ಇಂದಿನ ಇತಿಹಾಸ History Today ಫೆಬ್ರುವರಿ 28
2018: ಮುಂಬಯಿ: ಫೆಬ್ರುವರಿ 24ರ ಶನಿವಾರ ನಿಧನರಾದ ಭಾರತದ ಬಹುಭಾಷಾ ನಟಿ, ಮೋಹಕ ತಾರೆ
ಶ್ರೀದೇವಿ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ಮುಂಬೈಯಲ್ಲಿ ನೆರವೇರಿತು. ಸಾವಿರಾರು
ಅಭಿಮಾನಿಗಳು, ಗಣ್ಯರು, ಆಪ್ತರ ಸಮ್ಮುಖದಲ್ಲಿ ಮುಂಬಯಿಯ ವಿಲ್ಲೆ ಪಾರ್ಲೆಯ ಹಿಂದೂ ಸೇವಾ ಸಮಾಜದ ರುದ್ರಭೂಮಿಯಲ್ಲಿ
ಅಂತ್ಯಕ್ರಿಯೆ ನಡೆಯಿತು. ಶ್ರೀದೇವಿ ಪತಿ ಬೋನಿ ಕಪೂರ್ ಅವರು ಚಿತೆಗೆ ಅಗ್ನಿಸ್ಪರ್ಶ ಮಾಡುವುದರೊಂದಿಗೆ
ಶ್ರೀದೇವಿಯ ಪಾರ್ಥಿವ ಶರೀರ ಪಂಚಭೂತಗಳಲ್ಲಿ ಲೀನವಾಯಿತು. ಅಯ್ಯಂಗಾರ್ ಸಂಪ್ರದಾಯದಂತೆ ಅಂತಿಮ ವಿಧಿ
ವಿಧಾನಗಳನ್ನು ನೆರವೇರಿಸಲಾಯಿತು. ಇದಕ್ಕೂ ಮುನ್ನ ಸುಮಾರು ಏಳು ಕಿಲೋ ಮೀಟರ್‌ಗಳಷ್ಟು ದೂರದ ಮೆರವಣಿಗೆಯ ಮೂಲಕ ಶ್ರೀದೇವಿ ಪಾರ್ಥಿವ ಶರೀರವನ್ನು ವಿಲ್ಲೆಪಾರ್ಲೆಯ
ಸೇವಾ ಸಮಾಜ ಹಿಂದೂ ಚಿತಾಗಾರಕ್ಕೆ ಕರೆತರಲಾಯಿತು. ಸಾವಿರಾರು ಅಭಿಮಾನಿಗಳು ದಾರಿಯುದ್ದಕ್ಕೂ ಶ್ರೀದೇವಿ
ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಅದಕ್ಕೂ
ಮುನ್ನ ಅಂಧೇರಿ ವೆಸ್ಟ್‌ನಲ್ಲಿರುವ ಲೋಖಂಡವಾಲಾದ ಸೆಲೆಬ್ರೇಷನ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಸಾರ್ವಜನಿಕರ
ದರ್ಶನಕ್ಕೆ ಶ್ರೀದೇವಿ ಪಾರ್ಥಿವ ಶರೀರವನ್ನು ಇರಿಸಲಾಗಿತ್ತು. ಸಿನಿಮಾ ತಾರೆಯರು, ರಾಜಕಾರಣಿಗಳು,
ಗಣ್ಯರು ಸೇರಿದಂತೆ ಸಾವಿರಾರು ಜನ ಸಾರ್ವಜನಿಕರು ತಮ್ಮ ನೆಚ್ಚಿನ ನಟಿಯ ಅಂತಿಮ ದರ್ಶನ ಪಡೆದರು. ನಟಿ ಐಶ್ವರ್ಯ ರೈ, ಅಮಿತಾಬ್ ಬಚ್ಚನ್, ಶಾರೂಕ್ ಖಾನ್, ಸಲ್ಮಾನ್
ಖಾನ್, ಸೇರಿದಂತೆ ಹಿರಿಯ ಕಿರಿಯ ಬಾಲಿವುಡ್ ನಟ ನಟಿಯರು, ತಂತ್ರಜ್ಞರು, ನಿರ್ಮಾಪಕರು, ರಾಜಕಾರಣಿಗಳು
ಸೇರಿದಂತೆ ಸಾವಿರಾರು ಅಭಿಮಾನಿಗಳು ಕೈಗಳಲ್ಲಿ ಹೂವಿನ ಹಾರ ಹಿಡಿದು, ಪ್ರಾರ್ಥನೆ ಮಾಡುತ್ತಾ ತಮ್ಮ
ಅಂತಿಮಗೌರವ ಸಲ್ಲಿಸಿದರು. ದುಬೈಯಲ್ಲಿ ನಿಧನರಾದ ಶ್ರೀದೇವಿ ಶರೀರವನ್ನು ಮಂಗಳವಾರ ರಾತ್ರಿ ಮುಂಬಯಿಗೆ
ಕರೆ ತರಲಾಯಿತು. ಶ್ರೀದೇವಿ ಪಾರ್ಥಿವ ಶರೀರವನ್ನು
ಅಂಧೇರಿಯ ದಿ ಸೆಲೆಬ್ರೇಷನ್ ಸ್ಪೋರ್ಟ್ಸ್ ಕ್ಲಬ್‌ಗೆ ರವಾನೆ ಮಾಡಿ ಸಾರ್ವಜನಿಕ ವೀಕ್ಷಣೆಗೆ ಇಡಲಾಯಿತು. ಬೆಳಗ್ಗೆ ೯.೩೦ಕ್ಕೆ ಶ್ರೀದೇವಿ ಪಾರ್ಥಿವ ಶರೀರವನ್ನು ಸೆಲಬ್ರೇಷನ್
ಸ್ಫೋರ್ಟ್ಸ್ ಕ್ಲಬ್‌ಗೆ ತರಲಾಗಿತ್ತು. ಮಧ್ಯಾಹ್ನ ೧೨.೩೦ ಗಂಟೆವರೆಗೂ ಪಾರ್ಥಿವ ಶರೀರವನ್ನು ಅಲ್ಲೇ
ಸಾರ್ವಜನಿಕ ವೀಕ್ಷಣೆಗೆ ಇಡಲಾಗಿತ್ತು. ಫೆ.27ರ
ಮಂಗಳವಾರ ರಾತ್ರಿ ಶ್ರೀದೇವಿ ಪಾರ್ಥಿವ ಶರೀರವನ್ನು ಮುಂಬೈ ಲೋಖಂಡವಲಾದಲ್ಲಿನ ಗ್ರೀನ್ ಎಕರ್ಸ್ ನಿವಾಸಕ್ಕೆ
ತರುತ್ತಿದ್ದಂತೆ ರಸ್ತೆಯ ಇಕ್ಕೆಲಗಳು ಜನಸಂದಣಿಯಿಂದ ತುಂಬಿದ್ದವು, ಕೆಲವು ಅಭಿಮಾನಿಗಳು ಮರಗಳನ್ನು
ಹತ್ತಿ ಅಂತಿಮ ದರ್ಶನ ಪಡೆಯುತ್ತಿರುವ ದೃಶ್ಯಗಳನ್ನು ಸಾಮಾನ್ಯವಾಗಿತ್ತು. ಅಂತ್ಯಕ್ರಿಯೆಗಾಗಿ ಒಯ್ಯುವ ಮುನ್ನ ಹಾಲ್ ನಲ್ಲಿ ಪ್ರಾರ್ಥನೆ
ನೆರವೇರಿಸಲಾಯಿತು. ನೆಚ್ಚಿನ ತಾರೆಯ ಬೃಹತ್ ಭಾವಚಿತ್ರವನ್ನು ಬಿಳಿ, ಕೆಂಪು ಗುಲಾಬಿ ಮತ್ತಿತರ ಹೂವುಗಳಿಂದ
ಅಲಂಕರಿಸಿ ಕ್ಲಬ್ ಹೊರಭಾಗದಲ್ಲಿ ಇರಿಸಲಾಗಿತ್ತು. ಬೆಳಗ್ಗೆ ೯ ಗಂಟೆಗೆ ಶ್ರೀದೇವಿಯ ಪಾರ್ಥಿವ ಶರೀರವನ್ನು
ಹಾಲ್‌ಗೆ ತರಲಾಯಿತು. ಹಾಲ್ ನಲ್ಲಿ ಚಿತ್ರ ನಿರ್ಮಾಪಕ, ಪತಿ ಬೋನಿ ಕಪೂರ್, ಚಿತ್ರ ನಟರಾದ ಅನಿಲ್ ಕಪೂರ್,
ಸಂಜಯ್ ಕಪೂರ್, ಹರ್ಷ ವರ್ಧನ ಕಪೂರ್, ಸೋನಂ ಕಪೂರ್ ಮತ್ತು ರಿಯಾ ಕಪೂರ್ ಒಂದು ಮೂಲೆಯಲ್ಲಿ ಕಂಬನಿದುಂಬಿಕೊಂಡು
ನಿಂತಿದ್ದರು. ಶ್ರೀದೇವಿ ಪುತ್ರಿಯರಾದ ಜಾಹ್ನವಿ, ಖುಷಿ ಅವರಿಗಿಂತ ಸ್ವಲ್ಪ ಹಿಂದೆ ನಿಂತುಕೊಂಡಿದ್ದರು.
ಚಿತ್ರನಟಿಯ ಪಾರ್ಥಿವ ಶರೀರಕ್ಕೆ ಕೆಂಪು ಕಾಂಜೀವರಂ ಸೀರೆ ಹೊದಿಸಿ, ಹಣೆಗೆ ಬಿಂದಿ ಇರಿಸಲಾಗಿತ್ತು.
ಅಭಿಮಾನಿಗಳೂ ಹೂಗುಚ್ಛಗಳ ಸುರಿಮಳೆಗೈದರು. ಫ್ಯಾಷನ್
ಡಿಸೈನರ್ ಮನಿಶ್ ಮಲ್ಹೋತ್ರ ಅವರು ದುಃಖ ತಡೆಯಲಾಗದೆ ಉಮ್ಮಳಿಸತೊಡಗಿದಾಗ ಚಿತ್ರ ನಿರ್ಮಾಪಕರಾದ ಕರಣ್
ಜೋಹರ್ ಅವರನ್ನು ಸಂತೈಸಿದರು. ರಾಣಿ ಮುಖರ್ಜಿ ಅವರು ಪಾರ್ಥಿವ ಶರೀರದ ಬಳಿಯಲ್ಲೇ ಕುಳಿತು ಸೋನಮ್ ಕಪೂರ್
ಅವರನ್ನು ಸಂತೈಸುತ್ತಿದ್ದರು. ಸುಮಾರು ೨೦೦ಕ್ಕೂ ಹೆಚ್ಚು
ಸಿಬ್ಬಂದಿ ಜನಸಂದಣಿಯನ್ನು ನಿಯಂತ್ರಿಸುತ್ತಿದ್ದರು.
ಬೆಳಗ್ಗೆ ೧೦ ಗಂಟೆಯಿಂದ ’ಚಾಂದನಿ’ಗೆ ಅಂತಿಮ ಗೌರವ ಸಲ್ಲಿಸಲು
ಅಭಿಮಾನಿಗಳಿಗೆ ಅವಕಾಶ ಮಾಡಿಕೊಡಲಾಯಿತು. ಕರ್ನಾಟಕ ಮತ್ತು ಚೆನ್ನೆಯಂತಹ ದೂರದ ಸ್ಥಳಗಳಿಂದಲೂ ರಜತಪರದೆಯ
ತಮ್ಮ ಕಣ್ಮಣಿಯನ್ನು ನೋಡಲು ಅಭಿಮಾನಿಗಳು ಬಂದು ಕಾದಿದ್ದರು. ಅಂತಿಮ ದರ್ಶನ ಪಡೆದವರಲ್ಲಿ ಜಯಬಚ್ಚನ್,
ಶ್ವೇತಾ ಬಚ್ಚನ್, ಐಶ್ವರ್‍ಯ ರೈ ಬಚ್ಚನ್, ಸಂಜಯ್ ಲೀಲಾ ಭನ್ಸಾಲಿ, ಸೋನಮ್ ಕಪೂರ್ ಗೆಳೆಯ ಆನಂದ ಅಹುಜಾ,
ಮಾಧುರಿ ದೀಕ್ಷಿತ್ ನೆನೆ, ಆಕೆಯ ಪತಿ ಶ್ರೀರಾಮ್ ನೆನೆ, ಜಯಪ್ರದಾ, ಹೇಮಮಾಲಿನಿ, ಅರ್ಬಾಜ್ ಖಾನ್,
ನಿಮ್ರತ್ ಕೌರ್, ಮನಿಶ್ ಪೌಲ್, ಟಬು, ಸುಭಾಶ್ ಘಾಯ್, ನೀಲಿಮಾ ಅಜ್ಮಿ, ಈಶಾ ದೇವಲ್, ಸುಶ್ಮಿತಾ ಸೇನ್,
ಸಂಜಯ್ ನಿರುಪಮ್, ಅಜಯ್ ದೇವಗನ್, ಕಾಜೋಲ್, ತನಿಶಾ, ಇಮ್ತಿಯಾಜ್ ಅಲಿ, ಸಾಜಿತ್ ಖಾನ್, ವಿದ್ಯಾ ಬಾಲನ್,
ಸಿದ್ಧಾರ್ಥ ರಾಯ್ ಕಪೂರ್, ರೇಖಾ, ಜಾನ್ ಅಬ್ರಹಾಂ, ಚಿರಂಜೀವಿ, ರವೀನಾ ಟಂಡನ್, ಶೇಖರ್ ಕಪೂರ್, ಶಮಿತಾ
ಶೆಟ್ಟಿ, ನೀಲ್ ನಿತಿನ್ ಮುಖೇಶ್, ರಾಜಕುಮಾರ್ ರಆವ್, ರಮೇಶ್ ಸಿಪ್ಪಿ, ಸೋಹ ಅಲಿ ಖಾನ್, ನೇಹಾ ಧುಪಿಯಾ, ಕುನಾಲ್ ಖೇಮು ಮತ್ತಿತರರು ಸೇರಿದ್ದರು.
2018: ಚೆನ್ನೈ: ತಮಿಳುನಾಡಿನ ಕಂಚಿ ಕಾಮಕೋಟಿ ಪೀಠದ ಶಂಕರಾಚಾರ್ಯ
ಶ್ರೀ ಜಯೇಂದ್ರ ಸರಸ್ವತಿ ಸ್ವಾಮೀಜಿ ಈದಿನ ಬೆಳಗ್ಗೆ ದೈವಾಧೀನರಾದರು. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ
ಸ್ವಾಮೀಜಿಯವರನ್ನು ಕಳೆದ ತಿಂಗಳು ಜನವರಿಯಲ್ಲಿ ಚೆನ್ನೈಯ ಶಂಕರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ
ಫಲಕಾರಿಯಾಗದೇ ಶ್ರೀಗಳು ಈದಿನ ಬೆಳಗ್ಗೆ ಕೊನೆಯುಸಿರೆಳೆದರು ಎಂದು ಕಂಚಿ ಮಠದ ಮೂಲಗಳು ತಿಳಿಸಿದವು.
ಶ್ರೀ ಜಯೇಂದ್ರ ಸರಸ್ವತಿ ಸ್ವಾಮೀಜಿ ಅವರಿಗೆ ೮೨ ವರ್ಷ ವಯಸ್ಸಾಗಿತ್ತು. ಅವರು ಕಂಚಿ ಕಾಮಕೋಟಿ ಪೀಠದ
೬೯ನೇ ಶಂಕರಾಚಾರ್ಯರಾಗಿದ್ದರು. ಹಿಂದೂ ಧರ್ಮದ ಅದ್ವೈತ ವೇದಾಂತ ಸಂಪ್ರದಾಯದಲ್ಲಿ ಮಠಮಾನ್ಯಗಳ ಮುಖ್ಯಸ್ಥರನ್ನು
’ಶಂಕರಾಚಾರ್ಯರು’ ಎಂದು ಕರೆಯುತ್ತಾರೆ. ತಮಿಳುನಾಡಿನ ಮನ್ನಾರಗುಡಿ ಸಮೀಪದ ಕೊಪ್ಪಲು ಇರುಲ್ನೀಕಿಯಲ್ಲಿ
ಸುಬ್ರಮಣಿಯಮ್ ಆಗಿ ಜನಿಸಿದ್ದ ಅವರು ಮಠದ ಹಿಂದಿನ ಪೀಠಾಧಿಪತಿ ದಿವಂಗತ ಶ್ರಿ ಚಂದ್ರಶೇಖರಾನಂದ ಸರಸ್ವತಿ
ಅವರಿಂದ ೧೯೫೪ರಲ್ಲಿ ಸನ್ಯಾಸ ದೀಕ್ಷೆ ಪಡೆದಿದ್ದರು. ಆಗ ಜಯೇಂದ್ರ ಸರಸ್ವತಿ ಅವರಿಗೆ ೧೯ ವರ್ಷ ವಯಸ್ಸಾಗಿತ್ತು. ಪೀಠದ ಮುಖ್ಯಸ್ಥರಾದ ಬಳಿಕ ಹಿಂದಿನ ಪೀಠಾಧಿಪತಿಯಿಂದ ಭಿನ್ನ
ಮಾರ್ಗ ತುಳಿದಿದ್ದ ಜಯೇಂದ್ರ ಸರಸ್ವತಿ ಅವರು ಸಮಾಜದ ವಿವಿಧ ವರ್ಗಗಳ ಜೊತೆ ಸಂಪರ್ಕ ಸಾಧಿಸಿದರು. ತನ್ಮೂಲಕ
ಮಠದ ಪರಂಪರಾಗತ ಸಂಪ್ರದಾಯಗಳಿಂದ ಬೇರೆ ಮಾರ್ಗದಲ್ಲಿ ಸಾಗಿದರು. ಹೀಗಾಗಿ ಅವರ ಅವಧಿ ಬಹಳಷ್ಟು ಪ್ರಕ್ಷುಬ್ಧ
ಕ್ಷಣಗಳನ್ನು ಕಂಡಿತ್ತು. ೧೯೮೭ರ ಆಗಸ್ಟ್ ತಿಂಗಳಲ್ಲಿ
ಕಂಚಿ ಆಚಾರ್ಯರು ದಿಢೀರನೆ ಮಠದಿಂದ ಕಣ್ಮರೆಯಾಗುವ ಮೂಲಕ ವಿವಾದದಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಇದು
ಭಕ್ತರಿಗೆ ಆಘಾತ ಉಂಟು ಮಾಡಿತ್ತು. ಅವರಿಗಾಗಿ ತೀವ್ರ ಶೋಧ ನಡೆಸಲಾಗಿತ್ತು. ಕಡೆಗೆ ಅವರು ತಲಕಾವೇರಿಯಲ್ಲಿ
ಮೂರು ದಿನಗಳ ಬಳಿಕ ಪತ್ತೆಯಾಗಿದ್ದರು. ಈ ವೇಳೆಯಲ್ಲಿ ಶ್ರೀ ಜಯೇಂದ್ರ ಸರಸ್ವತಿ ಅವರು ತಮ್ಮ ಉತ್ತರಾಧಿಕಾರಿಯಾಗಿ
ನೇಮಿಸಿಕೊಂಡಿದ್ದ ಶ್ರೀ ವಿಜಯೇಂದ್ರ ಸರಸ್ವತಿ ಅವರನ್ನು ಮಠದ ೭೦ನೇ ಮುಖ್ಯಸ್ಥೃರನ್ನಾಗಿ ನೇಮಿಸಲಾಗಿತ್ತು.
ಶ್ರೇ ಜಯೇಂದ್ರ ಸರಸ್ವತಿ ಅವರು ವಾಪಸಾದ ಬಳಿಕ ಪೀಠವನ್ನು ಅವರಿಗೇ ಪುನಃ ವಹಿಸಲಾಗಿತ್ತು. ‘ಯಾರಿಗೂ ಹೇಳದೇ ಇದ್ದರೂ, ಕಣ್ಮರೆಯಾದದ್ದು ದಿಢೀರ್ ಬೆಳವಣಿಗೆ
ಏನಲ್ಲ. ಜುಲೈ ಆದಿಯಲ್ಲಿ ತಿರುಪತಿಯಲ್ಲಿ ಧ್ಯಾನಸ್ಥರಾಗಿದ್ದಾಗ ನನಗೆ ದೇವರಿಂದ ಎರಡು ಸಂದೇಶಗಳು ಲಭಿಸಿದ್ದವು.
ಒಂದನೆಯದಾಗಿ ಜನರಲ್ಲಿ ಆಧ್ಯಾತ್ಮಿಕ, ಆರ್ಥಿಕ ಮತ್ತು ರಾಷ್ಟ್ರೀಯ ಜಾಗೃತಿಗಾಗಿ ರಾಷ್ಟ್ರೀಯ ಆಂದೋಳನ
ಆರಂಭಿಸಬೇಕು ಮತ್ತು ಎರಡನೇಯದಾಗಿ ಇದಕ್ಕಾಗಿ ಸಂಕಲ್ಪ ಮಾಡಬೇಕು ಎಂಬ ಸಂದೇಶಗಳು ಅವು. ನಾನು ಮಠದಿಂದ
ಹೊರಹೋಗುವುದನ್ನು ಯಾರಿಗಾದರೂ ಹೇಳಿದ್ದರೆ ಅವರು ನನ್ನನ್ನು ತಡೆಯುತ್ತಿದ್ದರು. ಹೀಗಾಗಿ ಪ್ರಕಟಣೆ
ಮಾಡದೆ ಹೊರಟು ಹೋದೆ ಎಂದು ವಾಪಸಾದ ಬಳಿಕ ಸ್ವಾಮೀಜಿ ಮಾಧ್ಯಮಗಳಿಗೆ ತಿಳಿಸಿದ್ದರು. ಆ ಬಳಿಕ ಸ್ವಾಮೀಜಿ ತಮ್ಮ ಉದ್ದೇಶ ಸಾಧನೆಗಾಗಿ ’ಜನ ಕಲ್ಯಾಣ
ಜನ ಜಾಗರಣ’ ಚಳವಳಿ ಹಮ್ಮಿಕೊಂಡಿದ್ದರು. ಈ ಚಳವಳಿ ಕೋಮುವಾದಿ
ಚಳವಳಿಯಲ್ಲ ಎಂದು ಅವರು ಸ್ಪಷ್ಟ ಪಡಿಸಿದ್ದರು. ಕೆಲವು ಕ್ರೈಸ್ತರು ಮತ್ತು ಮುಸ್ಲಿಮರೂ ಈ ಚಳವಳಿಯಲ್ಲಿ ಪಾಲ್ಗೊಂಡಿದ್ದರು. ಕ್ರಮೇಣ
ಅತ್ಯಂತ ಪ್ರಭಾವಶಾಲಿಯಾದ ಜಯೇಂದ್ರ ಸರಸ್ವತಿ ಅವರು ರಾಜಕೀಯ ನಾಯಕರಿಗೆ ವಿಶೇಷವಾಗಿ ಬಿಜೆಪಿ ನಾಯಕರಿಗೆ
ನಿಕಟವಾಗಿದ್ದರು. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೂ ನಿಕಟವಾಗಿದ್ದರೂ, ಬಳಿಕ ಕಾಂಚಿ
ವರದರಾಜ ಪೆರುಮಾಳ ದೇವಾಲಯದ ಮ್ಯಾನೇಜರ್ ಶಂಕರರಾಮನ್ ಹತ್ಯೆ ಪ್ರಕರಣದಲ್ಲಿ ಸ್ವಾಮೀಜಿ ಬಂಧನಕ್ಕೆ ಜಯಲಲಿತಾ
ಅವರೇ ಆದೇಶಿಸಿದ್ದರು. ಜಯಲಲಿತಾ ಅವರು ಸ್ವಾಮೀಜಿಗೆ ಎಷ್ಟು ನಿಕಟರಾಗಿದ್ದರು ಎಂದರೆ ೧೯೯೬ರ ಮಹಾ ಚುನಾವಣೆಯಲ್ಲಿ
ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಮುನ್ನ ಅವರು ಸ್ವಾಮೀಜಿಯವರ ಬಳಿಗೆ ತೆರಳಿ ಆಶೀರ್ವಾದ
ಕೋರಿದ್ದರು. ತಮಿಳುನಾಡಿನ ದೇವಾಲಯಗಳ ರಕ್ಷಣೆಗಾಗಿ ರಚಿಸಲಾದ ರಾಜ್ಯಮಟ್ಟದ ಸಮಿತಿಯ ಮುಖ್ಯಸ್ಥರಾಗಿ
ಜಯೇಂದ್ರ ಸರಸ್ವತಿ ಸ್ವಾಮೀಜಿ ಅವರನ್ನೇ ಜಯಲಲಿತಾ ನೇಮಿಸಿದ್ದರು. ’ಬಲವಂತದ ಮತಾಂತರಗಳ’ ವಿರುದ್ಧದ ಸುಗ್ರೀವಾಜ್ಞೆ ಹೊರಡಿಸುಂತೆ ಜಯಲಲಿತಾ
ಅವರ ಮನವೊಲಿಸುವಲ್ಲಿ ಸ್ವಾಮೀಜಿ ಮಹತ್ವದ ಪಾತ್ರ ವಹಿಸಿದ್ದರು ಎಂದು ವ್ಯಾಪಕವಾಗಿ ನಂಬಲಾಗಿತ್ತು.
ತಿರುಪತಿಯಲ್ಲಿನ ಆಚರಣೆಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡುವಂತೆ ಅವರು ನೀಡಿದ್ದ ಸಲಹೆಗೆ ವೈಷ್ಣವ
ಮಠಗಳಿಂದ ಪ್ರಬಲ ಪ್ರತಿಭಟನೆಗಳು ವ್ಯಕ್ತವಾಗಿದ್ದವು. ಕೇಂದ್ರದಲ್ಲಿನ
ಬಿಜೆಪಿ ಸರ್ಕಾರವು ಸ್ವಾಮೀಜಿ ಅವರಿಗೆ ರಾಷ್ಟ್ರಮಟ್ಟದ ರಾಜಕೀಯದಲ್ಲಿ ಅವಕಾಶ ಕಲ್ಪಿಸುವ ಕೊಡುಗೆ ನೀಡಲು
ಮುಂದಾಗಿತ್ತು. ರಾಮಜನ್ಮಭೂಮಿ- ಬಾಬರಿ ಮಸೀದಿ ವಿವಾದಕ್ಕೆ ಸೌಹಾರ್ದಯುತ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ
ಅವರ ನೆರವು ಪಡೆಯಲೂ ಯತ್ನಿಸಿತ್ತು. ೨೦೦೪ರಲ್ಲಿ ಶಂಕರರಾಮನ್
ಕೊಲೆ ಪ್ರಕರಣದಲ್ಲಿ ಬಂಧಿತರಾದ ಬಳಿಕ ಅವರ ವರ್ಚಸ್ಸು ಕುಗ್ಗಿತ್ತು. ಪುದುಚೆರಿಯ ಪ್ರಿನ್ಸಿಪಲ್ ಸೆಷನ್ಸ್
ನ್ಯಾಯಾಧೀಶರು ಮಠದ ಉಭಯ ಶಂಕರಾಚಾರ್ಯರನ್ನು ಮತ್ತು ಇತರ ೨೨ ಮಂದಿ ಆರೋಪಿಗಳನ್ನು ಪ್ರಕರಣದಲ್ಲಿ ಖುಲಾಸೆಗೊಳಿಸಿದ್ದರು.
ಇತ್ತೀಚೆಗೆ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
2018: ನವದೆಹಲಿ: ನೋಟು ಅಮಾನ್ಯೀಕರಣ
ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಪರಿಣಾಮವಾಗಿ ನಲುಗಿದ್ದ ಭಾರತದ ಆರ್ಥಿಕತೆ ೨೦೧೮ರ
ಕ್ಯಾಲೆಂಡರ್ ವರ್ಷದಲ್ಲೇ ೭.೬ರ ದರದಲ್ಲಿ ಜಿಡಿಪಿ
ಪ್ರಗತಿ ಸಾಧಿಸಲಿದೆ ಎಂದು ಪ್ರಖ್ಯಾತ ಹೂಡಿಕೆ ಸೇವಾ ಸಂಸ್ಥೆ ಮೂಡೀಸ್ ಇನ್‌ವೆಸ್ಟರ್ ಸರ್ವೀಸ್ ಹೇಳಿತು. ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿಯಿಂದಾಗಿ ಉಂಟಾಗಿದ್ದ
ಅಡಚಣೆಗಳು ಮತ್ತು ನೇತ್ಯಾತ್ಮಕ ಪರಿಣಾಮಗಳಿಂದ ಭಾರತದ ಆರ್ಥಿಕತೆ ಹೊರಬರುತ್ತಿದೆ. ಹಾಗಾಗಿ ಜಿಡಿಪಿಯಲ್ಲಿ ಬೆಳವಣಿಗೆ ಕಂಡು
ಬರುತ್ತಿದೆ ಎಂದು ಮೂಡೀಸ್ ತಿಳಿಸಿತು. ಮೂಡೀಸ್ ಪ್ರಕಟಿಸಿರುವ
೨೦೧೮ ಮತ್ತು ೨೦೧೯ರ ಜಾಗತಿಕ ಆರ್ಥಿಕ ಭವಿಷ್ಯದಲ್ಲಿ
ಈ ವರ್ಷ ಎಪ್ರಿಲ್ ೧ರಿಂದ ಜಾರಿಗೆ ಬರುವ (೨೦೧೮-೧೯) ಬಜೆಟ್, ದೇಶದ ಗ್ರಾಮೀಣ ಆರ್ಥಿಕತೆಯನ್ನು
ಬಲಪಡಿಸಲಿದೆ ಎಂದು ಹೇಳಿತು. ೫೦೦ ಮತ್ತು ೧,೦೦೦ ರೂ.
ಮುಖಬೆಲೆಯ ನೋಟು ಅಮಾನ್ಯೀಕರಣದಿಂದಾಗಿ ಭಾರತದ ಗ್ರಾಮೀಣ ಆರ್ಥಿಕತೆಯ ಮೇಲೆ ಭಾರೀ ಹೊಡೆತ ಬಿದ್ದಿತ್ತು
ಎಂದು ಅದು ನೆನಪಿಸಿತು. ೨೦೧೮ರ ಕ್ಯಾಲೆಂಡರ್ ವರ್ಷದಲ್ಲಿ ಭಾರತದ ಜಿಡಿಪಿ ಶೇ.೭.೬ಕ್ಕೆ
ಏರಲಿದೆ ಮತ್ತು ೨೦೧೯ರಲ್ಲಿ ಇದು ಶೇ.೭.೫ ಆಗಲಿದೆ
ಎಂದು ಮೂಡೀಸ್ ಹೇಳಿತು. ವಿಶ್ವದ ಉದಯೋನ್ಮುಖ
ಆರ್ಥಿಕ ರಾಷ್ಟ್ರಗಳ ಪೈಕಿ ಭಾರತ ಮತ್ತು ಇಂಡೋನೇಶ್ಯದ
ಆರ್ಥಿಕ ಪ್ರಗತಿಯ ಅಂದಾಜನ್ನು ನಾವು ಯಾವುದೇ ಬದಲಾವಣೆ ಮಾಡದೆ ಹಾಗೆಯೇ ಉಳಿಸಿಕೊಂಡಿದ್ದೇವೆ ಎಂದು
ಮೂಡೀಸ್ ಹೇಳಿತು. ಕಳೆದ ವರ್ಷ ನವೆಂಬರ್‌ಲ್ಲಿ ಮೂಡೀಸ್,
ಭಾರತದ ಸೊವರೀನ್ ರೇಟಿಂಗನ್ನು ಕಳೆದ ೧೩ ವರ್ಷಗಳಲ್ಲೇ ಮೊದಲ ಬಾರಿಗೆ ಏರಿಸಿತ್ತು. ಭಾರತ ಸರ್ಕಾರ ಕೈಗೊಂಡಿರುವ
ಹಲವಾರು ಆರ್ಥಿಕ ಮತ್ತು ಸಾಂಸ್ಥಿಕ ಸುಧಾರಣೆಗಳ ಫಲವಾಗಿ ಪ್ರಗತಿಯ ಸಾಧ್ಯತೆಗಳು ಸುಧಾರಿಸುತ್ತಿವೆ
ಎಂದು ಅದು ಹೇಳಿತ್ತು.
2018: ಮುಂಬೈ: ಕೋಟ್ಯಧೀಶ ಟಿ. ಆನಂದ ಕೃಷ್ಣನ್ ನೇತೃತ್ವದ ಏರ್ ಸೆಲ್ ಲಿಮಿಟೆಡ್
ಕಂಪೆನಿಯು ಏರ್ ಸೆಲ್ ಸೆಲ್ಯುಲಾರ್ ಲಿಮಿಟೆಡ್ ಮತ್ತು ಡಿಶ್ ನೆಟ್ ವೈರ್ ಲೆಸ್ ಲಿಮಿಟೆಡ್ ಜೊತೆಗೆ
ದಿವಾಳಿತನ ನಿಯಮ ೨೦೧೬ರ ಸೆಕ್ಷನ್ ೧೦ರ ಅಡಿಯಲ್ಲಿ ದಿವಾಳಿತನ ಅರ್ಜಿಯನ್ನು ಸಲ್ಲಿಸಿತು. ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಕಮ್ಯೂನಿಕೇಷನ್ಸ್
ಜೊತೆಗೆ ವಿಲೀನಗೊಳ್ಳಲು ಕಂಪೆನಿಯು ೨೦೧೭ರಲ್ಲಿ ನಡೆಸಿದ ಯತ್ನ ವಿಫಲವಾದ ಹಿನ್ನೆಲೆಯಲ್ಲಿ ಕಂಪೆನಿಯು
ದಿವಾಳಿತನ ಅರ್ಜಿ ಸಲ್ಲಿಸಿದೆ ಎಂದು ಹೇಳಲಾಯಿತು. ತೀವ್ರ ಸ್ಪರ್ಧೇ, ಹೊಸ ಕಂಪೆನಿಗಳ ಪ್ರವೇಶ, ಕಾನೂನು
ಮತ್ತು ನಿಯಂತ್ರಣ ಸವಾಲುಗಳು, ತಾಳಲು ಅಸಾಧ್ಯವಾದ ಸಾಲ ಮತ್ತು ಹೆಚ್ಚುತ್ತಿರುವ ನಷ್ಟದ ಪರಿಣಾಮವಾಗಿ
ಕಂಪೆನಿಯು ತೀವ್ರ ಹಣಕಾಸು ಬಿಕ್ಕಟ್ಟನ್ನು ಎದುರಿಸುತ್ತಿರುವುದು ಹೌದು ಎಂದು ನಿರ್ದೇಶಕರ ಮಂಡಳಿಯು
ದೃಢಪಡಿಸಿತು. ಪರಿಣಾಮವಾಗಿ ಪ್ರತಿಷ್ಠಿತ ಕಂಪೆನಿಯ ವ್ಯವಹಾರ ಋಣಾತ್ಮಕ ದಿಕ್ಕಿನಲ್ಲಿ ಸಾಗಿದೆ ಎಂದು
ಕಂಪೆನಿಯ ಹೇಳಿಕೆ ತಿಳಿಸಿತು. ಭಾರತೀಯ ರಿಸರ್ವ್ ಬ್ಯಾಂಕ್
ಮಾರ್ಗದರ್ಶಿ ಸೂತ್ರಗಳ ಪ್ರಕಾರ ಕಂಪೆನಿಯು ೨೦೧೮ರ ಸೂಕ್ಷ್ಮ ಸಾಲ ಪುನರ್ರಚನಾ (ಎಸ್ ಡಿಆರ್) ಯೋಜನೆಯ
ಮೊರೆ ಹೊಕ್ಕಿತು. ಆದರೆ ಸಾಲಗಾರರ ಜೊತೆ ಯಾವುದೇ ಒಪ್ಪಂದ ಸಾಧ್ಯವಾಗಲಿಲ್ಲ. ‘ಹಾಲಿ ಪರಿಸ್ಥಿತಿಯಲ್ಲಿ, ವಿಶೇಷವಾಗಿ ೨೦೧೮ರ ಫೆಬ್ರುವರಿ
೧೨ರ ಆರ್ ಬಿಐ ಮಾರ್ಗದರ್ಶಿ ಸೂತ್ರಗಳ ಬಳಿಕ, ದಿವಾಳಿತನ ನಿಯಮದ ಅಡಿಯಲ್ಲಿ ಅರ್ಜಿ ಸಲ್ಲಿಸುವುದೇ ಸಮರ್ಪಕವಾಗುತ್ತದೆ
ಎಂದು ಕಂಪೆನಿಯು ಭಾವಿಸಿದೆ’ ಎಂದು ಕಂಪೆನಿಯ ಹೇಳಿಕೆ
ತಿಳಿಸಿತು. ಸಿಐಆರ್ ಪಿಯು (ಕಾರ್ಪೋರೇಟ್ ಇನ್ ಸಾಲ್ವೆನ್ಸಿ ರೆಸಲ್ಯೂಷನ್ ಪ್ರೊಸೆಸ್ ) ಕಂಪೆನಿಯ ವಿಸರ್ಜನೆಯತ್ತ
ಸಾಗುವ ದಾರಿಯಲ್ಲ, ಬದಲಿಗೆ ಪ್ರಸ್ತುತ ಪರಿಸ್ಥಿತಿಯನ್ನು ನಿಭಾಯಿಸಲು ಲಭ್ಯವಿರುವ ಉತ್ತಮ ಮಾರ್ಗ.
ಇದು ಎಲ್ಲರ (ಮಾರಾಟಗಾರರು, ವಿತರಕರು, ನೌಕರರು ಮತ್ತಿತರರು) ಹಿತದೃಷ್ಟಿಯಿಂದ, ಮತ್ತು ಕಂಪೆನಿಯ ಮೌಲ್ಯ
ರಕ್ಷಿಸುವ ದೃಷ್ಟಿಯಿಂದ ಒಳ್ಳೆಯದು ಎಂಬುದು ಕಂಪೆನಿಯ ನಂಬಿಕೆ ಎಂದು ಹೇಳಿಕೆ ತಿಳಿಸಿತು. ಈ ಹಿನ್ನೆಲೆಯಲ್ಲಿ
ಸಂಬಂಧ ಪಟ್ಟ ಎಲ್ಲರ ಸಹಕಾರ ಕೋರುವುದಾಗಿಯೂ ಕಂಪೆನಿ ಮನವಿ ಮಾಡಿತು. ಗ್ರಾಹಕರಿಗೆ ತಡೆ ರಹಿತ ಸೇವಾ ಸಂಪರ್ಕ ಲಭಿಸುವಂತೆ ಮಾಡುವ
ನಿಟ್ಟಿನಲ್ಲಿ ಸರ್ವ ಪ್ರಯತ್ನ ಮಾಡಲಾಗುವುದು ಎಂದು ಹೇಳಿರುವ ಕಂಪೆನಿ ಕಷ್ಟದ ಸಮಯದಲ್ಲಿ ಸಹಕರಿಸುವಂತೆ
ಗ್ರಾಹಕರಿಗೆ ಮನವಿ ಮಾಡಿತು. ಏನಿದ್ದರೂ ಐಡಿಯಾ ಸೆಲ್ಯುಲರ್ ಮತ್ತು ವಡಾಫೋನ್ ಇತ್ಯಾದಿ ಟೆಲಿಕಾಂಗಳು
ತಮ್ಮ ಇಂಟರ್ ಕನೆಕ್ಟ್ ಸೇವೆಗಳನ್ನು ಸ್ಥಗಿತಗೊಳಿಸಿರುವುದರಿಂದ
ಏರ್ ಸೆಲ್ ಸೇವೆಗಳು ವ್ಯತ್ಯಯಗೊಂಡಿದೆ. ಆರು ಸರ್ಕಲ್
ಗಳಲ್ಲಿ ಏರ್ ಸೆಲ್ ತನ್ನ ಸೇವೆಗಳನ್ನು ಸ್ಥಗಿತಗೊಳಿಸಿದ್ದರೆ, ಇತರ ಪ್ರದೇಶಗಳಲ್ಲಿ ಆರ್ಥಿಕ ಬಿಕ್ಕಟ್ಟಿನಿಂದಾಗಿ
ಸೇವೆ ವ್ಯತ್ಯಯಗೊಂಡಿತು. ಬಾಕಿ ಪಾವತಿ ಮಾಡದ ಕಾರಣಕ್ಕಾಗಿ
ಟೆಲಿಕಾಂ ಟವರ್ ಕಂಪೆನಿ ಜಿಟಿಎಲ್ ಇನ್ ಪ್ರಾಸ್ಟ್ರಕ್ಚರ್ ಮೂರನೇ ಒಂದರಷ್ಟು ಟವರ್ ಗಳನ್ನು ಸ್ಚಿಚ್
ಆಫ್ ಮಾಡಿತು. ಮೊಬೈಲ್ ನಂಬರುಗಳನ್ನು ಪೋರ್ಟ್ ಮಾಡಿಕೊಳ್ಳುವಲ್ಲಿ ಭಾರಿ ಸಂಖ್ಯೆಯ ಚಂದಾದಾರರು ಸಮಸ್ಯೆಗಳನ್ನು
ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಯುನಿಕ್ ಪೋರ್ಟಿಂಗ್ ಕೋಡ್‌ಗಳನ್ನು (ಯುಪಿಸಿ) ಹುಟ್ಟುಹಾಕುವಂತೆ
ಭಾರತದ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಏರ್ ಸೆಲ್ ಗೆ ನಿರ್ದೇಶನ ನೀಡಿತು. ಟ್ರಾಯ್ ಮಾಹಿತಿಯ
ಪ್ರಕಾರ, ೧೭ ಟೆಲಿಕಾಂ ಸರ್ಕಲ್ ಗಳಲ್ಲಿ ೮೫೦ ಲಕ್ಷಕ್ಕೂ ಹೆಚ್ಚು ಏರ್ ಸೆಲ್ ಗ್ರಾಹಕರಿದ್ದಾರೆ.
2018: ನವದೆಹಲಿ: ಅತೀ ವೇಗದಲ್ಲಿ ಬೆಳೆಯುತ್ತಿರುವ ವಿಶ್ವದ ಪ್ರಮುಖ ಆರ್ಥಿಕ
ರಾಷ್ಟ್ರ ಎಂಬ ಖ್ಯಾತಿಯನ್ನು ಭಾರತ ಮತ್ತೆ ಸಂಪಾದಿಸಿತು. ಒಂದು ವರ್ಷದ ಅಂತರದ ಬಳಿಕ, ಕಳೆದ ಅಕ್ಟೋಬರ್
- ಡಿಸೆಂಬರ್ ಅವಧಿಯ ತ್ತೈಮಾಸಿಕ ಆರ್ಥಿಕ ಪ್ರಗತಿಯಲ್ಲಿ ಭಾರತವು ಚೀನವನ್ನು ಹಿಂದಿಕ್ಕಿತು. ಭಾರತದ
ಈ ಪ್ರಗತಿಗೆ ಸರ್ಕಾರದಿಂದ ಆಗಿರುವ ಅಧಿಕ ಮೊತ್ತದ ಖರ್ಚು , ಉತ್ಪಾದನೆ ಹಾಗೂ ಸೇವಾ ಕ್ಷೇತ್ರ ಚುರುಕಾಗಿ
ಪುನಶ್ಚೇತನ ಕಂಡಿರುವುದು ಮುಖ್ಯ ಕಾರಣ ಎಂದು ಈದಿನ ಬಿಡುಗಡೆ ಮಾಡಲಾದ ಅಧಿಕೃತ ಮಾಹಿತಿ ತಿಳಿಸಿತು.
ಏಶ್ಯದ ಮೂರನೇ ಅತೀ ದೊಡ್ಡ ಆರ್ಥಿಕತೆ ಎನಿಸಿರುವ ಭಾರತ ೨೦೧೭-೧೮ರ ಡಿಸೆಂಬರಿನಲ್ಲಿ ಕೊನೆಗೊಂಡ ತ್ತೈಮಾಸಿಕದಲ್ಲಿ ಶೇ.೭.೨ರ
ಜಿಡಿಪಿಯನ್ನು (ಸಮಗ್ರ ಆಂತರಿಕ ಉತ್ಪನ್ನ) ಸಾಧಿಸಿತು. ಕಳೆದ ಐದು ತ್ತೈಮಾಸಿಕಗಳಲ್ಲೇ ಅತ್ಯಂತ ವೇಗದ ಪ್ರಗತಿಯನ್ನು ಭಾರತ ಡಿಸೆಂಬರಿನಲ್ಲಿ ಕೊನೆಗೊಂಡ ತ್ತೈಮಾಸಿಕದಲ್ಲಿ ದಾಖಲಿಸಿತು. ಈ ತ್ತೈಮಾಸಿಕದಲ್ಲಿ ಚೀನ ದಾಖಲಿಸಿರುವ ಆರ್ಥಿಕ ಪ್ರಗತಿ
(ಜಿಡಿಪಿ) ಶೇ.೬.೮ ಮಾತ್ರ. ೨೦೧೬ರ ಕೊನೆಯ ಮೂರು ತಿಂಗಳಲ್ಲಿ ಭಾರತ ಆತ್ಯಂತ ವೇಗದ ಆರ್ಥಿಕ ಪ್ರಗತಿಯನ್ನು
ದಾಖಲಿಸಿತ್ತು. ಜಿಡಿಪಿ ಪ್ರಗತಿಯ ಪೂರ್ಣ ವರ್ಷದ ಪ್ರಮಾಣವನ್ನು ಸರ್ಕಾರ ಶೇಕಡಾ
೬.೫ರಿಂದ ಶೇಕಡಾ ೬.೬ಕ್ಕೆ ಏರಿಸಿತ್ತು. ಉತ್ಪಾದನಾ ವಲಯದಲ್ಲಿ ಮೂರನೇ ತ್ರೈಮಾಸಿಕದಲ್ಲಿ ಶೇಕಡಾ ೮.೧ರಷ್ಟು
ಪ್ರಗತಿ ಸಾಧಿಸಿದೆ. ಎರಡನೇ ತ್ರೈಮಾಸಿಕದಲ್ಲಿ ಶೇಕಡಾ ೬.೯ರಷ್ಟು ಪ್ರಗತಿ ದಾಖಲಾಗಿತ್ತು ಮತ್ತು ಮೊದಲ
ತ್ರೈಮಾಸಿಕಕ್ಕಿಂತ ಶೇಕಡಾ ೧.೮ರಷ್ಟು ಕುಗ್ಗಿತ್ತು. ಮೂರನೇ ತ್ರೈಮಾಸಿಕದಲ್ಲಿ ಕೃಷಿ ಕ್ಷೇತ್ರದಲ್ಲೂ
ದೃಢವಾದ ಬೆಳವಣಿಗೆ ಕಂಡು ಬಂದಿತ್ತು. ಮೊದಲ ಮತ್ತು ಎರಡನೇ ತ್ರೈಮಾಸಿಕಗಳಲ್ಲಿ ಇದ್ದ ಶೇಕಡಾ ೨.೭ರ
ರ ಕೃಷಿ ಪ್ರಗತಿ ಮೂರನೇ ತ್ರೈಮಾಸಿಕದಲ್ಲಿ ಶೇಕಡಾ ೪.೧ಕ್ಕೆ ಏರಿತ್ತು. ಉತ್ಪಾದನಾ ಕ್ಷೇತ್ರವು ೨೦೧೭-೧೮ರ ಆರ್ಥಿಕ ವರ್ಷದಲ್ಲಿ ಶೇಕಡಾ
೫.೧ರಷ್ಟು ಪ್ರಗತಿ ಸಾಧಿಸುವ ನಿರೀಕ್ಷೆ ಇದೆ. ಹಿಂದಿನ ಆರ್ಥಿಕ ವರ್ಷದಲ್ಲಿ ಈ ಪ್ರಮಾಣ ಶೇಕಡಾ ೭.೯ರಷ್ಟು
ಇತ್ತು. ಕೃಷಿ ರಂಗದಲ್ಲಿ ಶೇಕಡಾ ೩ರಷ್ಟು ಪ್ರಗತಿಯನ್ನು ನಿರೀಕ್ಷಿಸಲಾಗಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ
ಶೇಕಡಾ ೬.೩ರಷ್ಟು ಪ್ರಗತಿ ದಾಖಲಾಗಿತ್ತು.
2018: ನವದೆಹಲಿ: ಈದಿನ ಬೆಳಗ್ಗೆ ಬಂಧಿಸಲ್ಪಟ್ಟ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ
ಪುತ್ರ ಕಾರ್ತಿ ಚಿದಂಬರಂ ಅವರನ್ನು ದೆಹಲಿಯ ನ್ಯಾಯಾಲಯವು ಒಂದು ದಿನದ ಅವಧಿಗೆ ಸಿಬಿಐ ವಶಕ್ಕೆ ನೀಡಿತು.
ಐಎನ್ ಎಕ್ಸ್ ಮೀಡಿಯಾ ಹಣ ವರ್ಗಾವಣೆ ಪ್ರಕರಣದಲ್ಲಿ ಶಾಮೀಲಾಗಿರುವ ಸಂಬಂಧ ತನಿಖೆಗಾಗಿ ಕಾರ್ತಿ ಚಿದಂಬರಂ
ಅವರನ್ನು ೧೫ ದಿನಗಳ ಅವಧಿಗೆ ತನ್ನ ವಶಕ್ಕೆ ಒಪ್ಪಿಸುವಂತೆ ಸಿಬಿಐ ಕೋರಿಕೆ ಸಲ್ಲಿಸಿತ್ತು. ಕಾರ್ತಿ
ಚಿದಂಬರಂ ಅವರ ವಕೀಲ ಅಭಿಷೇಕ್ ಮನು ಸಿಂಘ್ವಿ ಮತ್ತು ಸಿಬಿಐ ಪರ ವಕೀಲ ಸುಮೀತ್ ಆನಂದ ಅವರ ಮಧ್ಯೆ ತೀವ್ರ
ವಾಕ್ಸಮರದ ಬಳಿಕ ನ್ಯಾಯಾಲಯವು ಕಾರ್ತಿ ಚಿದಂಬರಂ ಅವರನ್ನು ಒಂದು ದಿನದ ಅವಧಿಗೆ ಸಿಬಿಐ ವಶಕ್ಕೆ ಒಪ್ಪಿಸಿ
ಆದೇಶ ನೀಡಿತು. ಕಾರ್ತಿ ಚಿದಂಬರಂ ಅವರು ತನಿಖೆಯಲ್ಲಿ ಸಹಕರಿಸುತ್ತಿಲ್ಲವಾದ್ದರಿಂದ ಅವರನ್ನು ಬಂಧಿಸಲಾಯಿತು
ಎಂದು ಸಿಬಿಐ ಪರ ವಕೀಲರು ವಾದಿಸಿದರೆ, ಬಂಧನ ಉದ್ದೇಶಪೂರಿತ ಮತ್ತು ವಿಲಕ್ಷಣವಾದದ್ದು ಎಂದು ಕಾರ್ತಿ
ಪರ ವಕೀಲರು ವಾದಿಸಿದರು. ಕಾರ್ತಿ ಅವರು ಪದೇ ಪದೇ ವಿದೇಶಕ್ಕೆ ತೆರಳುತ್ತಿದ್ದು ಇದರಿಂದ ತನಿಖೆಗೆ
ಅಡ್ಡಿಯಾಗಿದೆ. ಆದ್ದರಿಂದ ಸಿಬಿಐ ವಶಕ್ಕೆ ಕಾರ್ತಿ ಚಿದಂಬರಂ ಅವರನ್ನು ಒಪ್ಪಿಸುವುದು ಅತ್ಯಂತ ಅಗತ್ಯವಾಗಿದೆ
ಎಂದು ಸುಮೀತ್ ಆನಂದ ವಾದಿಸಿದರು. ‘ಕಾರ್ತಿ ಅವರು ತನಿಖೆಗೆ ಸಹಕರಿಸುತ್ತಿಲ್ಲವಾದ ಕಾರಣ ಅವರನ್ನು
ಬಂಧಿಸಲಾಗಿದೆ. ನಾವು ಮುಕ್ತ ನ್ಯಾಯಾಲಯದಲ್ಲಿ ಹೇಳಲಾಗದಂತಹ ಹಲವಾರು ವಿಷಯಗಳಿವೆ. ಕನಿಷ್ಠ ೧೫ ದಿನಗಳವರೆಗೆ
ಕಾರ್ತಿ ಚಿದಂಬರಂ ಅವರು ಸಿಬಿಐ ತನಿಖೆಗೆ ಬೇಕಾಗಿದೆ. ಅವರು ಸಹಕರಿಸುತ್ತಿಲ್ಲ ಮತ್ತು ಪದೇ ಪದೇ ವಿದೇಶಕ್ಕೆ
ಹೋಗುತ್ತಾರೆ ಎಂದು ಸಿಬಿಐ ವಕೀಲರು ಹೇಳಿದರು. ಸಿಬಿಐ
ವಕೀಲರ ಆಪಾದನೆಯನ್ನು ತಳ್ಳಿಹಾಕಿದ ಸಿಂಘ್ವಿ ತನಿಖೆಗೆ ಸಹಕರಿಸಿದೇ ಇರುವ ಪ್ರಶ್ನೆಯೇ ಇಲ್ಲ. ಕಳೆದ
೬ ತಿಂಗಳುಗಳಲ್ಲಿ ಒಂದು ಸಮನ್ಸ್ ಕೂಡಾ ನೀಡಲಾಗಿಲ್ಲ. ಲಂಚ ಪಡೆದಿದೆ ಎಂದು ಆಪಾದಿಸಲಾಗಿರುವ ಅಡ್ವಾಂಟೇಜ್
ಸ್ಟ್ರಾಟಜಿಕ್ ಕನ್ ಸಲ್ಟಿಂಗ್ (ಪಿ) ಲಿಮಿಟೆಡ್ ಕಂಪೆನಿ ಜೊತೆಗೆ ಕಾರ್ತಿ ಅವರಿಗೆ ಯಾವುದೇ ಸಂಬಂಧವೂ
ಇಲ್ಲ’ ಎಂದು ಪ್ರತಿಪಾದಿಸಿದರು. ಕಾರ್ತಿ ಅವರನ್ನು
ಈದಿನ ಬೆಳಗ್ಗೆ ಲಂಡನ್ ನಿಂದ ವಿಮಾನದಲ್ಲಿ ಬಂದು ಇಳಿದ
ಸ್ವಲ್ಪವೇ ಹೊತ್ತಿನಲ್ಲಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಕಾರ್ತಿ ಅವರ ಜೊತೆಗೆ
ಸಂಪರ್ಕವಿದ್ದ ಕಂಪೆನಿಗಳು ಐಎನ್ ಎಕ್ಸ್ ಮೀಡಿಯಾ ದಲ್ಲಿ ೩೦೫ ಕೋಟಿ ರೂಪಾಯಿ ಅಕ್ರಮ ಹೂಡಿಕೆಗೆ ಎಫ್
ಐಪಿಬಿ ಮಂಜೂರಾತಿ ಲಭಿಸಲು ಪ್ರಭಾವ ಬೀರಿದ್ದವು ಎಂದು ಸಿಬಿಐ ಆಪಾದಿಸಿತ್ತು. ಕಾರ್ತಿ ಅವರ ತಂದೆ ಹಣಕಾಸು
ಸಚಿವರಾಗಿದ್ದಾಗ ೨೦೦೭ರಲ್ಲಿ ಇದು ನಡೆದಿತ್ತು ಎಂದು ಸಿಬಿಐ ಹೇಳಿದ್ದು, ಕಾರ್ತಿ, ಐಎನ್ ಎಕ್ಸ್ ಮೀಡಿಯಾ
ಮತ್ತು ಇತರ ೮ ಜನರ ವಿರುದ್ಧ ಹಾಗೂ ಹಣಕಾಸು ಸಚಿವಾಲಯದ ಕೆಲವು ಅಪರಿಚಿತ ಅಧಿಕಾರಿಗಳ ವಿರುದ್ಧ ಎಫ್
ಐ ಆರ್ ದಾಖಲಿಸಲಾಗಿತ್ತು.
2017: ಚೆನ್ನೈ: ಬೇಸಿಗೆಯಲ್ಲಿ ಪದೇ ಪದೇ ಕೈಕೊಡುವ ವಿದ್ಯುತ್ಗೆ ಪರ್ಯಾಯವಾಗಿ ತಮಿಳುನಾಡಿನ ಯುವಕನೊಬ್ಬ ತನ್ನ ಅಜ್ಜನಿಗಾಗಿ ವಿನೂತನ ಫ್ಯಾನ್ ವಿನ್ಯಾಸಗೊಳಿಸಿದ್ದು ಬೆಳಕಿಗೆ ಬಂತು. ಈ ಫ್ಯಾನ್ ತಿರುಗಲು ವಿದ್ಯುತ್ಶಕ್ತಿ ಬೇಕಿಲ್ಲ. ಬ್ಯಾಟರಿಯೂ ಬೇಕಿಲ್ಲ. ನಿತ್ಯ ಕಾಯಕದಲ್ಲಿ ಸಹಾಯವಾಗುವಂತೆ ಚಲನಶಕ್ತಿ ಆಧಾರದ ಮೇಲೆ ಫ್ಯಾನ್ ತಯಾರಿಸಲಾಗಿದೆ. ದಿನೇಶ್ ಜಿ.ಎಸ್. ಎಂಬ ಎಂಜಿನಿಯರಿಂಗ್ ವಿದ್ಯಾರ್ಥಿ ತನ್ನ ಅಜ್ಜನಿಗಾಗಿ ಈ ಫ್ಯಾನ್ ನಿರ್ಮಿಸಿದ. ಕೈಮಗ್ಗ ನೇಯ್ಗೆ (ಪವರ್ಲೂಮ್) ಮಾಡುವ ದಿನೇಶ್ ಅವರ ತಾತ ಪದೇ ಪದೇ ಕಡಿತಗೊಳ್ಳುವ ವಿದ್ಯುತ್ನಿಂದ ಬೇಸತ್ತಿದ್ದರು. ವಿದ್ಯುತ್ ಕಡಿತಗೊಂಡ ಸಮಯದಲ್ಲಿ ಕೆಲಸ ಮಾಡದ ಪರಿಸ್ಥಿತಿ ಉಂಟಾಗುತ್ತದೆ ಎಂದು ಮೊಮ್ಮಗನ ಬಳಿ ಹೇಳಿಕೊಂಡಿದ್ದರು. ಕೂಡಲೇ ಉಪಾಯ ಮಾಡಿದ ದಿನೇಶ್, ಫ್ಯಾನ್ ನಿರ್ಮಿಸಲು ಬೇಕಿರುವ ಸಲಕರಣೆಗಳನ್ನು ತಂದು ಫ್ಯಾನ್ ಸಿದ್ಧಪಡಿಸಿದ. ಚಲನಶಕ್ತಿಯ ಉಪಯೋಗ ಅರಿತಿರುವ ಈತ ಕೈಮಗ್ಗದಲ್ಲಿ ಉತ್ಪತ್ತಿಯಾಗುವ ಬಾಹ್ಯಶಕ್ತಿಯ ಪ್ರಯೋಜನ ಪಡೆಯಲು ಮುಂದಾದ. ನೇಯ್ಗೆ ಸಮಯದಲ್ಲಿ ಚಲಿಸುವ ಯಂತ್ರಕ್ಕೆ ಫ್ಯಾನ್ ಕೂಡ ಸಂಪರ್ಕಕ್ಕೆ ಬರುವಂತೆ ವಿನ್ಯಾಸ ರೂಪಿಸಿದ. ನೇಯ್ಗೆಯಲ್ಲಿ ವಿನಿಯೋಗಿಸುವ ಸಮಯದಲ್ಲಿ ಫ್ಯಾನ್ ರೆಕ್ಕೆಗಳು ಕೂಡ ತಿರುಗುತ್ತವೆ. ಇದರಿಂದ ಯಾವುದೇ ವಿದ್ಯುತ್ ಅಥವಾ ಬ್ಯಾಟರಿ ಸಹಾಯವಿಲ್ಲದೆ ಫ್ಯಾನ್ ತಿರುಗುತ್ತದೆ. ಈ ಆವಿಷ್ಕಾರದ ಮೂಲಕ ಅಜ್ಜನ ದೈನಂದಿನ ವೃತ್ತಿ ಬದುಕನ್ನು ಸುಗಮಗೊಳಿಸಿದ ದಿನೇಶ್ ಹೊಸ ಪ್ರಯತ್ನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
1928: ಈದಿನವನ್ನು ಭಾರತದಲ್ಲಿ `ರಾಷ್ಟ್ರೀಯ ವಿಜ್ಞಾನ ದಿನ'ವಾಗಿ ಆಚರಿಸಲಾಗುತ್ತಿದೆ. 1928ರಲ್ಲಿ ಈದಿನ ಸರ್ ಚಂದ್ರಶೇಖರ ವೆಂಕಟರಾಮನ್ (ಸಿ.ವಿ.ರಾಮನ್) ಅವರು ಸಣ್ಣ ಕಣದ ಮೂಲಕ ಬೆಳಕನ್ನು ಹಾಯಿಸಿದಾಗ ಅದರಲ್ಲಿ ಉಂಟಾಗುವ ವ್ಯತ್ಯಾಸವನ್ನು (ಚದುರುವಿಕೆ) ಕಂಡು ಹಿಡಿದರು. ಅವರ ಈ ಸಂಶೋಧನೆ `ರಾಮನ್ ಎಫೆಕ್ಟ್' ಎಂದೇ ಖ್ಯಾತಿ ಪಡೆಯಿತು ಹಾಗೂ ಅವರಿಗೆ 1930ರಲ್ಲಿ ನೊಬೆಲ್ ಪ್ರಶಸ್ತಿಯನ್ನು ತಂದುಕೊಟ್ಟಿತು.
2009: ಗುಲ್ಬರ್ಗದಲ್ಲಿ ಸ್ಥಾಪಿಸಲು ಉದ್ದೇಶಿಸಲಾದ ಕೇಂದ್ರೀಯ ವಿಶ್ವ ವಿದ್ಯಾಲಯದ ಕುಲಪತಿಯಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ಹೈದರಾಬಾದಿನ ಮೌಲಾನಾ ಅಜಾದ್ ರಾಷ್ಟ್ರೀಯ ಉರ್ದು ವಿಶ್ವ ವಿದ್ಯಾಲಯದ ಹಾಲಿ ಕುಲಪತಿ ಪ್ರೊ. ಎ. ಎಂ. ಪಠಾಣ್ ಅವರನ್ನು ಆಯ್ಕೆ ಮಾಡಲಾಯಿತು. ಹಾವೇರಿ ಜಿಲ್ಲೆಯ ಬಂಕಾಪುರದಲ್ಲಿ ಜನಿಸಿದ ಪಠಾಣ್ ಎರಡು ಅವಧಿಗೆ ಕರ್ನಾಟಕ ವಿವಿ ಕುಲಪತಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಕುಲ ಸಚಿವರು ಮತ್ತು ಹಂಗಾಮಿ ಕುಲಪತಿಗಳಾಗಿದ್ದರು.
2009: 'ಲಂಚ ಪ್ರಕರಣ ನಡೆದ ಹಿನ್ನೆಲೆಯಲ್ಲಿ ಶಾಸಕರ ಭವನವನ್ನು ವಿಧಾನಸೌಧದ ವ್ಯಾಪ್ತಿಗೆ ಸೇರಿಸುವುದಾದರೆ ಶಾಸಕರ ಮನೆ, ವಾಹನ ಮತ್ತು ಖಾಸಗಿ ಕಚೇರಿಗಳ ವಿಷಯದಲ್ಲೂ ಇದೇ ನಿರ್ಧಾರ ಕೈಗೊಳ್ಳಬೇಕಾಗುತ್ತದೆ' ಎಂದು ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಬೆಂಗಳೂರಿನಲ್ಲಿ ಹೇಳಿದರು. ಶಾಸಕ ಎನ್. ಸಂಪಂಗಿ ಲಂಚ ಪ್ರಕರಣದ ಹಿನ್ನೆಲೆಯಲ್ಲಿ ಶಾಸಕರ ಭವನವನ್ನು ವಿಧಾನಸೌಧದ ವ್ಯಾಪ್ತಿಗೆ ಸೇರಿಸಿ ವಿಧಾನಸಭೆಯ ಅಧ್ಯಕ್ಷರು ರೂಲಿಂಗ್ ನೀಡಿದ ಕುರಿತು ಪ್ರತಿಕ್ರಿಯೆ ನೀಡಿದ ಅವರು, 'ಇಂತಹ ನಿರ್ಣಯಗಳಿಂದ ಸ್ವತಂತ್ರ ತನಿಖಾ ಸಂಸ್ಥೆಗಳು ಭ್ರಷ್ಟರನ್ನು ಸೆರೆಹಿಡಿಯಲು ಹೆಚ್ಚು ಕಷ್ಟ ಪಡಬೇಕಾಗುತ್ತದೆ' ಎಂದರು. 'ಶಾಸಕರ ಭವನದಲ್ಲಿ ಕುಳಿತು ಚುನಾಯಿತ ಜನಪ್ರತಿನಿಧಿಗಳು ನಡೆಸುವ ಅಕ್ರಮಗಳ ಬಗ್ಗೆ ವಿಚಾರಣೆ ನಡೆಸಲು ನಿರ್ಬಂಧ ವಿಧಿಸಿರುವುದು ಅಚ್ಚರಿ ಉಂಟುಮಾಡಿದೆ. ಇನ್ನು ಶಾಸಕರು ಮನೆಗಳಲ್ಲಿ, ಖಾಸಗಿ ಕಚೇರಿ ಮತ್ತು ವಾಹನಗಳಲ್ಲೇ ಕುಳಿತು ಇಂತಹ ದಂಧೆ ನಡೆಸುತ್ತಾರೆ. ಮುಂದಿನ ದಿನಗಳಲ್ಲಿ ಅವೆಲ್ಲವನ್ನೂ ವಿಧಾನಸೌಧದ ವ್ಯಾಪ್ತಿಗೆ ತರಬೇಕಾಗಬಹುದು' ಎಂದು ಅವರು ಹೇಳಿದರು. 'ನನಗೆ ತಿಳಿದ ಪ್ರಕಾರ ಇಂತಹ ಬದಲಾವಣೆ ಮಾಡಲು ನೂತನ ಶಾಸನ ರೂಪಿಸಬೇಕು ಇಲ್ಲವೇ ಇರುವ ಕಾಯ್ದೆಗೆ ತಿದ್ದುಪಡಿ ತರಬೇಕು. ಆದರೆ ಈ ರೀತಿಯ ಯಾವುದೇ ಪ್ರಕ್ರಿಯೆಗಳಿಲ್ಲದೇ ನೇರವಾಗಿ ರೂಲಿಂಗ್ ಮೂಲಕ ಶಾಸಕರ ಭವನವನ್ನು ವಿಧಾನಸೌಧದ ವ್ಯಾಪ್ತಿಗೆ ತಂದಿದ್ದಾರೆ. ನಿಯಮಗಳ ಪ್ರಕಾರವೇ ಪ್ರಕ್ರಿಯೆ ನಡೆದಿಲ್ಲ' ಎಂದು ಅವರು ನುಡಿದರು. ಸದ್ಯದ ಪರಿಸ್ಥಿತಿಯಲ್ಲಿ ತಮ್ಮ ಸಂಸ್ಥೆಯ ತನಿಖಾ ಅಧಿಕಾರಿಗಳು ಶಾಸಕರ ಭವನಕ್ಕೆ ಕಾರ್ಯಾಚರಣೆಗೆ ಹೋಗುವಾಗ ಸಭಾಧ್ಯಕ್ಷರ ಅನುಮತಿ ಪಡೆಯಬೇಕಾಗುತ್ತದೆ. ಇದರಿಂದ ತನಿಖೆಗೆ ಸ್ವಲ್ಪ ವಿಳಂಬವಾಗಬಹುದು, ಆದರೆ ಅಲ್ಲಿ ಕಾರ್ಯಾಚರಣೆಗಳು ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದರು.
2009: ದೇಶದಲ್ಲಿನ ಮುಕ್ತ ವಿಶ್ವವಿದ್ಯಾಲಯಗಳು ನೀಡುವ ಎರಡು ವರ್ಷಗಳ ಅವಧಿಯ ಸ್ನಾತಕೋತ್ತರ ಪದವಿ ಮಾನ್ಯತೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತು. ಮುಕ್ತ ವಿಶ್ವವಿದ್ಯಾಲಯಗಳು ಕೂಡಾ ಯುಜಿಸಿ ನೀತಿ ನಿಯಮಾವಳಿಗಳಿಗೆ ಬದ್ಧವಾಗಿರಬೇಕು. ಆದ್ದರಿಂದ ಮುಕ್ತವಿವಿಗಳಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಮೂರು ವರ್ಷದ ಪದವಿ ಶಿಕ್ಷಣದ ನಿಯಮಿತ ಅಧ್ಯಯನ ಕಡ್ಡಾಯ ಎಂದು ನ್ಯಾಯಮೂರ್ತಿ ಎಸ್.ಬಿ.ಸಿನ್ಹಾ ಅವರ ನೇತೃತ್ವದ ಪೀಠವು ಅಭಿಪ್ರಾಯಪಟ್ಟಿತು. ಅಣ್ಣಾಮಲೈ ವಿಶ್ವವಿದ್ಯಾಲಯವು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಸಂದರ್ಭ ಪೀಠವು ಈ ತೀರ್ಪು ನೀಡಿತು. ಸುಪ್ರೀಂ ಕೋರ್ಟಿನ ಈ ತೀರ್ಪಿನಿಂದಾಗಿ ಇಂದಿರಾಗಾಂಧಿ ಮುಕ್ತವಿಶ್ವವಿದ್ಯಾಲಯವೂ ಸೇರಿದಂತೆ ದೇಶದ ಎಲ್ಲ ಮುಕ್ತ ವಿಶ್ವವಿದ್ಯಾಲಯಗಳು ಈಗ ಏಕರೂಪದ ಗುಣಮಟ್ಟದ ಶಿಕ್ಷಣ ನೀತಿ ಪಾಲಿಸಬೇಕಾಗುತ್ತದೆ. ಮುಕ್ತ ವಿಶ್ವವಿದ್ಯಾಲಯಗಳು ನೀಡುವ ಶಿಕ್ಷಣ ಯುಜಿಸಿ ನೀತಿಗೆ ಅನುಗುಣವಾಗಿಯೇ ಇರಬೇಕೆಂದೂ ಪೀಠವು ತಾಕೀತು ಮಾಡಿತು.
2009: ಬೃಹತ್ ಪ್ರಮಾಣದ ಯುದ್ಧನೌಕೆಗಳನ್ನು ದೇಶೀಯವಾಗಿ ನಿರ್ಮಾಣ ಮಾಡುವ ಶಕ್ತ ರಾಷ್ಟ್ರಗಳ ಗುಂಪಿಗೆ ಭಾರತ ಸೇರ್ಪಡೆಯಾಯಿತು. ಕೇಂದ್ರ ರಕ್ಷಣಾ ಸಚಿವ ಎ.ಕೆ.ಆಂಟನಿ ಅವರು ಕೊಚ್ಚಿ ಹಡಗುಕಟ್ಟೆಯಲ್ಲಿ ಭಾರತದ ಪ್ರಥಮ ದೇಶೀಯ ನಿರ್ಮಿತ ಬೃಹತ್ ಯುದ್ಧನೌಕೆ ಐಎಸಿಯಲ್ಲಿನ (ಇಂಡಿಯನ್ ಏರ್‌ಕ್ರಾಫ್ಟ್ ಕ್ಯಾರಿಯರ್) ರನ್‌ವೇ ನಿರ್ಮಾಣಕ್ಕೆ ಸಾಂಕೇತಿಕ ಚಾಲನೆ ನೀಡಿದರು. ಇನ್ನೊಂದು ವರ್ಷದಲ್ಲಿ ಇದೇ ಮಾದರಿಯ ಇನ್ನೊಂದು ಬೃಹತ್ ಯುದ್ಧ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಸುರೇಶ್ ಮೆಹ್ತಾ ಈ ಸಂದರ್ಭದಲ್ಲಿ ತಿಳಿಸಿದರು.
2009: ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯದ ಇಬ್ಬರಿಗೆ 'ಶ್ರೇಷ್ಠ ಅಂಗನವಾಡಿ ಕಾರ್ಯಕರ್ತರು' ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಾಸನ ಜಿಲ್ಲೆ ಬೇಲೂರಿನ ಕೆಂಪದೇವಮ್ಮ ಮತ್ತು ಮಂಗಳೂರಿನ ಜಯಲಕ್ಷ್ಮಿ ಪ್ರಶಸ್ತಿಗೆ ಪಾತ್ರರಾದವರು. ಮಕ್ಕಳ ಸಮಗ್ರ ಅಭಿವೃದ್ಧಿ ಯೋಜನೆಯನ್ನು (ಐಸಿಡಿಎಸ್)ಯನ್ನು ಅನುಷ್ಠಾನಗೊಳಿಸಲು ಹಾಗೂ ಆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಮಾಡಿದ ಪ್ರಯತ್ನವನ್ನು ಮೆಚ್ಚಿ ಈ ಪ್ರಶಸ್ತಿ ನೀಡಲಾಯಿತು.
2008: ಲಾಹೋರಿನ ಕೇಂದ್ರ ಕಾರಾಗೃಹದಲ್ಲಿ 35 ವರ್ಷಗಳಿಂದ ಸೆರೆವಾಸದಲ್ಲಿರುವ ಭಾರತೀಯ ಕಾಶ್ಮೀರ ಸಿಂಗ್, ಉಭಯ ದೇಶಗಳ ಜನಪ್ರತಿನಿಧಿಗಳ ಪ್ರಯತ್ನದಿಂದಾಗಿ ಶೀಘ್ರದಲ್ಲೇ ಬಿಡುಗಡೆಯಾಗಿ ಪಂಜಾಬಿನಲ್ಲಿರುವ ತನ್ನ ಕುಟುಂಬ ಸದಸ್ಯರ ಜೊತೆಗೂಡಲಿದ್ದಾನೆ ಎಂದು ಇಸ್ಲಾಮಾಬಾದಿನಲ್ಲಿ ಪ್ರಕಟಿಸಲಾಯಿತು. ಬೇಹುಗಾರಿಕೆ ಆರೋಪದ ಮೇಲೆ 1973ರಲ್ಲಿ ಬಂಧನಕ್ಕೊಳಗಾಗಿದ್ದ ಕಾಶ್ಮೀರ ಸಿಂಗ್ ಗೆ ಸೇನಾ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು. ಆದರೆ, ಅದಾವುದೋ ಕಾರಣಕ್ಕೆ ಶಿಕ್ಷೆ ಜಾರಿಗೊಳಿಸದೇ 35 ವರ್ಷಗಳ ಕಾಲ ಸೆರೆಮನೆಯ ಕತ್ತಲ ಕೋಣೆಯಲ್ಲಿ ಆತನನ್ನು ಏಕಾಂಗಿಯಾಗಿ ಇರಿಸಲಾಗಿತ್ತು. ಜೈಲು ಸುಧಾರಣೆ ಕಾರ್ಯಕ್ರಮದ ಭಾಗವಾಗಿ ಪಾಕಿಸ್ಥಾನದ ಮಾನವ ಹಕ್ಕುಗಳ ಸಚಿವ ಅನ್ಸಾರ್ ಬರ್ನಿ ಲಾಹೋರ್ ಜೈಲಿಗೆ ಭೇಟಿ ನೀಡಿದ್ದಾಗ ಈತನ ಹೃದಯವಿದ್ರಾವಕ ಕಥೆ ಗೊತ್ತಾಯಿತು. ದೀರ್ಘಕಾಲದ ಸೆರೆವಾಸದಿಂದ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದ ಕಾಶ್ಮೀರ್ ಸಿಂಗ್ ಗೆ ಚಿಕಿತ್ಸೆ ಕೊಡಿಸಲಾಯಿತು. ನಂತರ ಬರ್ನಿ ಅವರು ಅಧ್ಯಕ್ಷ ಪರ್ವೇಜ್ ಮುಷರಫ್ ಬಳಿ ಸಿಂಗ್ ಬಿಡುಗಡೆಗೆ ಮನವಿ ಮಾಡಿದ್ದರು. ಬರ್ನಿ ಮನವಿ ಮೇರೆಗೆ ಪಂಜಾಬಿನ ಹೋಶಿಯಾರ್ ಪುರ ಜಿಲ್ಲೆಯಲ್ಲಿ ಕಾಶ್ಮೀರ್ ಸಿಂಗ್ ಕುಟುಂಬದವರನ್ನು ಬಿಜೆಪಿ ಸಂಸದ ಅವಿನಾಶ್ ರಾಯ್ ಖನ್ನಾ ಪತ್ತೆ ಮಾಡಿದರು. ಗರ್ ಶಂಕರ್ ಉಪ ಜಿಲ್ಲೆಯ ನಂಗಲ್ ಚೌರನ್ ಗ್ರಾಮದಲ್ಲಿ ಇಬ್ಬರು ಮಕ್ಕಳೊಂದಿಗೆ ಸಿಂಗ್ ಪತ್ನಿ ವಾಸವಾಗಿದುದ್ದುದು ಗೊತ್ತಾಯಿತು. ಈ ವಿವರನ್ನು ಖನ್ನಾ ಅವರಿಂದ ಪಡೆದ ಬರ್ನಿ ಲಾಹೋರ್ ಕೇಂದ್ರ ಕಾರಾಗೃಹದಲ್ಲಿ ಕಾಶ್ಮೀರ ಸಿಂಗ್ಗೆ ವಿವರ ತಿಳಿಸಿ ಬಿಡುಗಡೆಯ ಬೆಳವಣಿಗೆ ವಿವರಿಸಿದರು.
2008: ವಿವಾದಿತ ಸೇತುಸಮುದ್ರಂ ಕಡಲ್ಗಾಲುವೆ ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿಗೆ ಸಲ್ಲಿಸಲಾಗುವ ಪ್ರಮಾಣಪತ್ರಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿತು. ಪ್ರಧಾನಿ ಮನಮೋಹನ್ ಸಿಂಗ್ ಅಧ್ಯಕ್ಷತೆಯಲ್ಲಿ ರಾಜಕೀಯ ವಿದ್ಯಮಾನಗಳ ಕುರಿತ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಮಾಣಪತ್ರಕ್ಕೆ ಅನುಮೋದನೆ ನೀಡಲಾಯಿತು. ಸೇತುಸಮುದ್ರಂ ಯೋಜನೆಗೆ ನೀಡಿರುವ ತಡೆಯಾಜ್ಞೆ ತೆರವು ಮಾಡಲು ಕೋರುವುದು ಈ ಪ್ರಮಾಣಪತ್ರದ ಉದ್ದೇಶ ಎಂದು ಯುಪಿಎ ಮೂಲಗಳು ತಿಳಿಸಿದವು. ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರದ ಬಂದರು ಖಾತೆ ಮತ್ತು ಸಂಸ್ಕೃತಿ ಖಾತೆಗಳ ಮಧ್ಯೆ ಭಿನ್ನಾಭಿಪ್ರಾಯ ಇದ್ದು, ಈ ಎರಡೂ ಖಾತೆಗಳ ಸಚಿವರು ಸಂಪುಟ ಸಮಿತಿ ಸಭೆಗೆ ಹಾಜರಾಗಿದ್ದರು. ಬಂದರು ಖಾತೆ ಸಚಿವರಾದ ಡಿಎಂಕೆಯ ಟಿ.ಆರ್.ಬಾಲು ಯೋಜನೆ ಆಗಿಯೇ ತೀರಬೇಕೆಂದು ಪಟ್ಟು ಹಿಡಿದರೆ, ಸಂಸ್ಕೃತಿ ಸಚಿವೆ ಅಂಬಿಕಾ ಸೋನಿ, `ರಾಮಸೇತು' ಮನುಷ್ಯ ನಿರ್ಮಿತವೋ ಅಥವಾ ನೈಸರ್ಗಿಕವಾದದ್ದೋ ಎಂಬ ಬಗ್ಗೆ ಏಕಾಏಕಿ ತೀರ್ಮಾನಕ್ಕೆ ಬರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
2008: `ಸರ್ಕಾರಿ ನೌಕರರೊಬ್ಬರು ಮೃತರಾದಾಗ ಅವರ ಹತ್ತಿರದ ಸಂಬಂಧಿಕರು ಮಾನವೀಯತೆಯ ಆಧಾರದಲ್ಲಿ ತಮ್ಮ ಹಕ್ಕೆಂದು ಪರಿಗಣಿಸಿ ಉದ್ಯೋಗ ಯಾಚಿಸುವಂತಿಲ್ಲ' ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿತು. ಆದರೆ ಈ ವಿಷಯದಲ್ಲಿ `ಮೃತ ನೌಕರನ ಕುಟುಂಬದ ಆರ್ಥಿಕ ಸ್ಥಿತಿಗತಿಗಳನ್ನು ಅವಲಂಬಿಸಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ' ಎಂದು ನ್ಯಾಯಮೂರ್ತಿಗಳಾದ ಪಿ.ಪಿ. ನಾವಲೇಕರ್ ಮತ್ತು ಎಲ್. ಎಸ್. ಪಂಟಾ ಅವರನ್ನೊಳಗೊಂಡ ಪೀಠ ತೀರ್ಪು ನೀಡಿತು. ಆಂಧ್ರಪ್ರದೇಶ ರಸ್ತೆ ಸಾರಿಗೆ ನಿಗಮದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ತನ್ನ ಪತಿ ಮೃತರಾದ ಕಾರಣವೊಡ್ಡಿ ಸರ್ವರುನ್ನೀಸಾ ಬೇಗಂ ಎಂಬ ವಿಧವೆ ಮಾನವೀಯತೆಯ ಆಧಾರದಲ್ಲಿ ತನಗೆ ಉದ್ಯೋಗಕ್ಕೆ ಬದಲಾಗಿ ಒಂದು ಲಕ್ಷ ರೂಪಾಯಿಗಳ ಪರಿಹಾರ ನೀಡುವಂತೆ ಕೋರಿದ್ದಕ್ಕೆ ಸಂಬಂಧಿಸಿ ರಾಜ್ಯದ ಹೈಕೋರ್ಟ್ ನೀಡಿದ್ದ ತೀರ್ಪನ್ನು ವಜಾಗೊಳಿಸಿದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು. ರಸ್ತೆ ಸಾರಿಗೆ ನಿಗಮವು ವಿಧವೆಗೆ ಉದ್ಯೋಗ ಅಥವಾ ಪರಿಹಾರ ನೀಡಲು ನಿರಾಕರಿಸಿದ್ದನ್ನು ಪ್ರಶ್ನಿಸಿ ಬೇಗಂ, ಹೈಕೋರ್ಟ್ ಮೊರೆ ಹೋದಾಗ, ಅದು ಉದ್ಯೋಗ ನೀಡಲು ಸೂಚಿಸಿತ್ತು. ಆದರೆ ಈ ಆದೇಶವನ್ನು ಸಾರಿಗೆ ನಿಗಮ ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿತ್ತು.
2008: ಸೂರತ್ ಸಮೀಪ ಉದಾನ ರೈಲ್ವೆ ನಿಲ್ದಾಣದ ಕಂಕ್ರಖಾಡಿ ಸೇತುವೆಯ ಮೇಲೆ ಫೆಬ್ರುವರಿ 27ರ ರಾತ್ರಿ `ಸೌರಾಷ್ಟ್ರ ಎಕ್ಸ್ ಪ್ರೆಸ್' ರೈಲು ಹರಿದು ಕನಿಷ್ಠ 16 ಪ್ರಯಾಣಿಕರು ಮೃತರಾದರು. ಮೃತರಲ್ಲಿ ಇಬ್ಬರು ಮಹಿಳೆಯರು ಮತ್ತು ಹೆಚ್ಚಿನವರು ಮಕ್ಕಳು. ಇವರೆಲ್ಲರೂ ಉತ್ತರಪ್ರದೇಶದ ಕಾರ್ಮಿಕರು. ಈ ಕುಟುಂಬವು ವಾರಣಾಸಿಯಿಂದ ಸೂರತ್ತಿಗೆ ಹೋಗುವ `ತಪತಿ ಗಂಗಾ ಎಕ್ಸ್ ಪ್ರೆಸ್' ರೈಲಿನ ಮೂಲಕ ಉದಾನಕ್ಕೆ ಬಂದಿತ್ತು. ನತದೃಷ್ಟರು ರಾತ್ರಿ 11 ಗಂಟೆಗೆ ಉದಾನ ನಿಲ್ದಾಣದಲ್ಲಿ ರೈಲಿನಿಂದ ಕೆಳಗಿಳಿದು ಹಳಿಯ ಮೇಲೆ ನಡೆದುಕೊಂಡು ಸೇತುವೆ ದಾಡುತ್ತಿದ್ದಾಗ ವೇಗವಾಗಿ ಬಂದ ಮುಂಬೈ-ದ್ವಾರಕಾ ರೈಲಿಗೆ ಸಿಕ್ಕಿ ಮೃತರಾದರು.
2008: ಆರ್ಕ್ಟಿಕ್ ನಲ್ಲಿ ಎರಡು ವರ್ಷಗಳ ಹಿಂದೆ ಪತ್ತೆಯಾದ ಸಮುದ್ರ ದೈತ್ಯನ ಪಳೆಯುಳಿಕೆ ಈವರೆಗೆ ವಿಜ್ಞಾನಿಗಳಿಗೆ ತಿಳಿದಿರುವ ಸಮುದ್ರ ಸರೀಸೃಪಗಳಲ್ಲೇ ಅತಿ ದೊಡ್ಡದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟರು. `ದಿ ಮಾನ್ಸ್ಟರ್' (ದೈತ್ಯ) ಎಂದು ಕರೆಯಲಾಗುವ ಈ ಸರೀಸೃಪದ ಪಳೆಯುಳಿಕೆಯನ್ನು ನಾರ್ವೆಯ ವಿಜ್ಞಾನಿಗಳು ಎರಡು ವರ್ಷಗಳ ಹಿಂದೆ ಆರ್ಕ್ಟಿಕ್ ದ್ವೀಪದಲ್ಲಿ ಪತ್ತೆ ಹಚ್ಚಿದ್ದರು. ಬಲವಾಗಿ ಬೀಸುತ್ತಿದ್ದ ಗಾಳಿ, ಮಂಜು, ಮಳೆ, ಶೂನ್ಯಕ್ಕಿಂತ ಕೆಳಗಿನ ತಾಪಮಾನ, ಹಿಮ ಕರಡಿಗಳ ದಾಳಿಯ ಭೀತಿಯ ನಡುವೆಯೇ ವಿಜ್ಞಾನಿಗಳು ಟನ್ ಗಟ್ಟಲೆ ಕಲ್ಲನ್ನು ಕೈಯಿಂದಲೇ ಅಗೆದು 2007ರಲ್ಲಿ ಈ ದೈತ್ಯ ಪಳೆಯುಳಿಕೆ ಹೊರ ತೆಗೆದಿದ್ದರು. 15 ಕೋಟಿ ವರ್ಷಗಳ ಹಿಂದಿನ ಈ ಪಳೆಯುಳಿಕೆ ಜುರಾಸಿಕ್ ಯುಗಕ್ಕೆ ಸೇರಿದ್ದು ಎನ್ನಲಾಗಿದೆ. ದೈತ್ಯ ಡೈನೊಸಾರ್ ಗಳು ಭೂಮಿಯ ಮೇಲೆ ಓಡಾಡಿಕೊಂಡಿದ್ದ ಕಾಲದಲ್ಲಿ ಈ ಸರೀಸೃಪ ಸಮುದ್ರದಲ್ಲಿ ಜೀವಿಸಿತ್ತು. ಒಸ್ಲೊ ವಿಶ್ವವಿದ್ಯಾಲಯದ ಡಾ. ಜಾರ್ನ್ ಹುರುಮ್ ನೇತೃತ್ವದ ತಂಡ ಈ ಪಳೆಯುಳಿಕೆಯ ಸಂಪೂರ್ಣ ಅಧ್ಯಯನ ನಡೆಸಿತು. ಆಸ್ಟ್ರೇಲಿಯಾದಲ್ಲಿ ಈ ಹಿಂದೆ ಪತ್ತೆಯಾಗಿದ್ದ ಪ್ಲಿಯೊಸಾರ್ ಗಿಂತ ಇದು ಶೇ 20ರಷ್ಟು ದೊಡ್ಡದು ಎಂದು ತಂಡ ಹೇಳಿತು.
2008: ನವದೆಹಲಿಯಲ್ಲಿನ ಖಾಸಗಿ ಆಸ್ಪತ್ರೆ ವೈದ್ಯರು ಮಹಿಳೆಯೊಬ್ಬರ ತಲೆ ಬುರುಡೆಯಿಂದ ಭಾರಿ ಗಾತ್ರದ ಗಡ್ಡೆಯನ್ನು ಯಶಸ್ವಿಯಾಗಿ ತೆಗೆದು ಹಾಕಿದರು. ಸುಮಾರು 1280 ಘನ ಸೆಂಟಿಮೀಟರ್ ಗಾತ್ರದ ಈ ಗಡ್ಡೆ ವಿಶ್ವದಲ್ಲೇ ಅತಿ ದೊಡ್ಡ ಗಡ್ಡೆಯಾಗಿರುವ ಸಾಧ್ಯತೆ ಇದೆ ಎಂದು ಶಸ್ತ್ರಚಿಕಿತ್ಸಾ ತಂಡದಲ್ಲಿದ್ದ ಸರ್ ಗಂಗಾರಾಮ್ ಆಸ್ಪತ್ರೆಯ ಡಾ. ಮನೀಶ್ ವೈಶ್ ಹೇಳಿದರು. `ತಲೆಬರುಡೆಯಲ್ಲಿ ದೊಡ್ಡ ಗಾತ್ರದ ಗಡ್ಡೆ ಇರುವುದು ಸ್ಕ್ಯಾನಿಂಗಿನಿಂದ ಗೊತ್ತಾಯಿತು. ಈ ಗಡ್ಡೆ ಬೆಳೆದು ಮಿದುಳಿನ ಎರಡೂ ಭಾಗಗಳಿಗೆ ಹಬ್ಬಿತ್ತು. ಮಿದುಳಿನ ಈ ಭಾಗ ಕೈ ಕಾಲುಗಳ ಚಲನೆ ನಿಯಂತ್ರಿಸುವ ಜಾಗವಾದ್ದರಿಂದ ಶಸ್ತ್ರಚಿಕಿತ್ಸೆ ಮಾಡುವುದು ಸವಾಲಿನ ಕೆಲಸವಾಗಿತ್ತು. ಆದರೆ, ನಮ್ಮ ತಂಡ, 6 ಗಂಟೆ ಕಾಲ ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾಯಿತು' ಎಂದು ವೈದ್ಯ ಬಿ.ಕೆ.ರಾವ್ ಹೇಳಿದರು.
2008: ಬ್ರಿಟನ್ನಿನ ರಾಷ್ಟ್ರೀಯ ಆರೋಗ್ಯ ಸೇವಾ ಯೋಜನೆಯಡಿ ಐರೋಪ್ಯ ವೈದ್ಯರಿಗೆ ಅವಕಾಶ ಕಲ್ಪಿಸುವ ಸರ್ಕಾರದ ನಿರ್ಧಾರದಿಂದ ನಿರುದ್ಯೋಗಿಗಳಾಗಿದ್ದ ಭಾರತೀಯ ವೈದ್ಯರ ಅರ್ಜಿಯ ವಿಚಾರಣೆ ಬ್ರಿಟನ್ನಿನ ಅತ್ಯುನ್ನತ ನ್ಯಾಯಾಲಯದಲ್ಲಿ ಆರಂಭವಾಯಿತು. ಸರ್ಕಾರಿ ಸೇವೆಗೆ ಐರೋಪ್ಯ ವೈದ್ಯರನ್ನೇ ನೇಮಿಸಿಕೊಳ್ಳುವ ಬ್ರಿಟನ್ ಸರ್ಕಾರದ ನಿರ್ಧಾರದ ವಿರುದ್ಧ ಭಾರತೀಯ ವೈದ್ಯರು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಬ್ರಿಟನ್ ಹೈಕೋರ್ಟ್ 2007ರ ಅಕ್ಟೋಬರಿನಲ್ಲಿ ಭಾರತೀಯ ವೈದ್ಯರ ಪರವಾಗಿ ತೀರ್ಪು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಬ್ರಿಟನ್ ಆರೋಗ್ಯ ಇಲಾಖೆ ಅತ್ಯುನ್ನತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು.
2007: ಶಿರೋಮಣಿ ಅಕಾಲಿ ದಳ ಮತ್ತು ಬಿಜೆಪಿ ಶಾಸಕಾಂಗ ಸದಸ್ಯರು ತಮ್ಮ ನಾಯಕನನ್ನಾಗಿ ಪ್ರಕಾಶ್ ಸಿಂಗ್ ಬಾದಲ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದರು.
2007: `ಕಣ್ಣಾಮುಚ್ಚೇ ಕಾಡೇಗೂಡೇ..; ಆಡಲು ಹೋದ ನಾಲ್ಕು ವರ್ಷದ ಬಾಲಕ ಮಂಜುನಾಥನನ್ನು ಬೀದಿನಾಯಿಗಳ ಹಿಂಡು ಕಚ್ಚಿ ಎಳೆದಾಡಿ ಕೊಂದ ಘಟನೆ ಬೆಂಗಳೂರಿನ ತಿಪ್ಪಸಂದ್ರ ಸಮೀಪದ ಬಿಇಎಂಎಲ್ (ಬೆಮೆಲ್) ಬಡಾವಣೆಯಲ್ಲಿ ಸಂಭವಿಸಿತು. ಬೆಮೆಲ್ ಕಾರ್ಖಾನೆಯ ಸಿಬ್ಬಂದಿ ಮಹೇಶ್ವರ- ಅನ್ನಪೂರ್ಣ ದಂಪತಿಯ ಎರಡನೇ ಮಗನಾದ ಮಂಜುನಾಥನನ್ನು 15-20 ಬೀದಿನಾಯಿಗಳ ಗುಂಪು ದಾಳಿ ಮಾಡಿ ಕೊಂದು ಹಾಕಿತು. ಬೆಂಗಳೂರಿನಲ್ಲಿ ಮಕ್ಕಳ ಮೇಲೆ ಬೀದಿನಾಯಿಗಳು ದಾಳಿ ನಡೆಸಿದ ಮೂರನೇ ಪ್ರಕರಣ ಇದು. ಜನವರಿ 5ರಂದು ಚಂದ್ರಾ ಬಡಾವಣೆಯಲ್ಲಿ ಶ್ರೀದೇವಿ (9) ಎಂಬ ಬಾಲಕಿಯನ್ನು ನಾಯಿಗಳು ಕಚ್ಚಿ ಕೊಂದಿದ್ದವು. ಜನವರಿ 10ರಂದು ಚಂದ್ರಾ ಬಡಾವಣೆಯಲ್ಲೇ ಏಳು ವರ್ಷದ ಇನ್ನೊಬ್ಬ ಬಾಲಕಿ ಮೇಲೆ ನಾಯಿಗಳು ದಾಳಿ ಮಾಡಿದ್ದವು. ಅದೃಷ್ಟವಶಾತ್ ಆ ಮಗು ಸಾವಿನಿಂದ ಪಾರಾಗಿತ್ತು.
2007: ಹೃದಯಾಘಾತದ ಪರಿಣಾಮವಾಗಿ ವೈದ್ಯರು `ಸತ್ತಿದೆ' ಎಂಬುದಾಗಿ ವೈದ್ಯರಿಂದ ದೃಢಪಡಿಸಲ್ಪಿಟ್ಟ್ದಿದ ಮಗುವೊಂದು ಅರ್ಧ ಗಂಟೆಯ ಬಳಿಕ ಬದುಕಿದ ಘಟನೆ ಲಂಡನ್ನಿನಲ್ಲಿ ನಡೆಯಿತು. ವೂಡಿ ಲ್ಯಾಂಡರ್ ಎಂಬ ಈ ಬಾಲಕ 30 ನಿಮಿಷಗಳ ಕಾಲ `ಸತ್ತಿದ್ದ'. ಮಗುವನ್ನು ಆತನ ಪಾಲಕರಾದ ಲೀಡ್ಸ್ ನ ಲ್ಯಾಂಡರ್- ಕರೇನ್ ದಂಪತಿಗೆ ಒಪ್ಪಿಸಿಯೂ ಆಗಿತ್ತು. ಆ ಬಳಿಕ ತಂದೆಯ ಕೈಗಳಲ್ಲಿ ಇದ್ದ ಬಾಲಕನಲ್ಲಿ ಚಲನೆ ಕಾಣಿಸಿತು. ದಾದಿಯರು ಬಾಲಕನ ಬಾಯಿಯಲ್ಲಿದ್ದ ಟ್ಯೂಬ್ ತೆಗೆದಾಗ ಬಾಯಿಯಲ್ಲಿ ಒಂದಷ್ಟು ಕಫ ಕಂಡು ಬಂದಿತು. ಮಗು ಅಲುಗಾಡಲು ಆರಂಭಿಸುತ್ತಿದ್ದಂತೆಯೇ ದಾದಿಯೊಬ್ಬಳು ಅದನ್ನು ಸೆಳೆದುಕೊಂಡು ಪರೀಕ್ಷಿಸತೊಡಗಿದಳು. ಸುದ್ದಿ ತಿಳಿದು ಬಂದ ವೈದ್ಯರು ಆತನಿಗೆ ಮತ್ತೆ ಚಿಕಿತ್ಸೆ ನೀಡಲಾರಂಭಿಸಿದರು. ಎಲ್ಲರ ಕಣ್ಣೆದುರಲ್ಲೇ ಆತ ಮತ್ತೆ ಬದುಕಿಬಂದ. ಇಂತಹ ಪುಟ್ಟ ಮಗು ಬಿಡಿ, ದೊಡ್ಡ ವ್ಯಕ್ತಿಗಳು ಕೂಡಾ 30 ನಿಮಿಷಗಳ ಬಳಿಕ ಮತ್ತೆ ಜೀವಂತಗೊಂಡ ಪ್ರಕರಣವನ್ನು ತಾವು ಕಂಡು ಕೇಳಿಲ್ಲ ಎಂದು ವೈದ್ಯರು ಅಚ್ಚರಿ ಪಟ್ಟರು.
1986: ಸ್ಟಾಕ್ ಹೋಮ್ನಲ್ಲಿ ಸ್ವೀಡಿಷ್ ಪ್ರಧಾನಿ ಒಲೋಫ್ ಪಾಮೆ ಅವರ ಹತ್ಯೆ ನಡೆಯಿತು. ಈ ಕೊಲೆ ಪ್ರಕರಣ ನಿಗೂಢವಾಗಿಯೇ ಉಳಿಯಿತು.
1968: ಶ್ರೀಅರಬಿಂದೋ ಆಶ್ರಮದ ಅಂತಾರಾಷ್ಟ್ರೀಯ ಟೌನ್ ಶಿಪ್ ಅರೋವಿಲ್ಲೆ ಉದ್ಘಾಟನೆಗೊಂಡಿತು.
1963: ಭಾರತದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ಪಟ್ನಾದಲ್ಲಿ ತಮ್ಮ 78ನೇ ವಯಸ್ಸಿನಲ್ಲಿ ನಿಧನರಾದರು. ಅವರು 1950-52ರ ಅವಧಿಯಲ್ಲಿ ಭಾರತದ ರಾಷ್ಟ್ರಪತಿಯಾಗಿದ್ದರು.
1936: ಪಂಡಿತ್ ಜವಾಹರಲಾಲ್ ನೆಹರೂ ಅವರ ಪತ್ನಿ ಕಮಲಾ ನೆಹರೂ ಸ್ವಿಜರ್ಲೆಂಡಿನ ಲೂಸೆನ್ ಸಮೀಪ ಮೃತರಾದರು.
1926: ಸ್ವೆತ್ಲಾನಾ ಅಲ್ಲಿಲುಯಯೇವಾ ಹುಟ್ಟಿದ ದಿನ. ಸೋವಿಯತ್ ಆಡಳಿತಗಾರ ಜೋಸೆಫ್ ಸ್ಟಾಲಿನ್ ಪುತ್ರಿಯಾದ ಈಕೆ 1967ರಲ್ಲಿ ಅಮೆರಿಕಕ್ಕೆ `ಪಕ್ಷಾಂತರ' (ದೇಶಾಂತರ) ಮಾಡುವ ಮೂಲಕ ಜಾಗತಿಕ ಕುತೂಹಲ ಕೆರಳಿಸಿದರು.
1922: ಬ್ರಿಟನ್ ಔಪಚಾರಿಕವಾಗಿ ಈಜಿಪ್ಟಿಗೆ ಸ್ವಾತಂತ್ರ್ಯವನ್ನು ಘೋಷಿಸಿತು. ಆದರೆ ಸುಯೆಜ್ ಕಾಲುವೆ ಮತ್ತು ರಾಷ್ಟ್ರದ ರಕ್ಷಣೆ ಮೇಲಿನ ನಿಯಂತ್ರಣವನ್ನು ಉಳಿಸಿಕೊಂಡಿತು.
1913: ಶಿಲಾ ಕೆತ್ತನೆ, ಲೋಹ, ಜ್ಯೋತಿಷ್ಯ, ಸಂಗೀತ, ಸಂಸ್ಕೃತ ಪಾಂಡಿತ್ಯ ಇವೆಲ್ಲದರ ಸಂಗಮವಾಗಿದ್ದ ನಾಗೇಂದ್ರ ಸ್ಥಪತಿ (28-2-1913ರಿಂದ 4-7-1972) ಅವರು ಖ್ಯಾತ ಶಿಲ್ಪ ಸಿದ್ಧಾಂತಿ ಶ್ರೀ ಸಿದ್ದಲಿಂಗ ಸ್ವಾಮಿಗಳ ಮಗನಾಗಿ ಮೈಸೂರಿನಲ್ಲಿ ಜನಿಸಿದರು. ಅಸಂಖ್ಯಾತ ಕಲಾಕೃತಿಗಳನ್ನು ರಚಿಸಿದ ಅವರು ಮೈಸೂರು ಅರಮನೆಯಲ್ಲಿ ಗೌರವ, ಮಹಾರಾಜರ ಸಾನ್ನಿಧ್ಯ, ಮುಖ್ಯಮಂತ್ರಿಗಳ ಸ್ನೇಹ, ಜನರ ಗೌರವಾದರಗಳಿಗೆ ಪಾತ್ರರಾಗಿದ್ದರು. ಮೈಸೂರು ಲಲಿತಕಲಾ ಅಕಾಡೆಮಿಯು 1965-66ರ ಸಾಲಿನ ಪ್ರಶಸ್ತಿ ನೀಡಿ ಅವರನ್ನು ಗೌರವಿಸಿತ್ತು.
1824: ಜೀನ್ ಫ್ರಾಂಕೋಯಿಸ್ ಗ್ರಾವೆಲೆಟ್ (1824-1897) ಹುಟ್ಟಿದ ದಿನ. ಬ್ಲಂಡಿನ್ ಎಂದೇ ಖ್ಯಾತನಾದ ಈ ಹಗ್ಗದ ಮೇಲಿನ ನಡಿಗೆಯ ಸಾಹಸಿ, ನಯಾಗರಾ ಜಲಪಾತವನ್ನು ಹಗ್ಗದ ಮೇಲೆ ನಡೆಯುತ್ತಾ ದಾಟುವ ಸಾಹಸ ಮೂಲಕ ವಿಶ್ವಖ್ಯಾತಿ ಗಳಿಸಿದ.