Wednesday, July 27, 2016

ಹಾಗಲ ಕಾಯಿ ತಿನ್ನುವ ಶಿಕ್ಷೆ! ಇದು ಚೀನೀ ವೈಖರಿ!

ಹಾಗಲ ಕಾಯಿ ತಿನ್ನುವ ಶಿಕ್ಷೆ!

ಇದು ಚೀನೀ ವೈಖರಿ!

ಬೀಜಿಂಗ್: ಮಾರಾಟದ ಗುರಿ ತಲುಪದೇ ಇದ್ದರೆ ನೌಕರಿಗೆ ಏನು ಶಿಕ್ಷೆ ಕೊಡಬೇಕು? ಚೀನಾದ ಮಾದರಿ ಅನುಸರಿಸಿದರೆ ಹೆಚ್ಚೇನಿಲ್ಲ, ಹಾಗಲಕಾಯಿ ತಿನ್ನಿಸಬೇಕು!

ಹೌದು. ಕೆಲಸದಲ್ಲಿ ನಿರ್ಲಕ್ಷ್ಯ ವಹಿಸಿದರೆ ಹಿಂಬಡ್ತಿ, ವೇತನ ಕಡಿತದಂತಹ ಕ್ರಮ ಕೈಗೊಂಡಿರುವ ಉದಾಹರಣೆ ಸಾಕಷ್ಟಿದೆ. ಚೀನಾದ ಚೊಂಗ್ಕ್ವಿಂಗ್ ಪ್ರಾಂತ್ಯದ ಲಿಶಾಂಗ್ ಡೆಕೋರೇಶನ್ಸ್ ಕಾಪೋರೇಷನ್ ಸಂಸ್ಥೆಯು ನಿಗದಿತ ಮಾರಾಟ ಗುರಿ ತಲುಪುವಲ್ಲಿ ವಿಫಲರಾದ 40 ಉದ್ಯೋಗಿಗಳಿಗೆ ಹಾಗಲಕಾಯಿ ತಿನ್ನುವಂತೆ ಶಿಕ್ಷೆ ವಿಧಿಸಿದೆ.

ಹಾಂ, ಎಷ್ಟು ಕಷ್ಟವಾದರೂ ಸರಿ, ಇತರ ಉದ್ಯೋಗಿಗಳ ಎದುರೇ ಅವರು ಹಾಗಲಕಾಯಿ ತಿನ್ನಬೇಕಾಗುತ್ತದೆ. ಉಗುಳಿದರೆ ಹೆಚ್ಚುವರಿ ಹಾಗಲಕಾಯಿ ತಿನ್ನುವಂತೆ ಸೂಚನೆ ನೀಡಲಾಗುತ್ತದಂತೆ!

ಸರಿಯಾಗಿ ಕೆಲಸ ಮಾಡದ ನೌಕರರಿಗೆ ಎಚ್ಚರಿಕೆ ನೀಡುವ ಉದ್ದೇಶದಿಂದ ಇಂತಹ ಶಿಕ್ಷೆ ವಿಧಿಸಿರುವುದಾಗಿ ಕಂಪನಿಯು ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ.

ಒತ್ತಾಯಪೂರ್ವಕವಾಗಿ ಹಾಗಲಕಾಯಿ ತಿನ್ನಿಸಿದ ದೃಶ್ಯವನ್ನು ಚೀನಾದ ಸಾಮಾಜಿಕ ಜಾಲತಾಣ ‘ವೈಬೋ’ದಲ್ಲಿ ಅಪ್​ಲೋಡ್ ಮಾಡಲಾಗಿದ್ದು, ಅದು ಭಾರಿ ಸದ್ದು ಮಾಡುತ್ತಿದೆ. ಮೊದಲ ಸಲ ಹಾಗಲಕಾಯಿ ತಿಂದವರು ಸೇವಿಸಲಾಗದೇ ಆರೋಗ್ಯ ಸಮಸ್ಯೆಗೂ ತುತ್ತಾಗಿದ್ದಾರೆ ಎಂದು ಚೀನಾದ ದೈನಿಕ ವರದಿ ಮಾಡಿದೆ.
ವಿಚಿತ್ರ ಶಿಕ್ಷೆಗಳು: ಟಾರ್ಗೆಟ್ ತಲುಪದ ನೌಕರರಿಗೆ ಸಂಸ್ಥೆಯಲ್ಲಿ ಶಿಕ್ಷೆ ವಿಧಿಸಿದ್ದು ಇದೇ ಮೊದಲೇನಲ್ಲ. ಈ ಹಿಂದೆ ಕುರ್ಚಿಯಲ್ಲಿ ಕೂರುವಂತೆ ಮಾಡುವುದು, ಕಪ್ಪೆಯಂತೆ ತೆವಳುವುದು, ಫುಷ್ ಅಪ್, ಕಚೇರಿ ಕಟ್ಟಡದ ಸುತ್ತ ಓಡುವ ಶಿಕ್ಷೆ ನೀಡುವ ಮೂಲಕ ಅವಮಾನ ಮಾಡಲಾಗಿತ್ತು ಎಂದು ಅಲ್ಲಿನ ಮಹಿಳಾ ಸಿಬ್ಬಂದಿ ಹೇಳುತ್ತಾರೆ. ಇಂತಹ ಶಿಕ್ಷೆಗಳಿಂದ ಬೇಸತ್ತ ಶೇ. 50 ನೌಕರರು ಕೆಲಸವನ್ನೇ ಬಿಟ್ಟಿದ್ದಾರೆ.

ಚೀನಾದ ಕಾರ್ವಿುಕ ಕಾನೂನು 88 ಕಲಂ ಪ್ರಕಾರ, ಕಂಪನಿ ಮಾಲೀಕರಿಂದ ಯಾವುದೇ ಉದ್ಯೋಗಿಗೆ ದೈಹಿಕ ಅಥವಾ ಮಾನಸಿಕ ಹಾನಿ ಉಂಟಾದರೆ ಅಂತಹ ವೇಳೆ ಸೂಕ್ತ ಪರಿಹಾರ ನೀಡಬೇಕು. ಆದರೆ ಕಂಪನಿ ಮಾಲೀಕರು ಇದನ್ನು ನಿರ್ಲಕ್ಷಿಸಿ ನೌಕರರಿಗೆ ಶಿಕ್ಷೆ ವಿಧಿಸುತ್ತಿದ್ದಾರಂತೆ!.

Tuesday, June 28, 2016

ಗೋಮೂತ್ರದಲ್ಲಿ ಚಿನ್ನ, 300ಕ್ಕೂ ಹೆಚ್ಚು ಪ್ರತಿಜೀವಕ ಪತ್ತೆ

ಗೋಮೂತ್ರದಲ್ಲಿ ಚಿನ್ನ, 300ಕ್ಕೂ ಹೆಚ್ಚು ಪ್ರತಿಜೀವಕ ಪತ್ತೆ
ಸಾಬೀತಾದ ವೇದ, ಪ್ರಾಚೀನ ಗ್ರಂಥಗಳ ಉಲ್ಲೇಖ
ಜುನಾಗಢ: ಗೋವು ಪವಿತ್ರವಾದ ಪ್ರಾಣಿ, ಕಾಮಧೇನು ಎಂದೆಲ್ಲಾ ಪೂಜಿಸುವ ಪರಿಪಾಠ ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದೆ. ಗೋಮೂತ್ರದಲ್ಲಿ ಚಿನ್ನದ ಅಂಶವಿದೆ ಎಂದು ವೇದಗಳಲ್ಲಿ ಆಯುರ್ವೇದದಲ್ಲಿ ಉಲ್ಲೇಖಗೊಂಡಿದೆ. ಜುನಾಗಢದಲ್ಲಿ ನಡೆದಿರುವ ಸಂಶೋಧನೆ ಈಗ ಇದನ್ನು ಋಜುವಾತು ಪಡಿಸಿದೆ.

ಸತತ 4 ವರ್ಷಗಳ ನಿರಂತರ ಸಂಶೋಧನೆಯ ಫಲಿತಾಂಶವನ್ನು ಜುನಾಗಢ ಕೃಷಿ ವಿವಿ ವಿಜ್ಞಾನಿಗಳು ಮಂಗಳವಾರ 28 ಜೂನ್ 2016ರಂದು  ಬಹಿರಂಗ ಪಡಿಸಿದರು. 

ಗಿರ್
ತಳಿಯ 400 ಗೋವುಗಳ ಮೂತ್ರವನ್ನು ಸಂಗ್ರಹಿಸಿ ವಿವಿಯ ಆಹಾರ ಪರೀಕ್ಷಾ ಲ್ಯಾಬ್​ನಲ್ಲಿ ವಿಜ್ಞನಿಗಳು  ಪ್ರಯೋಗಕ್ಕೆ ಒಳಪಡಿಸಿದ್ದರು. 1ಲೀಟರ್ ಗೋಮೂತ್ರದಲ್ಲಿ 3 ರಿಂದ 10 ಗ್ರಾಂ ಚಿನ್ನ ಪತ್ತೆಯಾಗಿದೆ. ನೀರಿನಲ್ಲಿ ಕರಗಬಲ್ಲ ಅಯಾನ್​ಗಳ ರೂಪದಲ್ಲಿ ಪತ್ತೆಯಾಗಿರುವ ಚಿನ್ನವನ್ನು ರಾಸಾಯನಿಕ ವಿಧಾನದಿಂದ ಘನ ರೂಪಕ್ಕೂ ತರಬಹುದು ಎಂದು ಸಂಶೋಧನಾ ತಂಡದ ಮುಖ್ಯಸ್ಥ, ಬಯೋ ಟೆಕ್ನಾಲಜಿ ವಿಭಾಗ ಅಧ್ಯಕ್ಷ ಡಾ. ಬಿ.ಎ.ಗೋಲಾಕಿಯಾ ಹೇಳಿದರು.

338ಕ್ಕೂ ಹೆಚ್ಚು ಪ್ರತಿಜೀವಕ ಪತ್ತೆ: ಗ್ಯಾಸ್ ಕ್ರೋಮೆಟೋಗ್ರಾಫಿ-ಮಾಸ್ ಸ್ಪೆಕ್ಟೋಮೆಟ್ರಿ ವಿಧಾನ ಬಳಸಿ ಪ್ರಯೋಗ ಮಾಡಿದ್ದು ಯಶ ನೀಡಿದೆ . 5100 ಸಂಯುಕ್ತಗಳೂ ಗೋಮೂತ್ರದಲ್ಲಿ ಕಂಡುಬಂದಿದೆ. ಇವುಗಳಲ್ಲಿ 338ಕ್ಕೂ ಹೆಚ್ಚು ಪ್ರತಿಜೀವಕ (ಆಂಟಿ ಬಯಾಟಿಕ್)ಗಳಾಗಿದ್ದು, ಜೌಷಧೀಯ ಬಳಕೆಗೆ ಬರುತ್ತದೆ. ಎಮ್ಮೆ, ಕುದುರೆ, ಒಂಟೆ, ಮೇಕೆ ಗಳ ಮೂತ್ರವನ್ನೂ ಪ್ರಯೋಗಕ್ಕೆ ಒಲಪಡಿಸಿದ್ದೆವು. ಗೋಮೂತ್ರದಲ್ಲಿ ಕಂಡುಬಂದ ಯಾವುದೇ ಆಂಟಿ ಬಯಾಟಿಕ್​ಗಳು ಅವುಗಳಲ್ಲಿ ಪತ್ತೆಯಾಗಿಲ್ಲ ಎಂದು ವಿಜ್ಞಾನಿಗಳು ವಿವರಿಸಿದರು. 

Wednesday, June 22, 2016

ಪರ್ವತಾರೋಹಿ ಬಾಲಕಿಯನ್ನು ರಕ್ಷಿಸಿದ ಯೋಧರು

ಪರ್ವತಾರೋಹಿ ಬಾಲಕಿಯನ್ನು

ರಕ್ಷಿಸಿದ ಯೋಧರು
ಉತ್ತರಕಾಶಿ: ಉತ್ತರ ಕಾಶಿಯ ಡೊಕ್ರಿಯಾನಿ ಬಾಮಕ್ ನೀರ್ಗಲ್ಲ ಪ್ರದೇಶದಲ್ಲಿ 30 ಅಡಿ ಆಳದ ಕಂದಕ್ಕೆ ಬಿದ್ದ ಪರ್ವತಾರೋಹಿ ಬಾಲಕಿಯೊಬ್ಬರನ್ನು ಭಾರತೀಯ ಸೇನೆಯ ಯೋಧರು 22 ಜೂನ್ 2016ರ ಬುಧವಾರ ರಕ್ಷಿಸಿದರು.

ಸೈನಿಕರ ಕಾರ್ಯಾಚರಣೆಯ ವಿಡಿಯೊ ವೀಕ್ಷಿಸಲು ಕೆಳಗಿನ ಚಿತ್ರವನ್ನು ಕ್ಲಿಕ್ಕಿಸಿ:

Friday, June 17, 2016

ಕೆಲಸ ಬೇಜಾರು ಆಗ್ತಿದೆಯಾ?, ಮಂಗಳಗ್ರಹಕ್ಕೆ ಹೊರಡಿ!

ಕೆಲಸ ಬೇಜಾರು ಆಗ್ತಿದೆಯಾ?,

ಮಂಗಳಗ್ರಹಕ್ಕೆ ಹೊರಡಿ!


ಅಟ್ಲಾಂಟಾ: ಮಾಡ್ತಿರೋ ಕೆಲ್ಸ ಬೇಜಾರು ಆಗ್ತಿದೆಯಾ? ಚಿಂತೆ ಬಿಟ್ಟು ಬಿಡಿ. ಮಂಗಳಗ್ರಹದಲ್ಲಿ ವೈವಿಧ್ಯಮಯ ಕೆಲಸಗಳಿಗೆ ಜನ ಬೇಕಾಗಿದ್ದಾರೆ,

ಹೌದು, ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹೀಗೊಂದು ಜಾಹೀರಾತನ್ನು ತನ್ನ ವೆಬ್ ಸೈಟಿನಲ್ಲಿ ಪ್ರಕಟಿಸಿದೆ.

ನಾಸಾ ವೆಬ್ ಸೈಟ್ ಜಾಹೀರಾತಿನ  ಪ್ರಕಾರ ಮಂಗಳ ಗ್ರಹದಲ್ಲಿ ಕೆಲಸಮಾಡಲು ಶಿಕ್ಷಕರು,  ತಂತ್ರಜ್ಞರು, ಸರ್ವೇಯರುಗಳು, ಕೃಷಿಕರು, ರಾತ್ರಿ ಪಾಳಿ ಕೆಲಸಗಾರರು,  ಸಂಶೋಧಕರು, ವೆಲ್ಡರುಗಳು- ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವಂತಹವರು ಬೇಕಾಗಿದ್ದು, ಹೆಸರು ನೋಂದಾಯಿಸಬಹುದು  ಎಂದು ವೆಬ್ ಸೈಟು  ವರ್ಣರಂಜಿತ ಪೋಸ್ಟರುಗಳಲ್ಲಿ ತಿಳಿಸಿದೆ.

ಈ ವ್ಯಕ್ತಿಗಳೆಲ್ಲ ನಿಜವಾಗಿಯೂ ಬೇಕಾ ಏನೋ ಗೊತ್ತಿಲ್ಲ.  ಆದರೆ ಮಂಗಳ ಗ್ರಹದಲ್ಲಿ ಕಾಲೋನಿ ಮಾಡಲು ನಾಸಾ 2015ರಲ್ಲೇ  ಮೂರು ಹಂತದ ಯೋಜನೆ ರೂಪಿಸಿದೆ.

2030ರ ವೇಳೆಗೆ ಮಂಗಳ ಗ್ರಹದಲ್ಲಿ ಮಾನವರು ಕೆಲಸ ಮಾಡುತ್ತಿರಬೇಕು ಎಂಬ ಯೋಜನೆಯಂತೆ,
  ಬಾಹ್ಯಾಕಾಶ ಪ್ರವಾಸೋದ್ಯಮ ಅಭಿವೃದ್ಧಿಯ ನೀಲ ನಕಾಶೆಯನ್ನು ಕೂಡಾ ನಾಸಾ ಈಗಾಗಲೇ ಪ್ರಕಟಿಸಿದೆ.