ 69 ವರ್ಷ ವಯಸ್ಸಾಗಿತ್ತು.

ಮಂಡ್ಯ ನಗರದಲ್ಲಿ ಕಬಡ್ಡಿ ಪಂದ್ಯ ವೀಕ್ಷಿಸುತ್ತಿದ್ದ ಪುಟ್ಟಣ್ಣಯ್ಯ ಅವರು ಎದೆ ನೋವಿನಿಂದ ಕುಸಿದು ಬಿದ್ದರು.  ಅವರನ್ನು ತತ್ ಕ್ಷಣವೇ ವಿಮ್ಸ್ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತದಿಂದ ನಿಧನರಾದರು ಎಂದು ವರದಿಗಳು ತಿಳಿಸಿದವು.

ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಕೆ.ಎಸ್.ಪುಟ್ಟಣ್ಣಯ್ಯ ಸರ್ವೋದಯ ಪಕ್ಷದ ವತಿಯಿಂದ ಮೇಲುಕೋಟೆ ಕ್ಷೇತ್ರದಲ್ಲಿ 2013ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ  ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಈ ಮೂಲಕ ರೈತರ ಏಕೈಕ ಪ್ರತಿನಿಧಿಯಾಗಿ ಮತ್ತೊಮ್ಮೆ ವಿಧಾನಸಭೆ ಪ್ರವೇಶಿಸಿದ್ದರು.

 
ರಾಜ್ಯ ರೈತರ ಧ್ವನಿಯಾಗಿದ್ದ ಕೆಎಸ್ ಪುಟ್ಟಣ್ಣಯ್ಯ ಅವರು ಎರಡನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. 1994ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ನಂತರ ಸತರ ಮೂರು ಬಾರಿ ಸೋಲಿನ ಕಹಿ ಉಂಡಿದ್ದರು.

ರಾಜ್ಯ ರೈತ ಸಂಘ ಹಾಗೂ ಚುನಾವಣೆ: 1989ರ ಚುನಾವಣೆಯಲ್ಲಿ ಬಾಬಾಗೌಡ ಪಾಟೀಲ್ ಅವರು ಕಿತ್ತೂರು ಹಾಗೂ ಧಾರವಾಡ ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧೆಗಿಳಿದಿದ್ದರು. ಕಿತ್ತೂರು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಧಾರವಾಡ ಗ್ರಾಮಾಂತರ ಕ್ಷೇತ್ರವನ್ನು ಅಂದಿನ ರಾಜ್ಯ ರೈತ ಸಂಘದ ಅಧ್ಯಕ್ಷ ಪ್ರೊ.ಎಂ.ಡಿ ನಂಜುಂಡಸ್ವಾಮಿ ಅವರು ಪ್ರತಿನಿಧಿಸಿ, ಆಯ್ಕೆಯಾಗಿದ್ದರು.

ಚುನಾವಣೆಯಲ್ಲಿ ಬಾರಿ ಪುಟ್ಟಣ್ಣಯ್ಯ ಅವರು ಹಸಿರು ಶಾಲು ಹೊದ್ದು ರೈತರ ಪ್ರತಿನಿಧಿಯಾಗಿ ಮೇಲುಕೋಟೆಯಲ್ಲಿ ಪ್ರಚಾರಕ್ಕೆ ಆಗಮಿಸಿದಾಗಲೇ ಗೆಲುವಿನ ರುಚಿ ಉಂಡಿದ್ದರು. ಎಲ್ಲೆಡೆ ಮುದ್ದೆ ಬಸ್ಸಾರು ಊಟ, ನೀರು ಮಜ್ಜಿಗೆ ನೀಡಿದ ಜನರು ಮನೆ ಮಗನಂತೆ ತಮ್ಮ ಕ್ಷೇತ್ರ ಅಭ್ಯರ್ಥಿಯನ್ನು ಕಂಡರು. ಇದರ ಜೊತೆಗೆ ಕೆಎಸ್ ಪುಟ್ಟಣ್ಣಯ್ಯ ಅವರಿಗೆ ಯಡಿಯೂರಪ್ಪ ಅವರ ಕರ್ನಾಟಕ ಜನತಾ ಪಕ್ಷದ ಬೆಂಬಲವೂ ಸಿಕ್ಕಿತ್ತು.

ಮೇಲುಕೋಟೆ ಕಣದಲ್ಲಿ 13 ಜನರಿದ್ದರೂ ಜೆಡಿಎಸ್ ನ ಎರಡು ಬಾರಿ ಶಾಸಕ ಸಿ.ಎಸ್ ಪುಟ್ಟರಾಜು ಅವರ ಪ್ರಬಲ ಪೈಪೋಟಿ ನಡುವೆ ಪುಟ್ಟಣ್ಣಯ್ಯ ಅವರು 80041 ಮತ ಗಳಿಸಿದ್ದರು.  ಪುಟ್ಟರಾಜು 70193 ಮತ ಪಡೆದು ಸೊಲೊಪ್ಪಿಕೊಂಡಿದ್ದರು.

ಕಾವೇರಿ
ನೀರಿಗಾಗಿ ಹೋರಾಟ, ಸಕ್ಕರೆ ಕಾರ್ಖಾನೆ, ಕಬ್ಬಿಗೆ ಬೆಂಬಲ ಬೆಲೆಗಾಗಿ ಹೋರಾಟ ಎಲ್ಲವೂ ರೈತ ಮುಖಂಡ ಪುಟ್ಟಣ್ಣಯ್ಯ ಅವರನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಿರಪರಿಚಿತರನ್ನಾಗಿಸಿತ್ತು.  ಇದರ ಜೊತೆಗೆ ಪ್ರಚಾರ ಕಾರ್ಯದಲ್ಲಿ ಎಲ್ಲರಿಗಿಂತ ಮುಂದಿದ್ದರು. ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಪುಟ ಆರಂಭಿಸಿದರು, ಪ್ರತ್ಯೇಕ ಜಾಹೀರಾತು ನೀಡಿದರು. ತಮ್ಮದೇ ಆದ ಅಚ್ಚುಕಟ್ಟಾದ ವೆಬ್ ಸೈಟ್ ಅದೂ ಕನ್ನಡದಲ್ಲಿ ರೂಪಿಸಿ, ಕನ್ನಡ ಟೆಕ್ಕಿಗಳಿಗೂ ಹತ್ತಿರವಾದದ್ದೂ ಅವರ ಗೆಲುವಿಗೆ ಕಾರಣವಾಗಿತ್ತು.