ಗ್ರಾಹಕನಿಗೆ ನೀಡಿದ ದೂರವಾಣಿ ಸಂಖ್ಯೆಯನ್ನೇ 'ಗ್ರಾಹಕ ಸೇವಾ ಸಂಖ್ಯೆ' ಎಂಬುದಾಗಿ ಜಾಹೀರಾತು ನೀಡಿದ್ದು ಕಂಪೆನಿಯ ಸೇವಾಲೋಪ ಎಂದು ನ್ಯಾಯಾಲಯ ಹೇಳಿತು.
ನೆತ್ರಕೆರೆ ಉದಯಶಂಕರ
ದೂರವಾಣಿ ಕಂಪೆನಿಯೊಂದು ನಿಮಗೆ ದೂರವಾಣಿಯೊಂದನ್ನು ನೀಡುತ್ತದೆ. ಆದರೆ ನಂತರ ನಿಮಗೆ ನೀಡಿದ ದೂರವಾಣಿ ಸಂಖ್ಯೆಯನ್ನೇ 'ಗ್ರಾಹಕ ಸೇವಾ ಸಂಖ್ಯೆ' ಎಂಬುದಾಗಿ ಜಾಹೀರಾತು ನೀಡುತ್ತದೆ ಎಂದಿಟ್ಟುಕೊಳ್ಳಿ. ನಿಮಗೋ ಕರೆಗಳ ಸುರಿಮಳೆ ಆರಂಭವಾಗುತ್ತದೆ. ಇಂತಹ ಸಂದರ್ಭದಲ್ಲಿ ಆಗುವ ಕಿರಿಕಿರಿ ಸಹನಾತೀತ. ದೂರವಾಣಿ ಕಂಪೆನಿಯ ಇಂತಹ ವರ್ತನೆ ವಿರುದ್ಧ ಗ್ರಾಹಕ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಪರಿಹಾರ ಪಡೆಯಬಹುದೇ?
ತನ್ನ ಮುಂದೆ ಬಂದ ಇಂತಹ ಪ್ರಕರಣ ಒಂದರ ಮೇಲ್ಮನವಿಯ ವಿಚಾರಣೆ ನಡೆಸಿದ ಕರ್ನಾಟಕ ರಾಜ್ಯ ಗ್ರಾಹಕ ನ್ಯಾಯಾಲಯವು ಗ್ರಾಹಕನಿಗೆ ಪರಿಹಾರ ಒದಗಿಸಿದೆ.
ಈ ಪ್ರಕರಣದ ಅರ್ಜಿದಾರರು: ಬೆಂಗಳೂರು ಮಿಷನ್ ರಸ್ತೆಯ ಜಿ. ಬ್ರಹ್ಮಕುಲಂ ಅವರ ಪುತ್ರ ಪಾವುಲ್ ಜಿ. ಬ್ರಹ್ಮಕುಲಂ. ಪ್ರತಿವಾದಿ: ಮೆ. ಸ್ಪೈಸ್ ಕಮ್ಯೂನಿಕೇಷನ್ಸ್ ಲಿಮಿಟೆಡ್, ಎಂಬೆಸಿ ಚೌಕ, ಇನ್ ಫೆಂಟ್ರಿ ರಸ್ತೆ, ಬೆಂಗಳೂರು.
ಅರ್ಜಿದಾರರು 1997ರಲ್ಲಿ ಮೊಬೈಲ್ ದೂರವಾಣಿಗಾಗಿ ಅರ್ಜಿ ಸಲ್ಲಿಸಿದಾಗ ಪ್ರತಿವಾದಿ ಸ್ಪೈಸ್ ಕಂಪೆನಿಯು ಮೊಬೈಲ್ ಗೋಲ್ಡನ್ (ಸಂಖ್ಯೆ 9844054321) ಮಂಜೂರು ಮಾಡಿತು.ನಂತರ 2002ರಲ್ಲಿ ಸ್ಪೈಸ್ ಕಂಪೆನಿಯು ಜಾಹೀರಾತು ಒಂದರಲ್ಲಿ ಮೊಬೈಲ್ ಸಂಖ್ಯೆ 9844054321 'ಗ್ರಾಹಕ ಸೇವಾ ಸಂಖ್ಯೆ' ಎಂಬುದಾಗಿಯೂ, ಗ್ರಾಹಕರು ತಮ್ಮ ದೂರುಗಳ ಪರಿಹಾರಕ್ಕಾಗಿ/ ಸೇವೆಗಾಗಿ ಈ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದೂ ಪ್ರಕಟಿಸಿತು. ಈ ಜಾಹೀರಾತಿನ ಪರಿಣಾಮವಾಗಿ ಅರ್ಜಿದಾರ ಬ್ರಹ್ಮಕುಲಂ ಅವರಿಗೆ ಅಸಂಖ್ಯಾತ ದೂರವಾಣಿ ಕರೆಗಳು ಬಂದವು.
ಆ ದಿನಗಳಲ್ಲಿ ಒಳಬರುವ ಕರೆಗಳು ಉಚಿತವಾಗಿರಲಿಲ್ಲ, ಶುಲ್ಕ ವಿಧಿಸಲಾಗುತ್ತಿತ್ತು. ಹೀಗಾಗಿ ಬ್ರಹ್ಮಕುಲಂ ಅವರು 31,500 ರೂಪಾಯಿಗಳನ್ನು ಕಂಪೆನಿಗೆ ಪಾವತಿ ಮಾಡಬೇಕಾಯಿತು.
ಇದರ ವಿರುದ್ಧ ಬ್ರಹ್ಮಕುಲಂ ಅವರು ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿದರು. ಆದರೆ ಪ್ರತಿವಾದಿ ಸ್ಪೈಸ್ ಕಂಪೆನಿ ಆರೋಪವನ್ನು ನಿರಾಕರಿಸಿತು. ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕ ನ್ಯಾಯಾಲಯ ಅರ್ಜಿಯನ್ನು ವಜಾ ಮಾಡಿತು.
ಜಿಲ್ಲಾ ಗ್ರಾಹಕ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಅರ್ಜಿದಾರ ಬ್ರಹ್ಮಕುಲಂ ಅವರು ರಾಜ್ಯ ಗ್ರಾಹಕ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದರು. ಅಧ್ಯಕ್ಷ ನ್ಯಾಯಮೂರ್ತಿ ಚಂದ್ರಶೇಖರಯ್ಯ, ಸದಸ್ಯರಾದ ರಮಾ ಅನಂತ್ ಅವರನ್ನು ಒಳಗೊಂಡ ಪೀಠವು ಅರ್ಜಿದಾರರ ಪರ ವಕೀಲ ಒ. ಮಹೇಶ ಹಾಗೂ ಪ್ರತಿವಾದಿ ಪರ ವಕೀಲರಾದ ಮೆ. ಎಂ.ವಿ. ಕಿಣಿ ಅಂಡ್ ಕಂಪೆನಿಯ ಅಹವಾಲುಗಳನ್ನು ಆಲಿಸಿ ದಾಖಲೆಗಳನ್ನು ಪರಿಶೀಲಿಸಿತು.
ಪ್ರತಿವಾದಿಯು ರಾಜ್ಯ ಗ್ರಾಹಕ ನ್ಯಾಯಾಲಯದಲ್ಲೂ ಆಪಾದನೆಯನ್ನು ನಿರಾಕರಿಸಿದರು. ಅರ್ಜಿದಾರರು ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ಕೆಲವು ದಾಖಲೆಗಳನ್ನು ಹಾಜರು ಪಡಿಸಿದ್ದರು. ಆ ದಾಖಲೆಗಳು ಗ್ರಾಹಕರಿಗೆ ನೀಡಲಾಗಿದ್ದ ಮೊಬೈಲ್ ದೂರವಾಣಿಯನ್ನು (ನಂಬರ್ 9844054321) ಕಂಪೆನಿಯು ಗ್ರಾಹಕ ಸೇವಾ ಸಂಖ್ಯೆ ಎಂಬುದಾಗಿ ನಮೂದಿಸಿದ್ದುದನ್ನು ರಾಜ್ಯ ಗ್ರಾಹಕ ನ್ಯಾಯಾಲಯವು ಗಮನಕ್ಕೆ ತೆಗೆದುಕೊಂಡಿತು.
ಇಂತಹ ಸಂದರ್ಭದಲ್ಲಿ ದೂರು ನೀಡಬಯಸುವವರು, ಕಂಪೆನಿಯಿಂದ ಏನಾದರೂ ಸೇವೆ ಬಯಸುವವರು ಈ ಸಂಖ್ಯೆಯನ್ನು ಸಂಪರ್ಕಿಸಬೇಕಾಗುತ್ತದೆ. ಕಂಪೆನಿಯ ಇಂತಹ ವರ್ತನೆ ದೂರುಗಳಿಗೆ ಸಂಬಂಧಿಸಿದಂತೆ 'ಸೇವಾ ನ್ಯೂನತೆ' ಆಗುತ್ತದೆ ಎಂಬುದಾಗಿ ಅಭಿಪ್ರಾಯಪಟ್ಟ ರಾಜ್ಯ ಗ್ರಾಹಕ ನ್ಯಾಯಾಲಯ, ದೂರನ್ನು ವಜಾ ಮಾಡಿದ ಜಿಲ್ಲಾ ಗ್ರಾಹಕ ನ್ಯಾಯಾಲಯದ ಕ್ರಮ ಸರಿಯಲ್ಲ ಎಂದು ಹೇಳಿತು.
ಅರ್ಜಿದಾರರಿಗೆ ಮಂಜೂರು ಮಾಡಲಾಗಿದ್ದ ದೂರವಾಣಿ ಸಂಖ್ಯೆಯನ್ನೇ 'ಗ್ರಾಹಕ ಸೇವಾ ಸಂಖ್ಯೆ' ಎಂಬುದಾಗಿ ಪ್ರತಿವಾದಿ ಸಂಸ್ಥೆಯು ಜಾಹೀರಾತು ನೀಡಿದ್ದರ ಪರಿಣಾಮವಾಗಿ ಅರ್ಜಿದಾರರು 31,500 ರೂಪಾಯಿ ನಷ್ಟ ಅನುಭವಿಸಬೇಕಾಯಿತು. ಪ್ರತಿವಾದಿಯ ತಪ್ಪಿನಿಂದ ಅರ್ಜಿದಾರರಿಗೆ ಈ ನಷ್ಟ ಸಂಭವಿಸಿದ ಕಾರಣ ಅಷ್ಟರ ಮಟ್ಟಿಗೆ ಅರ್ಜಿದಾರರಿಗೆ ಪರಿಹಾರ ಒದಗಿಸಬೇಕಾಗುತ್ತದೆ ಎಂದೂ ರಾಜ್ಯ ಗ್ರಾಹಕ ನ್ಯಾಯಾಲಯ ಹೇಳಿತು.
ತನಗೆ ಸಂಬಂಧಪಡದ ಕರೆಗಳ ಕಿರಿಕಿರಿಯಿಂದ ಅರ್ಜಿದಾರರಿಗೆ ಮಾನಸಿಕವಾಗಿಯೂ ಸಾಕಷ್ಟು ತೊಂದರೆ ಆಗಿದೆ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಜಿಲ್ಲಾ ಗ್ರಾಹಕ ನ್ಯಾಯಾಲಯ ನೀಡಿದ ತೀರ್ಪನ್ನು ತಳ್ಳಿಹಾಕಲಾಗಿದೆ ಎಂದು ಹೇಳಿದ ರಾಜ್ಯ ಗ್ರಾಹಕ ನ್ಯಾಯಾಲಯ ಎರಡು ತಿಂಗಳುಗಳ ಒಳಗಾಗಿ 40,000 ರೂಪಾಯಿಗಳ ಪರಿಹಾರವನ್ನು ಅರ್ಜಿದಾರರಿಗೆ ನೀಡಬೇಕು, ತಪ್ಪಿದಲ್ಲಿ ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ದಿನಾಂಕದಿಂದ 40,000 ರೂಪಾಯಿಗಳನ್ನು ಪಾವತಿ ಮಾಡುವವರೆಗೆ ಶೇಕಡಾ 6ರಷ್ಟು ವಾರ್ಷಿಕ ಬಡ್ಡಿಯನ್ನೂ ತೆರಬೇಕು ಎಂದು ಪ್ರತಿವಾದಿ ಸ್ಪೈಸ್ ಕಂಪೆನಿಗೆ ಆದೇಶ ನೀಡಿತು.
Summary in English:
When your telephone rings till you fed up...! (Consumer
Awareness)
Think, what will happen if
the company, from which you purchase a telephone, advertises the same number
which has been allotted to you as the 'Consumer Service Number'. You will fed
up with the public calls related to telephone problems and services! Does not
worry Consumer Protection Act will come to your help in such situation. PARYAYA presents an interesting case came before the
Karnataka State Consumer Court Bangalore.
First Posted 5th
March 2008 by PARYAYA
No comments:
Post a Comment