ನಾನು ಮೆಚ್ಚಿದ ವಾಟ್ಸಪ್

Thursday, July 31, 2008

Free Flight / Free Family Holiday..! ವಿದೇಶ ಪಯಣ ಮತ್ತು ರಜಾದ ಮಜಾ..!

Free Flight and Free Family Holiday..!

What is the meaning of advertisement that 'Flight to West Indies Free or Family Holiday in India Free'. While Consumer thought that second part of the advertisement means that 'Holiday in India Free' includes travelling fare also. But Court ruled that it is not so. It means only stay arrangements in a Hotel in India is free and travelling fare will not include in it.

ವಿದೇಶ ಪಯಣ ಮತ್ತು

ರಜಾದ ಮಜಾ..!


ಗ್ರಾಹಕರು ನ್ಯಾಯಕ್ಕಾಗಿ ಹೋರಾಟ ಮಾಡಲು ಮುಂದಾಗುವಾಗ ತಾವು ಮಾಡಿಕೊಂಡ ಒಪ್ಪಂದ/ ಕರಾರುಗಳ ಇಲ್ಲವೇ ಪಡೆಯಲು ಮುಂದಾಗುವ ಸೇವೆಗಳಿಗೆ ಸಂಬಂಧಿಸಿದ ಎಲ್ಲ ವಿವರಗಳನ್ನೂ ಸೂಕ್ಷ್ಮವಾಗಿ ಅಧ್ಯಯನ ಮಾಡಿಕೊಳ್ಳಬೇಕು. ಇಂತಹ ಅಧ್ಯಯನ ಗುಣ ಬೆಳೆಸಿಕೊಳ್ಳದೇ ಇದ್ದರೆ ಎಲ್ಲ ಸಂದರ್ಭಗಳಲ್ಲೂ ನ್ಯಾಯ ಲಭಿಸೀತು ಎಂದು ಹೇಳಲು ಸಾಧ್ಯವಿಲ್ಲ.
ನೆತ್ರಕೆರೆ ಉದಯಶಂಕರ
'ಉಚಿತ ವಿದೇಶಯಾನ' ಅಥವಾ 'ದೇಶದೊಳಗೆ ಒಂದು ದಿನ ಉಚಿತ ರಜಾದ ಮಜಾ' ಎಂಬ ಜಾಹೀರಾತು ಕಂಡರೆ ನೀವು ಏನೆಂದು ಅರ್ಥ ಮಾಡಿಕೊಳ್ಳುತ್ತೀರಿ?

ಇಂತಹ ಸೂಕ್ಷ್ಮ ಬರಹದ ಗೊಂದಲದಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದು ಗ್ರಾಹಕ ಕಲಿತುಕೊಳ್ಳಬೇಕು. ಇಂತಹ ಆಕರ್ಷಕ ಜಾಹೀರಾತು ಒಂದಕ್ಕೆ ಮರುಳಾದ ಗ್ರಾಹಕರಿಬ್ಬರ ಪ್ರಕರಣಗಳಿವು. ಇಲ್ಲಿ ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ತೀರ್ಪು ಗ್ರಾಹಕರ ಪರವಾದರೂ ರಾಜ್ಯ ಗ್ರಾಹಕ ನ್ಯಾಯಾಲಯದಲ್ಲಿ ಅವರಿಗೆ ಗೆಲುವು ಲಭಿಸಲಿಲ್ಲ.

ಈ ಪ್ರಕರಣದ ಅರ್ಜಿದಾರರು: (1) ಬಾಗಲಕೋಟೆ ನವನಗರದ ನಿವಾಸಿ ವಕೀಲ ಸುರೇಶ ಮಲ್ಲಪ್ಪ ಕುಂಬಾರ, (2) ಬಾಗಲಕೋಟೆ ಸ್ಟೇಷನ್ ರಸ್ತೆಯ ಹೀರೋ ಹೋಂಡಾ ವ್ಯಾಪಾರಿ ವಿಜಯಾ ಮೋಟಾರ್ಸ್ನ ಫ್ರಾನ್ಸಿಸ್ ಕ್ಸೇವಿಯರ್. ಹಾಗೂ ಎರಡನೇ ಪ್ರಕರಣದ ಅರ್ಜಿದಾರರು: (2) ಬಾಗಲಕೋಟೆ ಥಲಗಿಹಾಳ ತಾಲ್ಲೂಕಿನ ನಿವಾಸಿ ಮಲ್ಲಿಕಾರ್ಜುನ ಈಶ್ವರಪ್ಪ ಕಮತಗಿ ಹಾಗೂ ಬಾಗಲಕೋಟೆ ಸ್ಟೇಷನ್ ರಸ್ತೆಯ ಹೀರೋ ಹೋಂಡಾ ವ್ಯಾಪಾರಿ ಫ್ರಾನ್ಸಿಸ್ ಕ್ಸೇವಿಯರ್.
ಎರಡೂ ಪ್ರಕರಣಗಳ ಪ್ರತಿವಾದಿಗಳು: ಚಂಡೀಗಢದ ಮೆ. ಇನ್ನೋವೇಟಿವ್ ಇನ್ಸೆಂಟಿವ್ ಹಾಲಿಡೇಸ್ ಪ್ರೈವೇಟ್ ಲಿಮಿಟೆಡ್.

ಉಭಯ ಅರ್ಜಿದಾರರ ದೂರುಗಳ ಪ್ರಕಾರ ಅವರು ಪ್ರತಿವಾದಿಯ ಆಕರ್ಷಕ ಜಾಹೀರಾತು ಕಂಡು ಎರಡು ಹೀರೋ ಹೋಂಡಾ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಬೈಕುಗಳನ್ನು ಖರೀದಿಸಿದರು. ಈ ಬೈಕುಗಳನ್ನು ಖರೀದಿಸಿದವರಿಗೆ ವೆಸ್ಟೀಂಡೀಸ್ ಗೆ ಉಚಿತ ಪ್ರವಾಸ ಅಥವಾ ಭಾರತದಲ್ಲಿ ಕುಟುಂಬ ಸಹಿತ ಉಚಿತ ರಜಾದ ಮಜಾ ಅವಕಾಶ ಎಂಬ ಜಾಹೀರಾತು ಇವರನ್ನು ಸೆಳೆದಿತ್ತು.

ಪ್ರತಿವಾದಿಯ ಜಾಹೀರಾತಿನ ಪ್ರಕಾರ ಹೀರೋ ಹೋಂಡಾ ಖರೀದಿಸಿದ ಯಾರು ಬೇಕಾದರೂ ಅವರಿಗೆ ನೀಡಲಾಗುವ ಸ್ಕ್ರಾಚ್ ಕಾರ್ಡ್ನ್ನು ಗೀರಿದಾಗ ಯಾವ ಬರಹ ಕಂಡು ಬರುತ್ತದೋ ಅದರ ಪ್ರಕಾರ ವೆಸ್ಟಿಂಡೀಸ್ ಗೆ ಉಚಿತ ಪ್ರವಾಸ ಮಾಡಬಹುದು ಅಥವಾ ಭಾರತದಲ್ಲಿ ಕುಟುಂಬ ಸಹಿತ ಉಚಿತ ರಜಾದ ಮಜಾ ಅನುಭವಿಸಬಹುದಾಗಿತ್ತು.

ಅರ್ಜಿದಾರರು ತಮಗೆ ನೀಡಲಾಗಿದ್ದ ಸ್ಕ್ರಾಚ್ ಕಾರ್ಡನ್ನು ಗೀರಿದಾಗ ಅದರಲ್ಲಿ 'ಭಾರತದಲ್ಲಿ ಕುಟುಂಬ ಸಹಿತವಾಗಿ ಉಚಿತ ರಜಾದ ಮಜಾ' ಎಂಬ ಬರಹ ಕಾಣಿಸಿತು.

ಅದಕ್ಕೆ ಅನುಗುಣವಾಗಿ ಪ್ರತಿವಾದಿಗಳು ಕೋಡೈಕನಾಲ್ ರಾಯಲ್ ಹೋಟೆಲಿನಲ್ಲಿ ಅವರಿಗೆ ಮೂರು ಹಗಲು, ಮೂರು ರಾತ್ರಿ ಕಾಲ ರಜಾ ವಾಸ್ತವ್ಯಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡಿದರು.
ಆದರೆ ಅರ್ಜಿದಾರರು ಇದನ್ನು ತಿರಸ್ಕರಿಸಿದರು. ಅವರು ಇದನ್ನು ತಿರಸ್ಕರಿಸಲು ಮುಖ್ಯ ಕಾರಣ: ಕೊಡೈಕನಾಲಿನಲ್ಲಿ ಉಚಿತ ರಜಾದ ಮಜಾ ಅನುಭವಿಸಲು ಪ್ರತಿವಾದಿಗಳು ವಾಹನ ಮತ್ತು ಇತರ ವೆಚ್ಚಗಳನ್ನು ಭರಿಸಲು ವ್ಯವಸ್ಥೆ ಮಾಡಬೇಕು ಎಂಬ ಬೇಡಿಕೆಯನ್ನು ಪ್ರತಿವಾದಿ ತಿರಸ್ಕರಿಸಿದ್ದು.

ಅರ್ಜಿದಾರರು ಪ್ರತಿವಾದಿಯಿಂದ ಸೇವಾಲೋಪ ಆಗಿದೆ ಎಂದು ಆಪಾದಿಸಿ ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿದರು.

ಪ್ರಕರಣಗಳ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕ ನ್ಯಾಯಾಲಯವು ಅರ್ಜಿದಾರರ ವಾದವನ್ನು ಪುರಸ್ಕರಿಸಿ, ಅರ್ಜಿದಾರರಿಗೆ ತಲಾ 20,000 ರೂಪಾಯಿಗಳ ಪರಿಹಾರ ನೀಡುವಂತೆ ಪ್ರತಿವಾದಿಗೆ ಆಜ್ಞಾಪಿಸಿತು.

ಜಿಲ್ಲಾ ಗ್ರಾಹಕ ನ್ಯಾಯಾಲಯದ ಈ ತೀರ್ಪನ್ನು ಪ್ರಶ್ನಿಸಿ ಪ್ರತಿವಾದಿ ಸಂಸ್ಥೆಯು ರಾಜ್ಯ ಗ್ರಾಹಕ ನ್ಯಾಯಾಲಯದ ಕದ ತಟ್ಟಿತು.

ಅಧ್ಯಕ್ಷ ನ್ಯಾಯಮೂರ್ತಿ ಚಂದ್ರಶೇಖರಯ್ಯ, ಸದಸ್ಯರಾದ ಟಿ. ಹರಿಯಪ್ಪ ಗೌಡ ಮತ್ತು ಶ್ರೀಮತಿ ರಮಾ ಅನಂತ್ ಅವರನ್ನು ಒಳಗೊಂಡ ಪೀಠವು ಅರ್ಜಿದಾರರ ಪರವಾಗಿ ಫ್ರಾನ್ಸಿಸ್ ಕ್ಸೇವಿಯರ್ ಮತ್ತು ಪ್ರತಿವಾದಿಗಳ ಪರವಾಗಿ ಶ್ರೀಮತಿ ಸಿ. ಶಂಕರ ರೆಡ್ಡಿ ಅವರ ಅಹವಾಲು ಆಲಿಸಿ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿತು.

ರಾಜ್ಯ ಗ್ರಾಹಕ ನ್ಯಾಯಾಲಯ ಮೊತ್ತ ಮೊದಲನೆಯದಾಗಿ ಜಾಹೀರಾತನ್ನು ಎಚ್ಚರಿಕೆಯಿಂದ ಗಮನಿಸಿತು. 'ಫ್ಲೈ ಟು ವೆಸ್ಟ್ ಇಂಡೀಸ್ ಫ್ರೀ ಆರ್ ಫ್ಯಾಮಿಲಿ ಹಾಲಿಡೇ ಇನ್ ಇಂಡಿಯಾ ಫ್ರೀ' (ಅಂದರೆ ಉಚಿತವಾಗಿ ವೆಸ್ಟ್ ಇಂಡೀಸ್ ಪ್ರವಾಸ ಇಲ್ಲವೇ ಕುಟುಂಬ ಸಹಿತ ಭಾರತದಲ್ಲಿ ಉಚಿತವಾಗಿ ಕುಟುಂಬ ಸಹಿತ ರಜಾ ದಿನದ ಮಜಾ' ಎಂಬುದು ಜಾಹೀರಾತಿನ ವಿವರಣೆಯಾಗಿತ್ತು.

ಈ ಜಾಹೀರಾತಿನ ಪ್ರಕಾರ ಹೀರೋ ಹೋಂಡಾ ಖರೀದಿಸಿದಾಗ ಲಭಿಸಿದ ಸ್ಕ್ರಾಚ್ ಕಾರ್ಡ್ ಗೀರಿದಾಗ ಯಾವ ಕೊಡುಗೆಯ ಬರಹ ಕಾಣುತ್ತದೋ ಅದಕ್ಕೆ ಅವರು ಅರ್ಹರಾಗಿದ್ದರು.

ಅಂದರೆ ಗ್ರಾಹಕನಿಗೆ ಸ್ಕ್ರಾಚ್ ಕಾರ್ಡಿನಲ್ಲಿ 'ಫ್ಲೈ ಟು ವೆಸ್ಟ್ ಇಂಡೀಸ್ ಫ್ರೀ' ಎಂಬ ಬರಹ ಕಂಡರೆ ಆತನು ಉಚಿತ ವೆಸ್ಟ್ ಇಂಡೀಸ್ ಪ್ರವಾಸಕ್ಕೂ, ಸ್ಕ್ರಾಚ್ ಕಾರ್ಡಿನಲ್ಲಿ 'ಫ್ಯಾಮಿಲಿ ಹಾಲಿಡೇ ಇನ್ ಇಂಡಿಯಾ ಫ್ರೀ' ಎಂಬ ಬರಹ ಕಂಡುಬಂದರೆ ಭಾರತದಲ್ಲಿ ಕುಟುಂಬ ಸಹಿತವಾಗಿ ಉಚಿತ ರಜಾದ ಮಜಾ ಅನುಭವಿಸಲೂ ಅರ್ಹತೆ ಲಭಿಸುತ್ತಿತ್ತು.

ಸ್ಕ್ರಾಚ್ ಕಾರ್ಡ್ ಕೊಡುಗೆಯ ಪ್ರಕಾರ ಪ್ರತಿವಾದಿಯು ಅರ್ಜಿದಾರರ ಇಚ್ಛೆಯಂತೆಯೇ ಅವರನ್ನು ಕೊಡೈಕನಾಲ್ಗೆ ಕಳುಹಿಸಲು ಮತ್ತು ಅಲ್ಲಿ ರಾಯಲ್ ಹೋಟೆಲಿನಲ್ಲಿ ವಾಸ್ತವ್ಯಕ್ಕೆ ಬೇಕಾದ ವ್ಯವಸ್ಥೆ ಮಾಡಿದರು.

ಆದರೆ ಅರ್ಜಿದಾರರು ಅದನ್ನು ಪಡೆದುಕೊಳ್ಳಲು ಮುಂದಾಗಲಿಲ್ಲ. ಪ್ರತಿವಾದಿಯು ಅಲ್ಲಿಗೆ ಹೋಗಲು ಶುಲ್ಕ ವಿಧಿಸಿದ್ದು ಸರಿಯಲ್ಲ, ಉಚಿತವಾಗಿ ಹೋಗಲು ವ್ಯವಸ್ಥೆ ಮಾಡಬೇಕಾಗಿತ್ತು ಎಂಬ ವಾದ ಅವರದಾಗಿತ್ತು.

'ಫ್ಲೈ ಟು ವೆಸ್ಟ್ ಇಂಡೀಸ್ ಫ್ರೀ ಆರ್ ಫ್ಯಾಮಿಲಿ ಹಾಲಿಡೇ ಇನ್ ಇಂಡಿಯಾ ಫ್ರೀ' ಎಂಬ ವಾಕ್ಯದಲ್ಲಿ ವೆಸ್ಟ್ ಇಂಡೀಸ್ಗೆ ಪ್ರವಾಸ ಮತ್ತು ಭಾರತದ ಒಳಗೆ ಉಚಿತವಾಗಿ ಕುಟುಂಬ ಸಹಿತವಾಗಿ ಉಚಿತ ರಜಾದ ಮಜಾ ಅವಕಾಶದ ಪ್ರಸ್ತಾಪವಿದ್ದುದನ್ನು ನ್ಯಾಯಾಲಯ ಗಮನಿಸಿತು. ಆದರೆ ಭಾರತದಲ್ಲಿ ಕುಟುಂಬ ಸಹಿತ ಉಚಿತ ರಜಾದ ಮಜಾ ಎಂಬ ಭರವಸೆಯ ಜೊತೆಗೆ ಸಂಚಾರ ಮತ್ತು ಇತರ ಸವಲತ್ತುಗಳ ಪ್ರಸ್ತಾಪ ಇರಲಿಲ್ಲ ಎಂಬುದನ್ನು ನ್ಯಾಯಾಲಯ ಗಮನಕ್ಕೆ ತೆಗೆದುಕೊಂಡಿತು.

ಕೊಡುಗೆಯ ಭರವಸೆ 'ಕೇವಲ ಫ್ಯಾಮಿಲಿ ಹಾಲಿಡೇ ಇನ್ ಇಂಡಿಯಾ ಫ್ರೀ' ಎಂದಷ್ಟೇ ಹೇಳಿತ್ತು.

ತಮ್ಮ ಕೊಡುಗೆಯಲ್ಲಿ ನೀಡಿದ ಭರವಸೆಯ ಪ್ರಕಾರ ಪ್ರತಿವಾದಿಗಳು ಕೋಡೈಕನಾಲಿನಲ್ಲಿ ಕುಟುಂಬ ಸಹಿತ ವಾಸ್ತವ್ಯಕ್ಕೆ ಅರ್ಜಿದಾರರ ಇಚ್ಛೆಯಂತೆಯೇ ಎಲ್ಲ ವ್ಯವಸ್ಥೆ ಮಾಡಿದ್ದರಿಂದ ಇಲ್ಲಿ ಸೇವಾಲೋಪ ಆಗಿಲ್ಲ ಎಂಬ ತೀರ್ಮಾನಕ್ಕೆ ರಾಜ್ಯ ಗ್ರಾಹಕ ನ್ಯಾಯಾಲಯ ಬಂದಿತು.

ಸಾರಿಗೆ ವ್ಯವಸ್ಥೆ ಮಾಡಿಲ್ಲ ಎಂದು ಹೇಳಿ ಅರ್ಜಿದಾರರು ಪ್ರತಿವಾದಿ ನೀಡಿದ ಕೊಡುಗೆಯನ್ನು ಸ್ವೀಕರಿಸದೇ ಇದ್ದುದು ಒಪ್ಪುವಂತಹ ವಿಚಾರವಲ್ಲ ಎಂದು ಹೇಳಿದ ನ್ಯಾಯಾಲಯ ಈ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕ ನ್ಯಾಯಾಲಯದ ತೀರ್ಪು ಸಮರ್ಪಕ ಅಲ್ಲ ಎಂದು ನಿರ್ಧರಿಸಿತು.

ಈ ಹಿನ್ನೆಲೆಯಲ್ಲಿ ಮೇಲ್ಮನವಿಯನ್ನು ಅಂಗೀಕರಿಸಿದ ಪೀಠವು ಜಿಲ್ಲಾ ಗ್ರಾಹಕ ನ್ಯಾಯಾಲಯದ ತೀರ್ಪನ್ನು ರದ್ದು ಪಡಿಸಿ, ಜಿಲ್ಲಾ ಗ್ರಾಹಕ ನ್ಯಾಯಾಲಯದ ಮುಂದೆ ಸಲ್ಲಿಸಲಾಗಿದ್ದ ಅರ್ಜಿಗಳನ್ನು ವಜಾ ಮಾಡಿತು.

ಪ್ರತಿವಾದಿಯು ಉಭಯ ಪ್ರಕರಣಗಳಿಗೂ ಸಂಬಂಧಿಸಿದಂತೆ ಠೇವಣಿ ಇರಿಸಿದ್ದ ತಲಾ 11,000 ರೂಪಾಯಿಗಳನ್ನು ಪ್ರತಿವಾದಿ ಮನವಿಯ ಮೇರೆಗೆ ಹಿಂದಿರುಗಿಸುವಂತೆಯೂ ನ್ಯಾಯಾಲಯ ಆಜ್ಞಾಪಿಸಿತು.

Sunday, March 23, 2008

ಅಯ್ಯಾ ಗ್ರಾಹಕ ಗೆಲ್ಲುವ ಬಗೆ ಗೊತ್ತೇ? How to win in Consumer Courts?

March 15 is World Consumers Day. This day is observed to bring awareness among consumers on their rights.  Kannada PARYAYA gives you some tips how to win in Consumer Courts. Will you make use of these tips?ಅಯ್ಯಾ ಗ್ರಾಹಕ ಗೆಲ್ಲುವ ಬಗೆ ಗೊತ್ತೇ?ಮಾರ್ಚ್ 15. ಜಾಗತಿಕ ಗ್ರಾಹಕರ ಹಕ್ಕುಗಳ ದಿನ. ವಸ್ತು, ಸೇವೆ ಖರೀದಿಸಿ ಮೋಸಹೋಗುವ ವ್ಯಕ್ತಿಗಳಿಗೆ ತಮ್ಮ ಹಕ್ಕುಗಳ ಸಲುವಾಗಿ ಹೋರಾಡಲು ಪಣ ತೊಡಬಹುದಾದ ದಿನ. ಗ್ರಾಹಕ ನ್ಯಾಯಾಲಯಗಳ ಕದ ತಟ್ಟಲು, ಸಮರ ಗೆಲ್ಲಲು ನೀವೇನು ಮಾಡಬಹುದು? ಇಲ್ಲಿವೆ ಒಂದಷ್ಟು ಸುಳಿವುಗಳು...
ನೆತ್ರಕೆರೆ ಉದಯಶಂಕರ
ನೀವು ಟಿವಿ/ಫೋನ್/ರೇಡಿಯೊ ಅಥವಾ ಬೇರೇನಾದರೂ ವಸ್ತು ಇಲ್ಲವೇ ನಿವೇಶನ ಖರೀದಿಸುತ್ತೀರಿ. ಖರೀದಿಸುವವರೆಗೆ ನೀವು ಹೇಳಿದ್ದಕ್ಕೆಲ್ಲಾ ತಲೆಬಾಗಿ ಓಗೊಡುವ ಅಂಗಡಿಯವರು/ ಕಂಪೆನಿಯವರು ಅವರಿಗೆ ಬರಬೇಕಾದ ಹಣ ಬಂದ ಬಳಿಕ ನಿಮ್ಮ ಕಡೆಗೆ ದೃಷ್ಟಿ ಹರಿಸುವುದಿಲ್ಲ. ಟಿವಿ, ಫೋನ್ ಹಾಳಾದರೆ ದುರಸ್ತಿ ಮಾಡಿಕೊಡದೆ ಕಾಡುತ್ತಾರೆ. ನಿವೇಶನಕ್ಕೆ ಒದಗಿಸಬೇಕಾದ ಮೂಲಭೂತ ಸೌಲಭ್ಯಗಳನ್ನು ಒದಗಿಸದೇ ಕಿರಿ ಕಿರಿ ಉಂಟು ಮಾಡುತ್ತಾರೆ.

ನೀವು ಏನು ಮಾಡುತ್ತೀರಿ? ದೂರವಾಣಿ ಮೂಲಕ ಅವರನ್ನು ಬೈದಾಡುತ್ತೀರಿ. ನಿಮ್ಮ ಗೆಳೆಯರ ಮುಂದೆ, ಬಂಧುಗಳ ಮುಂದೆ ಅವರ ಬಗ್ಗೆ ಟೀಕಿಸುತ್ತೀರಿ. ಇನ್ನು ಮುಂದೆ ಇಂತಹ ಅಂಗಡಿ/ ಕಂಪೆನಿಯಿಂದ ಏನನ್ನೂ ಖರೀದಿಸುವುದಿಲ್ಲ ಎಂದು ಶಪಥ ಮಾಡುತ್ತೀರಿ!

ಏನು ಲಾಭವಾಯಿತು? ನಿಮಗೂ ಉಪಯೋಗ ಇಲ್ಲ, ಅವರಿಗೆ ನಷ್ಟವೂ ಇಲ್ಲ, ಏಕೆಂದರೆ ಅವರಾಗಲೇ ಇನ್ನೊಬ್ಬ ಗಿರಾಕಿಯನ್ನು ಹಿಡಿದುಕೊಂಡಿರುತ್ತಾರೆ!

ಉಡುಪಿ ಕುಂಜಿಬೆಟ್ಟು ನಿವಾಸಿ ಗಣೇಶ ಸಾಲಿಯಾನ್ ಪೆಪ್ಸಿ ಫುಡ್ ಕಂಪೆನಿಯವರಿಂದ ಆಲೂಚಿಪ್ಸ್ ಪೊಟ್ಟಣ ಖರೀದಿಸಿದರು. ಅದಕ್ಕೆ ಅವರು ಕೊಟ್ಟದ್ದು 35 ರೂಪಾಯಿ. ಅವುಗಳನ್ನು ತೆರೆದಾಗ ಚಿಪ್ಸ್ ಕಡಿಮೆ ಇದ್ದದು ಕಂಡು ಬಂತು. ಚಿಲ್ಲರೆ ಸಮಸ್ಯೆ ಎಂದು ಗಣೇಶ ಸಾಲಿಯಾನ್ ಸುಮ್ಮನಾಗಬಹುದಿತ್ತು. ಆದರೆ ಅವರು ಸುಮ್ಮನಾಗಲಿಲ್ಲ. ಸಮರಕ್ಕೆ ಇಳಿದರು. ಗ್ರಾಹಕ ನ್ಯಾಯಾಲಯದ ಕದ ತಟ್ಟಿದರು. ಅವರ ಪ್ರಯತ್ನಕ್ಕೆ ಫಲ ಸಿಕ್ಕಿತು. ರಾಜ್ಯ ಗ್ರಾಹಕ ನ್ಯಾಯಾಲಯ ಅವರಿಗೆ 50,000 ರೂಪಾಯಿ ಪರಿಹಾರ ನೀಡುವಂತೆ ಪೆಪ್ಸಿ ಫುಡ್ ಪ್ರೈವೇಟ್ ಲಿಮಿಟೆಡ್ ಮತ್ತು ಇತರರಿಗೆ ಆದೇಶ ನೀಡಿತು.

ಬೆಂಗಳೂರಿನ ಹಿರಿಯ ಪತ್ರಕರ್ತ ಜೆ. ಶ್ರೀನಿವಾಸುಲು ಅವರ ಪತ್ನಿ ಸರೋಜಮ್ಮ ಆಂಜಿಯೋಗ್ರಾಮ್ ಪರೀಕ್ಷೆ ಸಂದರ್ಭದಲ್ಲಿ ಆದ ಅವ್ಯವಸ್ಥೆ, ವೈದ್ಯರ ನಿರ್ಲಕ್ಷ್ಯ ಪರಿಣಾಮವಾಗಿ ಪ್ರಾಣವನ್ನೇ ಕಳೆದುಕೊಳ್ಳಬೇಕಾಯಿತು. ಪತಿ ಶ್ರೀನಿವಾಸುಲು ಸುಮ್ಮನಾಗಲಿಲ್ಲ. ಗ್ರಾಹಕ ನ್ಯಾಯಾಲಯಕ್ಕೆ ದೌಡಾಯಿಸಿದರು. ರಾಜ್ಯ ಗ್ರಾಹಕ ನ್ಯಾಯಾಲಯವು 3 ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡುವಂತೆ ಆಂಜಿಯೋಗ್ರಾಮ್ ಪರೀಕ್ಷೆ ನಡೆಸಿದ ವೈದ್ಯರಿಗೆ ಆಜ್ಞಾಪಿಸಿತು.

ಬೆಂಗಳೂರಿನ ಹೆಬ್ಬಾಳದಲ್ಲಿರುವ ಪಶುವೈದ್ಯಕೀಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಎನ್.ಬಿ. ಶ್ರೀಧರ್ 
ಅವರಿಗೆ ಚತ್ತೀಸ್ ಗಢದ ದೂರ್ಗಿನಲ್ಲಿ ರಾಷ್ಟ್ರಮಟ್ಟದ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರಜ್ಞರ ಸಮ್ಮೇಳನದಲ್ಲಿ ಪಾಲ್ಗೊಂಡು ಪ್ರಬಂಧ ಮಂಡಿಸಬೇಕಿತ್ತು. ಈ ಸಂಬಂಧ ಗಂಗಾನಗರದ ಡಿಟಿಡಿಸಿ ಕೊರಿಯರ್ ಸಂಸ್ಥೆಯ ಮೂಲಕ ಸಮ್ಮೇಳನ ಸಂಘಟಕರಿಗೆ ದಾಖಲೆಗಳ ಸಹಿತವಾಗಿ ಪತ್ರವೊಂದನ್ನು ಕಳುಹಿಸಿದರು. ಆದರೆ ಆ ಪತ್ರ ಅಲ್ಲಿಗೆ ತಲುಪಲಿಲ್ಲ. ವಿಚಾರಿಸಿದರೂ ಪತ್ರಕ್ಕೆ ಸಂಬಂಧಿಸಿದಂತೆ ಕೊರಿಯರ್ ಸಂಸ್ಥೆ ಸಮರ್ಪಕ ಮಾಹಿತಿ ನೀಡಲಿಲ್ಲ.

ಕೊರಿಯರ್ ಸಂಸ್ಥೆಯಿಂದ ಆದ ಸೇವಾಲೋಪಕ್ಕೆ ಪರಿಹಾರ ಕೋರಿ ಡಾ. ಶ್ರೀಧರ್ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿದರು. ಅವರ ಮನವಿಗೆ ಸ್ಪಂದಿಸಿದ ಜಿಲ್ಲಾ ಗ್ರಾಹಕ ನ್ಯಾಯಾಲಯ 25,000 ರೂಪಾಯಿಗಳ ಪರಿಹಾರ ನೀಡುವಂತೆ ಕೊರಿಯರ್ ಸಂಸ್ಥೆಗೆ ಆಜ್ಞಾಪಿಸಿತು.

ಕೊರಿಯರ್ ಸಂಸ್ಥೆಯು ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದಾಗ ರಾಜ್ಯ ಗ್ರಾಹಕ ನ್ಯಾಯಾಲಯವೂ ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದು ಪರಿಹಾರ ಮೊತ್ತದಲ್ಲಿ ಮಾತ್ರ ಸ್ವಲ್ಪ ರಿಯಾಯ್ತಿ ನೀಡಿತು.

ಇವೆಲ್ಲ ಕೆಲವು ಉದಾಹರಣೆಗಳು ಅಷ್ಟೆ. ಇಂತಹ ನೂರಾರು ಪ್ರಕರಣಗಳಲ್ಲಿ ನೂರಾರು ಮಂದಿ ತಮಗೆ ಅನ್ಯಾಯವಾದಾಗ, ವಂಚನೆಯಾದಾಗ, ಸೇವಾಲೋಪ ಆದಾಗ ಗ್ರಾಹಕ ನ್ಯಾಯಾಲಯಗಳ ಮೂಲಕ ಪರಿಹಾರ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಹೌದು. ಗ್ರಾಹಕ ನ್ಯಾಯಾಲಯ. ಈ ಜಗತ್ತಿನಲ್ಲಿ ಪ್ರತಿಯೊಬ್ಬ ವ್ಯಕ್ತಿ ಕೂಡಾ ಗ್ರಾಹಕನೇ. ರೈತನಿರಬಹುದು, ನೌಕರನಿರಬಹುದು, ವ್ಯಾಪಾರಿ ಇರಬಹುದು, ವೈದ್ಯನಿರಬಹುದು, ರೋಗಿಯೇ ಇರಬಹುದು. ಪ್ರತಿಯೊಬ್ಬ ವ್ಯಕ್ತಿಯೂ ಇನ್ನೊಬ್ಬನಿಂದ ವಸ್ತು ಖರೀದಿಸಿದಾಗ ಇಲ್ಲವೇ ಹಣ ನೀಡಿ ಸೇವೆ ಖರೀದಿಸಿದಾಗ ಗ್ರಾಹಕನಾಗುತ್ತಾನೆ. ಈ ರೀತಿ ಕೊಟ್ಟ ಹಣಕ್ಕೆ ಸೂಕ್ತ ಪ್ರತಿಫಲ, ಸೇವೆ ಲಭ್ಯವಾಗದೇ ಇದ್ದರೆ ಪರಿಹಾರ ಪಡೆಯಲು ನೀವು ಅರ್ಹರಾಗುತ್ತೀರಿ. ಅದನ್ನು ಗ್ರಾಹಕ ನ್ಯಾಯಾಲಯದ ಮೂಲಕ ಪಡೆಯುವವರ ಸಾಲಿಗೆ ನೀವೂ ಸೇರಬಲ್ಲಿರಿ. ಗ್ರಾಹಕ ಸಂರಕ್ಷಣಾ ಕಾಯ್ದೆ ಇದನ್ನು ಸಾಧ್ಯವಾಗಿಸಿದ್ದು ಇಂತಹ ಸಮರದಲ್ಲಿ ನಿಮ್ಮ ನೆರವಿಗೆ ಬರುತ್ತದೆ.

ಗ್ರಾಹಕ ಸಂರಕ್ಷಣಾ ಕಾಯ್ದೆ 1986ರಷ್ಟು ಹಿಂದೆಯೇ ಜಾರಿಯಾಗಿದ್ದರೂ, ಅದು ಹಲ್ಲಿಲ್ಲದ ಹಾವಿನಂತೆ ಇತ್ತು, ಗ್ರಾಹಕರ ಕಷ್ಟಗಳಿಗೆ ಸ್ಪಂದಿಸಿ ತೀರ್ಪುನೀಡಿದರೂ ಅವುಗಳ ಜಾರಿ ಕಷ್ಟಕರವಾಗಿತ್ತು. ತೀರ್ಪು ಜಾರಿಯ ಅಧಿಕಾರ ಗ್ರಾಹಕ ನ್ಯಾಯಾಲಯಗಳಿಗೆ ಇರಲಿಲ್ಲ.

ಆದರೆ ಈಗ ಹಾಗಲ್ಲ, 2002ರಲ್ಲಿ ಕೇಂದ್ರ ಸಕರ್ಾರ ತಂದ ತಿದ್ದುಪಡಿ 1986ರ ಈ ಕಾಯ್ದೆಗೆ ಭೀಮಬಲವನ್ನೇ ತಂದುಕೊಟ್ಟಿದೆ. ಈಗ ಗ್ರಾಹಕ ನ್ಯಾಯಾಲಯದ ತೀರ್ಪು ಪಾಲನೆ ಆಗದೇ ಇದ್ದರೆ ಪಾಲಿಸದ ವ್ಯಕ್ತಿಯನ್ನು ಜೈಲಿಗಟ್ಟುವ ಶಕ್ತಿ ಕೂಡಾ ಗ್ರಾಹಕ ನ್ಯಾಯಾಲಯಗಳಿಗೆ ಬಂದಿದೆ.

ಪ್ರಥಮ ದರ್ಜೆ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟರಿಗೆ ಇರುವ ಅಧಿಕಾರವನ್ನು ಈ ತಿದ್ದುಪಡಿಯು ಗ್ರಾಹಕ ನ್ಯಾಯಾಲಯಗಳ ಅಧ್ಯಕ್ಷರಿಗೆ ತಂದು ಕೊಟ್ಟಿದೆ. ಅವರು ತಮ್ಮ ಆದೇಶ ಜಾರಿಗೆ ಪೊಲೀಸ್ ನೆರವನ್ನೂ ಪಡೆದುಕೊಳ್ಳಬಹುದು. ಆದ್ದರಿಂದ ಅವುಗಳು ಈಗ ಹಿಂದಿಗಿಂತ ತುಂಬ ಪರಿಣಾಮಕಾರಿ ಎನ್ನುತ್ತಾರೆ ಬೆಂಗಳೂರು ನಗರ ಜಿಲ್ಲಾ ಗ್ರಾಹಕ ನ್ಯಾಯಾಲಯದ ಮಾಜಿ ಅಧ್ಯಕ್ಷ ಎಂ.ಎನ್. ಶಂಕರಭಟ್.

ಹಾಗಾದರೆ ಗ್ರಾಹಕ ನ್ಯಾಯಾಲಯದಿಂದ ನೀವು ಪರಿಹಾರ ಪಡೆಯುವುದು ಹೇಗೆ? ಅಲ್ಲಿಗೆ ಹೋದ ಎಲ್ಲ ಪ್ರಕರಣಗಳು ಗೆದ್ದು ಬಿಡುತ್ತವೆಯೇ? ಪ್ರಕರಣ ಗೆಲ್ಲಲು ನೀವು ಏನು ಮಾಡಬೇಕು?

ಒಂದು ಮಾತು ನೆನಪಿಟ್ಟುಕೊಳ್ಳಬೇಕು. ನ್ಯಾಯಾಲಯಕ್ಕೆ ಹೋಗುವುದು ಎಂದರೆ ಜೂಜಾಟ ಅಲ್ಲ, ಅಂದಾಜಿನಲ್ಲಿ ಗುಂಡು ಹೊಡೆಯುವ ಪ್ರವೃತ್ತಿಯಿಂದ ಪ್ರಯೋಜನ ಆಗುವುದಿಲ್ಲ.

ಸೂಕ್ತ ಸಿದ್ಧತೆ, ದಾಖಲೆ, ಸಾಕ್ಷ್ಯಾಧಾರಗಳು ನಿಮ್ಮ ಬಳಿ ಇದ್ದರೆ, ನೀವು ಗ್ರಾಹಕ ನ್ಯಾಯಾಲಯದಲ್ಲಿ ವಿಜಯ ಸಾಧಿಸಬಹುದು.

ಗ್ರಾಹಕ ನ್ಯಾಯಾಲಯಗಳು ಇತರ ಸಿವಿಲ್ ನ್ಯಾಯಾಲಯಗಳ ಹಾಗೆ ಅಲ್ಲ. ಸಿವಿಲ್ ನ್ಯಾಯಾಲಯಗಳಲ್ಲಿ ವ್ಯಾಜ್ಯಗಳು ವರ್ಷಗಟ್ಟಲೆ ಮುಂದೂಡಿಕೆಯಾಗಬಹುದು. ವಕೀಲರೇ ವಾದಿಸಬೇಕಾದ್ದರಿಂದ ನೀವು ವೆಚ್ಚ ಮಾಡಬೇಕಾದ ಹಣವೂ ಹೆಚ್ಚು.

ಆದರೆ ಗ್ರಾಹಕ ನ್ಯಾಯಾಲಯಗಳು ರೂಪುಗೊಂಡದ್ದೇ ಜನ ಸಾಮಾನ್ಯರನ್ನು ವಂಚಕರಿಂದ, ಶೋಷಣೆಗಾರರಿಂದ ರಕ್ಷಿಸುವ ಉದ್ದೇಶದಿಂದ. ಆದ್ದರಿಂದ ಇಲ್ಲಿ ನೀವು ವಕೀಲರು ಇಲ್ಲದೇ ಇದ್ದರೂ ನೇರವಾಗಿ ಸ್ವತಃ ನ್ಯಾಯಾಲಯಕ್ಕೆ ನಿಮ್ಮ ಅಹವಾಲು ಮಂಡಿಸಬಹುದು.

ನ್ಯಾಯಾಲಯಕ್ಕೆ ಸಲ್ಲಿಸಬೇಕಾದ ಶುಲ್ಕ ಕೂಡಾ ಅತ್ಯಂತ ಕಡಿಮೆ.

ಹೀಗಾಗಿ ಗ್ರಾಹಕ ನ್ಯಾಯಾಲಯಗಳು ಹೆಚ್ಚು ವೆಚ್ಚದಾಯಕವಲ್ಲ. ಇಲ್ಲಿನ ವ್ಯವಹಾರಗಳೂ ಅತ್ಯಂತ ಸರಳ.
ಗ್ರಾಹಕ ನ್ಯಾಯಾಲಯದಲ್ಲಿ ಗೆಲುವು ಗಳಿಸಲು ನೀವು ಏನೇನು ಸಿದ್ಧತೆ ಮಾಡಿಕೊಳ್ಳಬೇಕು?
ಮೊತ್ತ ಮೊದಲು ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಿ: ಗ್ರಾಹಕ ನ್ಯಾಯಾಲಯದ ಕಟ್ಟೆ ಏರುವಂತಹ ಪ್ರಕರಣ ನಿಮ್ಮ ಬಳಿ ಇದೆಯೇ?

ನ್ಯಾಯಾಲಯದ ಕಟ್ಟೆ ಏರಲು ನಿಮಗೆ ಏನಾದರೂ ನಷ್ಟ ಸಂಭವಿಸಿರಬೇಕು, ಅಥವಾ ನೀವು ಹಣಕೊಟ್ಟು ಖರೀದಿಸಿದ ವಸ್ತುವಿಗೆ ಸಂಬಂಧಿಸಿದ ಸೇವೆಯಲ್ಲಿ ಚ್ಯುತಿ ಉಂಟಾಗಿರಬೇಕು. ನಿಮಗೆ ಯಾವುದೇ ನಷ್ಟ ಆಗಿರದೇ ಇದ್ದರೆ ಅಥವಾ ಯಾವುದೇ ಸೇವಾಲೋಪ ಆಗಿರದೇ ಇದ್ದರೆ ನ್ಯಾಯಾಲಯಕ್ಕೆ ಹೋದರೂ ನಿಮಗೆ ಜಯ ಸಿಗುವುದು ಕಷ್ಟಕರ.

ನಂತರ ನೀವು ಹಾಗೂ ನಿಮ್ಮ ಎದುರಾಳಿಯ ಮಧ್ಯೆ ವ್ಯವಹಾರ ನಡೆದಿರುವುದಕ್ಕೆ ಸಂಬಂಧಿಸಿದಂತೆ ನಿಮ್ಮ ಬಳಿ ದಾಖಲೆಗಳು ಇವೆಯೇ ಪರೀಕ್ಷಿಸಿಕೊಳ್ಳಿ. ಆ ವ್ಯವಹಾರದಲ್ಲಿ ನಿಮಗೆ ನಷ್ಟ ಸಂಭವಿಸಿದ್ದಕ್ಕೆ, ಸೇವಾಲೋಪ ಆಗಿದ್ದಂತೆ ಸಂಬಂಧಿಸಿದಂತೆ ದಾಖಲೆ ಇದೆಯೇ ನೋಡಿಕೊಳ್ಳಿ. ನಷ್ಟವಾದಾಗ ನೀವು ಎದುರಾಳಿ ಜೊತೆಗೆ ಮುಖತಃ ಇಲ್ಲವೇ ದೂರವಾಣಿ ಮೂಲಕ ಕೂಗಾಡಿರಬಹುದು, ಬೈದಾಡಿರ ಬಹುದು. ಅದರಿಂದ ಪ್ರಯೋಜನವಿಲ್ಲ. ನಷ್ಟವಾದುದನ್ನು ಅವರ ಗಮನಕ್ಕೆ ತಂದು ಪರಿಹಾರ ಕೊಡುವಂತೆ ಆಗ್ರಹಿಸಿ ಪತ್ರ ಬರೆಯಿರಿ. ಆ ಪತ್ರದ ಪ್ರತಿ, ಜೊತೆಗೆ ಕಳುಹಿಸಿದ ದಾಖಲಾತಿಗಳನ್ನು, ಅವರಿಂದ ಉತ್ತರ ಬಂದರೆ ಆ ಉತ್ತರವನ್ನೂ ನಿಮ್ಮ ವ್ಯವಹಾರ ಸಂಬಂಧಿ ದಾಖಲೆಗಳ ಜೊತೆಗೆ ಇಟ್ಟುಕೊಳ್ಳಿ. ನ್ಯಾಯಾಲಯದಲ್ಲಿ ಹಾಜರು ಪಡಿಸಲು ಅದು ನಿಮಗೆ ಬೇಕಾಗುತ್ತದೆ.

ವ್ಯವಹಾರಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳು ಇದ್ದರೆ, ಅವರು ನಿಮ್ಮ ಪರವಾಗಿ ಸಾಕ್ಷ್ಯ ನುಡಿಯಬಲ್ಲರೇ ಎಂದು ಖಚಿತಪಡಿಸಿಕೊಳ್ಳಿ. ಅವರು ನಿಮ್ಮ ಪರವಾಗಿ ನ್ಯಾಯಾಲಯಕ್ಕೆ ಸಲ್ಲಿಸಬಹುದಾದ ಪ್ರಮಾಣಪತ್ರ ನಿಮ್ಮ ಪಾಲಿಗೆ ಬೋನಸ್.

ಎಲ್ಲೆಗೆ ಧಾವಿಸಬೇಕು? : ಗ್ರಾಹಕ ನ್ಯಾಯಾಲಯಗಳಲ್ಲಿ ಮೂರು ಹಂತಗಳಿವೆ. ಜಿಲ್ಲಾ ಗ್ರಾಹಕ ನ್ಯಾಯಾಲಯಗಳು, ರಾಜ್ಯ ಗ್ರಾಹಕ ನ್ಯಾಯಾಲಯಗಳು ಮತ್ತು ರಾಷ್ಟ್ರೀಯ ಗ್ರಾಹಕ ನ್ಯಾಯಾಲಯ.

ಪ್ರತಿಯೊಂದು ರಾಜ್ಯದಲ್ಲೂ ಎಲ್ಲ ಜಿಲ್ಲೆಗಳಲ್ಲೂ ಗ್ರಾಹಕ ಸಂರಕ್ಷಣಾ ಕಾಯ್ದೆಗೆ ಅನುಗುಣವಾಗಿ ಜಿಲ್ಲಾ ಗ್ರಾಹಕ ನ್ಯಾಯಾಲಯಗಳ ರಚನೆ ಆಗಿರುತ್ತದೆ. ಈ ಜಿಲ್ಲಾ ಗ್ರಾಹಕ ನ್ಯಾಯಾಲಯಗಳು 20ಲಕ್ಷ ರೂಪಾಯಿಗಳವರೆಗಿನ ಪ್ರಕರಣಗಳನ್ನು ವಿಚಾರಣೆಗೆ ಅಂಗೀಕರಿಸಬಹುದು.

ರಾಜ್ಯ ಗ್ರಾಹಕ ನ್ಯಾಯಾಲಯಗಳು 20 ಲಕ್ಷ ರೂಪಾಯಿಯಿಂದ 1 ಕೋಟಿ ರೂಪಾಯಿಗಳವರೆಗಿನ ಮೊತ್ತದ ಪ್ರಕರಣಗಳ ವಿಚಾರಣೆ ನಡೆಸಬಹುದು. ಒಂದು ಕೋಟಿ ರೂಪಾಯಿಗಳಿಗಿಂತ ಅಧಿಕ ಮೊತ್ತದ ಪ್ರಕರಣಗಳ ವಿಚಾರಣಾ ವ್ಯಾಪ್ತಿ ಇರುವುದು ರಾಷ್ಟ್ರೀಯ ನ್ಯಾಯಾಲಯಗಳಿಗೆ.

ಈ ವಿಚಾರಣಾ ವಾಪ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ನೀವು ಎಲ್ಲಿ ಕದ ತಟ್ಟಬೇಕು ಎಂದು ನಿರ್ಧರಿಸಿಕೊಳ್ಳಬೇಕು.

ಯಾರ ನೆರವು ಪಡೆಯಬಹುದು?: ವಕೀಲರು, ವೈದ್ಯರು, ಕಟ್ಟಡ ನಿರ್ಮಾಣಗಾರರು, ಅಂಗಡಿಗಳು ಅಥವಾ ಬೇರಾವುದೇ ವ್ಯಕ್ತಿಗೆ ಅಥವಾ ಸಂಸ್ಥೆಗೆ ಹಣ ನೀಡಿ ಏನಾದರೂ ವಸ್ತು/ ಸೇವೆ ಖರೀದಿಸಿದ್ದು ಅಂತಹ ವಸ್ತು, ಸೇವೆ ಕಳಪೆ ಗುಣಮಟ್ಟದ್ದಾಗಿದ್ದರೆ, ಸೇವೆಯಲ್ಲಿ ಲೋಪವಾಗಿದ್ದರೆ ನೀವು ಖಚಿತವಾಗಿ ಗ್ರಾಹಕ ನ್ಯಾಯಾಲಯದ ಕದ ತಟ್ಟಬಹುದು.

ಗ್ರಾಹಕ ನ್ಯಾಯಾಲಯಗಳ ಕದ ತಟ್ಟಲು ನೀವು ನೇರವಾಗಿಯೇ ಹೋಗಬಹುದು. ಕಷ್ಟಕರ ಎಂದು ಅನಿಸಿದರೆ ವಕೀಲರ ಅಥವಾ ಗ್ರಾಹಕ ಹಿತರಕ್ಷಣೆಗಾಗಿ ಶ್ರಮಿಸುವ ಬಳಕೆದಾರರ ವೇದಿಕೆಗಳ ನೆರವು ಪಡೆಯಬಹುದು.

ಉಡುಪಿಯಲ್ಲಿ ದಿವಂಗತ ಪಿ. ನಾರಾಯಣರಾವ್ ಅವರು ಸ್ಥಾಪಿಸಿದ ಬಳಕೆದಾರರ ವೇದಿಕೆಯು ಗ್ರಾಹಕರಿಗೆ ಇಂತಹ ನೆರವು ನೀಡುತ್ತಿದೆ. ವೇದಿಕೆಯ ಸಂಚಾಲಕ ನಾರಾಯಣರಾವ್ ಅವರು ಗ್ರಾಹಕ ನ್ಯಾಯಾಲಯಗಳಲ್ಲಿ ಗ್ರಾಹಕರ ಪರವಾಗಿ ಸ್ವತಃ ಉಚಿತವಾಗಿಯೇ ವಾದ ಮಂಡಿಸುತ್ತಿದ್ದರು.

ಈಗಲೂ ಕೆ. ದಾಮೋದರ ಐತಾಳ್ ಸಂಚಾಲಕತ್ವದಲ್ಲಿ ಗ್ರಾಹಕರ ಸೇವೆ ಮುಂದುವರೆಸಿರುವ ಉಡುಪಿ ಬಳಕೆದಾರರ ವೇದಿಕೆಯು ಗ್ರಾಹಕ ನ್ಯಾಯಾಲಯಗಳಿಗೆ ಹೋಗಲು ಮಾರ್ಗದರ್ಶನ ಮಾಡಬಲ್ಲಂತಹ 'ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆಗಳು' (ಲೇಖಕ: ಎ.ಪಿ. ಕೊಡಂಚ), 'ಪ್ರಕೃತಿ, ಪರಿಸರ; ಗ್ರಾಹಕ' (ಲೇಖಕ: ಎಚ್. ಶಾಂತರಾಜ ಐತಾಳ್) 'ಒಡೆಯರಲ್ಲ ಸೇವಕರು', 'ಪ್ರಭುಗಳಲ್ಲ ಪ್ರಜಾಸೇವಕರು' 'ರಸ್ತೆ ಪುರಾಣ' ಇತ್ಯಾದಿ ಪುಸ್ತಕಗಳನ್ನು ಪ್ರಕಟಿಸಿದೆ.

ಈ ಪುಸ್ತಕಗಳ ಪೈಕಿ 'ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆಗಳು' ಪುಸ್ತಕ ಗ್ರಾಹಕ ನ್ಯಾಯಾಲಯಗಳ ಕದತಟ್ಟ ಬಯಸುವವರಿಗೆ ಉಪಯುಕ್ತ. ಈ ಪುಸ್ತಕದಲ್ಲಿ ದಾಖಲೆಗಳನ್ನು ಸಿದ್ಧ ಪಡಿಸಿಕೊಳ್ಳುವ ಬಗೆ, ವಿವಿಧ ಕಡೆಗಳಿಗೆ ಬರೆಯಬೇಕಾದ ಪತ್ರಗಳ, ಅಜರ್ಿಗಳ ಮಾದರಿ ಸೇರಿದಂತೆ ಹತ್ತಾರು ವಿವರಗಳಿವೆ.

ಶುಲ್ಕದ ಕಥೆ ಏನು?: ಗ್ರಾಹಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಹಿಂದೆ ಯಾವುದೇ ಶುಲ್ಕ ಇರಲಿಲ್ಲ. ಆದರೆ ಈಗ ಅದು ಸಂಪೂರ್ಣ ಉಚಿತವಲ್ಲ. ಒಂದಷ್ಟು ಶುಲ್ಕ ತೆರಬೇಕಾಗುತ್ತದೆ.

ದೂರು ನೋಂದಾಯಿಸಲು ಈಗ ಜಿಲ್ಲಾ ವೇದಿಕೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಅಥವಾ ಅಂತ್ಯೋದಯ/ ಅಣ್ಣ ಕಾರ್ಡುಗಳನ್ನು ಹೊಂದಿರುವವರು ಕೇಳಿದ ವಸ್ತು, ಸೇವೆಯ ಮೌಲ್ಯ ಅಥವಾ ಪರಿಹಾರ ಮೌಲ್ಯ ಒಂದು ಲಕ್ಷ ರೂಪಾಯಿವರೆಗೆ ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ. ಈ ವರ್ಗಗಳ ಜನರನ್ನು ಹೊರತುಪಡಿಸಿದ ವ್ಯಕ್ತಿಗಳು ಒಂದು ಲಕ್ಷ ರೂಪಾಯಿಗಳವರೆಗೆ 100 ರೂಪಾಯಿ ಶುಲ್ಕ ಪಾವತಿ ಮಾಡಬೇಕು.

ಒಂದು ಲಕ್ಷ ರೂಪಾಯಿಗಳಿಗಿಂತ ಹೆಚ್ಚು, 5 ಲಕ್ಷ ರೂಪಾಯಿಗಳವರೆಗೆ 200 ರೂಪಾಯಿ, 5 ಲಕ್ಷಕ್ಕಿಂತ ಹೆಚ್ಚು 10 ಲಕ್ಷ ರೂಪಾಯಿಗಳವರೆಗೆ 400 ರೂಪಾಯಿ, 10 ಲಕ್ಷಕ್ಕಿಂತ ಹೆಚ್ಚು 20 ಲಕ್ಷ ರೂಪಾಯಿಗಳವರೆಗೆ 500 ರೂಪಾಯಿ ನೋಂದಣಿ ಶುಲ್ಕ ಪಾವತಿ ಮಾಡಬೇಕು.

ರಾಜ್ಯ ಗ್ರಾಹಕ ನ್ಯಾಯಾಲಯದಲ್ಲಿ ದೂರು ನೋಂದಾಯಿಸಲು 20 ಲಕ್ಷಕ್ಕಿಂತ ಹೆಚ್ಚು 50 ಲಕ್ಷ ರೂಪಾಯಿಗಳವರೆಗೆ 2000 ರೂಪಾಯಿ, 50 ಲಕ್ಷಕ್ಕಿಂತ ಹೆಚ್ಚು 1 ಕೋಟಿ ರೂಪಾಯಿವರೆಗೆ 4000 ರೂಪಾಯಿ ನೊಂದಣಿ ಶುಲ್ಕ ಪಾವತಿ ಮಾಡಬೇಕು.

ರಾಷ್ಟ್ರೀಯ ಗ್ರಾಹಕ ನ್ಯಾಯಾಲಯದಲ್ಲಿ ಒಂದು ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಮೌಲ್ಯದ ದೂರಿಗೆ 5000 ರೂಪಾಯಿ ನೋಂದಣಿ ಶುಲ್ಕ ಪಾವತಿ ಮಾಡಬೇಕು. ಯಾವ ನ್ಯಾಯಾಲಯ ಉತ್ತಮ?: ನಿಮಗೆ ಸಮೀಪ ಇರುವ ಜಿಲ್ಲಾ ಗ್ರಾಹಕ ನ್ಯಾಯಾಲಯವನ್ನು ದೂರು ನೀಡಲು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಇಲ್ಲದಿದ್ದರೆ ಓಡಾಟಕ್ಕೆ ಅನಗತ್ಯವಾಗಿ ಹಣ ವೆಚ್ಚವಾಗುತ್ತದೆ.

ನಿಮ್ಮ ದೂರನ್ನು ಅನುಸರಿಸಿ ಜಿಲ್ಲಾ ಗ್ರಾಹಕ ನ್ಯಾಯಾಲಯ ಎದುರಾಳಿಗೆ ನೋಟಿಸ್ ಜಾರಿ ಮಾಡುತ್ತದೆ. ಸಾಮಾನ್ಯವಾಗಿ ಎದುರಾಳಿಗಳು ಸ್ಪಂದಿಸಿ ತಮ್ಮ ಉತ್ತರ ಸಲ್ಲಿಸುತ್ತಾರೆ. ಕೆಲವೊಮ್ಮೆ ದೂರನ್ನೇ ನಿರ್ಲಕ್ಷಿಸುವುದೂ ಉಂಟು. ಹೀಗೆ ದೂರುಗಳನ್ನು ನಿರ್ಲಕ್ಷಿಸಿದರೆ ನೀವು ಯುದ್ಧದಲ್ಲಿ ಅರ್ಧ ಗೆದ್ದಂತೆಯೇ. ನಿಮಗೆ ಉಳಿಯವುದು ನಿಮ್ಮ ದಾಖಲೆ, ಪ್ರಮಾಣಪತ್ರ, ಸಾಕ್ಷ್ಯಗಳ ಮೂಲಕ ನಿಮಗೆ ಆದರೆ ನಷ್ಟವನ್ನು ನ್ಯಾಯಾಲಯಕ್ಕೆ ಖಚಿತಪಡಿಸುವುದು. ನಿಮಗಾದ ನಷ್ಟ, ಸೇವಾಲೋಪದ ಸಮಸ್ಯೆ ನ್ಯಾಯಾಲಯಕ್ಕೆ ಮನವರಿಕೆಯಾದರೆ ನಿಮಗೆ ಜಯ ನಿಶ್ಚಿತ.

ನ್ಯಾಯಾಲಯದ ತಕರಾರು ಬೇಡವೇ ಬೇಡ ಎಂದು ಎದುರಾಳಿ ಸಂಧಾನಕ್ಕೆ ಬರಲು ಸಿದ್ಧವಾಗಲೂ ಬಹುದು. ಆಗಲೂ ಎಚ್ಚರಿಕೆಯಿಂದ ಸಮರ್ಥವಾಗಿ ನಿಮ್ಮ ಪ್ರತಿಪಾದನೆ ಮುಂದಿಡಿ. ಇಂತಹ ಸಂದರ್ಭಗಳಲ್ಲಿ ಸಮರಾಂಗಣಕ್ಕೆ ನುಗ್ಗುವ ಮುನ್ನವೇ ನೀವು ಗೆಲ್ಲಬಲ್ಲಿರಿ.

ಎದುರಾಳಿ ನಿಮ್ಮ ದೂರನ್ನು ನಿರಾಕರಿಸಿ ನ್ಯಾಯಾಲಯದಲ್ಲಿ ಹೋರಾಟಕ್ಕೇ ಸಜ್ಜಾದರೆ ಆಗ ನಿಮ್ಮ ಬೆಂಬಲಕ್ಕೆ ಬರುವುದು ನೀವು ಸಿದ್ಧಪಡಿಸಿಕೊಂಡ ಮೇಲೆ ತಿಳಿಸಿದ ದಾಖಲೆಪತ್ರಗಳು, ಪ್ರಮಾಣಪತ್ರ ಮತ್ತು ಸಾಕ್ಷ್ಯಾಧಾರಗಳೇ ಎಂಬುದನ್ನು ಮರೆಯಬೇಡಿ.

ಈ ಸಿದ್ಧತೆಗಳೊಂದಿಗೆ ಗ್ರಾಹಕ ನ್ಯಾಯಾಲಯಕ್ಕೆ ನಿಮಗಾದ ನಷ್ಟ, ಸೇವಾಲೋಪದ ಬಗ್ಗೆ ಮನವರಿಕೆ ಮಾಡಲು ನೀವು ಸಮರ್ಥರಾದರೆ ನ್ಯಾಯ ಪಡೆಯುವ ನಿಟ್ಟಿನಲ್ಲಿ ಶೇಕಡಾ 75ರಷ್ಟು ನೀವು ಹೆಜ್ಜೆ ಮುಂದಿಟ್ಟಿದ್ದೀರಿ ಎಂದು ಅರ್ಥ.

ನಿಮ್ಮ ಅಹವಾಲನ್ನು ನೀವೇ ಸಮರ್ಥವಾಗಿ ಮಂಡಿಸಬಲ್ಲಿರಿ ಎಂದಾದರೆ ನ್ಯಾಯಾಲಯದಲ್ಲಿ ನೀವೇ ವಾದ ಮಂಡಿಸಬಹುದು. ಇಲ್ಲವಾದಲ್ಲಿ ನೀವು ವಕೀಲರ ನೆರವನ್ನೂ ಪಡೆಯಬಹುದು. ವಕೀಲರು ಇರಬೇಕೆಂಬ ಕಡ್ಡಾಯ ಇಲ್ಲಿ ಇಲ್ಲ.

ಹಿಂದೆ ಗ್ರಾಹಕ ನ್ಯಾಯಾಲಯಗಳಲ್ಲಿ ಪ್ರಕರಣಗಳು ವರ್ಷಗಟ್ಟಲೆ ಹೋಗುತ್ತಿದ್ದುದು ಇತ್ತು. ಆದರೆ ಈಗ ಹಾಗಿಲ್ಲ. ನೋಟಿಸ್ ಜಾರಿಯಾದ ಮೂರು ತಿಂಗಳ ಅವಧಿಯಲ್ಲಿ ಇತ್ಯರ್ಥವಾಗಬೇಕು ಎಂಬ ನಿಯಮವೇ ಇದೆ. ಹಾಗೆ ಆಗದೇ ಇದ್ದರೂ ವರ್ಷದೊಳಗೆ ಇತ್ಯರ್ಥವಾಗುವುದಂತೂ ಖಂಡಿತ. ಗ್ರಾಹಕ ಸಂರಕ್ಷಣಾ ಕಾಯ್ದೆಗೆ ತರಲಾಗಿರುವ ತಿದ್ದುಪಡಿ ನ್ಯಾಯಾಲಯಕ್ಕೆ ಅಷ್ಟರಮಟ್ಟಿನ ಬಲ
 ತಂದು ಕೊಟ್ಟಿದೆ.

ಇಷ್ಟೆಲ್ಲ ಮಾಹಿತಿ ಒಂದು ಪ್ರಬಲ ಅಸ್ತ್ರವಿದ್ದಂತೆ. ಅದರ ಬಳಕೆ ಮಾಡುವುದು. ನಿಮ್ಮ- ನಮ್ಮೆಲ್ಲರಿಗೆ ಬಿಟ್ಟದ್ದು.