ಇಂದಿನ ಇತಿಹಾಸ History Today ಸೆಪ್ಟೆಂಬರ್ 30
2020: ಲಕ್ನೋ: ೨೮ ವರ್ಷಗಳ ಹಿಂದೆ ಸಂಭವಿಸಿದ ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ 2020 ಸೆಪ್ಟೆಂಬರ್ 30ರ ಬುಧವಾರ ೨,೦೦೦ ಪುಟಗಳ ಚಾರಿತ್ರಿಕ ತೀರ್ಪು ನೀಡಿದ ವಿಶೇಷ ಸಿಬಿಐ ನ್ಯಾಯಾಲಯವು ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ ಜೋಶಿ, ಉಮಾಭಾರತಿ ಸೇರಿದಂತೆ ಎಲ್ಲ ೩೨ ಮಂದಿ ಆರೋಪಿಗಳನ್ನು ಖುಲಾಸೆ ಮಾಡಿತು. ತೀರ್ಪನ್ನು ಓದಿ ಹೇಳಿದರ ವಿಶೇಷ ನ್ಯಾಯಾಧೀಶ ಸುರೇಂದ್ರ ಕುಮಾರ್ ಯಾದವ್ ಅವರು ’೧೯೯೨ ರ ಬಾಬರಿ ಮಸೀದಿ ನೆಲಸಮವು ಪೂರ್ವ ಯೋಜಿತವಲ್ಲ ಮತ್ತು ಸಾಕ್ಷ್ಯಗಳು ಬಲವಾಗಿಲ್ಲ’ ಎಂದು ಹೇಳಿ ಎಲ್ಲ ಆರೋಪಿಗಳನ್ನೂ ದೋಷಮುಕ್ತಗೊಳಿಸಿದರು.ತೀರ್ಪನ್ನು ಓದಿ ಹೇಳುವ ವೇಳೆಯಲ್ಲಿ ಸಾಧ್ವಿ ಋತಂಭರ, ಸಾಕ್ಷಿ ಮಹಾರಾಜ್, ವಿನಯ್ ಕಟಿಯಾರ್ ಮತ್ತು ಚಂಪತ್ ರಾಯ್ ಬನ್ಸಾಲ್ ಅವರು ನ್ಯಾಯಾಲಯಕ್ಕೆ ಹಾಜರಾಗಿದ್ದರೆ, ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ ಜೋಷಿ, ಮತ್ತು ಉಮಾಭಾರತಿ ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ಹಾಜರಾಗಿದ್ದರು. ಅಡ್ವಾಣಿ ಮತ್ತು ಮುರಳಿ ಮನೋಹರ ಜೋಷಿ ಅವರು ವಯಸ್ಸು ಸಂಬಂಧಿಸಿದ ಅನಾರೋಗ್ಯದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಖುದ್ದು ಹಾಜರಾಗಲಿಲ್ಲ. ಉಮಾಭಾರತಿ ಅವರು ಕೊರೋನಾವೈರಸ್ ಸೋಂಕಿನ ಕಾರಣ ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ನ್ಯಾಯಾಲಯದ ಕಲಾಪ ವೀಕ್ಷಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಬಾಬರಿ ಮಸೀದಿ ಧ್ವಂಶ ಪ್ರಕರಣದ ಎಲ್ಲ ೩೨ ಆರೋಪಿಗಳನ್ನು ನಿರ್ಣಾಯಕ ಪುರಾವೆಗಳ ಕೊರತೆಯ ಕಾರಣ ಖುಲಾಸೆಗೊಳಿಸಿದ ಲಕ್ನೋದ ವಿಶೇಷ ಸಿಬಿಐ ನ್ಯಾಯಾಲಯದ ತೀರ್ಪನ್ನು ಬಿಜೆಪಿ, ವಿಶ್ವ ಹಿಂದೂ ಪರಿಷತ್, ಶಿವಸೇನೆ ಸೇರಿದಂತೆ ಹಲವಾರು ನಾಯಕರು 2020 ಸೆಪ್ಟೆಂಬರ್ 30ರ ಬುಧವಾರ ಸ್ವಾಗತಿಸಿದರು. ತೀರ್ಪು ಹೊರಬಿದ್ದ ಬೆನ್ನಲ್ಲೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ‘ಸತ್ಯಮೇವ ಜಯತೆ’ ಎಂದು ಹೇಳಿಕೆ ನೀಡಿದರು. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿ, "ತಡವಾಗಿಯಾದರೂ ಅಂತಿಮವಾಗಿ ನ್ಯಾಯಕ್ಕೆ ಜಯ ಲಭಿಸಿರುವುದನ್ನು ಇದು ತೋರಿಸಿದೆ’ ಎಂದು ಹೇಳಿದರು. ವಿಶೇಷ ಸಿಬಿಐ ನ್ಯಾಯಾಲಯದಿಂದ ಖುಲಾಸೆಗೊಂಡ ಆರೋಪಿಗಳಲ್ಲಿ ಒಬ್ಬರಾದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ತೀರ್ಪನ್ನು ಸ್ವಾಗತಿಸಿ, ’ಬಾಬರಿ ಮಸೀದಿ ಉರುಳಿಸುವಿಕೆಯ ಪ್ರಕರಣದ ವಿಶೇಷ ನ್ಯಾಯಾಲಯದ ತೀರ್ಪನ್ನು ನಾನು ಪೂರ್ಣ ಹೃದಯದಿಂದ ಸ್ವಾಗತಿಸುತ್ತೇನೆ. ಈ ತೀರ್ಪು ರಾಮ ಜನ್ಮಭೂಮಿ ಚಳವಳಿಯ ಬಗ್ಗೆ ನನ್ನ ವೈಯಕ್ತಿಕ ಮತ್ತು ಬಿಜೆಪಿಯ ನಂಬಿಕೆ ಮತ್ತು ಬದ್ಧತೆಯನ್ನು ಸಮರ್ಥಿಸುತ್ತದೆ’ ಎಂದು ಹೇಳಿದರು. ಖುಲಾಸೆಗೊಂಡ ಆರೋಪಿಗಳಲ್ಲಿ ಒಬ್ಬರಾದ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ವಿನಯ್ ಕಟಿಯಾರ್, ‘ನಾವು ತೀರ್ಪನ್ನು ಸ್ವಾಗತಿಸುತ್ತೇವೆ. ಇದು ಸತ್ಯದ ವಿಜಯ. ಧ್ವಂಸದಲ್ಲಿ ನಮ್ಮ ಯಾವ ಪಾತ್ರವೂ ಇರಲಿಲ್ಲ. ನಾವು ನಿಜವಾಗಿಯೂ ವೇದಿಕೆಯಲ್ಲಿದ್ದೆವು, ಅದು ನೆಲಸಮ ಸ್ಥಳದಿಂದ ದೂರ ಇತ್ತು’ ಎಂದು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಅಕ್ಟೋಬರ್ ೪ಕ್ಕೆ ನಿಗದಿಯಾಗಿರುವ ಕೇಂದ್ರ ನಾಗರಿಕ ಸೇವೆಗಳ (ಯುಪಿಎಸ್ಸಿ) ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡಲು ಸುಪ್ರೀಂ ಕೋರ್ಟ್ 2020 ಸೆಪ್ಟೆಂಬರ್ 30ರ ಬುಧವಾರ ನಿರಾಕರಿಸಿತು. ಕೊರೊನಾ ಸೋಂಕಿನ ಕಾರಣ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ ನೀಡುವ ಬಗ್ಗೆ ಪರಿಶೀಲನೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಕೋರ್ಟ್ ನಿರ್ದೆಶನ ನೀಡಿತು. ಕೇಂದ್ರ ಲೋಕ ಸೇವಾ ಆಯೋಗವು (ಯುಪಿಎಸ್ಸಿ) ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಗಳ ಸಿದ್ಧತೆಗೆ ೫೦ ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಯುಪಿಎಸ್ ಸಿ ಕೋರ್ಟಿಗೆ ಪ್ರಮಾಣಪತ್ರ ಸಲ್ಲಿಸಿತ್ತು. ಕೋವಿಡ್-೧೯ ಕಾರಣದಿಂದಾಗಿ ಈ ಬಾರಿಯ ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡುವಂತೆ ನಾಗರಿಕ ಸೇವೆಗಳ ಆಕಾಂಕ್ಷಿಗಳಲ್ಲಿ ಕೆಲವರು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಗೃಹ ವ್ಯವಹಾರಗಳ ಸಚಿವಾಲಯವು ಅಕ್ಟೋಬರ್ ೧ರಿಂದ ಜಾರಿಗೆ ಬರಲಿರುವ ಅನ್ಲಾಕ್ ೫ ಬಗ್ಗೆ ವಿವರವಾದ ಮಾರ್ಗಸೂಚಿಯನ್ನು 2020 ಸೆಪ್ಟೆಂಬರ್ 30ರ ಬುಧವಾರ ಪ್ರಕಟಿಸಿತು. ಅನ್ಲಾಕ್ ೫.೦ ಪ್ರಕ್ರಿಯೆಯಲ್ಲಿ ಮಲ್ಟಿಪ್ಲೆಕ್ಸ್, ಈಜುಕೊಳ, ಶಾಲೆ, ಕಾಲೇಜುಗಳ ಚಟುವಟಿಕೆಗಳನ್ನು ಅಕ್ಟೋಬರ್ ೧೫ರಿಂದ ಭಾಗಶಃ ಪುನಾರಂಭ ಮಾಡಲು ಅನುಮತಿ ನೀಡಲಾಯಿತು. ದೇಶದಲ್ಲಿ ಕೋವಿಡ್ -೧೯ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಏರಿಕೆ, ಕೆಲವು ರಾಜ್ಯಗಳಲ್ಲಿನ ಸ್ಥಳೀಯ ಆಡಳಿತಗಳು ಸ್ವಯಂಪ್ರೇರಿತ ಕರ್ಫ್ಯೂ, ಸ್ಥಳೀಯ ಲಾಕ್ಡೌನ್ ಇತ್ಯಾದಿಗಳನ್ನು ಹೆಚ್ಚು ಅವಲಂಬಿಸುತ್ತಿದ್ದರೂ, ಹೆಚ್ಚಿನ ರಿಯಾಯ್ತಿ ಮತ್ತು ಕಡಿಮೆ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
ಇಂದಿನ ಇತಿಹಾಸ History Today ಸೆಪ್ಟೆಂಬರ್ 30 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
-ಸಂಗ್ರಹ: ನೆತ್ರಕೆರೆ ಉದಯಶಂಕರ
No comments:
Post a Comment