ಇಂದಿನ ಇತಿಹಾಸ History Today ಆಗಸ್ಟ್ 26
2022: ನವದೆಹಲಿ: ಸುಪ್ರೀಂಕೋರ್ಟ್ ಕಲಾಪಗಳು 2022 ಆಗಸ್ಟ್ 26ರ ಶುಕ್ರವಾರ ಇದೇ ಮೊದಲ ಬಾರಿಗೆ ನೇರಪ್ರಸಾರವಾಗುವುದರೊಂದಿಗೆ ಭಾರತದ ಸುಪ್ರೀಂಕೋರ್ಟ್ ಇತಿಹಾಸ ಸೃಷ್ಟಿಸಿತು. ವಿಧ್ಯುಕ್ತ ಪೀಠದ ನೇತೃತ್ವ ವಹಿಸಿದ್ದ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್.ವಿ. ರಮಣ ಅವರು, ಎನ್‌ಐಸಿಯ ವೆಬ್ ಕಾಸ್ಟ್ ಪೋರ್ಟಲ್ ಮೂಲಕ ತಮ್ಮ ನಿವೃತ್ತಿ ದಿನದ ಕಲಾಪ ನೇರ ಪ್ರಸಾರಕ್ಕೆ ಚಾಲನೆ ನೀಡಿದರು. ನ್ಯಾಯಾಲಯದಲ್ಲಿ ಸಾಂವಿಧಾನಿಕ ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ಪ್ರಕರಣಗಳ ವಿಚಾರಣೆಗಳ ಕಲಾಪದ ನೇರ ಪ್ರಸಾರಕ್ಕೆ 2018ರಲ್ಲಿ ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ಸಿಜೆಐ ಅವರು ನಡೆಸುವ ಪ್ರಮುಖ ಪ್ರಕರಣಗಳ ವಿಚಾರಣೆಯ ಕಲಾಪದ ನೇರ ಪ್ರಸಾರವನ್ನು ಪೈಲಟ್ ಯೋಜನೆ ಆಧಾರದ ಮೇಲೆ ಪ್ರಾರಂಭಿಸಬಹುದು. ಇದರ ಯಶಸ್ಸು ನೋಡಿಕೊಂಡು ಈ ಪ್ರಕ್ರಿಯೆಯನ್ನು ಇತರ ನ್ಯಾಯಾಲಯ ಕೊಠಡಿಗಳಲ್ಲೂ ಅಳವಡಿಸಬಹುದು ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಈ ಹಿಂದೆ ಹೇಳಿದ್ದರು.2020: ನವದೆಹಲಿ: ಕೊರೋನಾವೈರಸ್ ಸೋಂಕಿನ ಹರಡುವಿಕೆಯನ್ನು ತಡೆಯುವಲ್ಲಿ ಎನ್ ೯೫ ಮುಖಗವಸುಗಳು (ಮಾಸ್ಕ್) ಹೆಚ್ಚು ಪರಿಣಾಮಕಾರಿಯಾಗಬಲ್ಲವು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೇರಿದಂತೆ ಸಂಶೋಧಕರು ನಡೆಸಿದ ಅಧ್ಯಯನ
2020 ಆಗಸ್ಟ್ 26ರ ಬುಧವಾರ ತಿಳಿಸಿತು. ಕೋವಿಡ್ -೧೯ ಸೋಂಕಿನ ಪ್ರಸರಣ ತಡೆಗಟ್ಟುವಲ್ಲಿ ಇತರ ಯಾವುದೇ ಮುಖಗವಸಿಗಿಂತ ಎನ್ ೯೫ ಮುಖಗವಸುಗಳು ಉತ್ತಮವಾಗಿವೆ ಎಂದು ಅದು ಹೇಳಿತು. ಕೆಮ್ಮು ಮತ್ತು ಸೀನು ಬಂದಾಗ ಉತ್ಪತ್ತಿಯಾಗುವ ಉಸಿರಾಟದ ಏರೋಸಾಲ್ ಹನಿಗಳಿಂದ ವಾಯುಗಾಮಿ ಹರಡುವಿಕೆಯು ಕೋವಿಡ್ -೧೯ ನಂತಹ ಸಾಂಕ್ರಾಮಿಕ ಕಾಯಿಲೆ ಹರಡುವ ಪ್ರಮುಖ ವಿಧಾನವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. ಇಸ್ರೋದ ಪದ್ಮನಾಭ ಪ್ರಸನ್ನ ಸಿಂಹ ಮತ್ತು ಕರ್ನಾಟಕದ ಶ್ರೀ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ಪ್ರಸನ್ನ ಸಿಂಹ ಮೋಹನ್ ರಾವ್ ಅವರು ಕೆಮ್ಮುಗಳ ಹರಿವಿನ ಕ್ಷೇತ್ರಗಳನ್ನು ವಿವಿಧ ಸಾಮಾನ್ಯ ಬಾಯಿ ಹೊದಿಕೆಯ ಸನ್ನಿವೇಶಗಳ ಅಡಿಯಲ್ಲಿ ಪ್ರಾಯೋಗಿಕವಾಗಿ ದೃಶ್ಯೀಕರಿಸಿದ್ದಾರೆ. ಫಿಸಕ್ಸ್ ಆಫ್ ಫ್ಲೂಯಿಡ್ಸ್ ನಿಯತಕಾಲಿಕದಲ್ಲಿ ಪ್ರಕಟವಾಗಿರುವ ಅಧ್ಯಯನವು ಕೆಮ್ಮಿನ ಸಮತಲ ಹರಡುವಿಕೆಯನ್ನು ಕಡಿಮೆ ಮಾಡಲು ಎನ್ ೯೫ ಮುಖಗವಸು ಅತ್ಯಂತ ಪರಿಣಾಮಕಾರಿ ಎಂದು ಕಂಡುಹಿಡಿದಿದೆ. ಎನ್ ೯೫ ಮುಖಗವಸುಗಳು ಕೆಮ್ಮಿನ ಆರಂಭಿಕ ವೇಗವನ್ನು ೧೦ ಅಂಶಕ್ಕೆ ಇಳಿಸಿತು ಮತ್ತು ಅದರ ಹರಡುವಿಕೆಯನ್ನು ೦.೧ ಮತ್ತು ೦.೨೫ ಮೀಟರ್ಗಳವರೆಗೆ ಸೀಮಿತಗೊಳಿಸಿತು ಎಂದು ಸಂಶೋಧಕರು ತಿಳಿಸಿದರು. ಮುಖಗವಸು ರಹಿತರಾಗಿದ್ದಾಗಿನ ಕೆಮ್ಮು ಇದಕ್ಕೆ ವಿರುದ್ಧವಾಗಿ, ಮೂರು ಮೀಟರ್‌ವರೆಗೆ ಚಲಿಸಬಹುದು. ಆದರೆ ಸರಳವಾದ ಬಿಸಾಡಬಹುದಾದ ಮುಖಗವಸು ಕೂಡಾ ಕೂಡ ಇದನ್ನು ೦.೫ ಮೀಟರ್‌ಗೆ ಇಳಿಸಬಹುದು ಎಂದು ಅವರು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದವರಿಗೆ ಮನ್ನಾ ರೂಪದಲ್ಲಿ ಅಲ್ಪ ಪರಿಹಾರವನ್ನು ನೀಡಬೇಕೆ ಎಂಬ ಬಗ್ಗೆ ಸ್ವಂತ ನಿಲುವು ತಳೆಯುವುದಕ್ಕೆ ಬದಲಾಗಿ ಕೇಂದ್ರ ಸರ್ಕಾರವು ಭಾರತೀಯ ರಿಸರ್ವ್ ಬ್ಯಾಂಕಿನ (ಆರ್‌ಬಿಐ) ಹಿಂದೆ ಅಡಗಿಕೊಳ್ಳುತ್ತಿದೆ ಎಂಬುದಾಗಿ ಹೇಳುವ ಮೂಲಕ ಸುಪ್ರೀಂಕೋರ್ಟ್ 2020 ಆಗಸ್ಟ್ 26ರ ಬುಧವಾರ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ಬ್ಯಾಂಕ್ ಮತ್ತು ಇತರ ಹಣಕಾಸು ಸಂಸ್ಥೆಗಳ ಸಾಲದ ಮೇಲಿನ ಬಡ್ಡಿ ಮನ್ನಾ ಕುರಿತಂತೆ ತನ್ನ ಖಡಾಖಂಡಿತ ನಿಲುವನ್ನು ಸ್ಪಷ್ಟ ಪಡಿಸಲು ಪೀಠವು ಕೇಂದ್ರ ಸರ್ಕಾರಕ್ಕೆ ಒಂದು ವಾರದ ಗಡುವು ನೀಡಿತು. ’ನಿಮ್ಮ ನಿಲುವು ಏನು ಎಂಬುದನ್ನು ನೀವು ಸ್ಪಷ್ಟ ಪಡಿಸಿ. ವಿಪತ್ತು ನಿರ್ವಹಣಾ ಕಾಯ್ದೆಯ ಅಡಿಯಲ್ಲಿ ಕ್ರಮಗಳನ್ನು ಕೈಗೊಳ್ಳಬೇಕಾದ್ದು ನಿಮ್ಮ ಹೊಣೆಗಾರಿಕೆ. ಮನ್ನಾಕ್ಕೆ ಸಂಬಂಧಿಸಿದ ವಿಷಯವನ್ನು ನಿರ್ಧರಿಸುವ ಅಧಿಕಾರಗಳು ನಿಮಗಿವೆ. ನೀವು ಕೇವಲ ಆರ್ಬಿಐಯನ್ನು ಅವಲಂಬಿಸಲು ಸಾಧ್ಯವಿಲ್ಲ’ ಎಂದು ನ್ಯಾಯಮೂರ್ತಿ ಅಶೋಕ ಭೂಷಣ್ ನೇತೃತ್ವದ ಪೀಠವು ಹೇಳಿತು. ಸಾಲಿಸಿಟರ್ ಜನರಲ್ ತುಷಾರ ಮೆಹ್ತ ಅವರು ಆರ್ಬಿಐಯ ಪ್ರಮಾಣಪತ್ರವನ್ನು ಉಲ್ಲೇಖಿಸಿ ಬ್ಯಾಂಕಿಂಗ್ ಸಂಸ್ಥೆಗಳು ಕೂಡಾ ಸಂಕಷ್ಟದಲ್ಲಿವೆ ಎಂಬುದಾಗಿ ಹೇಳಿದ ಬಳಿಕ ಸುಪ್ರೀಂಕೋರ್ಟ್ ಸರ್ಕಾರದ ವಿರುದ್ಧ ಖಾರವಾದ ಮಾತುಗಳನ್ನು ಆಡಿತು. ಸಾಲಿಸಿಟರ್ ಜನರಲ್ ಅವರ ಮಾತುಗಳಿಂದ ಪೀಠವು ಅಸಮಾಧಾನಗೊಂಡಿತು. ’ಇದು ಕೇವಲ ವ್ಯವಹಾರದ ಹಿತಾಸಕ್ತಿಗಳ ಬಗ್ಗೆ ಕಾಳಜಿ ವಹಿಸುವ ಸಮಯವಲ್ಲ. ಜನರ ಪರಿಸ್ಥಿತಿಯನ್ನು ಕೂಡಾ ನೀವು ಪರಿಗಣಿಸಬೇಕು. ಇದು ಆರ್‌ಬಿಐ ತೆಗೆದುಕೊಂಡಿರುವ ನಿಲುವಿನಂತೆ ಕಾಣುತ್ತಿದೆ ಮತ್ತು ನೀವು ಯಾವುದೇ ನಿಲುವನ್ನೂ ತೆಗೆದುಕೊಳ್ಳುತ್ತಿಲ್ಲ’ ಎಂದು ನ್ಯಾಯಮೂರ್ತಿಗಳಾದ ಆರ್. ಸುಭಾಶ್ ರೆಡ್ಡಿ ಮತ್ತು ಎಂ.ಆರ್. ಶಾ ಅವರನ್ನೂ ಒಳಗೊಂಡಿರುವ ಪೀಠ ಆಕ್ಷೇಪಿಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ).
2020: ನವದೆಹಲಿ: ಮುಂದಿನ ತಿಂಗಳು ನಡೆಸಲು ಸಮಯ ನಿಗದಿ ಪಡಿಸಲಾಗಿರುವ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮತ್ತು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಗೆ (ನೀಟ್) ಸಂಬಂಧಿಸಿದಂತೆ 2020 ಆಗಸ್ಟ್ 26ರ ಬುಧವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಸರ್ಕಾರಕ್ಕೆ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಇಲ್ಲ ಎಂಬುದಾಗಿ ಹರಿ ಹಾಯ್ದರು. ಕೊರೋನಾವೈರಸ್ ಹಿನ್ನೆಲೆಯಲ್ಲಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸುಗಳಿಗಾಗಿ ನಡೆಸಲು ಸಮಯ ನಿಗದಿ ಪಡಿಸಲಾಗಿರುವ ಪರೀಕ್ಷೆಗಳನ್ನು ಮುಂದೂಡುವಂತೆ ಕೇಳಿ ಬರುತ್ತಿರುವ ಆಗ್ರಹಗಳ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳ ಸಂಯುಕ್ತ ನಿಲುವು ರೂಪಿಸುವ ಸಲುವಾಗಿ ಸಂಘಟಿಸಲಾದ ವರ್ಚುವಲ್ ಸಭೆಯಲ್ಲಿ ಸೋನಿಯಾಗಾಂಧಿ ಅವರು ಮಾತನಾಡುತ್ತಿದ್ದರು. ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ ಸೊರೇನ್, ಛತ್ತೀಸ್ ಗಢದ ಮುಖ್ಯಮಂತ್ರಿ ಭೂಪೇಶ್ ಬಘೆಲ್ ಹಾಗೂ ಪುದುಚೆರಿಯ ಮುಖ್ಯಮಂತ್ರಿ ವಿ. ನಾರಾಯಣ ಸ್ವಾಮಿ ಸಭೆಗೆ ಹಾಜರಾಗಿದ್ದರು. ರಾಷ್ಟ್ರೀಯ ಶಿಕ್ಷಣ ನೀತಿಗೆ ಸಂಬಂಧ ಪಟ್ಟವರು ಮಾಡುತ್ತಿರುವ ಪ್ರಕಟಣೆಗಳು ಚಿಂತೆ ಹುಟ್ಟಿಸುವಂತಹುಗಳಾಗಿವೆ ಎಂದು ನುಡಿದ ಸೋನಿಯಾ ಗಾಂಧಿ ಇವು ಪ್ರಗತಿಪರ, ಜಾತ್ಯತೀತ ಮತ್ತು ವೈಜ್ಞಾನಿಕ ಮೌಲ್ಯಗಳಿಗೆ ಹಿನ್ನಡೆಯಾಗಿವೆ ಎಂದು ಬಣ್ಣಿಸಿದರು. ವಿದ್ಯಾರ್ಥಿಗಳು ಮತ್ತು ಪರೀಕ್ಷೆಗಳ ಇತರ ಸಮಸ್ಯೆಗಳ ಬಗ್ಗೆ ಯಾವ ಕಾಳಜಿಯೂ ಇಲ್ಲದೆ ವ್ಯವಹರಿಸಲಾಗುತ್ತಿದೆ ಎಂದು ಅವರು ಕೇಂದ್ರದ ಮೇಲೆ ಆಪಾದನೆ ಮಾಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಸೆಪ್ಟೆಂಬರ್ ೧ ರಿಂದ, ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಹೊಣೆಗಾರಿಕೆಯನ್ನು ವಿಳಂಬವಾಗಿ ಇತ್ಯರ್ಥಪಡಿಸುವ ನಗದು ಘಟಕದ ಮೇಲೆ ಬಡ್ಡಿ ವಿಧಿಸಲಾಗುವುದು, ಇದು ಉದ್ಯಮಕ್ಕೆ ನಿರಾಳತೆಯನ್ನು ನೀಡಲಿದೆ ಎಂದು ಸರ್ಕಾರ 2020 ಆಗಸ್ಟ್ 26ರ ಬುಧವಾರ ಹೇಳಿತು. ೨೦೧೯ ರಿಂದ ಅಧಿಸೂಚನೆ ಜಾರಿಗಾಗಿ ಕಾಯುತ್ತಿರುವ ಉದ್ಯಮವು, ಈ ವರ್ಷದ ಆರಂಭದಲ್ಲಿ ಸುಮಾರು ೪೬,೦೦೦ ಕೋಟಿ ರೂ. ಪಾವತಿಸದ ಬಡ್ಡಿಯನ್ನು ವಸೂಲಿ ಮಾಡುವ ನಿರ್ದೇಶನದ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಕಾನೂನಿನ ಸಮರ್ಪಕ ಸ್ಥಾನವಾದ ೨೦೨೦ರ ಜುಲೈ ೧ರಿಂದಲೇ ಪೂರ್ವಾನ್ವಯವಾಗಿ ಈ ಕ್ರಮವು ಜಾರಿಗೆ ಬರಬೇಕು ಎಂದು ಜಿಎಸ್ಟಿ ಮಂಡಳಿಯು ಶಿಫಾರಸು ಮಾಡಿತ್ತು. ಕೇಂದ್ರ ಮತ್ತು ರಾಜ್ಯ ಹಣಕಾಸು ಸಚಿವರನ್ನು ಒಳಗೊಂಡಿರುವ ಜಿಎಸ್ಟಿ ಮಂಡಳಿಯು ಮಾರ್ಚ್ ತಿಂಗಳಲ್ಲಿ ನಡೆದ ತನ್ನ ೩೯ನೇ ಸಭೆಯಲ್ಲಿ ನಿವ್ವಳ ತೆರಿಗೆ ಹೊರೆಯ ಮೇಲೆ ವಿಧಿಸಲಾದ ಜಿಎಸ್ಟಿ ಪಾವತಿಯ ಮೇಲಿನ ವಿಳಂಬಕ್ಕೆ ೨೦೧೭ರ ಜುಲೈ ೧ರಿಂದ ಅನ್ವಯವಾಗುವಂತೆ ಬಡ್ಡಿ ವಿಧಿಸಲು ತೀರ್ಮಾನಿಸಿತ್ತು ಮತ್ತು ಇದಕ್ಕಾಗಿ ಕಾನೂನನ್ನು ಪೂರ್ವಾನ್ವಯವಾಗಿ ತಿದ್ದುಪಡಿ ಮಾಡಲು ನಿರ್ಧರಿಸಿತ್ತು. ಕೆಲವು ತಾಂತ್ರಿಕ ಮಿತಿಗಳ ಕಾರಣ ವಿಳಂಬಿತ ಜಿಎಸ್ಟಿ ಪಾವತಿ ಮೇಲಿನ ಬಡ್ಡಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಆಗಸ್ಟ್ ೨೫ರಂದು ಹೊರಡಿಸಲಾಗಿದೆ ಎಂದು ಎಂದು ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಸ್ಪಷ್ಟಪಡಿಸಿದೆ. "ಆದಾಗ್ಯೂ, ಜಿಎಸ್‌ಟಿ ಮಂಡಳಿಯ ೩೯ ನೇ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಕ್ಕೆ ಅನುಗುಣವಾಗಿ ಕೇಂದ್ರ ಮತ್ತು ರಾಜ್ಯ ತೆರಿಗೆ ಆಡಳಿತವು ಯಾವುದೇ ಬಡ್ಡಿಯನ್ನು ವಸೂಲಿ ಮಾಡುವುದಿಲ್ಲ ಎಂದು ಸರ್ಕಾರ ಭರವಸೆ ನೀಡಿದೆ. ಇದು ಜಿಎಸ್‌ಟಿ ಮಂಡಳಿಯು ನಿರ್ಧರಿಸಿದಂತೆ ತೆರಿಗೆದಾರರಿಗೆ ಸಂಪೂರ್ಣ ಪರಿಹಾರವನ್ನು ಖಚಿತಪಡಿಸುತ್ತದೆ’ ಎಂದು ಅದು ಹೇಳಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಅಸ್ಸಾಮಿನ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ತರುಣ್ ಗೊಗೊಯ್ ಅವರಿಗೆ ಕೊರೋನಾವೈರಸ್ ಸೋಂಕು ತಗುಲಿರುವುದು ಖಚಿತ ಪಟ್ಟಿದೆ. ’ಮಂಗಳವಾರ ನನಗೆ ಕೋವಿಡ್-೧೯ ಸೋಂಕು ತಗುಲಿರುವುದು ದೃಢಪಟ್ಟಿದೆ. ಕಳೆದ ಕೆಲ ದಿನಗಳಿಂದ ಯಾರೆಲ್ಲ ನನ್ನ ಸಂಪರ್ಕಕ್ಕೆ ಬಂದಿದ್ದೀರೋ ಅವರೆಲ್ಲ ಕೂಡಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ’ ಎಂದು ಗೊಗೋಯ್ 2020 ಆಗಸ್ಟ್ 26ರ ಬುಧವಾರ ಟ್ವೀಟ್ ಮಾಡಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯದ ಸಚಿವರಾದ ಅರ್ಜುನ್ ರಾಮ್ ಮೇಘ್ವಾಲ್, ಕೃಷಿ ಖಾತೆ ರಾಜ್ಯ ಸಚಿವರಾದ ಕೈಲಾಶ್ ಚೌಧರಿ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಮತ್ತು ಪಿ.ಸಿ. ಶರ್ಮಾ ಅವರು ಸೇರಿದಂತೆ ಹಲವಾರು ನಾಯಕರಿಗೆ ಕೋವಿಡ್-೧೯ ಸೋಂಕು ತಗುಲಿದ್ದು, ಕೆಲವರು ಗುಣಮುಖರಾಗಿದ್ದಾರೆ. ದೇಶದಲ್ಲಿ ಬುಧವಾರ ೬೭,೧೫೧ ಹೊಸ ಕೋವಿಡ್ ಪ್ರಕರಣಗಳೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ೩೨,೩೪,೪೭೫ಕ್ಕೆ ಏರಿಕೆಯಾಗಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
ಇಂದಿನ ಇತಿಹಾಸ History Today ಆಗಸ್ಟ್ 26 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
-ಸಂಗ್ರಹ: ನೆತ್ರಕೆರೆ ಉದಯಶಂಕರ
No comments:
Post a Comment