Showing posts with label Ganesha. Show all posts
Showing posts with label Ganesha. Show all posts

Thursday, September 24, 2026

PARYAYA: ಮುದ ನೀಡಿದ ಭರತನಾಟ್ಯ

ಮುದ ನೀಡಿದ ಭರತನಾಟ್ಯ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆದ ಮೂರು ದಿನಗಳ ಗಣೇಶೋತ್ಸವ ಸಂದರ್ಭದಲ್ಲಿ ವಿದುಷಿ ಸುಮಾ ಶ್ರೀಧರ್‌ ನೇತೃತ್ವದ ನೂಪುರ ಕಲಾ ನಿಕೇತನ ತಂಡದ ಬಾಲ ಕಲಾವಿದೆಯರು ತಮ್ಮ ಭರತನಾಟ್ಯದಿಂದ ಗಮನ ಸೆಳೆದರು.

ಈ ಸಂದರ್ಭದಲ್ಲಿ ಬಾಲಕಿ ಆದ್ಯ ಕಶ್ಯಪ್‌ ತಾನು ಕಲಿತಿದ್ದ ಯಕ್ಷಗಾನದ ಹೆಜ್ಜೆಯನ್ನೂ ಅಳವಡಿಸಿಕೊಂಡದ್ದು ಪ್ರೇಕ್ಷಕರ ಮನ ಗೆದ್ದಿತು. ವಿಡಿಯೋ ನೋಡಲು ಮೇಲಿನ ಚಿತ್ರ ಕ್ಲಿಕ್‌ ಮಾಡಿರಿ.

PARYAYA: ಮುದ ನೀಡಿದ ಭರತನಾಟ್ಯ: ಮುದ ನೀಡಿದ ಭರತನಾಟ್ಯ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನ...

Tuesday, September 22, 2026

PARYAYA: ಭರತನಾಟ್ಯ, ಲವಕುಶ ಕಾಳಗ, ಕೇರಳ ಚೆಂಡೆ, ಭಜನೆ

 ಭರತನಾಟ್ಯ, ಲವಕುಶ ಕಾಳಗ, ಕೇರಳ ಚೆಂಡೆ, ಭಜನೆ

ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ೨೦೨೬ ಸೆಪ್ಟೆಂಬರ್‌ ೧೮, ೧೯ ಮತ್ತು ೨೦ರಂದು ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ.

ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ದೇವಸ್ಥಾನದಲ್ಲಿ ಬಡಾವಣೆಯ ೨೬ನೇ ಹಾಗೂ ಶ್ರೀ ಬಾಲಾಜಿ ಮಹಾಗಣಪತಿ ದೇವಸ್ಥಾನ ಸೇವಾ ಸಮಿತಿಯ ಮೂರನೇ ವರ್ಷದ ಗಣೇಶೋತ್ಸವ ಸಡಗರ.

ವಿದುಷಿ ಸುಮಾ ಶ್ರೀಧರ್‌ ನೇತೃತ್ವದ ನೂಪುರ ಕಲಾನಿಕೇತನ ತಂಡದ ೪೫ ಮಂದಿ ಬಾಲ ಕಲಾವಿದೆಯರು ಅತ್ಯಾಕರ್ಷಕ ನೃತ್ಯಗಳನ್ನು ನೀಡಿ ಭಾರತದ ಸಾಂಸ್ಕೃತಿ ವೈಭವವನ್ನು ಉಣಬಡಿಸಿದರು.

ಬಡಾವಣೆಯ ದೇವಸ್ಥಾನದಲ್ಲೇ ಕಳೆದ ಒಂದು ವರ್ಷದಿಂದ ಯಕ್ಷಗಾನ ಅಭ್ಯಾಸ ನಿರತರಾಗಿದ್ದ ಮಕ್ಕಳು ಮತ್ತು ಅಮ್ಮಂದಿರು ʼಲವ ಕುಶ ಕಾಳಗʼ ಯಕ್ಷಗಾನವನ್ನು ಪ್ರದರ್ಶಿಸಿ ಎಲ್ಲರ ಮನ ಗೆದ್ದರು. ಯಕ್ಷಗುರು ಉಮೇಶರಾಜ್‌ ಮಂದಾರ್ತಿ ನೇತೃತ್ವದ ʼಯಕ್ಷ ಕಲಾ ಕೌಸ್ತುಭ ಬೆಂಗಳೂರುʼ ತಂಡ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟಿತು.

ಹಿಮ್ಮೆಳದಲ್ಲಿ ಭಾಗವತರಾಗಿ ಉಮೇಶ್‌ ರಾಜ್‌ ಮಂದಾರ್ತಿ, ಮದ್ದಳೆ ಮತ್ತು ಚೆಂಡೆವಾದನದಲ್ಲಿ ಕ್ರಮವಾಗಿ ವೆಂಕಟೇಶ ಪ್ರಭು ಮತ್ತು ಸುಬ್ರಹ್ಮಣ್ಯ ಗಾಣಿಗ ಸಾಸ್ತಾನ ಮನರಂಜಿಸಿದರು. ಪಾತ್ರಧಾರಿಗಳಾಗಿ ಪುಟ್ಟ ಮಕ್ಕಳಾದ ಆದ್ರಿತಾ ರೈ, ಬ್ರಿತಿ ಮತ್ತು ಕನೀರಾ ಅವರ ಬಾಲಗೋಪಾಲ ಪ್ರೇಕ್ಷಕರೆಲ್ಲದ ಮನ ಗೆದ್ದಿತು. ʼಲವಕುಶ ಕಾಳಗʼದಲ್ಲಿ ಶತ್ರುಘ್ನನಾಗಿ ಆದ್ಯಭಟ್‌, ಲವನಾಗಿ ಆಧ್ಯ ಆದ್ಯ ಶ್ರೀವಲ್ಲಿ, ಕುಶನಾಗಿ ಆದ್ಯ ಕಶ್ಯಪ್‌, ಶ್ರೀರಾಮನಾಗಿ ಡಾ. ಉಮಾದೇವಿ ಎನ್‌, ಲಕ್ಷ್ಮಿನಿಧಿಯಾಗಿ ಕಾರ್ತಿಕ್‌, ಸೀತೆಯಾಗಿ ಅರ್ಚನಾ ಬಂಗೇರ, ವಾಲ್ಮೀಕಿಯಾಗಿ ಪ್ರಣೀತಾ ರೈ, ದಮನನಾಗಿ ಶಿವಾಂಶ್‌ ವಿ ಕೆ, ಪುಷ್ಕಳನಾಗಿ ಅಭ್ಯುದಯ ಪೂಜಾ ಯಾವುದೇ ವೃತ್ತಿ ಕಲಾವಿದರಿಗೆ ಕಡಿಮೆ ಇಲ್ಲದಂತೆ ಪ್ರದರ್ಶನ ನೀಡಿ ಮನರಂಜಿಸಿದರು. ಪ್ರಸನ್ನ ಮಯ್ಯ, ವರುಣ್‌ ತೀರ್ಥಹಳ್ಳಿ, ಉದಯ ಮಂದಾರ್ತಿ ಅವರ ಮೇಕಪ್‌ ಯಕ್ಷಗಾನ ಕಲಾವಿದರ ಸೊಬಗನ್ನು ಹೆಚ್ಚಿಸಿತು.

ಮೂರನೇ ದಿನ ಬೆಂಗಳೂರಿನ ಬಾಣಸವಾಡಿಯ ಶ್ರೀ ಧರ್ಮಶಾಸ್ತಾ ವಾದ್ಯ ಕಲಾ ಕೇಂದ್ರದ ಆನಿಲ್‌ ಕುಮಾರ್‌ ಎಎಸ್‌, ಶರತ್‌ ಗೋಪಾಲ್‌, ನಿಹಾಲ್‌ ಮಣಿಕಂದನ್‌, ಪ್ರಶಾಂತ ರಾಘವನ್‌, ಸಿಜಿಮೋನ್‌ ಎಲ್‌, ಜಯಕುಮಾರ್‌ ಆರ್‌, ಅಖಿಲ್‌ ಆರ್.‌ ಆಚಾರ್ಯ, ಆದಿತ್ಯನ್‌, ಪ್ರದೀಪ ಕುಮಾರ್‌, ರತುಲ್‌, ವೈಶಾಖ್‌ ಅವರನ್ನು ಒಳಗೊಂಡ ತಂಡ ಒಂದು ಗಂಟೆಗೂ ಅಧಿಕ ಅವಧಿಯ ನಿರಂತರ ಕೇರಳ ಚೆಂಡೆವಾದನದ ಮೂಲಕ ಭಕ್ತಾದಿಗಳ ರೋಮ ನಿಮಿರಿಸಿದ್ದಲ್ಲದೆ, ಮಹಾಮಂಗಳಾರತಿ, ಬಡಾವಣೆಯ ಪ್ರಮುಖ ರಸ್ತೆಗಳಲ್ಲಿ ನಡೆದ ಗಣೇಶ ಶೋಭಾ ಯಾತ್ರೆಯಲ್ಲಿ (ಪುರ ಮೆರವಣಿಗೆ) ಪಾಲ್ಗೊಂಡರು ಭಕ್ತರು ತನ್ಮಯತೆಯಿಂದ ನಲಿದಾಡುವಂತೆ ಮಾಡಿದರು.

ಎಂಸಿಎಚ್‌ಎಸ್‌ ಬಡಾವಣೆಯ ಭಕ್ತಿ ಸಂಗಮ ಭಜನಾ ಮಂಡಳಿಯ ಸದಸ್ಯೆಯರು ತಮ್ಮ ಭಜನೆಯ ಮೂಲಕ ಗಮನ ಸೆಳೆದರು.

ಮಹಿಳೆಯರು ಮತ್ತು ಮಕ್ಕಳಿಗಾಗಿ ಎರಡು ದಿನಗಳ ಕಾಲ ನಡೆದ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಿಜೆಪಿ ಧುರೀಣ ತಮ್ಮೇಶ್‌ ಗೌಡ ಮತ್ತು ಕಾಂಗ್ರೆಸ್‌ ಯುವ ಮುಖಂಡ ಶಿವಕುಮಾರ್‌ ಬಹುಮಾನಗಳನ್ನು ವಿತರಿಸಿದರು.

ಪುರಮೆರವಣಿಗೆಯ ಬಳಿಕ ರಾಚೇನ ಹಳ್ಳಿ ಕೆರೆಯಲ್ಲಿ ಗಣಪ ವಿಸರ್ಜನೆ ನಡೆಯಿತು.

ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ. ಚಿತ್ರಗಳ ಸಮೀಪ ನೋಟ ಹಾಗೂ ವಿಡಿಯೋ ನೋಡಲು ಚಿತ್ರಗಳನ್ನು ಕ್ಲಿಕ್‌ ಮಾಡಿರಿ.





ಈ ಸುದ್ದಿಯನ್ನೂ ಓದಿರಿ:
PARYAYA: ಭರತನಾಟ್ಯ, ಲವಕುಶ ಕಾಳಗ, ಕೇರಳ ಚೆಂಡೆ, ಭಜನೆ:   ಭರತನಾಟ್ಯ, ಲವಕುಶ ಕಾಳಗ, ಕೇರಳ ಚೆಂಡೆ, ಭಜನೆ ಬೆಂ ಗಳೂರಿನ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ೨೦೨೬ ಸೆಪ್ಟೆಂಬರ್‌ ೧೮, ೧೯ ಮತ್ತು ೨೦ರಂದು ಸಾ...

Friday, September 18, 2026

PARYAYA: ಗಣೇಶೋತ್ಸವ ೨೦೨೬

 ಗಣೇಶೋತ್ಸವ ೨೦೨೬

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ ಅಭಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ೨೦೨೬ ಸೆಪ್ಟೆಂಬರ್‌ ೧೮ರ ಶುಕ್ರವಾರ ಬೆಳಗ್ಗೆ ಬಡಾವಣೆಯ ೨೬ನೇ ಹಾಗೂ ದೇವಸ್ಥಾನದ ಮೂರನೇ ಗಣೇಶೋತ್ಸವ ವಿಧಿವತ್ತಾಗಿ ಆರಂಭವಾಯಿತು.

ಮೂರು ದಿನಗಳ ನಡೆಯುವ ಈ ಗಣೇಶೋತ್ಸವದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಕ್ಕಳು, ಮಹಿಳೆಯರು ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

ಶುಕ್ರವಾರ ಮಧ್ಯಾಹ್ನ ಮಹಿಳೆಯರು ಮತ್ತು ಪುರುಷರಿಗೆ ಬಡಾವಣೆಯ ನಿವಾಸಿಗಳು ಹಾಗೂ ಮಹಿಳಾ ತಂಡದ ಸದಸ್ಯೆಯರಾದ ಹೇಮಾ ಮತ್ತು ದೇವಕಿ ಅವರು ಆಟೋಟಗಳನ್ನು ನಡೆಸಿಕೊಡಲಿದ್ದು, ಬ್ಯಾಟರಾಯನಪುರ ಕ್ಷೇತ್ರದ ಬಿಜೆಪಿ ನಾಯಕ ಉಮೇಶ ಕೆ ಬಹುಮಾನ ಪ್ರಾಯೋಜನೆ ಮಾಡಿದ್ದಾರೆ.

ಸಂಜೆ ೬ ಗಂಟೆಗೆ ವಿದುಷಿ ಶ್ರೀಮತಿ ಸುಮಾ ಶ್ರೀಧರ್‌ ನೇತೃತ್ವದಲ್ಲಿ ನೂಪುರ ಕಲಾನಿಕೇತನ ತಂಡದಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮವನ್ನು ಪ್ರದೀಪ ಶಾಸ್ತ್ರಿ ಮತ್ತು ಕುಟುಂಬದವರು ಪ್ರಾಯೋಜಿಸಿದ್ದಾರೆ.

ಸೆಪ್ಟೆಂಬರ್‌ ೧೯ರ ಶನಿವಾರ ಬೆಳಗ್ಗೆ ೧೦ ಗಂಟೆಗೆ ದೇವಸ್ಥಾನದ ಅರ್ಚಕ ನಾಗೇಂದ್ರ ಭಟ್‌ ನೇತೃತ್ವದಲ್ಲಿ ಗಣಹವನ ಕಾರ್ಯಕ್ರಮ, ಮಧ್ಯಾಹ್ನ ೨ ಗಂಟೆಗೆ ಶಬನಮ್‌ ನೇತೃತ್ವದಲ್ಲಿ ಬಡಾವಣೆಯ ಮಹಿಳಾ ತಂಡದಿಂದ ಮಕ್ಕಳು, ಮಹಿಳೆಯರು, ಪುರುಷರಿಗೆ ಆಟೋಟ ಸ್ಪರ್ಧೆ ನಡೆಯಲಿದ್ದು ಯುವ ಮುಖಂಡ ಶಿವಕುಮಾರ್‌ ಬಹುಮಾನ ಪ್ರಾಯೋಜನೆ ಮಾಡಿದ್ದಾರೆ. ಸಾಯಂಕಾಲ ೬.೩೦ ಗಂಟೆಗೆ ದೇವಸ್ಥಾನದಲ್ಲೇ ಯಕ್ಷಗಾನ ಕಲಿಯುತ್ತಿರುವ ಮಕ್ಕಳು, ಮಹಿಳೆಯರಿಂದ ʼಲವ-ಕುಶ ಕಾಳಗʼ ಯಕ್ಷಗಾನ. ಯಕ್ಷಗುರು ಉಮೇಶರಾಜ್‌ ಮಂದಾರ್ತಿ ನೇತೃತ್ವದ ಯಕ್ಷ ಕಲಾ ಕೌಸ್ತುಭ ತಂಡ ಈ ಕಾರ್ಯಕ್ರಮವನ್ನು ನಡೆಸಿಕೊಡಲಿದೆ.

ಸೆಪ್ಟೆಂಬರ್‌ ೨೦ರ ಭಾನುವಾರ ಬೆಳಗ್ಗೆ ೯.೩೦ಗಂಟೆಗೆ ಗಣಪತಿ ಉಪನಿಷತ್‌ ಸಹಿತ ಪೂಜೆ, ಸಂಜೆ ೪ ಗಂಟೆಗೆ ಎಂಸಿಎಚ್‌ ಬಡಾವಣೆಯ ಭಕ್ತಿ ಸಂಗಮ ಭಜನಾ ಮಂಡಳಿಯಿಂದ ಭಜನೆ, ಸಂಜೆ ೬ಕ್ಕೆ ಬಾಣಸವಾಡಿಯ ಶ್ರೀ ಧರ್ಮ ಶಾಸ್ತಾ ವಾದ್ಯ ಕಲಾಕೇಂದ್ರ ತಂಡದಿಂದ ಕೇರಳ ಚೆಂಡೆವಾದನ ನಡೆಯಲಿದೆ. ಬಳಿಕ ಬಡಾವಣೆಯ ಪ್ರಮುಖ ರಸ್ತೆಗಳಲ್ಲಿ ಗಣಪನ ಶೋಭಾಯಾತ್ರೆಯೊಂದಿಗೆ ಗಣಪತಿ ವಿಸರ್ಜನೆ ನಡೆಯಲಿದೆ. ಶ್ರೀ ಸುಗುಣನ್‌ ಮತ್ತು ಬಡಾವಣೆಯ ಮಲಯಾಳಿ ಮಿತ್ರರು ಕೇರಳ ಚೆಂಡೆಯನ್ನು ಪ್ರಾಯೋಜಿಸಿದ್ದಾರೆ.

ಗಣೇಶೋತ್ಸವಕ್ಕೆ ಭಕ್ತರು ದೇಣಿಗೆಯೊಂದಿಗೆ ಸಹಕರಿಸಿದ್ದಲ್ಲದೆ, ಶ್ರೀ ಮುನಿರಾಜು ಮತ್ತು ಕುಟುಂಬ, ಶ್ರೀ ರಾಜೇಶ್‌ ಮತ್ತು ಕುಟುಂಬ, ಹೇಮಾವತಿ, ಶಾರದಮ್ಮ, ದೇವಕಿ, ಶಬನಮ್ ಮತ್ತು ಲತಾ  ನೇತೃತ್ವದ ಮಹಿಳಾ ತಂಡ, ಶ್ರೀ ಗುಣವರ್ಧನ್‌ ಶೆಟ್ಟಿ, ಲಂಡನ್ನಿನಲ್ಲಿ ಇರುವ ಅನೂಪ್‌ ಶೆಟ್ಟಿ, ಶೋಭನಾ ಶೆಟ್ಟಿ, ವಿಹಾ ಶೆಟ್ಟಿ ಮತ್ತು ಕುಟುಂಬ, ಶ್ರೀಮತಿ ಪ್ರಮೀಳಾನಾಥನ್‌, ಶ್ರೀಮತಿ ಪ್ರಭಾವತಿ, ಪ್ರಶಾಂತ್‌, ಚರಣ್‌ - ಶ್ವೇತಾ ನೇತೃತ್ವದಲ್ಲಿ ಬಡಾವಣೆಯ ೮ನೇ ಅಡ್ಡರಸ್ತೆಯ ಭಕ್ತರು, ಶ್ರೀ ನಾಗೇಶ್‌ ಮತ್ತು ಸರಸ್ವತಿ ಕುಟುಂಬ, ಮತ್ತಿತರರು ವಿವಿಧ ದಿನಗಳಂದು ಅನ್ನದಾನ, ಪ್ರಸಾದ, ಗಣಹವನ, ಟ್ರ್ಯಾಕ್ಟರ್‌ ಇತ್ಯಾದಿಗಳ ವ್ಯವಸ್ಥೆ ಮಾಡಿದ್ದರು. ಶ್ರೀ ಸಿರಾಜ್‌ ಸಾಗರ್‌  ಅವರು ವೇದಿಕೆ ಮತ್ತು ಪೆಂಡಾಲ್‌ ವ್ಯವಸ್ಥೆಯನ್ನು ಪ್ರಾಯೋಜಿಸಿದ್ದರು.

ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ. ಚಿತ್ರಗಳ ಸಮೀಪ ನೋಟಕ್ಕಾಗಿ ಅವುಗಳನ್ನು ಕ್ಲಿಕ್‌ ಮಾಡಿರಿ.





PARYAYA: ಗಣೇಶೋತ್ಸವ ೨೦೨೬:   ಗಣೇಶೋತ್ಸವ ೨೦೨೬ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ ಅಭಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ೨೦೨೬...

Wednesday, September 3, 2025

PARYAYA: ಗಣೇಶ ಉತ್ಸವ 2025 ಸಿದ್ಧತೆ, ಶ್ರಮದಾನ

 ಗಣೇಶ ಉತ್ಸವ 2025 ಸಿದ್ಧತೆ, ಶ್ರಮದಾನ 

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ 2025ರ ಸಾಲಿನ ಗಣೇಶ ಉತ್ಸವದ ಪೂರ್ವಭಾವಿಯಾಗಿ 2025 ಸೆಪ್ಟೆಂಬರ್‌ 3ರ ಬುಧವಾರ ಭಕ್ತರು ಶ್ರಮದಾನ ನೆರವೇರಿಸಿದರು.

 ಈ ಬಾರಿಯ ಗಣೇಶ ಉತ್ಸವವು ದೇವಸ್ಥಾನದ ಎರಡನೇ ಉತ್ಸವವಾಗಿದ್ದು, ಬಡಾವಣೆಯ ರಜತವರ್ಷದ ಉತ್ಸವವಾಗಿದೆ.

 ಗಣೇಶ ಉತ್ಸವವು ಸೆಪ್ಟೆಂಬರ್‌ ೫ರಿಂದ ೭ರವರೆಗೆ ನಡೆಯಲಿದೆ. ಶ್ರಮದಾನ ಸಂದರ್ಭದ ವಿಡಿಯೋ ಇಲ್ಲಿದೆ. 



PARYAYA: ಗಣೇಶ ಉತ್ಸವ 2025 ಸಿದ್ಧತೆ, ಶ್ರಮದಾನ:   ಗಣೇಶ ಉತ್ಸವ 2025 ಸಿದ್ಧತೆ , ಶ್ರಮದಾನ   ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ , ವೆಂಕಟೇಶ್ವರ ,...

Tuesday, September 26, 2023

PARYAYA: ಶ್ರೀ ಬಾಲಾಜಿ ಕೃಪಾ ಬಡಾವಣೆ ಗಣೇಶೋತ್ಸವ: ಚೆಂಡೆ ಸಂಭ್ರಮ

 ಶ್ರೀ ಬಾಲಾಜಿ ಕೃಪಾ ಬಡಾವಣೆ ಗಣೇಶೋತ್ಸವ: ಚೆಂಡೆ ಸಂಭ್ರಮ

ಬೆಂಗಳೂರು: ಚೆಂಡೆ ಧ್ವನಿಯ ಅನುರಣನ, ಬಾನಿನಲ್ಲಿ ಪಟಾಕಿ ಚಿತ್ತಾರದ ಸಂಭ್ರಮದೊಂದಿಗೆ ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ೨೨ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಶ್ರೀ ಬಾಲಾಜಿ ಕೃಪಾ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ೨೦೨೩ ಸೆಪ್ಟೆಂಬರ್‌ ೨೪ರ ಭಾನುವಾರ ಸಡಗರದೊಂದಿಗೆ ನಡೆಯಿತು.

ಕಂದಾಯ ಸಚಿವ ಹಾಗೂ ಬ್ಯಾಟರಾಯನಪುರ ಕ್ಷೇತ್ರದ ಶಾಸಕರೂ ಆದ ಶ್ರೀ ಕೃಷ್ಣ ಬೈರೇಗೌಡ, ಬಡಾವಣೆಯ ನಿರ್ಮಾಪಕ ಶ್ರೀ ಎಸ್.‌ ಎನ್.‌ ಕೃಷ್ಣಯ್ಯ ಶೆಟ್ಟಿ, ರಾಜಕೀಯ ನಾಯಕರಾದ ಜಯಗೋಪಾಲ ಗೌಡ ಮತ್ತು ಶಿವಕುಮಾರ್‌ ಅವರು ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡರು.

ಸೆಪ್ಟೆಂಬರ್‌ ೨೩ರ ಶನಿವಾರ ಮಧ್ಯಾಹ್ನ ವರುಣ ಸಿಂಚನದ ಶುಭಾಶೀರ್ವಾದದೊಂದಿಗೆ ಮಕ್ಕಳು ಮತ್ತು ಮಹಿಳೆಯರ ಆಟೋಟ ಸ್ಪರ್ಧೆಗಳು ನಡೆದವು. ಇದೇ ವೇಳೆಯಲ್ಲಿ ಬಾಲಕ ಬಾಲಕಿಯರು ತಮ್ಮಿಷ್ಟದ ಹಾಡುಗಳಿಗೆ ಹೆಜ್ಜೆ ಹಾಕಿ ನರ್ತಿಸುತ್ತಾ ಸಂಭ್ರಮಿಸಿದರು.


ಅದೇ ದಿನ ರಾತ್ರಿ ವರುಣನ ಅಮೃತ ಧಾರೆಯೊಂದಿಗೆ ಶುದ್ಧಗೊಂಡ ಬಡಾವಣೆಯ ಉದ್ಯಾನವನ ವಿದ್ಯುದ್ದೀಪಗಳ ಅಲಂಕಾರದೊಂದಿಗೆ ಗಣಪನ ಆಹ್ವಾನಕ್ಕೆ ಸಜ್ಜಾಯಿತು. ಬೆಳಗ್ಗೆ ಬಡಾವಣೆಯ ನಿವಾಸಿಗಳು ಉತ್ಸಾಹದ ಶ್ರಮದಾನದೊಂದಿಗೆ ಉದ್ಯಾನದಲ್ಲಿ ತುಂಬಿದ್ದ ನೀರನ್ನು ತೆರವುಗೊಳಿಸಿ ಕಸ ತೆಗೆದು ಶುದ್ಧಗೊಳಿಸಿದರು. ಮಹಿಳೆಯರು ರಂಗೋಲಿ, ಪುಷ್ಪಗಳಿಂದ ಅಲಂಕಾರ ಮಾಡಿ ಹಾಕಿ ವಿಘ್ನ ವಿನಾಯಕನಿಗೆ ಸ್ವಾಗತ ಕೋರಿದರು.

ಬಡಾವಣೆಯಲ್ಲಿ ಗಣಪನ ದೇಗುಲ ನಿರ್ಮಾಣ, ಬಡಾವಣೆಯ ನೀರಿನ ಸಮಸ್ಯೆಯ ನಿವಾರಣೆ, ಎಲ್ಲ ನಿವಾಸಿಗಳ ಆಯುರಾರೋಗ್ಯ, ಸುಖ ಸಂಪತ್ತಿನ ವೃದ್ಧಿಯಾಗಬೇಕೆಂಬ ಸಂಕಲ್ಪದೊಂದಿಗೆ ಗಣಹೋಮ, ಗಣಪತಿಯ ಪ್ರಾಣ ಪ್ರತಿಷ್ಠಾಪನೆ ನಡೆಯಿತು.


ಗಣಪನ ಪ್ರಾಣ ಪ್ರತಿಷ್ಠೆಯ ಹೊತ್ತಿಗೆ ಸರಿಯಾಗಿ ಆಗಮಿಸಿದ ಬಡಾವಣೆಯ ನಿರ್ಮಾಪಕ ಶ್ರೀ ಕೃಷ್ಣಯ್ಯ ಶೆಟ್ಟಿ ಅವರು ಗಣಪನಿಗೆ ಲಡ್ಡು ಪ್ರಸಾದವನ್ನು ಸಮರ್ಪಿಸಿದರು.

ಗಣಹೋಮದ ಪೂರ್ಣಾಹುತಿಯ ಹೊತ್ತಿಗೆ ಸರಿಯಾಗಿ ಆಗಮಿಸಿದ ಸಚಿವ ಶ್ರೀ ಕೃಷ್ಣ ಬೈರೇಗೌಡ, ಶಿವಕುಮಾರ್‌, ಜಯಗೋಪಾಲ ಗೌಡ ಅವರು ಹೋಮದ ಪೂರ್ಣಾಹುತಿ, ಮಹಾಪೂಜೆಯಲ್ಲಿ ಪಾಲ್ಗೊಂಡರು. ಕೇರಳದ ಚೆಂಡೆಯ ನಿನಾದ ಗಣಪನ ಮಹಾಪೂಜೆಗೆ ರಂಗೇರಿಸಿತು.

ಮಹಾಪೂಜೆ, ಪ್ರಸಾದ ವಿತರಣೆಯ ಜೊತೆಗೇ ಸುಮಾರು ಎರಡು ಗಂಟೆಗೂ ಹೆಚ್ಚುಕಾಲ ನಡೆದ ಕೇರಳ ಚೆಂಡೆಯ ಅನುರಣಕ್ಕೆ ಮಕ್ಕಳು, ಮಹಿಳೆಯರು, ಪುರುಷರು ಸೇರಿದಂತೆ ಬಡಾವಣೆಯ ನಿವಾಸಿಗಳು ಹೆಜ್ಜೆ ಹಾಕಿ ಸಂಭ್ರಮಿಸಿದರು.

ಬಡಾವಣೆಯ ನ್ಯಾಯವಾದಿ ಶ್ರೀ ಮುನಿರಾಜು ಅವರು ಭಕ್ತರಿಗೆ ಶುಚಿ-ರುಚಿಯಾದ ಭೋಜನದ ವ್ಯವಸ್ಥೆಯನ್ನು ಮಾಡಿದ್ದರು.

ಮಧ್ಯಾಹ್ನದ ಬಳಿಕ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ, ಗಣಪತಿಯನ್ನು ಅಲಂಕರಿಸಲು ಬಳಸಲಾದ ಶಾಲಿನ ಹರಾಜು ನಡೆಯಿತು.



ಕರಾವಳಿ ಚೆಂಡೆಯ ಅನುರಣನ, ಬಾನಿನಲ್ಲಿ ವೈವಿದ್ಯಮಯ ಪಟಾಕಿಗಳ ಚಿತ್ತಾರದೊಂದಿಗೆ ಸಂಭ್ರಮದೊಂದಿಗೆ ಗಣಪತಿಯ ಮಹಾಮಂಗಳಾರತಿ, ಶೋಭಾಯಾತ್ರೆ ನಡೆಯಿತು.

ರಾಚೇನಹಳ್ಳಿ ಕೆರೆಯಲ್ಲಿ ಗಣಪನ ವಿಸರ್ಜನೆ ನಡೆಯಿತು.

ಜಾತಿ, ಮತ, ರಾಜಕೀಯ ಭಿನ್ನಾಭಿಪ್ರಾಯಗಳ ಭೇದವಿಲ್ಲದೆ ಬಡಾವಣೆಯ ಎಲ್ಲ ನಿವಾಸಿಗಳು ಪಾಲ್ಗೊಂಡದ್ದು,


ಶೋಭಾಯಾತ್ರೆಯಲ್ಲೂ ನಲಿದು ನರ್ತಿಸಿದ್ದು, ಟೆಂಟಿಗೆ ಬಡಾವಣೆಯ ನಿವಾಸಿ ಸಿರಾಜ್, ಕೇರಳ ಚೆಂಡೆಗೆ ಬಡಾವಣೆಯ ಮಲಯಾಳಂ ಬಂಧುಗಳು, ವಿವಿಧ ಸ್ಪರ್ಧೆಗಳ ಬಹುಮಾನ, ಪಟಾಕಿ ವೆಚ್ಚವನ್ನು ಶಿವಕುಮಾರ್‌, ಗಣಪನ ವಿಗ್ರಹವನ್ನು ಗಣೇಶ ಮತ್ತು ಸಂದೀಪ ಪ್ರಾಯೋಜಿಸಿದ್ದುದು ವಿಶೇಷವಾಗಿತ್ತು.

 

 


PARYAYA: ಶ್ರೀ ಬಾಲಾಜಿ ಕೃಪಾ ಬಡಾವಣೆ ಗಣೇಶೋತ್ಸವ: ಚೆಂಡೆ ಸಂಭ್ರಮ:   ಶ್ರೀ ಬಾಲಾಜಿ ಕೃಪಾ ಬಡಾವಣೆ ಗಣೇಶೋತ್ಸವ: ಚೆಂಡೆ ಸಂಭ್ರಮ ಬೆಂಗಳೂರು: ಚೆಂಡೆ ಧ್ವನಿಯ ಅನುರಣನ, ಬಾನಿನಲ್ಲಿ ಪಟಾಕಿ ಚಿತ್ತಾರದ ಸಂಭ್ರಮದೊಂದಿಗೆ ಬೆಂಗಳೂರಿನ ರಾಮಕೃಷ್...