Sunday, May 27, 2018

ತರಗತಿಯಲ್ಲಿ ನಿದ್ದೆ ಹೊಡೆಯಲು ಸುಲಭೋಪಾಯ!


ತರಗತಿಯಲ್ಲಿ ನಿದ್ದೆ ಹೊಡೆಯಲು ಸುಲಭೋಪಾಯ!



ಭಂಡಾರಿ: ಹೇಗೆ ಹೇರ್ ಕಟ್ಟಿಂಗ್ ಮಾಡಬೇಕು?

ವಿದ್ಯಾರ್ಥಿ: ಕ್ಲಾಸಲ್ಲಿ ಕುಳಿತು ನಿದ್ದೆ ಮಾಡಲು ಸಾಧ್ಯವಾಗುವಂತೆ ಕಟ್ ಮಾಡಿ…

 -ಕೃಪೆ: ವಿಟ್ಲ ಸುದ್ದಿಗಳು ಆಪ್

Friday, May 25, 2018

ಇಂದಿನ ಇತಿಹಾಸ History Today ಮೇ 24

ಇಂದಿನ ಇತಿಹಾಸ History Today  ಮೇ 24

2018: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಎಸೆದ ’ಹಮ್ ಫಿಟ್ ತೊ ಇಂಡಿಯಾ ಫಿಟ್ ಅಭಿಯಾನದ ಅಡಿಯಲ್ಲಿ ’ಫಿಟ್ ನೆಸ್ ಸವಾಲನ್ನು ಪ್ರಧಾನಿ ಅಂಗೀಕರಿಸಿದ ಬೆನ್ನಲ್ಲೇ  ಪ್ರಚೋದಿತರಾದ ವಿರೋಧ ಪಕ್ಷಗಳ ಸದಸ್ಯರೂ ಪ್ರಧಾನಿಗೆ ’ಸವಾಲು ಎಸೆಯಲು ನಿರ್ಧರಿಸಿದರು. ಆದರೆ ವಿರೋಧ ಪಕ್ಷಗಳ ಸದಸ್ಯರು ಪ್ರಧಾನಿಗೆ ಎಸೆದಿರುವ ಸವಾಲು ಭಿನ್ನ ರೀತಿಯದು!  ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇಂಧನಗಳ ಬೆಲೆ ಇಳಿಸುವಂತೆ ಪ್ರಧಾನಿಗೆ ಸವಾಲು ಹಾಕಿದರು.  ಪ್ರಧಾನಿಯವರು ಇದರಲ್ಲಿ ವಿಫಲರಾದರೆ ಕಾಂಗ್ರೆಸ್ ಪಕ್ಷವು ರಾಷ್ಟ್ರವ್ಯಾಪಿ ಆಂದೋಳನ ಆರಂಭಿಸಲಿದೆ ಎಂದು ಹೇಳಿದ ಅವರು ’ಸವಾಲಿಗೆ ಮೋದಿ ಅವರ ಉತ್ತರಕ್ಕಾಗಿ ಕಾಯುತ್ತಿರುವೆ ಎಂದು ಟ್ವೀಟ್ ಮಾಡಿದರು.  ‘ಪ್ರಿಯ ಪ್ರಧಾನಿಯವರೇ, ತಾವು ವಿರಾಟ್ ಕೊಹ್ಲಿ ಅವರ ಫಿಟ್ ನೆಸ್ ಸವಾಲು ಸ್ವೀಕರಿಸಿದ್ದು ಕಂಡು ಖುಷಿಯಾಯಿತು. ಇಲ್ಲಿ ನನ್ನಿಂದಲೂ ಒಂದು ಸವಾಲು ಇದೆ. ಇಂಧನ ದರಗಳನ್ನು ಇಳಿಸಿ. ಇಲ್ಲದೇ ಇದ್ದಲ್ಲಿ ಹಾಗೆ ಮಾಡುವಂತೆ ನಿಮ್ಮ ಮೇಲೆ ಒತ್ತಡ ಬೀರಲು ಕಾಂಗ್ರೆಸ್ ಇದಕ್ಕಾಗಿ ರಾಷ್ಟ್ರವ್ಯಾಪಿ ಚಳವಳಿ ಮಾಡಲಿದೆ. ನಿಮ್ಮ ಪ್ರತಿಕ್ರಿಯೆಗಾಗಿ ಎದುರು ನೋಡುತ್ತಿರುವೆ ಎಂದು ರಾಹುಲ್ ಗಾಂಧಿ ತಮ್ಮ ಟ್ವೀಟಿನಲ್ಲಿ ಸವಾಲು ಎಸೆದರು.  ರಾಹುಲ್ ಗಾಂಧಿ ಅವರು ಸವಾಲು ಎಸೆದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಸಂಪರ್ಕ ಉಸ್ತುವಾರಿ ನೋಡಿಕೊಳ್ಳುತ್ತಿರುವ ರಣ್ ದೀಪ್ ಸುರ್ಜಿವಾಲ ಅವರು ’ಆರ್ಥಿಕ ಫಿಟ್ ನೆಸ್ ಸವಾಲನ್ನು ಪ್ರಧಾನಿಗೆ ಎಸೆದರು. ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನು ಇಳಿಸಿ ಜನಸಾಮಾನ್ಯರ ಹೊರೆಯನ್ನು ತಗ್ಗಿಸಿ ಎಂದು ಅವರು ಪ್ರಧಾನಿಯನ್ನು ಒತ್ತಾಯಿಸಿದರು.   ಭಾರತದಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆ ಸಾರ್ವಕಾಲಿಕ ದಾಖಲೆಗಳನ್ನು ಮುರಿದಿದ್ದು ವಿಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ವಿರುದ್ಧ ಸಾಮಾನ್ಯ ಜನರಿಗೆ ತೊಂದರೆಗಳು ಆಗುತ್ತಿರುವುದಕ್ಕಾಗಿ ಟೀಕಾ ಪ್ರಹಾರ ನಡೆಸಲು ಅವಕಾಶ ಕಲ್ಪಿಸಿದೆ. ಇಂಧನ ಬೆಲೆ ಏರಿಕೆಗೆ ಜಾಗತಿಕ ಕಚ್ಛಾತೈಲ ಬೆಲೆ ಏರಿಕೆ ಕಾರಣವಾಗಿದ್ದರೂ, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಶೇಕಡಾ ೪೦-೫೦ರಷ್ಟು ಏರಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಭಾರಿ ಪ್ರಮಾಣದ ತೆರಿಗೆಗಳೂ ಕಾರಣವಾಗಿವೆ.  ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ರಾಷ್ಟ್ರೀಯ ಜನತಾದಳದ (ಆರ್ ಜೆಡಿ) ತೇಜಸ್ವಿ ಯಾದವ್ ಅವರೂ ’ಸವಾಲೆಸೆಯುವ ಕಣಕ್ಕೆ ಧುಮುಕಿದ್ದು, ಪ್ರಧಾನಿಗೆ ಸವಾಲುಗಳ ಸರಮಾಲೆಯನ್ನೇ ಎಸೆದರು.  ರಾಹುಲ್ ಗಾಂಧಿ ಅವರು ನಿರ್ದಿಷ್ಟವಾದ ಒಂದು ಸವಾಲು ಹಾಕಿದ್ದರೆ, ತೇಜಸ್ವಿ ಯಾದವ್ ಅವರು ಉದ್ಯೋಗ ಸೃಷ್ಟಿಯಿಂದ ರೈತರು ಎದುರಿಸುತ್ತಿರುವ ಸಮಸ್ಯೆಗಳು, ದಲಿತರ ವಿರುದ್ಧದ ದೌರ್ಜನ್ಯಗಳು ಸೇರಿದಂತೆ ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರಿಗೆ ಸವಾಲೆಸೆದರು. ನೀವು ವಿರಾಟ್ ಕೊಹ್ಲಿ ಅವರ ಸವಾಲು ಅಂಗೀಕರಿಸುವುದಕ್ಕೆ ನಮ್ಮ ವಿರೋಧವೇನಿಲ್ಲ. ಆದರೆ ಯುವಕರಿಗೆ ಉದ್ಯೋಗ ಒದಗಿಸುವ, ರೈತರಿಗೆ ಪರಿಹಾರ ಒದಗಿಸುವ, ದಲಿತರು ಮತ್ತು ಅಲ್ಪಸಂಖ್ಯಾತರ ವಇರುದ್ಧ ದೌರ್ಜನ್ಯ-ಹಿಂಸೆಗಳು ನಡೆಯದಂತಹ ಸವಾಲನ್ನು ನೀವು ಅಂಗೀಕರಿಸಬೇಕು ಎಂದು ನಾನು ಆಗ್ರಹಿಸುತ್ತೇನೆ. ನನ್ನ ಸವಾಲನ್ನು ಸ್ವೀಕರಿಸುವಿರಾ ಸ್ವಾಮಿ?’ ಎಂದು ತೇಜಸ್ವಿ ಯಾದವ್ ಟ್ವೀಟ್ ಮಾಡಿದರು. ‘ಹಮ್ ಫಿಟ್ ತೊ ಇಂಡಿಯಾ ಫಿಟ್ ಶೀರ್ಷಿಕೆಯ ಈ ಸವಾಲುಗಳ ಸರಣಿ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ ಸಿಂಗ್ ರಾಥೋಡ್ ಅವರಿಂದ ಆರಂಭವಾಯಿತು. ರಾಥೋಡ್ ‘ಹಮ್ ಫಿಟ್ ತೋ ಇಂಡಿಯಾ ಫಿಟ್ ಎಂಬ ಅಭಿಯಾನದ ಅಡಿಯಲ್ಲಿ ಎಲ್ಲ ಭಾರತೀಯರು ತಮ್ಮ ಫಿಟ್‌ನೆಸ್ ಮಂತ್ರದ ಬಗ್ಗೆ ವಿಡಿಯೊ ಮಾಡಿ ಹಂಚಿಕೊಳ್ಳುವಂತೆ ಟ್ವಿಟರ್‌ನಲ್ಲಿ ಕರೆ ನೀಡಿದ್ದರು. ತಮ್ಮ ವಿಡಿಯೋ ಅಪ್ ಲೋಡ್ ಮಾಡುತ್ತಾ ಹೃತಿಕ್ ರೋಷನ್, ವಿರಾಟ್ ಕೊಹ್ಲಿ, ಎನ್. ಸೈನಾ ಅವರಿಗೆ ರಾಥೋಡ್ ವಿಡಿಯೋ ಅಪ್ ಲೋಡ್ ಮಾಡುವಂತೆ ಸವಾಲು ಹಾಕಿದ್ದರು.  ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸವಾಲು ಅಂಗೀಕರಿಸಿ, ‘ಹಮ್ ಫಿಟ್ ತೋ ಇಂಡಿಯಾ ಫಿಟ್ ಎಂಬ ಅಭಿಯಾನದ ಅಡಿಯಲ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕ್ರಿಕೆಟಿಗ ಮಹೇಂದ್ರ ಸಿಂಗ್ ದೋನಿ ಅವರಿಗೆ ಬುಧವಾರ ಟ್ವಿಟರ್‌ನಲ್ಲಿ ಸವಾಲು ಎಸೆದಿದ್ದರು.  ವಿರಾಟ್ ಕೊಹ್ಲಿ ಹಾಕಿದ ಸವಾಲನ್ನು ಸ್ವೀಕರಿಸಿದ ಪ್ರಧಾನಿ ಮೋದಿ, ತಾವು ಫಿಟ್‌ನೆಸ್ ಕಾಯ್ದುಕೊಳ್ಳಲು ಅನುಸರಿಸುವ ಗುಟ್ಟನ್ನು ವಿಡಿಯೊ ಮೂಲಕ ಆದಷ್ಟು ಬೇಗ ಬಹಿರಂಗ ಪಡಿಸುವುದಾಗಿ ಟ್ವೀಟ್ ಮಾಡಿದ್ದರು.


2018: ಕರಾಚಿ: ಜಮಾತ್ -ಉದ್-ದವಾ ಮುಖ್ಯಸ್ಥ ಹಫೀಜ್ ಸಯೀದನನ್ನು ಪಶ್ಚಿಮ ಏಷ್ಯಾದ ಯಾವುದಾದರೂ ರಾಷ್ಟ್ರಕ್ಕೆ ಸ್ಥಳಾಂತರಿಸುವಂತೆ ಚೀನಾ ಪಾಕಿಸ್ತಾನಕ್ಕೆ ಸೂಚಿಸಿತು. ಸಯೀದ್ ವಿರುದ್ಧ, ಆತ ಭಯೋತ್ಪಾದಕ ಸಂಘಟನೆಗಳ ಜೊತೆಗೆ ಸಂಪರ್ಕ ಹೊಂದಿರುವ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳುವಂತೆ ಅಂತಾರಾಷ್ಟ್ರೀಯ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚೀನಾ ಈ ಸೂಚನೆ ನೀಡಿತು. ವರದಿಗಳ ಪ್ರಕಾರ ಚೀನಾದ ಅಧ್ಯಕ್ಷ ಕ್ಷಿ ಜಿನ್ ಪಿಂಗ್ ಅವರು ಪಾಕಿಸ್ತಾನದ ಪ್ರಧಾನಿ ಶಾಹಿದ್ ಖಾಖನ್ ಅಬ್ಬಾಸಿ ಅವರಿಗೆ ಕಳೆದ ತಿಂಗಳು ಚೀನಾದಲ್ಲಿ ನಡೆದ ಬಾವೊ ಫೋರಮ್ ಸಭೆಯ ಸಂದರ್ಭದಲ್ಲಿ ಈ ಸೂಚನೆ ನೀಡಿ ’ಪಶ್ಚಿಮ ಏಷ್ಯಾದ ಯಾವುದಾದರೂ ರಾಷ್ಟ್ರಕ್ಕೆ ಸಯೀದನನ್ನು ಸ್ಥಳಾಂತರಿಸಿ, ಅಲ್ಲಿ ಆತ ಹಾಯಾಗಿ ಇರಲಿ ಎಂದು ಹೇಳಿದ್ದಾರೆ ಎನ್ನಲಾಯಿತು.  ‘೩೫ ನಿಮಿಷಗಳ ಸಭೆಯಲ್ಲಿ ಕನಿಷ್ಠ ೧೦ ನಿಮಿಷಗಳನ್ನು ಕ್ಷಿ ಅವರು ಸಯೀದನ ಜೊತೆಗೆ ಹೇಗೆ ವ್ಯವಹರಿಸಬೇಕು ಎಂಬ ಬಗ್ಗೆ ಚರ್ಚಿಸುವುದಕ್ಕಾಗಿಯೇ ತೆಗೆದುಕೊಂಡರು. ಸಯೀದನನ್ನು ಲೋಕಪ್ರಸಿದ್ಧಿಯಿಂದ ದೂರ ಇಡಲು ಆದಷ್ಟೂ ಬೇಗೆ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆಯೇ ಈ ಚರ್ಚೆ ನಡೆಯಿತು ಎಂದು ಹೆಸರು ಹೇಳಲು ಇಚ್ಛಿಸದ ಅಬ್ಬಾಸಿ ನಿಕಟವರ್ತಿಯೊಬ್ಬರು ಹೇಳಿದರು. ಅಬ್ಬಾಸಿ ಅವರು ಸರ್ಕಾರಿ ಕಾನೂನು ತಜ್ಞರ ತಂಡದ ಜೊತೆಗೆ ಈ ವಿಚಾರದ ಬಗ್ಗೆ ಸಮಾಲೋಚಿಸಿದ್ದಾರೆ. ಆದರೆ ಪರಿಹಾರ ಇನ್ನೂ ಲಭಿಸಿಲ್ಲ. ಹಾಲಿ ಪ್ರಧಾನಿಯವರು ಮೇ ೩೧ರಂದು ತಮ್ಮ ಅವಧಿ ಪೂರ್ಣಗೊಂಡ ಬಳಿಕ ಅಧಿಕಾರ ತ್ಯಜಿಸುವುದರಿಂದ ಮುಂದಿನ ಸರ್ಕಾರಕ್ಕೆ ಈ ವಿಷಯವನ್ನು ವರ್ಗಾಯಿಸಲಾಗುವುದು ಎಂದು ಮೂಲಗಳು ಹೇಳಿದವು. ಪ್ರಧಾನಿ ಸ್ಥಾನಕ್ಕೆ  ಜುಲೈ ಕೊನೆಗೆ ದೇಶದಲ್ಲಿ ಮಹಾಚುನಾವಣೆ ನಡೆಯಲಿದೆ.  ಜೆಯುಡಿ ಆಪಾದನೆ: ಈ ಮಧ್ಯೆ,  ಸರ್ಕಾರವು ಅಮೆರಿಕ ಮತ್ತು ಭಾರತದ ಪ್ರಚೋದನೆಯಿಂದ ಸಯೀದ್ ವಿರುದ್ಧ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಜೆಯುಡಿಯು ಪಾಕ್ ಸರ್ಕಾರದ ವಿರುದ್ಧ ಆರೋಪ ಮಾಡಿತು. ಕರಾಚಿಯಲ್ಲಿ ಇಫ್ತಾರ್ ಕೂಟದದ ಸಂದರ್ಭದಲ್ಲಿ ಕೆಲವು ಪತ್ರಕರ್ತರನ್ನು ಭೇಟಿ ಮಾಡಿದ್ದ ಸಯೀದ್ ಚೀನಾವು ತನ್ನ ವಿರುದ್ಧ ನಿಷೇಧ ವಿಧಿಸಲು ಅಥವಾ ತನ್ನನ್ನು ಬೇರೆ ರಾಷ್ಟ್ರಕ್ಕೆ ಕಳುಹಿಸಲು ಬಯಸಿದೆ ಎಂಬುದನ್ನು ತಾನು ನಂಬುವುದಿಲ್ಲ ಎಂದು ಹೇಳಿದ. ಏನಿದ್ದರೂ ಚೀನಾವು ’ಸೂಪರ್ ಪವರ್ ಆಗಿ ವರ್ತಿಸಬಹುದು ಮತ್ತು ಪಾಕಿಸ್ತಾನಕ್ಕೆ ನಿರ್ದೇಶನಗಳನ್ನು ನೀಡಬಲ್ಲುದು ಎಂದು ಒಪ್ಪಿಕೊಂಡ ಸಯೀದ್ ಇತ್ತೀಚಿನ ವಾರಗಳಲ್ಲಿ ಜೆಯುಡಿಯ ಭವಿಷ್ಯ ಬಗ್ಗೆ ಚರ್ಚಿಸಲು ಸರ್ಕಾರದ ಪ್ರತಿನಿಧಿ ತನ್ನನ್ನು ಭೇಟಿ ಮಾಡಿದ್ದಾರೆ ಎಂಬುದನ್ನು ನಿರಾಕರಿಸಿದ.  ಜಾಗತಿಕ ಭಯೋತ್ಪಾದಕ ಎಂಬುದಾಗಿ ವಿಶ್ವಸಂಸ್ಥೆ, ಅಮೆರಿಕ ಮತ್ತು ಭಾರತ ಘೋಷಿಸಲ್ಪಟ್ಟಿರುವ ಹಫೀಜ್ ಸಯೀದ್ ತಲೆಗೆ ೫೦ ಲಕ್ಷ ಡಾಲರ್ ಬಹುಮಾನವನ್ನು ಘೋಷಿಸಿಲಾಗಿದೆ. ೨೦೦೮ರ ಮುಂಬೈ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಆತನನ್ನು ಹಿಡಿದುಕೊಟ್ಟವರಿಗೆ ಈ ಬಹುಮಾನವನ್ನು ಘೋಷಿಸಲಾಗಿತ್ತು.  ಪಾಕಿಸ್ತಾನಿ ಅಧಿಕಾರಿಗಳು ಸಯೀದನನ್ನು ಕಳೆದ ವರ್ಷ ಸುಮಾರು ೯ ತಿಂಗಳ ಕಾಲ ಗೃಹ ಬಂಧನದಲ್ಲಿ ಇಟ್ಟಿದ್ದರು. ಆದರೆ, ಲಾಹೋರ್ ಹೈಕೋರ್ಟ್ ತೀರ್ಪಿನ ಪರಿಣಾಮವಾಗಿ ಆತನನ್ನು ಬಿಡುಗಡೆ ಮಾಡಿತ್ತು.  ಈ ವರ್ಷದ ಆದಿಯಲ್ಲಿ ಜೆಯುಡಿಯನ್ನು ಪ್ಯಾರಿಸ್ಸಿನಲ್ಲಿ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ ಸಭೆಗೆ ಮುನ್ನ ನಿಷೇಧಿತ ಸಂಘಟನೆಗಳ ಪಟ್ಟಿಗೆ ಸೇರಿಸಲಾಗಿತ್ತು. ಭಯೋತ್ಪಾದನೆಗೆ ಹಣಕಾಸು ನೆರವು ನೀಡುವುದನ್ನು ತಡೆಯುವಲ್ಲಿ ವಿಫಲವಾದುದಕ್ಕಾಗಿ ಪಾಕಿಸ್ತಾನವನ್ನು ಗ್ರೇ ಲಿಸ್ಟ್‌ಗೆ ಸೇರಿಸಲೂ ಸಭೆ ನಿರ್ಧರಿಸಿತ್ತು. ಸಯೀದನ ಜೆಯುಡಿಗೆ ಸಂಬಂಧಿಸಿದ ಎಲ್ಲ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆಯೂ ಪಾಕಿಸ್ತಾನ ಅಧ್ಯಕ್ಷೀಯ ಸುಗ್ರೀವಾಜ್ಞೆ ಹೊರಡಿಸಿತ್ತು. ಆದರೆ ಭಯೋತ್ಪಾದನೆ ನಿಗ್ರಹ ಕಾಯ್ದೆಯ ಶೆಡ್ಯೂಲು ೧ರ ವ್ಯಾಪ್ತಿಗೆ ಜೆಯುಡಿಯನ್ನು ಸೇರಿಸಿರಲಿಲ್ಲ. ಶೆಡ್ಯೂಲು ೧ ನಿಷೇಧಿತ ಸಂಘಟನೆಯ ನಾಯಕರ ಬಂಧನವನ್ನು ಕಡ್ಡಾಯಗೊಳಿಸುತ್ತದೆ.

2018: ಬೀಜಿಂಗ್: ಜಮಾತ್ -ಉದ್- ದವಾ ಮುಖ್ಯಸ್ಥ ಹಫೀಜ್ ಸಯೀದನನ್ನು ಪಶ್ಚಿಮ ಏಷ್ಯಾದ ಯಾವುದಾದರೂ ರಾಷ್ಟ್ರಕ್ಕೆ ಸ್ಥಳಾಂತರಿಸುವಂತೆ ಪಾಕಿಸ್ತಾನಕ್ಕೆ ಚೀನಾವು ಸೂಚಿಸಿದೆ ಎಂಬುದಾಗಿ ಕೆಲವು ಪತ್ರಿಕೆಗಳಲ್ಲಿ ಬಂದಿರುವ ವರದಿ ಬುಡರಹಿತವಾದದ್ದು ಎಂದು ಚೀನೀ ವಿದೇಶಾಂಗ ಸಚಿವಾಲಯವು ಪ್ರತಿಕ್ರಿಯಿಸಿತು.  ವರದಿಯನ್ನು ಟೀಕಿಸಿದ ಚೀನೀ ವಿದೇಶಾಂಗ ಸಚಿವಾಲಯದ ವಕ್ತಾರರು ’ವರದಿಯು ಆಘಾತಕಾರಿ. ಏಕೆಂದರೆ ಅದು ಬುಡರಹಿತವಾದದ್ದುಎಂದು ಹೇಳಿದರು. ವರದಿಯ ಪ್ರಕಾರ ಭಯೋತ್ಪಾದಕ ಸಂಘಟನೆಗಳ ಜೊತೆಗೆ ಸಂಪರ್ಕ ಹೊಂದಿರುವುದಕ್ಕಾಗಿ ಹಫೀಜ್ ಸಯೀದನನ್ನು ಪಶ್ಚಿಮ ಏಷ್ಯಾ ರಾಷ್ಟ್ರವೊಂದಕ್ಕೆ ಸ್ಥಳಾಂತರಿಸುವಂತೆ ಚೀನಾವು ಪಾಕಿಸ್ತಾನಕ್ಕೆ ಸೂಚಿಸಿದೆ ಎಂದು ಹೇಳಲಾಗಿತ್ತು. ಪಶ್ಚಿಮ ಏಷ್ಯಾದ ರಾಷ್ಟ್ರವೊಂದಕ್ಕೆ ಸ್ಥಳಾಂತರಿಸುವ ಮೂಲಕ ಸಯೀದನನ್ನು ಲೋಕಪ್ರಸಿದ್ಧಿಯಿಂದ ದೂರ ಮಾಡಿ ಸದ್ದಿಲ್ಲದ ಜೀವನ ನಡೆಸುವಂತೆ ಮಾಡಬೇಕು ಎಂದು ಚೀನೀ ಅಧ್ಯಕ್ಷ ಕ್ಷಿ ಜಿನ್ ಪಿಂಗ್ ಅವರು ಪಾಕ್ ಪ್ರಧಾನಿ ಶಾಹಿದ್ ಖಾಖನ್ ಅಬ್ಬಾಸಿ ಅವರಿಗೆ ಚೀನಾದಲ್ಲಿ ಕಳೆದ ತಿಂಗಳು ನಡೆದ ಬಾವೊ ಫೋರಂ ಸಭೆಯ ಸಂದರ್ಭದಲ್ಲಿ ಸಲಹೆ ಮಾಡಿದ್ದರು ಎಂದು ವರದಿ ಹೇಳಿತ್ತು.

2018: ನವದೆಹಲಿ: ಕಾಶ್ಮೀರದಲ್ಲಿ ಜಾರಿಗೊಳಿಸಲಾಗಿರುವ ರಂಜಾನ್ ಕದನವಿರಾಮಕ್ಕೆ ಉತ್ತಮ ಸ್ಪಂದನೆ ಲಭಿಸಿರುವ ಹಿನ್ನೆಲೆಯಲ್ಲಿ ಸಂತೃಪ್ತಗೊಂಡಿರುವ ಕೇಂದ್ರ ಸರ್ಕಾರ ಪವಿತ್ರ ಮಾಸದ ಬಳಿಕವೂ ಅದನ್ನು ವಿಸ್ತರಿಸಲು ಹಿಂಜರಿಯದು ಎಂದು ಗೃಹ ವ್ಯವಹಾರಗಳ ಸಚಿವಾಲಯ ಮೂಲಗಳು ತಿಳಿಸಿದವು. ‘ಕದನ ವಿರಾಮಕ್ಕೆ ಒಳ್ಳೆಯ ಸ್ಪಂದನೆ ಲಭಿಸಿದೆ. ರಂಜಾನ್ ಪವಿತ್ರ ಮಾಸದಾಚೆಗೂ ಅದನ್ನು ವಿಸ್ತರಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಕಾಶ್ಮೀರ ಕಣಿವೆಯಲ್ಲಿ ಸರ್ಕಾರವು ಕೈಗೊಂಡಿರುವ ಶಾಂತಿ ಉಪಕ್ರಮವು ಫಲ ನೀಡುತ್ತಿರುವುದರಿಂದ ತಳಮಳಗೊಂಡಿರುವ ಪಾಕಿಸ್ತಾನವು ತನ್ನ ಸೈನಿಕರ ಮೂಲಕ ಅಂತಾರಾಷ್ಟ್ರೀಯ ಗಡಿಯಲ್ಲಿ ಶೆಲ್ ದಾಳಿಯನ್ನು ಹೆಚ್ಚಿಸಿರುವುದು ’ಕದನವಿರಾಮ ಫಲಪ್ರದ ಆಗಿರುವುದಕ್ಕೆ ಸಾಕ್ಷಿ ಎಂದು ಉನ್ನತ ಅಧಿಕಾರಿ ಹೇಳಿದರು.  ಪಾಕಿಸ್ತಾನವು ಅಂತಾರಾಷ್ಟ್ರೀಯ ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆಗಳನ್ನು ತೀವ್ರಗೊಳಿಸಿದೆ. ಏಕೆಂದರೆ ಕಾಶ್ಮೀರದಲ್ಲಿ ಕದನ ವಿರಾಮಕ್ಕೆ ಉತ್ತಮ ಪ್ರತಿಕ್ರಿಯೆ ಲಭಿಸಿರುವುದು ಅವರಿಗೆ ಅಸಮಾಧಾನವನ್ನು ಉಂಟು ಮಾಡಿದೆ. ನಮಗೆ ಬಿಎಸ್ ಎಫ್ ನಿಂದ ಪ್ರತಿದಿನದ ವರದಿ ಬರುತ್ತಿದೆ ಮತ್ತು ನಮ್ಮ ಯೋಧರು ಪಾಕಿಸ್ತಾನಕ್ಕೆ ತಕ್ಕ ಉತ್ತರ ಕೊಡುತ್ತಿದ್ದಾರೆ ಎಂದು ಅಧಿಕಾರಿ ನುಡಿದರು.  ಪಾಕ್ ಸೈನಿಕರಿಂದ ಹಿಂದಿನ ದಿನ ನಡೆದ ಶೆಲ್ ದಾಳಿಯಲ್ಲಿ ಕನಿಷ್ಠ ಐವರು ನಾಗರಿಕರು ಅಸು ನೀಗಿ, ೬ ಮಂದಿ ಬಿಎಸ್ ಎಫ್ ಯೋಧರು ಸೇರಿದಂತೆ ೩೦ಕ್ಕಿಂತಲೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಜಮ್ಮು ವಿಭಾಗದ ಕಥುವಾದಿಂದ ಅಖ್ನೂರಿನವರೆಗಿನ ೧೮೧ ಕಿಮೀ ಅಂತಾರಾಷ್ಟ್ರೀಯ ಗಡಿಯಲ್ಲಿ ಅವರು ಶೆಲ್ ದಾಳಿ ನಡೆಸಿದ್ದಾರೆ. ಕಾಶ್ಮೀರ ಕಣಿವೆಯು ಸಂಪೂರ್ಣವಾಗಿ ಶಾಂತವಾಗಿರುವಾಗಲೇ ಪಾಕಿಸ್ತಾನದ ಕಡೆಯಿಂದ ಗುಂಡಿನ ದಾಳಿಯ ಪ್ರಮಾಣ ಹೆಚ್ಚಿದ್ದು ಕಾಕತಾಳೀಯ ಏನೂ ಅಲ್ಲ ಎಂದು ಅಧಿಕಾರಿಗಳು ಹೇಳಿದರು.  ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾ ನಿರ್ದೇಶಕ ಎಸ್.ಪಿ. ವೈದ್ ಅವರು ಕದನವಿರಾಮ ಆರಂಭವಾದ ಬಳಿಕ ಮೇ ೧೭ರಿಂದ ಮೇ ೨೦ರವರೆಗಿನ ಅವಧಿಯಲ್ಲಿ ಕಲ್ಲೆಸೆತದ ಕೇವಲ ೬ ಘಟನೆಗಳು ಘಟಿಸಿವೆ ಎಂದು ನುಡಿದರು.  ಪ್ರಧಾನಿಯವರ ಶಾಂತಿ ಉಪಕ್ರಮವು ಕಣಿವೆ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸುಧಾರಣೆಗೆ ನೆರವಾಗಿದೆ.  ಪರಿಸ್ಥಿತಿ, ವಿಶೇಷವಾಗಿ ದಕ್ಷಿಣ ಕಾಶ್ಮೀರದಲ್ಲಿ ಸುಧಾರಿಸಿದೆ ಮತ್ತು ಕುಟುಂಬಗಳಲ್ಲಿ ವಿಶ್ವಾಸ ಮೂಡಿಸುವಲ್ಲಿ ನೆರವಾಗುತ್ತಿದೆ ಎಂದು ಎಸ್ಪಿ ವೈದ್ ಹೇಳಿದರು.  ಪಿಡಿಪಿ ನಾಯಕ ವಹೀದ್ ಪರ ಅವರು ಕದನ ವಿರಾಮ ವಿಸ್ತರಣೆ ಬಗ್ಗೆ ಪರಿಶೀಲಿಸುವ ಕೇಂದ್ರದ ನಿರ್ಧಾರವನ್ನು ಸ್ವಾಗತಿಸಿದರು.  ’sಸಮರಸತೆಯ ಪರಿಸರ ಸೃಷ್ಟಿಯಾಗುತ್ತಿದೆ. ಸಾಕಷ್ಟು ನಿರಾಳತೆ ಲಭಿಸಿದೆ. ಕೇಂದ್ರವು ಕದನವಿರಾಮವನ್ನು ಉಲ್ಲಂಘಿಸಿದರೆ ಅದು ಸ್ವಾಗತಾರ್ಹ ಕ್ರಮ ಎಂದು ಅವರು ನುಡಿದರು. ಪಡೆಗಳು ಮುತ್ತಿಗೆ ಹಾಕುವಿಕೆ ಮತು ಶೋಧ ಕಾರ್ಯಾಚರಣೆಗಳಿಂದ ದೂರವಿದ್ದರೂ, ಹಿಂಸಾಚಾರದ ಒಂದೇ ಒಂದು ಕೆಟ್ಟ ಘಟನೆ ಕೂಡಾ ಕಣಿವೆಯ ಪರಿಸ್ಥಿತಿಯನ್ನು ಬದಲಾಯಿಸಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದರು. ಆದರೆ ಪೊಲೀಸರ ಅಂಕಿಸಂಖ್ಯೆಗಳನ್ನು ನಿರಾಕರಿಸಿರುವ ಸಿಆರ್ ಪಿಎಫ್, ವಾಸ್ತವವಾಗಿ ಕಲ್ಲೆಸೆತದ ಘಟನೆಗಳು ದುಪ್ಪಟ್ಟುಗೊಂಡಿವೆ ಎಂದು ಹೇಳಿತು.  ಶೋಪಿಯಾನ್ ಜಿಲ್ಲೆಯಲ್ಲಿ ಗ್ರಾಮಸ್ಥರು ಸೇನೆಯ ಜೊತೆ ಇಫ್ತಾರಿಗೆ ಸಂಬಂಧಿಸಿದಂತೆ ಘರ್ಷಿಸಿದ ವರದಿಗಳಿದ್ದು, ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಕೂಡಾ ಕದನವಿರಾಮ ಬೇಷರತ್ ಅಲ್ಲ, ಷರತ್ತಿನದು ಎಂದು ಸ್ಪಷ್ಟ ಪಡಿಸಿದರು. ‘ಇಸ್ಲಾಮನ್ನು ಅನುಸರಿಸುವವರು, ರಂಜಾನಿನ ಪಾವಿತ್ರ್ಯವನ್ನು ಗೌರವಿಸದೇ ಇದ್ದಲ್ಲಿ, ಭದ್ರತಾ ಪಡೆಗಳು ಅನುಕಂಪದಿಂದ ಇರಬೇಕು ಎಂದು ನೀವು ನಿರೀಕ್ಷಿಸಲಾಗದು. ಭಯೋತ್ಪಾದಕರು ಮತ್ತು ಕಲ್ಲೆಸೆಯುವವರು ಹಿಂಸಾಚಾರಕ್ಕೆ ಇಳಿದರೆ ಅವರನ್ನು ಹೇಗೆ ನೋಡಿಕೊಳ್ಳಬೇಕೋ ಹಾಗೆಯೇ ನೋಡಿಕೊಳ್ಳಲಾಗುತ್ತದೆ ಎಂದು ಸಿಂಗ್ ಎಚ್ಚರಿಸಿದರು.


2009: ಡಿಎಂಕೆಯ ಒತ್ತಡ ತಂತ್ರ ಕೊನೆಗೊಂಡಿತು. ಕಡೆಗೂ ಕೇಂದ್ರ ಸರ್ಕಾರವನ್ನು ಸೇರಲು ದ್ರಾವಿಡ ಪಕ್ಷ ನಿರ್ಧರಿಸಿತು. ಮೂರು ಸಂಪುಟ ದರ್ಜೆ ಸೇರಿದಂತೆ ಒಟ್ಟು 7 ಸಚಿವ ಸ್ಥಾನಗಳಿಗೆ 'ಚೌಕಾಸಿ' ಒಪ್ಪಂದ ಕುದುರಿತು. ಮನಮೋಹನ ಸಿಂಗ್ ನೇತೃತ್ವದ ನೂತನ ಸರ್ಕಾರದಲ್ಲಿ ಮೂರು ಸಂಪುಟ ದರ್ಜೆಯ ಜೊತೆಗೆ 9 ಸಚಿವ ಸ್ಥಾನಗಳಿಗೆ ಡಿಎಂಕೆ ಬೇಡಿಕೆ ಮಂಡಿಸಿತ್ತು. ಮೊದಲನೆಯದಕ್ಕೆ 'ಅಸ್ತು' ಎಂದರೂ 9ರ ಸಂಖ್ಯೆಯನ್ನು 6ಕ್ಕೆ ಇಳಿಸುವ ಕಾಂಗ್ರೆಸ್ ಯತ್ನ ಫಲಿಸಿರಲಿಲ್ಲ. ಆದರೆ ಕಳೆದ ಸರ್ಕಾರದಲ್ಲಿ ಡಿಎಂಕೆ ಹೊಂದಿದ್ದ 7 ಸ್ಥಾನಗಳನ್ನೇ ಉಳಿಸಿ 'ಯಥಾಸ್ಥಿತಿ' ಕಾಯ್ದುಕೊಳ್ಳಲು ಅದು ಶಕ್ತವಾಯಿತು.. ಕನಿಮೊಳಿ ಅವರಿಗೆ ಕ್ಯಾಬಿನೆಟ್ ದರ್ಜೆ ನೀಡಬೇಕೆಂದು ಡಿಎಂಕೆ ಹಠಹಿಡಿದಿತ್ತು. ಪಕ್ಷದ ಸಭೆಯಲ್ಲಿ ಕನಿಮೊಳಿ ಅವರು ಸಚಿವ ಸ್ಥಾನದಿಂದಲೇ ಹಿಂದೆ ಸರಿದದ್ದರಿಂದ ಸಮಸ್ಯೆಗೆ ಪರಿಹಾರ ಸಾಧ್ಯವಾಯಿತು. ಕೊನೆಗೆ ಕನಿಮೊಳಿ ಅವರನ್ನು ರಾಜ್ಯ ಸಚಿವರಾಗುವಂತೆ ಒಪ್ಪಿಸಲಾಯಿತು.

2009: ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರ ಹತ್ಯೆಯ ಸಂಚಿನಲ್ಲಿ ಭಾಗಿಯಾಗಿದ್ದ ವ್ಯಕ್ತಿ ಸೇರಿದಂತೆ ಇಬ್ಬರು ಮಾವೋವಾದಿಗಳನ್ನು ಆಂಧ್ರ ಪ್ರದೇಶ ಪೊಲೀಸರು ಈದಿನ ನಸುಕಿನಲ್ಲಿ ಗುಂಡಿಕ್ಕಿ ಹತ್ಯೆಗೈದರು. ವಾರಂಗಲ್ ಜಿಲ್ಲೆಯ ತಡ್ವಿ ಅರಣ್ಯ ಪ್ರದೇಶದಲ್ಲಿ ಪೊಲೀಸರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಸಿಪಿಎಂ ಕೇಂದ್ರ ಸಮಿತಿ ಸದಸ್ಯ ಪಟೇಲ್ ಸುಧಾಕರ ರೆಡ್ಡಿ, ಮತ್ತು ರಾಜ್ಯ ಸಮಿತಿ ಸದಸ್ಯ ಕೆ.ವೆಂಕಟಯ್ಯ ಅವರು ಮೃತರಾದರು ಪೊಲೀಸರಿಗೆ ಅತ್ಯವಶ್ಯಕವಾಗಿ ಬೇಕಾಗಿದ್ದ ಸುಧಾಕರ ರೆಡ್ಡಿ ಪತ್ತೆಗೆ ಸರ್ಕಾರ 2.1 ದಶ ಲಕ್ಷ ರೂಪಾಯಿ ಘೋಷಣೆ ಮಾಡಿತ್ತು.

2009: ವಿದ್ಯಾರ್ಥಿಗಳನ್ನು ಪೀಡಿಸಿ ಬಲವಂತವಾಗಿ ಹಣ ವಸೂಲಿ ಮಾಡುತ್ತಾ, ಅದೇ ವಿದ್ಯಾರ್ಥಿಗಳೊಂದಿಗೆ ಮಾದಕ ವಸ್ತುಗಳನ್ನು ಸೇವಿಸಿ, ಲೈಂಗಿಕ ಚಟುವಟಿಕೆಗಳಲ್ಲಿ ತೊಡಗುತ್ತಿದ್ದ ಆರೋಪದ ಮೇಲೆ ಫಿಲಿಡೆಲ್ಫಿಯಾದ ಪಾದ್ರಿ ಹಾಗೂ ರೋಮನ್ ಕ್ಯಾಥೋಲಿಕ್ ಪ್ರೌಢಶಾಲೆಯ ಮಾಜಿ ಪ್ರಾಚಾರ್ಯ ರೆವರೆಂಡ್ ಚಾರ್ಲ್ಸ್ ನ್ಯೂಮ್ಯಾನ್‌ಗೆ(58) ನ್ಯಾಯಾಲಯ 3 ರಿಂದ 6 ವರ್ಷ ಸೆರೆವಾಸದ ಶಿಕ್ಷೆ ವಿಧಿಸಿತು. ಈತ ಮಾಜಿ ಹಾಗೂ ಹಾಲಿ ವಿದ್ಯಾರ್ಥಿಗಳನ್ನು ಹಣಕ್ಕಾಗಿ ಪೀಡಿಸುತ್ತಿದ್ದ. ಅವರಿಂದ ಒಟ್ಟು 9 ಲಕ್ಷ ಡಾಲರ್‌ನಷ್ಟು ವಸೂಲಿ ಮಾಡಿದ್ದ. ಹೀಗೆ ಪೀಡಿಸಿ ಹಣ ಸಂಗ್ರಸುತ್ತಿದ್ದ ಹಣದಿಂದ ವಿದ್ಯಾರ್ಥಿಗಳೊಂದಿಗೆ ಸೇರಿ ಮದ್ಯ ಹಾಗೂ ಮಾದಕ ದ್ರವ್ಯಗಳನ್ನು ಸೇವಿಸುತ್ತಿದ್ದ.

2009: ಅಮೆರಿಕದಲ್ಲಿನ ಭಾರತದ ನೂತನ ರಾಯಭಾರಿಯಾಗಿ ಮೀರಾ ಶಂಕರ್ ನೇಮಕಗೊಂಡರು. ಈ ಮೊದಲು ಜರ್ಮನಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಅವರು, ಜವಹರಲಾಲ್ ನೆಹರೂ ಅವರ ಸಹೋದರಿ ವಿಜಯಲಕ್ಷ್ಮಿ ಪಂಡಿತ್ (1949- 1952) ಅವರ ನಂತರ ಅಮೆರಿಕದಲ್ಲಿ ಭಾರತವನ್ನು ಪ್ರತಿನಿಧಿಸುವ ಎರಡನೇ ಮಹಿಳೆಯಾದರು. 58 ವರ್ಷದ ಮೀರಾ ಶ್ವೇತಭವನಕ್ಕೆ ತೆರಳಿ ಅಧ್ಯಕ್ಷ ಬರಾಕ್ ಒಬಾಮ ಅವರನ್ನು ಭೇಟಿ ಮಾಡಿ ಪರಿಚಯಿಸಿಕೊಂಡರು.

2009: ಜಗತ್ತಿನ ಅತಿ ದೊಡ್ಡ ಉಕ್ಕು ಉತ್ಪಾದನಾ ಕಂಪೆನಿಯಾದ 'ಆರ್ಸೆಲರ್- ಮಿತ್ತಲ್' ಮಾಲೀಕ, ಅನಿವಾಸಿ ಭಾರತೀಯರಾದ ಲಕ್ಷ್ಮೀ ಮಿತ್ತಲ್, ಅವರ ಪುತ್ರ ಆದಿತ್ಯ ಮತ್ತು ಪುತ್ರಿ ವನಿಶಾ ಅವರು ತಮ್ಮ ವೇತನದಲ್ಲಿ ಶೇ 15 ರಷ್ಟು ಕಡಿತ ಮಾಡಿಕೊಂಡರು. ಆರ್ಥಿಕ ಹಿಂಜರಿತ ಹಾಗೂ ಉಕ್ಕು ಉದ್ಯಮದಲ್ಲಿ ಉಂಟಾದ ಕುಸಿತದ ಹಿನ್ನೆಲೆಯಲ್ಲಿ ಕಂಪೆನಿಯ ಆಡಳಿತ ಮಂಡಳಿ ಸದಸ್ಯರ ಸಂಬಳದಲ್ಲಿ ಕಡಿತ ಮಾಡುವ ಪ್ರಸ್ತಾವವನ್ನು ಕಳೆದ ಫೆಬ್ರುವರಿಯಲ್ಲಿ ಕೈಗೊಳ್ಳಲಾಗಿತ್ತು.

2009: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬಂಟ, ರಶೀದ್ ಮಲಬಾರಿಯ ಸಹಚರ ಉಡುಪಿ ಜಿಲ್ಲೆಯ ಕಾಪುವಿನ ಇಸ್ಮಾಯಿಲ್‌ನನ್ನು ದಕ್ಷಿಣ ಕನ್ನಡ ಜಿಲ್ಲಾ ಅಪರಾಧ ಮತ್ತು ಗುಪ್ತವಾರ್ತೆ ವಿಭಾಗದ ಪೊಲೀಸರ ತಂಡ ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂಧಿಸಿತು.

2008: ಪರಿಶಿಷ್ಟ ಪಂಗಡ (ಎಸ್ ಟಿ) ಸ್ಥಾನಕ್ಕಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ಗುಜ್ಜರ್ ಸಮುದಾಯದವರ ಮೇಲೆ ಪೊಲೀಸರು ಗುಂಡು ಹಾರಿಸಿದ ಪರಿಣಾಮ ರಾಜಸ್ಥಾನದ ಡೌಸಾ ಜಿಲ್ಲೆಯ ಸಿಕಂದರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 16 ಜನರು ಮೃತರಾದರು. ಮಧ್ಯಾಹ್ನದ ವೇಳೆಗೆ ಹಿಂಸಾರೂಪಕ್ಕಿಳಿದ ಪ್ರತಿಭಟನಾಕಾರರು ಸಿಕಂದರ ಪೊಲೀಸ್ ಠಾಣೆಯನ್ನು ಸುಟ್ಟುಹಾಕಲು ಪ್ರಯತ್ನಿಸಿದಾಗ ಪೊಲೀಸರು ಗೋಲಿಬಾರ್ ಮಾಡಿದರು. ಹಿಂದಿನ ದಿನ ಭರತ್ ಪುರದಲ್ಲೂ ಇದೇ ರೀತಿ ಪ್ರತಿಭಟನೆ ನಡೆಸುತ್ತಿದ್ದ ಗುಜ್ಜರ್ ಸಮುದಾಯದ ಪ್ರತಿಭಟನಾಕಾರರ ಮೇಲೆ ಪೊಲೀಸರು ಗೋಲಿಬಾರ್ ನಡೆಸಿದ್ದರಿಂದ ಕನಿಷ್ಠ 15 ಜನರು ಮೃತರಾಗಿದ್ದರು. ಇದರೊಂದಿಗೆ ಗುಜ್ಜರ್ ಚಳವಳಿ ಗೋಲಿಬಾರಿಗೆ ಬಲಿಯಾದವರ ಸಂಖ್ಯೆ 31ಕ್ಕೆ ಏರಿತು.

2008: ಕರ್ನಾಟಕದ ವಿವಿಧೆಡೆ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ 15ಕ್ಕೂ ಹೆಚ್ಚು ಮಂದಿ ಪ್ರಭಾವಿ ರಾಜಕೀಯ ವ್ಯಕ್ತಿಗಳಿಗೆ ಲೋಕಾಯುಕ್ತ, ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ನೋಟಿಸ್ ಜಾರಿ ಮಾಡಿದರು. ಪರವಾನಗಿ ಇಲ್ಲದೇ ಸರ್ಕಾರಿ ಭೂಮಿಯಲ್ಲಿ ಗಣಿಗಾರಿಕೆ ನಡೆಸುತ್ತಿರುವುದು, ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುವುದು, ಪರಿಸರಕ್ಕೆ ಹಾನಿ ಮಾಡಿರುವುದು ಮತ್ತಿತರ ಪ್ರಶ್ನೆಗಳಿಗೆ ಉತ್ತರ ನೀಡುವಂತೆ ನೋಟಿಸಿನಲ್ಲಿ ಸೂಚಿಸಲಾಯಿತು.

2008: ಲೋಕಪಾಲ ಮಸೂದೆ ವ್ಯಾಪ್ತಿಯಡಿ ಪ್ರಧಾನಿ ಹುದ್ದೆಯನ್ನು ತರುವಂತೆ, ಪ್ರಧಾನಿ ಮನ ಮೋಹನ ಸಿಂಗ್ ಅವರೇ ಸೂಚಿಸಿದ್ದರೂ, ಕೇಂದ್ರ ಸಚಿವ ಸಂಪುಟ ಅದನ್ನು ತಿರಸ್ಕರಿಸಿತು.

2008: ಬಣ್ಣ ಅದರಲ್ಲೂ ಗ್ಲೈಕೋಲ್ ಇಥರ್ಸ್ ನಂತಹ ರಾಸಾಯನಿಕಗಳನ್ನು ಒಳಗೊಂಡ ಬಣ್ಣದ ಕೆಲಸಗಳನ್ನು ಮಾಡುವ ಕಾರ್ಮಿಕರ ವೀರ್ಯದಲ್ಲಿ ದೋಷ ಕಂಡುಬರುತ್ತದೆ ಎಂದು ಹೊಸ ಸಂಶೋಧನೆಯಿಂದ ಬೆಳಕಿಗೆ ಬಂದಿತು. ಗ್ಲೈಕೋಲ್ ಇಥರ್ಸ್ ನಂತಹ ರಾಸಾಯನಿಕ ಬಳಸಿ ಬಣ್ಣ ತಯಾರಿಸುವುದು ಈಗ ಕಡಿಮೆಯಾಗಿದೆ. ಆದರೂ ಕೆಲವು ಸಂದರ್ಭದಲ್ಲಿ ಅವುಗಳ ಬಳಕೆ ಆಗುತ್ತಿರುವುದರಿಂದ ಪುರುಷ ಕಾರ್ಮಿಕರಿಗೆ ಅಪಾಯ ಉಂಟಾಗುತ್ತದೆ ಎಂದು ಲಂಡನ್ನಿನ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದ ಸಂಶೋಧಕರು ತಿಳಿಸಿದರು.

2008: ಬೆಂಗಳೂರಿನ ವಿಜಯನಗರದ ಸಮಾಜ ಸಂಪರ್ಕ ವೇದಿಕೆಯ ವತಿಯಿಂದ ನೀಡಲಾಗುವ ಪ್ರಸಕ್ತ ಸಾಲಿನ `ರಾಷ್ಟ್ರಕವಿ ಕುವೆಂಪು ಶತಮಾನೋತ್ಸವ ಪ್ರಶಸ್ತಿ'ಗೆ ಕುವೆಂಪು ಅವರ ಪುತ್ರಿ ತಾರಿಣಿ ಚಿದಾನಂದಗೌಡ ಅವರನ್ನು ಆಯ್ಕೆ ಮಾಡಲಾಯಿತು. ಸಂಗೀತ, ಸಾಹಿತ್ಯ ಮತ್ತು ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ ತಾರಿಣಿ ಅವರು ಈವರೆಗೆ ಮಾಡಿರುವ ಸಾಧನೆಯನ್ನು ಗಮನಿಸಿ ಅವರಿಗೆ ಈ ಪ್ರಶಸ್ತಿ ನೀಡಲು ನಿರ್ಧರಿಸಲಾಯಿತು.

2008: ಶಿರಸಿಯ ಎ.ಪಿ.ಎಂ.ಸಿ ಮಾರುಕಟ್ಟೆ ಪ್ರಾಂಗಣದ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ನಿಯಮಿತ ಆವರಣದಲ್ಲಿ ನಡೆದ ಎರಡು ದಿನಗಳ ರಾಜ್ಯ ಮಟ್ಟದ ಹಲಸು ಮೇಳ ಸಮಾರೋಪಗೊಂಡಿತು. `ಹಲಸಿನ ಹಣ್ಣು ಕೂಡ ಒಂದು ಹಾರ್ಟ್ ಟಾನಿಕ್. ದೇಹದ ಪುಷ್ಟಿಗೆ, ಪುರುಷತ್ವದ ವೃದ್ಧಿಗೆ, ಬಂಜೆತನ ನಿವಾರಣೆಗೆ ಹಲಸು ಉಪಯುಕ್ತವಾಗಿದೆ ಎಂಬ ಸಂಗತಿಯನ್ನು ಆಯುರ್ವೇದದಲ್ಲಿ ಹೇಳಲಾಗಿದೆ. ಹಲಸನ್ನು ಸರಿಯಾದ ರೀತಿಯಲ್ಲಿ ಬಳಸಿದಲ್ಲಿ ಅದು ಆರೋಗ್ಯದಾಯಕ ಫಲವಾಗುವುದು' ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಡಾ. ಸತ್ಯನಾರಾಯಣ ಭಟ್ಟ ಹೇಳಿದರು. ದ್ರಾಕ್ಷಿ, ಕವಳಿ, ನೆಲ್ಲಿ, ದಾಳಿಂಬೆ, ಮುರುಗಲು ಹೇಗೆ ಆಯುರ್ವೇದದಲ್ಲಿ ಹಾರ್ಟ್ ಟಾನಿಕ್ ಸ್ಥಾನವನ್ನು ಪಡೆದುಕೊಂಡಿವೆಯೋ ಹಾಗೆಯೇ ಹಲಸು ಕೂಡ ಆರೋಗ್ಯ ವೃದ್ಧಿಯಲ್ಲಿ ಜಾಗ ಪಡೆದುಕೊಂಡಿದೆ. ಆದರೆ ಅಗ್ನಿಮಾಂದ್ಯ, ಪಿತ್ತ, ಗುಲ್ಮಾ, ಜೀರ್ಣ ಶಕ್ತಿ ಕಡಿಮೆ ಇರುವವರು ಹಲಸಿನ ಹಣ್ಣನ್ನು ಉಪಯೋಗಿಸಬಾರದು. ಹಲಸು ದೇಹಕ್ಕೆ ಕ್ಯಾನ್ಸರ್ ರೋಗ ನಿರೋಧಕ ಶಕ್ತಿಯನ್ನು ನೀಡಬಲ್ಲುದು. ಕಲಶಕ್ಕೆ ಹಲಸಿನ ಎಲೆ ಇಟ್ಟು ಅದರಲ್ಲಿರುವ ನೀರನ್ನು ತೀರ್ಥವಾಗಿ ಸ್ವೀಕರಿಸುವುದು ಕೂಡ ಆರೋಗ್ಯದ ದೃಷ್ಟಿಯನ್ನು ಹೊತ್ತಿದೆ. ಹಲಸಿನ ಎಲೆಯಿಂದ ಬರುವ ಹಾಲು ನೀರಿನೊಂದಿಗೆ ಬೆರೆತು ಅದು ಆರೋಗ್ಯಕ್ಕೆ ದಾರಿಯಾಗಲಿದೆ ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿದೆ ಎಂದು ಅವರು ವಿವರಿಸಿದರು.

2007: ಭಾಷಾ ಮಾಧ್ಯಮದ ಉಲ್ಲಂಘನೆಯ ಆರೋಪದಿಂದ ಮಾನ್ಯತೆ ಕಳೆದುಕೊಂಡಿರುವ 2215 ಖಾಸಗಿ ಪ್ರಾಥಮಿಕ ಶಾಲೆಗಳು ಇನ್ನು ಮುಂದೆ ಕನ್ನಡ ಮಾಧ್ಯಮದಲ್ಲೇ ಬೋಧಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ಆಜ್ಞಾಪಿಸಿತು. ನ್ಯಾಯಮೂರ್ತಿ ಎ.ಸಿ. ಕಬ್ಬಿಣ ಅವರು ಈ ಆದೇಶ ನೀಡಿದರು.

2007: ಒಂದು ನಿಮಿಷದಲ್ಲಿ ಮೇಕಪ್, ಹೇರ್ ಸ್ಟೈಲ್ ಇತ್ಯಾದಿ ಮಾಡಿ ಈಗಾಗಲೇ ಲಿಮ್ಕಾ ದಾಖಲೆ ಮಾಡಿರುವ `ಒನ್ ಮಿನಿಟ್ ಉಮಾ' ಎಂದೇ ಖ್ಯಾತಿ ಪಡೆದಿರುವ ಸೌಂದರ್ಯ ತಜ್ಞೆ ಉಮಾ ಜಯಕುಮಾರ್ ಅವರು ಈದಿನ ಬೆಂಗಳೂರು ಮಹಾಲಕ್ಷ್ಮಿಪುರಂ ಕ್ಲಬ್ಬಿನಲ್ಲಿ ಮಂಜುಗಡ್ಡೆಯ ಮೇಲೆ ನಿಂತು ಒಂದು ನಿಮಿಷದಲ್ಲಿ ಕೇಶ ವಿನ್ಯಾಸ, ಮೇಕಪ್, ಮದುಮಗಳ ಸಿಂಗಾರ ಇತ್ಯಾದಿ ಹತ್ತಕ್ಕೂ ಹೆಚ್ಚು ಕಾರ್ಯಗಳನ್ನು ಮಾಡಿ ತಮ್ಮ ದಾಖಲೆಯನ್ನು ತಾವೇ ಮುರಿದರು.

2007: ಈ ಹಿಂದೆ ಒಂದು ಕೈಯಲ್ಲಿ 21 ಮೊಟ್ಟೆಗಳನ್ನು ಹಿಡಿದು ದಾಖಲೆ ಮಾಡಿದ್ದ ಮೈಸೂರಿನ ಎಂ.ಎಲ್. ಶಿವಕುಮಾರ್ (44) ಅವರು ತಮ್ಮ ಬಲಗೈಯಲ್ಲಿ 120 ಸೆಕೆಂಡುಗಳಲ್ಲಿ 23 ಕೋಳಿ ಮೊಟ್ಟೆಗಳನ್ನು ಇಟ್ಟುಕೊಳ್ಳುವ ಮೂಲಕ ತಮ್ಮ ಹಿಂದಿನ ದಾಖಲೆ ಮುರಿದರು.

2007: ಜಾಗತಿಕ, ಆರ್ಥಿಕ ಮತ್ತು ರಾಜಕೀಯ ರಂಗದಲ್ಲಿ ಭಾರತ ನಿರ್ವಹಿಸುತ್ತಿರುವ ಪ್ರಮುಖ ಪಾತ್ರವನ್ನು ಗುರುತಿಸಿ ಇಲ್ಲಿಯ ನ್ಯೂ ಮೆಕ್ಸಿಕೊ ಟೆಕ್ ವಿಶ್ವ ವಿದ್ಯಾಲಯವು ಭಾರತದ ತಜ್ಞರ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ಚಿಂತಕರ ಚಾವಡಿಯೊಂದನ್ನು ಆರಂಭಿಸಿತು.

2007: ಶ್ರೀಲಂಕೆಯಲ್ಲಿ ಎಲ್ ಟಿ ಟಿ ಇ ಬಂಡುಕೋರರು ಉತ್ತರ ಜಾಫ್ನಾ ದ್ವೀಪದ ಬಳಿಕ ಸಣ್ಣ ದ್ವೀಪವೊಂದರ ಆಯಕಟ್ಟಿನ ನೌಕಾ ನೆಲೆ ಮೇಲೆ ದಾಳಿ ನಡೆಸಿದ್ದಲ್ಲದೆ ಕೊಲಂಬೋ ಸಮೀಪ ಸೇನಾ ಬಸ್ಸನ್ನು ಸ್ಫೋಟಿಸಿದ ಪರಿಣಾಮವಾಗಿ 35 ಮಂದಿ ಹತರಾದರು.

2006: ಭಾರತೀಯ ಗಡಿ ರಕ್ಷಣಾ ಪಡೆಯ ಹಿರಿಯ ಅಧಿಕಾರಿ ಎಸ್.ಸಿ. ನೇಗಿ (56) ಅವರು ಪ್ರಪಂಚದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಏರಿದ ಅತ್ಯಂತ ಹಿರಿಯ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2006: ರಾಜ್ಯಸಭೆಯ ಮಾಜಿ ಸದಸ್ಯೆ ಜಯಾ ಬಚ್ಚನ್ ಅವರು ಉತ್ತರ ಪ್ರದೇಶ ಚಲನಚಿತ್ರ ಮಂಡಳಿಯ (ಯು ಪಿ ಎಫ್ ಡಿ ಸಿ) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಜ್ಯಸಭಾ ಉಪಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಲು ಮಾರ್ಗ ಸುಗಮಗೊಳಿಸಿಕೊಂಡರು.

1968: ಕಲಾವಿದೆ ಶುಭ ಧನಂಜಯ ಜನನ.

1946: ಕಲಾವಿದೆ ಮರಿಗೆಮ್ಮ ಎಂ. ಜನನ.

1941: ಜರ್ಮನ್ ಸಮರನೌಕೆ ಬಿಸ್ಮಾರ್ಕ್ ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಗ್ರೀನ್ ಲ್ಯಾಂಡ್ ಕರಾವಳಿ ಸಮೀಪ ಬ್ರಿಟಿಷರ ಎಚ್ ಎಂಎಸ್ `ಹುಡ್' ನೌಕೆಯನ್ನು ಮುಳುಗಿಸಿತು. ನೌಕೆಯಲ್ಲಿದ್ದ 1421 ಮಂದಿಯ ಪೈಕಿ ಕೇವಲ 3 ಮಂದಿಯನ್ನು ರಕ್ಷಿಸಲು ಸಾಧ್ಯವಾಯಿತು.

1927: ಹಿರಿಯ ಮೃದಂಗ ವಿದ್ವಾಂಸರಲ್ಲೊಬ್ಬರಾದ ಎಂ.ಎಸ್. ರಾಮಯ್ಯ ಅವರು ತಬಲ ವಿದ್ವಾಂಸ ಸುಬ್ಬಣ್ಣ ಪುತ್ರನಾಗಿ ಮೈಸೂರಿನಲ್ಲಿ ಜನಿಸಿದರು.

1922: ಕಲಾವಿದ ರಾಮನರಸಯ್ಯ ಜನನ.

1905: ಕಲಾವಿದ ಹರ್ತಿಕೋಟೆ ಸುಬ್ಬಣ್ಣ ಜನನ.

1875: ಸರ್ ಸೈಯದ್ ಅಹಮದ್ ಖಾನ್ ಮತ್ತು ಅವರ ಮಗ ಸೈಯದ್ ಮಹಮೂದ್ ಆಲಿಘಡದಲ್ಲಿ ಮಹಮ್ಮಡನ್ ಆಂಗ್ಲೋ - ಓರಿಯಂಟಲ್ ಸ್ಕೂಲ್ ಸ್ಥಾಪಿಸಿದರು. 1920ರಲ್ಲಿ ಅದು ಅಲಿಘಡ ಮುಸ್ಲಿಂ ವಿಶ್ವ ವಿದ್ಯಾಲಯವಾಯಿತು.

1844: ಸ್ಯಾಮ್ಯುಯೆಲ್ ಮೋರ್ಸ್, ಬಾಲ್ಟಿಮೋರಿನಿಂದ ವಾಷಿಂಗ್ಟನ್ನಿಗೆ ಟೆಲಿಗ್ರಾಫ್ ಸಂದೇಶವನ್ನು ಕಳುಹಿಸುವ ಮೂಲಕ ಅಮೆರಿಕದ ಮೊತ್ತ ಮೊದಲ ಟೆಲಿಗ್ರಾಫ್ ಲೈನ್ ಉದ್ಘಾಟಿಸಿದ.

1819: ರಾಣಿ ವಿಕ್ಟೋರಿಯಾ ಜನ್ಮದಿನ. ವಿಕ್ಟೋರಿಯಾ (1819-1901) ಇಂಗ್ಲೆಂಡಿನ ಅತ್ಯಂತ ದೀರ್ಘ ಅವಧಿಯ ರಾಣಿ ಎಂಬ ಖ್ಯಾತಿ ಪಡೆದ ವ್ಯಕ್ತಿ.

1686: ಡೇನಿಯಲ್ ಗ್ಯಾಬ್ರಿಯಲ್ ಫ್ಯಾರನ್ ಹೀಟ್ (1686-1736) ಜನ್ಮದಿನ. ಜರ್ಮನಿಯ ವೈದ್ಯನಾದ ಈತ ಆಲ್ಕೋಹಾಲ್ ಥರ್ಮಾಮೀಟರ್, ಮರ್ಕ್ಯುರಿ ಥರ್ಮಾಮೀಟರ್ ಮುಂತಾದ ಉಷ್ಣಮಾಪಕಗಳನ್ನು ಸಂಶೋಧಿಸಿದ. ಈತ ಸಂಶೋಧಿಸಿದ ಉಷ್ಣಮಾಪಕಕ್ಕೆ ಈತನ ಹೆಸರನ್ನೇ ಇಟ್ಟು ಗೌರವಿಸಲಾಯಿತು.

Thursday, May 24, 2018

ಇಂದಿನ ಇತಿಹಾಸ History Today ಮೇ 23

ಇಂದಿನ ಇತಿಹಾಸ History Today ಮೇ 23
2018: ಬೆಂಗಳೂರು: ಕರ್ನಾಟಕದ ೨೫ನೇ ಮುಖ್ಯಮಂತ್ರಿಯಾಗಿ ಎಚ್ ಡಿ ಕುಮಾರಸ್ವಾಮಿ ಅವರು ೨ನೇ ಬಾರಿಗೆ ಹಾಗೂ ರಾಜ್ಯದ ಮೊದಲ ದಲಿತ ಉಪಮುಖ್ಯಮಂತ್ರಿಯಾಗಿ ಡಾ. ಜಿ. ಪರಮೇಶ್ವರ್ ಅವರು ವಿಧಾನಸೌಧದ ಮುಂಭಾಗದಲ್ಲಿ ನಡೆದ ಸಮಾರಂಭದಲ್ಲಿ ದೇಶಾದ್ಯಂತದಿಂದ ಆಗಮಿಸಿದ ವಿವಿಧ ರಾಜಕೀಯ ಪಕ್ಷಗಳ ಗಣ್ಯರು ಮತ್ತು ಸಹಸ್ರಾರು ಅಭಿಮಾನಿಗಳ ಎದುರು ಪ್ರಮಾಣವಚನ ಸ್ವೀಕರಿಸಿದರು. ಇದರೊಂದಿಗೆ ರಾಜ್ಯದಲ್ಲಿ ಕುಮಾರ ಸ್ವಾಮಿ ನೇತೃತ್ವದ ಜನತಾದಳ (ಎಸ್)- ಕಾಂಗ್ರೆಸ್ ಚುನಾವಣೋತ್ತರಮೈತ್ರಿ ಯುಗ ಆರಂಭವಾಯಿತು.  ಉಭಯ ನಾಯಕರಿಗೂ ರಾಜ್ಯಪಾಲ ವಜುಭಾಯಿ ವಾಲಾ ಅವರು ಸಂಜೆ .೩೦ ಗಂಟೆಗೆ ಪ್ರತಿಜ್ಞಾವಿಧಿ ಬೋಧಿಸಿದರು. ಹರದನಹಳ್ಳಿ ದೇವೇಗೌಡ ಕುಮಾರ ಸ್ವಾಮಿ ಅವರು ನೂತನ ಮುಖ್ಯಮಂತ್ರಿಯಾಗಿ ದೇವರು ಮತ್ತು ಕನ್ನಡ ನಾಡಿನ ಜನತೆಯ ಹೆಸರಿನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರೆ, ಕೊರಟಗೆರೆ ಶಾಸಕ ಮತ್ತು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು ಉಪ ಮುಖ್ಯಮಂತ್ರಿಯಾಗಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕರಿಸಿ, ದಾಖಲೆಗೆ ಸಹಿಹಾಕಿದ ಬಳಿಕ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತಿಗೆ ರಾಜ್ಯಪಾಲರು ಹೂಗುಚ್ಛ ನೀಡಿ ಅಭಿನಂದಿಸಿದರು.  ಪಂಚೆ, ಶರ್ಟ್ನೊಂದಿಗೆ ಶ್ವೇತವರ್ಣದ ಉಡುಪಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಕುಮಾರಸ್ವಾಮಿ ಅವರು ಬಳಿಕ ತಾಯಿ ಚೆನ್ನಮ್ಮ ಅವರ ಪಾದಕ್ಕೆ ನಮಸ್ಕರಿಸಿ, ಆಶೀರ್ವಾದ ಪಡೆದುಕೊಂಡರು. ರಾಷ್ಟ್ರಗೀತೆಯೊಂದಿಗೆ ಆರಂಭವಾದ ಸಮಾರಂಭ ಕೆಲವೇ ನಿಮಿಷಗಳಲ್ಲಿ ರಾಷ್ಟ್ರಗೀತೆಯೊಂದಿಗೇ ಮುಕ್ತಾಯವಾಯಿತು. ಮೋದಿ ವಿರೋಧಿ ಒಗ್ಗಟ್ಟು: ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ, ನಾಯಕಿ ಸೋನಿಯಾ ಗಾಂಧಿ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಹೇಮಂತ್ ಸೊರೇನ್, ಬಿಎಸ್ಪಿ ನಾಯಕಿ ಮಾಯಾವತಿ, ಸಿಪಿಎಂನ ಸೀತಾರಾಮ್ ಯೆಚೂರಿ, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಪುದುಚೇರಿ ಮುಖ್ಯಮಂತ್ರಿ ನಾರಾಯಣ ಸ್ವಾಮಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಆರ ಜೆಡಿಯ ತೇಜಸ್ವಿ ಯಾದವ್, ಶರದ್ ಯಾದವ್, ಗುಲಾಂ ನಬಿ ಆಜಾದ್, ಡಿ.ರಾಜಾ, ಸೇರಿದಂತೆ ಹಲವಾರು ಮಂದಿ ಬಿಜೆಪಿಯೇತರ ನಾಯಕರು ಪಾಲ್ಗೊಳ್ಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ವಿರೋಧಿಗಳ ಒಗ್ಗಟ್ಟು ಪ್ರದರ್ಶಿಸಿದರು.  ಸಮಾರಂಭಕ್ಕೆ ಆಗಮಿಸಿದ ಸೋನಿಯಾ ಗಾಂಧಿ ಅವರ ಹೆಗಲ ಮೈಲೆ ಕೈಹಾಕಿ, ಹಣೆಹಣೆ ತಗುಲಿಸುವ ಮೂಲಕ ಮಾಯಾವತಿ ಅವರು ಖುಷಿ ವ್ಯಕ್ತ ಪಡಿಸಿದರೆ, ವೇದಿಕೆಗೆ ಬಂದ ಡಿ ಕೆ ಶಿವಕುಮಾರ್ ದೇವೇಗೌಡರ ಕುಶಲ ವಿಚಾರಿಸಿದರು. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಜನರತ್ತ ಕೈ ಬೀಸಿದಾಗ ಜನ ಹರ್ಷೋದ್ಘಾರ ಮಾಡಿದರು.  ಹಿಂದಿನ ಬಾರಿ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಜೊತೆಗೂಡಿ ಜೆಡಿ(ಎಸ್) - ಬಿಜೆಪಿ ಸಮ್ಮಿಶ್ರ ಸರ್ಕಾರವನ್ನು ಕುಮಾರ ಸ್ವಾಮಿ ಅವರು ರಚಿಸಿದ್ದಾಗ ಸಮಾರಂಭಕ್ಕೆ ಗೈರು ಹಾಜರಾಗಿದ್ದ ಮಾಜಿ ಪ್ರಧಾನಿ, ಜನತಾದಳ ಮುಖ್ಯಸ್ಥ ಎಚ್.ಡಿ. ದೇವೇಗೌಡ ಅವರು ಬಾರಿ ಮಗನ ಪಟ್ಟಾಭಿಷೇಕ ಸಮಾರಂಭದಲ್ಲಿ ಪತ್ನಿ ಚೆನ್ನಮ್ಮ ಸೇರಿದಂತೆ ಕುಟುಂಬ ಸದಸ್ಯರ ಜೊತೆಗೆ ಸಡಗರದೊಂದಿಗೆ ಪಾಲ್ಗೊಂಡಿದ್ದರು.  ಬಿಜೆಪಿ ಶಾಸಕರು ಗೈರು: ಕಾಂಗ್ರೆಸ್, ಜೆಡಿಎಸ್ ಮೈತ್ರಿಕೂಟದ ಮುಖ್ಯಮಂತ್ರಿಯಾಗಿ ಎಚ್ ಡಿ ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿಯಾಗಿ ಡಾ.ಜಿ.ಪರಮೇಶ್ವರ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಬಿಜೆಪಿ ಶಾಸಕರು ಗೈರು ಹಾಜರಾಗಿದ್ದರು. ಮುಂಜಾನೆಯಿಂದಲೂ ಮಳೆ: ಮುಂಜಾನೆಯಿಂದಲೂ ನಗರದಲ್ಲಿ ಮಳೆ ಸುರಿಯುತ್ತಲೇ ಇತ್ತು. ನೆಚ್ಚಿನ ನಾಯಕನ ಅಧಿಕಾರ ಸ್ವೀಕಾರ ಸನ್ನಿವೇಶವನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಲಕ್ಷಾಂತರ ಜನರಿಗೆ ಮಳೆಹನಿಗಳ ಸಿಂಚನವೂ ಉತ್ಸಾಹ ಹೆಚ್ಚಿಸಿತು.  ಜೆ.ಪಿ.ನಗರದಿಂದ ವಿಧಾನಸೌಧದತ್ತ ಹೊರಟ ಕುಮಾರಸ್ವಾಮಿ ಮಳೆಯನ್ನು ಸ್ವಾಗತಿಸಿದರು.ದೇವರ ಆಶೀರ್ವಾದ ನಮಗಿದೆ. ನಾಡಿನಲ್ಲಿ ಮುಂದೆ ಒಳ್ಳೆಯದು ಆಗಲಿದೆ ಎಂಬುದರ ಸೂಚಕ ಇದು ಎಂದು ಖುಷಿ ವ್ಯಕ್ತಿ ಪಡಿಸುತ್ತಲೇ ಪತ್ನಿ ಅನಿತಾ ಕುಮಾರಸ್ವಾಮಿ ಮತ್ತು ಪುತ್ರ ನಿಖಿಲ್ ಜೊತೆಗೂಡಿ ಕಾರು ಹತ್ತಿದರು. ದೇವೇಗೌಡರು ಪತ್ನಿ ಚೆನ್ನಮ್ಮ ಮತ್ತು ಕುಟುಂಬದ ಇತರ ಸದಸ್ಯರ ಜೊತೆಗೂಡಿ ವಿಧಾನಸೌಧಕ್ಕೆ ಬಂದರು. ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ನಗುನಗುತ್ತಾ ದೇವೇಗೌಡರನ್ನು ಎದುರುಗೊಂಡು ಮಾತನಾಡಿದರು.  ತಮ್ಮತಮ್ಮ ರಾಜ್ಯಗಳಲ್ಲಿ ಬದ್ಧ ವೈರಿಗಳಾಗಿರುವ ಅನೇಕ ನಾಯಕರು ವಿಧಾನಸೌಧದ ಎದುರು ಪರಸ್ಪರ ಕೈಕುಲುಕಿ ಬಿಜೆಪಿ ವಿರುದ್ಧದಮಹಾಮೈತ್ರಿಯ ಸೂಚನೆ ನೀಡಿದರು. ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರಅಧಿಕಾರ ಸೂತ್ರ ಕೈಗೆತ್ತಿಗೊಳ್ಳುವ ಸಂಭ್ರಮಕ್ಕೆ ದೇಶದ ತೃತೀಯ ರಂಗ ಸಾಕ್ಷಿಯಾಯಿತು. ಮಧ್ಯಾಹ್ನದಿಂದಲೇ ಮೆಟ್ರೊ ರೈಲುಗಳು ತುಂಬಿ ತುಳುಕುತ್ತಿದ್ದವು. ಸಮಾರಂಭ ಮುಗಿದ ನಂತರ ಅಭಿಮಾನಿಗಳು ನೆಚ್ಚಿನ ನಾಯಕನ ಫ್ಲೆಕ್ಸ್ಗಳನ್ನು ಖುಷಿಯಿಂದ ಹೊತ್ತುಕೊಂಡು ಹೊರಟರು.  ಡಿಕೆಶಿ ಸಹೋದರರ ಆಕ್ರೋಶ:  ಇದಕ್ಕೆ ಮುನ್ನಕೆಲಸ ಮಾಡಲು ಮಾತ್ರ ನಾವು ಬೇಕು, ಅಧಿಕಾರ ಬೇರೆಯವರು ಅನುಭವಿಸಬೇಕಾ?’ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಡಿಕೆ ಶಿವಕುಮಾರ್ ಸಹೋದರರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಘಟಿಸಿ, ಅವರ ಮನವೊಲಿಕೆಗೆ ತೀವ್ರ ಕಸರತ್ತು ನಡೆಯಿತು ಎಂದು ಮಾಧ್ಯಮ ವರದಿಗಳೂ ತಿಳಿಸಿದ್ದವು.  ಆಕ್ರೋಶಗೊಂಡ ಡಿಕೆಶಿ  ಸಹೋದರರು ಹಿಲ್ಟನ್ ಹೋಟೆಲ್ ನಿಂದ ಜಾಗ ಖಾಲಿ ಮಾಡಿದ್ದಾರೆ, ಯಾರ ದೂರವಾಣಿ ಕರೆಯನ್ನೂ ಸ್ವೀಕರಿಸುತ್ತಿಲ್ಲ ಎಂದು ವರದಿ ತಿಳಿಸಿತ್ತು.  ಪರಮೇಶ್ವರ್ ಹಾಗೂ ಕೆಸಿ ವೇಣುಗೋಪಾಲ್ ಅವರು ಡಿಕೆ ಶಿವಕುಮಾರ್ ಅವರನ್ನು ಸಂಪರ್ಕಿಸಲು ಯತ್ನಿಸಿದರೂ, ಅದು ಸಾಧ್ಯವಾಗಿಲ್ಲ ಎಂದೂ, ತಮಗೆ ಉಪಮುಖ್ಯಮಂತ್ರಿ ಹುದ್ದೆ ಬೇಕೇ, ಬೇಕು ಎಂದೂ ಡಿಕೆ.ಶಿವಕುಮಾರ್ ಪಟ್ಟು ಹಿಡಿದಿದ್ದಾರೆ ಎಂದೂ ವರದಿ ಹೇಳಿತ್ತು.   ಹಿಲ್ಟನ್ ಹೋಟೆಲ್ ಬಳಿ ಆಗಮಿಸಿದ್ದ ಶಿವಕುಮಾರ್ ಅವರು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ನಾನು ಯಾವ ಹುದ್ದೆ ಬೇಕೆಂದು ಅರ್ಜಿ ಹಾಕಿಲ್ಲ. ಕೆಪಿಸಿಸಿ ಅಧ್ಯಕ್ಷಗಾದಿ ಆಕಾಂಕ್ಷಿಯೂ ಅಲ್ಲ. ನನಗೆ ಸದ್ಯ ಕ್ಷೇತ್ರದ ಶಾಸಕನಾಗಿರಲು ಹೇಳಿದ್ದಾರೆ. ನಾನು ನನ್ನ ಕೆಲಸವನ್ನು ನಿಷ್ಠೆಯಿಂದ ಮಾಡಿದ್ದೇನೆ ಎಂದು ಹೇಳಿದ್ದರು. ’ಎಲ್ಲದಕ್ಕೂ ಹಣೆಯಲ್ಲಿ ಬರೆದಿರಬೇಕು, ಹಣೆಬರಹದ ಮುಂದೆ ಯಾರ್ ಏನ್ ಮಾಡಿದ್ರೂ ನಡೆಯಲ್ಲ. ನಾನು ಚೆಂಡು ಆಡಲ್ಲ, ಚೆಸ್ ಗೇಮ್ ಆಡುವವನು ಎಂದು ಪ್ರತಿಕ್ರಿಯೆ ನೀಡಿದ್ದರು ಎಂದೂ ವರದಿ ತಿಳಿಸಿತ್ತು.

2018: ಶ್ರೀನಗರ: ಜಮ್ಮು ಅಂತಾರಾಷ್ಟ್ರೀಯ ಗಡಿಯಲ್ಲಿ  ಸತತ ಮೂರನೇ ದಿನ ಗಡಿಯಾಚೆಯಿಂದ ನಡೆದ ಗುಂಡಿನ ದಾಳಿ ಮತ್ತು ಶೆಲ್ ದಾಳಿಗೆ ವರ್ಷದ ಮಗು ಸೇರಿ ಮತ್ತು ಮಹಿಳೆ ಸೇರಿ ನಾಲ್ವರು ನಾಗರಿಕರು ಸಾವನ್ನಪ್ಪಿದ್ದು ಇತರ ೩೦ ಮಂದಿ ಗಾಯಗೊಂಡಿದ್ದಾರೆ. ಕಾಶ್ಮೀರ ಕಣಿವೆಯ ಅನಂತನಾಗ್ ಜಿಲ್ಲೆಯಲ್ಲಿ ಗ್ರೇನೇಡ್ ಸ್ಫೋಟದಿಂದ ಕೂಡಾ ೧೦ ನಾಗರಿಕರು ಗಾಯಗೊಂಡರು.   ‘ಜಮ್ಮು ಅಂತಾರಾಷ್ಟ್ರೀಯ ಗಡಿಯಲ್ಲಿ ಗಡಿಯಾಚೆಯಿಂದ ರಾತ್ರಿ ಸಣ್ಣ ಫಿರಂಗಿಗಳಿಂದ ನಡೆದ ಶೆಲ್ ಮತ್ತು ಗುಂಡಿನ ದಾಳಿಯಲ್ಲಿ ನಾಲ್ಕು ಸಾವುಗಳು ಸಂಭವಿಸಿದ್ದು ೩೦ ಮಂದಿ ಗಾಯಗೊಂಡಿದ್ದಾರೆ. ಕಥುವಾದಿಂದ ಅಖ್ನೂರ್ವರೆಗಿನ ಜಿಲ್ಲೆಗಳಲ್ಲಿ ದಾಳಿ ನಡೆದಿದೆ ಎಂದು ಪೊಲೀಸ್ ಮಹಾ ನಿರ್ದೇಶಕ ಎಸ್.ಪಿ. ವೈದ್ ಹೇಳಿದರು.  ಮೃತರಲ್ಲಿ ವರ್ಷದ ಬಾಲಕ ಮತ್ತು ಒಬ್ಬ ಮಹಿಳೆಯೂ ಸೇರಿದ್ದರು. ನಸುಕಿನ ಗಂಟೆ ಸುಮಾರಿಗೆ ಪಾಕ್ ಪಡೆಗಳಿಂದ ಶೆಲ್ ಮತ್ತು ಗುಂಡಿನ ದಾಳಿ ಆರಂಭವಾಯಿತು. ದಾಳಿ ಘಟನೆಯಲ್ಲಿ ಐವರು ಬಿಎಸ್ ಎಫ್ ಸಿಬ್ಬಂದಿ ಕೂಡಾ ಗಾಯಗೊಂಡರು.  ‘ಪಾಕಿಸ್ತಾನಿ ರೇಂಜರುಗಳು ಜಮ್ಮು, ಸಾಂಬಾ ಮತ್ತು ಕಥುವಾ ಜಿಲ್ಲೆಗಳಲ್ಲಿನ ಆರ್ ಎಸ್ ಪುರ, ಅರ್ನಿಯಾ, ರಾಮಗಢ, ಸಾಂಬಾ ಮತ್ತು ಹೀರಾನಗರ ವಿಭಾಗಗಳಲ್ಲಿ ಭಾರಿ ಶೆಲ್ ದಾಳಿ ನಡೆಸಿದರು. ಬಿಎಸ್ ಎಫ್ ಪ್ರತಿದಾಳಿ ನಡೆಸಿ ಗಡಿಯಾಚೆಯ ಪಾಕಿಸ್ತಾನಿ ಪಡೆಗಳಿಗೆ ಭಾರಿ ಹಾನಿ ಉಂಟು ಮಾಡಿತು ಎಂದು ಅಧಿಕಾರಿಗಳು ಹೇಳಿದರು.  ಕಳೆದ ಒಂದು ವಾರದಲ್ಲಿ ಪಾಕಿಸ್ತಾನದಲ್ಲಿ ಹೊಸದಾಗಿ ಕದನ ವಿರಾಮ ಉಲ್ಲಂಘನೆಯಾದ ಬಳಿಕ ಇಬ್ಬರು ಬಿಎಸ್ ಎಫ್ ಸಿಬ್ಬಂದಿ ಸೇರಿದಂತೆ ಸಾವಿನ ಸಂಖ್ಯೆ ೧೦ಕ್ಕೆ ಏರಿದೆ. ಅನಂತನಾಗ್ ಜಿಲ್ಲೆಯ ಬಿಜ್ ಬೆಹರಾ ಪ್ರದೇಶದಲ್ಲಿ ಶಂಕಿತ ಉಗ್ರಗಾಮಿಗಳು ಗ್ರೆನೇಡ್ ಸ್ಫೋಟಿಸಿದ್ದರಿಂದ ಕನಿಷ್ಠ ೧೦ ನಾಗರಿಕರು ಗಾಯಗೊಂಡಿದ್ದಾರೆ ಎಂದು ಮೂಲಗಳು ಹೇಳಿದವು. ಬಿಜ್ ಬೆಹರಾದ ಗೋರಿವಾನ್ ಚೌಕದಲ್ಲಿ ಗ್ರೆನೇಡ್ ದಾಳಿ ನಡೆಯಿತು. ಪರಿಣಾಮವಾಗಿ ೧೦ ನಾಗರಿಕರು ಗಾಯಗೊಂಡರು. ಗಾಯಾಳುಗಳಲ್ಲಿ ೧೨ ವರ್ಷದ ಒಬ್ಬ ಬಾಲಕ ಕೂಡಾ ಸೇರಿದ್ದಾನೆ. ನಾಲ್ವರು ಗಾಯಾಳುಗಳನ್ನು ಶ್ರೀನಗರ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ವಕ್ತಾರರು ಹೇಳಿದರು. ಘಟನೆ ಬಳಿಕ ಪ್ರದೇಶದವನ್ನು ಭದ್ರತಾ ಪಡೆಗಳು ಸುತ್ತುವರಿದವು.
2018: ನವದೆಹಲಿ: ಭಾರತೀಯ ವಾಯು ಪಡೆಯ ಚೀತಾ ಹೆಲಿಕಾಪ್ಟರ್ ಜಮ್ಮು ಕಾಶ್ಮೀರದ ನಾಥಾ ತುದಿಯಲ್ಲಿ  ಪತನಗೊಂಡಿತು. ಐಎಎಫ್ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿರುವ ಸುದ್ದಿ ಸಂಸ್ಥೆಯು, ಹೆಲಿಕಾಪ್ಟರ್ ಒಳಗಿದ್ದ ಎಲ್ಲ ಚಾಲಕ ಸಿಬಂದಿ ಸುರಕ್ಷಿತವಾಗಿ ಪಾರಾಗಿದ್ದಾರೆ; ಆದರೆ ದುರ್ಘಟನೆಯ ನಿಖರ ಕಾರಣ ಪತ್ತೆಯಾಗಿಲ್ಲ ಎಂದು ತಿಳಿಸಿತು. ಕಳೆದ ಏಪ್ರಿಲ್ ೩ರಂದು ಪ್ರಬಲ ಬಿರುಗಾಳಿಯ ಪ್ರತಿಕೂಲ ಸನ್ನಿವೇಶದಲ್ಲಿ ಇಳಿಯಲು ಯತ್ನಿಸಿದ್ದ ಐಎಎಫ್ ಸರಕು ಸಾಗಣೆ ಹೆಲಿಕಾಪ್ಟರ್ ಕೇದಾರನಾಥ ದೇವಾಲಯದ ಸಮೀಪ ಪತನಗೊಂಡಿತ್ತು. ಅದಾಗಿ ಎರಡೇ ತಿಂಗಳಲ್ಲಿ ದುರಂತ ಸಂಭವಿಸಿತು. ನಾಥಾ ತುದಿಯಲ್ಲಿ ಈದಿನ ಪತನಗೊಂಡ ಎಂಐ ೧೭ ಹೆಲಿಕಾಪ್ಟರ್ ಭಾರತೀಯ ಸೇನೆಗೆ ಆಹಾರ ಸಾಮಗ್ರಿಗಳನ್ನು ಒಯ್ಯುತ್ತಿತ್ತು. ಹೆಲಿಕಾಪ್ಟರ್ ಇಳಿಯುತ್ತಿದ್ದಂತೆಯೇ ಅದು ಕಬ್ಬಿಣದ ಗರ್ಡರ್ಗೆ ಢಿಕ್ಕಿ ಹೊಡೆಯಿತು. ಪರಿಣಾಮವಾಗಿ ಹೆಲಿಕಾಪ್ಟರ್ ಒಳಗಿದ್ದ ಆರು ಮಂದಿಗೆ ಗಾಯಗಳಾದವು ಎಂದು ವರದಿಗಳು ಹೇಳಿದವು.

 2018: ಚೆನ್ನೈ: ವೇದಾಂತ ಸಮೂಹದ ಸ್ಟೆರ್ಲೈಟ್ ತಾಮ್ರ ಘಟಕದ ವಿರುದ್ಧ ದಕ್ಷಿಣ ತಮಿಳುನಾಡಿನ ತೂತುಕುಡಿ ಬಂದರು ಪಟ್ಟಣದಲ್ಲಿ ಮತ್ತೆ ಭುಗಿಲೆದ್ದ ಪ್ರತಿಭಟನೆ ವೇಳೆ ನಡೆದ ಪೊಲೀಸ್ ಗೋಲಿಬಾರಿಗೆ ಕಾಳಿಯಪ್ಪನ್ ಹೆಸರಿನ ಯುವಕನೊಬ್ಬ ಬಲಿಯಾಗಿ, ಇತರ ಇಬ್ಬರು ಗಾಯಗೊಂಡರು. ಹಿಂದಿನ ದಿನ ಸ್ಟೆರ್ ಲೈಟ್ ತಾಮ್ರ ಘಟಕವನ್ನು ಮುಚ್ಚುವಂತೆ ಆಗ್ರಹಿಸಿ ನಡೆದ ಬೃಹತ್ ಪ್ರತಿಭಟನೆ ವೇಳೆ ಸಂಭವಿಸಿದ ಹಿಂಸಾಚಾರ, ಪೊಲೀಸ್ ಗೋಲಿಬಾರಿಗೆ ೧೭ ವರ್ಷದ ಬಾಲಕಿ ಸೇರಿ ೧೧ ಜನ ಬಲಿಯಾಗಿದ್ದರು. ಈದಿನ
ಅಣ್ಣಾನಗರದ ೬ನೇ ರಸ್ತೆಯಲ್ಲಿ ಕಲ್ಲುತೂರಾಟ ನಡೆಸುತ್ತಿದ್ದ ಉದ್ರಿಕ್ತ ಗುಂಪೊಂದನ್ನು ಪೊಲೀಸರು ಅಟ್ಟಿಸಿಕೊಂಡು ಹೋದರು. ಗುಂಪು ಪೊಲೀಸರ ಮೇಲಿನ ದಾಳಿಯನ್ನು ತೀವ್ರಗೊಳಿಸಿದಾಗ ಪೊಲೀಸರು ಗುಂಡು ಹಾರಿಸಿದರು. ನಾಲ್ವರು ಪ್ರತಿಭಟನಕಾರರಿಗೆ ಗುಂಡೇಟಿನ ಗಾಯಗಳಾದವು. ಗಾಯಗೊಂಡ ಕಾಳಿಯಪ್ಪನ್ ಅವರನ್ನು ಸರ್ಕಾರಿ ಆಸ್ಪತ್ರೆಗೆ ಒಯ್ಯಲಾಯಿತು. ವೈದ್ಯರು ಅಲ್ಲಿ ಅವರು ಮೃತರಾಗಿದ್ದಾರೆ ಎಂದು ದೃಢ ಪಡಿಸಿದರು. ಗಾಯಾಳುಗಳಿಗೆ ಚಿಕಿತ್ಸೆ ಒದಗಿಸಲಾಗಿದೆ ಎಂದು ಪೊಲೀಸರು ಹೇಳಿದರು. ಪೊಲೀಸ್ ವಾಹನಕ್ಕೆ ಬೆಂಕಿ: ಇದಕ್ಕೆ ಮುನ್ನ ಉದ್ರಿಕ್ತ ಗುಂಪು ಬ್ರೆಯಂಟ್ ನಗರದಲ್ಲಿ ಎರಡು ಪೊಲೀಸ್ ಬಸ್ಸುಗಳಿಗೆ ಬೆಂಕಿ ಹಚ್ಚಿತು. ಅವುಗಳಲ್ಲಿ ಒಂದು ಬಸ್ಸನ್ನು ರಕ್ಷಿಸಲಾಯಿತು ಆದರೆ, ಇನ್ನೊಂದು ಬಸ್ಸು ಸಂಂಪೂರ್ಣ ಭಸ್ಮವಾಯಿತು ಎಂದು ಅವರು ನುಡಿದರು. ಆಸ್ಪತ್ರೆಗೆ ಧುರೀಣರು: ಹಿಂಸೆ ಹಾಗೂ ಗೋಲಿಬಾರ್ ಸಂದರ್ಭದಲ್ಲಿ ಗಾಯಗೊಂಡಿದ್ದ ವ್ಯಕ್ತಿಗಳು ಚಿಕತ್ಸೆ ಪಡೆಯುತ್ತಿರುವ ಸರ್ಕಾರಿ ಆಸ್ಪತ್ರೆಗೆ ದ್ರಾಮಿಡ ಮುನ್ನೇತ್ರ ಕಳಗಂ ಕಾರ್ಯಾಧ್ಯಕ್ಷ ಎಂ.ಕೆ. ಸ್ಟಾಲಿನ್, ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಎಸ್. ತಿರುನಾವುಕ್ಕರಸು, ಮರುಮಲರ್ಚಿ ದ್ರಾವಿಡ ಮುನ್ನೇತ್ರ ಕಳಗಂ ನಾಯಕ ವೈಕೋ, ವಿದ್ಯುತಲೈ ಸಿರುಥೈಗಲ್ ಕಚ್ಚಿ ಸ್ಥಾಪಕ ಥೊಲ್. ತಿರುಮಾವಲನ್ ಮತ್ತು ಮಕ್ಕಳ್ ನೀಧಿ ಮಯ್ಯಮ್  ಸ್ಥಾಪಕ ಕಮಲಹಾಸನ್ ಮತ್ತಿತರರು ಭೇಟಿ ನೀಡಿದರು. ಇದಕ್ಕೂ ಮುನ್ನ ಚಿದಂಬರಂ ನಗರದಲ್ಲಿನ ಸ್ಟೆರ್ಲೈಟ್ ಘಟಕವನ್ನು ಮುಚ್ಚಬೇಕು ಎಂದು ಒತ್ತಾಯಿಸಿ ಸರದಿ ನಿರಶನ ಆರಂಭಿಸಿದ್ದ ಮಾರ್ಕ್ಸ್ವಾದಿ ಕಮ್ಯೂನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಕೆ. ಬಾಲಕೃಷ್ಣನ್ ಮತ್ತು ಪಕ್ಷದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರು. ತೂತುಕುಡಿಯಲ್ಲಿನ ವೇದಾಂತ ಕಂಪೆನಿಯ ಸ್ಟರ್ಲೈಟ್ ಕೈಗಾರಿಕಾ ಘಟಕವನ್ನು ಪರಿಸರ ಸಂರಕ್ಷಣೆಗಾಗಿ ಮುಚ್ಚಬೇಕೆಂದು ಆಗ್ರಹಿಸಿದ ಕಳೆದ ಮೂರು ತಿಂಗಳಿಂದ ಪ್ರತಿಭಟನೆಗಳು ನಡೆಯುತ್ತಿದ್ದವು. ಹಿಂದಿನ ದಿನ ಪ್ರತಿಭಟನಕಾರರ ಮೇಲೆ ಸೆಲ್ಫ್ ಲೋಡಿಂಗ್ ಅಸಾಲ್ಟ್ ರೈಫಲ್ ಬಳಸಿಕೊಂಡು ಗುಂಡು ಹಾರಿಸಿ ೧೧ ಜೀವಗಳನ್ನು ಬಲಿ ಪಡೆದುದಕ್ಕೆ ವ್ಯಾಪಕ ಟೀಕೆ, ಖಂಡನೆ ವ್ಯಕ್ತವಾಗಿತ್ತು. ನಡುವೆ ಮಧುರೆಯಲ್ಲಿನ ಮದ್ರಾಸ್ ಹೈಕೋರ್ಟ್ ಪೀಠವು ತೂತುಕುಡಿಯಲ್ಲಿ ಸ್ಟರ್ಲೈಟ್ ತಾಮ್ರ ಘಟಕದ ವಿಸ್ತರಣೆಗೆ ತಡೆಯಾಜ್ಞೆ ನೀಡಿತು.

2018: ಬೆಂಗಳೂರು: ರೈತರ ಸಾಲವನ್ನು ಯಾವ ರೀತಿ ಮನ್ನಾ ಮಾಡಬೇಕು ಎಂಬ ಬಗ್ಗೆ ಈಗಾಗಲೇ ಬ್ಲೂಪ್ರಿಂಟ್ ಸಿದ್ಧವಾಗಿದೆ. ಇದರ ಕ್ರೆಡಿಟ್ ಕಾಂಗ್ರೆಸ್ಸಿಗೂ ಸಿಗಲಿದೆ ಎಂದು ನೂತನ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರು ಇಲ್ಲಿ ಹೇಳಿದರು. ವಿಧಾನಸೌಧದ ಮುಂಭಾಗದಲ್ಲಿ ರಾಜ್ಯದ ೨೫ನೇ ಮುಖ್ಯಮಂತ್ರಿಯಾಗಿ, ಮತ್ತು ಡಾ. ಜಿ. ಪರಮೇಶ್ವರ್ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಚೊಚ್ಚಲ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುಮಾರ ಸ್ವಾಮಿರಾಜ್ಯದ ಆರೂವರೆ ಕೋಟಿ ಜನರನ್ನು ರಕ್ಷಿಸುವ ಸ್ಥಾನದಲ್ಲಿ ನಾನಿದ್ದೇನೆ. ನಾನು ಈಗಸಾಂದರ್ಭಿಕ ಶಿಶು ಎಂದು ನುಡಿದರು. ‘ನಮ್ಮ ಪಕ್ಷಕ್ಕೆ ಪೂರ್ಣ ಬಹುಮತ ದೊರೆತು, ನಾನು ಅಧಿಕಾರಕ್ಕೆ ಬಂದ ೨೪ ಗಂಟೆಗಳಲ್ಲಿ ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ಜನರಿಗೆ ಭರವಸೆ ನೀಡಿದ್ದೆ. ಆದರೆ ಸಮಿಶ್ರ ಸರ್ಕಾರ ರಚಿಸಿರುವುದರಿಂದ ಎಲ್ಲರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ. ಸಾಲಮನ್ನಾ ವಿಚಾರಕ್ಕೆ ಸಂಬಂಧಿಸಿ ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇನೆ. ಅವರು ಈಗಾಗಲೇ ನೀಲನಕ್ಷೆ ಸಿದ್ಧಪಡಿಸಿದ್ದಾರೆ ಎಂದು ಅವರು ಹೇಳಿದರು. ‘ನಾನು ಜಾತಿ ಹಿಡಿದುಕೊಂಡು ರಾಜಕಾರಣ ಮಾಡುವುದಿಲ್ಲ. ಎಲ್ಲಾ ಸಮಾಜದವರು ಶಾಂತಿಯಿಂದ ಸಮಾಜದಲ್ಲಿ ಬದುಕುವಂತಾಗಬೇಕು. ರಾಜ್ಯ ರಸಋಷಿ ಕುವೆಂಪು ಅವರ ಕವನವಾದ ಸರ್ವ ಜನಾಂಗದ ತೋಟವಾಗಬೇಕು ಎಂಬ ಆಶಯ ನಮ್ಮದು ಎಂದು ಅವರು ನುಡಿದರು. ತಮ್ಮ ನಾಯಕತ್ವದ ಸರ್ಕಾರದ ಈದಿನ ಅಸ್ತಿತ್ವಕ್ಕೆ ಬಂದಿದೆ. ಸರ್ಕಾರ ಉಳಿಯುತ್ತದೆಯೇ ಎಂಬ ಬಗ್ಗೆ ಅನುಮಾನ ಬೇಡ. ಇದು ಸುಭದ್ರ ಸರ್ಕಾರವಾಗಿ ಇರಲಿದೆ. ದೇಶದ ಹಿತ ಕಾಪಾಡುವ ಸಲುವಾಗಿ ಸಮ್ಮಿಶ್ರ ಸರ್ಕಾರ ರಚಿಸಬೇಕಾಗಿ ಬಂತು ಎಂದು ಅವರು ನುಡಿದರು. ಹಿತೈಷಿಗಳು, ನಾಡಿನ ಜನರ ಭರವಸೆಯನ್ನು ಹುಸಿಗೊಳಿಸುವುದಿಲ್ಲ, ಹಿಂದಿನ ಸರ್ಕಾರಗಳ ಉತ್ತಮ ಯೋಜನೆಗಳನ್ನು ಮುಂದುವರೆಸಲಾಗುವುದು ಎಂದು ಅವರು ಹೇಳಿದರು.  ಪರಸ್ಪರ ವಿಶ್ವಾಸಕ್ಕೆ ಕೊರತೆಯಾಗದಂತೆ ಆಡಳಿತ ನಡೆಯುವುದೇ ಎಂಬ ನಿಮ್ಮ ಅನುಮಾನವನ್ನು ನನ್ನ ನಡವಳಿಕೆ ಮೂಡಲಕ ಪರಿಸುವೆ ಎಂದು ಮುಖ್ಯಮಂತ್ರಿ ನುಡಿದರು.  ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದ ಬಗ್ಗೆ ಬಿಜೆಪಿ ಮಿತ್ರರು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನೈತಿಕತೆ, ಅನೈತಿಕತೆ ಬಗ್ಗೆ ಬಹಳಷ್ಟು ಚರ್ಚೆಯಾಗುತ್ತಿದೆ. ಈಗ ಯಾರು ನೈತಿಕವಾಗಿ ಉಳಿದಿದ್ದಾರೆ ಎಂದು ನಾವು ಕೇಳಿಕೊಳ್ಳಬೇಕಾಗುತ್ತದೆ. ದಕ್ಷಿಣ ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಏರಲು ಅವಕಾಶ ಮಾಡಿಕೊಟ್ಟಿದ್ದು ನಾನು. ಹಾಗೆಯೇ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಿದವನೂ ನಾನೇ ಎಂದು ನೆನಪಿಸಿದರು.  ಅವೆಲ್ಲ ನಡೆದು ೧೨ ವರ್ಷಗಳು ಕಳೆದು ಹೋಗಿದೆ. ಈದಿನದ ಸಮಾರಂಭಕ್ಕೆ ಘಟಾನುಘಟಿ ನಾಯಕರು ಆಗಮಿಸಿದ್ದಾರೆ. ಇದು ರಾಜ್ಯ ರಾಜಕೀಯದ ಇತಿಹಾಸದಲ್ಲಿಯೇ ಪ್ರಥಮ. ಹೀಗಾಗಿ ನಾನೀಗ ಬದಲಾದ ರಾಜಕೀಯ ಪರಿಸ್ಥಿತಿಯಸಾಂದರ್ಭಿಕ ಶಿಶು ಎಂದು ಕುಮಾರ ಸ್ವಾಮಿ ಹೇಳಿದರು.  ಚುನಾವಣೆಯಲ್ಲಿ ನಮಗೆ ಸ್ಪಷ್ಟ ಬಹುಮತ ಬರದೆ ಇದ್ದರೆ ನಾವು ವಿರೋಧ ಪಕ್ಷದ ಸ್ಥಾನದಲ್ಲಿ ಕೂರುವುದಾಗಿ ಹೇಳಿದೆ. ಆದರೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಾಗ ರಾಷ್ಟ್ರೀಯ ನಾಯಕರು ನನ್ನನ್ನು ಮುಖ್ಯಮಂತ್ರಿಯಾಗುವಂತೆ ಮನವೊಲಿಸಿದರು. ಆದ ಕಾರಣ ನನ್ನ ವೈಯಕ್ತಿಕ ಹಿತಾಸಕ್ತಿ ಬದಿಗೊತ್ತಿ ಅಧಿಕಾರ ವಹಿಸಿಕೊಂಡೆ ಎಂದು ಅವರು ವಿವರಿಸಿದರು. ಮುಂದಿನ ದಿನಗಳಲ್ಲಿ  ಜೆಡಿಎಸ್- ಕಾಂಗ್ರೆಸ್ ಹೊಂದಾಣಿಕೆ ಸರಿಯಾದ ನಿರ್ಧಾರ ಎಂಬು ಸಾಬೀತುಪಡಿಸುವ ರೀತಿಯಲ್ಲಿ ಆಡಳಿತ ನಡೆಸುತ್ತೇನೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಬರುವುದಿಲ. ರಾಜ್ಯದ ಎಲ್ಲ ವರ್ಗದ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು ಅವರು ನುಡಿದರು. ಮೇ ೨೫ರಂದು ವಿಶ್ವಾಸಮತ: ವಿಧಾನಸಭೆಯಲ್ಲಿ ಮೇ ೨೫ರಂದು ವಿಶ್ವಾಸಮತ ಯಾಚನೆ ನಡೆಯಲಿದೆ. ಬಳಿಕ ಮುಂದಿನ ನಡೆ ಬಗ್ಗೆ ವಿವರ ನೀಡುವೆ ಎಂದು ಮುಖ್ಯಮಂತ್ರಿ ನುಡಿದರು.

2018: ನವದೆಹಲಿ: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಎಚ್.ಡಿ. ಕುಮಾರ ಸ್ವಾಮಿ ಮತ್ತು ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಡಾ. ಜಿ. ಪರಮೇಶ್ವರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದರು.  ‘ಕರ್ನಾಟಕದ ಮುಖ್ಯಮಂತ್ರಿಯಾಗಿ ಮತ್ತು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಶ್ರೀ ಎಚ್.ಡಿ. ಕುಮಾರ ಸಾಮಿ ಜಿ ಮತ್ತು ಡಾ. ಪರಮೇಶ್ವರ್ ಜಿ ಅವರಿಗೆ ಅವರಿಗೆ ಮುಂದಿನ ಅವಧಿಗಾಗಿ ಶುಭಾಶಯಗಳನ್ನು ಹಾರೈಸುವೆ ಎಂದು ಮೋದಿ ಟ್ವೀಟ್ ಮಾಡಿದರು. ಬಳಿಕ ಕುಮಾರ ಸ್ವಾಮಿ ಅವರಿಗೆ ದೂರವಾಣಿ ಕರೆಯನ್ನು ಮಾಡಿ ಶುಭ ಹಾರೈಸಿದರು.

2018: ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಅಶ್ವಮೇಧದ ಕುದುರೆಯನ್ನು ನಾವು ಕಟ್ಟಿ ಹಾಕಿದ್ದೇವೆ. ಇನ್ನು ಜೀವ ಇಲ್ಲದ ಕುದುರೆಯನ್ನು ಹಿಡಿದುಕೊಂಡು ಅಮಿತ್ ಶಾ ಅವರು ಮೋದಿ ಅವರ ಬಳಿಗೆ ಹೋಗಬೇಕಷ್ಟೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರು ಇಲ್ಲಿ ಛೇಡಿಸಿದರು. ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ನಡೆಸಿದ ತಮ್ಮ ಚೊಚ್ಚಲ ಪತ್ರಿಕಾಗೋಷ್ಠಿಯಲ್ಲಿ ಮಾತು ಹೇಳಿದ ಕುಮಾರ ಸ್ವಾಮಿ ಅವರು೨೦೧೯ರ ಲೋಕಸಭಾ ಚುನಾವಣೆಯಲ್ಲಿ ಜನತಾದಳ (ಎಸ್) ಮತ್ತು ಕಾಂಗ್ರೆಸ್ ಜೊತೆಯಾಗಿಯೇ ಬಿಜೆಪಿ ವಿರುದ್ಧ ಹೋರಾಡಲಿವೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು. ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡುವ ಬಿಜೆಪಿಯವರು ಐದು ವರ್ಷ ಆಡಳಿತದಲ್ಲಿದ್ದಾಗ ಏನು ಕೊಟ್ಟಿದ್ದರು ಎಂದು ಪ್ರಶ್ನಿಸಿದ ಮುಖ್ಯಮಂತ್ರಿಉತ್ತಮವಾದ ಲೋಕಾಯುಕ್ತರನ್ನು ನೇಮಕ ಮಾಡುವ ಕೆಲಸ ಆಗಿದ್ದು ಹಿಂದೆ ನನ್ನ ಸರ್ಕಾರ ಇದ್ದಾಗ ಎಂದು ನುಡಿದರು. ಮಹದಾಯಿ ವಿಚಾರದಲ್ಲಿ ಪ್ರಧಾನಿ ಮೋದಿ ಅವರು ಸುಳ್ಳು ಹೇಳುತ್ತಾರೆ. ಚುನಾವಣೆ ಬಳಿಕ ಮೂರು ತಿಂಗಳಲ್ಲಿ ಸಮಸ್ಯೆ ಬಗೆ ಹರಿಸುತ್ತೇನೆ ಅಂದಿದ್ದರು. ಸದ್ಯ ನ್ಯಾಯಾಧಿಕರಣ ಮೂರೂ ರಾಜ್ಯಗಳ ವಾದ ಆಲಿಸಿದೆ. ತೀರ್ಪು ಬರುವುದು ಬಾಕಿ ಇದೆ. ತೀರ್ಪು ಬಂದ ಬಳಿಕ ಮುಂದಿನ ನಡೆಯ ಬಗ್ಗೆ ನಿರ್ಧರಿಸಲಾಗುವುದು ಎಂದು ಮುಖ್ಯಮಂತ್ರಿ ನುಡಿದರು.

2009: ಸಚಿವ ಸ್ಥಾನ ಮತ್ತು ಖಾತೆಗಳ ವಿಚಾರದಲ್ಲಿ ಮಿತ್ರ ಪಕ್ಷ ಡಿಎಂಕೆಯೊಂದಿಗಿನ ಬಿಕ್ಕಟ್ಟು ಮುಂದುವರಿದ ಕಾರಣ ಪ್ರಮಾಣ ವಚನ ಸ್ವೀಕರಿಸಿದ ಎಲ್ಲ ಸಚಿವರಿಗೂ ಖಾತೆಗಳ ಹಂಚಿಕೆಯಾಗಲಿಲ್ಲ. ಆರು ಮಂದಿ ಪ್ರಮುಖರಿಗೆ ಮಾತ್ರ ಪ್ರಧಾನಿ ಮನಮೋಹನ್ ಸಿಂಗ್ ಅವರು ಖಾತೆಗಳನ್ನು ಹಂಚಿದರು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯಸಭಾ ಸದಸ್ಯ ಎಸ್.ಎಂ.ಕೃಷ್ಣ ಅವರಿಗೆ ಮಹತ್ವದ ವಿದೇಶಾಂಗ ಖಾತೆಯ ಜವಾಬ್ದಾರಿ ನೀಡಲಾಯಿತು. ಹಣಕಾಸು ಸಚಿವರಾಗಿ ಪ್ರಣವ್ ಮುಖರ್ಜಿ ಹಾಗೂ ಚಿದಂಬರಂ ಗೃಹ ಇಲಾಖೆ ಹೊಣೆಯನ್ನು ಮತ್ತೆ ಹೊತ್ತುಕೊಂಡರು. ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರು ರೈಲ್ವೆ ಖಾತೆಯನ್ನು, ಶರದ್ ಪವಾರ್ ಕೃಷಿ, ಆಹಾರ, ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳ ಖಾತೆ ಮತ್ತು ಎ.ಕೆ.ಆಂಟನಿ ಅವರು ರಕ್ಷಣಾ ಖಾತೆ ಪಡೆದರು.

2009: ಮಳೆಯಾಶ್ರಿತ ಜಮೀನಿನ ಫಲವತ್ತತೆ ಅರಿಯದೆ ರೈತರು ನಿರೀಕ್ಷಿತ ಉತ್ಪಾದನೆ ಪಡೆಯಲು ಸಾಧ್ಯವಾಗುತ್ತಿಲ್ಲ. ರಾಜ್ಯ ಸರ್ಕಾರವು ಈ ಸಮಸ್ಯೆಗೆ ಪರಿಹಾರವಾಗಿ ದೇಶಕ್ಕೆ ಮಾದರಿಯಾಗಬಲ್ಲ 'ಭೂ-ಚೇತನ' ಯೋಜನೆಯನ್ನು ಜಾರಿಗೆ ತಂದಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾವೇರಿಯಲ್ಲಿ ಹೇಳಿದರು. ಒಣ ಬೇಸಾಯದಲ್ಲಿ ತಾಂತ್ರಿಕತೆ ಅಳವಡಿಕೆ ಹಾಗೂ ಉತ್ಪಾದನೆ ಹೆಚ್ಚಿಸುವ 'ಭೂ-ಚೇತನ' ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

2009: ನೇಪಾಳದ ನೂತನ ಪ್ರಧಾನಿಯಾಗಿ ಕಮ್ಯುನಿಸ್ಟ್ ನಾಯಕ ಮಾಧವ ಕುಮಾರ್ ನೇಪಾಳ್ (56) ಅವಿರೋಧವಾಗಿ ಆಯ್ಕೆಯಾದರು. ಈ ಮೂಲಕ ದೇಶದ ಮೂರು ವಾರಗಳ ರಾಜಕೀಯ ಅನಿಶ್ಚಿತತೆ ಕೊನೆಗೊಂಡಿತು. ಮಾವೋವಾದಿ ಪಕ್ಷದ ನಾಯಕ ಪುಷ್ಪ ಕಮಲ್ ದಹಾಲ್ ಪ್ರಚಂಡ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ, 22 ಪಕ್ಷಗಳ ಬೆಂಬಲ ಹೊಂದಿರುವ ಸಿಪಿಎನ್- ಯುಎಂಎಲ್ ಮುಖಂಡ ನೇಪಾಳ್ ಅವರು ಬೆಳಿಗ್ಗೆ ನಾಮಪತ್ರ ಸಲ್ಲಿಸಿದ್ದರು. ಪ್ರತಿಯಾಗಿ ಯಾರೊಬ್ಬರೂ ನಾಮಪತ್ರ ಸಲ್ಲಿಸದೇ ಇದ್ದುದು ಅವರ ಅವಿರೋಧ ಆಯ್ಕೆಗೆ ಕಾರಣವಾಯಿತು. ಸದನದಲ್ಲಿ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಮಾವೋವಾದಿಗಳು ಸಭೆಯನ್ನು ಬಹಿಷ್ಕರಿಸಿ, ಸರ್ಕಾರದಲ್ಲಿ ಪಾಲ್ಗೊಳ್ಳದೆ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳುವುದಾಗಿ ಸ್ಪಷ್ಟಪಡಿಸಿದರು.

2009: ಬಹು ದೊಡ್ಡ ಲಂಚ ಹಗರಣದ ಸುಳಿಯಲ್ಲಿ ಸಿಲುಕಿದ್ದ ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷ ರೋಹ್ ಮೂ ಹ್ಯೂನ್ (62) ಅವರು ಸೋಲ್‌ನಲ್ಲಿ ತಮ್ಮ ಮನೆಯ ಸಮೀಪದ ಬೆಟ್ಟದ ಮೇಲಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡರು. ಇದಕ್ಕೆ ಮುನ್ನ ತಮ್ಮ ಕುಟುಂಬದವರಿಗಾಗಿ ಪತ್ರ ಬರೆದಿಟ್ಟ ಅವರು ಅದರಲ್ಲಿ, 'ಬದುಕು ತುಂಬಾ ಕಷ್ಟ ಎನಿಸುತ್ತಿದೆ. ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಈ ಕೆಲಸದಿಂದ ಬಹಳ ಮಂದಿಗೆ ತೊಂದರೆಯಾಗುತ್ತಿದೆ. ದಯವಿಟ್ಟು ಕ್ಷಮಿಸಿ' ಎಂದು ತಿಳಿಸಿದರು. ರೋಹ್ ಮತ್ತು ಅವರ ಕುಟುಂಬ ಲಂಚ ಪಡೆದಿದ್ದುದು ಕೆಲ ದಿನಗಳ ಹಿಂದೆ ಬೆಳಕಿಗೆ ಬಂದಿತ್ತು. 13 ಗಂಟೆಗಳ ಸುದೀರ್ಘ ವಿಚಾರಣೆಯ ಸಂದರ್ಭದಲ್ಲಿ, ದಕ್ಷಿಣ ಕೊರಿಯಾದ ಬಂಧಿತ ವ್ಯಾಪಾರಿಯೊಬ್ಬನಿಂದ 6 ದಶಲಕ್ಷ ಡಾಲರ್ ಹಣವನ್ನು ಲಂಚದ ರೂಪದಲ್ಲಿ ಪಡೆದಿರುವುದಾಗಿ ರೋಹ್ ಒಪ್ಪಿಕೊಂಡಿದ್ದರು..

2009: ವಿವಿಧ ಸ್ವಾದಗಳಲ್ಲಿ ಎಳನೀರನ್ನು ಪರಿಚಯಿಸುವ ಉದ್ದೇಶದಿಂದ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಹಮ್ಮಿಕೊಂಡ ಎರಡು ದಿನಗಳ 'ಎಳನೀರು ಜಾತ್ರೆ'ಯು ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ಬಿಳಿಗೆರೆ ಗ್ರಾಮದ ಹೊನ್ನಮ್ಮನ ತೋಪಿನಲ್ಲಿ ಆರಂಭವಾಯಿತು. ರಾಜ್ಯ ರೈತ ಸಂಘ, ಕಾಮಧೇನು ಯುವಕ ರೈತ ಸಂಘ ಸೇರಿದಂತೆ 20ಕ್ಕೂ ಹೆಚ್ಚು ಸಂಘಟನೆಗಳು ಒಟ್ಟಾಗಿ ಹಮ್ಮಿಕೊಂಡ ಈ ಜಾತ್ರೆಯಲ್ಲಿ ಮೊದಲ ದಿನವೇ ಎಂಟು ಸಾವಿರಕ್ಕೂ ಹೆಚ್ಚು ಎಳನೀರು ಮಾರಾಟವಾಯಿತು. ಮೇಳದಲ್ಲಿ ಕಲ್ಲುಸಕ್ಕರೆ, ನಿಂಬೆ ಮತ್ತು ಒಂದು ಚಿಟಿಕೆ ಉಪ್ಪು ಬೆರೆಸಿದ ಎಳನೀರು, ಜೇನುತುಪ್ಪ ಬೆರೆಸಿದ ಎಳನೀರು, ಪೆಪ್ಪರ್ ಬೆರೆಸಿದ ಎಳನೀರು. ಎಳನೀರು ಲಸ್ಸಿ ಲಭ್ಯವಿದ್ದವು. ಶಾಸಕರು, ರೈತಸಂಘದ ಮುಖಂಡರು, ಪ್ರಗತಿಪರ ರೈತ ಪ್ರಮುಖರು ಎಳನೀರು ಕುಡಿಯುವ ಮೂಲಕ ಪರಿಷೆಗೆ ಚಾಲನೆ ನೀಡಿದರು.

2009: ಪ್ರಕೃತಿ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಆತಂಕದಿಂದ ಗುಂಡ್ಯ ಜಲ ವಿದ್ಯುತ್ ಯೋಜನೆಗೆ ಪರಿಸರವಾದಿಗಳು, ಸಾರ್ವಜನಿಕರು ಮತ್ತು ಸ್ಥಳೀಯ ರೈತರ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದರೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಯೋಜನೆಗೆ ಅಡಿಗಲ್ಲನ್ನಿಟ್ಟರು. ಹಾಸನದ ಎತ್ತಿನಹಳ್ಳದಲ್ಲಿ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಾಸನದಿಂದ 78 ಕಿಮೀ ದೂರದ ಪಶ್ಚಿಮ ಘಟ್ಟದ ದಟ್ಟ ಅರಣ್ಯದ ನಡುವೆ ಯೋಜನೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಘಟ್ಟದ ಪ್ರಕೃತಿಯ ಮಡಿಲಿನ ನಡುವೆ ನಾಲ್ಕು ಘಟಕಗಳಿಂದ ಎರಡು ಹಂತದಲ್ಲಿ 400 ಮೆಗಾವಾಟ್ ವಿದ್ಯುತ್ ಉತ್ಪಾದಿಸಲಾಗುತ್ತದೆ, ವಾರ್ಷಿಕ 1002 ದಶಲಕ್ಷ ಯೂನಿಟ್ ವಿದ್ಯುತ್ತನ್ನು ನಾಡಿಗೆ ಸರಬರಾಜು ಮಾಡುವ ಉದ್ದೇಶವಿದೆ. ಪ್ರಸ್ತುತ ಯೋಜನೆಗೆ ಒಟ್ಟು 1119.56 ಕೋಟಿ ರೂಪಾಯಿ ವೆಚ್ಚವಾಗುವ ನಿರೀಕ್ಷೆ ಇದೆ ಎಂದು ಹೇಳಿದರು.

2009: ಅಮೆರಿಕದ ಅತ್ಯಂತ ದೊಡ್ಡ ವಿಫಲ ಬ್ಯಾಂಕುಗಳಲ್ಲಿ ಒಂದಾದ ಫ್ಲೋರಿಡಾ ಮೂಲದ ಬ್ಯಾಂಕ್ ಯುನೈಟೆಡ್ ಕೂಡ ಅಂಗಾತ ಮಲಗಿತು. ಇದರೊಂದಿಗೆ 2009ರಲ್ಲಿ ಇಲ್ಲಿಯವರೆಗೆ ಮುಚ್ಚಿದ ಅಮೆರಿಕದ ಬ್ಯಾಂಕುಗಳ ಸಂಖ್ಯೆ 34ಕ್ಕೆ ಏರಿತು. ಬ್ಯಾಂಕನ್ನು ಫೆಡರಲ್ ಡಿಪಾಸಿಟ್ ಇನ್ಶುರೆನ್ಸ್ ಕಾರ್ಪೊರೇಷನ್ (ಎಫ್‌ಡಿಐಸಿ) ಮುಟ್ಟುಗೋಲು ಹಾಕಿಕೊಂಡಿತು. ಬ್ಯಾಂಕಿನ ಆಸ್ತಿ ಮೌಲ್ಯ 12.80 ದಶಲಕ್ಷ ಅಮೆರಿಕ ಡಾಲರ್ ಇದ್ದು ಠೇವಣಿ ಮೊತ್ತ 8.6ದಶಲಕ್ಷ ಅಮೆರಿಕ ಡಾಲರ್. ಆರ್ಥಿಕ ಕುಸಿತದ ಹೊಡೆತಕ್ಕೆ ಸಿಲುಕಿದ ಅಮೆರಿಕದ ಸುಮಾರು 48 ಬ್ಯಾಂಕುಗಳ ವಹಿವಾಟಿನಲ್ಲಿ ತೀವ್ರ ಕುಸಿತ ಕಂಡುಬಂದು, ಇವುಗಳ ಭವಿಷ್ಯವೂ ಅತಂತ್ರವಾಗಿದೆ ಎಂದು ಶಂಕಿಸಲಾಯಿತು.

2008: ಸರಿಯಾಗಿ ಮಧ್ಯರಾತ್ರಿ 12.05ಕ್ಕೆ ಏರ್ ಇಂಡಿಯಾ ವಿಮಾನವು ಬೆಂಗಳೂರಿನಿಂದ ಸಿಂಗಾಪುರಕ್ಕೆ ಪ್ರಯಾಣ ಬೆಳೆಸುವುದರೊಂದಿಗೆ ದೇವನಹಳ್ಳಿ ಸಮೀಪ ನಿರ್ಮಿಸಿದ ನೂತನ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಅಧಿಕೃತವಾಗಿ ಕಾರ್ಯಾರಂಭ ಮಾಡಿತು. ಮುಂಬೈಯಿಂದ ಏರ್ ಇಂಡಿಯಾದ (ಐಸಿ 609) ಮೊದಲ ವಿಮಾನವು ಇದಕ್ಕೆ ಮುನ್ನ ರಾತ್ರಿ 10ಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದು ಇಳಿಯುತ್ತಿದ್ದಂತೆಯೇ ಪ್ರಯಾಣಿಕರನ್ನು ಸಂಭ್ರಮದಿಂದ ಸ್ವಾಗತಿಸಲಾಯಿತು. ನೂತನ ವಿಮಾನ ನಿಲ್ದಾಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಯಾಣಿಕರು ಎಚ್ ಎ ಎಲ್ ವಿಮಾನ ನಿಲ್ದಾಣಕ್ಕಿಂತ ಇದು ತುಂಬಾ ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ವಿಮಾನ ನಿಲ್ದಾಣ ಕಾರ್ಯಾರಂಭದ ಕ್ಷಣಗಳು: ರಾತ್ರಿ 10ಕ್ಕೆ ಮುಂಬೈನಿಂದ ಏರ್ ಇಂಡಿಯಾದ ಮೊದಲ ವಿಮಾನ ಆಗಮನ. 12.05ಕ್ಕೆ ಏರ್ ಇಂಡಿಯಾ ವಿಮಾನ ಸಿಂಗಪುರಕ್ಕೆ ನಿರ್ಗಮನ. ರಾತ್ರಿ 11.30ಕ್ಕೆ ಎಚ್ಎಎಲ್ ವಿಮಾನನಿಲ್ದಾಣದಿಂದ ಸಿಂಗಪುರ ಏರ್ಲೈನ್ಸ್ ವಿಮಾನದ ಕೊನೆಯ ಪ್ರಯಾಣ. ಇದರೊಂದಿಗೆ ಎಚ್ಎ ಎಲ್ ವಿಮಾನ ನಿಲ್ದಾಣ ಸ್ಥಗಿತಗೊಂಡಿತು. ದೇವನಹಳ್ಳಿ ನಿಲ್ದಾಣದ ಕಾರ್ಯಾರಂಭ ಸಮಾರಂಭಕ್ಕಾಗಿ ವಿಮಾನ ನಿಲ್ದಾಣವನ್ನು ನವ ವಧುವಿನಂತೆ ಸಿಂಗರಿಸಲಾಗಿತ್ತು. ಇದಕ್ಕೆ ಮೊದಲು ಈ ಸಮಾರಂಭ ಮೂರು ಬಾರಿ ಮುಂದೂಡಿಕೆಯಾಗಿತ್ತು.

2008: ಸ್ಥಗಿತಗೊಂಡ ವಿವಾದಿತ ಹೊಗೇನಕಲ್ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಆರಂಭದ ಇಂಗಿತವನ್ನು ನೀಡಿದ ತಮಿಳನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರು, ಕಾಮಗಾರಿಯನ್ನು ನಿಗದಿತ ಸಮುಯ 2011ರ ಹೊತ್ತಿಗೆ ಮುಗಿಸಬೇಕೆಂದು ಈದಿನ ಅಧಿಕಾರಿಗಳಿಗೆ ಸೂಚನೆ ನೀಡಿದರು. ತಮಿಳುನಾಡು ವ್ಯಾಪ್ತಿಯಲ್ಲಿ ಹರಿಯುವ ಕಾವೇರಿನದಿಗೆ ಕಟ್ಟೆ ಕಟ್ಟಿ ಧರ್ಮಪುರಿ ಮತ್ತು ಕೃಷ್ಣಗಿರಿ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ 1,334 ಕೋಟಿ ರೂಪಾಯಿಯ ಯೋಜನೆಯನ್ನು ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿತ್ತು.
ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ಗಡಿಯಲ್ಲಿ ಕೈಗೆತ್ತಿಕೊಂಡ ಈ ಯೋಜನೆ, ಕರುಣಾನಿಧಿ ಮತ್ತು ಯೋಜನೆ ವಿರೋಧಿಸುವ ಕರ್ನಾಟಕದ ರಾಜಕಾರಣಿಗಳ ನಡುವೆ ಮಾತಿನ ಸಮರಕ್ಕೆ ಕಾರಣವಾಗಿತ್ತು. ಕನ್ನಡಪರ ಸಂಘಟನೆಗಳೂ ಈ ಯೋಜನೆ ಜಾರಿಗೆ ಆಕ್ಷೇಪ ವ್ಯಕ್ತಪಡಿಸಿದ್ದವು.

2008: ರಾಷ್ಟ್ರದ ರಾಜಧಾನಿ ದೆಹಲಿ ಸುತ್ತಮುತ್ತ ತಲ್ಲಣ ಎಬ್ಬಿಸಿದ್ದ ಬಾಲಕಿ ಮತ್ತು ಮನೆ ಕೆಲಸಗಾರನ ಕೊಲೆ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಬಾಲಕಿಯ ತಂದೆ, ಹೆಸರಾಂತ ದಂತವೈದ್ಯ ರಾಜೇಶ್ ತಲ್ವಾರ್ ಅವರನ್ನು ಬಂಧಿಸಿದರು. ಘಟನೆ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿ ತಲ್ವಾರ್ ಅವರನ್ನು ಬಂಧಿಸಲಾಗಿದೆ ಎಂದು ಮೀರತ್ ವಲಯದ ಐಜಿಪಿ ಗುರುದರ್ಶನ್ ಸಿಂಗ್ ತಿಳಿಸಿದರು. 2008ರ ಮೇ 15-16ರ ನಡುವಿನ ರಾತ್ರಿ ನೋಯ್ಡಾದಲ್ಲಿ ನಡೆದ ಘಟನೆಯಲ್ಲಿ ದೆಹಲಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಆಋಷಿಯನ್ನು (14) ಮಲಗುವ ಕೊಠಡಿಯಲ್ಲಿ ಗಂಟಲು ಸೀಳಿ ಕೊಲೆ ಮಾಡಲಾಗಿತ್ತು. ಆರಂಭದಲ್ಲಿ ಈ ದುಷ್ಕೃತ್ಯವನ್ನು ನಾಪತ್ತೆಯಾಗಿದ್ದ ಮನೆ ಕೆಲಸಗಾರ ಹೇಮರಾಜ್ (45) ಎಸಗಿರಬೇಕೆಂದು ಶಂಕಿಸಲಾಗಿತ್ತು. ಆದರೆ ಮರುದಿನವೇ ಹೇಮರಾಜನ ಶವ ಅದೇ ಮನೆಯ ಛಾವಣಿ ಮೇಲೆ ಪತ್ತೆಯಾದ ನಂತರ ಪ್ರಕರಣ ತಿರುವು ಪಡೆದುಕೊಂಡಿತ್ತು.

2008: `ಪೃಥ್ವಿ' ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಒರಿಸ್ಸಾದ ಬಾಲಸೋರಿನ ಚಂಡೀಪುರದಲ್ಲಿ ಯಶಸ್ವಿಯಾಗಿ ನಡೆಯಿತು. ಒಂದು ಭೂಪ್ರದೇಶದಿಂದ ಸುಮಾರು 150ರಿಂದ 250 ಕಿ.ಮೀ. ದೂರದವರೆಗೆ ನೆಗೆಯಬಲ್ಲ `ಪೃಥ್ವಿ' ಕ್ಷಿಪಣಿಯು ಒಂದು ಸಾವಿರ ಕೆಜಿ ಸ್ಫೋಟಕಗಳನ್ನು ಸಾಗಿಸಬಲ್ಲುದು. ಈಗಾಗಲೇ ಈ ಕ್ಷಿಪಣಿ ದೇಶದ ಸೇನಾ ಬತ್ತಳಿಕೆ ಸೇರಿದೆ. ದೇಶೀಯವಾಗಿ ನಿರ್ಮಾಣವಾದ ಪೃಥ್ವಿ ಕ್ಷಿಪಣಿಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಭಿವೃದ್ಧಿ ಪಡಿಸಿದೆ.

2008: ದೀರ್ಘ ಕಾಲದಿಂದ ಅಸ್ವಸ್ಥರಾಗಿದ್ದ ಹಿರಿಯ ಕಾರ್ಮಿಕ ನಾಯಕ ಹಾಗೂ ಮಾಜಿ ಲೋಕಸಭಾ ಸದಸ್ಯ ಗೋಪೇಶ್ವರ (88) ಅವರು ಹಿಂದಿನ ದಿನ ರಾತ್ರಿ ಜಮ್ಷೆಡ್ ಪುರದಲ್ಲಿ ನಿಧನರಾದರು. ಟೆಲ್ಕೊ ಕಾರ್ಮಿಕರ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಗೋಪೇಶ್ವರ ಅಂತಾರಾಷ್ಟ್ರೀಯ ಕಾರ್ಮಿಕ ಸಮಾವೇಶ ಸೇರಿದಂತೆ ಹಲವು ದೇಶಗಳಲ್ಲಿ ನಡೆದ ಕಾರ್ಮಿಕ ಸಮಾವೇಶಗಳಲ್ಲಿ ಭಾರತದ ಕಾರ್ಮಿಕರನ್ನು ಪ್ರತಿನಿಧಿಸಿದ್ದರು. 1984ರಲ್ಲಿ ಕಾಂಗ್ರೆಸ್ ಸದಸ್ಯರಾಗಿ ಲೋಕಸಭೆಗೆ ಆಯ್ಕೆಯಾಗಿದ್ದರು.

2008: ಉಭಯ ದೇಶಗಳ ದ್ವಿಪಕ್ಷೀಯ ಮಾತುಕತೆಗೆ ಮುನ್ನ ತಿಳಿಸಿದ್ದಂತೆ ಪಾಕಿಸ್ಥಾನ ಸರ್ಕಾರ ಭಾರತದ 96 ಮೀನುಗಾರರು ಮತ್ತು ಮೂವರು ನಾಗರಿಕರನ್ನು ಬಿಡುಗಡೆ ಮಾಡಿತು.

2008: ಒಂದು ವಾರದ ಹಿಂದೆ ಅಪಹರಿಸಲಾಗಿದ್ದ 10 ಜನ ಭಾರತೀಯ ಸಿಬ್ಬಂದಿ ಇದ್ದ ಜೋರ್ಡಾನ್ ಹಡಗನ್ನು ಅಪಹರಣಕಾರರು ಬಿಡುಗಡೆ ಮಾಡಿದರು. ಒತ್ತೆಯಲ್ಲಿದ್ದ `ಎಂವಿ- ವಿಕ್ಟೋರಿಯಾ' ಹಡಗನ್ನು ಅಪಹರಣಕಾರರು ಸ್ಥಳೀಯ ಸಮಯ ಮಧ್ಯಾಹ್ನ 12.50ಕ್ಕೆ ಬಿಡುಗಡೆ ಮಾಡಿದರು ಎಂದು ನೈರೋಬಿಯ ಸಮುದ್ರ ವಹಿವಾಟು ಅಧಿಕಾರಿ ಆಂಡ್ರ್ಯೂ ತಿಳಿಸಿದರು. 4200 ಟನ್ ಸಕ್ಕರೆ ಹೊತ್ತೊಯ್ಯುತ್ತಿದ್ದ ಈ ಹಡಗನ್ನು ಮೊಗದಿಶು ಬಳಿ ಸೊಮಾಲಿಯಾ ಅಪಹರಣಕಾರರು ಅಪಹರಿಸಿದ್ದರು. ಇದರಲ್ಲಿ 10 ಜನ ಭಾರತೀಯ ಸಿಬ್ಬಂದಿಯಲ್ಲದೆ ಬಾಂಗ್ಲಾದೇಶ, ಪಾಕಿಸ್ಥಾನ, ತಾಂಜಾನಿಯಾಕ್ಕೆ ಸೇರಿದ ಸಿಬ್ಬಂದಿಯೂ ಇದ್ದರು.

2008: ಮಂಗಳ ಗ್ರಹದಲ್ಲಿ ಹಿಂದೊಮ್ಮೆ ಬಿಸಿನೀರ ಚಿಲುಮೆಗಳು, ಬುಗ್ಗೆಗಳು ಇದ್ದಿರುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ನ್ಯೂಯಾರ್ಕಿನಲ್ಲಿ ತಿಳಿಸಿದರು. ಮಂಗಳ ಗ್ರಹ ಅನ್ವೇಷಣೆಗಾಗಿ `ನಾಸಾ' ಕಳುಹಿಸಿದ್ದ ಸ್ಪಿರಿಟ್ ರೋವರ್ ನೌಕೆ ಅಗೆದು ತೆಗೆದಿರುವ ಸಿಲಿಕಾ ಪದರಗಳನ್ನು ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡ ವಿಶ್ಲೇಷಣೆಗೆ ಒಳಪಡಿಸಿ ಈ ತೀರ್ಮಾನಕ್ಕೆ ಬಂದಿತು. ಜ್ವಾಲಾಮುಖಿಯಿಂದ ಚಿಮ್ಮಿದ ಹಬೆ ಅಥವಾ ಬಿಸಿ ನೀರು ಮಂಗಳ ಗ್ರಹದ ಗರ್ಭಕ್ಕೆ ಇಳಿದು ಇಂಗುವಾಗ ಈ ಸಿಲಿಕಾ ಪದರಗಳು ಉಂಟಾಗಿವೆ. ಅಲ್ಲದೆ `ಸಿಲಿಕಾ'ದ ಪದರಗಳು ಕೋಟ್ಯಂತರ ವರ್ಷಗಳ ಹಿಂದೆ ಮಂಗಳನಲ್ಲಿ ಜೀವಿ ಇದ್ದಿರಬಹುದಾದ ಸಾಧ್ಯತೆಗೆ ಪುರಾವೆ ಒದಗಿಸಿವೆ ಎಂದು ವಿಜ್ಞಾನಿಗಳು ಹೇಳಿದರು. ಭೂಮಿಯ ಮೇಲೆ ಈ ರೀತಿ ಬಿಸಿನೀರ ಚಿಲುಮೆಗಳು ಕಾಣಿಸಿದಲ್ಲೆಲ್ಲ ಸಿಲಿಕಾ ಪದರಗಳು ಉಂಟಾಗಿದ್ದು, ಈ ಪದರಗಳಲ್ಲಿ ಪುರಾತನ ಜೀವಿಗಳ ಅವಶೇಷಗಳು ಪತ್ತೆಯಾಗಿವೆ.

2008: ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ ಅನುಷ್ಠಾನದಲ್ಲಿ ಕರ್ನಾಟಕ ರಾಜ್ಯವು 2007-08ನೇ ಸಾಲಿನಲ್ಲಿ ಮೊದಲ ಸ್ಥಾನ ಗಳಿಸಿತು. ನಂತರದ ಸ್ಥಾನಗಳನ್ನು ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳ ಹಾಗೂ ತಮಿಳುನಾಡು ರಾಜ್ಯಗಳು ಗಳಿಸಿದವು ಎಂದು ತೋಟಗಾರಿಕೆ ಇಲಾಖೆಯ ಕಾರ್ಯದರ್ಶಿ ಪಿ.ಗಣೇಶನ್ ತಿಳಿಸಿದರು.

2007: ಎಂಭತ್ತೇಳರ ಹರೆಯದ ಅಜ್ಜ ಅಬ್ದುಲ್ ಅಜೀಜ್ ಹಾರಿ ಘರತಕ್ಕರ್ ಗೆ ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಕರಣಗಳ ವಿಚಾರಣೆ ನಡೆಸಿರುವ ವಿಶೇಷ ಟಾಡಾ ನ್ಯಾಯಾಲಯವು 6 ವರ್ಷಗಳ ಕಠಿಣಶಿಕ್ಷೆ ಹಾಗೂ 50,000 ರೂಪಾಯಿಗಳ ದಂಡವನ್ನು ವಿಧಿಸಿತು.

2007: ಮೊಬೈಲ್ ಫೋನಿನಲ್ಲಿ ದೂರದರ್ಶನ ಕಾರ್ಯಕ್ರಮ ವೀಕ್ಷಣೆ ಸೌಲಭ್ಯವು ಈದಿನ ನವದೆಹಲಿಯಲ್ಲಿ ಚಾಲನೆಗೊಂಡಿತು. ಇದರೊಂದಿಗೆ ದೂರದರ್ಶನವು ತನ್ನ ಸಾಧನೆಗೆ ಮತೊಂದು ಗರಿ ಸೇರಿಸಿಕೊಂಡಿತು.

2007: ತಮಿಳುನಾಡಿನ ತಿರುಪುರದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಾರ್ಖಾನೆಯೊಂದರ ಗೋಡೆಯು ಪಕ್ಕದ ಸಾರಾಯಿ ಅಂಗಡಿ ಮೇಲೆ ಕುಸಿದು ಬಿದ್ದು 27 ಜನ ಮೃತರಾಗಿ ಇತರ ಐವರು ಗಾಯಗೊಂಡರು.

2007: ಮಾಹಿತಿ ಹಕ್ಕು ಅಧಿನಿಯಮವನ್ನು ಕಟ್ಟು ನಿಟ್ಟಾಗಿ ಅನುಷ್ಠಾನಗೊಳಿಸುವ ಸಲುವಾಗಿ ಕರ್ನಾಟಕ ಶಿಕ್ಷಣ ಇಲಾಖೆಯು `ಇ- ಆಡಳಿತ ವಿಭಾಗ'ದ ವತಿಯಿಂದ `ಕೇಂದ್ರೀಕೃತ ಶಿಕ್ಷಣ ಇಲಾಖೆ'ಯ ಮಾಹಿತಿ ಕೇಂದ್ರವನ್ನು ಆರಂಭಿಸಿತು.

2007: ಪ್ರೊಬೆಬಿಲಿಟಿ ಸಿದ್ಧಾಂತದ ಮೇಲೆ ಸಂಶೋಧನೆ ನಡೆಸಿದ ಓಸ್ಲೋದ ಭಾರತೀಯ ಮೂಲದ ಅಧ್ಯಾಪಕ 67 ವರ್ಷದ ಶ್ರೀನಿವಾಸ ವರದನ್ ಅವರಿಗೆ ಒಂದು ದಶಲಕ್ಷ ಡಾಲರ್ ಮೊತ್ತದ ಬಹುಮಾನ ದೊರಕಿತು. ಈ ಬಹುಮಾನದ ಬಹುತೇಕ ಹಣವನ್ನು ಅವರು ಚೆನ್ನೈ ಬಳಿಯಲ್ಲಿರುವ ತಮ್ಮ ತವರೂರು ತಂಬರಂನಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಬಳಸುವುದಾಗಿ ಪ್ರಕಟಿಸಿದರು. ವರದನ್ ಅವರು ಮುಂದೆ ನಡೆಯಬಹುದಾದ ಅಪಘಾತಗಳ ಸಂಖ್ಯೆಯನ್ನು ಅಂದಾಜು ಮಾಡಲು ಕಾರು ವಿಮಾ ಕಂಪೆನಿಗಳಿಗೆ ನೆರವಾಗುವುದರಿಂದ ಹಿಡಿದು, ನೂರು ವರ್ಷಗಳ ಕಾಲ ಸಮುದ್ರದ ಅಲೆಗಳ ಹೊಡೆತವನ್ನು ಸಹಿಸಿಕೊಳ್ಳುವ ತೈಲ ಘಟಕ ಸ್ಥಾಪನೆಯವರೆಗೆ ಬಳಸಲು ಸಾಧ್ಯವಾಗುವಂತೆ ಪ್ರೊಬೆಬಿಲಿಟಿ ಸಿದ್ಧಾಂತವನ್ನು ರೂಪಿಸಿದ್ದರು.

2006: ವೈದ್ಯ ವಿದ್ಯಾರ್ಥಿಗಳು ಮತ್ತು ಇತರ ವಿದ್ಯಾರ್ಥಿಗಳ ಮೀಸಲು ವಿರೋಧಿ ಮುಷ್ಕರವನ್ನು ನಿರ್ಲಕ್ಷಿಸಿ, 2007ರ ಜೂನ್ ತಿಂಗಳಿನಿಂದ ಉನ್ನತ ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಶೇಕಡಾ 27ರಷ್ಟು ಮೀಸಲಾತಿ ಜಾರಿಗೊಳಿಸಲು ಕೇಂದ್ರದ ಯುಪಿಎ ಸರ್ಕಾರ ನಿರ್ಧರಿಸಿತು. ಸಾಮಾನ್ಯ ವರ್ಗಕ್ಕೆ ತೊಂದರೆಯಾಗದಂತೆ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಲೂ ಅದು ತೀರ್ಮಾನಿಸಿತು. ಯುಪಿಎ ಸಮನ್ವಯ ಸಮಿತಿ ಸಭೆಯಲ್ಲಿ ಎಡಪಕ್ಷಗಳು ಸರ್ಕಾರದ ಕ್ರಮವನ್ನು ಸಂಪೂರ್ಣವಾಗಿ ಬೆಂಬಲಿಸಿದ ಹಿನ್ನೆಲೆಯಲ್ಲಿ ಆಳುವ ಮೈತ್ರಿಕೂಟ ಈ ನಿರ್ಧಾರಕ್ಕೆ ಬಂದಿತು.

2006: ಭಾರತೀಯ ಗಡಿ ರಕ್ಷಣಾ ಪಡೆಯ ಹಿರಿಯ ಅಧಿಕಾರಿ ಎಸ್.ಸಿ. ನೇಗಿ (56) ಅವರು ಪ್ರಪಂಚದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಏರಿದ ಅತ್ಯಂತ ಹಿರಿಯ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2006: ವಿಶ್ವದ ಅತಿ ಎತ್ತರದ ಎವರೆಸ್ಟ್ ಪರ್ವತ ಶಿಖರವನ್ನು ಏರಿದ ವಯೋವೃದ್ಧ 70 ವರ್ಷದ ಜಪಾನಿ ಪರ್ವತಾರೋಹಿ ಟಕೊವ್ ಅರಯಾಮ ಅವರಿಗೆ ಕಠ್ಮಂಡುವಿನಲ್ಲಿ ಟಿಬೆಟ್ ಸ್ವಾಯತ್ತ ಪ್ರಾಂತ್ಯದ ಚೀನಾ ಪರ್ವತಾರೋಹಣ ಸಂಘ ಈ ಸಂಬಂಧ ಪ್ರಮಾಣಪತ್ರ ನೀಡಿತು.

1999: `ಸ್ಟಾರ್ ವಾರ್ ಎಪಿಸೋಡ್ 1: ದಿ ಫ್ಯಾಂಟಮ್ ಮೆನೇಸ್' ಚಲನಚಿತ್ರವು ಐದು ದಿನಗಳಲ್ಲಿ 100 ಮಿಲಿಯನ್ ಡಾಲರುಗಳಿಗೂ ಹೆಚ್ಚು ಆದಾಯ ಗಳಿಸಿದ ಪ್ರಥಮ ಚಲನ ಚಿತ್ರವಾಯಿತು.

1984: ಬಚೇಂದ್ರಿಪಾಲ್ ಅವರು ಎವರೆಸ್ಟ್ ಶಿಖರವನ್ನು ಏರುವ ಮೂಲಕ ಜಗತ್ತಿನ ಅತ್ಯುನ್ನತ ಶಿಖರವನ್ನು ಏರಿದ ಪ್ರಥಮ ಭಾರತೀಯ ಮಹಿಳೆ ಎಂಬ ಕೀರ್ತಿಗೆ ಭಾಜನರಾದರು.

1952: ಸಿ.ಡಿ. ದೇಶಮುಖ್ ಅವರು ತಮ್ಮ ಆರು ಮುಂಗಡಪತ್ರಗಳ ಪೈಕಿ ಮೊದಲನೆಯ ಮುಂಗಡಪತ್ರವನ್ನು ಭಾರತದ ಸಂಸತ್ತಿನಲ್ಲಿ ಮಂಡಿಸಿದರು. ಇದು ಭಾರತದ ಸಂಸತಿನಲ್ಲಿ ಮಂಡನೆಯಾದ ಮೊತ್ತ ಮೊದಲನೆಯ ಮುಂಗಡಪತ್ರ.

1934: `ಬೋನಿ' ಮತ್ತು `ಗ್ಲೈಡ್' ಎಂದೇ ಪರಿಚಿತರಾಗಿದ್ದ ಅಮೆರಿಕದ ಕುಖ್ಯಾತ ಅಪರಾಧಿಗಳಾದ ಬೋನಿ ಪಾರ್ಕರ್ ಮತ್ತು ಗ್ಲೈಡ್ ಬ್ಯಾರೋ ಲೌಸಿಯಾನಾ ಸಮೀಪದ ಗಿಬ್ ಲ್ಯಾಂಡಿನಲ್ಲಿ ನಡೆದ ಘರ್ಷಣೆಯೊಂದರಲ್ಲಿ ಮೃತರಾದರು.

1926: ಮೃದಂಗ ಹಾಗೂ ಘಟಂ ವಾದನದಲ್ಲಿ ಖ್ಯಾತರಾಗಿರುವ ಕೆ.ಎನ್. ಕೃಷ್ಣಮೂರ್ತಿ ಅವರು ಕೆ.ಕೆ. ನಾರಾಯಣನ್ ಅಯ್ಯರ್- ಪಾರ್ವತಿ ಅಮ್ಮಾಳ್ ದಂಪತಿಯ ಮಗನಾಗಿ ಪಾಲ್ಘಾಟಿನ ಕೊಯಲ್ ಮನ್ನಂ ಗ್ರಾಮದಲ್ಲಿ ಜನಿಸಿದರು.

1734: ಫ್ರಾಂಜ್ ಆಂಟನ್ ಮೆಸ್ಮರ್ (1734-1815) ಜನ್ಮದಿನ. ಈಗ `ಹಿಪ್ನಾಟಿಸಂ' ಹೆಸರಿನಲ್ಲಿ ಜನಪ್ರಿಯವಾಗಿರುವ ಸಮ್ಮೋಹಿನಿಯನ್ನು `ಮೆಸ್ಮರಿಸಂ' ಹೆಸರಿನಲ್ಲಿ ಖ್ಯಾತಿಗೆ ತಂದಿದ್ದ ಜರ್ಮನಿಯ ವೈದ್ಯನೀತ.