ನಾನು ಮೆಚ್ಚಿದ ವಾಟ್ಸಪ್

Sunday, September 4, 2016

ಆಲಯ ಒಲ್ಲದ ಸೌತೆಡ್ಕ ಗಣಪ..!

ಆಲಯ ಒಲ್ಲದ ಸೌತೆಡ್ಕ ಗಣಪ..!

ಸೌತೆಡ್ಕ
ಗಣಪ ಉಳಿದ ಗಣಪರಿಗಿಂತ ಭಿನ್ನ. ಈತ ಆಲಯ ಬೇಡುವುದಿಲ್ಲ. ತನ್ನ ಸುತ್ತ ಮುತ್ತ ಮನುಷ್ಯರು ಮಾತ್ರವಲ್ಲ, ದನ ಕರುಗಳು, ಹಕ್ಕಿಗಳು, ನಾಯಿಗಳು ಸೇರಿದಂತೆ ಸಕಲ ಜೀವಿಗಳೂ ಸುತ್ತಾಡುತ್ತಿರಬೇಕು ಎನ್ನುತ್ತಾನೆ. ಈತನಿಗೆ ನಿತ್ಯ ಬೇಕು ಬಿಸಿಲಿನ, ಮಳೆ ನೀರಿನ, ಬೆಳದಿಂಗಳ ಅಭಿಷೇಕ. ಹಸಿರು ಕಾನನದ ವನರಾಜಿಯ ನಡುವಣ ಸ್ಚಚ್ಛ ಗಾಳಿಯ ಚಾಮರ ಸೇವೆ. ನಿಸರ್ಗ ರಕ್ಷಣೆಯ ಸಂದೇಶ ನೀಡುತ್ತಿರುವ ಈತ ನಿಜಕ್ಕೂ ಮನುಷ್ಯರ ಕಣ್ತೆರೆಸಬೇಕಾದ 'ಮಹಾನ್ ಗಣಪ'..!

ನೆತ್ರಕೆರೆ ಉದಯಶಂಕರ

ಚೌತಿ ಅಂದ ತತ್ ಕ್ಷಣ ನೆನಪಾಗುವುದು ಗಣಪನ ಮೂರ್ತಿ. ಮನೆ ಮನೆಗಳಲ್ಲೂ ಹಬ್ಬ, ಮನ ಮನಗಳಲ್ಲೂ ಸಡಗರ. ದೇವಾಲಯಗಳಲ್ಲಿ ಗಣಪನಿಗೆ ಪೂಜೆ, ಹೋಮ ಹವನ. ಸಕಲ ಸಂಕಟಗಳನ್ನೂ ನಿವಾರಿಸುವಂತೆ ಕೋರಿಕೆ.

ಆದರೆ ಇಲ್ಲೊಬ್ಬ ಗಣಪ ನೋಡಿ. ಈತ ಇರುವುದು ಕಾಡಿನ ಮಧ್ಯೆ. ಶೀರಾಡಿ ಘಟ್ಟದ ಮೂಲಕ ಬೆಂಗಳೂರಿನಿಂದ ಮಂಗಳೂರಿಗೆ ಹೋಗುವಾಗ ಉಪ್ಪಿನಂಗಡಿಗೆ ಮೊದಲೇ, ನೆಲ್ಯಾಡಿಗೆ ಹತ್ತಿರ ಧರ್ಮಸ್ಥಳಕ್ಕೆ ತೆರಳಲು ಒಂದು ಮಾರ್ಗವಿದೆ. ಮಾರ್ಗದಲ್ಲಿ ಸ್ವಲ್ಪ ದೂರ ಸಾಗಿದರೆ ಸಿಗುವುದು ಕೊಕ್ಕಡ. ಇಲ್ಲಿಗೆ ಸಮೀಪದಲ್ಲೇ ಗಣಪ ವಾಸವಾಗಿದ್ದಾನೆ.

ಎಲ್ಲ ಕಡೆ ದೇವಾಲಯಗಳ ಒಳಗೆ ಗಣಪ ವಿರಾಜಮಾನನಾಗಿದ್ದರೆ ಗಣಪ ವನದ ಮಧ್ಯೆ ವಿರಾಜಮಾನನಾಗಿದ್ದಾನೆ. ಈತನ ತಲೆಯ ಮೇಲೆ ಸೂರಿಲ್ಲ, ಗುಡಿ, ಗೋಪುರವೂ ಇಲ್ಲ. ಈತ ಸೌತೆಡ್ಕದಲ್ಲಿರುವ ವನ ಗಣಪತಿ- ಸೌತೆಡ್ಕ ಗಣಪನೆಂದೇ ಪ್ರಸಿದ್ಧ.

ಪ್ರದೇಶದಲ್ಲಿ ಸಮೀಪದಲ್ಲಿ ಎಂದೋ ಹಿಂದೆ ಒಂದು ರಾಜ್ಯವಿತ್ತಂತೆ. ರಾಜ್ಯದ ರಾಜನಿಂದಲೇ ಒಬ್ಬ ಗಣಪನಿಗೆ ಪೂಜೆ ಸಲ್ಲುತ್ತಿತ್ತು. ಒಮ್ಮೆ ವೈರಿಗಳೊಂದಿಗೆ ನಡೆದ ಯುದ್ಧದಲ್ಲಿ ರಾಜ ಸೋತು ಹೋದ. ಆತನ ಸೋಲಿನ ಬಳಿಕ ಗಣಪನಿಗೆ ಪೂಜೆ ನಿಂತು ಹೋಯಿತು. ರಾಜ್ಯ ಪಾಳು ಬಿದ್ದಿತು. ಗಣಪನನ್ನು ಆರಾಧಿಸುವವರು ಯಾರೂ ಇಲ್ಲವಾದರು.

ಇಲ್ಲಿ ಕ್ರಮೇಣ ಕಾಡು ಬೆಳೆಯಿತು. ಕಾಡಿನ ಒಳಕ್ಕೆ ಗೊಲ್ಲರ ಮಕ್ಕಳು ಜಾನುವಾರು ಮೇಯಿಸಲು ಬರುತ್ತಿದ್ದರು. ಹೀಗೆ ಬಂದ ಗೊಲ್ಲ ಮಕ್ಕಳಿಗೆ ಗಣಪ ಕಣ್ಣಿಗೆ ಬಿದ್ದ. ಅವರು ಮಕ್ಕಳಾಟಿಕೆಯಲ್ಲೇ ಗಣಪನ ಪೂಜೆ ಮಾಡುತ್ತಿದ್ದರು.

ಒಂದು ದಿನ ಗಣಪನ ಮೂರ್ತಿಯನ್ನು ಕೊಕ್ಕಡದ ಸಮೀಪ ಈಗ ಇರುವ ಸ್ಥಳಕ್ಕೆ ತಂದು ಇಟ್ಟು ಅಲ್ಲಿ ಪೂಜೆಯ ಆಟ ಶುರು ಮಾಡಿದರು. ಮಕ್ಕಳು ಆಡುತ್ತಾಡುತ್ತಾ ಗಣಪನಿಗೆ ನೈವೇದ್ಯವಾಗಿ ಅರ್ಪಿಸುತ್ತಿದ್ದುದು 'ಸೌತೆಕಾಯಿ'ಯನ್ನು. ಹಿನ್ನೆಲೆಯಲ್ಲೇ ಸ್ಥಳಕ್ಕೆ ಸೌತೆಡ್ಕ ಎಂಬ ಹೆಸರು ಬಂತು ಎನ್ನುತ್ತದೆ ಸ್ಥಳಪುರಾಣ.

ಕಾಡಿನ ಮಧ್ಯೆ ಇರುವ ಸ್ಥಳ ತುಂಬ ಪ್ರಶಾಂತ. ಚಿಂತೆಗಳಿಂದ ಹತಾಶರಾಗಿ, ನೊಂದು ಬಂದವರಿಗೆ ಒಂದು ರೀತಿಯ ಸಮಾಧಾನ ನೀಡುವ ಸ್ಥಳ. ಅಧ್ಯಾತ್ಮ ಅರಸುವವರಿಗೆ ನೆಮ್ಮದಿ ಕೊಡುವ ತಾಣ. ತಮ್ಮ ಸಮಸ್ಯೆಗಳಿಂದ ನೊಂದ ಹಲವಾರು ಮಂದಿ ಬಂದು ಗಣಪನಿಗೆ ಸೌತೆಕಾಯಿ ಅರ್ಪಿಸಿ ಮಕ್ಕಳಂತೆಯೇ ಮುಗ್ಧಭಾವದಿಂದ ಪೂಜೆ ಮಾಡಿ ಮನೆಗೆ ಹೋಗುವ ಪರಿಪಾಠ ಬೆಳೆಯಿತು. ಅಂತಹ ಹಲವರ ಸಮಸ್ಯೆಗಳು ಗಣಪನಿಗೆ ಪೂಜೆ ಸಲ್ಲಿಸಿದ ಬಳಿಕ ದೂರಾದವಂತೆ.

ಕಾಡಿನೊಳಗಿನ ಸೌತೆಡ್ಕ ಗಣಪ ನಾಡೊಳಗಿನ ಮಂದಿಯ ಕಣ್ಣಿಗೆ ಗೋಚರವಾಗತೊಡಗಿದ್ದು ಹೀಗೆ. ಕ್ರಮೇಣ ಇಲ್ಲಿಗೆ ಬರುವ ಭಕ್ತರ ಸಂಖ್ಯೆ ಹೆಚ್ಚಿತು. ಈಗಂತೂ ಇಲ್ಲಿಗೆ ಬರುತ್ತಿದೆ ದೊಡ್ಡ ಸಂಖ್ಯೆಯ ಭಕ್ತಗಡಣ.

ಸಹ್ಯಾದ್ರಿ ಬೆಟ್ಟಗಳ ಸಾಲಿನ ನಡುವೆ ದಟ್ಟ ಹಸಿರು ಕಾನನದ ಮಧ್ಯೆ ಕುಳಿತ ಗಣಪನಿಗೆ ಏಕೆ ಆಲಯ ಕಟ್ಟಬಾರದು ಎಂದು ಒಬ್ಬ ಶ್ರೀಮಂತ ಭಕ್ತನಿಗೆ ಅನಿಸಿತಂತೆ. ಆತ ಗಣಪನಿಗೆ ಆಲಯ ಕಟ್ಟಿಸಬೇಕು ಎಂದು ಹೊರಟನಂತೆ.

ಆದರೆ ಅದೇ ದಿನ ರಾತ್ರಿ ಗಣಪ ಆತನ ಕನಸಿನಲ್ಲಿ ಕಾಣಿಸಿಕೊಂಡನಂತೆ. 'ಆಲಯ ಕಟ್ಟಿಸುವ ಸಾಮರ್ಥ್ಯ ಇದ್ದರೆ ನನ್ನ ಅಪ್ಪ ಕಾಶಿ ವಿಶ್ವನಾಥನಿಗೂ ಕಾಣಿಸುವಷ್ಟು ಎತ್ತರಕ್ಕೆ ಆಲಯ ಕಟ್ಟಿಸು' ಎಂದು ಕೋಪೋದ್ರಿಕ್ತನಾಗಿ ಹೇಳಿದನಂತೆ.

ಬೆಚ್ಚಿ ಬಿದ್ದ ಶ್ರೀಮಂತ ಭಕ್ತ, ಸೌತೆಡ್ಕ ಗಣಪನಿಗೆ ಆಲಯ ಕಟ್ಟುವ ಯೋಚನೆಗೆ ಎಳ್ಳು ನೀರು ಬಿಟ್ಟನಂತೆ. ಆಲಯ ಕಟ್ಟಬಾರದೆಂಬ ಆಣತಿ ಇಲ್ಲಿನ ಗಣಪನಿಂದ ಮೊದಲಿನಿಂದಲೂ ಇತ್ತು. ತನ್ನ ಸುತ್ತ ಮುತ್ತ ಮರಗಿಡಗಳು ಇರಬೇಕು, ಪಶು ಪಕ್ಷಿಗಳು ಸ್ವಚ್ಛಂದವಾಗಿ ವಿಹರಿಸಬೇಕು. ಯಾರಿಗೆ ಬೇಕಿದ್ದರೂ ಸಮೀಪ ಬಂದು ಪೂಜಿಸುವ ಅವಕಾಶ ಇರಬೇಕು ಎಂಬುದು ಗಣಪನ ಇಚ್ಛೆಯೇ ಆಗಿತ್ತು. ಅದನ್ನು ಮೀರ ಹೊರಟ ಶ್ರೀಮಂತ ಭಕ್ತನಿಗೆ ಇಂತಹ ಅನುಭವ ಆದ ಮೇಲಂತೂ ಯಾರೂ ಗಣಪನಿಗೆ ಆಲಯ ಕಟ್ಟುವ ಯೋಚನೆಯನ್ನೇ ಮಾಡುವುದಿಲ್ಲ ಎನ್ನುತ್ತಾರೆ ಸ್ಥಳೀಯರು.

ಇದಕ್ಕೆ ಪೂರಕ ಎನ್ನುವಂತೆ ಗಣಪನ ಸುತ್ತ ಯಾವಾಗಲೂ ದನಕರುಗಳು, ಜಾನುವಾರುಗಳು, ನಾಯಿಗಳು, ಪಶು ಪಕ್ಷಿಗಳು ಭಕ್ತರ ಜೊತೆಗೇ ಸುತ್ತಾಡುತ್ತಿರುತ್ತವೆ. ಭಕ್ತರು ತರುವ ಪ್ರಸಾದವನ್ನು ತಾವೂ ಭುಜಿಸುತ್ತವೆ. ಕೆಲವು ದನಕರುಗಳಂತೂ ಆಗ್ರಹಪೂರ್ವಕವಾಗಿ ಭಕ್ತರ ಕೈಗಳಲ್ಲಿನ ಪ್ರಸಾದವನ್ನು ಪಡೆದುಕೊಂಡ ಬಳಿಕವೇ ಮುಂದುವರಿಯುತ್ತವೆ.

ಕೆಲ ದಿನಗಳ ಹಿಂದಿನವರೆಗೂ ಒಂದು ಬಿಳಿಯ ದನ ಪರಿಸರದಲ್ಲಿ ನಿತ್ಯವೂ ಸುತ್ತಾಡುತ್ತಿತ್ತು. ಗಣಪನಿಗೆ ಪೂಜೆ ನಡೆಯುವಾಗ ಅದು ಅಲ್ಲೇ ನಿಂತು ಪೂಜೆಯನ್ನು ವೀಕ್ಷಿಸುತ್ತಿತ್ತು. ಪೂಜೆಯ ಬಳಿಕ ಅದು ಗಣಪನ ಮೂತರ್ಿಯ ಬಳಿಗೆ ಹೋಗಿ ಅಲ್ಲಿ ಬಿದ್ದ ಎಲ್ಲ ಹೂವುಗಳನ್ನೂ ಹೆಕ್ಕಿ ಹೆಕ್ಕಿ ತಿನ್ನುತ್ತಿತ್ತು. ಪೂಜೆ ನಡೆದ ಸ್ವಲ್ಪ ಹೊತ್ತಿನ ಬಳಿಕ ಅಲ್ಲಿಗೆ ಯಾರಾದರೂ ಬಂದರೆ ಅಲ್ಲಿ ಪೂಜೆಯ ಗೌಜಿ ಏನೂ ಇರಲೇ ಇಲ್ಲ ಎಂಬಷ್ಟು ಶಾಂತ, ಸ್ವಚ್ಛ ಪರಿಸರ. ಅಲ್ಲಿ ಉಳಿಯುತ್ತಿದ್ದುದು ಗಣಪನ ವಿಗ್ರಹ ಮತ್ತು ಭಕ್ತರು ಉರಿಸಿ ಇಡುತ್ತಿದ್ದ ಧೂಪ, ದೀಪಗಳು ಮಾತ್ರ.

ಗಣಪನ ಮುಂದೆ ಭಕ್ತರು ನಿರ್ಮಾಣ ಮಾಡಿದ ಪುಟ್ಟ ಛಾವಣಿ ರಹಿತ 'ಸರಳ ಮಂಟಪ' ಉಂಟು. ಕೇವಲ ಸರಳುಗಳನ್ನು ಹೊಂದಿದ 'ಸರಳ ಮಂಟಪ' ಸರಳುಗಳಲ್ಲಿ ನೂರಾರು ಗಂಟೆಗಳು ಕಾಣಿಸುತ್ತವೆ. ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿದ್ದಕ್ಕೆ ಭಕ್ತರೇ ಕೃತಜ್ಞತಾ ಪೂರ್ವಕವಾಗಿ ಕಟ್ಟಿದ ಗಂಟೆಗಳಿವು. ತರಹೇವಾರಿ ಗಂಟೆಗಳು ಗಾಳಿ ಬೀಸಿದಾಗ ಸದ್ದು ಮಾಡುತ್ತಾ ನಾದ ಹೊಮ್ಮಿಸಿ ಪರಿಸರಕ್ಕೆ ಒಂದು ವಿಶೇಷ ಕಳೆಯನ್ನು ತಂದು ಕೊಡುತ್ತವೆ.

ಹಾಗಾದರೆ ಇಲ್ಲಿಗೆ ಮಧ್ಯಾಹ್ನದ ವೇಳೆಗೋ, ರಾತ್ರಿಯ ವೇಳೆಗೋ ಬಂದರೆ ಊಟಕ್ಕೆ ಗತಿ? ಹಾಗೇನೂ ಅಂಜ ಬೇಕಿಲ್ಲ. ಭಕ್ತರೇ ಸೇರಿಕೊಂಡು ಇಲ್ಲಿ ಸಮಿತಿಯೊಂದನ್ನು ರಚಿಸಿಕೊಂಡಿದ್ದಾರೆ. ಸಮಿತಿಯ ಮೂಲಕ ಇಲ್ಲಿ ಭಕ್ತರಿಗೆ ಮಧ್ಯಾಹ್ನ, ರಾತ್ರಿ ಪ್ರಸಾದ ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಉಂಡು ವಿಶ್ರಮಿಸಿ ಪ್ರಯಾಣ ಮುಂದುವರೆಸಬಹುದು.

ಇಲ್ಲಿ ಗಣಪನಿಗೆ ವಿಧಿವತ್ತಾಗಿ ಪೂಜೆ ಸಲ್ಲಿಸಲು ಅರ್ಚಕರು ಇದ್ದಾರೆ. ಹಾಗಂತ ನೀವು ಹೋದಾಗ ಅರ್ಚಕರು ಇಲ್ಲದೇ ಇದ್ದರೆ? ನೀವೇ ನೇರವಾಗಿ ನಿಮ್ಮ ಕೈಯಿಂದಲೇ ಪೂಜೆ ಸಲ್ಲಿಸಲು ಅಡ್ಡಿ ಇಲ್ಲ.

ವಿಶೇಷವೆಂದರೆ ಗಣಪನಿಗೆ ಧಾರ್ಮಿಕ ವಿಧಿ ವಿಧಾನಗಳ ಪೂಜೆಗಿಂತ ಮಳೆಗಾಲದಲ್ಲಿ ಸುರಿಯುವ ಮಳೆನೀರಿನ ನಿತ್ಯಾಭಿಷೇಕ, ಸೆಕೆಗಾಲದಲ್ಲಿ ಸೂರ್ಯನ ಬಿಸಿಲಿನ ಅಭಿಷೇಕ, ರಾತ್ರಿ ಚಂದ್ರನ ಹಿತಕರವಾದ ಬೆಳದಿಂಗಳ ಅಭಿಷೇಕ, ಗಿಡ ಮರಗಳ ಎಲೆಗಳನ್ನು ಅಲ್ಲಾಡಿಸುತ್ತಾ, ಬಳ್ಳಿಗಳನ್ನು ಬಳುಕಿಸುತ್ತಾ ಮೈಮನಗಳಿಗೆ ಮುದ ನೀಡುವ ವಾಯುವಿನ ಚಾಮರ ಸೇವೆ ಬಲು ಪ್ರಿಯ. ಇದು ನೋಡಲು ಕಣ್ಣಿಗೆ ಸೊಬಗಿನ ದೃಶ್ಯ ಕೂಡಾ.

ಸೌತೆಡ್ಕ ಗಣಪನ ಪರಿಸರದಲ್ಲ್ಲಿ ನಿತ್ಯವೂ ನಡೆಯುವುದು ಪ್ರಕೃತಿಯ ಪೂಜೆ. ಪೂಜಾ ಉತ್ಸವಕ್ಕೆ ಗಣಪನ ಪ್ರತಿಮೆ ಸಂಕೇತ ಅಷ್ಟೆ. ಮಳೆ, ಬಿಸಿಲು, ಗಾಳಿ, ಗಂಟೆ, ಹಕ್ಕಿಗಳ ಚಿಲಿಪಿಲಿ, ಗೋವುಗಳ 'ಅಂಬಾ' ನಾದ, ಶ್ವಾನಗಳ ನಿತ್ಯ ಕಾವಲು - ನೀವು ಬದುಕುವ ಮುನ್ನ ಸುತ್ತು ಮುತ್ತಣ ಪರಿಸರವನ್ನು ರಕ್ಷಿಸಿ, ಪರಿಸರದ ಸೊಬಗು ಕಾಪಾಡಿ ಎಂಬ ಸಂದೇಶ ನೀಡುತ್ತಿದ್ದಾನೆ ಸೌತೆಡ್ಕದ 'ವನ ಗಣಪತಿ'.

ಚೌತಿಗೆ ಹೋಗಲಾಗದಿದ್ದರೆ ಚಿಂತೆಯಿಲ್ಲ. ಮುಂದಿನ ಚೌತಿಯ ಒಳಗಾದರೂ ದಕ್ಷಿಣ ಕನ್ನಡ ಜಿಲ್ಲೆಗೆ ಹೋದರೆ ಖಂಡಿತ ವೀಕ್ಷಿಸಲು ಮರೆಯಬೇಡಿ ಆಲಯ ಬೇಡದ, ಮಳೆ, ಗಾಳಿ, ಚಳಿ, ಬಿಸಿಲಿಗೆ ಮೈಯೊಡ್ಡಿ ನಿಂತಿರುವ ಸೌತೆಡ್ಕ ಗಣಪತಿಯನ್ನು.
ಸ್ಥಳದ ಬಗ್ಗೆ ಹೆಚ್ಚಿನ ವಿವರಗಳಿಗೆ ಸಮಿತಿಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ವಾಸುದೇವ ಶಬರಾಯ (08251 202161/ 9448843799) ಇವರನ್ನು ಸಂಪರ್ಕಿಸಬಹುದು.

Summary in English:
Southedka Ganapa, Sky is limit to him..!
This Ganapa sitting in the forest near Kokkada of Dakshina Kannada is known as Suthedka Ganapa. The specialty of this Ganapa is that he has no temple. He wants all animals and birds like Cows, Dogs and crows apart from human beings should walk around him. Local people say that He ordered not to build temple for him. He is the real ganapa who is giving the message to human beings to live with nature. Visit him at least once in your life, suggests Nethrakere Udaya Shankara.

(ಚಿತ್ರಕೃಪೆ: ರಾಜಗೋಪಾಲ ಭಟ್, ಕೈಲಾರ ಸ್ಟೋರ್ಸ್, ಉಪ್ಪಿನಂಗಡಿ).

First Posted 3rd September 2008 by PARYAYA

No comments:

Post a Comment