ನಾನು ಮೆಚ್ಚಿದ ವಾಟ್ಸಪ್

Sunday, December 10, 2023

PARYAYA: ಭ್ರಷ್ಟಾಚಾರ, ಮಧ್ಯವರ್ತಿ ನಿವಾರಣೆಗೆ ತಂತ್ರಜ್ಞಾನ ಪರಿಹಾರ

 ಭ್ರಷ್ಟಾಚಾರಮಧ್ಯವರ್ತಿ ನಿವಾರಣೆಗೆ ತಂತ್ರಜ್ಞಾನ ಪರಿಹಾರ

ಬೆಂಗಳೂರು: ಭ್ರಷ್ಟಾಚಾರ ಮತ್ತು ಮಧ್ಯವರ್ತಿಗಳ ಹಾವಳಿಯಿಂದಾಗಿ ಪ್ರಾತಿನಿಧಿಕ ಪ್ರಜಾಪ್ರಭುತ್ವ ಎಂಬುದು ಇಂದು ಒಂದು ಕಟ್ಟುಕಥೆಯಂತಾಗಿದೆ. ಇದರ ನಿವಾರಣೆಗೆ ತಂತ್ರಜ್ಞಾನಗಳ ಅಳವಡಿಕೆ ಉತ್ತಮ ಪರಿಹಾರ ಆಗಬಲ್ಲುದು ಎಂದು ಮಾಜಿ ಮಾಹಿತಿ ತಂತ್ರಜ್ಞಾನಸಚಿವ ಪ್ರೊಫೆಸರ್‌ ಬಿ‌ ಕೆ ಚಂದ್ರಶೇಖರ್‌ ಅವರು 2023 ಡಿಸೆಂಬರ್‌ 9ರ ಶನಿವಾರ ಇಲ್ಲಿ ಹೇಳಿದರು.

ಸಂಪೂರ್ಣ ಸ್ವರಾಜ್‌ ಫೌಂಡೇಷನ್‌ ಸಂಸ್ಥಾಪಕವ್ಯವಸ್ಥಾಪಕ ಟ್ರಸ್ಟಿ ಡಾಕ್ಟರ್ ಶಂಕರ ಕೆ ಪ್ರಸಾದ್‌ ಅವರು ಬರೆದ ʼ21ನೇ ಶತಮಾನದ ಆತ್ಮನಿರ್ಭರ ಗ್ರಾಮ ಪಂಚಾಯಿತಿʼ ಮತ್ತು ಅದರ ಆಂಗ್ಲ ಆವೃತ್ತಿ ʼರಿಬೂಟಿಂಗ್‌ ಡೆಮಾಕ್ರೆಸಿ ಇನ್‌ ಗ್ರಾಮ್‌ ಪಂಚಾಯತ್ಸ್‌ʼ ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.

ಭ್ರಷ್ಟಾಚಾರ ಮತ್ತು ದಲ್ಲಾಳಿಗಳ ಪರಿಣಾಮವಾಗಿ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನಗ್ರಾಮಗಳಿಗೆ ತಲುಪುವಾಗ ಶೇಕಡಾ 15ಕ್ಕಿಂತಲೂ ಕೆಳಗಿನ ಪ್ರಮಾಣಕ್ಕೆ ಇಳಿಯುತ್ತದೆ ಎಂಬ ಕಾರಣಕ್ಕಾಗಿಯೇ ಇದರ ನಿವಾರಣೆಗೆ ಅಧಿಕಾರ ವಿಕೇಂದ್ರೀಕರಣವೇ ಮದ್ದು ಎಂದು ಯೋಚಿಸಿ ರಾಜ್ಯದಲ್ಲಿ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಕೇಂದ್ರದಲ್ಲಿ ಆಗಿನ ಪ್ರಧಾನಿ ರಾಜೀವ ಗಾಂಧಿ ಅವರು ಗ್ರಾಮ ಪಂಚಾಯಿತಿ ಕಾಯ್ದೆಗಳನ್ನು ತಂದರು. ಆದರೆ ಅದರ ಆಶಯಗಳು ಈಡೇರಲಿಲ್ಲ ಎಂದು ಅವರು ಹೇಳಿದರು.

ಜನರಿಗೆ ಅತ್ಯಂತ ಸಮೀಪದ ಸಂಸ್ಥೆ ಗ್ರಾಮ ಸಭೆ. ಆದರೆ ಗ್ರಾಮಗಳ ಜನರಿಗೆಚುನಾಯಿತ ಪ್ರತಿನಿಧಿಗಳಿಗೆ ಗ್ರಾಮ ಸಭೆಗೆ ಇರುವ ಅಧಿಕಾರಅಲ್ಲಿಗೆ ಬರುವ ಅನುದಾನಗಳುಸಂಪನ್ಮೂಲ ಕ್ರೋಡೀಕರಣದ ಬಗ್ಗೆ ಗೊತ್ತಿರುವುದಿಲ್ಲ. ಗ್ರಾಮ ಸಭೆಗಳಿಗೆ ಜನ ಬರುವುದೂ ಇಲ್ಲ. ಅವುಗಳನ್ನು ಬಲಪಡಿಸಲು ಸರ್ಕಾರದ ಬೆಂಬಲ ಅಗತ್ಯ ಎಂದು ಅವರು ನುಡಿದರು.

ಇಂಗಾಲ ಮುಕ್ತ ಪರಿಸರದ ನಿರ್ಮಾಣವನ್ನು ಪ್ರತಿಪಾದಿಸಿದ ಅವರು ಇದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಗಬೇಕು.. ಗ್ರಾಮ ಪಂಚಾಯಿತಿಗಳು ಇಂಗಾಲ ಮುಕ್ತ ಗ್ರಾಮ ಪಂಚಾಯಿತಿಗಳಾಗಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಬಿಎಲ್‌ ಶಂಕರ್‌ ಅವರು ಮಾತನಾಡಿ ʼಕೇಂದ್ರ ಸರ್ಕಾರರಾಜ್ಯ ಸರ್ಕಾರಗಳ ಬದಲಿಗೆ ಗಾಮ ಪಂಚಾಯಿತಿಗಳೇ ಅಭಿವೃದ್ಧಿಯ ಕೇಂದ್ರವಾಗಬೇಕು. ಗ್ರಾಮಗಳಲ್ಲಿನ ಅಭಿವೃದ್ಧಿಯ ಎಲ್ಲ ಸಂಸ್ಥೆಗಳು ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಅಡಿಯಲ್ಲಿ ಬರಬೇಕು. ಆದರೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳಾದರೂ ನಮ್ಮ ಜನಪ್ರತಿನಿಧಿಗಳಿಗೇ ಈ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ನುಡಿದರು.

ಗ್ರಾಮ ಪಂಚಾಯಿತಿಗಳ ಮಹತ್ವವನ್ನು ಸಮರ್ಪಕವಾಗಿ ಮನಗಂಡಿದ್ದವರು ಮಹಾತ್ಮ ಗಾಂಧೀಜಿ. 73 ಮತ್ತು 74ನೇ ತಿದ್ದುಪಡಿಗಳನ್ನು ರಾಜೀವ ಗಾಂಧಿಯವರು ತಂದರೂ ಅದು ವಿಫಲವಾಯಿತು. ಈ ನಿಟ್ಟಿನಲ್ಲಿ ಮಹತ್ವದ ಕೆಲಸ ಮಾಡಿದ್ದು ಪಿ ವಿ ನರಸಿಂಹ ರಾವ್.‌ ಅದಕ್ಕೂ ಮುನ್ನ ರಾಮಕೃಷ್ಣ ಹೆಗಡೆ ಅವರು ತಂದಿದ್ದ ಪಂಚಾಯಿತಿ ವ್ಯವಸ್ಥೆ ಇಂದಿನ ಪಂಚಾಯಿತಿ ವ್ಯವಸ್ಥೆಗಿಂತ ಉತ್ತಮವಾಗಿತ್ತು ಎಂಬುದು ಹಳ್ಳಿ ಜನರಿಗೂ ಗೊತ್ತು ಎಂದು ಅವರು ಹೇಳಿದರು.

ತಂತ್ರಜ್ಞಾನ ಬಳಕೆಯಿಂದ ಅನುಕೂಲ ಎಂಬುದು ನಿರ್ವಿವಾದ. ಆದರೆ ಗ್ರಾಮ ಪಂಚಾಯಿತಿಗಳ ವೈಫಲ್ಯಕ್ಕೆ ನಮ್ಮ ಜನಪ್ರತಿನಿಧಿಗಳುಶಾಸಕರ ಅಧಿಕಾರ ಬಿಟ್ಟುಕೊಡಲು ಮನಸ್ಸಿಲ್ಲದ ಮಾನಸಿಕತೆಯೇ ಕಾರಣ. ಎಲ್ಲರೂ ಸೇರಿ ದೇಶ ಕಟ್ಟುವ ಮನೋಭಾವ ಬೇಕು ಎಂದು ಅವರು ನುಡಿದರು. ಇಂಗಾಲ ಮುಕ್ತ ಗ್ರಾಮಗಳ ರಚನೆಯ ಅಗತ್ಯವನ್ನು ಶಂಕರ್‌ ಅವರೂ ಪ್ರತಿಪಾದಿಸಿದರು.

ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಅಜೀಮ್‌ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸಂಶೋಧನಾ ಪ್ರಾಧ್ಯಾಪಕ ಡಾಕ್ಟರ್‌ ಶಾಮ್‌ ಕಶ್ಯಪ್‌ ಅವರು ತಂತ್ರಜ್ಞಾನಗಳ ಬಳಕೆಯಿಂದ ಗ್ರಾಮ ಪಂಚಾಯಿತಿಗಳ ಸಾಮರ್ಥ್ಯ ಹೆಚ್ಚುತ್ತದೆ ಎಂದರು. ಚಿಕ್ಕಬಳ್ಳಾಪುರದ ಗ್ರಾಮ ಪಂಚಾಯ್ತಿಯೊಂದರ ಮಾಜಿ ಅಧ್ಯಕ್ಷೆ ಗಾಯತ್ರಿ ನ್ಯಾವಿಗೇಷನ್‌ ಲರ್ನಿಂಗ್‌ ತಂತ್ರಜ್ಞಾನದ ಉಪಯುಕ್ತತೆ ಬಗ್ಗೆ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಚಾಣಕ್ಯ ವಿಶ್ವ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಪ್ರೊಫೆಸರ್‌ ಸದಾನಂದ ಜಾನೆಕೆರೆ ಅವರು ಶಂಕರ ಪ್ರಸಾದ್‌ ಅವರು ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ಪ್ರವಚನ ನೀಡುವ ಮೂಲಕ ತಂತ್ರಜ್ಞಾನಗಳನ್ನು ವಿದ್ಯಾರ್ಥಿಗಳ ಮಟ್ಟಕ್ಕೆ ಒಯ್ಯಲಿದ್ದಾರೆ ಎಂದು ಹೇಳಿದರು.

ಡಾಕ್ಟರ್ ಶಂಕರ ಪ್ರಸಾದ್‌ ಅವರು ಸಂಪೂರ್ಣ ಸ್ವರಾಜ್‌ ಫೌಂಡೇಷನ್‌ ಕಳೆದ ಒಂದು ದಶಕದ ಅವಧಿಯಲ್ಲಿ ಮಾಡಿದ ಕಾರ್ಯಗಳ ಪ್ರಾತ್ಯಕ್ಷಿಕೆಯನ್ನೂ ನೀಡಿದರು. ಕೇಶವ ಪ್ರಸಾದ್‌ ಅವರು ಕಾರ್ಯಕ್ರಮ ನಿರ್ವಹಿಸಿದರು.

ಸುದ್ದಿಯನ್ನು ಆಲಿಸಲು ಕೆಳಗೆ ಕ್ಲಿಕ್‌ ಮಾಡಿರಿ. ಚಿತ್ರಗಳ ಸಮೀಪ ನೋಟಕ್ಕಾಗಿ ಮೇಲಿನ ಚಿತ್ರಗಳನ್ನು ಕ್ಲಿಕ್‌  ಮಾಡಿರಿ.

 

ಕೆಳಗಿನ ಸುದ್ದಿಗಳನ್ನೂ ಓದಿರಿ:

ಏನಿದೆ ಈ ಪುಸ್ತಕಗಳಲ್ಲಿ?

PARYAYA: ಭ್ರಷ್ಟಾಚಾರ, ಮಧ್ಯವರ್ತಿ ನಿವಾರಣೆಗೆ ತಂತ್ರಜ್ಞಾನ ಪರಿಹಾರ:   ಭ್ರಷ್ಟಾಚಾರ , ಮಧ್ಯವರ್ತಿ ನಿವಾರಣೆಗೆ ತಂತ್ರಜ್ಞಾನ ಪರಿಹಾರ ಬೆಂಗಳೂರು: ಭ್ರಷ್ಟಾಚಾರ ಮತ್ತು ಮಧ್ಯವರ್ತಿಗಳ ಹಾವಳಿಯಿಂದಾಗಿ ಪ್ರಾತಿನಿಧಿಕ ಪ್ರಜಾಪ್ರಭುತ್ವ ಎಂಬುದು ಇ...

No comments:

Post a Comment