ಬಲಿಪರೆಂಬೋ ಮಹಾ ಮೇರುವಿನ ನೆನೆನೆನೆದು...
ಬಹುಶಃ ಹಳೆ ತಲೆಗಳನ್ನು ಬಿಟ್ಟರೆ ಬಹಳ ಮಂದಿಗೆ ಇದು ಗೊತ್ತಿಲ್ಲ. ೫೦-೬೦ ವರ್ಷಗಳಿಗೂ ಹಿಂದಿನ ನೆನಪು. ನಾನು ಆಗ ವಿಟ್ಲದಲ್ಲಿ ಪ್ರಾಥಮಿಕ ಶಾಲೆ/ ಹೈಸ್ಕೂಲಿನಲ್ಲಿ ಓದುತ್ತಿದ್ದೆ. ವಿಟ್ಲ ಪ್ರಾಥಮಿಕ ಶಾಲೆಯ ಸಮೀಪದಲ್ಲೇ ಇದ್ದ ಮನೆಯೊಂದರಲ್ಲಿ ಆಗ ಬಲಿಪ ನಾರಾಯಣ ಭಾಗವತರು ತಮ್ಮ ಕುಟುಂಬದೊಂದಿಗೆ ವಾಸವಾಗಿದ್ದರು.
ಅವರ ಸಹೋದರನೊಬ್ಬ ನಾನು ಓದುತ್ತಿದ್ದ ಶಾಲೆಯಲ್ಲೇ ಓದಲು ಬರುತ್ತಿದ್ದುದು ನನಗೆ ನೆನಪಿದೆ. ಕ್ಷಮಿಸಬೇಕು. ಹೆಸರು ಮರೆತಿದೆ. ಆದರೆ ಆತ ಕೂಡಾ ಬಲಿಪರಂತೆಯೇ ಶಾಲೆಯಲ್ಲಿ ಯಕ್ಷಗಾನದ ಹಾಡುಗಳನ್ನು ಹಾಡುತ್ತಿದ್ದುದು ನನಗೆ ನೆನಪಿದೆ.
ನಮ್ಮ ಮನೆಯಿಂದ ವಿಟ್ಲ ಪೇಟೆಗೆ ಹೋಗುವಾಗ ಸಿಗುತ್ತಿದ್ದ ಆ ಮನೆಯಲ್ಲಿ ಬಲಿಪರು ಎಲೆ ಅಡಿಕೆ ಮೆಲ್ಲುತ್ತಾ ಭಾಗವತಿಕೆಯ ಪದಗಳನ್ನು ಗುನು ಗುನಿಸುತ್ತಿದ್ದನ್ನು ನಾನು ಕಂಡದ್ದುಂಟು.
ಆ ಬಳಿಕ ಎಷ್ಟೋ ಬಾರಿ ತಂದೆಯವರ ಜೊತೆಗೆ ವಿಟ್ಲದ ಆಸುಪಾಸಿನಲ್ಲಿ ಕಟೀಲು ಮೇಳದ ಯಕ್ಷಗಾನ ಬಯಲಾಟ ಅದರಲ್ಲೂ ದೇವಿ ಮಹಾತ್ಮೆ ಪ್ರಸಂಗ ಇದ್ದರೆ ತಪ್ಪಿಸದೇ ಹೋಗುತ್ತಿದ್ದ ನೆನಪಿದೆ. ಆಗ ಕೇಳುತ್ತಿದ್ದ ಬಲಿಪರ ಹಾಡುಗಳು ಅಲ್ಪ ಸ್ವಲ್ಪ ನಮ್ಮ ಬಾಯಿಗಳಲ್ಲೂ ಎಷ್ಟೋ ದಿನ ಅಲ್ಪ ಸ್ವಲ್ಪ ನಲಿಯುತ್ತಿದ್ದವು.
ವಿಟ್ಲದ ಜೊತೆಗಿನ ಬಲಿಪರ ಸಂಬಂಧ – ಮರೆಯಲಾಗದಂತಹುದು. ಈ ಬಗ್ಗೆ ಹೆಚ್ಚು ನೆನಪು ಇದ್ದವರಿದ್ದರೆ ಅದನ್ನು ದಾಖಲಿಸುವುದು ಉತ್ತಮ
ಬಲಿಪರ ಬಗ್ಗೆ ಆತ್ಮೀಯವಾಗಿ ಬರೆದ ಚಂದ್ರಶೇಖರ ಆಚಾರ್ಯ ಕೈಯಬೆ ಅವರ ಈ ಲೇಖನವನ್ನು ವಿಟ್ಲ ಸುದ್ದಿಗಳು ವಾಟ್ಸಪ್ ಗುಂಪಿನಲ್ಲಿ ಸಿ.ಎ. ಶಾಸ್ತ್ರಿ ಹಾಕಿದ್ದಾರೆ. ಅದನ್ನು ʼಪರ್ಯಾಯʼ ಹಾಗೆಯೇ ಇಲ್ಲಿ ತೆಗೆದುಕೊಂಡಿದೆ. ಬಲಿಪರನ್ನು ಹತ್ತಿರದಿಂದ ಕಂಡ ಅನುಭವ ಇದನ್ನು ಓದುತ್ತಾ ಇದ್ದರೆ ನಿಮಗೆ ಆಗಬಹುದು.
ಬಲಿಪರೆಂಬೋ ಮಹಾ ಮೇರುವಿನ ನೆನೆನೆನೆದು...
ಮಹಾ ಮಹಿಮಾ ಶ್ರೀ ಬಲಿಪರ ಕುರಿತು ಈಗಾಗಲೇ ಹತ್ತು ಹಲವು ಲೇಖನಗಳು ಸಮಷ್ಟಿಯ ಭಾವವನ್ನು ಹೊತ್ತು ಬಂದಿದೆ. ನಾಡಿನ ಪತ್ರಿಕೆಗಳು, ಆಕಾಶವಾಣಿ ಎಲ್ಲವೂ ಯಥಾ ಸಾಧ್ಯ ಅವರ ಗುಣಗಾನ ಮಾಡಿದೆ. ಖುದ್ದು ದೇಶದ ಪ್ರಧಾನಮಂತ್ರಿಗಳು, ರಾಜ್ಯದ ಮುಖ್ಯಮಂತ್ರಿಗಳು ಸೇರಿ ಸರಕಾರ, ಕಲಾ ವಲಯ ಅವರ ಸಾವಿಗೆ ಕಂಬನಿಗರೆದಿದೆ.. ಈ ಕಿರು ಬರಹದಲ್ಲೂ ಅದಕ್ಕಿಂತ ಹೊರತಾದುದು ಬೇರೆ ಏನು ಇಲ್ಲ. ಆದರೂ ಒಳಗಿದ್ದ ಭಾವನೆಗಳಿಗೆ ಅಕ್ಷರ ರೂಪ ಕೊಡಲೇಬೇಕೆಂಬ ಒತ್ತಡವೇ ಈ ಬರಹಕ್ಕೆ ಮೂಲ ಪ್ರೇರಣೆ, ಅನ್ಯಥಾ ಬೇರೆ ಏನೂ ಇಲ್ಲ.....
ಬಲಿಪರೆಂಬ ಮಹಾ ವಿಸ್ಮಯ.
ಹೌದು ಬಲಿಪರೆಂಬುದೇ ಒಂದು ವಿಸ್ಮಯ, ವಿಶೇಷ, ಅದ್ಭುತ.. ಅದ್ಯಾಕೋ ಗೊತ್ತಿಲ್ಲ ನನಗೆ ಬುದ್ದಿ ಬಂದಾಗಿನಿಂದಲೂ ಅಥವಾ ಸರಿಯಾಗಿ ಕಣ್ಣು ಬಿಟ್ಟು ಆಟ ನೋಡುವಲ್ಲಿಂದ ತೊಡಗಿ ಬಲಿಪರೆಂದರೆ ನನಗೆ ಕಾರಣವೇ ಇಲ್ಲದ ವಿಶೇಷ ಅಕ್ಕರೆ, ಪ್ರೀತಿ, ಗೌರವ.ಅದು ಬಲಿಪರು ಮೆರೆಯುತ್ತಿದ್ದ ಕಾಲ. ಕಟೀಲು ಮೇಳಗಳಲ್ಲೇ ಬಲಿಪರ ಸೆಟ್ ಗೆ ಬೇರೆಯದ್ದೇ ಆದ ಒಂದು ವಿಶೇಷ ಬೇಡಿಕೆ ಸೃಷ್ಟಿಯಾಗಿತ್ತು. ಇವತ್ತಿನ ಯಾವ ಪ್ರಚಾರ ಮಾಧ್ಯಮಗಳು ಇಲ್ಲದ ಕಾಲಘಟ್ಟದಲ್ಲಿ ಬಲಿಪರು ಸೃಷ್ಟಿಸಿದ್ದ ಸಂಚಲನ ಅಧ್ಯಯನ ಯೋಗ್ಯ ವಿಷಯ.ಜತೆಗೆ ಅದು ಆಡಿಯೋ ಕ್ಯಾಸೆಟ್ ಯುಗ. ಕ್ಯಾಸೆಟ್ ಅಂಗಡಿಗೆ ಹೋದರೆ ನನ್ನ ಮೊದಲ ಆಯ್ಕೆ ಭಾಗವತರು ಯಾರು ಎಂಬುದಾಗಿತ್ತು, ಹಾಗಾಗಿಯೇ ಬಲಿಪರ ಭಾಗವತಿಕೆಯ ನೂರಾರು ಕ್ಯಾಸೆಟ್ ನನ್ನ ಬಳಿ ಸಂಗ್ರಹವಾಗಿತ್ತು. ಆ ಬಳಿಕ ವೀಡಿಯೋ ಸಿಡಿ, ಡಿವಿಡಿಗಳು ಬಂದಾಗಲೂ ಯಥಾ ಪ್ರಕಾರ ಬಲಿಪರ ಹತ್ತಾರು ಸಿಡಿ, ಡಿವಿಡಿಗಳು ನನ್ನ ಸಂಗ್ರಹ ಸೇರಿತ್ತು..ಇನ್ನೂ ಸಾವಿರ ವರ್ಷ ಕಳೆದರೂ ಬಲಿಪ ಧ್ವನಿ ಆ ಮೂಲಕ ಕೇಳುತ್ತಲೇ ಇರುತ್ತದೆ. ಇದೇ ನಮ್ಮ ಪಾಲಿನ ದೊಡ್ಡ ಸೌಭಾಗ್ಯ.
ಅದ್ಬುತವಾದ ರಂಗ ತಂತ್ರಜ್ಞ
ಬಲಿಪರಿಗೆ ಆಟ ಬಿಟ್ಟರೆ ಬೇರೆ ಏನೇನೂ ಅಂದರೆ ಏನೂ ಗೊತ್ತಿರಲಿಲ್ಲ ಎಂಬುದು ಎಲ್ಲರಿಗೂ ಗೊತ್ತಿದ್ದ ವಿಷಯ. ಚೌಕಿಯ ರಾಜಕಾರಣ ಎನ್ನುವುದು ಅವರಿಗೆ ಅರ್ಥವಾಗದ ವಿಷಯ. ಅವರಿಗೆ ಗೊತ್ತಿದ್ದುದು ಒಂದೇ ಆಟ ಚೆನ್ನಾಗಿ ಆಗಬೇಕು, ಅಷ್ಟೇ ಅಷ್ಟೇ. ತಾನು ಮೆರೆಯಬೇಕು, ತನ್ನ ಪದ್ಯ ಹೈಲೈಟ್ ಆಗಬೇಕು,ತಾನು ಪ್ರಸಿದ್ದಿಯ ಉತ್ತುಂಗಕ್ಕೆ ಹೋಗಬೇಕು ಇತ್ಯಾದಿ ಯಾವ ಕಲ್ಪನೆಯೂ ಇಲ್ಲದ ಮುಗ್ದಾತೀ ಮುಗ್ದ ಭಾಗವತ ರತ್ನ ನಮ್ಮ ಬಲಿಪರು.. ಆದರೆ ಆಟದೊಂದಿಗೆ ಬಲಿಪರು ಮೆರೆದರು, ಜನ ಕೂಡ ಅವರನ್ನು ಮೆರೆಸಿದರು..
ಚೌಕಿ ಅಥವಾ ರಂಗಸ್ಥಳವಿರಲಿ ಅಥವಾ ಕೂಟದಲ್ಲಿ ಆಗಲಿ ಅವರ ಉಪಸ್ಥಿತಿಯೇ ಒಂದು ಅನೂಹ್ಯ ಅನುಭವ. ಚೌಕಿಯಲ್ಲಿ ಸಹ ಕಲಾವಿದರಿಗೆ ಪ್ರಸಂಗ ಜ್ಞಾನ ಕಲಿಸುವುದರಿಂದ ತೊಡಗಿ, ಅವರು ಮುಂಡಾಸು ಕಟ್ಟುವುದು, ದೇವರ ಎದುರುಗಡೆ ಪ್ರಸಾದ ತೆಗೆದುಕೊಳ್ಳುವುದು, ಅವರ ಕವಳದ ಪೆಟ್ಟಿಗೆ, ಎಲೆ ಅಡಿಕೆ ತಿನ್ನುವ ರೀತಿ, ಹೆಗಲ ಮೇಲೆ ಶಾಲು, ಕೈಯಲ್ಲಿ ಕವಳದ ಪೆಟ್ಟಿಗೆಯೊಂದಿಗೆ, ಇಳಿ ಬಿಟ್ಟ ವೇಸ್ಟಿಯನ್ನು ಸ್ವಲ್ಪ ಮೇಲೆ ಎತ್ತಿಕೊಂಡು ಅವರು ರಂಗಸ್ಥಳಕ್ಕೆ ಬರುವುದು... ನೋಡುವುದೇ ಒಂದು ಸೊಗಸು. ಸುಬ್ರಾಯ ಹೊಳ್ಳರ ಮಾತಿನ ಪ್ರಕಾರ ಅವರು ಚೌಕಿಯಲ್ಲಿ ತಯಾರಾಗುವುದೇ ಒಂದು ಪರಿಪೂರ್ಣ ವೇಷ ತಯಾರಾದಂತೆ.ಒಮ್ಮೆಅವರು ರಂಗಸ್ಥಳಕ್ಕೆ ಬಂದರೆ ಆಮೇಲೆ ಏನಿದ್ದರೂ ಬಲಿಪರೇ ಇಡೀ ರಂಗ ನಿರ್ದೇಶಕ, ಭಾಗವತ, ನಿಯಂತ್ರಕ.. ಬಲಿಪರು, ಬಲಿಪರು, ಬಲಿಪರು.... ಆಟದ ವಿಷಯದಲ್ಲಿ ಬಲಿಪರಿಗೆ ಗೊತ್ತಿಲ್ಲದ್ದು ಏನು?ಚೌಕಿಯಲ್ಲಿ ವೇಷ ತಯಾರು ಆಗುವುದರಿಂದ ತೊಡಗಿ, ವೇಷಗಳ
ರಂಗಸ್ಥಳಕ್ಕೆ ಪ್ರವೇಶ,ವೇಷಗಳ ನಿಲ್ಲುವಿಕೆ, ಮಾತನಾಡುವುದು, ನಿರ್ಗಮನ ಎಲ್ಲವೂ ಬಲಿಪರೆಂಬ ಚುಂಬಕ ಶಕ್ತಿಯ ನಿಯಂತ್ರಣಕ್ಕೆ ಒಳಪಟ್ಟೆ ನಡೆಯುತ್ತಿತ್ತು. ಅವರು ಸ್ವಯಂ ವೇಷ ಮಾಡದಿದ್ದರೂ ಯಾವ ಪಾತ್ರ ಹೇಗೆ ಇರಬೇಕು ಬಣ್ಣದಿಂದ ತೊಡಗಿ ಎಲ್ಲದಕ್ಕೂ ಅವರು ಇದಂಮಿತ್ಥಂ..
ಕಲಾವಿದರ ನಿರ್ಮಾಣದ ಕುಶಲ ಶಿಲ್ಪಿ
ಮೇಳಕ್ಕೆ ಒಬ್ಬ ಯಜಮಾನ, ಮ್ಯಾನೇಜರ್ ಇತ್ಯಾದಿ ಎಲ್ಲ ವ್ಯವಸ್ಥೆ ಇದ್ದರೂ ಭಾಗವತನ ಸ್ಥಾನ ಪ್ರತ್ಯೇಕ, ಅದು ವಿಶೇಷ ವಿಶಿಷ್ಟ. ಒಬ್ಬ ಭಾಗವತ ಮನಸು ಮಾಡಿದರೆ ಇಡೀ ಆಟ ಮಾತ್ರವಲ್ಲ ಇಡೀ ಮೇಳದ ವ್ಯವಸ್ಥೆಯನ್ನೇ ಹಾಳು ಮಾಡಬಹುದು, ಹಾಗೆ ಮೆರೆಸಲುಬಹುದು. ಸಹ ಕಲಾವಿದನನ್ನು ಮೆರೆಸಬಹುದು, ಚಿವುಟಿ ಹಾಕಲೂಬಹುದು. ಇದು ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತದೆ.. ಆದರೆ ಬಲಿಪರು ಇಲ್ಲೂ ವಿಶೇಷ, ವಿಶಿಷ್ಟ. ಪ್ರಾಯಶ: ಸುಮಾರು ನಾಲ್ಕು ಅಥವಾ ಐದು ತಲೆಮಾರಿನ ಕಲಾವಿದರನ್ನು ಅವರು ಕುಣಿಸಿದ್ದಾರೆ, ಮೆರೆಸಿದ್ದಾರೆ, ಕೂಟಗಳಲ್ಲಿ ಅರ್ಥ ವೈಭವ ಕಾಣಿಸುವಂತೆ ಮಾಡಿದ್ದಾರೆ. ತೆಂಕಿನ ಲೆಜೆಂಡ್ ಕಲಾವಿದರೆಲ್ಲರನ್ನು ಕುಣಿಸಿದ ಕೀರ್ತಿ ಅವರದ್ದು. ಕುದ್ರೆಕೂಡ್ಲು, ನಿಡ್ಲೆ, ದಿವಾಣ,ಕಾಸರಗೋಡು, ಕುರುಪ್, ಚಿಪ್ಪಾರು ಮೊದಲಾದ ಚೆಂಡೆ ಮದ್ದಳೆಯ ಪ್ರಾತ:ಸ್ಮರಣಿಯರೊಂದಿಗೆ ಭಾಗವತಿಕೆ ಮಾಡಿದ ಬಲಿಪರಿಗೆ ಕೇವಲ ಚೆಂಡೆ ಮದ್ದಳೆಯ ಬಾಲ ಪಾಠ ಅಷ್ಟೇ ಕಲಿತ ಒಬ್ಬ ಬಾಲಕ ಕೂಡ ಯಾವುದೇ ಅಂಜಿಕೆ ಅಳುಕು ಇಲ್ಲದೇ ಚೆಂಡೆ ಮದ್ದಳೆ ನುಡಿಸಬಹುದಿತ್ತು. ತನಗೆ ಇಂತವನೇ ಚೆಂಡೆ ಮದ್ದಳೆಗೆ ಬೇಕು ಎಂಬ ಯಾವ ಅಗ್ರಹವಾಗಲಿ, ಬೇಡಿಕೆಯಾಗಲಿ ಅವರಲ್ಲಿ ಎಂದೂ ಇರಲೇ ಇಲ್ಲ. ನುಡಿಸಲು ಬಂದರೆ ಸಾಕು, ಉಳಿದಂತೆ ಎಲ್ಲವನ್ನು, ಎಲ್ಲರನ್ನು ತಾನೇ ಸುಧಾರಿಸಿಕೊಂಡು ಮುಂದೆ ಹೋಗುತ್ತಿದ್ದುದು ಅವರ ದೊಡ್ಡ ಗುಣಗಳಲ್ಲಿ ಒಂದು.
ಪ್ರಾಯ: ಇವತ್ತು ತೆಂಕಿನ ಶ್ರೇಷ್ಠ ಕಲಾವಿದರೆಲ್ಲರೂ ಒಂದಲ್ಲ ಒಂದು ಹಂತದಲ್ಲಿ ಬಲಿಪರಿಂದ ಪ್ರೇರಣೆ ಪಡೆದವರೇ ಆಗಿದ್ದಾರೆ. ಸುಣ್ಣಂಬಳ ವಿಶ್ವಣ್ಣನಿಂದ ತೊಡಗಿ ಪೆರ್ಮುದೆ ಜಯಪ್ರಕಾಶ ಶೆಟ್ಟರ ತನಕ ಎಲ್ಲ ಕಲಾವಿದರ ಮೆರೆಯುವಿಕೆಯಲ್ಲಿ ಬಲಿಪರ ಕಲಾ ಕಾಣಿಕೆ ಇದ್ದೇ ಇದೆ. ಅನೇಕ ಕಲಾವಿದರನ್ನು ಅವರ ಪ್ರತಿಭೆಯನ್ನು ಗುರುತಿಸಿ ಕಟೀಲು ಮೇಳಕ್ಕೆ ಮೇಳದ ಯಜಮಾನರ ಬಳಿ ಹೇಳಿ ಕರೆಸಿಕೊಂಡವರು ಅವರು. ಕಲಾವಿದನ ಸಾಮರ್ಥ್ಯ, ಪ್ರಸಂಗ, ಪದ್ಯದ ಅಪೇಕ್ಷೆಗೆ ತಕ್ಕಂತೆ ಕಲಾವಿದರನ್ನು ಮೆರೆಸುವುದು ಬಲಿಪರ ವಿಶೇಷತೆ.ವೇಷಧಾರಿಯಾಗಿ ಮೇಳ ಸೇರಿದ್ದ ಮಹೇಶ್ ಮಣಿಯಾಣಿ ಇವತ್ತು ಶ್ರೇಷ್ಠ ಹಾಸ್ಯಗಾರರಾಗಿ ಬೆಳೆದಿದ್ದರೆ ಅದಕ್ಕೆ ದೊಡ್ಡ ಕಾಣಿಕೆ ಕೊಟ್ಟವರು ಬಲಿಪರು.ಪೆರ್ಮುದೆಯವರ ಸಾಮರ್ಥ್ಯ ಗುರುತಿಸಿ ಸಣ್ಣ ವಯಸ್ಸಿನಲ್ಲೇ ದೊಡ್ಡ ದೊಡ್ಡ ಪಾತ್ರ ಕೊಟ್ಟು ತಯಾರು ಮಾಡಿದ್ದು ಇರಬಹುದು, ದೇವಿ ಭಟ್ರು ಎಂದೇ ಖ್ಯಾತರಾದ ಬಾಯರು ರಮೇಶ್ ಭಟ್ರು ರಂಗದಲ್ಲಿ ಅಷ್ಟು ಮೆರೆಯಲು ಸಾಧ್ಯವಾಗಿದ್ದು ಬಲಿಪರ ನಿರಂತರ ಪ್ರೋತ್ಸಾಹದಿಂದಲೇ ತಾನೇ? ಅವರು ನಿವೃತ್ತರಾದ ಬಳಿಕ ಮಂಗಳೂರು ಪುರಭವನದಲ್ಲಿ ನಡೆದ ಒಂದು ಕಮ್ಮಟದಲ್ಲಿ ಪಾತಾಳ ವೆಂಕಟರಮಣ ಭಟ್ಟರ ಮಾಯಾ ಪೂತನಿಯನ್ನು ಅವರು ಕುಣಿಸಿದ ಬಗೆ ಈಗಲೂ ಕಣ್ಣ ಮುಂದೆ ಹಾಗೆಯೇ ಇದೆ. ಎಂತಹ ದುರ್ಬಲ ಕಲಾವಿದನನ್ನು ಹೊಂತಕಾರಿಯಾನ್ನಾಗಿಸುವ ಸಾಮರ್ಥ್ಯ ಅವರ ಪದ್ಯಕ್ಕೆ ಇರುತ್ತಿತ್ತು.
ನಾವು ಕಂಡ ನಮ್ಮ ಕಾಲದ ಶ್ರೇಷ್ಠ ಕಿರೀಟ ವೇಷ ಅಂದರೆ ಸಂಪಾಜೆ ಶೀನಪ್ಪ ರೈಗಳದ್ದು. ಅವರ ಇಂದ್ರಜಿತು, ಹಿರಣ್ಯಾಕ್ಷ, ಅರುಣಾಸುರ,ರಕ್ತಬೀಜ, ಶಿಶುಪಾಲ, ದೇವೇಂದ್ರ, ಅರ್ಜುನ, ಕರ್ಣ ಮೊದಲಾದ ಪಾತ್ರಗಳು ಇನ್ನಿಲ್ಲದಂತೆ ಮೆರೆದಿದ್ದು ಬಲಿಪರ ಭಾಗವತಿಕೆಯಲ್ಲೇ.ಪೆರುವಾಯಿ ನಾರಾಯಣ ಶೆಟ್ಟರು ಇನ್ನೊಬ್ಬ ಮಹಾನ್ ಇದಿರು ವೇಷಧಾರಿಗಳು. ಅವರ ಸಾಮರ್ಥ್ಯ ಹೊರ ಬಂದಿದ್ದು ಬಲಿಪರ ರಂಗ ನಿರ್ದೇಶನದಲ್ಲೇ ತಾನೇ? ರೆಂಜಾಳ ರಾಮಕೃಷ್ಣ ರಾಯರನ್ನು ಒರ್ವ ಸವ್ಯಸಾಚಿ ಪರಿಪೂರ್ಣ ಕಲಾವಿದನಾಗಿ ಕಾಣಿಸುವಲ್ಲಿ ಬಲಿಪರ ಕಾಣಿಕೆ ಕಡಿಮೆಯದ್ದಲ್ಲ.. ಒಂದೇ ಎರಡೇ ಹೇಳಿ ಮುಗಿಯದಷ್ಟು ಇದೆ..
ಬಲಿಪ - ಪಟ್ಲರೆಂಬ ಅಪೂರ್ವ ಗುರು ಶಿಷ್ಯ ಬಾಂಧವ್ಯ
ಪಟ್ಲ ಸತೀಶ್ ಶೆಟ್ಟರು ಯಕ್ಷಗಾನ ವಲಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದ ಕಲಾವಿದ. ಸುಮ್ಮನೆ ಹಾಗೆ ಗಮನಿಸಿ. ಪಟ್ಲ ಭಾಗವತರು ಬಲಿಪರ ಸೆಟ್ ಗೆ ಬರುವ ಮುಂಚೆಯೇ ಅವರು ತಮ್ಮನ್ನು ತಾವು ಸ್ಥಾಪಿಸಿಕೊಂಡ ಭಾಗವತರಾಗಿದ್ದರು. ಮೇಲಾಗಿ ಶಾಸ್ತ್ರೀಯ ಸಂಗೀತ ಪಾಠ ಆಗಿತ್ತು, ಅದರೊಂದಿಗೆ ಖುದ್ದು ಅವರ ತಂದೆಯವರಿಂದ ಮತ್ತು ಮಾಂಬಾಡಿ ಗುರುಗಳ ಪಾಠವಾಗಿತ್ತು.ಇನ್ನೊಂದು ಸ್ವಾರಸ್ಯವೆಂದರೆ ಬಲಿಪರ ಕಿರಿಯ ಸುಪುತ್ರ ಪ್ರಸಾದರು ಎರಡನೇ ಮೇಳದಲ್ಲಿ ಆಗಲೇ ಸೆಟ್ ಆಗಿದ್ದರು, ತಂದೆಯವರ ಮಾರ್ಗದರ್ಶನದೊಂದಿಗೆ.. ಯಾವನೇ ಒಬ್ಬ ತಂದೆಗೆ ತನ್ನ ಮಗನಿಗೆ ಮುಂದಕ್ಕೆ ಇನ್ನೊಬ್ಬ ಪ್ರತಿಭಾವಂತ ಕಲಾವಿದ ಪ್ರತಿಸ್ಪರ್ಧಿಯಾಗಬಹುದು ಎಂಬ ಆತಂಕವೋ,ಭಯವೋ ಬಂದರೆ ಅದರಲ್ಲಿ ಯಾವ ಆಶ್ಚರ್ಯವೂ ಇಲ್ಲ, ಅದು ಮಾನವ ಸಹಜ ಗುಣ. ಆದರೆ ಬಲಿಪರ ಅದೆಂಥಹ ಗುಣ ಅಂದರೆ ತನ್ನ ಸರಿ ಮಿಗಿಲು ಎನಿಸುವಂತೆ ಪಟ್ಲರನ್ನು ಬೆಳೆಸಿದರು. ಮಾತ್ರವಲ್ಲ ಅವರನ್ನು ಅವರ ಸ್ವಂತ ಶೈಲಿಯೊಂದಿಗೆ ಬೆಳೆಯಲು ಅವಕಾಶ ಮಾಡಿಕೊಟ್ಟರು. ಆಶ್ಚರ್ಯವೆಂದರೆ ಪ್ರಸಾದರಿಗೂ ಈ ಕುರಿತು ಯಾವುದೇ ಗೊಂದಲವೂ ಇರಲಿಲ್ಲ ಎಂಬುದು ಅಷ್ಟೇ ವಿಶೇಷ.. ಪಟ್ಲ ಭಾಗವತರ ಕುರಿತು ಬಲಿಪರಿಗೆ ಇದ್ದ ಶಿಷ್ಯ ಭಾವ ಮತ್ತು ಪಟ್ಲ ಭಾಗವತರಿಗೆ ಬಲಿಪರಿಗೆ ಇದ್ದ ಗುರು ಭಾವ ಅನೂಹ್ಯ,ಅನುಪಮ, ಅನ್ಯಾದೃಶ್ಯ ಅಲಭ್ಯ...
ಕಲಾವಿದರಿಗೆ ಮಾದರಿ ಹೇಗೆ?
ಸಾಮಾನ್ಯ ಯಾವನೇ ಒಬ್ಬ ಶ್ರೇಷ್ಠ ಕಲಾವಿದನನ್ನು ಕೇಳಿ ನೋಡಿ, ತಮ್ಮ ಸಾಧನೆಯ ಬಗ್ಗೆ ಹೆಮ್ಮೆ, ಅಭಿಮಾನ ಇರವುದೆಲ್ಲ ಸಹಜವೇ. ಆದರೆ ತಮ್ಮ ಮಕ್ಕಳು ತಪ್ಪಿಯೂ ಈ ಕ್ಷೇತ್ರಕ್ಕೆ ಬರವುದನ್ನು ಅವರು ಇಷ್ಟ ಪಡುವುದೇ ಇಲ್ಲ.ಅದು ಸಹಜ ಕೂಡ.ಈ ಕಷ್ಟ ತನಗೆ ಮಾತ್ರ ಸಾಕು ಎಂಬುದೇ ಎಲ್ಲರ ಅಪೇಕ್ಷೆ.ಆದರೆ ಬಲಿಪರು ಇಲ್ಲೂ ಕೂಡ ಅಪವಾದ. ಯಾವುದು ತನಗೆ ಪರಂಪರೆಯಿಂದ ಬಂದ ಕಲಾ ಬಳುವಳಿ ಏನಿದೆಯೋ ಅದನ್ನು ಅಷ್ಟೇ ಜತನವಾಗಿ ಕಾಪಿಟ್ಟು ತನ್ನ ಮುಂದಿನ ಪೀಳಿಗೆಗೂ ಅಷ್ಟೇ ಶ್ರದ್ದೆಯಿಂದ ದಾಟಿಸಿದ ಕೀರ್ತಿ ಅವರದ್ದು. ತಮ್ಮ ನಾಲ್ವರು ಪುತ್ರರ ಒಬ್ಬರನ್ನು ಬಿಟ್ಟು ಮೂರು ಮಂದಿಗೆ ಭಾಗವತಿಕೆ ಕಲಿಸಿದ್ದಾರೆ,ಕಿರಿಯ ಪುತ್ರನನ್ನು ಒರ್ವ ಸಮರ್ಥ ಭಾಗವತನ್ನಾಗಿ ರೂಪಿಸಿ ತನ್ನ ಉತ್ತರಾಧಿಕಾರಿಯಾಗಿ ಮೇಳದ ಪ್ರಧಾನ ಭಾಗವತರನ್ನಾಗಿ ಮೆರೆದುದನ್ನು ಕಣ್ಣಾರೆ ಕಂಡು ಅಭಿಮಾನ ಪಟ್ಟರು ಕೂಡ.ಆದರೆ ನಮ್ಮ ದುರ್ದೈವ ಅವರನ್ನು ಉಳಿಸಿಕೊಳ್ಳುವ ಭಾಗ್ಯ ನಮಗಿರಲಿಲ್ಲ ಅಷ್ಟೇ..ದ್ವಿತೀಯ ಪುತ್ರ ಶಿವಶಂಕರ ಹವ್ಯಾಸಿಯಾಗಿದ್ದು, ವೃತ್ತಿ ಭಾಗವತರಿಗೆ ಹೇಳಿಕೊಡುವಷ್ಟು ಅನುಭವವನ್ನು ಗಳಿಸಿಕೊಂಡವರು. ಅನಿವಾರ್ಯವಾಗಿ ತನ್ನ ಪೂಜ್ಯ ತಂದೆಯವರು,ಪ್ರೀತಿಯ ಸಹೋದರ ಬಿಟ್ಟು ಹೋದ ಸ್ಥಾನವನ್ನು ಈಗ ಅಷ್ಟೇ ಸಮರ್ಥವಾಗಿ ಈಗ ತುಂಬುತ್ತಿದ್ದಾರೆ, ತುಂಬಿಸುತ್ತಿದ್ದಾರೆ.. ಬಲಿಪರ ಆಳಿಯ ಪುಂಡಿಕಾಯಿ ಗೋಪಾಲಕೃಷ್ಣ ಭಟ್ ಕೂಡ ಕಟೀಲು ಮೇಳದ ಒಬ್ಬ ಪ್ರಧಾನ ಭಾಗವತರಾಗಿ ಜನಮನ್ನಣೆ ಪಡೆಯುವಲ್ಲಿ ಬಲಿಪರ ಕೊಡುಗೆ ಕಡಿಮೆಯದಲ್ಲ.. ಈ ಕಲಾ ಕಾಣಿಕೆಗೆ ಬೆಲೆ ಕಟ್ಟಲು ಸಾಧ್ಯವೇ?
ಗಾನ ವೈಭವದಲ್ಲಿ ಬಲಿಪರು
ಕಳೆದ ಒಂದು ದಶಕದಲ್ಲಿ ಯಕ್ಷಗಾನದ ಒಂದು ಪ್ರಕಾರವಾಗಿ ಗಾನ ವೈಭವ ತುಳುನಾಡಿನ ಯಾವುದೇ ಸಾಂಸ್ಕೃತಿಕ ವೇದಿಕೆಗಳಲ್ಲಿ ಅನಿವಾರ್ಯವಾದ ಒಂದು ಕಾರ್ಯಕ್ರಮವಾಗಿ ಆಯೋಜನೆಗೊಳ್ಳುತ್ತಿರುತ್ತದೆ. ಅದರ ಒಳಿತು ಕೇಡುಕುಗಳ ಬಗ್ಗೆ ಪ್ರತ್ಯೇಕ ಅಭಿಪ್ರಾಯವಿದೆ. ಆದರೆ ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ ಸಾಮಾನ್ಯವಾಗಿ ಯಾವುದೇ ಕಲಾ ಪ್ರಕಾರಗಳಲ್ಲಿ ಕ್ಲಾಸ್ ಮತ್ತು ಮಾಸ್ ಎಂಬ ಎರಡು ವಿಭಾಗಗಳು ಇರುತ್ತದೆ. ಕ್ಲಾಸ್ ನ್ನು ಇಷ್ಟ ಪಡುವ ವರ್ಗವೇ ಬೇರೆ, ಮಾಸ್ ನ್ನು ಬಯಸುವ ಜನವೇ ಬೇರೆ. ಆದರೆ ಬಲಿಪರು ಇದಕ್ಕೂ ಅಪವಾದದಂತಿದ್ದರು. ಅವರೊಬ್ಬ ಸಂಪ್ರದಾಯ ಬದ್ದ ಪಕ್ಕಾ ಕ್ಲಾಸ್ ಭಾಗವತರು. ಆದರೆ ಹೊಸ ತಲೆಮಾರಿನ, ಹೊಸ ಜಮಾನದ ಹುಡುಗರಿಗೂ ಬಲಿಪರು ಅಷ್ಟೇ ಇಷ್ಟವಾಗುತ್ತಿದ್ದು ಮತ್ತೊಂದು ವಿಶೇಷ, ವಿಸ್ಮಯ.. ಪುತ್ತಿಗೆ ಹೊಳ್ಳರೊಂದಿಗಿನ ಅವರ ದ್ವಂದ್ವ ಅಂತೂ ಸರಿಸಾಟಿ ಇಲ್ಲದ್ದು. ಕೇಳಿದಷ್ಟು, ನೋಡಿದಷ್ಟು ಕೇಳುತ್ತಲೇ ಇರಬೇಕು ಅನ್ನಿಸುವಂತಹದ್ದು. ಹಲವು ಮಂದಿ ನೋಡಿರುವ ಅವರ ಮತ್ತು ಪಟ್ಲರೊಂದಿಗಿನ ದ್ವಂದ್ವ ಕಪಟ ನಾಟಕ ರಂಗ ಅದೇಷ್ಟು ಸೊಗಸಾದ ಪ್ರಸ್ತುತಿ. ಬಲಿಪರೆಂದರೆ ವೀರ ರಸ ಭಾವ ಇರುವುದು ನಿಜ, ಆದರೆ ಕರುಣಾ ರಸ, ಶೃಂಗಾರ ಭಾವದ ಪದ್ಯಗಳನ್ನು, ಪ್ರಸಂಗಗಳನ್ನು ಅಷ್ಟೇ ಭಾವಪೂರ್ಣವಾಗಿ ಹಾಡುತ್ತಿದ್ದರು, ಆಡಿಸುತ್ತಿದ್ದುದು ನಮ್ಮೆಲ್ಲರ ಗಮನದಲ್ಲಿ ಇರುವಂತಹದ್ದೇ..
ಬಲಿಪರೆಂದರೆ ಮುಗ್ಧ ಮುಗ್ಧ ಮುಗ್ಧ
ಮುಗ್ಧತೆ ಮತ್ತು ಸರಳತೆಗೆ ಮತ್ತೊಂದು ಹೆಸರು ಎನ್ನುವಂತೆ ಅವರು ಇದ್ದರು.. ಸ್ವಯಂ ಶಾಸ್ತ್ರೀಯ ಸಂಗೀತದ ಅಭ್ಯಾಸ ಮಾಡಿರದಿದ್ದರೂ ಅಜ್ಜನಿಂದ ಕಲಿತ ಪಾಠ ಅವರಿಗೆ ಎಲ್ಲವನ್ನು ಕಲಿಸಿತ್ತು. ಯೌಟ್ಯೂಬ್ ನಲ್ಲಿ ಸಂಗೀತ ವಿದ್ವಾನ್ ನಿತ್ಯಾನಂದ ರಾಯರು ಬಲಿಪರೊಂದಿಗೆ ನಡೆಸಿದ ಸಂವಾದವನ್ನು ಅನೇಕರು ಗಮನಿಸಿರಬಹುದು. ಅನೇಕ ಪದಗಳನ್ನು ಬಲಿಪರು ಹಾಡಿದಾಗ ನಿತ್ಯಾನಂದರಾಯರು ಇದು ಅತ್ಯಂತ ಶುದ್ಧವಾದ ರಾಗ ಎಂದು ಹೇಳಿದರೆ ಬಲಿಪರು ತಮ್ಮ ಎಂದಿನ ಮುಗ್ಧತೆಯಲ್ಲಿ ಹೇಳುತ್ತಿದ್ದು, ಹೌದಾ ಇದು ಶುದ್ಧ ಉಂಟಾ.. ಇದು ನನಗೆ ನನ್ನ ಅಜ್ಜ ಹೇಳಿಕೊಟ್ಟಿದ್ದು ಹೀಗೆ, ಶುದ್ಧವೋ ಅಶುದ್ಧವೋ ನನಗೆ ಗೊತ್ತಿಲ್ಲ. ಶುದ್ಧ ಇರಬಹುದು, ಇಲ್ಲದಿರಬಹುದು, ಆದರೆ ಆಟದಲ್ಲಿ ಹಾಡುವ ಕ್ರಮ ಹೀಗೆ.. ಬಲಿಪರ ಉತ್ತರವಿದು. ಬೇರೆ ಯಾರೋ ಆ ಜಾಗದಲ್ಲಿ ಇರುತ್ತಿದ್ದರೆ ಹತ್ತಡಿ ಮೇಲೆ ಹೋಗುತ್ತಿದ್ದರು. ಒಬ್ಬ ಸಂಗೀತ ವಿದ್ವಾಂಸರ ಶುದ್ಧ ರಾಯಸ ಸಿಕ್ಕಾಗ ಉಬ್ಬಿದರೆ ತಪ್ಪೇ ಅಲ್ಲವಲ್ಲ.ಆದರೆ ಇವರು ಬಲಿಪರು...!
ಅವರು ಒಬ್ಬ ಸಮಗ್ರ ಯಕ್ಷಗಾನದ ಪೂರ್ವ ರಂಗದ ಸಭಾ ಲಕ್ಷಣದಿಂದ ತೊಡಗಿ ವೀಳ್ಯ ತೆಗೆದುಕೊಳ್ಳುವ ವರೆಗಿನ ಸರ್ವ ಮಾಹಿತಿಯನ್ನು ತಿಳಿದ ದೊಡ್ಡ ಭಾಗವತರಾಗಿದ್ದು, ಜೊತೆಗೆ ಕವಿಯಾಗಿ,ರಂಗ ನಿರ್ದೇಶಕನಾಗಿ ತನ್ನದೇ ಆದ ಛಾಪನ್ನು ಹೊಂದಿದ್ದರೂ ಅವರು ಸಾರ್ವಜನಿಕ ವೇದಿಕೆಯಲ್ಲೇ ಹೇಳುತ್ತಿದ್ದ ಮಾತು ಅಗರಿ ಭಾಗವತರ ಬಳಿಕ ತನ್ನನ್ನು ಸೇರಿಸಿಕೊಂಡು ಪದ ಹಾಡುವವರು ಬಿಟ್ಟರೆ ನಾವು ಯಾರು ಭಾಗವತರು ಅಲ್ಲ. ಅಗರಿಯವರಲ್ಲಿಗೆ ಅದು ಮುಗಿದು ಹೋಯಿತು ಎಂದು ಯಾವ ಹಮ್ಮು ಬಿಮ್ಮು ಇಲ್ಲದೇ ಮುಕ್ತವಾಗಿ ಹೇಳುತ್ತಿದ್ದರು. ಯಾಕೆಂದರೆ ಅವರು ಬಲಿಪರು..
ಆದರ್ಶ ಹಿಂದೂ ಮನೆಗೆ ಪರ್ಯಾಯ ಹೆಸರು ಬಲಿಪರ ಮನೆ
ಭಾರತಿಯ ಪರಂಪರೆಯಲ್ಲಿ ಮನೆಗೆ ಬಂದ ನೆಂಟರಿಗೆ, ಮಿತ್ರರು,ಅತಿಥಿಗಳಿಗೆ ಅತಿಥ್ಯ ಕೊಡುವುದು ಅದು ಅತ್ಯಂತ ಸಹಜವಾಗಿತ್ತು. ಆದರೆ ಇಂದು ಅದು ಕೇವಲ ಓದುವಿಕೆಗೋ, ಕೇಳುವಿಕೆಗೋ ಅಷ್ಟೇ ಸೀಮಿತವಾಗಿದೆ. ಕೂಡು ಕುಟುಂಬ ಹೋಗಿ ಸೆಮಿ ನ್ಯೂಕ್ಲಿಯರ್ ಕುಟುಂಬಗಳಿಗೆ ನಮ್ಮ ಸಮಾಜ ಒಗ್ಗಿ ಹೋಗಿ ಕಾಲ ಸುಮಾರು ಕಳೆದಿದೆ... ಆದರೆ ಮೂಡುಬಿದ್ರೆ ಬಳಿಯ ಮರೂರು ನೂಯಿಯ ಬಲಿಪರ ಮನೆ ಈ ಎರಡು ವಿಷಯಗಳಿಗೂ ಆದರ್ಶಪ್ರಾಯ. ಒಂದೇ ಮನೆಯಲ್ಲಿ ನಾಲ್ಕು ಮಂದಿ ಮಕ್ಕಳು ತಮ್ಮ ಸಂಸಾರದೊಂದಿಗೆ ಒಂದಾಗಿ, ಒಟ್ಟಾಗಿ ಉಣ್ಣುವುದೇ ಸಂಭ್ರಮ, ವಿಶೇಷ.ಹತ್ತಿಪ್ಪತ್ತು ಮಂದಿ ಒಂದು ಮನೆಯಲ್ಲಿ ಒಟ್ಟಾಗಿ ಇರುವುದನ್ನು ನೋಡುವುದೇ ಕಣ್ಣುಗಳಿಗೆ ಹಬ್ಬ. ಒಬ್ಬ ಯಕ್ಷಗಾನ ಕಲಾವಿದ ತನ್ನ ಸೀಮಿತ ಸಂಪಾದನೆಯಲ್ಲಿ ಇಷ್ಟು ದೊಡ್ಡ ಕುಟುಂಬವನ್ನು ಪೋಷಣೆ ಮಾಡಿದ್ದೆ ಇನ್ನೊಂದು ಕೌತುಕ. ಅವರ ಮನೆಗೆ ಹೋಗಿ ಏನೂ ತಿನ್ನದೇ, ಕುಡಿಯದೇ ಹಾಗೆ ಬಂದವರು ಯಾರಾದರೂ ಇರಲು ಸಾಧ್ಯವೇ? ಜಾತಿ ಮತ ಭೇದವಿಲ್ಲದೇ ಮನೆಗೆ ಬಂದವರನ್ನು ಆದರಿಸಿ ಅಥಿತ್ಯ ನೀಡಿದ ಮನೆಯದು. ಬಲಿಪರ ಬಹು ಧೀರ್ಘ ಕಾಲದ ಒಡನಾಡಿ ಡಾ.ಜೋಶಿಯವರ, ಉಜಿರೆ ಅಶೋಕ ಭಟ್ಟರ ಬಾಯಲ್ಲಿ ಕೇಳಬೇಕು ಬಲಿಪರ ಮನೆಯ ಅಥಿತ್ಯದ ಸೊಬಗನ್ನು... ಹೇಗೆ ಇದು ಸಾಧ್ಯವಾಯಿತು ಎಂದರೆ ಯಾರಿಗೂ ಉತ್ತರ ಗೊತ್ತಿರಲಿಕ್ಕಿಲ್ಲ, ಖುದ್ದು ಬಲಿಪರಿಗೂ ಕೂಡ.
ಬಲಿಪರ ಅರ್ಹತೆಗೆ, ಯೋಗ್ಯತೆಗೆ ಅಥವಾ ಅವರ ಸಾಧನೆಗೆ ತಕ್ಕುದಾದ ಗೌರವ ಸಿಕ್ಕಿದೆಯೋ ಎಂದು ಕೇಳಿದರೆ ಇಲ್ಲ ಎಂಬುದೇ ನೂರಕ್ಕೆ ನೂರು ಸತ್ಯವಾದ ಮಾತು. ಆದರೆ ಹಿಂದಿನ ಅನೇಕ ಸಾಧಕರಿಗೆ ಹೋಲಿಸಿದರೆ ತುಂಬಾ ಗೌರವ ಸನ್ಮಾನಗಳು ಯಕ್ಷಗಾನ ಕಲಾ ವಲಯ ಅವರಿಗೆ ನೀಡಿದೆ ಗೌರವಿಸಿದೆ, ಗುರುತಿಸಿದೆ.ಅವರ ಸನ್ಮಾನ ಪತ್ರಗಳನ್ನು ಇಡುವುದಕ್ಕಾಗಿಯೇ ಅವರ ಮನೆ ಅಂಗಳದಲ್ಲಿ ಬಲಿಪ ಭವನ ನಿರ್ಮಾಣ ಮಾಡಿಕೊಟ್ಟಿದ್ದಾರೆ ಅವರ ಅಭಿಮಾನಿಗಳು. ಇದಂತೂ ಇಡೀ ಯಕ್ಷಗಾನ ವಲಯದಲ್ಲಿ ಒಬ್ಬ ಕಲಾವಿದನಿಗೆ ಸಿಕ್ಕ ಬಲು ದೊಡ್ಡ ಗೌರವ.ಅಭಿಮಾನಿಗಳು, ಸರಕಾರ, ಸಂಘ ಸಂಸ್ಥೆಗಳು ಕೂಡ ಅತ್ಯಂತ ಗೌರವದಿಂದ ಅವರನ್ನು ಮಾನಿಸಿದ್ದಾರೆ, ಗೌರವಿಸಿದ್ದಾರೆ.ಮೇಳದ ಯಜಮಾನರು ಅವರು ಮೇಳದಿಂದ ನಿವೃತ್ತರಾದ ಬಳಿಕವೂ ಅವರು ಯಾವಾಗ ಬೇಕಾದರೂ, ಯಾವ ಸೆಟ್ ಲ್ಲಾದರೂ, ಎಷ್ಟು ಹೊತ್ತಿಗಾದರೂ ಪದ್ಯ ಹೇಳಬಹುದು ಎಂಬ ಮುಕ್ತ ಅವಕಾಶವನ್ನು ಮಾಡಿ ಕೊಟ್ಟಿದ್ದರು. ಅಗರಿಯವರ ಬಳಿಕ ಈ ರೀತಿಯ ದೊಡ್ಡ ಗೌರವ ಸಿಕ್ಕಿದ್ದು ಬಲಿಪರಿಗೆ ಮಾತ್ರ ಎಂಬುದನ್ನು ನಾವು ಗಮನಿಸಬೇಕು. ಅಭಿಮಾನಿಗಳು ಬಯಸಿದಂತೆ ಮೇಳದಿಂದ ನಿವೃತ್ತರಾದ ಬಳಿಕ ಅನೇಕ ವರ್ಷಗಳ ಕಾಲ ಕಟೀಲು ಮೇಳದಲ್ಲಿ ಅವರು ಪದ್ಯ ಹೇಳುತ್ತಿದ್ದರು. ಇವತ್ತು ಯೌಟ್ಯೂಬ್ ನಲ್ಲಿ ತುಂಬಾ ಜನಪ್ರಿಯವಾಗಿರುವ ಸುಬ್ರಾಯ ಹೊಳ್ಳರ ಕಾಂಬಿನೇಶನ್ ನಲ್ಲಿ ಇರುವ ಹಿರಣ್ಯಾಕ್ಷ ವಧೆ, ಇಂದ್ರನಂದನ ವಾನರೇಂದ್ರ ಇತ್ಯಾದಿಗಳು ಅವರ ನಿವೃತ್ತಿಯ ನಂತರದ ಆಟಗಳು.
ಕೊನೆಯ ಮಾತು
ಹುಟ್ಟಿರುವ ಪ್ರತಿಯೊಂದು ಜೀವಕ್ಕೂ ಕೊನೆ ಎಂಬುದು ಇದ್ದೇ ಇರುತ್ತದೆ. ಬಲಿಪರು ಸಹಸ್ತ್ರ ಚಂದ್ರ ದರ್ಶನ ಮಾಡಿಸಿಕೊಂಡ ಪುಣ್ಯ ಜೀವಿ. ಆದರೆ ಅವರು ಇನ್ನೂ ಹತ್ತಾರು ವರ್ಷ ಬಾಳಿ ಬದುಕುತ್ತಿದ್ದರೋ ಏನೋ. ಆ ಮನೆಯ ಎಲ್ಲರೂ ಅವರ ಸೇವೆಗಾಗಿ ಕಾತರರತೆ ಯಿಂದ ಕಾಯುತ್ತಿದ್ದೂ ಸತ್ಯವೇ. ಆದರೆ ವಿಧಿ ಲಿಖಿತ ಬೇರೆಯೇ ಇತ್ತು.ಕೈ ಹಿಡಿದು ಸಂಸಾರದ ನೌಕೆಗೆ ಜತೆಯಾದ ತನ್ನ ಸತಿಯ ಅಗಲುವಿಕೆ, ಜತೆಗೆ ಯಾರಿಗೂ ಬರಬಾರದ ಪುತ್ರ ವಿಯೋಗದಿಂದ ಅವರು ತಮ್ಮ ಇಳಿ ವಯಸ್ಸಲ್ಲಿ ಬಳಲಬೇಕಾಯಿತು.ಕಳೆದ ವರ್ಷದ ಮಾರ್ಚ್ ಅಥವಾ ಏಪ್ರಿಲ್ ಇರಬಹುದು, ಪ್ರಸಾದ ಭಾಗವತರ ಮರಣ ವಾರ್ತೆ ಬಂದಾಗ ಅವರ ಅಂತಿಮ ದರ್ಶನ ಪಡೆಯಬೇಕೆಂದು ಅವರ ಮನೆಗೆ ಹೋಗಿದ್ದೆವು. ಹೋಗಬೇಕಿದ್ದರೆ ಮನಸ್ಸಿನ ತುಂಬಾ ಇದ್ದಿದ್ದು ಈ ಸಾವನ್ನು ಆ ಮನೆ ಹೇಗೆ ಸ್ವೀಕರಿಸಿರಬಹುದು, ಎಲ್ಲಕ್ಕಿಂತ ಆ ಹಿರಿ ಜೀವ ಹೇಗೆ ತಡೆದುಕೊಳ್ಳಬಹುದು ಎಂಬ ಆತಂಕ, ಭಯ ಇತ್ತು. ಆದರೆ ಮನೆಗೆ ಹೋದಾಗ ಪ್ರಸಾದರ ಪಾರ್ಥಿವ ಚಾವಡಿಯಲ್ಲಿ ಇದ್ದರೆ,ಅಲ್ಲೇ ಪಕ್ಕದ ಕುರ್ಚಿಯಲ್ಲಿ ಕುಳಿತುಕೊಂಡಿದ್ದ ಬಲಿಪರು ಬಂದವರೊಟ್ಟಿಗೆ ಯಕ್ಷಗಾನ ಅಂದು,ಇಂದು, ಮುಂದಿನ ಬಗ್ಗೆ ಮಾತಾಡುತ್ತಿದ್ದರು. ಹತ್ತಿರದಲ್ಲಿ ಕುಳಿತವರಿಗೆ ಶುದ್ಧ ಯಕ್ಷಗಾನ ಪರಂಪರೆಯ ಭವಿಷ್ಯವೇ ಚಿರ ನಿದ್ರೆಗೆ ಜಾರಿದ್ದು ಕಣ್ಣ ಮುಂದೆಯೇ ಪ್ರತ್ಯಕ್ಷ ಇರುವಾಗ ಹೇಗೆ ಪ್ರತಿಕ್ರಿಯಿಸಲು ಸಾಧ್ಯ? ಯಾವುದನ್ನು ತನ್ನ ಅಜ್ಜನಿಂದ ಪಡೆದುಕೊಂಡರೋ, ಅದನ್ನು ಅಷ್ಟೇ ಜತನದಿಂದ ಪೋಷಿಸಿ, ಬೆಳೆಸಿ ತನ್ನ ಮಗನಿಗೆ ದಾಟಿಸಿ ನಿರುಮ್ಮಳ ಚಿತ್ತದಿಂದ ಅವರು ಇದ್ದರು. ಪ್ರಸಾದರು ಕೂಡ ತನ್ನ ತಂದೆಯ ಅಷ್ಟು ಒಳ್ಳೆಯ ಗುಣಗಳನ್ನು ಜೊತೆಗೆ ಯಕ್ಷಗಾನದ ಸಮಗ್ರ ಜ್ಞಾನಗಳನ್ನು ಪಡೆದು ಸಿದ್ಧಿ, ಪ್ರಸಿದ್ದಿ ಎರಡು ಪಡೆದು ತಂದೆಯ ಮತ್ತು ಮನೆತನದ ಗೌರವವನ್ನು ಹೆಚ್ಚಿಸಿದ್ದರು ಕೂಡ.ಆದರೆ ದುರ್ದೈವ ಅಕಾಲಿಕವಾಗಿ ನಾವು ಅವರನ್ನು ಕಳೆದುಕೊಂಡೆವು.. ಬೆಲೆ ಕಟ್ಟಲಾಗದ ಈ ಸಾವು ಬಲಿಪರ ಜೀವ - ಜೀವನ ಎರಡಕ್ಕೂ ದೊಡ್ಡ ಅಘಾತವನ್ನು ತಂದು ಕೊಟ್ಟಿತ್ತು. ಕೊನೆಗೂ ಮಗ ಹೋದ ದಾರಿಯನ್ನು ತಾವು ಆಯ್ಕೆ ಮಾಡಿಕೊಂಡರು.. ಒಂದು ತುಂಬು ಮನೆ ವರ್ಷ ಒಂದರಲ್ಲಿ ಎರಡು ಅಘಾತಗಳನ್ನು ಕಂಡು ಹೇಗೆ ಸಹಿಸಲು ಸಾಧ್ಯ? ನಂಬಿದ ದೇವರೇ ಆ ಶಕ್ತಿಯನ್ನು ಆ ಮನೆಯ ಎಲ್ಲರಿಗೂ ಜತೆಗೆ ಇಷ್ಟ ಬಂಧು ಮಿತ್ರರಿಗೆ ನೀಡಲಿ ಎಂದು ಪ್ರಾರ್ಥಿಸುವುದು ಬಿಟ್ಟರೆ ನಮಗಾದರೂ ಬೇರೆ ಆಯ್ಕೆ ಯಾವುದಿದೆ?