ಹೊಸೂರು ರನ್ವೇಯಲ್ಲಿ ಹುಚ್ಚೆದ್ದು ಕುಣಿದ ರೇಸ್ಪ್ರಿಯರು
ಬೆಂಗಳೂರು ಡ್ರ್ಯಾಗ್ ಫೆಸ್ಟ್ಗೆ ಅಧಿಕೃತ ಚಾಲನೆ..
ನಾಳೆ ಕಾರುಗಳ ಡ್ರ್ಯಾಗ್ ರೇಸ್ ಅನಾವರಣ..
ಬೆಂಗಳೂರು: ಹೊಸೂರು ರನ್ವೇಯಲ್ಲಿ ಶನಿವಾರ,
28 ಮೇ 2016ರಂದು ಬೈಕ್ ಮತ್ತು ಕಾರುಗಳದ್ದೇ ಕಾರುಬಾರು. ಜತೆಗೆ ರೇಸ್ಪ್ರಿಯರ ದಂಡೇ ಅಲ್ಲಿ ನೆರೆದಿತ್ತು. ಬೈಕ್ಗಳ ಕಿವಿ ಗಡಚ್ಚಿಕ್ಕುವ ಅಬ್ಬರದಲ್ಲಿ ರೇಸ್ಪ್ರಿಯರು ಹುಚ್ಚೆದ್ದು ಕುಣಿದು ಕುಪ್ಪಳಿಸಿದರು. ಸಿಳ್ಳೆ ಕೇಕೆಗಳೊಂದಿಗೆ ತಮ್ಮ ನೆಚ್ಚಿನ ಸ್ಪರ್ಧಾಳುಗಳನ್ನು ಹುರಿದುಂಬಿಸಿದರು..
ಶನಿವಾರ ಆರಂಭಗೊಂಡ ಬೆಂಗ್ಳೂರು ಡ್ರ್ಯಾಗ್ ಫೆಸ್ಟ್ನ ರೋಮಾಂಚಕ ಕ್ಷಣಗಳಿವು. ‘ಟೀಮ್ ೪೬ ರೇಸಿಂಗ್ ಕಮ್ಯುನಿಟಿ’ಯ ನಿರ್ದೇಶಕ ಕರ್ಣೇಶ್ ಡ್ರ್ಯಾಗ್ ಫೆಸ್ಟ್ಗೆ ಚಾಲನೆ ನೀಡಿದರು.
ಟೀಮ್-೪೬ ರೇಸಿಂಗ್ ಕಂಪನಿ, ಹೊಸೂರು ತನೇಜಾ ಏರೋಸ್ಪೇಸ್ ಅಂಡ್ ಏವಿಯೇಷನ್ ರನ್ವೇಯಲ್ಲಿ ಆಯೋಜಿಸಿದ್ದ ಡ್ರ್ಯಾಗ್ ರೇಸ್ ಸ್ಪರ್ಧೆಯಲ್ಲಿ ೨೫೦ಕ್ಕೂ ಹೆಚ್ಚು ಬೈಕ್ಗಳು ಸ್ಪರ್ಧೆಗಿಳಿದಿದ್ದವು. ಸ್ಪರ್ಧಾಳುಗಳು ತನ್ನ ಚಿತ್ರವಿಚಿತ್ರ ಬೈಕ್ಗಳೊಂದಿಗೆ ಕಣ್ಮುಚ್ಚಿ ತೆರೆಯುವುದರೊಳಗೆ ಗುರಿಮುಟ್ಟಲು ಹರಸಾಹಸ ನಡೆಸುತ್ತಿದ್ದರು. ಮೈ ನವಿರೇಳಿಸುವ ಈ ಬೈಕ್ಗಳ ಸಾಹಸವನ್ನು ರೇಸ್ ಪ್ರಿಯರು ಕಣ್ತುಂಬಿಕೊಂಡರು. ಹೊಸೂರಿನ ಈ ವಾಯುನೆಲೆ ರೇಸಿಂಗ್ ಬೈಕ್ಗಳ ಅದ್ಭುತ ಸಾಹಸ ಪ್ರದರ್ಶನಕ್ಕೆ ವೇದಿಕೆಯಾಗಿತ್ತು.
ಭಾನುವಾರವೂ ಡ್ರ್ಯಾಗ್ ಫೆಸ್ಟ್ ಮುಂದುವರಿಯಲಿದ್ದು, ೩೫೦ಕ್ಕೂ ಹೆಚ್ಚು ಕಾರುಗಳು ರನ್ವೇಗೆ ಇಳಿಯಲಿವೆ. ವೃತ್ತಿಪರ ಚಾಲಕರು ತಮ್ಮ ಚಾಲನಾ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಇಲ್ಲಿ ಅನಾವರಣಗೊಳಿಸಲಿದ್ದಾರೆ..
ವಿಮಾನ ನಿಲ್ದಾಣದ ರನ್ವೇಯಲ್ಲಿ ಬೈಕ್ ಮತ್ತು ಕಾರುಗಳ ರೇಸ್ ನಡೆಯುವುದು ತೀರಾ ಅಪರೂಪ. ಈ ಬಾರಿ ‘ಟೀಮ್ ೪೬ ರೇಸಿಂಗ್ ಕಮ್ಯುನಿಟಿ’ ಹೊಸೂರಿನ ರನ್ವೇಯಲ್ಲಿ ‘ಡ್ರ್ಯಾಗ್ ಫೆಸ್ಟ್-೨೦೧೬’ರನ್ನು ಆಯೋಜಿಸಿದ್ದು ವಿಶೇಷವಾಗಿತ್ತು.
ಕಳೆದ ೬ ವರ್ಷಗಳಂತೆ ಟೀಮ್-೪೬ ರೇಸಿಂಗ್ ಕಂಪನಿ ಈ ಬಾರಿಯೂ ಅತ್ಯಂತ ವೃತ್ತಿಪರವಾಗಿ ಈ ಬೈಕ್ ರೇಸಿಂಗ್ ಸ್ಪರ್ಧೆಯನ್ನು ಆಯೋಜಿಸಿತ್ತು.. ೪೦೨ ಮೀಟರ್ ಉದ್ದದ ಟ್ರ್ಯಾಕ್ನಲ್ಲಿ ಅತಿ ವೇಗವಾಗಿ ಚಲಿಸುವ ವಾಹನಗಳ ನಿಯಂತ್ರಣಕ್ಕೆ ರನ್ವೇಯಲ್ಲಿ ಅಧಿಕವಾಗಿ ೭೦೦ ಮೀಟರ್ ಉದ್ದದ ಟ್ರ್ಯಾಕ್ ಅನ್ನು ಮುಕ್ತವಾಗಿಡಲಾಗಿತ್ತು.
ಮುಂದಿನ ದಿನಗಳಲ್ಲಿ ಹುಬ್ಬಳ್ಳಿ ಸೇರಿದಂತೆ ರಾಜ್ಯದ ವಿವಿಧ ರನ್ವೇಗಳಲ್ಲಿ ಇಂತಹ ಇನ್ನಷ್ಟು ಡ್ರ್ಯಾಗ್ ರೇಸ್ಗಳನ್ನು ಹಮ್ಮಿಕೊಳ್ಳುವ ಯೋಜನೆಯಿದೆ. ಈ ಮೂಲಕ ಯುವ ಪ್ರತಿಭೆಗಳಿಗೆ ರೇಸ್ನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುವುದು ಎಂದು ಟೀಂ ೪೬ ರೇಸಿಂಗ್ ಕಮ್ಯುನಿಟಿಯ ರಾಘವೇಂದ್ರ ತಿಳಿಸಿದರು.