ನಾನು ಮೆಚ್ಚಿದ ವಾಟ್ಸಪ್

Wednesday, January 10, 2024

PARYAYA: ಸ್ವಚ್ಛವಾದವು.. ಚಾಮುಂಡಿ ಬೆಟ್ಟದ ಮೆಟ್ಟಿಲುಗಳು...!

 ಸ್ವಚ್ಛವಾದವು.. ಚಾಮುಂಡಿ ಬೆಟ್ಟದ ಮೆಟ್ಟಿಲುಗಳು...!

ಬೆಂಗಳೂರು/ ಮೈಸೂರು: ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗೆ (ಪಿಡಿಒ) ಒಂದು ದೂರವಾಣಿ ಕರೆ, ಪಂಚಾಯತ್‌ ಅಧ್ಯಕ್ಷೆಯ ಮನೆಗೆ ಭೇಟಿ ಮತ್ತು ಸ್ವಚ್ಛತೆ ಹಾಗೂ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳ ಅನುಷ್ಠಾನ ಕುರಿತು ತಿಳುವಳಿಕೆ, ಒಂದು ಪುಸ್ತಕದ ಕೊಡುಗೆ ಅಷ್ಟೇ.

ಇಪ್ಪತ್ತನಾಲ್ಕು ಗಂಟೆಗಳ ಒಳಗಾಗಿ ಕಸಕಡ್ಡಿ, ತ್ಯಾಜ್ಯ, ಪ್ಲಾಸ್ಟಿಕ್‌ ಬಾಟಲಿ, ಬೀಯರ್‌ ಬಾಟಲಿಗಳ ರಾಶಿಗಳು ತೆರವಾದವು. ಪ್ರದೇಶ ದುರ್ಗಂಧ ಮುಕ್ತವಾಯಿತು.

ಇದು ವಿಶ್ವ ವಿಖ್ಯಾತ ಮೈಸೂರಿನ ಚಾಮುಂಡಿ ಬೆಟ್ಟದ ಮೆಟ್ಟಿಲುಗಳ ಕಥೆ. ಬೆಂಗಳೂರಿನ ಸಂಪೂರ್ಣ ಸ್ವರಾಜ್‌ ಫೌಂಡೇಷನ್‌ ಸಂಸ್ಥಾಪಕ ಡಾ. ಶಂಕರ ಕೆ. ಪ್ರಸಾದ್‌ ಅವರು 2024 ಜನವರಿ 09ರ ಮಂಗಳವಾರ ಮೈಸೂರಿಗೆ ಭೇಟಿ ನೀಡಿದ್ದರು. ಈ ವೇಳೆಯಲ್ಲಿ ಅವರು ಮೈಸೂರಿನ ಚಾಮಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದರು.

ಚಾಮುಂಡಿ ಬೆಟ್ಟವನ್ನು ಏರುವಾಗ ಒಂದರಿಂದ 900ನೇ ಮೆಟ್ಟಿಲವರೆಗೂ ಇಕ್ಕೆಲಗಳಲ್ಲೂ ಕಟ್ಟಡಗಳ ಕಸಕಡ್ಡಿಗಳು, ಪ್ಲಾಸ್ಟಿಕ್‌ ಬಾಟಲಿಗಳು ಮತ್ತು ಬೀಯರ್‌ ಬಾಟಲಿಗಳು ತುಂಬಿ ದುರ್ವಾಸನೆ ಬೀರುತ್ತಿದ್ದು, ಭಕ್ತರು, ಪ್ರವಾಸಿಗರು ಮೂಗು ಮುಚ್ಚಿಕೊಂಡು ಸಾಗಬೇಕಾದ ಸ್ಥಿತಿಯಿದ್ದುದು ಅವರ ಗಮನಕ್ಕೆ ಬಂತು.

ಪ್ರಸಾದ್‌ ಅವರು ತತ್‌ ಕ್ಷಣವೇ ದೂರವಾಣಿ ಮೂಲಕ ಚಾಮುಂಡಿ ಬೆಟ್ಟ ಗ್ರಾಮ ಪಂಚಾಯತಿ ಪಿಡಿಒ ರೂಪೇಶ್‌ ಮತ್ತು ಅಧ್ಯಕ್ಷೆ ನಾಗಮ್ಮ ಅವರ ಪುತ್ರನಿಗೆ ಚಾಮುಂಡಿ ಬೆಟ್ಟದ ಮೆಟ್ಟಲುಗಳು ಕಸದ ಗುಂಡಿಯಾಗಿರುವ ಬಗ್ಗೆ ಗಮನ ಸೆಳೆದು ಸ್ವಚ್ಛಗೊಳಿಸುವಂತೆ ಮನವಿ ಮಾಡಿದರು.

ಅಷ್ಟಕ್ಕೂ ಸಮಾಧಾನವಾಗದೆ ಪಂಚಾಯಿತಿ ಅಧ್ಯಕ್ಷೆ ನಾಗಮ್ಮ ಅವರ ಮನೆಯ ವಿಳಾಸ ತಿಳಿದುಕೊಂಡು ಅಲ್ಲಿಗೆ ತೆರಳಿ ಪಂಚಾಯಿತಿ ಅಧ್ಯಕ್ಷೆಯನ್ನು ಭೇಟಿ ಮಾಡಿದರು. ಚಾಮುಂಡಿ ಬೆಟ್ಟದ ಮೆಟ್ಟಿಲುಗಳ ದುರವಸ್ಥೆ ಬಗ್ಗೆ ವಿವರಿಸಿ ಗ್ರಾಮವನ್ನು ಸ್ವಚ್ಛವಾಗಿ ಇರಿಸಬೇಕಾದ ಅಗತ್ಯದ ಬಗ್ಗೆ ತಿಳುವಳಿಕೆ ನೀಡಿದರು. ವಿಶ್ವಸಂಸ್ಥೆಯ ಅಭಿವೃದ್ಧಿ ಗುರಿಗಳ ಅನುಷ್ಠಾನ ಇಂತಹ ಸಣ್ಣ ಪುಟ್ಟ ಕಾರ್ಯಗಳ ಮೂಲಕವೇ ಸಾಧ್ಯವಾಗುತ್ತದೆ ಎಂಬುದನ್ನೂ ಅವರಿಗೆ ಮನದಟ್ಟು ಮಾಡಿದರು.

ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಹಾಗೂ ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆ ಕುರಿತು ತಾವು ಬರೆದ ʼ21ನೇ ಶತಮಾನದ ಆತ್ಮನಿರ್ಭರ ಗ್ರಾಮ ಪಂಚಾಯಿತಿʼ ಪುಸ್ತಕವನ್ನೂ ಅಧ್ಯಕ್ಷೆ ನಾಗಮ್ಮ ಅವರಿಗೆ ಅವರ ಪಂಚಾಯಿತಿಗಾಗಿ ಕೊಡುಗೆ ನೀಡಿದರು.

ಜೊತೆಗೇ ಚಾಮುಂಡಿ ಬೆಟ್ಟದ ಮೆಟ್ಟಿಲುಗಳ ದುರವಸ್ಥೆ ಬಗ್ಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯಿತಿ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೂ ಪತ್ರ ಬರೆದು ಮೆಟ್ಟಿಲುಗಳ ದುರವಸ್ಥೆ ನಿವಾರಣೆಗೆ ಕ್ರಮ ಕೈಗೊಳ್ಳುವಂತೆಯೂ, ಅಲ್ಲಿ ತ್ಯಾಜ್ಯಗಳನ್ನು ಎಸೆಯದಂತೆ ಕಾವಲು ವ್ಯವಸ್ಥೆ ಮಾಡುವಂತೆ ಮತ್ತು ತ್ಯಾಜ್ಯ ಎಸೆಯುವವರನ್ನು ದಂಡದ ಮೂಲಕ ಶಿಕ್ಷಿಸುವಂತೆ ಮನವಿ ಮಾಡಿದರು.

24 ಗಂಟೆಗಳು ಕಳೆಯುವ ಮುನ್ನ ಡಾ. ಪ್ರಸಾದ್‌ ಅವರ ಮೊಬೈಲಿಗೆ ಚಾಮುಂಡಿ ಬೆಟ್ಟದ ಪಿಡಿಒ ರೂಪೇಶ್‌ ಅವರಿಂದ ಒಂದು ವಾಟ್ಟಪ್‌ ಸಂದೇಶ ಬಂತು. ಅದರಲ್ಲಿ ಹೀಗೆ ಬರೆದಿತ್ತು: ʼಸರ್‌ ನಿಮ್ಮ ದೂರವಾಣಿ ಮೇರೆಗೆ ಸ್ವಚ್ಛಗೊಳಿಸಲಾಗಿದೆʼ.

ಸ್ವಚ್ಛಗೊಂಡು ಲಕ ಲಕಿಸುತ್ತಿದ್ದ ಚಾಮುಂಡಿ ಬೆಟ್ಟದ ಮೆಟ್ಟಲುಗಳ ಛಾಯಾಚಿತ್ರಗಳೂ ಜೊತೆಗಿದ್ದವು.

ಇದಕ್ಕೂ ಮುನ್ನ ಪ್ರಸಾದ್‌ ಅವರು ಡಿಸೆಂಬರ್‌ ತಿಂಗಳಲ್ಲಿ ಮಂಡ್ಯದ ಪಿಇಎಸ್‌ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಅಂಡ್‌ ವಿಕಸನ ಇನ್‌ ಸ್ಟಿಟ್ಯೂಟ್‌ ಫಾರ್‌ ರೂರಲ್‌ ಅಂಡ್‌ ಅರ್ಬನ್‌ ಡೆವಲಪ್‌ ಮೆಂಟ್‌ ಸಂಸ್ಥೆಯು ವಿಶ್ವ ಯುವಕ ಕೇಂದ್ರದ ಸಹಯೋಗದೊಂದಿಗೆ ಸಂಘಟಿಸಲಾಗಿದ್ದ ʼಸುಸ್ಥಿರ ಅಭಿವೃದ್ಧಿ ಗುರಿಗಳು (ಎಸ್‌ ಡಿಜಿಗಳು) ಮತ್ತು ಯುವಜನತೆʼ ವಿಷಯದ ಕುರಿತು ಅರಿವು ಮೂಡಿಸುವ ಕುರಿತ ವಿಚಾರಸಂಕಿರಣದಲ್ಲಿ ಪಾಲ್ಗೊಳ್ಳಲು. ತೆರಳಿದ್ದರು. ಆಗ ಅವರು ಅಲ್ಲಿ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳ ಬಗ್ಗೆ ವಿವರಿಸಿದ್ದರು.

ಸ್ವಚ್ಛಗೊಂಡ ಚಾಮುಂಡಿ ಬೆಟ್ಟದ ಮೆಟ್ಟಿಲುಗಳು ಮತ್ತು
ಮಂಡ್ಯದ ವಿಚಾರ ಸಂಕಿರಣದ

ಛಾಯಾಚಿತ್ರಗಳು ಇಲ್ಲಿವೆ:

ಚಿತ್ರಗಳ ಸಮೀಪ ದೃಶ್ಯಕ್ಕಾಗಿ ಅವುಗಳನ್ನು ಕ್ಲಿಕ್ಕಿಸಿ.


-ನೆತ್ರಕೆರೆ ಉದಯಶಂಕರ



PARYAYA: ಸ್ವಚ್ಛವಾದವು.. ಚಾಮುಂಡಿ ಬೆಟ್ಟದ ಮೆಟ್ಟಿಲುಗಳು...!:   ಸ್ವಚ್ಛವಾದವು .. ಚಾಮುಂಡಿ ಬೆಟ್ಟದ ಮೆಟ್ಟಿಲುಗಳು ...! ಬೆಂ ಗಳೂರು/ ಮೈಸೂರು: ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗೆ (ಪಿಡಿಒ) ಒಂದು ದೂರವಾಣಿ ಕರೆ, ಪಂಚಾಯತ್‌ ಅಧ್ಯಕ್...

No comments:

Post a Comment